Friday, March 13, 2009

ಇಂದಿನ ಇತಿಹಾಸ History Today ಮಾರ್ಚ್ 13

ಇಂದಿನ ಇತಿಹಾಸ 

ಮಾರ್ಚ್ 13

ಭಾರತೀಯ ಮಹಿಳೆಯರ ಸಬಲೀಕರಣ ಹಾಗೂ ಅವರನ್ನು ರಾಜಕೀಯದಲ್ಲಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಪ್ರಯತ್ನಿಸ್ದಿದಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಅವರು ಅಮೆರಿಕದ ಪ್ರತಿಷ್ಠಿತ `ವೈಟಲ್ ವಾಯ್ಸಸ್' ಪ್ರಶಸ್ತಿಗೆ ಭಾಜನರಾದರು.

2008: ಸುಳ್ಳು ಮೊಕದ್ದಮೆಯೊಂದರ ಕುರಿತು ನ್ಯಾಯಾಲಯಕ್ಕೆ `ಬಿ' ವರದಿ ಸಲ್ಲಿಸಲು ಫಾರೂಕ್ ಎಂಬ ಗಣಿ ಉದ್ಯಮಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಶ್ರೀಕಂಠಪ್ಪ  ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ರಾಜ್ಯ ಪೊಲೀಸ್ ಸೇವೆಯಲ್ಲಿದ್ದ ಶ್ರೀಕಂಠಪ್ಪ ಕೆಲವು ವರ್ಷಗಳ ಹಿಂದೆ ಐ ಪಿ ಎಸ್ ಗೆ ಪದೋನ್ನತಿ ಹೊಂದಿದ್ದರು. ಲೋಕಾಯುಕ್ತ ಇತಿಹಾಸದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ `ಖೆಡ್ಡಾ'ಕ್ಕೆ ಬಿದ್ದದ್ದು ಇದೇ ಮೊದಲು. ಲಂಚ ಪಡೆದು ಸಿಕ್ಕಿ ಬಿದ್ದ ಎರಡನೇ ಐಪಿಎಸ್ ಅಧಿಕಾರಿ ಎಂಬ ಅಪಕೀರ್ತಿಯೂ ಅವರಿಗೆ ಸಂದಿತು. 1980ರ ದಶಕದ ಕೊನೆಯಲ್ಲಿ ಹಾವೇರಿಯ ಹೆಚ್ಚುವರಿ ಎಸ್ ಪಿ ಯಾಗಿದ್ದ ಪದಮ್ ಕುಮಾರ್ ಗರ್ಗ್ ಲಂಚ ಸ್ವೀಕರಿಸಿ ಬಂಧನಕ್ಕೆ ಒಳಗಾಗಿದ್ದರು. ಶ್ರೀಕಂಠಪ್ಪ ಅವರು ಪ್ರಸಕ್ತ ವರ್ಷದ 73ದಿನಗಳಲ್ಲಿ ಲಂಚ ಸ್ವೀಕರಿಸಿ ಬಂಧಿತರಾದ 74ನೇ ಅಧಿಕಾರಿ.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕವು ದಿನದ ಅಂತ್ಯಕ್ಕೆ 15,357 ಅಂಶಗಳಿಗೆ ಇಳಿಯಿತು. ಷೇರುಪೇಟೆ ಇತಿಹಾಸದಲ್ಲಿ ಇದು ಆರನೆ ಅತಿ ದೊಡ್ಡ ಕುಸಿತವಾಗಿದ್ದು, 2007ರ ಆಗಸ್ಟ್ 31ರ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವೂ (ಎನ್ ಎಸ್ ಇ) ಆರು ತಿಂಗಳ ಹಿಂದಿನ ಮಟ್ಟಕ್ಕೆ (4624 ಅಂಶಗಳಿಗೆ) ಇಳಿಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಲಿಗೆ 110 ಡಾಲರಿನಷ್ಟು ಆಗಿರುವುದು ಷೇರುಪೇಟೆಯ ದಾಖಲೆ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟರು. ಇದೇ ವೇಳೆಗೆ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನವು ಪ್ರತಿ 10 ಗ್ರಾಮುಗಳಿಗೆ ರೂ 240ರಷ್ಟು ಏರಿಕೆ ಕಂಡರೆ, ಬೆಳ್ಳಿ ಬೆಲೆ ತಲಾ ಕೆಜಿಗೆ ರೂ 480ರಷ್ಟು ಹೆಚ್ಚಿತು. ಚಿನ್ನವು ತಲಾ ಹತ್ತು ಗ್ರಾಮುಗಳಿಗೆ ರೂ 13,025ರಷ್ಟಾಗಿ ಹೊಸ ದಾಖಲೆ ಬರೆಯಿತು.

2008: ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಪ್ರೇರಿತವಾದ ಇಸ್ರೇಲಿನ ಯುವ ಜೋಡಿಯೊಂದು ಗಂಗಾವತಿ ತಾಲ್ಲೂಕಿನ ಸಣಾಪುರದಲ್ಲಿ ವೇದ ಮಂತ್ರಗಳೊಂದಿಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.  ಇಸ್ರೇಲ್ ದೇಶದ ಓಮರ್ ಕ್ಲಿಫ್ ಮತ್ತು ಮೇರಮ್ ಜೋಡಿ ಗೌರಿ ರೆಸ್ಟೋರೆಂಟಿನಲ್ಲಿ ವೈದಿಕ ಸಂಪ್ರದಾಯದಂತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಇವರ ವಿದೇಶಿ ಸ್ನೇಹಿತರು, ಪ್ರವಾಸಿಗರು ಭಾರತೀಯ ಶೈಲಿಯ ಈ ವಿವಾಹವನ್ನು ಕಣ್ಣಾರೆ ಕಂಡು ಖುಷಿಪಟ್ಟರು. 

2008: ಪ್ರಸ್ತುತ ಸಾಲಿನ ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯು ಹಿರಿಯ ವಿಮರ್ಶಕ, ಕವಿ, ಕಥೆಗಾರ ಹಾಗೂ ಪ್ರಬಂಧಕಾರ ಡಾ. ಗಿರಡ್ಡಿ ಗೋವಿಂದರಾಜ ಅವರ ಲಲಿತ ಪ್ರಬಂಧ `ಹಿಡಿಯದ ಹಾದಿ' ಕೃತಿಗೆ ದೊರೆಯಿತು. ಗದಗ ಜಿಲ್ಲೆಯ ಅಬ್ಬಿಗೇರಿಯವರಾದ ಡಾ. ಗಿರಡ್ಡಿಯವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. 1996-99ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ತಮ್ಮ ಸಾಹಿತ್ಯ ಕೃಷಿಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ (1972), ಮೈಸೂರು ವಿ.ವಿ. ಸುವರ್ಣ ಮಹೋತ್ಸವ ಬಹುಮಾನ (1972), ರಾಜ್ಯ ಅಕಾಡೆಮಿ ಗೌರವ ಪ್ರಶಸ್ತಿ (1992) ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.  ಡಾ. ಎಂ. ಜಿ. ಹೆಗಡೆ, ಡಾ. ಆರ್. ವಿ. ಭಂಡಾರಿ, ಪ್ರೊ. ಎಂ. ರಮೇಶ ಹಾಗೂ ರಾಜಶೇಖರ ಹೆಬ್ಬಾರ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ. ಗಿರಡ್ಡಿಯವರ `ಹಿಡಿಯದ ಹಾದಿ' ಕೃತಿಯನ್ನು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: ಸ್ತನ ಕ್ಯಾನ್ಸರನ್ನು ನಿಯಂತ್ರಿಸುವ ವಂಶವಾಹಿಯನ್ನು ಕಂಡುಹಿಡಿದಿರುವುದಾಗಿ ಅಮೆರಿಕ ವಿಜ್ಞಾನಿಗಳು ಪ್ರಕಟಿಸಿದರು. ಎಸ್ ಎ ಟಿ ಬಿ  1 ಹೆಸರಿನ ವಂಶವಾಹಿಯು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಲ್ಲುದು ಎಂದು ಕ್ಯಾಲಿಫೋರ್ನಿಯಾದ ಲಾರೆನ್ಸ್ ಬರ್ಕೆಲಿ ರಾಷ್ಟ್ರೀಯ ಪ್ರಯೋಗಾಲಯದ ಡಾ. ತೆರುಮಿ ಕೊಹ್ವಿ-ಶಿಗೆ ಮತ್ಸು ಪ್ರಕಟಿಸಿದರು.

2008:  ದೇಶದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಆರಂಭಗೊಂಡ ಮೇಲೆ ಈಗಿರುವ ವಿಮಾನನಿಲ್ದಾಣಗಳನ್ನು ಮುಚ್ಚುವುದಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ವಿಮಾನನಿಲ್ದಾಣ ಪ್ರಾಧಿಕಾರ ನೌಕರರ ಅಸಹಕಾರ ಮುಷ್ಕರ ಈದಿನ ಸಂಜೆ ಕೊನೆಗೊಂಡಿತು.

2008: ದೇಶದಲ್ಲಿ ವಿಶೇಷ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ರೈಲ್ವೆ ಇಲಾಖೆಗೆ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ 2008ಕ್ಕೆ ಸಂಸತ್ತು ತನ್ನ ಸಮ್ಮತಿ ಸೂಚಿಸಿತು. ಮಸೂದೆಯನ್ನು ಲೋಕಸಭೆ ಈ ಮೊದಲೇ ಅಂಗೀಕರಿಸಿತ್ತು. ರಾಜ್ಯಸಭೆ ಈದಿನ ಅದನ್ನು ಧ್ವನಿಮತದಿಂದ ಅಂಗೀಕರಿಸಿತು. 

2008: ಗೊಂದಲದ ಗೂಡಾದ ಬೆಂಗಳೂರಿನ ವೈದ್ಯ ಮೊಹಮ್ಮದ್ ಹನೀಫ್ ಪ್ರಕರಣ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲು ಆಸ್ಟ್ರೇಲಿಯಾ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತು. ನ್ಯೂ ಸೌಥ್ ವೇಲ್ಸ್ ರಾಜ್ಯದ ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಜಾನ್ ಕ್ಲರ್ಕ್ ಕ್ಯೂ.ಸಿ. ಅವರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿತು. 

2007: ಪಾಕ್ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ಕಿತ್ತು ಹಾಕಲ್ಪಟ್ಟ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರು ವಿಚಾರಣೆ ಎದುರಿಸುವ ಸಲುವಾಗಿ ಸುಪ್ರೀಂ ನ್ಯಾಯಾಂಗಮಂಡಳಿಯ ಎದುರು ಹಾಜರಾದರು.

2007: ಭಾರತೀಯ ಮಹಿಳೆಯರ ಸಬಲೀಕರಣ ಹಾಗೂ ಅವರನ್ನು ರಾಜಕೀಯದಲ್ಲಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಪ್ರಯತ್ನಿಸ್ದಿದಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಅವರು ಅಮೆರಿಕದ ಪ್ರತಿಷ್ಠಿತ `ವೈಟಲ್ ವಾಯ್ಸಸ್' ಪ್ರಶಸ್ತಿಗೆ ಭಾಜನರಾದರು.

2006: ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೆಟ್ರೋಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ರಂಗೋಲಿಯನ್ನು ಹೋಲುವ ಲಾಂಛನವನ್ನು ರೂಪಿಸಲಾಗಿದ್ದು ರಾಜ್ಯಪಾಲ ಟಿ.ಎನ್. ಚತುರ್ವೇದಿ ರಾಜಭವನದಲ್ಲಿ ನಮ್ಮ ಮೆಟ್ರೊ ಹೆಸರಿನ ಜೊತೆಗಿರುವ ಈ ಲಾಂಛನವನ್ನು ಬಿಡುಗಡೆ ಮಾಡಿದರು. ಸಾರ್ವಜನಿಕ ಸ್ಪರ್ಧೆ ಮೂಲಕ ಇದನ್ನು ಆಯ್ಕೆ ಮಾಡಲಾಗಿದೆ. ಜಯಂತ್ ಜೈನ್ ಮತ್ತು ಮಹೇಂದ್ರ ಜೈನ್ ಎಂಬ ಯುವಜೋಡಿ ಈ ಸಾಂಕೇತಿಕ ಲಾಂಛನವನ್ನು ರೂಪಿಸಿದವರು.

2006: ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಅಮಾಯಕರ ಸಾವಿಗೆ ಕಾರಣವಾಗುವ ಭಯೋತ್ಪಾದಕರ ಕೃತ್ಯದ ವಿರುದ್ಧ 400 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಇಸ್ಲಾಂ ಧಾರ್ಮಿಕ ಸಂಸ್ಥೆ ದರುಲ್- ಇಫ್ತಾ- ಫಿರಂಗಿ ಮಹಲ್ ಫತ್ವಾ ಹೊರಡಿಸಿತು.

2006: ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ 2006-09ರ ಸಾಲಿಗೆ ವಿಜಾಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವಿರೋಧ ಆಯ್ಕೆಯಾದರು.

2006: ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಗೊಳಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ಪೊಲೀಸರು ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಈ ಆರೋಪಿಗಳನ್ನು ಖುಲಾಸೆಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್. ಎಲ್. ಭಯಾನ ಅವರ ತೀರ್ಪು, ವಿಚಾರಣಾ ನ್ಯಾಯಾಲಯದಲ್ಲಿ ಆಗಿರುವ ಗಂಭೀರ ಪ್ರಮಾದ, ಫಿರ್ಯಾದುದಾರರು ಸಂಗ್ರಹಿಸಿರುವ ಸನ್ನಿವೇಶದ ಸಾಕ್ಷ್ಯಗಳನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಯಿತು. 1999ರಲ್ಲಿ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾದ ಹರಿಯಾಣದ ಮಾಜಿ ಸಚಿವರೊಬ್ಬರ ಪುತ್ರ ಮನು ಶರ್ಮ, ಮಾಜಿ ರಾಜ್ಯಸಭಾ ಸದಸ್ಯ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಇತರ ಏಳು ಮಂದಿಯನ್ನು ಇತ್ತೀಚೆಗೆ ಪಾಟಿಯಾಲ ನ್ಯಾಯಾಲಯ ಆರೋಪಮುಕ್ತಿಗೊಳಿಸಿತ್ತು.

1986: ಮೈಕ್ರೋಸಾಫ್ಟ್ ಕಂಪೆನಿಯ ಸ್ಟಾಕ್ ಟ್ರೇಡಿಂಗ್ ಆರಂಭವಾಯಿತು. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಬಿಲ್ ಗೇಟ್ಸ್ ಕೋಟ್ಯಧೀಶರಾಗಿ, ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಆಗಬೇಕೆಂಬ ಆಶಯವನ್ನು ಈಡೇರಿಸಿಕೊಂಡರು.

1964: ನ್ಯೂಯಾರ್ಕ್ ನಗರದಲ್ಲಿ ಇಪ್ಪತ್ತೆಂಟು ವರ್ಷದ ಕಿಟ್ಟಿ ಜೆನೋವೆಸ್ ಇರಿತಕ್ಕೆ ಒಳಗಾಗಿ ಸಾಯುತ್ತಿದ್ದಾಗ ಅಲ್ಲಿಯೇ ಇದ್ದ ನೆರೆಹೊರೆಯ 37 ಮಂದಿ ನಿವಾಸಿಗಳು ಯಾವುದೇ ರೀತಿ ಪ್ರತಿಕ್ರಿಯಿಸಲು ವಿಫಲರಾದರು. ವಿನ್ ಸ್ಟನ್ ಮೋಸ್ಲೆ ಎಂಬ ಕೊಲೆಗಾರ ಆಕೆಯನ್ನು ಮೂರು ಕಡೆಗಳಲ್ಲಿ ಇರಿದು ಕೊಂದು ಹಾಕಿದ. ಕನಿಷ್ಠ 37 ಮಂದಿ ಈ ಭೀಕರ ಕೃತ್ಯವನ್ನು ನೋಡುತ್ತಲೇ ಇದ್ದರು. ಆದರೆ ಪ್ರತಿಕ್ರಿಯಿಸಲು ವಿಫಲರಾದರು ಎಂದು ಪೊಲೀಸ್ ತನಿಖೆಯಿಂದ ದಿಟವಾಯಿತು. ಈ ಪ್ರತ್ಯಕ್ಷ ಸಾಕ್ಷಿಗಳು ಪ್ರದರ್ಶಿಸಿದ `ನನಗೇಕೆ ಉಸಾಬರಿ' ಎಂಬ ಈ ವರ್ತನೆ `ಕಿಟ್ಟಿ ಜೆನೋವೆಸ್ ಸಿಂಡ್ರೋಮ್' ಎಂದೇ ಹೆಸರು ಪಡೆಯಿತು. 

1943: ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ  ದುಡಿದ ಆರ್. ನಾಗೇಶ್ ಅವರು ರಾಮರಾಜ ಅರಸು- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು.

1940: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಕಾಲದ್ಲಲಿ ಪಂಜಾಬ್ ಗವರ್ನರ್ ಜನರಲ್ ಆಗ್ದಿದ ಮೈಕೆಲ್ ಒ'ಡಾಯರ್ನನ್ನು ಇಂಗ್ಲೆಂಡಿನ ಕಾಕ್ಸ್ ಟನ್ ಹಾಲ್ನಲ್ಲಿ ಗುಂಡಿಟ್ಟು ಕೊಲೆಗೈದರು. ಲಂಡನ್ನಿನಲ್ಲಿ ಜೂನ್ 13ರಂದು ಅವರನ್ನು ಗಲ್ಲಿಗೇರಿಸಲಾಯಿತು. 1974ರ ಜುಲೈ 9ರಂದು ಊಧಮ್ ಸಿಂಗ್ ಚಿತಾಭಸ್ಮವನ್ನು ನವದೆಹಲಿಗೆ ತರಲಾಯಿತು.

1878: ಪ್ರಾದೇಶಿಕ ಪತ್ರಿಕೆಗಳನ್ನು ನಿಯಂತ್ರಿಸಲು ಭಾಷಾವಾರು ಪತ್ರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು.  ಮರುದಿನವೇ `ಅಮೃತ ಬಜಾರ್ ಪತ್ರಿಕಾ' ಇಂಗ್ಲಿಷ್ ಸುದ್ದಿ ಪತ್ರಿಕೆಯಾಯಿತು. 

1855: ಪರ್ಸೀವಲ್ ಲೋವೆಲ್ (1855-1916) ಹುಟ್ಟಿದ. ಅಮೆರಿಕನ್ ಖಗೋಳ ತಜ್ಞನಾದ ಈತ ಪ್ಲೂಟೋ ಗ್ರಹದ ಅಸ್ತಿತ್ವ ಬಗ್ಗೆ ಭವಿಷ್ಯ ನುಡಿದು ಅದಕ್ಕಾಗಿ ಶೋಧ ಆರಂಭಿಸಿ ಕೊನೆಗೆ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ.

1852: `ನ್ಯೂಯಾರ್ಕ್ ಲ್ಯಾಂಟರ್ನ್' ನಲ್ಲಿ ಕಾರ್ಟೂನ್ ಪಾತ್ರವಾಗಿ `ಅಂಕಲ್ ಸ್ಯಾಮ್' ಚೊಚ್ಚಲ ಹೆಜ್ಜೆ ಇರಿಸಿದ.

1781: ಸರ್ ವಿಲಿಯಂ ಹರ್ಷೆಲ್ `ಯುರೇನಸ್' ಗ್ರಹವನ್ನು ಕಂಡು ಹಿಡಿದ. ಮೂರನೇ ಜಾರ್ಜ್ ಗೌರವಾರ್ಥ ಈ ಗ್ರಹಕ್ಕೆ ಆತ `ಜಾರ್ಜಿಯಂ ಸಿಡಸ್' ಎಂಬುದಾಗಿ ಹೆಸರು ಇಟ್ಟ.

1733: ಜೋಸೆಫ್ ಪ್ರೀಸ್ಟ್ ಲೀ ಹುಟ್ಟಿದ. ಇಂಗ್ಲಿಷ್ ಪಾದ್ರಿ, ಭೌತವಿಜ್ಞಾನಿಯಾದ ಈತ ಆಮ್ಲಜನಕದ ಸಂಶೋಧನೆಯಿಂದ ಖ್ಯಾತಿ ಪಡೆದ.

1639: ಹಾರ್ವರ್ಡ್ ಯುನಿವರ್ಸಿಟಿಗೆ ಪಾದ್ರಿ ಜಾನ್ ಹಾರ್ವರ್ಡ್ ಹೆಸರನ್ನು ಇಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement