Saturday, February 28, 2009

ಇಂದಿನ ಇತಿಹಾಸ History Today ಫೆಬ್ರುವರಿ 25

ಇಂದಿನ ಇತಿಹಾಸ

ಫೆಬ್ರುವರಿ 25

ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ  ಚಲನಚಿತ್ರ ಮತ್ತು ಅತ್ಯುತ್ತಮ  ನಿರ್ದೇಶನಕ್ಕಾಗಿ  (ಗೋಯೆನ್ ಬ್ರದರ್ಸ್)  ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು  `ನೋ ಕಂಟ್ರಿ ಫಾರ್  ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು.

2008: ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ  ಚಲನಚಿತ್ರ ಮತ್ತು ಅತ್ಯುತ್ತಮ  ನಿರ್ದೇಶನಕ್ಕಾಗಿ  (ಗೋಯೆನ್ ಬ್ರದರ್ಸ್)  ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು  `ನೋ ಕಂಟ್ರಿ ಫಾರ್  ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು. ಎರಡನೇ ಅತ್ಯುತ್ತಮ  ನಟ ಪ್ರಶಸ್ತಿಯು `ದೇರ್ ವಿಲ್ ಬಿ ಬ್ಲಡ್' ಚಿತ್ರದ ನಟನೆಗಾಗಿ  ಡೇನಿಯಲ್ ಡೇ -ಲೆವಿಸ್ ಅವರಿಗೆ ಲಭಿಸಿದರೆ, `ಲಾ ವೀ ಎನ್ ರೋಸ್'ದ ನಟನೆಗಾಗಿ  ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು ಅತ್ಯುತ್ತಮ  ನಟಿ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಚೊಚ್ಚಲ ನಟನೆಗಾಗಿ ನೀಡಲಾಗುವ ಪ್ರಶಸ್ತಿಯು ಸ್ಪೇನಿನ ಜೇವಿಯರ್ ಬಾರ್ಡೆಮ್ ಅವರಿಗೆ  ಲಭಿಸಿದ್ದು ಸ್ಪೇನಿಗೆ  ಮೊತ್ತ ಮೊದಲ ಆಸ್ಕರ್  ಪ್ರಶಸ್ತಿಯನ್ನು ತಂದುಕೊಟ್ಟಿತು. `ನೋ ಕಂಟ್ರಿ  ಫಾರ್ ಓಲ್ಡ್ ಮೆನ್' ಚಿತ್ರದಲ್ಲಿನ ನಟನೆ ಅವರಿಗೆ  ಈ  ಪ್ರಶಸ್ತಿಯನ್ನು  ತಂದುಕೊಟ್ಟತು. ಡೇನಿಯಲ್ ಡೇ ಲೆವಿಸ್ ಅವರು `ದೇರ್ ವಿಲ್  ಬಿ ಬ್ಲಡ್' ಚಿತ್ರದ ತೈಲ ದೊರೆಯ ಪಾತ್ರಕ್ಕಾಗಿ ಅತ್ಯುತ್ತಮ  ನಟ ಪ್ರಶಸ್ತಿಯನ್ನು  ತಮ್ಮ ಹೆಗಲಿಗೆ  ಏರಿಸಿಕೊಂಡರು. ಈ ಪಾತ್ರವು ಅವರಿಗೆ ಈ ಮೊದಲೇ `ಗೋಲ್ಡನ್  ಗ್ಲೋಬ್' ಮತ್ತು `ಬಾಫ್ಟಾ' ಪ್ರಶಸ್ತಿಗಳನ್ನು  ತಂದು ಕೊಟ್ಟಿತ್ತು. 32ರ ಹರೆಯದ ಫ್ರಾನ್ಸ್ನ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು `ಲಾ ವೀ ಎನ್  ರೋಸ್' ಚಿತ್ರದಲ್ಲಿನ  ತಮ್ಮ ದುರಂತ ಪಾತ್ರದ ನಟನೆಗಾಗಿ ಅತ್ಯುತ್ತಮ  ನಟಿ  ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ 1960ರ ಬಳಿಕ ಅತ್ಯುತ್ತಮ  ಆಸ್ಕರ್ ಪ್ರಶಸ್ತಿ ಗೆದ್ದ ಫ್ರಾನ್ಸಿನ ಪ್ರಪ್ರಥಮ  ನಟಿ ಎಂಬ ಹೆಗ್ಗಳಿಕೆ ಅವರದಾಯಿತು. 1960ರಲ್ಲಿ ಫ್ರಾನ್ಸಿನ ಸೀಮೋನೆ ಸಿಗ್ನೊರೆಟ್ ಈ ಪ್ರಶಸ್ತಿ ಗೆದ್ದಿದ್ದರು. ಅತ್ಯುತ್ತಮ ಅನಿಮೇಶನ್ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಯು ಪಿಕ್ಸರ್-ಡಿಸ್ನಿ  ಚಿತ್ರ `ರಟಟೌಯಿಲ್' ಚಿತ್ರಕ್ಕೆ ಲಭಿಸಿತು.

2008: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಜುಲೈ ತಿಂಗಳಲ್ಲಿ ಆಯ್ಕೆಯಾದ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿಸದನಗಳನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದರು. 50 ನಿಮಿಷ ಅವಧಿಯಲ್ಲಿ 19 ಪುಟಗಳ ಅವರ ಲಿಖಿತ ಭಾಷಣವನ್ನು ಅತಿ ಗಣ್ಯರ ಗ್ಯಾಲರಿಯಲ್ಲಿ ಕುಳಿತ ಅವರ ಪತಿ ದೇವಿ ಸಿಂಗ್ ಶೆಖಾವತ್ ಅವರೂ ಆಲಿಸಿದರು.

 2008: ಅರಬ್ಬಿ ಸಮುದ್ರದ ಸುಪ್ತ ದ್ವೀಪಗಳಲ್ಲಿ ಆಶ್ರಯ ಪಡೆದು ಕರ್ನಾಟಕ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹವಣಿಸುತ್ತಿವೆ ಎಂದು ರಾಜ್ಯದ ಪೊಲೀಸ್ ಇಲಾಖೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಇರುವ ದ್ವೀಪಗಳಲ್ಲಿ ಸುಮಾರು 26 ದ್ವೀಪಗಳನ್ನು ಉಗ್ರರು ತಮ್ಮ ನೆಲೆಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಮಾರಕಾಸ್ತ್ರಗಳನ್ನು ಬಚ್ಚಿಡಲು ಅವರು ಸಿದ್ಧತೆ ನಡೆಸಿದ್ದು, ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತು.

2008: ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ ಸಿಓಡಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಾದಿಕ್ ಸಮೀರ್ ಎಂಬಾತನನ್ನು ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ಬಂಧಿಸಿದರು.

2008: ಮುಳ್ಳೇರಿಯಾ ಸಮೀಪದ ಕೋಟೂರು ಎರಿಂಜೇರಿಯ ಚೆಂಡೆಮೂಲೆಯ ಸುಧಾಮ ಮಣಿಯಾಣಿ (69) ಎಂಬುವವರು ಮನೆಯ ಸಮೀಪದ ಸುರಂಗವೊಂದರ ಕೆಸರಿನಲ್ಲಿ ಸಿಲುಕಿಕೊಂಡು ಅದೃಷ್ಟವಶಾತ್ ಬದುಕಿ ಬಂದರು.  
ತಮ್ಮ ಮನೆಯ ಹಿತ್ತಲಿನಲ್ಲಿರುವ ಸುರಂಗದಿಂದ ಕೃಷಿಗೆ ಸಾಕಾಗುವಷ್ಟು ನೀರು ಹರಿಯುತ್ತಿಲ್ಲ ಎಂದು, ನೀರಿನ ಹರಿಯುವಿಕೆಗೆ ಅಡ್ಡವಾಗುವ ಕಸಕಡ್ಡಿಗಳನ್ನು ತೆಗೆಯಲು ಸುರಂಗ ಪ್ರವೇಶಿಸಿದರು. ನಂತರ ಸುರಂಗದಲ್ಲಿನ ಕೆಸರಿನಲ್ಲಿ ಹೂತು ಹೋದರು. ಒಳ ಹೋದ ಸುಧಾಮರು ಎರಡು ಗಂಟೆಯಾದರೂ ಹೊರಬಾರದಿರುವುದನ್ನು ಗಮನಿಸಿದ ಅವರ ಮಕ್ಕಳು, ಕೂಡಲೇ ಅಪಾಯವನ್ನರಿತು ಸುರಂಗದ ಒಳ ಪ್ರವೇಶಿಸಿದರು. ಒಳಗೆ ಕುತ್ತಿಗೆ ತನಕ ಕೆಸರಿನಲ್ಲಿ ಹೂತು ಹೋಗಿದ್ದ ತಂದೆಯನ್ನು ಕಂಡು ದಿಗಿಲಿನಿಂದ ಊರವರಿಗೆ ವಿಷಯ ತಿಳಿಸಿದರು. ನಂತರ ಪಾತನಡ್ಕದ ಸುರಂಗ ಕಾಮಗಾರಿ ಪ್ರವೀಣರಾದ ಚರಳಿಮೂಲೆ ಕೃಷ್ಣ ನಾಯ್ಕ ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಧಾಮ ಮಣಿಯಾಣಿ ಬದುಕಿ ಬಂದರು. ಏಕ ಮುಖವಾಗಿದ್ದ ಸುಮಾರು 80 ಮೀಟರ್ ಆಳದ ಸುರಂಗದೊಳಗೆ ಕುತ್ತಿಗೆ ತನಕ ಹೂತು ಹೋಗಿದ್ದ ಸುಧಾಮರು ಸುರಕ್ಷಿತವಾಗಿ ಹೊರ ಬಂದಾಗ ರಾತ್ರಿಯಾಗಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಉಸಿರಾಟಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳದ ಮನೋಜ್ ಹಾಗೂ ರಜೀಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

2008: ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕದ ಪ್ರಜೆ ನವಜೀತ್ ಕೇ. ಬಾಲ್ ಎಂಬ ಮಹಿಳೆ  ಮೆಸಾಚುಸೆಟ್ಸಿನ  ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕವಾದದ್ದು ಇದೇ ಪ್ರಥಮ.

2008: ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮ ಮೇಲೆ ಹೊಬಾರ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಸಂಭಾವನೆಯ ಶೇಕಡಾ ಹದಿನೈದರಷ್ಟು ಮೊತ್ತದ ದಂಡ ವಿಧಿಸಿದರು.  ಆದರೆ ಮಹೇಂದ್ರ ಸಿಂಗ್ ದೋನಿ ಬಳಗವು ಕ್ರೋವ್ ಈ ತೀರ್ಮಾನವನ್ನು ಆಕ್ಷೇಪಿಸಿತು. ಇಶಾಂತ್ ಆ ರೀತಿಯಲ್ಲಿ ವರ್ತಿಸಿದ್ದು ಎದುರಾಳಿ ಪಡೆಯವರು ಕೀಟಲೆ ಮಾಡಿ ಕೆಣಕಿದ್ದರಿಂದ ಎಂದು ಪ್ರತಿದೂರು ಕೂಡ ನೀಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕರ್ನಾಟಕದ ಗುಲ್ಬರ್ಗದಿಂದ 12 ಕಿ.ಮೀ. ದೂರದ ಸರಡಗಿ ಗ್ರಾಮದಲ್ಲಿ ತಮ್ಮ ಕನಸಿನ ಕೂಸಾದ ಸುವರ್ಣ ಗ್ರಾಮೋದಯ ಯೋಜನೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. 

2007: ಭದ್ರಾವತಿಯ ಬೈಪಾಸ್ ರಸೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 9 ಮಂದಿ ಮೃತರಾದರು. ಮಾರುತಿ ವ್ಯಾನ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು.

2007: ಪಾನ್ ಮಸಾಲ ಖ್ಯಾತಿಯ ಮಾಣಿಕ್ ಚಂದ್ ಸಮೂಹವು ತನ್ನ ಕುಡಿಯುವ ನೀರು ಬ್ರ್ಯಾಂಡ್ ಉತ್ಪನ್ನವಾದ `ಆಕ್ಸಿರಿಚ್'ನ ಆಮ್ಲಜನಕೀಕರಣ ಪ್ರಕ್ರಿಯೆಗೆ ಭಾರತೀಯ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿತು. ಮಾಣಿಕ್ ಚಂದ್ ಸಮೂಹದ ಅಧ್ಯಕ್ಷ ರಸಿಕ್ ಲಾಲ್ ಮಾಣಿಕ್ ಚಂದ್ ಧಾರಿವಾಲ್ ಅವರು ಬೆಂಗಳೂರಿನಲ್ಲಿ ಈ ವಿಚಾರ ಪ್ರಕಟಿಸಿದರು. ವಿಶೇಷ ತಂತ್ರಜ್ಞಾನದ ಮೂಲಕ ಈ ನೀರಿನಲ್ಲಿ ಶೇಕಡಾ 300ರಷ್ಟು ಕರಗಿದ ಆಮ್ಲಜನಕವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆ ಇದೇ ಪ್ರಥಮ. ಹಾಗಾಗಿ ಇದರ ಮೇಲೆ ಪೇಟೆಂಟ್ ಪಡೆಯಲಾಯಿತು.

2006: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದ ಮಧ್ಯಭಾಗದ ಆರು ಮಹಡಿಯ ಕಟ್ಟಡ ಕುಸಿದು ಕನಿಷ್ಠ 16 ಮಂದಿ ಮೃತರಾಗಿ ಇತರ ಹಲವರು ಅವಶೇಷಗಳ ಅಡಿ ಸಿಲುಕಿದರು.

2006: `ಬ್ಲ್ಯಾಕ್' ಮತ್ತು `ಪರಿಣೀತಾ' ತಾಂತ್ರಿಕ ವರ್ಗದ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡವು. ಉತ್ತಮ ನಟ ಪ್ರಶಸ್ತಿ ಅಮಿತಾಭ್ ಬಚ್ಚನ್ ಅವರಿಗೂ ಉತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಅವರಿಗೂ ಲಭಿಸಿತು.

2005: ನೋಬೆಲ್ ಪ್ರಶಸ್ತಿ ವಿಜೇತ ಮಾನವ ಹಕ್ಕುಗಳ ಸಂಘಟನೆ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸ್ಥಾಪಕ ಪೀಟರ್ ಬೆನೆನ್ಸನ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

2001: ಜಗತ್ತಿನ ಖ್ಯಾತ ಬ್ಯಾಟ್ಸ್ ಮನ್ ಎಂದು ಹೆಸರು ಪಡೆದ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (1908-2001) ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು, ಎರಡು ತ್ರಿಶತಕಗಳನ್ನು ಸಿಡಿಸುವ ಮೂಲಕ ಇಪ್ಪತ್ತನೇ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

 1993: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 19.5 ಓವರುಗಳಲ್ಲಿ 43 ರನ್ನುಗಳನ್ನು ಗಳಿಸಿದ ಪಾಕಿಸ್ಥಾನ 2001ರ ವರೆಗಿನ ದಾಖಲೆಗಳಲ್ಲಿ ಅತ್ಯಂತ ಕಡಿಮೆ ರನ್ ಗಳಿಕೆಯ ದಾಖಲೆ ಮಾಡಿತು.

1988: ಭಾರತದ ಮೊತ್ತ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ' ಕ್ಷಿಪಣಿಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.

1986: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹವಾಯಿಯಲ್ಲಿ ಆಶ್ರಯ ಪಡೆದರು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು. 

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ರಾಮರಾಯರು- ಲಲಿತಮ್ಮ ದಂಪತಿಯ ಮಗನಾಗಿ ಶೃಂಗೇರಿ ಸಮೀಪದ ಅರಳಿಕಟ್ಟೆ ಎಂಬ ಸ್ಥಳದಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ದತ್ತಾತ್ರೇಯ ಅವರಿಗೆ ದೇಶ ವಿದೇಶಗಳಲ್ಲೂ ಮನ್ನಣೆ, ಪ್ರಶಸ್ತಿಗಳು ಲಭಿಸಿವೆ. ಡಿಡಿ, ಇಂಟರ್ ನ್ಯಾಷನಲ್ ಟಿವಿ ಚಾನೆಲ್ಲುಗಳಲ್ಲೂ ಇವರ ಸಂದರ್ಶನ, ಗೊಂಬೆಯಾಟಗಳ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಹುಟ್ಟಿದರು. ವಿಶ್ವಕಪ್ ಪಂದ್ಯದಲ್ಲಿ `ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರು ಪಾತ್ರರಾದರು.

 1914: ಇಂಗ್ಲಿಷ್ ಕಲಾವಿದ ಹಾಗೂ `ಅಲೀಸ್ ಇನ್ ವಂಡರ್ ಲ್ಯಾಂಡ್' ಇಲ್ಲಸ್ಟ್ರೇಟರ್ ಜಾನ್ ಟೆನ್ನೀಲ್ ನಿಧನರಾದರು.

1894: ಮೆರ್ವಾನ್ ಷೆರಿಯರ್ ಇರಾನಿ (1894-1969) ಹುಟ್ಟಿದ ದಿನ. `ಮೆಹರ್ ಬಾಬಾ' ಎಂದೇ ಪಶ್ಚಿಮ ಭಾರತದಲ್ಲಿ ಖ್ಯಾತರಾಗಿರುವ ಈ ಈ ಆಧ್ಯಾತ್ಮಿಕ ಗುರು ತಮ್ಮ ಬದುಕಿನ 44 ವರ್ಷಗಳ ಕಾಲ `ಮೌನ' ಆಚರಿಸಿದರು.

1862: ಅಮೆರಿಕದ ಬ್ಯಾಂಕ್ ನೋಟುಗಳಾದ `ಗ್ರೀನ್ ಬ್ಯಾಕ್ಸ್' ಗಳನ್ನು ಅಂತರ್ಯುದ್ಧ ಕಾಲದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೊತ್ತ ಮೊದಲ ಬಾರಿಗೆ ಬಿಡುಗಡೆ ಮಾಡಿದರು.

1778: ಜೋಸ್ ಡೆ ಸಾನ್ ಮಾರ್ಟಿನ್ (1778-1850) ಹುಟ್ಟಿದ ದಿನ. ಅರ್ಜೆಂಟೀನಾದ ಯೋಧ, ಮುತ್ಸದ್ಧಿ ಹಾಗೂ ರಾಷ್ಟ್ರೀಯ ನಾಯಕನಾದ ಈತ 1812ರಲ್ಲಿ ಅರ್ಜೆಂಟೀನಾ, 1818ರಲ್ಲಿ ಚಿಲಿ, 1821ರಲ್ಲಿ ಪೆರುವಿನಲ್ಲಿ ಸ್ಪಾನಿಷ್ ಆಳ್ವಿಕೆ ವಿರುದ್ಧ ಕ್ರಾಂತಿಗಳನ್ನು ಮುನ್ನಡೆಸಲು ನೆರವಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement