ತಿಂಗಳುಗಟ್ಟಲೆ ಚಿಕಿತ್ಸೆ:
ವಾಸಿಯಾಗದ ಗಾಯ...!
ವಾಸಿಯಾಗದ ಗಾಯ...!
ಚಿಕಿತ್ಸೆ ನೀಡುವುದಷ್ಟೇ ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ನೀಡಲಾಗಿದೆಯೇ, ರೋಗಿ ಅದರಿಂದ ಗುಣಮುಖನಾದನೇ, ಗಾಯ ವಾಸಿಯಾಯಿತೇ ಎಂಬಿತ್ಯಾದಿ ಅಂಶಗಳನ್ನು ಕೂಡಾ ಗಮನಿಸಬೇಕಾಗುತ್ತದೆ. ತಿಂಗಳುಗಟ್ಟಲೆ ಚಿಕಿತ್ಸೆ ನೀಡುತ್ತಾ ತನ್ನಿಂದ ಯಾವುದೇ ನಿರ್ಲಕ್ಷ್ಯವೂ ಆಗಿಲ್ಲ ಎಂದು ವೈದ್ಯರು ಹೇಳಲಾಗದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ನೆತ್ರಕೆರೆ ಉದಯಶಂಕರ
ಆರೋಗ್ಯ ಸಮಸ್ಯೆಗೆ ಪರಿಹಾರ ಬಯಸಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕಾದದ್ದು ವೈದ್ಯರ ಧರ್ಮ. ಹೀಗೆ ಚಿಕಿತ್ಸೆ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿ, ರೋಗಿಗಳು ಪಡಬಾರದ ಕಷ್ಟ ಪಡುವಂತಾದರೆ? ಖಂಡಿತ ಹೆದರಬೇಕಾಗಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ.
ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರ ವಿಚಾರಣೆ ನಡೆಸಿ ಅರ್ಜಿದಾರರಿಗೆ ನ್ಯಾಯ ಒದಗಿಸಿದೆ.
ಈ ಪ್ರಕರಣದ ಅರ್ಜಿದಾರರು: ಹುಬ್ಬಳ್ಳಿ ಕೇಶ್ವಾಪೂರದ ನಿವಾಸಿ ವೆಂಕಟೇಶ ನಾಗೇಶ ಜನ್ನು. ಪ್ರತಿವಾದಿಗಳು: 1) ಹುಬ್ಬಳ್ಳಿ ದೇಶಪಾಂಡೆ ನಗರದ ವಿವೇಕಾನಂದ ಜನರಲ್ ಆಸ್ಪತ್ರೆ, 2) ಡಾ. ಎಸ್.ಎಂ. ಮೋಹಿತೆ, ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ಕ್ಷೇಮ ಆರ್ಥೋಪೀಡಿಕ್ ಅಂಡ್ ಟ್ರೂಮಾ ಸೆಂಟರ್, ಹುಬ್ಬಳ್ಳಿ.
ಅರ್ಜಿದಾರ ವೆಂಕಟೇಶ ನಾಗೇಶ ಜನ್ನು ಅವರು ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ವಹಿವಾಟುದಾರರಾಗಿದ್ದು, 2007ರ ಮಾರ್ಚ್ 25ರಂದು ತಮ್ಮ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಈಡಾದರು. ಅವರ ಎಡಗಾಲಿಗೆ ತೀವ್ರವಾದ ಏಟು ಬಿದ್ದು ಮೂಳೆ ಮುರಿಯಿತು. ತತ್ ಕ್ಷಣವೇ ಅವರನ್ನು ಒಂದನೇ ಪ್ರತಿವಾದಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡನೇ ಪ್ರತಿವಾದಿ ವೈದ್ಯ ಡಾ. ಎಸ್. ಎಂ. ಮೋಹಿತೆ ಮಾರ್ಗದರ್ಶನದಲ್ಲಿ ಜನ್ನು ಅವರಿಗೆ ಮಾರ್ಚ್ 25ರಿಂದ ಏಪ್ರಿಲ್ 27ರವರೆಗೆ ಚಿಕಿತ್ಸೆ ಒದಗಿಸಲಾಯಿತು. ಆ ಬಳಿಕವೂ 2007ರ ನವೆಂಬರ್ ಕೊನೆಯವರೆಗೂ ಡಾ. ಮೋಹಿತೆ ಅವರು ಜನ್ನು ಅವರಿಗೆ ದೀರ್ಘ ಕಾಲದ ಚಿಕಿತ್ಸೆ ನೀಡಿದರು.
ಇಷ್ಟೆಲ್ಲ ಚಿಕಿತ್ಸೆಯ ಬಳಿಕವೂ ಜನ್ನು ಅವರಿಗೆ ಕಾಲು ನೋವು ಕಡಿಮೆಯಾಗಲಿಲ್ಲ. ವಿಪರೀತ ನೋವಿನ ಜೊತೆಗೆ ಗಾಯಗಳಿಂದ ಕೀವೂ ಬರುತ್ತಿತ್ತು. ವೈದ್ಯರನ್ನು ಈ ಬಗ್ಗೆ ವಿಚಾರಿಸಿದಾಗ ಕಾಲ ಕ್ರಮೇಣ ನೋವು ಕಡಿಮೆಯಾಗಿ ಕೀವು ಬರುವುದೂ ನಿಲ್ಲುತ್ತದೆ ಎಂದು ಸಾಂತ್ವನ ಹೇಳಿದರು. ಪೂರ್ತಿ ವಾಸಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂಬ ಸಾಂತ್ವನ ಬಂತು.
ಗಾಯ ವಾಸಿಯಾಗುವ ಹಾಗೂ ನೋವು ಕಡಿಮೆಯಾಗುವ ಲಕ್ಷಣ ಕಾಣದೇ ಹೋದಾಗ ಅರ್ಜಿದಾರ ಜನ್ನು ಬೇರೆ ವೈದ್ಯರ ಸಲಹೆ ಕೇಳಿದರು. ಆಗ ತಮಗೆ ನೀಡಲಾದ ಚಿಕಿತ್ಸೆಯ ಸ್ವರೂಪ, ವಿಧಾನ ಮತ್ತು ಗುಣಮಟ್ಟ ಸಮರ್ಪಕವಾಗಿಲ್ಲ ಎಂಬುದು ಅರ್ಜಿದಾರರ ಅರಿವಿಗೆ ಬಂತು. ಮತ್ತೆ ಎರಡನೇ ಪ್ರತಿವಾದಿ ವೈದ್ಯರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ನೀಡಲಾದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲವೆಂದೂ, ಪೂರ್ತಿ ವಾಸಿಯಾಗಲು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ, ಅದಕ್ಕೆ 50,000 ದಿಂದ 75,000 ರೂಪಾಯಿ ಬೇಕಾಗಬಹುದು, ಆದರೂ ಪೂರ್ತಿ ವಾಸಿಯಾದೀತು ಎಂಬ ಖಾತರಿ ನೀಡಲಾಗದು ಎಂಬ ಉತ್ತರ ಬಂತು.
ಅಲ್ಲಿ ಮರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪದ ಅರ್ಜಿದಾರರು 2007ರ ನವೆಂಬರ್ 30ರಂದು ಮಣಿಪಾಲದ ಕಸೂರ್ಬಾ ಆಸ್ಪತ್ರೆಗೆ ಹೋದರು. ಅವರನ್ನು ಪರೀಕ್ಷಿಸಿದ ವೈದ್ಯರು ಮೂರು ವಾರಗಳ ಅವಧಿಗೆ ಔಷಧ ಕೊಟ್ಟು ಆ ಬಳಿಕ ಚಿಕಿತ್ಸೆಗೆ ದಾಖಲಾಗುವಂತೆ ನಿರ್ದೇಶಿಸಿದರು.
ಮೂರು ವಾರಗಳ ಔಷಧ ಸೇವನೆ ಬಳಿಕ ಗಾಯಗಳಿಂದ ಕೀವು ಬರುವುದು ಸಂಪೂರ್ಣ ನಿಂತಿತು. ಗಾಯವೂ ವಾಸಿಯಾಗಿ ಗಾಯದ ಸುತ್ತ ಇದ್ದ ಚರ್ಮದ ಕಪ್ಪು ಬಣ್ಣ ನೈಜ ಬಣ್ಣಕ್ಕೆ ತಿರುಗಿತು. ಬಾವೂ ಕಡಿಮೆಯಾಯಿತು. 2007ರ ಡಿಸೆಂಬರ್ 14ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದ ಜನ್ನು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಹಿಂದೆ ಜೋಡಿಸಲಾಗಿದ್ದ ಕೆಲವು ಜೋಡಣೆಗಳು ಮುರಿದಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆದುಹಾಕಲಾಯಿತು. 2008ರ ಜನವರಿ 4ರಂದು ಆಸ್ಪತ್ರೆಯಿಂದ ಮನೆಗೆ ವಾಪಸಾದಾಗ ಜನ್ನು ಅವರ ನೋವು ವಾಸಿಯಾಗಿ ಗಾಯಗಳು ಒಣಗಿದ್ದವು.
ಒಂದು ಹಾಗೂ ಎರಡನೇ ಪ್ರತಿವಾದಿಗಳ ಅಸಮರ್ಪಕ ಚಿಕಿತ್ಸೆಯ ಪರಿಣಾಮವಾಗಿಯೇ ತಾವು ದೀರ್ಘಕಾಲ ನೋವು ಉಣ್ಣುವುದರ ಜೊತೆಗೆ ಅಪಾರ ಪ್ರಮಾಣದ ಚಿಕಿತ್ಸಾ ವೆಚ್ಚ ಹಾಗೂ ವ್ಯಾಪಾರ ನಷ್ಟ ಅನುಭವಿಸಬೇಕಾಯಿತು ಎಂದು ಭಾವಿಸಿದ ಅರ್ಜಿದಾರ ಜನ್ನು, ಇದು ಪ್ರತಿವಾದಿಗಳ ಪಾಲಿನ ಸೇವಾಲೋಪವಾಗುತ್ತದೆ ಆಪಾದಿಸಿ ತಮಗಾದ ಕಷ್ಟ ನಷ್ಟಗಳಿಗೆ ಪರಿಹಾರ ಒದಗಿಸುವಂತೆ ಕೋರಿ ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು.
ಅಧ್ಯಕ್ಷ ಶೇಖರಗೌಡ ಪಾಟೀಲ, ಸದಸ್ಯರಾದ ಶ್ರೀಮತಿ ವಿ.ಡಿ.ಜಾಧವ್ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಎಂ. ಅವರನ್ನು ಒಳಗೊಂಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಪೀಠವು ಅರ್ಜಿದಾರರ ಪರ ವಕೀಲ ಕೆ.ಎಚ್. ಹೆಗಡೆ ಮತ್ತು ಪ್ರತಿವಾದಿಗಳ ಪರ ವಕೀಲ ಎಸ್. ಎನ್. ಕಿಣಿ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.
ಅರ್ಜಿದಾರರ ಆಪಾದನೆಗಳೆಲ್ಲವನ್ನೂ ನಿರಾಕರಿಸಿದ ಪ್ರತಿವಾದಿಗಳು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾದ ಜೋಡಣೆಗಳು ದೆಹಲಿಯ ಶರ್ಮಾ ಸರ್ಜಿಕಲ್ಸ್ ನಿಂದ ತರಿಸಿದವುಗಳಾಗಿದ್ದು ಕಳಪೆಯಲ್ಲ. ಅರ್ಜಿದಾರರು ಮತ್ತೊಮ್ಮೆ ಬಿದ್ದಿರುವ ಸಾಧ್ಯತೆ ಇದೆ. ಹೀಗಾಗಿ ಒಳಗಿನ ಜೋಡಣೆಗಳು ಮುರಿದಿರಬಹುದು ಎಂದು ವಾದಿಸಿದರು. ಅರ್ಜಿದಾರರ ದೇಹ ಭಾರಿ ಗಾತ್ರದ್ದಾಗಿದ್ದೂ ಜೋಡಣೆಗಳು ಮುರಿಯಲು ಕಾರಣವಾಗಿರಬಹುದು ಎಂಬ ವಾದವನ್ನು ಅವರು ಮುಂದಿಟ್ಟರು. ಅರ್ಜಿದಾರರಿಗೆ ಚಿಕಿತ್ಸೆ ನೀಡುವಾಗ ಎಚ್ಚರಿಕೆ ವಹಿಸಲಾಗಿದೆ. ಚರ್ಮದ ಸಮಸ್ಯೆ ಸಲುವಾಗಿ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಲಾಗಿದೆ. ಇಂತಹ ಮೂಳೆ ಮುರಿತ ಪ್ರಕರಣಗಳಲ್ಲಿ ದೀರ್ಘ ಕಾಲದ ಚಿಕಿತ್ಸೆಯ ಅಗತ್ಯವಿದ್ದು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅರ್ಜಿದಾರರು ಅದಕ್ಕೆ ಒಪ್ಪಲಿಲ್ಲ ಎಂದೂ ಅವರು ವಾದಿಸಿದರು.
ತಮಗೆ ನೀಡಲಾದ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಅರ್ಜಿದಾರರು ನೋಟಿಸ್ ಮೂಲಕ ಕೋರಿದ್ದರು. ಪ್ರತಿವಾದಿಗಳು ಅರ್ಜಿದಾರರಿಗೆ ಅದನ್ನು ಒದಗಿಸಿರಲಿಲ್ಲ. ಮೊದಲೇ ನಿರ್ದೇಶನ ನೀಡಿದ್ದರೂ ನ್ಯಾಯಾಲಯಕ್ಕೂ ಸಕಾಲದಲ್ಲಿ ಅವುಗಳನ್ನು ಒದಗಿಸುವಲ್ಲಿ ಪ್ರತಿವಾದಿಗಳು ವಿಫಲರಾದರು. ತೀರ್ಪು ನೀಡಲು ದಿನ ನಿಗದಿ ಪಡಿಸಿದ ಬಳಿಕ ತೀರ್ಪಿಗಿಂತ ಎರಡು ದಿನ ಮೊದಲು ದಾಖಲೆ ಮತ್ತು ಲಿಖಿತ ವಾದ ಮಂಡನೆಗೆ ಅವಕಾಶ ನೀಡುವಂತೆ ಪ್ರತಿವಾದಿಗಳ ಪರ ವಕೀಲರು ಕೋರಿಕೆ ಸಲ್ಲಿಸಿದರು ಎಂಬುದನ್ನು ಗಮನಿಸಿದ ನ್ಯಾಯಾಲಯ ಇದು ಪ್ರತಿವಾದಿಗಳ ವಿಳಂಬ ತಂತ್ರ ಹೊರತು ಬೇರೇನಲ್ಲ ಎಂದು ಭಾವಿಸಿತು.
ನಿರ್ದಿಷ್ಟ ವೈದ್ಯಕೀಯ ದಾಖಲೆಗಳನ್ನು ರೋಗಿಗಳು, ಅಧಿಕೃತ ವ್ಯಕ್ತಿಗಳು ಅಥವಾ ಶಾಸನಬದ್ಧ ಅಧಿಕಾರಿಗಳು ಕೇಳಿದಾಗ ಒದಗಿಸದೇ ಇರುವುದು ವೃತ್ತಿ ಬಾಧ್ಯತಾ ದಂಡ ಸಂಹಿತೆ (ಸಿಪಿಆರ್) ಅನ್ವಯ ಸೇವಾಲೋಪವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತಾವು ಕೊಟ್ಟ ಚಿಕಿತ್ಸೆಯನ್ನೇ ಮಣಿಪಾಲದ ಕೆ ಎಂ ಸಿ ವೈದ್ಯರೂ ನೀಡಿದ್ದಾರೆ. ಆದ್ದರಿಂದ ತಮ್ಮ ಚಿಕಿತ್ಸೆಯಲ್ಲಿ ಯಾವುದೇ ಲೋಪವೂ ಆಗಿಲ್ಲ ಎಂಬುದಾಗಿ ಪ್ರತಿವಾದಿಗಳು ವಾದಿಸಿದ್ದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ಕೆಎಂಸಿ ಚಿಕಿತ್ಸೆಯಿಂದ ಬಹುಬೇಗನೇ ಅರ್ಜಿದಾರರು ಗುಣಮುಖರಾದರು. ಆದರೆ ಪ್ರತಿವಾದಿಯ ಬಳಿ 8-9 ತಿಂಗಳು ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ ಎಂಬುದು ಗಮನಿಸಬೇಕಾದ ಅಂಶ, ಒಂದೇ ವಿಧಾನ ಬಳಸಿದ್ದರೂ ನಿರ್ಲಕ್ಷ್ಯ ಆಗಿಲ್ಲ ಎಂದು ಹೇಳಲಾಗದು. ಚಿಕಿತ್ಸೆ ನೀಡುವುದಷ್ಟೇ ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ನೀಡಲಾಗಿದೆಯೇ, ರೋಗಿ ಅದರಿಂದ ಗುಣಮುಖನಾದನೇ, ಗಾಯ ವಾಸಿಯಾಯಿತೇ ಎಂಬಿತ್ಯಾದಿ ಅಂಶಗಳನ್ನು ಕೂಡಾ ಗಮನಿಸಬೇಕಾಗುತ್ತದೆ. ತಿಂಗಳುಗಟ್ಟಲೆ ಚಿಕಿತ್ಸೆ ನೀಡುತ್ತಾ ತನ್ನಿಂದ ಯಾವುದೇ ನಿರ್ಲಕ್ಷ್ಯವೂ ಆಗಿಲ್ಲ ಎಂದು ವೈದ್ಯರು ಹೇಳಲಾಗದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಅರ್ಜಿದಾರರು ಮತ್ತೊಮ್ಮೆ ಬಿದ್ದಿರಬಹುದು, ಆಧಾರ ಇಲ್ಲದೆ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ ಎಂಬ ತಮ್ಮ ವಾದಕ್ಕೆ ಪ್ರತಿವಾದಿಗಳು ಪುರಾವೆ ಒದಗಿಸಿಲ್ಲ. ಕಾಲ್ಪನಿಕ ವಾದಗಳನ್ನು ಸಾಕ್ಷ್ಯಧಾರಗಳಿಲ್ಲದೆ ಋಜುವಾತಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
'ಈ ಪ್ರಕರಣದಲ್ಲಿ ಪ್ರತಿವಾದಿಗಳಿಂದ ಸೇವಾಲೋಪ ಆಗಿದೆ ಎಂಬ ಅಭಿಪ್ರಾಯ ನಮ್ಮದು, ಪ್ರತಿವಾದಿಗಳು ಚಿಕಿತ್ಸೆ ಒದಗಿಸುವ ಸಲುವಾಗಿ ಹಣ ಪಡೆದಿರುವುದರಿಂದ ಪ್ರಕರಣ ಗ್ರಾಹಕ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಪರಿಹಾರ ಪಡೆಯಲು ಅರ್ಜಿದಾರರು ಅರ್ಹರಾಗಿದ್ದಾರೆ' ಎಂಬ ತೀರ್ಮಾನಕ್ಕೆ ಗ್ರಾಹಕ ನ್ಯಾಯಾಲಯ ಬಂದಿತು.
ಈ ಹಿನ್ನೆಲೆಯಲ್ಲಿ ಸೇವಾಲೋಪ, ಮಾನಸಿಕ ಕ್ಲೇಶಕ್ಕೆ ಪರಿಹಾರವಾಗಿ 50,000 ರೂಪಾಯಿಗಳನ್ನು 5000 ರೂಪಾಯಿಗಳ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರರಿಗೆ ತಿಂಗಳ ಪಾವತಿ ಮಾಡುವಂತೆ ಪ್ರತಿವಾದಿಗಳಿಗೆ ಆಜ್ಞಾಪಿಸಿದ ನ್ಯಾಯಾಲಯ, ತಪ್ಪಿದರೆ ಹಣ ಪಾವತಿ ಮಾಡುವವರೆಗೂ ಶೇಕಡಾ 8ರಷ್ಟು ಬಡ್ಡಿಯನ್ನೂ ಸೇರಿಸಿ ಪರಿಹಾರ ಪಾವತಿ ಮಾಡಬೇಕು ಎಂದು ನಿರ್ದೇಶಿಸಿತು.
No comments:
Post a Comment