ಇಂದಿನ ಇತಿಹಾಸ
ಮಾರ್ಚ್ 15
ವಿ.ವಿ.ಎಸ್. ಲಕ್ಷ್ಮಣ್ ಅವರು ತಮ್ಮ 281ನೇ ರನ್ ಗಳಿಸಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.
ಇಂದು ವಿಶ್ವ ಬಳಕೆದಾರರ ದಿನ
2009: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತ ಶಿಫಾರಸು ಮಾಡಿದ್ದು ಬೆಳಕಿಗೆ ಬಂತು. ಚುನಾಯಿತ ಸರ್ಕಾರ ಇಲ್ಲದಾಗ ಐಎಎಸ್ ಅಧಿಕಾರಿಗಳು ಈ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ ಅವರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಜನತೆಗೆ ದ್ರೋಹ ಎಸಗಿದ್ದು, ರಾಜ್ಯಪಾಲರು ಕೂಡಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವರನ್ನು ಜನರೇ ನೇರವಾಗಿ ಆಯ್ಕೆ ಮಾಡಬೇಕು ಹಾಗೂ ಅವರ ಅಧಿಕಾರಾವಧಿ ಐದು ವರ್ಷ ಇರಬೇಕು ಎಂದು ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿ ಶಿಫಾರಸು ಮಾಡಿತು. ಬೆಂಗಳೂರು ಮಹಾನಗರದ ವಲಯ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಡಳಿತ ಸುಧಾರಣೆಯ ಉದ್ದೇಶದಿಂದ ರಚಿಸಿದ್ದ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಈ ಸಮಿತಿ ರಾಜ್ಯಪಾಲರಿಗೆ ತನ್ನ ವರದಿ ಸಲ್ಲಿಸಿತು.
2008: ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಹಿರಿಯ ನೇತಾರ ಹು ಜಿಂಟಾವೊ ಚೀನಾದ ಅಧ್ಯಕ್ಷರಾಗಿ 2ನೇ ಅವಧಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝಿ ಜಿಂಗ್ ಪಿಂಗ್ ಚುನಾಯಿತರಾದರು. ಚೀನಾದ ಸಂಸತ್ತು ರಾಷ್ಟ್ರೀಯ ಪ್ರಜಾ ಕಾಂಗ್ರೆಸ್ಸಿನಲ್ಲಿ (ಎನ್ ಪಿ ಸಿ) ಹು ಜಿಂಟಾವೊ ಅವರ ಆಯ್ಕೆಯನ್ನು ಸಂಭ್ರಮದಿಂದ ಘೋಷಿಸಲಾಯಿತು.
2008: ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್- ಏಮ್ಸ್) ದಾಖಲಾದ ಸನ್ಯಾಸಿಯೊಬ್ಬರು ತನ್ನ ವಯಸ್ಸು 130 ವರ್ಷ ಎಂದು ಹೇಳಿ, ಆಸ್ಪತ್ರೆಯ ವೈದ್ಯರನ್ನು ಫಜೀತಿಗೆ ತಳ್ಳಿದರು. ಮೂತ್ರಕೋಶದಲ್ಲಿ ಬೆಳೆದ ದುರ್ಮಾಂಸವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಉತ್ತರ ಪ್ರದೇಶದ ಶಹಜಾನಪುರ ಸಮೀಪದ ಬೆಹ್ತಾ ಅರಣ್ಯ ಪ್ರದೇಶದಿಂದ ಬಂದ ಸಂತ ಸ್ವಾಮಿ ರಮಾನಂದ ಅವರು ತನ್ನ ವಯಸ್ಸು 130 ವರ್ಷಗಳು ಎಂದು ವೈದ್ಯರಿಗೆ ತಿಳಿಸಿದರು. 'ಅವರ ವಯಸ್ಸು 100ಕ್ಕಿಂತ ಹೆಚ್ಚಾಗಿರುವುದು ಮಾತ್ರ ಹೌದು. ಆದರೆ 130 ವರ್ಷ ಆಗಿರಬಹುದೇ ಇಲ್ಲವೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ' ಎಂದು ಏಮ್ಸ್ ನ ಮೂತ್ರಕೋಶ ವಿಭಾಗದ ಮುಖ್ಯಸ್ಥ ಡಾ. ಎನ್. ಪಿ. ಗುಪ್ತ ಹೇಳಿದರು. ರಮಾನಂದ ಅವರ ವಯಸ್ಸು 100 ವರ್ಷಗಳಿಗಿಂತ ಹೆಚ್ಚಾಗಿದ್ದರೂ ಏಮ್ಸ್ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ದಾಖಲೆಯೊಂದನ್ನು ನಿರ್ಮಿಸಿದಂತಾಗಿದ್ದು, 100 ವರ್ಷ ಮೀರಿದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಈ ಸಂಸೆಯಲ್ಲಿ ಇದೇ ಮೊದಲ ಸಲ ಎಂದು ಡಾ. ಗುಪ್ತ ಹೇಳಿದರು. 'ಅವರ ಮೂತ್ರಕೋಶದಲ್ಲಿ ದುರ್ಮಾಂಸ ಬೆಳೆದಿತ್ತು. ಅದನ್ನು ಯಾವುದೇ ಗಾಯವೂ ಇಲ್ಲದಂತೆ ತೆಗೆದುಹಾಕಲಾಯಿತು' ಎಂದು ಡಾ. ಗುಪ್ತ ಹೇಳಿದರು. ಪ್ರಸ್ತುತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ದಾಖಲೆಯ ಪ್ರಕಾರ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 122 ವರ್ಷಗಳ ಒಬ್ಬ ಫ್ರೆಂಚ್ ಮಹಿಳೆ.
2008: ಕೇಂದ್ರ ಮುಂಬೈಯ ಸಿಯೋನ್ ನಿಲ್ದಾಣದಲ್ಲಿ ನಿಂತಿದ್ದ ಹೊರವಲಯ ರೈಲುಗಾಡಿಯೊಂದರಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿ ಐವರು ಗಾಯಗೊಂಡರು. ರೈಲುಗಾಡಿಯ ಪ್ರಯಾಣಿಕರೊಬ್ಬರ ಬಳಿ ಇದ್ದ ಅನಿಲ ಬಾಟಲಿ ಅನಿರೀಕ್ಷಿತವಾಗಿ ಸ್ಫೋಟಗೊಂಡು ಈ ದುರಂತ ಸಂಭವಿಸಿತು.
2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಬೌದ್ಧ ಭಿಕ್ಷುಗಳ ಪ್ರದರ್ಶನದ ಮೇಲೆ ನಡೆದ `ಹಿಂಸಾತ್ಮಕ ದಮನ'ವನ್ನು ಪ್ರತಿಭಟಿಸಿ ರಾಜಧಾನಿಯಲ್ಲಿ ಚೀನೀ ರಾಯಭಾರ ಕಚೇರಿ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು 50 ಮಂದಿ ಟಿಬೆಟಿಯನ್ನರನ್ನು ಬಂಧಿಲಾಯಿತು. ಹಿಂದಿನ ದಿನ ಲ್ಹಾಸಾದಲ್ಲಿ ಸಂಭವಿಸಿದ ಚೀನಾ ವಿರೋಧಿ ಪ್ರತಿಭಟನೆ ಕಾಲದಲ್ಲಿ 10 ಮಂದಿ ಮೃತರಾದರು ಎಂದು ಚೀನಾ ತಿಳಿಸಿತು. ಈ ಮಧ್ಯೆ ಟಿಬೆಟನ್ನರು ಮತ್ತು ಅವರ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಚೀನಾ ಸರ್ಕಾರದ ನಡುವಣ ಹಿಂಸಾತ್ಮಕ ಸಂಘರ್ಷದಲ್ಲಿ ಕನಿಷ್ಠ 100 ಟಿಬೆಟನ್ನರು ಸಾವನ್ನಪ್ಪಿ, ನೂರಾರು ಟಿಬೆಟ್ ನಾಗರಿಕರು ತೀವ್ರವಾಗಿ ಗಾಯಗೊಂಡರು ಎಂದು ಅನಧಿಕೃತ ವರದಿಗಳು ಹೇಳಿದವು.
2008: ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಮಾಡಿದರು.
2008: ರಾಜ್ಯ ಲಲಿತಕಲಾ ಅಕಾಡೆಮಿಯ ಧೋರಣೆಯನ್ನು ಖಂಡಿಸಿ ಉಡುಪಿಯ ಹಿರಿಯ ಕಲಾವಿದ ರಮೇಶರಾವ್ ಅವರು ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿಯನ್ನು ತಿರಸ್ಕರಿಸಲು ನಿರ್ಧರಿಸಿದರು. ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಲಲಿತಕಲಾ ಆಕಾಡೆಮಿಯು ರಾಜ್ಯದ 28 ಕಲಾವಿದರನ್ನು ಗುರುತಿಸಿ ವಿಶೇಷ ಪುರಸ್ಕಾರ ನೀಡಲು ನಿರ್ಧರಿಸಿತ್ತು. ಆದರೆ ಈ ತನಕ ಪುರಸ್ಕಾರ ನೀಡದೇ ಇರುವುದು ಹಾಗೂ ಪ್ರಸ್ತುತ ಒತ್ತಡದ ಹಿನ್ನೆಲೆಯಲ್ಲಿ 55 ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ತಾವು ಈ ನಿರ್ಧಾರಕ್ಕೆ ಬಂದುದಾಗಿ ರಮೇಶ ರಾವ್ ತಿಳಿಸಿದರು.
2007: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯ ರಾಣಿಬೊದ್ಲಿಯಲ್ಲಿನ ಪೊಲೀಸ್ ಚೌಕಿ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಗ್ರೆನೇಡ್ ಹಾಗೂ ಪೆಟ್ರೋಲ್ ಬಾಂಬ್ ಎಸೆದು, ಮನಸೋ ಇಚ್ಛೆ ಗುಂಡು ಹಾರಿಸಿದ್ದರಿಂದ 55 ಮಂದಿ ಭದ್ರತಾ ಸಿಬ್ಬಂದಿ ಹತರಾದರು. ಸತ್ತವರಲ್ಲಿ ಛತ್ತೀಸ್ ಗಢ ವಿಶೇಷ ಸಶಸ್ತ್ರ ಪಡೆಯ 16 ಮಂದಿ ಹಾಗೂ 38 ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳೂ ಸೇರಿದ್ದರು. ಗಾಯಾಳುಗಳ ಪೈಕಿ 10 ಮಂದಿ ತೀವ್ರ ಸುಟ್ಟಗಾಯಗಳಿಗೆ ಒಳಗಾದರು.
2007: ರಾಷ್ಟ್ರೀಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಳಿ ಐತೀರ್ಪು ಜಾರಿಗೆ ಅಧಿಸೂಚನೆ ಹೊರಡಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸರ್ವಾನುಮತದ ನಿರ್ಣಯವನ್ನು ಕರ್ನಾಟಕ ವಿಧಾನಸಭೆ ಕೈಗೊಂಡಿತು. ಸುದೀರ್ಘ ಚರ್ಚೆಯ ಬಳಿಕ ಪ್ರತಿಪಕ್ಷದ ನಾಯಕ ಧರ್ಮಸಿಂಗ್ ಮಂಡಿಸಿದ ಈ ನಿರ್ಣಯಕ್ಕೆ ಸದನ ಒಕ್ಕೊರಲ ಅನುಮೋದನೆ ನೀಡಿತು.
2007: ಅಲ್ ಖೈದಾ ಸಂಘಟನೆಯ ಮೂರನೇ ನಂಬರ್ ನಾಯಕನ ಸ್ಥಾನದಲ್ಲಿರುವ ಖಲೀದ್ ಶೇಖ್ ಮೊಹಮ್ಮದ್, 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ನಿನಲ್ಲಿ ನಡೆದ ದಾಳಿಕೃತ್ಯಗಳ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡನು. ಪಾಕಿಸ್ಥಾನೀಯನಾದ ಶೇಕ್ ಮೊಹಮ್ಮದ್ ಗ್ವಾಂಟೆನಾಮೋದಲ್ಲಿ ರಹಸ್ಯ ಸೇನಾ ಟ್ರಿಬ್ಯೂನಲ್ ಮುಂದೆ ಈ ತಪ್ಪೊಪ್ಪಿಗೆ ನೀಡಿ, ಈ ಕೃತ್ಯಕ್ಕಾಗಿ ವಿಷಾದ ವ್ಯಕ್ತಪಡಿಸಿದ.
2007: ಮುಂಬೈಯಲ್ಲಿ ನಡೆದ ಮಾಮಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಚಿತ್ರವೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.
2007: ಬಹುಕೋಟಿ ಖೋಟಾ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಹೂಡಲಾಗಿದ್ದ ಮೊತ್ತ ಮೊದಲ ಪ್ರಕರಣದ ವಿಚಾರಣೆ ಪರಪ್ಪನ ಅಗ್ರಹಾರದ ವಿಶೇಷ ಸೆರೆಮನೆಯಲ್ಲಿ ಆರಂಭಗೊಂಡಿತು.
2007: ಬೆಂಗಳೂರಿನ ವೈದ್ಯ ಡಾ. ಬಿ. ರಮಣರಾವ್ ಅವರು ದೀರ್ಘಕಾಲದಿಂದ ಉಚಿತವಾಗಿ ಪ್ರತಿವಾರ ವೈದ್ಯಕೀಯ
ಶಿಬಿರಗಳನ್ನು ನಡೆಸಿದ್ದಕ್ಕಾಗಿ `ಲಿಮ್ಕಾ ದಾಖಲೆಗಳ ಪುಸ್ತಕ'ಕ್ಕೆ ಸೇರ್ಪಡೆಯಾದರು.
2006: ಹಳೆಯ ಮಲಯಾಳಂ, ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿದ್ದ ಜಿ. ದೇವರಾಜನ್ (78) ಚೆನ್ನೈಯಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳೊಂದಿಗೆ ಸುಮಾರು 350 ಮಲಯಾಳಂ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಅವರಿಗೆ ಐದು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.
2006: ಮೆಲ್ಬೋರ್ನಿನಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಸಂಭ್ರಮೋತ್ಸಾಹದ ಮಧ್ಯೆ ಉದ್ಘಾಟನೆಗೊಂಡಿತು.
2001: ವಿ.ವಿ.ಎಸ್. ಲಕ್ಷ್ಮಣ್ ಅವರು ತಮ್ಮ 281ನೇ ರನ್ ಗಳಿಸಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.
1999: ಢಾಕಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಒಂದು ಇನ್ನಿಂಗ್ಸ್ ಹಾಗೂ 175 ರನ್ನುಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಪಾಕಿಸ್ಥಾನವು ಉದ್ಘಾಟನಾ ಏಷ್ಯನ್ ಟೆಸ್ಟ್ ಚಾಂಪಿಯನ್ ಶಿಪ್ಪನ್ನು ಗೆದ್ದುಕೊಂಡಿತು.
1996: ಡಚ್ ಸರ್ಕಾರವು ಇನ್ನಷ್ಟು ಸಾಲ ಕೊಡಲು ನಿರಾಕರಿಸಿದ ಪರಿಣಾಮವಾಗಿ 77 ವರ್ಷಗಳ ಫಾಕ್ಕರ್ ವಿಮಾನಯಾನ ಕಂಪೆನಿಯು ದಿವಾಳಿ ಎದ್ದಿತು. ದಚ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ತರಬೇತಿ ಪಡೆದ 5000ಕ್ಕೂ ಹೆಚ್ಚು ನೌಕರರು ತಮ್ಮ ಕೆಲಸ ಕಳೆದುಕೊಂಡರು. ಫಾಕ್ಕರ್ ಕಂಪೆನಿಯ ವಿವಿಧ ಭಾಗಗಳನ್ನು ಹೊಸದಾಗಿ ನಿರ್ಮಿಸಲಾದ ಕಂಪೆನಿಯೊಂದಕ್ಕೆ ವರ್ಗಾಯಿಸಲಾಯಿತು.
1975: ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಪಾಕಿಸ್ಥಾನವನ್ನು 2-1 ಗೋಲುಗಳೊಂದಿಗೆ ಪರಾಭವಗೊಳಿಸುವ ಮೂಲಕ ಭಾರತದ ಹಾಕಿ ತಂಡ ತನ್ನ ಅಪರೂಪದ ಸಾಧನೆಗಳಲ್ಲಿ ಒಂದನ್ನು ದಾಖಲು ಮಾಡಿತು.
1965: ಕಲಾವಿದೆ ರಾದಿಕಾ ದಯಾನಂದ ಜನನ.
1964: ನಟಿ ಎಲಿಜಬೆತ್ ಟೇಲರ್ ಮಾಂಟ್ರಿಯಲ್ನಲ್ಲಿ ನಟ ರಿಚರ್ಡ್ ಬರ್ಟನ್ ಅವರನ್ನು ಮದುವೆಯಾದರು. (ಇದು ಆಕೆಯ ಐದನೇ ಮದುವೆ ಮತ್ತು ಆತನ ಎರಡನೇ ಮದುವೆ. ಮುಂದೆ ಎಲಿಜಬೆತ್ ತನ್ನ 8ನೇ ಮದುವೆಯನ್ನೂ ಈತನ ಜೊತೆಗೇ ಮಾಡಿಕೊಂಡರು).
1960: ಕಲಾವಿದ ಗಂಗಪ್ಪ ಗುಡಾರದ ಜನನ.
1944: ಕಲಾವಿದ ಎಂ.ವಿ. ಕೃಷ್ಣಮೂರ್ತಿ ಜನನ.
1941: ಕಲಾವಿದ ಎನ್. ವೆಂಕಟಶ್ಯಾಮಾಚಾರಿ ಜನನ.
1933: ಕಲಾವಿದ ಕೃಷ್ಣಮೂರ್ತಿದಾಸ್ ಜನನ.
1931: ವೀಣಾ ವಾದಕ, ಸಂಗೀತ ಶಾಸ್ತ್ರಜ್ಞ, ಗಾಯಕ ಹಾಗೂ ಅತ್ಯುತ್ತಮ ವಾಗ್ಮಿಯಾಗಿ ಖ್ಯಾತರಾದ ರಾ. ವಿಶ್ವೇಶ್ವರನ್ ಅವರು ಹೆಸರಾಂತ ಸಂಗೀತ ಕುಟುಂಬದ ರಾಮಯ್ಯ- ವರಲಕ್ಷ್ಮಿ ದಂಪತಿಯ ಮಗನಾಗಿ ಈದಿನ ಜನಿಸಿದರು.
1917: ರಷ್ಯದ ತ್ಸಾರ್ 2ನೇ ನಿಕೋಲಸ್ ತನ್ನ ಸಹೋದರ ಮೈಕೆಲ್ ಪರವಾಗಿ ಸಿಂಹಾಸನ ತ್ಯಜಿಸಿದ. ಆದರೆ ಮೈಕೆಲ್ ಸಿಂಹಾಸನ ನಿರಾಕರಿಸಿದ. 1918ರ ಏಪ್ರಿಲಿನಲ್ಲಿ 2ನೇ ನಿಕೋಲಸ್ ಮತ್ತು ಕುಟುಂಬ ಸದಸ್ಯರನ್ನು ಯೆಕೆಟರಿನ್ ಬರ್ಗಿಗೆ ಕರೆದೊಯ್ದು ಅದೇ ವರ್ಷದ ಜುಲೈಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.
1892: ಅಮೆರಿಕನ್ ಸಂಶೋಧಕ ಜೆಸ್ಸೆ ರೆನೊ ಅವರಿಗೆ ಮೊತ್ತ ಮೊದಲ ರೆನೊ ಇನ್ ಕ್ಲೈನ್ಡ್ ಎಲೆವೇಟರ್ ಹೆಸರಿನ ಎಸ್ಕಲೇಟರಿಗೆ ಪೇಟೆಂಟ್ ಲಭಿಸಿತು. ಅದನ್ನು ಕೋನಿ ದ್ವೀಪದ ಓಲ್ಡ್ ಪೈಯರಿನಲ್ಲಿ 1896ರಲ್ಲಿ ಅಳವಡಿಸಲಾಯಿತು.
1877: ಮೆಲ್ಬೋರ್ನಿನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಆಡಿದವು. ಆಸ್ಟ್ರೇಲಿಯಾ 45 ರನ್ನುಗಳ ವಿಜಯ ಸಾಧಿಸಿತು. ಚಾರ್ಲ್ಸ್ ಬೆನ್ನರ್ ಮ್ಯಾನ್ 165 ರನ್ನುಗಳೊಂದಿಗೆ ಮೊತ್ತ ಮೊದಲ ಟೆಸ್ಟ್ ಸೆಂಚುರಿ ಸಿಡಿಸಿದರು.
1854: ಎಮಿಲ್ (ಅಡಾಲ್ಫ್) ವೊನ್ ಬೆಹ್ರಿಂಗ್ (1854-1917) ಹುಟ್ಟಿದ ದಿನ. ಬ್ಯಾಕ್ಟೀರಿಯಾ ತಜ್ಞನಾದ ಈತ ವೈದ್ಯಕೀಯಕ್ಕಾಗಿ ನೀಡಲಾಗುವ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ವ್ಯಕ್ತಿ.
1848: ಜೋಸೆಫ್ ಜೆಂಕಿನ್ಸ್ ರಾಬರ್ಟ್ಸ್ (1848-1856) ಹುಟ್ಟಿದ ದಿನ. ಈತ ಲೈಬೀರಿಯಾದ ಮೊದಲ ಅಧ್ಯಕ್ಷ.
1767: ಆಂಡ್ರ್ಯೂ `ಓಲ್ಡ್ ಹಿಕೊರಿ' ಜಾಕ್ಸನ್ (1767-1845) ಹುಟ್ಟಿದ. ಅಮೆರಿಕಾದ ಸೇನಾ ನಾಯಕನಾದ ಈತ 1829-37ರ ಅವದಿಯಲ್ಲಿ ಅಮೆರಿಕಾದ ಅಧ್ಯಕ್ಷನೂ ಆಗಿ ಸೇವೆ ಸಲ್ಲಿಸಿದ. ಮತದಾರರ ಸಾಮೂಹಿಕ ಮನವಿ ಮೂಲಕ ಅಧಿಕಾರಕ್ಕೆ ಏರಿದ ಪ್ರಥಮ ವ್ಯಕ್ತಿ ಈತ. ಈತನ ರಾಜಕೀಯ ಚಳವಳಿ `ಜಾಕ್ಸೋನಿಯನ್ ಡೆಮಾಕ್ರಸಿ' ಎಂದೇ ಹೆಸರಾಗಿದೆ.
ಕ್ರಿ.ಪೂ.44: ಬ್ರೂಟಸ್ ಮತ್ತು ಕ್ಯಾಸಿಯಸ್ ಅವರೂ ಇದ್ದ ಒಳಸಂಚುಗಾರರ ಕೂಟವೊಂದು ಜ್ಯೂಲಿಯಸ್ ಸೀಸರ್ನನ್ನು ಕೊಲೆಗೈದಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment