Friday, March 6, 2009

ಇಂದಿನ ಇತಿಹಾಸ History Today ಮಾರ್ಚ್ 06

ಇಂದಿನ ಇತಿಹಾಸ

ಮಾರ್ಚ್ 06

ಮಹಾಶಿವರಾತ್ರಿಯಂದು ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಅವಕಾಶ ನಿರಾಕರಿಸಲಾಯಿತು. ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ  ಪಡೆದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ದೊರೆ ಪಾಲ್ಗೊಳ್ಳುವುದನ್ನು ಕಳೆದ ವರ್ಷದಿಂದ ನೇಪಾಳದ ಹಂಗಾಮಿ ಸರ್ಕಾರ ನಿಷೇಧಿಸಿತ್ತು. 

2008:  `ಮೇಘವೇ ಮೇಘವೇ' ಚಿತ್ರತಂಡವು ಉಕ್ಕಿನಹಕ್ಕಿಯಲ್ಲಿ ಕುಳಿತು ಮೇಘಗಳ ನಡುವೆಯೇ ಧ್ವನಿಸುರುಳಿ ಬಿಡುಗಡೆ ಮಾಡಿ, ಹೊಸ ಅಧ್ಯಾಯ ಬರೆಯಿತು. ಮೋಡಗಳ 
ನಡುವೆಯೇ ಧ್ವನಿಸುರುಳಿ ಹಾಗೂ ಸಿ.ಡಿ. ಬಿಡುಗಡೆ ಮಾಡುವ ತಮ್ಮ ಕನಸನ್ನು ನಿರ್ದೇಶಕ ನಾಗೇಂದ್ರ ಪ್ರಸಾದ್ ಮುಂದಿಟ್ಟಾಗ ಅದಕ್ಕೆ ಸ್ಪಂದಿಸಿದ ನಿರ್ಮಾಪಕ ಎಚ್.ಬಿ.ರಘುಕುಮಾರ್, `ಏರ್ ಡೆಕ್ಕನ್' ವಿಮಾನವೊಂದನ್ನು ಬಾಡಿಗೆಗೆ ಪಡೆದು, ಬೆಂಗಳೂರಿನ ನೆತ್ತಿಯ ಮೇಲೆ ಅದನ್ನು ಹಾರಿಸಿ, ಮೋಡಗಳ ನಡುವೆ ಧ್ವನಿಸುರುಳಿ ಅನಾವರಣಗೊಳಿಸಿ ತಮ್ಮ ನಿರ್ದೇಶಕನ ಕನಸನ್ನು ನನಸಾಗಿಸಿದರು.

2008: ಗ್ರಾಮಸ್ಥರ, ಸಂಘ ಸಂಸ್ಥೆಗಳ ವ್ಯಾಪಕ ಪ್ರತಿರೋಧದಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಉದ್ದೇಶಿತ ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂ ಎಸ್ ಇ ಜೆಡ್) ಮೊದಲ ಹಂತದ ಯೋಜನೆಗೆ ಮಾತ್ರ ತಜ್ಞರ ಸಮಿತಿಯ ಹಸಿರು ನಿಶಾನೆ ಸಿಕ್ಕಿತು. ಎರಡನೆಯ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕಿಯೆಗೆ ತಡೆ ನೀಡಲಾಯಿತು. ಎಂ ಎಸ್ ಇ ಜೆಡ್ ರಚನೆಗೆ ಅಗತ್ಯವಾದ ಭೂಮಿ ಸ್ವಾಧೀನವನ್ನು ಬಲವಾಗಿ ವಿರೋದಿಸಿದ ಯೋಜನಾ ವ್ಯಾಪ್ತಿಯ ಗ್ರಾಮಗಳಾದ ಪೆರ್ಮುದೆ, ತೆಂಕ ಎಕ್ಕಾರು, ಕುತ್ತೆತ್ತೂರು ಹಾಗೂ ದೇಲಂತಬೆಟ್ಟು ಮತ್ತಿತರ ಹಳ್ಳಿಗಳ ಕೃಷಿಕರನ್ನು ಒಳಗೊಂಡ `ಕೃಷಿಭೂಮಿ ಸಂರಕ್ಷಣಾ ಸಮಿತಿ' ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿತ್ತು. ಕೃಷಿಕರ ಈ ಸಮಿತಿಯ ವಾದವನ್ನು ಎತ್ತಿಹಿಡಿದ ಮೂಲಸೌಕರ್ಯ ಅಭಿವೃದ್ಧಿಯ ತಜ್ಞರ ಸಮಿತಿ ಈ ಬಗ್ಗೆ ಕಳೆದ ಫೆಬ್ರುವರಿ 27 ರಂದು ಸಭೆ ನಡೆಸಿ ಯೋಜನೆಯ ಪ್ರಥಮ ಹಂತಕ್ಕೆ ಮಾತ್ರ ಶಿಫಾರಸು ಮಾಡಿತು ಎಂದು ಸುದ್ದಿ ಮೂಲಗಳು ತಿಳಿಸಿದವು.

2008: ಬೆಂಗಳೂರು ನಗರದಲ್ಲಿ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುವುದು ಆರ್ಥಿಕ ದೃಷ್ಟಿಯಿಂದ ಕಾರ್ಯ ಸಾಧುವಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟಿಗೆ ತಿಳಿಸಿತು. ದೇವನಹಳ್ಳಿ ವಿಮಾನನಿಲ್ದಾಣದ ಕಾಮಗಾರಿಯೊಂದಕ್ಕೇ 45 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಈ ವಿಮಾನ ನಿಲ್ದಾಣದ ಜೊತೆಗೆ ಎಚ್ ಎ ಎಲ್ ನಿಲ್ದಾಣವೂ ಕಾರ್ಯನಿರ್ವಹಿಸಿದರೆ ಎರಡನ್ನೂ ಒಟ್ಟೊಟ್ಟಿಗೆ ನಿರ್ವಹಿಸುವುದು ಕಷ್ಟವಾಗುತ್ತದೆ. 8-10 ವರ್ಷ ಗತಿಸಿದರೂ ಈ ಕಾಮಗಾರಿಯ ಹಣ ವಾಪಸು ಬರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರಿ ವಕೀಲ ಅರವಿಂದ ಕುಮಾರ್ ತಿಳಿಸಿದರು. ಎಚ್ ಎ ಎಲ್ ವಿಮಾನನಿಲ್ದಾಣದಿಂದ ತೆರಳುತ್ತಿದ್ದ ಎಲ್ಲ ವಿಮಾನಗಳು ಇನ್ನು ದೇವನಹಳ್ಳಿಯ ನಿಲ್ದಾಣದಿಂದ ತೆರಳುವುದಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅನೇಕ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅವರು ಈ ವಾದ ಮಂಡಿಸಿದರು.

2008: ಶಾಲಾ ಬಾಲಕನೊಬ್ಬನನ್ನು ಸಲಿಂಗಕಾಮಕ್ಕೆ ಬಳಸಿಕೊಂಡ ಆರೋಪದಿಂದ ಮುಕ್ತಿ ಪಡೆದ ಸಿದ್ದಗಂಗಾ ಮಠದ ಗೌರಿಶಂಕರ ಸ್ವಾಮೀಜಿ ಈದಿನ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ನಿರ್ದೋಷಿ ಮತ್ತು ಆರೋಪ ಮುಕ್ತ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.

2008: ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿಕಾರಿಗಳು, ಅವರು ಕೆಲಸ ನಿರ್ವಹಿಸಿರುವ ಹಾಗೂ ಅದಕ್ಕಿಂತ ಕೆಳಹಂತದ ಕೋರ್ಟುಗಳಲ್ಲಿ ತಮ್ಮ ನಿವೃತ್ತಿಯ ನಂತರ ವಕೀಲಿ ವೃತ್ತಿ ನಡೆಸಬಾರದು ಎಂಬುದಾಗಿ ಭಾರತೀಯ ವಕೀಲರ ಪರಿಷತ್ತು ಮಾಡಿದ ನಿಯಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಭಾರತೀಯ ವಕೀಲರ ಪರಿಷತ್ತಿನಿಂದ ಜಾರಿಯಾಗಿರುವ ಈ ನಿಯಮವನ್ನು ರದ್ದು ಮಾಡುವಂತೆ ನಿವೃತ್ತ ನ್ಯಾಯಾಂಗ ಅಧಿಕಾರಿ ವಿ.ಪದ್ಮನಾಭ ಕೆದಿಲಾಯ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಈ ಆದೇಶ ಹೊರಡಿಸಿದರು.

2008: ಅಮೆರಿಕದ ಫೋಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ ಮಿತ್ತಲ್ನ ಮಾಲೀಕ ಲಕ್ಷ್ಮಿ ಮಿತ್ತಲ್ 45 ಶತಕೋಟಿ ಡಾಲರುಗಳ ಒಡೆಯನಾಗಿ ಮೊದಲ ಸ್ಥಾನ ಗಳಿಸಿದರು. ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ಸ್ ಮಿತ್ತಲ್ನ ಮಾಲೀಕ ಲಕ್ಷ್ಮಿ ಮಿತ್ತಲ್ 45 ಶತಕೋಟಿ ಡಾಲರುಗಳ ಒಡೆಯನಾಗಿ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ಪತ್ರಿಕೆ ಹೇಳಿತು. ಒಟ್ಟು 43 ಮತ್ತು 42 ಶತಕೋಟಿ ಡಾಲರುಗಳ ಒಡೆಯರಾಗಿರುವ ಮುಖೇಶ್ ಮತ್ತು ಅನಿಲ್ ಅಂಬಾನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ವಿಶ್ವದ ಅತಿ ದೊಡ್ಡ ರಿಯಲ್ ಎಸ್ಟೇಟ್ ದೊರೆಯಾಗಿರುವ ಕುಶಾಲ್ ಪಾಲ್ ಸಿಂಗ್ ಅವರು 30 ಶತಕೋಟಿ ಡಾಲರು ಆಸ್ತಿಯ ಮಾಲೀಕತ್ವದ ಮೂಲಕ 4ನೆಯ ಸ್ಥಾನ ಪಡೆದರು.

2008: ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ವಂಶವಾಹಿ ಚಿಕಿತ್ಸೆ (ಜೆನೆಟಿಕ್ ಎಂಜಿನಿಯರಿಂಗ್) ಮೂಲಕ ಪರಿಣಾಮಕಾರಿಯಾಗಿ ಗುಣಮುಖ ಮಾಡಲಾಗುತ್ತದೆ ಎಂದು ಹೃದಯತಜ್ಞ ಡಾ.ಧಾನಿರಾಂ ಬರುವಾ ಬೆಂಗಳೂರಿನಲ್ಲಿ ಪ್ರಕಟಿಸಿದರು. `ಈಗಾಗಲೇ 12 ನೂರಕ್ಕೂ ಹೆಚ್ಚು ಹೃದಯರೋಗಿಗಳಿಗೆ ಯಶಸ್ವಿಯಾಗಿ ಇಂತಹ ಚಿಕಿತ್ಸೆ ನೀಡಲಾಗಿದೆ. ತೆರೆದ ಹೃದಯ (ಬೈಪಾಸ್) ಶಸ್ತ್ರಚಿಕಿತ್ಸೆಯು ಹಳೆಯದಾಗಿ ಹೋಗಿದೆ. ವ್ಯಕ್ತಿಯ ಜೀವಕ್ಕೆ ಮೌಲ್ಯ ಕಟ್ಟುವುದು ಅಸಾಧ್ಯ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿಶೇಷ ಸಂಶೋಧನೆ ಮೂಲಕ ವಂಶವಾಹಿ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದೇನೆ' ಎಂದು ಅವರು ಹೇಳಿದರು.ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಡಾ. ದೀಪಕ್ ಷಾ, ನ್ಯಾಯವಾದಿ ಡಬ್ಲು.ಎಸ್.ರಾನೆ ಹಾಗೂ ಡಾ. ಮುಕುಲ್ ಮಹಾತ್ಮೆ ಅವರು, ವಂಶವಾಹಿ ಚಿಕಿತ್ಸೆಯ ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಧಾನಿರಾಂ ಬರುವಾ ಅವರ ಮುಖ್ಯ ಆಸ್ಪತ್ರೆ ಗುವಾಹಟಿಯಲ್ಲಿ ಇದ್ದು, ಮಾಹಿತಿಗೆ  ದೂರವಾಣಿ ಸಂಖ್ಯೆ: 99450 35627/ 9945326692 ಸಂಪರ್ಕಿಸಬಹುದು.

 2008: ಮಹಾಶಿವರಾತ್ರಿಯಂದು ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಅವಕಾಶ ನಿರಾಕರಿಸಲಾಯಿತು. ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ  ಪಡೆದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ದೊರೆ ಪಾಲ್ಗೊಳ್ಳುವುದನ್ನು ಕಳೆದ ವರ್ಷದಿಂದ ನೇಪಾಳದ ಹಂಗಾಮಿ ಸರ್ಕಾರ ನಿಷೇಧಿಸಿತ್ತು. ದೊರೆಯ ಆಡಳಿತವನ್ನು ಜನರು ವಿರೋಧಿಸಿದ್ದರಿಂದ ಹಂಗಾಮಿ ಸರ್ಕಾರ `ಭೂತೋ ಜಾತ್ರ, ಇಂದ್ರಜಾತ್ರ' ಇತ್ಯಾದಿ ಪ್ರಮುಖ ಧಾರ್ಮಿ ಕಾರ್ಯಕ್ರಮಗಳಲ್ಲಿ ದೊರೆ  ಭಾಗವಹಿಸುವುದನ್ನು ನಿಷೇಧಿಸಿತ್ತು. ಹಾಗೆಯೇ ಶಿವರಾತ್ರಿಯ ಅಂಗವಾಗಿ ಸ್ವಾಮೀಜಿಗಳ  ಸಮಾವೇಶ ನಡೆದು ಅಲ್ಲಿನ ರಾಷ್ಟ್ರದ ದೊರೆ, ಸ್ವಾಮೀಜಿಗಳಿಗೆ ಕಾಣಕೆನೀಡುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಈ ವರ್ಷ ದೊರೆಗೆ ಈ ಅವಕಾಶ  ನಿರಾಕರಿಸಲಾಯಿತು. ದೊರೆಯ ಬದಲಾಗಿ ಪಶುಪತಿನಾಥ ದೇವಾಲಯದ  `ಗತಿ ಸಂಸ್ಥಾನ'ದವರಿಗೆ ದೊರೆಯ ಮರ್ಯಾದೆ ನೀಡಲಾಯಿತು. 

2008: ಭಾರತದಲ್ಲಿನ ನೇಪಾಳದ ರಾಯಭಾರಿಯಾಗಿ ಡಾ. ದುರ್ಗೇಶ್ ಮಾನ್ ಸಿಂಗ್ ಅವರನ್ನು ಸರ್ಕಾರ ನೇಮಿಸಿತು.

2008: ಮರಾಠಿ ಭಾಷೆಯ ಚಲನಚಿತ್ರ ನಿರ್ದೇಶಕ ಮಹೇಶ್ ಹಡಾವಳೆ ಅವರ `ಟಿಂಗ್ಯಾ' ಚಿತ್ರವು 2007ರ ಲಂಕೇಶ್ ಚಿತ್ರ ಪ್ರಶಸ್ತಿಗೆ ಆಯ್ಕೆಯಾಯಿತು.

 2008: ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ವಾರ್ಷಿಕ ಸಿರಿವಂತರ ಪಟ್ಟಿಯಲ್ಲಿ, ಸಾಫ್ಟ್ವೇರ್ ದೊರೆ ಬಿಲ್ ಗೇಟ್ಸ್ ಮತ್ತು ಮೆಕ್ಸಿಕೊದ ಉದ್ಯಮಿ ಕಾರ್ಲೋಸ್ ಸ್ಲಿಮ್ ಅವರನ್ನು ಹಿಂದಿಕ್ಕಿದ ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆ, ಮುಂಚೂಣಿ ಸ್ಥಾನಕ್ಕೆ ಏರಿ, ಅಗರ್ಭ ಶ್ರೀಮಂತ ಎಂಬ ಹೆಗ್ಗಳಿಗೆ ಪಾತ್ರರಾದರು.

2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೊತ್ತ ಮೊದಲ ಬಾರಿಗೆ 1000 ಕೋಟಿ ರೂಪಾಯಿ ವರಮಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತು. 2006ರಲ್ಲಿ ಇದೇ ದಿನ ಸಂಸ್ಥೆಯು 838 ಕೋಟಿ ರೂಪಾಯಿ ವರಮಾನ ಗಳಿಸಿತ್ತು. 

2007: ಇಂಡೋನೇಷ್ಯದ ಸುಮಾತ್ರಾ ದ್ವೀಪದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 82 ಜನರು ಮೃತರಾಗಿ, 12ಕ್ಕೂ ಹೆಚ್ಚು ಜನರು ಗಾಯಗೊಂಡರು. ಎರಡು ಗಂಟೆಗಳ ಅಂತರದಲ್ಲಿ ಸಂಭವಿಸಿದ ಈ ಭೂಕಂಪಗಳು ಜನರಲ್ಲಿ ಸುನಾಮಿ ಭೀತಿಯನ್ನೂ ಮೂಡಿಸಿದವು. ರಿಕ್ಟರ್  ಮಾಪಕದಲ್ಲಿ 6.3ರಷ್ಟು  ತೀವ್ರತೆ ದಾಖಲಿಸಿದ ಮೊದಲ ಭೂಕಂಪವು ಮಲೇಷ್ಯಾ ಮತ್ತು ಸಿಂಗಪುರದಲ್ಲಿಯೂ ಅನುಭವಕ್ಕೆ ಬಂದಿತು. ಸುಮಾತ್ರಾ  ದ್ವೀಪ ಬಳಿಯ ಸಾಗರದಾಳದಲ್ಲಿ 2004ರ ಡಿಸೆಂಬರಿನಲ್ಲಿ ಸಂಭವಿಸಿದ್ದ ಭೂಕಂಪದಿಂದ ಉಂಟಾದ ಸುನಾಮಿಯು 1,70,000 ಜನರನ್ನು ಬಲಿ ತೆಗೆದುಕೊಂಡಿತ್ತು.

2007:  ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಫ್ರಾನ್ಸ್ ನೈಟ್ ಪ್ರಶಸ್ತಿ ಕಲಾವಿದೆ ಅಂಜೊಲಿ ಇಳಾ ಮೆನನ್ ಅವರ ಮುಡಿಗೇರಿತು. ಇಂಡೋ-ಫ್ರೆಂಚ್ ಸಂಬಂಧ ಸುಧಾರಣೆಗೆ ಸಹಾಯವಾಗುವಂಥ ಕೃತಿನಿರ್ಮಾಣದಲ್ಲಿ ತೊಡಗಿರುವವರಿಗೆ ಫ್ರೆಂಚ್ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಪಡಿಸುವ ತಮಿಳುನಾಡು ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿತು. ಸಿಇಟಿ ಬದಲು ಸಹಜ ಪ್ರಕ್ರಿಯೆ ಮೂಲಕ ಎಲ್ಲವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶ. 2006ರ ಜೂನಿನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಈ ಮಸೂದೆಯನ್ನು  ಅಂಗೀಕರಿಸಲಾಗಿತ್ತು. ಟಿ. ಎ. ಪೈ ಹಾಗೂ ಇಮಾಮ್ ದಾರ್ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಸುಪ್ರೀಂಕೋರ್ಟ್, ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಯಸುವ ಅಭ್ಯರ್ಥಿಗಳ ಅರ್ಹತೆ ಪರಿಗಣಿಸಲು ಸಾಮಾನ್ಯ ಪ್ರವೇಶ ಪರೀಕ್ಷೆ ಏಕೈಕ ಮಾರ್ಗವಾಗಿದೆ ಎಂದು ಹೇಳಿತ್ತು.

2007: ಚಿತ್ರಾ ಪಾಲೇಕರ್ ಚೊಚ್ಚಲ ನಿರ್ದೇಶನದ `ಮಾತಿ ಮಾಯಿ' ಮರಾಠಿ ಚಲನಚಿತ್ರವು ಪ್ರತಿಷ್ಠಿತ `ಲಂಕೇಶ್ ಪ್ರಶಸ್ತಿ'ಗೆ ಆಯ್ಕೆಯಾಗಿದೆ ಎಂದು ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಮಾತಿಮಾಯಿ ಚಿತ್ರವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾ ದೇವಿ ಅವರ ಕಾದಂಬರಿ `ಬಾಯೇನ್' ಆಧಾರಿತ ಚಿತ್ರ.

2007: ಕೋಲಾರದ ಡಾ. ಎಲ್. ಬಸವರಾಜು ಪ್ರತಿಷ್ಠಾನ ನೀಡುವ ಡಾ. ಎಲ್. ಬಸವರಾಜು ಪ್ರಶಸ್ತಿಗೆ ಚಿಂತಕ, ವಿಮರ್ಶಕ ಡಾ. ಕೆ.ವಿ. ನಾರಾಯಣ ಆಯ್ಕೆಯಾದರು.

2007: ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸತ್ ಸದಸ್ಯ ಸುನೀಲ್ ಕುಮಾರ್ ಮಹತೋ ಅವರ ಹತ್ಯೆಯ ಹೊಣೆಗಾರಿಕೆ ತಮ್ಮದು ಎಂದು ಸಿಪಿಎಂ ಮಾವೋವಾದಿಗಳು ಘೋಷಿಸಿದರು. ಮಹತೋ ಅವರು ಗ್ರಾಮಸ್ಥರನ್ನು ಎತ್ತಿಕಟ್ಟಿ 11 ನಕ್ಸಲರನ್ನು ಕೊಂದಿದ್ದರು. ಅದಕ್ಕಾಗಿ ನಾವೀಗ ಅವರನ್ನು ಕೊಂದಿದ್ದೇವೆ ಎಂದು ಹಾಡಿಯಾ ಮತ್ತು ಲಾಂಗೋ ಹಳ್ಳಿಗಳಲ್ಲಿ ಅಂಟಿಸಿದ ಭಿತ್ತಿಪತ್ರಗಳಲ್ಲಿ ಮಾವೋವಾದಿಗಳು ಪ್ರಕಟಿಸಿದರು. 

2007: ಭಾರತ ಮತ್ತು ಶ್ರೀಲಂಕಾ ನಡುವೆ ಇತ್ತು ಎನ್ನಲಾಗಿರುವ ರಾಮಸೇತುವಿನ ಚಿತ್ರವನ್ನು ನಾಸಾ ಉಪಗ್ರಹ ಸೆರೆ ಹಿಡಿದಿದೆ. ಆದರೆ ಅದರ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯಿಂದ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿತು.

2006: ಕೊಲ್ಲೂರು ಮೂಕಾಂಬಿಕಾ ದೇವಿಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳೆಯರಾಜ ಅವರು 30 ಲಕ್ಷ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟವನ್ನು ಸಮರ್ಪಿಸಿದರು. ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ದೇವಸ್ಥಾನ ಅರ್ಚಕರೊಡಗೂಡಿ ಶಾಸ್ತ್ರೋಕ್ತವಾಗಿ ದೇವಿಗೆ ಕಿರೀಟವನ್ನು ತೊಡಿಸಿದರು.

2006: ಲಿಬಿಯಾದ ಉನ್ನತ ಶಾಸಕಾಂಗ ಮತ್ತು ಕಾರ್ಯಕಾರಿ ಸಂಸ್ಥೆಯು ಅಲಿ-ಅಲ್ ಮಹಮದಿ ಅವರನ್ನು ನೂತನ ಪ್ರಧಾನಿಯಾಗಿ ಸುಧಾರಣಾವಾದಿಯಾಗಿದ್ದ ಶೋಕ್ರಿ ಘನೇಮ್ ಅವರ ಸ್ಥಾನಕ್ಕೆ ನೇಮಕ ಮಾಡಿತು. ಘನೇಮ್ ಅವರಿಗೆ ರಾಷ್ಟ್ರದ ತೈಲರಂಗದ ಉಸ್ತುವಾರಿ ವಹಿಸಲಾಯಿತು.

2006: ಪ್ರಸ್ತುತ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು `ಕ್ರಾಷ್' ಚಿತ್ರಕ್ಕೆ ಲಭಿಸಿತು. ಆಂಜ್ ಲೀ ನಿರ್ದೇಶನದ `ಬ್ರೋಕ್ ಬ್ಯಾಕ್ ಮೌಂಟನ್' ಚಿತ್ರವನ್ನು ಮತಗಳಿಕೆಯಲ್ಲಿ `ಕ್ರಾಷ್' ಹಿಂದಿಕ್ಕಿತು. ಆಂಜ್ ಲೀಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.

2006: ರಾಜ್ಯಸಭೆ ಸದಸ್ಯರಾಗಿರುವಾಗಲೇ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲಯಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಜ್ಯಸಭಾ ಸದಸ್ಯೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಅವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಜಯಾ ವಿರುದ್ಧ ಸ್ಪರ್ಧಿಸಿ ಸೋತ ಅಭ್ಯರ್ಥಿ ಮದನ್ ಮೋಹನ್ ಅವರ ಅರ್ಜಿಯನ್ನು ಅನುಸರಿಸಿ ಚುನಾವಣಾ ಆಯೋಗವು ಜಯಾ ಬಚ್ಚನ್ ಅನರ್ಹತೆಗೆ ಶಿಫಾರಸು ಮಾಡಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಜಯಾ ಬಚ್ಚನ್ ಅವರನ್ನು ರಾಜ್ಯ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

2006: ಸಾರ್ವಜನಿಕರ ಒತ್ತಡವನ್ನು ಅನುಸರಿಸಿ ದೆಹಲಿ ಪೊಲೀಸರು ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಹೊಸದಾಗಿ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಹರಿಯಾಣ ಸಚಿವರ ಪುತ್ರ ಮನುಶರ್ಮಾ ಸೇರಿದಂತೆ 9 ಆರೋಪಿಗಳನ್ನು ಖುಲಾಸೆ ಮಾಡಿತ್ತು.

2001: `ನೇಕೆಡ್ ವೈಫ್' ಹೆಸರಿನ ಹೊಸ ಟೈಪ್ ಇ ಮೇಲ್ ವೈರಸ್ ಜಗತ್ತಿನಾದ್ಯಂತ `ವಿಂಡೋಸ್'ನ್ನು ಅಸ್ತವ್ಯಸ್ತಗೊಳಿಸಿತು.

1997: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ರಾಯಲ್ ವೆಬ್ ಸೈಟನ್ನು ಉದ್ಘಾಟಿಸಿದರು. (http://www.royal.gov.uk) 

1992: `ಮೈಕೆಲೇಂಜೆಲೊ' ಹೆಸರಿನ ವೈರಸ್ ಜಗತ್ತಿನಾದ್ಯಂತ ಪರ್ಸನಲ್ ಕಂಪ್ಯೂಟರುಗಳನ್ನು ಬಾಧಿಸಿ ಕಂಪ್ಯೂಟರ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.

1971: ಪೋರ್ಟ್ ಆಫ್ ಸ್ಪೇನಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವುದರೊಂದಿಗೆ ಸುನಿಲ್ ಗಾವಸ್ಕರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿದರು. ಅವರು ಔಟಾಗದೆ 65 ಮತ್ತು 67 ರನ್ನುಗಳನ್ನು ಪಡೆದರು.

1970: ಕಲಾವಿದ ನರಸಿಂಹಮೂರ್ತಿ ಸಿ.ಎಂ. ಜನನ.

1961: ಭಾರತದ ಮೊತ್ತ ಮೊದಲ ಆರ್ಥಿಕ ದಿನಪತ್ರಿಕೆ `ಇಕನಾಮಿಕ್ ಟೈಮ್ಸ್' ಅನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹ ಆರಂಭಿಸಿತು.

1952: ಕಲಾವಿದ ಉಪಾಧ್ಯಾಯ ಡಿ.ಎ. ಜನನ.

1945: ಕಲಾವಿದ ಜಗದೀಶ ಎಚ್. ಎನ್. ಜನನ.

1941: ಕಲಾವಿದ ವೆಂಕಟರಾವ್ ಎಂ.ಪಿ. ಜನನ.

1941: ಕಲಾವಿದ ಕೃಷ್ಣೇಗೌಡ ಬಿ.ಎಂ. ಜನನ.

1937: ವಾಲೆಂಟೀನಾ ತೆರೆಷ್ಕೋವಾ ಹುಟ್ಟಿದರು. ಮುಂದೆ ಗಗನಯಾನಿಯಾದ ಈಕೆ 1963ರ ಜೂನ್ 16ರಂದು ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. 

1928: ಭಾರತದ ವಕೀಲ, ಮುತ್ಸದ್ಧಿ ಸತ್ಯೇಂದ್ರ ಪ್ರಸಾದ ಸಿನ್ಹ (1864-1928) ಬೆಹ್ರಾಂಪುರದಲ್ಲಿ ನಿಧನರಾದರು. 1907ರಲ್ಲಿ ಇವರು ಬಂಗಾಳದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡ ಮೊದಲ ಭಾರತೀಯರೆನಿಸಿದ್ದರು. ಗವರ್ನರ್  ಜನರಲ್ನ ಎಕ್ಸಿಕ್ಯೂಟಿವ್ ಕೌನ್ಸಿಲಿಗೆ ಕಾನೂನು ಸದಸ್ಯರಾಗಿ ನೇಮಕಗೊಂಡ ಮೊದಲಿಗ ಎಂಬ ಹೆಗ್ಗಳಿಕೆ ಕೂಡಾ ಇವರದೇ. ಲಾಯ್ಡ್ ಜಾರ್ಜ್ ಕೈಕೆಳಗೆ ಬ್ರಿಟನ್ನಿನ ವಾರ್ ಕ್ಯಾಬಿನೆಟ್ಟಿನಲ್ಲೂ (ಸಮರ ಸಂಪುಟ) ಸೇವೆ ಸಲ್ಲಿಸಿದ್ದರು.

1920: ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕುಟುಂಬದ ಯಶವಂತ ಈರಯ್ಯ ಅವರು ಈರಯ್ಯ- ಕಾಮಾಕ್ಷಿ ಶೆಟ್ಟಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಕಲೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಮರ, ಕಲ್ಲು, ಮಣ್ಣು, ದಂತ ಮತ್ತಿತರ ಕಲೆಗಳಲ್ಲಿ, ಆಕೃತಿ ರಚನೆ, ಅಲಂಕಾರಿಕ ವಸ್ತುಗಳು, ಚಿತ್ರಕಲಾ ಸಂಪುಟ ರಚನೆಯಲ್ಲಿ ಅಪಾರ ಪರಿಣತಿ ಗಳಿಸಿದವರು. ರಾಜ್ಯ  ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1913: ಕಲಾವಿದ ವಿ. ಶ್ರೀಕಂಠ ಅಯ್ಯರ್ ಜನನ.

1697: ಸ್ಟ್ರಿಂಜರ್ ಲಾರೆನ್ಸ್ (1697-1775) ಹುಟ್ಟಿದ. ಬ್ರಿಟಿಷ್ ಸೇನಾ ಕ್ಯಾಪ್ಟನ್ ಆಗಿದ್ದ ಈತ ಬ್ರಿಟಿಷ್ ಆಳ್ವಿಕೆಯಡಿಯಲ್ಲಿ ಭಾರತೀಯ ಸೇನೆಯನ್ನು ಸ್ಥಾಪಿಸಿದ. 

1508: ಮೊಘಲ್ ವಂಶದ ಎರಡನೇ ದೊರೆ ಹುಮಾಯೂನ್ (1508-1556) ಜನಿಸಿದ. ಈತ ಬಾಬರನ ಮಗ ಹಾಗೂ ಉತ್ತರಾಧಿಕಾರಿಯಾಗಿದ್ದು, ಮೊಘಲ್ ವಂಶದಲ್ಲಿ ಶ್ರೇಷ್ಠ ಚಕ್ರವರ್ತಿ ಎಂಬ ಹೆಸರು ಗಳಿಸಿದ ಅಕ್ಬರನ ತಂದೆ.

1475: ಮೈಕೆಲೇಂಜೆಲೋ ಬುರಾನರೊಟ್ಟಿ (1475-1564) ಹುಟ್ಟಿದ ದಿನ. ಇಟಲಿಯ ವರ್ಣಚಿತ್ರಗಾರ, ಶಿಲ್ಪಿ ಹಾಗೂ ವಾಸ್ತುಶಿಲ್ಪಿಯಾದ ಈತ ಮಹಾನ್ ಕಲಾವಿದನೆಂದು ಹೆಸರು ಗಳಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement