Sunday, February 1, 2009

ಇಂದಿನ ಇತಿಹಾಸ History Today ಜನವರಿ 31

ಇಂದಿನ ಇತಿಹಾಸ

ಜನವರಿ 31

ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪ್ರಶಸ್ತಿಗೆ ನೀಡುವ `ಸಂದೇಶ' ಪ್ರಶಸ್ತಿಗೆ `ನಾಡೋಜ' ಪ್ರಶಸ್ತಿ ಪುರಸ್ಕೃತ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2008: ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹತ್ತು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಆದರೆ ಈ ದಾಳಿಯ ಬಗ್ಗೆ ವಿವರ ನೀಡಲು ಲೋಕಾಯುಕ್ತ್ತ ಎನ್. ಸಂತೋಷ ಹೆಗ್ಡೆ ನಿರಾಕರಿಸಿದರು. ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮುಡಬಿ, ಬಳ್ಳಾರಿಯ ಹೆಚ್ಚುವರಿ ಎಸ್ಪಿ ಡಾ.ಡಿ.ಸಿ. ರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್, ಗುಲ್ಬರ್ಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಪಿತಾಂಬರ ಹೆರಾಜೆ, ಬೆಳಗಾವಿಯ ಪೊಲೀಸ್ ಇಲಾಖೆಯ ಅಬಕಾರಿ ವಿಚಕ್ಷಣ ದಳದ ಡಿ ವೈ ಎಸ್ ಪಿ ಪಿ.ಜಿ. ವಾಂಡ್ ಕರ, ದಾವಣಗೆರೆ ಜಿಲ್ಲೆ ಜಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ನಿರ್ದೇಶಕ ಎಸ್.ಪಿ. ಕೊಲ್ಹಾರ, ಕೋಲಾರದ ಕೈಗಾರಿಕಾ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಮತ್ತಿತರರು ದಾಳಿಗೆ ಒಳಗಾದ ಅಧಿಕಾರಿಗಳಲ್ಲಿ ಸೇರಿದ್ದರು. ಲೋಕಾಯುಕ್ತರು, ಉಪಲೋಕಾಯುಕ್ತ ಪತ್ರಿ ಬಸವನಗೌಡ ಮತ್ತು ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

2008: ಇಂಟರ್ನೆಟ್  ಸಂಪರ್ಕ ಕಲ್ಪಿಸುವ ಮೆಡಿಟರೇನಿಯನ್ ಸಾಗರದೊಳಗಿನ ಎರಡು ಕೇಬಲುಗಳು  ಜಖಂಗೊಂಡಿರುವುದರಿಂದ ಪಶ್ಚಿಮ ಏಷ್ಯಾದ ಬಹುತೇಕ ಭಾಗ ಹಾಗೂ ಭಾರತದಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಕೇಬಲುಗಳು ತುಂಡಾದದ್ದರಿಂದ ಭಾರತದ ಅಂತರ್ಜಾಲ ಸೇವೆಯಲ್ಲಿ ಶೇ 60ರಷ್ಟು ಹಾಗೂ ಈಜಿಪ್ತಿನಲ್ಲಿ ಶೇ 70 ರಷ್ಟು  ವ್ಯತ್ಯಯ ಉಂಟಾಯಿತು. ಸಂಯುಕ್ತ ಅರಬ್ ರಾಷ್ಟ್ರ, ಕುವೈತ್ ಹಾಗೂ ಸೌದಿ ಅರೇಬಿಯಾ ಕೂಡ ಈ ತೊಂದರೆ ಅನುಭವಿಸಿದವು.

 2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು. ವಿ.ವಿ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಈ ವಿಷಯ ಪ್ರಕಟಿಸಿದರು.

2008: ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ದಿವಂಗತ ವ್ಯಾಸರಾಯ ಬಲ್ಲಾಳ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಮಧ್ಯಾಹ್ನ 12.30ರ ಸುಮಾರಿಗೆ ನಡೆಯಿತು. ಸಾಹಿತಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗದವರು ಪಾಲ್ಗೊಂಡಿದ್ದರು.

2008: ಹಾಲಿವುಡ್ಡಿನ ಆಂಜೋಲಿನಾ ಜೋಲಿ ಹಾಗೂ ಬಾಲಿವುಡ್ಡಿನ ಐಶ್ವರ್ಯ ರೈ ಪೂರ್ವಜರು ಒಂದೇ ಮೂಲಕ್ಕೆ ಸೇರಿದವರು ಎಂಬ ಅಂಶವನ್ನು ಲಂಡನ್ ವಿಜ್ಞಾನಿಗಳು ಬಹಿರಂಗಪಡಿಸಿದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಕಪ್ಪು ಸಮುದ್ರ ಪ್ರದೇಶದಲ್ಲಿ ಬದುಕಿದ್ದ ನೀಲಿ ಕಣ್ಣುಗಳ ಪೂರ್ವಜರ ಪೀಳಿಗೆಯೇ ಇವರದು ಎಂದು ಸಂಶೋಧಕರು ಹೇಳಿದರು. ಕಣ್ಣುಗಳ ಬಣ್ಣದ ಕುರಿತು ಸುಮಾರು 800 ಜನರ ಮೇಲೆ ಸಂಶೋಧನೆ ಕೈಗೊಂಡ ಕೊಪನ್ ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಸಾಧ್ಯತೆಯನ್ನು ಬಯಲಿಗೆಳೆದರು. ಇವರ ಪ್ರಕಾರ ನೀಲಿ ಕಣ್ಣುಗಳನ್ನು ಹೊಂದಿದ ಶೇ 99.5ರಷ್ಟು ಜನರ ಡಿ ಎನ್ ಎ (ವಂಶವಾಹಿ ತಳಿ ನಕ್ಷೆ) ಒಂದೇ ರೀತಿಯದ್ದಾಗಿರುತ್ತದೆ. ಇವರ ಕಣ್ಣುಗಳ ಪೊರೆಯ ಬಣ್ಣ ನಿರ್ಧರಿಸುವ ಜೀನುಗಳ (ವಂಶವಾಹಿ) ಮಾರ್ಪಾಡು ಒಂದೇ ರೀತಿಯಾಗಿದೆ.

2008: ಪ್ರವಾದಿ ಮೊಹಮ್ಮದ್ ಅವರ ಕುರಿತ ಕ್ಯಾರಿಕೇಚರುಗಳನ್ನು (ಅಣಕು ಚಿತ್ರಣದ ಕಲಾಕೃತಿ) ಸಂರಕ್ಷಿಸಿ ಇಡಲು ಡೆನ್ಮಾರ್ಕ್ ರಾಷ್ಟ್ರೀಯ ಗ್ರಂಥಾಲಯ ನಿರ್ಧರಿಸಿತು. ಎರಡು ವರ್ಷಗಳ ಹಿಂದೆ ಈ ಕಲಾಕೃತಿಗಳು ಇಸ್ಲಾಮೀ ಜಗತ್ತಿನಲ್ಲಿ ಭಾರಿ ವಿವಾದವನ್ನು ಎಬ್ಬಿಸಿದ್ದವು. ಕೆಲವು ಮುಸ್ಲಿಮ್ ನಾಯಕರ ಆಕ್ಷೇಪಗಳ ನಡುವೆಯೂ ಮೊಹಮ್ಮದರನ್ನು ಕುರಿತ ಕ್ಯಾರಿಕೇಚರುಗಳನ್ನು ಅಧ್ಯಯನ ದೃಷ್ಟಿಯಿಂದ ಸಂರಕ್ಷಿಸಲಾಗುವುದು ಎಂದು ಗ್ರಂಥಾಲಯದ ವಕ್ತಾರ ಜೆಟ್ಟೆ ಜಾಯಿರ್ಗಾರ್ಡ್ ತಿಳಿಸಿದರು.

2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ `ಬೇಲೂರು ಚನ್ನಕೇಶವ ದೇವಾಲಯ' ಸ್ತಬ್ಧಚಿತ್ರ ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು. ಸ್ತಬ್ಧಚಿತ್ರದ ಮೆರವಣಿಗೆಗೆ ಹಿಮ್ಮೇಳವಾಗಿ ನಾದಸ್ವರ ನುಡಿಸಿದ ಕೋಲಾರ ಜಿಲ್ಲೆಯ ಬೇತಮಂಗಲದ ಗಂಗಾಧರ ನಾದಸ್ವರ ಗುರುಕುಲದ ಕಲಾವಿದರು `ಉತ್ತಮ ಪ್ರಸ್ತುತಿ ಪ್ರಶಸ್ತಿ' ಗಳಿಸಿದರು. ಸ್ತಬ್ಧಚಿತ್ರವನ್ನು ತಯಾರಿಸಿದ ಬೆಂಗಳೂರಿನ `ಸಂಜಯ್ ಮಾರ್ಕೆಟಿಂಗ್ ಮತ್ತು ಸರ್ವೀಸಸ್' ಸಂಸ್ಥೆ `ಉತ್ತಮ ರಚನಾ ಪ್ರಶಸ್ತಿ' ಯನ್ನು ಪಡೆಯಿತು.

2008: ಅನಿಲ್ ಕುಂಬ್ಳೆ ಅವರನ್ನು ಈ ಬಾರಿಯ `ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಕ್ರೀಡಾ ವ್ಯಕ್ತಿ -2008' ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಜೀವಮಾನದ ಶ್ರೇಷ್ಠ ಸಾಧಕ' ಪ್ರಶಸ್ತಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ. ವರದರಾಜ್ ಅವರಿಗೆ ಲಭಿಸಿತು. ಇವರಿಬ್ಬರಲ್ಲದೆ ಅನೂಪ್ ಶ್ರೀಧರ್ (ಬ್ಯಾಡ್ಮಿಂಟನ್), ಚಿತ್ರಾ ಮಗಿಮೈರಾಜ್ (ಬಿಲಿಯರ್ಡ್ಸ್), ಗಿರೀಶ್ ಎ ಕೌಶಿಕ್ (ಚೆಸ್), ಹೆಲೆನ್ ಮೇರಿ ಇನೊಸೆಂಟ್ (ಹಾಕಿ) ಮತ್ತು ಶಿಖಾ ಟಂಡನ್ (ಈಜು) ಇವರನ್ನೂ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007:  ಇಂಗ್ಲೆಂಡ್ ಮೂಲದ `ಕೋರಸ್' ಉಕ್ಕು ಕಂಪೆನಿ ಖರೀದಿಗೆ ಭಾರತದ ಟಾಟಾ ಸ್ಟೀಲ್ಸ್ ಮತ್ತು ಬ್ರೆಜಿಲಿನ ಸಿ ಎಸ್ ಎನ್ ಕಂಪೆನಿಗಳ ನಡುವೆ ನಾಲ್ಕು ತಿಂಗಳುಗಳಿಂದ ನಡೆದಿದ್ದ ಜಿದ್ದಾಜಿದ್ದಿನ ಪೈಪೋಟಿ ಈ ದಿನ  ಕೊನೆಗೊಂಡು, ಟಾಟಾ ಸ್ಟೀಲ್ಸ್ ಗೆಲುವಿನ ನಗೆ ಬೀರುವುದರೊಂದಿಗೆ ಭಾರತೀಯ ಔದ್ಯಮಿಕ ಇತಿಹಾಸದಲ್ಲಿ  ದಾಖಲೆ ನಿರ್ಮಾಣಗೊಂಡಿತು. ಭಾರತೀಯ ಔದ್ಯಮಿಕ ಇತಿಹಾಸದಲ್ಲೇ ದಾಖಲೆ ಎನ್ನಬಹುದಾದ ಈ ಖರೀದಿ ಒಪ್ಪಂದದಿಂದಾಗಿ ಜಗತ್ತಿನ ಉಕ್ಕು ಉದ್ಯಮದಲ್ಲಿ ಭಾರತೀಯ ಕಂಪೆನಿಗಳ ಹಿಡಿತ ಇನ್ನಷ್ಟು ಬಿಗಿಗೊಂಡಿತು. ಪ್ರಸ್ತುತ ಟಾಟಾ ಸ್ಟೀಲ್ಸಿನ ವಾರ್ಷಿಕ ಉತ್ಪಾದನೆ ಐವತ್ತು ಲಕ್ಷ ಟನ್ ಇದ್ದು, `ಕೋರಸ್' ನ ಉತ್ಪಾದನೆ 1.82 ಕೋಟಿ ಟನ್ ಇದೆ. ಈ ಖರೀದಿಯಿಂದಾಗಿ ಟಾಟಾ ಸ್ಟೀಲ್ಸ್ ಈಗ 23.2 ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆಯ ಕಂಪೆನಿಯಾಗಲಿದ್ದು, ಜಗತ್ತಿನ ಐದನೇ ದೊಡ್ಡ ಉಕ್ಕು ಉತ್ಪಾದನೆ ಕಂಪೆನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗುವುದು. ಟಾಟಾ ಮತ್ತು ಸಿ ಎಸ್ ಎನ್ ಕಂಪೆನಿಗಳೆರಡೂ `ಕೋರಸ್' ನ್ನು ತಮ್ಮ ತೆಕ್ಕೆಗೆ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರಿಂದ ಅಂತಿಮವಾಗಿ ಬಹಿರಂಗ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಜನವರಿ 30ರ ರಾತ್ರಿಯಿಂದ 31ರ ಬೆಳಗಿನವರೆಗೆ ನಡೆದ ಒಂಬತ್ತು ಸುತ್ತಿನ ಬಹಿರಂಗ ಹರಾಜಿನಲ್ಲಿ `ಕೋರಸ್' ನ ಪ್ರತಿ ಷೇರಿಗೆ 608 ಪೆನ್ನಿಗಳನ್ನು ನೀಡಲು ಮುಂದಾದ ಟಾಟಾ ಸ್ಟೀಲ್ಸ್ ಗೆ ಜಯ ಸಿಕ್ಕಿತು. ಸಿ ಎಸ್ ಎನ್ ಪ್ರತಿ ಷೇರಿಗೆ 603 ಪೆನ್ನಿವರೆಗೆ ಕೊಡಲು ತಯಾರಾಗಿತ್ತು. ಆದರೆ, 608 ಪೆನ್ನಿ ನೀಡಲು ಟಾಟಾ ಸ್ಟೀಲ್ಸ್ ಮುಂದಾದಾಗ ಸಿ ಎಸ್ ಎನ್ ಕೈ ಚೆಲ್ಲಿತು. ಕೋರಸ್ ಕಂಪೆನಿಗಾಗಿ ಒಟ್ಟು 1,130 ಕೋಟಿ ಡಾಲರ್ನ್ನು ಸಂಪೂರ್ಣ ನಗದು ನೀಡಲು ಟಾಟಾ ಒಪ್ಪಿಕೊಂಡಿದ್ದು, ಇದು 50,850 ಕೋಟಿ ರೂಪಾಯಿಯಾಗುತ್ತದೆ. ಈ ಸಾಲಿನಲ್ಲಿ ಕೋರಸ್ ನ ಪ್ರತಿ ಷೇರು 550 ಪೆನ್ನಿಗಳ ಮೌಲ್ಯದಲ್ಲಿ ಮಾರಾಟವಾಗುತ್ತಿದ್ದು, ಟಾಟಾ ಸ್ಟೀಲ್ 608 ಪೆನ್ನಿ ನೀಡಲು ಮುಂದಾಗಿದ್ದರಿಂದ ಕೋರಸ್ ಷೇರುದಾರರಿಗೆ ಭಾರೀ ಲಾಭವಾಯಿತು.

2007: ಕಾವೇರಿ  ನದಿ ದಂಡೆಯ ಮೇಲಿರುವ ಟಿ. ನರಸೀಪುರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ ಕಲಶ ಸ್ಥಾಪನೆ, ಗಣಹೋಮ ಹಾಗೂ ಸಂಜೆ ಗಂಗಾಪೂಜೆ, ಯಾಗ ಶಾಲೆ ಪ್ರವೇಶ ಮಾಡುವುದರೊಂದಿಗೆ ಏಳನೇ ಮಹಾಕುಂಭಮೇಳ ವಿಧ್ಯುಕ್ತವಾಗಿ ಆರಂಭಗೊಂಡಿತು.

2007: ಕೇವಲ ಮಹಿಳೆಯರೇ ಇರುವ ಭಾರತೀಯ ಪೊಲೀಸ್ ತುಕಡಿ ಆಫ್ರಿಕದ ಪಶ್ಚಿಮ ಭಾಗದಲ್ಲಿರುವ ಲೈಬೀರಿಯಾ ಶಾಂತಿಪಾಲನಾ ಕಾರ್ಯ ನಿರ್ವಹಿಸುವ ಸಲುವಾಗಿ ಲೈಬೀರಿಯಾವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಸೇರ್ಪಡೆಗೊಳ್ಳುವ ಈ ತುಕಡಿಯಲ್ಲಿ 103 ಮಂದಿ ಮಹಿಳಾ ಸಿಬ್ಬಂದಿ ಇದ್ದು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕಾರ್ಯಕ್ರಮದ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಮಹಿಳಾ ತುಕಡಿಯ ಸೇರ್ಪಡೆ ಇದೇ ಮೊದಲು.

2007: ಸ್ನಾತಕೋತ್ತರ ವೈದ್ಯಕೀಯ ಕೋರ್ಸಿನಲ್ಲಿ (ಪಿಜಿ) ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 22.5ರಷ್ಟು ಮೀಸಲಾತಿ ಜಾರಿಗೊಳಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು.

2007: ವರ್ಣಭೇದ ನೀತಿ ವಿರುದ್ಧ ಸಿಡಿದು ನಿಂತ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ `ಗಾಂಧಿ ಪ್ರಶಸ್ತಿ' ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.

2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಕಾದಂಬರಿಕಾರ ಸಿಡ್ನಿ ಶೆಲ್ಡನ್ (89) ಅವರು ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2007: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪ್ರಶಸ್ತಿಗೆ ನೀಡುವ `ಸಂದೇಶ' ಪ್ರಶಸ್ತಿಗೆ `ನಾಡೋಜ' ಪ್ರಶಸ್ತಿ ಪುರಸ್ಕೃತ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ (1920-2005) ಈದಿನ ನಿಧನರಾದರು.

1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಶೆಲ್ (mitchell)  ಅವರನ್ನು ಹೊತ್ತ ಅಪೋಲೋ 14 ಬಾಹ್ಯಾಕಾಶ ನೌಕೆಯನ್ನು ಗಗನಕ್ಕೆ ಹಾರಿ ಬಿಡಲಾಯಿತು. ಶೆಫರ್ಡ್ ಮತ್ತು ಮಿಶೆಲ್ ಅವರು ಈ ಯಾನದ ಮೂಲಕ ಮೂರನೇ ಬಾರಿ ಚಂದನಲ್ಲಿ ಇಳಿದರು.

1963: ನವಿಲನ್ನು ಭಾರತದ `ರಾಷ್ಟ್ರೀಯ ಪಕ್ಷಿ' ಎಂಬುದಾಗಿ ಘೋಷಿಸಲಾಯಿತು.

1958: ಅಮೆರಿಕಾದ ಮೊದಲ ಉಪಗ್ರಹ `ಎಕ್ಸ್ ಪ್ಲೋರರ್ -1' ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು.

1950: ಅಮೆರಿಕಾ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕ ಬಾಂಬ್ (ಹೈಡ್ರೋಜನ್ ಬಾಂಬ್) ಅಭಿವೃದ್ಧಿ ಪಡಿಸಲು ತಾವು ಆಜ್ಞಾಪಿಸಿರುವುದಾಗಿ ಪ್ರಕಟಿಸಿದರು.

1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ ಫೀಲ್ಡ್ ಮಾರ್ಷಲ್ ಪೌಲಸ್ ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.

1938: ರಾಗ ಸಂಯೋಜಕ, ಸಂಗೀತ ತಜ್ಞ ಬೆಂಗಳೂರು ಎಸ್. ಮುಕುಂದ್ ಅವರು ರೆವಿನ್ಯೂ ಕಮೀಷನರ್ ಶ್ರೀನಿವಾಸನ್ - ತಮಿಳು ಲೇಖಕಿ ಜಯಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ಹುಟ್ಟಿದರು. ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ  ನೈಜ ಘಟನೆಗಳನ್ನು ನಿರೂಪಿಸುವ  ಪತ್ರಿಕೋದ್ಯಮ ವಿಧಾನವನ್ನು ಇವರು ರೂಪಿಸಿದರು.

1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು.  ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮರುದಿನವನ್ನು `ಫೆಬ್ರುವರಿ 14' ಎಂಬುದಾಗಿ ಪರಿಗಣಿಸಲಾಯಿತು. ಈ ಎರಡು ದಿನಾಂಕಗಳ ನಡುವಣ ವ್ಯತ್ಯಾಸ ಸರಿಪಡಿಸುವ ಸಲುವಾಗಿ ಮಧ್ಯದ ದಿನಾಂಕಗಳನ್ನು ಕಿತ್ತು ಹಾಕಲಾಯಿತು.

1896: ಖ್ಯಾತ ಸಾಹಿತಿ, ಕಾವ್ಯವಾಚನದ ಗಾರುಡಿಗ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ- ಅಂಬಿಕಾತನಯದತ್ತ) (1896-1981) ಅವರು ರಾಮಚಂದ್ರ ಪಂತ- ಅಂಬೂತಾಯಿ ದಂಪತಿಯ ಮಗನಾಗಿ ಧಾರವಾಡದ ಪೋತನೀಸರ ಗಲ್ಲಿಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ (ನಾಕುತಂತಿ ಕವನ ಸಂಗ್ರಹ) ಪಡೆದ ಕನ್ನಡದ ಮೇರು ಸಾಹಿತಿಗಳ ಪೈಕಿ ಇವರು ಒಬ್ಬರು.

1882: ಫ್ರಾಂಕ್ಲಿನ್ ಡೆಲಾನೊ ರೂಸ್ ವೆಲ್ಟ್ (1882-1945) ಹುಟ್ಟಿದ ದಿನ. ಅಮೆರಿಕದ 32ನೇ ಅಧ್ಯಕ್ಷರಾದ ಇವರು 1933-1945ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇವರ ಆಳ್ವಿಕೆ ಕಾಲದಲ್ಲೇ ಎರಡನೇ ಜಾಗತಿಕ ಸಮರ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement