Wednesday, March 11, 2009

ಇಂದಿನ ಇತಿಹಾಸ History Today ಮಾರ್ಚ್ 11

ಇಂದಿನ ಇತಿಹಾಸ

ಮಾರ್ಚ್ 11

ಭಾರತೀಯ ಮಹಿಳಾ ಉದ್ಯಮಿಗಳ ಪೈಕಿ ಮುಂಚೂಣಿಯಲ್ಲಿರುವ ಬಯೋಕಾನ್ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಷಾ ಅವರು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಯುರೋಪ್ ಹೊರತು ಪಡಿಸಿ ವಿಶ್ವದ ಅತ್ಯಂತ ಪ್ರಭಾವಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ನಿಯತಕಾಲಿಕ ನೇಚರ್ ಬಯೋಟೆಕ್ನಾಲಜಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಹೊರಹೊಮ್ಮಿತು.

2008: ಲಾಹೋರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಕನಿಷ್ಠ 23 ಮಂದಿ ಮೃತರಾಗಿ ಇತರ ಹಲವರು ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತನ್ನ ಪಾಕಿಸ್ಥಾನ ಪ್ರವಾಸವನ್ನು ಮುಂದೂಡಿತು. ಲಾಹೋರಿನ ಪ್ರತಿಷ್ಠಿತ ನೌಕಾಪಡೆ ಕಾಲೇಜಿನಲ್ಲಿ ಇಬ್ಬರು ಮಾನವ ಬಾಂಬರುಗಳು ಸ್ವತಃ ಸ್ಫೋಟಿಸಿಕೊಂಡು ಕನಿಷ್ಠ ಐವರನ್ನು  ಕೊಂದು 19 ಮಂದಿಯನ್ನು ಗಾಯಗೊಳಿಸಿದ ಘಟನೆ ನಡೆದ ಒಂದು ವಾರದ ಒಳಗಾಗಿ ಈ ಸ್ಫೋಟಗಳು ಸಂಭವಿಸಿದವು. ಬೆಳಗ್ಗೆ ಸಂಭವಿಸಿದ ಈ ಸ್ಫೋಟಗಳಲ್ಲಿ ಫೆಡರಲ್ ತನಿಖಾ ಸಂಸ್ಥೆಯ ಕಚೇರಿ ಸಂಪೂರ್ಣ ನಾಶವಾಯಿತು. ಭುಟ್ಟೋ ಕುಟುಂಬದ ಬಿಲಾವಲ್ ಮನೆ ಸಮೀಪದ ಲಾಹೋರಿನ ಮಾಡೆಲ್ ಟೌನಿನ ಜಾಹೀರಾತು ಸಂಸ್ಥೆಯೊಂದರಲ್ಲಿ ಎರಡನೇ ಸ್ಫೋಟ ಸಂಭವಿಸಿತು.

2008: ಪಾಕಿಸ್ಥಾನ ಕ್ರಿಕೆಟ್ ತಂಡದ ಮಿಸ್ಬಾ ಉಲ್ ಹಕ್ ಹಾಗೂ 19 ವರ್ಷ ವಯಸ್ಸಿನೊಳಗಿನವರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಭಾರತ ಪ್ರೀಮಿಯರ್ ಲೀಗಿನ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಯಿತು. ಮುಂಬೈಯಲ್ಲಿ ನಡೆದ ಐಪಿಎಲ್ ತಂಡಗಳಿಗೆ ಆಟಗಾರರ ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಮಾಲೀಕ ವಿಜಯ್ ಮಲ್ಯ ಅವರು ಮಿಸ್ಬಾ ಅವರನ್ನು 50 ಲಕ್ಷ ರೂಪಾಯಿ ನೀಡಿ ಖರೀದಿಸಿದರು. ಮಿಸ್ಬಾ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

2008: ಎಂಭತ್ತು  ಅಡಿಗಳಷ್ಟು  ದೂರದಿಂದಲೇ ಜನರ ಉಡುಪಿನ ಒಳಗೇನಿದೆ ಎಂಬುದನ್ನು ನೋಡಬಲ್ಲಂತಹ ಕ್ಯಾಮರಾವನ್ನು ತಾನು ಅಭಿವೃದ್ಧಿ ಪಡಿಸಿರುವುದಾಗಿ ಆಕ್ಸ್ ಫರ್ಡ್ ಶೈರ್ ಮೂಲದ ಬ್ರಿಟಿಷ್ ಸರ್ಕಾರದ ಮುಂಚೂಣಿಯ ಭೌತಶಾಸ್ತ್ರ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ರುತೆರ್ ಫೋರ್ಡ್ ಅಪ್ಲೆಟನ್  ಲ್ಯಾಬೋರೇಟರಿಯ `ಥ್ರೂ ವಿಷನ್' ವಿಭಾಗವು ಪ್ರತಿಪಾದಿಸಿತು. ಆಯುಧಗಳು, ಮಾದಕ ವಸ್ತುಗಳು ಮತ್ತು  ಸ್ಫೋಟಕಗಳನ್ನು  ಪತ್ತೆ ಹಚ್ಚಲು ಇದು ವರದಾನ ಎಂದು ಈ ಕಂಪೆನಿ ಹೇಳಿತು. ಹೊಸ ತಂತ್ರಜ್ಞಾನ ಬಳಸಿ ಈ ಕ್ಯಾಮರಾವನ್ನು ಈ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ ಎಂದು `ದಿ ಸಂಡೆ ಟೈಮ್ಸ್' ವರದಿ ಮಾಡಿತು. ಕ್ಯಾಮರಾವು ಬಟ್ಟೆಗಳ ಒಳಗೆ ಇರುವ ವಸ್ತುಗಳನ್ನು ನೋಡಬಲ್ಲುದಾದರೂ, ಅದು ತೆಗೆಯುವ ಚಿತ್ರವು ದೈಹಿಕ ವಿವರಗಳನ್ನು ತೋರಿಸುವುದಿಲ್ಲ ಎಂದು  ಕ್ಯಾಮರಾ ವಿನ್ಯಾಸಗಾರರು ಹೇಳಿರುವುದಾಗಿ ವರದಿ ತಿಳಿಸಿತು. `ಥ್ರೂ ವಿಷನ್' ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕ್ಲೈವ್ ಬಿಯಾಟ್ಲೀ ಅವರ ಪ್ರಕಾರ `ಭಯೋತ್ಪಾದನೆಯ ಕೃತ್ಯಗಳು ಇತ್ತೀಚಿನ ವರ್ಷಗಳಲ್ಲಿ ಇಡೀ ಜಗತ್ತನ್ನು  ನಡುಗಿಸುತ್ತಿವೆ. ವಿಶ್ವದಾದ್ಯಂತ ಭದ್ರತಾ ಮುನ್ನೆಚ್ಚರಿಕೆಗಳನ್ನು ಬಿಗಿಗೊಳಿಸಲಾಗುತ್ತಿದೆ. ಟಿ 5000ವು  (ಕ್ಯಾಮರಾ) ಜನರ ಶೋಧನೆಯ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತದೆ'. ಟಿ 5000 ಎಂದು ಹೆಸರಿಸಲಾಗಿರುವ ಈ ಕ್ಯಾಮರಾವನ್ನು  ರೈಲು ನಿಲ್ದಾಣ, ವ್ಯಾಪಾರಿ ಕೇಂದ್ರಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದನಾ ದಾಳಿಗಳನ್ನು ವಿಫಲಗೊಳಿಸುವ ಸಲುವಾಗಿ ಬಳಸಬಹುದು. ಪೊಲೀಸ್ ಪಡೆಗಳು, ರೈಲು ಕಂಪೆನಿಗಳು, ವಿಮಾನ ನಿಲ್ದಾಣಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೂ ಇದು ಹೆಚ್ಚು  ಉಪಯುಕ್ತವಾಗಬಹುದು ಎಂಬುದು ಇದರ ವಿನ್ಯಾಸಕರ ನಿರೀಕ್ಷೆ. ವಾಸ್ತವವಾಗಿ ಬಾಹ್ಯಾಕಾಶ ನೌಕೆಗಳಲ್ಲಿ ಬಳಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಕಾಸ್ಮಿಕ್ ದೂಳಿನ ಮೋಡಗಳ ಮೂಲಕ ವಸ್ತುಗಳನ್ನು  ಗುರುತಿಸಲು ಸಾಧ್ಯವಾಗುವ ಈ ಉಪಕರಣ ಬಳಸಿ ಬಟ್ಟೆಗಳ ಒಳಗಿನ ವಸ್ತುಗಳನ್ನೂ  ನೋಡಬಹುದು ಎಂಬುದು ಸಂಶೋಧಕರು ಬೇಗನೇ ಪತ್ತೆ ಹಚ್ಚಿದರು. ಅದರ ಪರಿಣಾಮವಾಗಿಯೇ   ಈ ಕ್ಯಾಮರಾ ಆವಿಷ್ಕಾರಗೊಂಡಿತು.

2008: ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಇನ್ಫೋಸಿಸ್ ಅಧ್ಯಕ್ಷ ಎನ್.ನಾರಾಯಣ ಮೂರ್ತಿ ಅವರನ್ನು ಅಮೆರಿಕದ ವುಡ್ರೋ ವಿಲ್ಸನ್ ಪ್ರಶಸ್ತಿ ಹಾಗೂ ಕಾರ್ಪೋರೆಟ್ ಪೌರತ್ವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಮೆರಿಕದ ಸ್ಮಿತ್ ಸಾನಿಯನ್ ಸಂಸ್ಥೆಯ ವೂಡ್ರೂ ವಿಲ್ಸನ್ ಅಂತರರಾಷ್ಟ್ರೀಯ ಕೇಂದ್ರ ಪ್ರಕಟಿಸಿತು. ಪ್ರಶಸ್ತಿಯನ್ನು ನವದೆಹಲಿಯಲ್ಲಿ 2008ರ ಸೆಪ್ಟೆಂಬರ್ 29ರಂದು ಪ್ರದಾನ ಮಾಡಲಾಗುವುದು. ಸಾಮಾಜಿಕ ಕಲ್ಯಾಣ, ತಾಂತ್ರಿಕ ಸಂಶೋಧನೆ ಹಾಗೂ ಆರ್ಥಿಕ ಸಾಮರಸ್ಯ ಮೂಡಿಸುವ ದಿಸೆಯಲ್ಲಿ ಇವರು ಕೈಗೊಂಡಿರುವ ಸೇವೆ ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಹೇಳಿತು.  

2008: ಪಾಕಿಸ್ಥಾನದ ವೈದ್ಯೆ ಬೇಗಂ ಜಾನ್ ತಮ್ಮ ಅಸೀಮ ಸಾಹಸದ ವೈದ್ಯಕೀಯ ಸೇವೆಗಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನರಾದರು. ಅಮೆರಿಕ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ವಾಷಿಂಗ್ಟನ್ನಿನಲ್ಲಿ ಬೇಗಂ ಜಾನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಪಾಕ್ ಗಡಿಭಾಗದ ಅಫ್ಘಾನಿಸ್ಥಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ವಾಸಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಎದೆಕೊಟ್ಟು ಬೇಗಂ ಜಾನ್ ತಮ್ಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ತಮ್ಮದೇ ಆದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಮೂಲಕ ಬುಡಕಟ್ಟು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ವೃದ್ಧಿಸಲು ಬೇಗಂ ಈ ಪ್ರದೇಶದಲ್ಲಿ ಶ್ರಮ ವಹಿಸಿದ್ದರು.

2008: ವಿಜಾಪುರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಕೇಂದ್ರ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸ್ವಾಯತ್ತ ವಿಶ್ವವಿದ್ಯಾಲಯದ ಮಾನ್ಯತೆ ನೀಡಿವೆ. ಈ ಸಂಸ್ಥೆ ಇನ್ನು `ಬಿ ಎಲ್ ಡಿ ಇ ವಿಶ್ವವಿದ್ಯಾಲಯ'ವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರಕಟಿಸಿದರು.

2007: ಭಾರತೀಯ ಆಟಗಾರ ವಿಶ್ವನಾಥನ್ ಆನಂದ್ ಮೊರೆಲಿಯಾ ಲಿನಾರೆಸ್ ಗ್ರ್ಯಾಂಡ್ ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಉಕ್ರೇನಿನ ವೆಸೆಲಿ ಇವಾಂಚುಕ್ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವದ ಹೊಸ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

2007; ವಿಶ್ವ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಅವರು ಮೂರನೇ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡರು.

2007: ಕೆರಿಬಿಯನ್ ದ್ವೀಪದ ಟ್ರೆಲಾನಿಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ವರ್ಣರಂಜಿತ ಉದ್ಘಾಟನೆ ನೆರವೇರಿತು. 16 ತಂಡಗಳು ವಿಶ್ವಕಪ್ ಗಾಗಿ 46 ದಿನಗಳ ಕಾಲ ವಿಂಡೀಸಿನಲ್ಲಿ ಹೋರಾಟ ನಡೆಸುವುವು.

2007: ಹಿರಿಯ ಗಮಕಿ ಸೊರಬದ ಹೊಸಬಾಳೆ ಸೀತಾರಾಮ ರಾವ್ ಅವರಿಗೆ 2007ನೇ ಸಾಲಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಂ. ಕಾವೇರಿಯಪ್ಪ ಪ್ರದಾನ ಮಾಡಿದರು.

2007: ಪಾಕಿಸ್ಥಾನ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ವಜಾಗೊಂಡ ನ್ಯಾಯಮೂರ್ತಿ ಇಫ್ತಿಕರ್ ಮೊಹಮ್ಮದ್ ಚೌಧರಿ ಅವರು ರಾಜೀನಾಮೆ ಸಲ್ಲಿಸದೆಯೇ ಉನ್ನತ ನ್ಯಾಯಾಧೀಶರ ಸಮಿತಿಯ ಮುಂದೆ ತಮ್ಮನ್ನು ಸಮರ್ಥಿಸಿಕೊಳ್ಳಲು ತೀರ್ಮಾನಿಸಿದರು.

2007: ಕುರುಕ್ಷೇತ್ರದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ `ಪ್ರಿನ್ಸ್' ಪ್ರಕರಣದ ನೆನಪು ಮರೆಯಾಗುವ ಮುನ್ನವೇ ಗುಜರಾತಿನ ಭಾವನಗರ ಸಮೀಪದ ಕರ್ಮದೀಯ ಹಳಿಯಲ್ಲಿ ಈದಿನ ಮಧ್ಯಾಹ್ನ 60 ಅಡಿ ಆಳದ ಕೊಳವೆ ಬಾವಿಯೊಳಕ್ಕೆ ಬಿದ್ದ 4 ವರ್ಷದ ಬಾಲಕಿ ಆರತಿ ಚಾವ್ಲಾ ಸಂಜೆ ವೇಳೆಗೆ ಅಸು ನೀಗಿದಳು. ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡವೊಂದು ಮಧ್ಯಾಹ್ನದಿಂದಲೇ ಆರತಿಯನ್ನು ಜೀವಂತವಾಗಿ  ಕೊಳವೆ ಬಾವಿಯಿಂದ ಮೇಲಕ್ಕೆ  ಎತ್ತಲು ಹರಸಾಹಸ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೊಸದಾಗಿ  ಕೊರೆದಿದ್ದ, ಆದರೆ ನೀರು ಸಿಗದ ಕಾರಣ ಹಾಗೆಯೇ ಬಿಟ್ಟಿದ್ದ ಕೊಳವೆ ಬಾವಿಯೊಳಕ್ಕೆ ಆಡುತ್ತಾಡುತ್ತಾ ಹೋಗಿ ಬಿದ್ದ ಆರತಿ ಚಾವ್ಲಾ ಕೊಳವೆ ಬಾವಿಯ ತೂತಿನ ಒಳಗೇ ಮೃತಳಾದಳು. ಎರಡುದಿನ ಹಿಂದೆಯಷ್ಟೇ ಈ ಕೊಳವೆ ಬಾವಿಯನ್ನು ಕೊರೆಯಲಾಗಿದ್ದು,  ನೀರು ಸಿಗದ ಕಾರಣ ಮುಚ್ಚದೆ ಹಾಗೇ ಬಿಟ್ಟು ಬಿಡಲಾಗಿತ್ತು.

2006: ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸ್ಟೀವ್ ಹರ್ಮಿಸನ್ ಅವರನ್ನು ಎಲ್. ಬಿ. ಡಬ್ಲ್ಯೂ ಬಲೆಗೆ ಕೆಡವಿ 500ನೇ ವಿಕೆಟ್ ಪಡೆದ ಕರ್ನಾಟಕದ ಕುವರ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಅತ್ಯಂತ ವೇಗವಾಗಿ 500 ವಿಕೆಟ್ ಗಡಿ ದಾಟಿದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಯೂ ಕುಂಬ್ಳೆ ಮುಡಿಗೇರಿತು.

2006: ಭಾರತೀಯ ಮಹಿಳಾ ಉದ್ಯಮಿಗಳ ಪೈಕಿ ಮುಂಚೂಣಿಯಲ್ಲಿರುವ ಬಯೋಕಾನ್ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಷಾ ಅವರು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಯುರೋಪ್ ಹೊರತು ಪಡಿಸಿ ವಿಶ್ವದ ಅತ್ಯಂತ ಪ್ರಭಾವಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ನಿಯತಕಾಲಿಕ ನೇಚರ್ ಬಯೋಟೆಕ್ನಾಲಜಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಹೊರಹೊಮ್ಮಿತು.

2006: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಬಿ)ನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಕಾನ್ಪುರದ ಗೌರವ್ ಅಗರ್ ವಾಲ್ ಅತ್ಯಂತ ಅಧಿಕ ಸಂಬಳದ (ವಾಷರ್ಿಕ 81 ಲಕ್ಷ ರೂಪಾಯಿ) ಹುದ್ದೆಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು. ಇವರ ಮಾಸಿಕ ಆದಾಯ 7.23 ಲಕ್ಷ ರೂಪಾಯಿ ಆಗುತ್ತದೆ. ದೇಶದ ಯಾವುದೇ ಐಐಎಂಬಿ ವಿದ್ಯಾರ್ಥಿ ಇಷ್ಟೊಂದು ಮೊತ್ತದ ಸಂಬಳಕ್ಕೆ ಈವರೆಗೆ ಆಯ್ಕೆ ಆಗಿರಲಿಲ್ಲ. 

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ ಭಜನ್ ಸಿಂಗ್ ಪಾತ್ರರಾದರು. ಎರಡನೇ ಟೆಸ್ಟ್ ಪಂದ್ಯದ ತನ್ನ 16ನೇ ಓವರಿನಲ್ಲಿ 2,3 ಮತ್ತು 4ನೇ ಚೆಂಡುಗಳಿಗೆ (ಬಾಲ್ ಗಳಿಗೆ ಅವರು ಸತತವಾಗಿ ಮೂರು ವಿಕೆಟುಗಳನ್ನು   ಉರುಳಿಸಿದರು.

 2001: ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪರಾಭವಗೊಳಿಸುವ ಮೂಲಕ `ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್' ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪುಲ್ಲೇಲ ಗೋಪಿಚಂದ್ ಪಾತ್ರರಾದರು.

1970: ಅಮೆರಿಕಾದ ಅಪರಾಧ ಬರಹಗಾರ ಹಾಗೂ `ಪೆರಿ ಮೇಸನ್' ಪಾತ್ರದ ಸೃಷ್ಟಿಕರ್ತ ಅರ್ಲ್ ಸ್ಟಾನ್ಲೆ ಗಾರ್ಡನರ್ ಅವರು ಕ್ಯಾಲಿಫೋರ್ನಿಯಾದ ಟೆಮೆಕ್ಯೂಲಾದಲ್ಲಿ ತಮ್ಮ 80ನೇ ವಯಸಿನಲ್ಲಿ ಮೃತರಾದರು.

1982: ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಮುಂಬೈ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದ ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಮ ಭಟ್ ಅವರು ರಣಜಿ ಟ್ರೋಪಿ ಕ್ರಿಕೆಟಿನಲ್ಲಿ  ಹ್ಯಾಟ್ರಿಕ್ ಪಡೆದ ಮೊದಲ ಕರ್ನಾಟಕದ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.

1918: ಅಮೆರಿಕಾದಲ್ಲಿ ಸ್ಪಾನಿಶ್ ಇನ್ ಫ್ಲುಯೆಂಜಾ ರೋಗದ ಮೊದಲ ಪ್ರಕರಣಗಳು ದಾಖಲಾದವು.  ಜ್ವರ, ಗಂಟಲು ಕೆರೆತ ಮತ್ತು ತಲೆನೋವಿನ ದೂರಿನೊಂದಿಗೆ ಯುವಕನೊಬ್ಬ  ಸೇನಾ ಆಸ್ಪತ್ರೆಗೆ ದಾಖಲಾದಾಗ ಇದು ಬೆಳಕಿಗೆ ಬಂತು. ಮಧ್ಯಾಹ್ನದ ವೇಳೆಗೆ ಇದೇ ದೂರಿನೊಂದಿಗೆ 100 ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾದವು. ಒಂದು ವಾರದಲ್ಲಿ ಈ ಸಂಖ್ಯೆ 500ಕ್ಕೆ ಏರಿತು . ಫೋರ್ಟ್ ರೀಲಿಯಲ್ಲಿ 48 ಸೈನಿಕರು ಮೃತರಾದರು. ಸಾವಿಗೆ ಇನ್ಫ್ಲುಯೆಂಜಾ ಕಾರಣ ಎಂಬುದು ಪತ್ತೆಯಾಯಿತು. ಹೇಗೆ ನಿಗೂಢವಾಗಿ ಬಂತೋ ಅಷ್ಟೇ ನಿಗೂಢವಾಗಿ ಕಣ್ಮರೆಯಾದ ಈ ರೋಗ 6 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುವ ಮೂಲಕ ಅಮೆರಿಕಾದ ಇತಿಹಾಸದಲ್ಲೇ ಅತ್ಯಂತ ಭೀಕರ ರೋಗ ಎನಿಸಿಕೊಂಡಿತು. 

1916: ಹರೋಲ್ಡ್ ವಿಲ್ಸನ್ (1916-1995) ಹುಟ್ಟಿದ ದಿನ. ಲೇಬರ್ ಪಾರ್ಟಿಯ ರಾಜಕಾರಣಿಯಾದ ಇವರು ಎರಡು ಬಾರಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದರು.

1915: ಭಾರತೀಯ ಟೆಸ್ಟ್ ಕ್ರಿಕೆಟಿನ ಮಾಜಿ ಕ್ಯಾಪ್ಟನ್ ವಿಜಯ್ ಹಜಾರೆ ಹುಟ್ಟಿದರು.

1886: ಪೆನ್ಸಿಲ್ವೇನಿಯಾದ ವುಮನ್ಸ್ ಮೆಡಿಕಲ್ ಕಾಲೇಜಿನಿಂದ ಪದವೀಧರೆಯಾಗುವ ಮೂಲಕ ಆನಂದಿಬಾಯಿ ಜೋಶಿ ವೈದ್ಯಳೆನಿಸಿದ ಭಾರತದ ಮೊದಲ ಮಹಿಳೆಯಾದರು.

1811: ಅರ್ಬೈನ್ ಜೀನ್ ಜೋಸೆಫ್ ಲೆ ವೆರಿಯರ್ (1811-1877) ಹುಟ್ಟಿದ ದಿನ. ಫ್ರೆಂಚ್ ಖಗೋಳ ತಜ್ಞನಾದ ಈತ ಗಣಿತ ಲೆಕ್ಕಾಚಾರದ ಮೂಲಕ ನೆಪ್ಚೂನ್ ಗ್ರಹ ಇರುವ ಕುರಿತು ಭವಿಷ್ಯ ನುಡಿದ.

1770: ವಿಲಿಯಂ ಹಸ್ ಕಿಸ್ಸನ್ (1770-1830) ಹುಟ್ಟಿದ ದಿನ. ಈತ ರೈಲ್ವೆ ಅಪಘಾತದಲ್ಲಿ ಮೃತನಾದ ಮೊದಲ ಬ್ರಿಟಿಷ್ ರಾಜಕಾರಣಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement