ಇಂದಿನ ಇತಿಹಾಸ
ಫೆಬ್ರುವರಿ 27
ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಯ ಮೇಲೆ ಕಣ್ಣಿಟ್ಟ ಸ್ಕೇಟಿಂಗ್ ಪ್ರತಿಭೆ ಶಿಬಾನಿ ಎಂ.ನಾಯಕ್ ಮೈಸೂರು ನಗರದಲ್ಲಿ ಈದಿನ 26 ಟಾಟಾ ಇಂಡಿಕಾ ಕಾರುಗಳ ಕೆಳಗೆ ಸ್ಕೇಟ್ ಮಾಡುತ್ತಾ ಸಾಗಿ ಬಂದು ವೀಕ್ಷಕರಿಗೆ ರೋಮಾಂಚನ ಉಂಟು ಮಾಡಿದಳು. ಮೈಸೂರಿನ ವಿಜಯವಿಠಲ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಶಿಬಾನಿ ಕಳೆದ ಸೆಪ್ಟೆಂಬರಿನಲ್ಲಿ 14 ಕಾರುಗಳ ಕೆಳಗೆ ಸ್ಕೇಟಿಂಗ್ ಮಾಡುತ್ತಾ ನುಸುಳಿ ಬಂದಿದ್ದಳು.
2008: ಕೇರಳದ ಕಲ್ಲಿಕೋಟೆಯಿಂದ ಕರ್ನಾಟಕದ ಕಾರವಾರದವರೆಗಿನ ಕರಾವಳಿ ತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ವಿಧ್ವಂಸಕ ಚಟುವಟಿಕೆಗಳ `ವಿಶ್ವದರ್ಶನ'ಕ್ಕೆ ಉಗ್ರರಿಂದ ಸಿದ್ಧತೆ ನಡೆಸುವ ಸಲುವಾಗಿ ಈ ಪ್ರದೇಶದ ಕೆಲವು ರಹಸ್ಯ ಕೇಂದ್ರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿ, ಯುವಕರನ್ನು ತಯಾರುಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿತ್ತು ಎಂಬ ಆತಂಕಕಾರಿ ವಿಷಯ ಉನ್ನತ ಪೊಲೀಸ್ ಮೂಲಗಳ ಗಮನಕ್ಕೆ ಬಂದಿತು. ಈ ಸಂದೇಹದ ಜಾಡು ಹಿಡಿದು ಕೇಂದ್ರ ತನಿಖಾ ದಳ ತನಿಖೆ ಆರಂಭಿಸಿತು.
2008: ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಬಗ್ಗೆ ಬಹಿರಂಗವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯು ಹೇಡನ್ ವಿರುದ್ಧ ನೀತಿ ಸಂಹಿತೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಯಿತು. ಯಾವುದೇ ದೊಡ್ಡ ಶಿಕ್ಷೆ ಹಾಗೂ ದಂಡವನ್ನು ವಿಧಿಸದಿದ್ದರೂ ದೈತ್ಯ ಬ್ಯಾಟ್ಸ್ ಮನ್ ಗೆ ಛೀಮಾರಿ ಹಾಕಿ ಎಚ್ಚರಿಕೆಯನ್ನೂ ನೀಡಲಾಯಿತು. `ಭಜ್ಜಿ' ವಿರುದ್ಧದ ಹೇಡನ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತುರ್ತಾಗಿ ವಿಚಾರಣೆ ನಡೆಸಿತು.
2008: ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರವೂ ಮಗುವಿಗೆ ಜನ್ಮ ನೀಡಿದ ಮಹಿಳೆಗೆ 1.8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಈ ಹಣವನ್ನು ಅರ್ಜಿದಾರ ಮಹಿಳೆ ಸಾವಿತ್ರಿ ಅವರು ಅರ್ಜಿ ಸಲ್ಲಿಸಿದ ದಿನದಿಂದ ಶೇ 6ರ ಬಡ್ಡಿ ದರ ಸಹಿತವಾಗಿ ನೀಡುವಂತೆ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಆದೇಶ ನೀಡಿದರು. ಸಾವಿತ್ರಿ ಅವರಿಗೆ ಇಬ್ಬರು ಮಕ್ಕಳಿದ್ದ ಹಿನ್ನೆಲೆಯಲ್ಲಿ ಅವರು ಈ ಆಸ್ಪತ್ರೆಯಲ್ಲಿ 1995ರಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಚಿಕಿತ್ಸೆಯು ವಿಫಲವಾದ ಹಿನ್ನೆಲೆಯಲ್ಲಿ ಪುನಃ ಗರ್ಭ ಧರಿಸಿದ ಅವರು 1999ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪುನಃ ಅವರು ಚಿಕಿತ್ಸೆಗೆ ಒಳಗಾಗಬೇಕಾಯಿತು. ವಿನಾ ಕಾರಣ ಇನ್ನೊಂದು ಮಗುವಿನ ಖರ್ಚು ವೆಚ್ಚ ನೋಡಿಕೊಳ್ಳಬೇಕಾಗಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವಿರುದ್ಧ ಅವರು ಸಿವಿಲ್ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದರು. ಅವರಿಗೆ 1.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ 2003ರಲ್ಲಿ ಆದೇಶಿಸಿತು. ಈ ಆದೇಶದ ರದ್ದತಿಗೆ ಕೋರಿ ಕೋರಿ ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರೆ, ಪರಿಹಾರದ ಮೊತ್ತ ಹೆಚ್ಚಳಕ್ಕೆ ಕೋರಿ ಸಾವಿತ್ರಿಯವರೂ ಮೇಲ್ಮನವಿ ಸಲ್ಲಿಸಿದ್ದರು.
2008: ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಯ ಮೇಲೆ ಕಣ್ಣಿಟ್ಟ ಸ್ಕೇಟಿಂಗ್ ಪ್ರತಿಭೆ ಶಿಬಾನಿ ಎಂ.ನಾಯಕ್ ಮೈಸೂರು ನಗರದಲ್ಲಿ ಈದಿನ 26 ಟಾಟಾ ಇಂಡಿಕಾ ಕಾರುಗಳ ಕೆಳಗೆ ಸ್ಕೇಟ್ ಮಾಡುತ್ತಾ ಸಾಗಿ ಬಂದು ವೀಕ್ಷಕರಿಗೆ ರೋಮಾಂಚನ ಉಂಟು ಮಾಡಿದಳು. ಮೈಸೂರಿನ ವಿಜಯವಿಠಲ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಶಿಬಾನಿ ಕಳೆದ ಸೆಪ್ಟೆಂಬರಿನಲ್ಲಿ 14 ಕಾರುಗಳ ಕೆಳಗೆ ಸ್ಕೇಟಿಂಗ್ ಮಾಡುತ್ತಾ ನುಸುಳಿ ಬಂದಿದ್ದಳು. ಮಹಾರಾಜ ಕಾಲೇಜ್ ಬಳಿಯ ಕೃಷ್ಣರಾಜ ಬೌಲ್ ವಾರ್ಡ್ ಬಳಿ ಈ ಸಾಹಸ ವೀಕ್ಷಿಸಲು ನೂರಾರು ಜನರು ಸೇರಿದ್ದರು. ಆಕೆಯ ತಂದೆ- ತಾಯಿಯರಾದ ಟಿ.ಎನ್. ಮಲ್ಲೇಶ ಕುಮಾರ್- ರೂಪಾ ಹಾಗೂ ಕೋಚ್ ಶ್ರೀಕಾಂತ ಕೂಡಾ ಈ ಸಂತೋಷದ ಕ್ಷಣವನ್ನು ಚಪ್ಪಾಳೆ ತಟ್ಟಿ ಆನಂದಿಸಿದರು. ಶಿಬಾನಿ ನೆಲಮಟ್ಟದಿಂದ 6 ಇಂಚು ಎತ್ತರದಲ್ಲಿದ್ದ ಕಾರಿನ ಕೆಳಗೆ ನುಸುಳಿ ಬಂದಿದ್ದು, 5.75 ಇಂಚು ಎತ್ತರದ ಕಬ್ಬಿಣದ ರಾಡ್ ಕೆಳಗೆ ನುಸುಳಿ ಬಂದಿರುವುದು ಈ ಕ್ಷೇತ್ರದಲ್ಲಿ ಈಗಾಗಲೆ ಇರುವ ಗಿನ್ನೆಸ್ ದಾಖಲೆ. ಹಾಗೆಯೇ ಚೀನಾದ ಪೋರನೊಬ್ಬ 52 ಕಾರುಗಳ ಕೆಳಗೆ ಸ್ಕೇಟ್ ಮಾಡುತ್ತಾ ನುಸುಳಿ ಬಂದಿರುವುದು ಲಿಮ್ಕಾ ದಾಖಲೆ ಆಗಿದೆ. ಈ ದಾಖಲೆಯನ್ನು ಮುರಿಯಲು ಶಿಬಾನಿ ಕಳೆದ ಒಂದು ವರ್ಷದಿಂದ ಸತತ ಯತ್ನ ನಡೆಸಿದ್ದಾಳೆ.
2008: ಕ್ರಿಕೆಟ್ ಚೆಂಡು ಹಿಡಿಯಲು ಹೋಗಿ ಶಾಲೆಯೊಂದರ ಛಾವಣಿ ಏರಿ ಅಲ್ಲಿದ್ದ ವಿದ್ಯುತ್ ತಂತಿಯನ್ನು ಮುಟ್ಟಿ ಕೈಕಾಲುಗಳನ್ನು ಕಳೆದುಕೊಂಡ 12ರ ಹರೆಯದ ಬಾಲಕ ಗುಲ್ಬರ್ಗ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಹಿರೇಜೇವರ್ಗಿಯ ನಿಖಿಲ್ ಇಬ್ರಾಹಿಂಪೂರನಿಗೆ 2 ಲಕ್ಷ ರೂಪಾಯಿ ವೈದ್ಯಕೀಯ ವೆಚ್ಚ ನೀಡುವಂತೆ ಕರ್ನಾಟಕ ಹೈಕೋರ್ಟ್ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗೆ ಆದೇಶಿಸಿತು. 2006ರ ನವೆಂಬರ್ 12ರಂದು ನಡೆದ ಈ ಘಟನೆಯ ಕುರಿತು `ಪ್ರಜಾವಾಣಿ' ಪ್ರಕಟಿಸಿದ್ದ ವಿಶೇಷ ವರದಿ ಆಧರಿಸಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೈಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಜೆಸ್ಕಾಂ ವಿರುದ್ಧ ಸ್ವಯಂ ಪ್ರೇರಿತ (ಸು ಮೊಟೊ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
2008: ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಕಲ್ಪಿಸುವ `ಹೆರಿಗೆ ಭತ್ಯೆ (ತಿದ್ದುಪಡಿ) ಮಸೂದೆ-2007' ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿತು. ಸಂಸತ್ತಿನಲ್ಲಿ ಈ ಮಸೂದೆಯ ಅಂಗೀಕಾರದಿಂದ ಇದುವರೆಗೆ ಸರ್ಕಾರಿ ನೌಕರರು ಮಾತ್ರ ಪಡೆಯುತ್ತಿದ್ದ ಹೆರಿಗೆ ಸೌಲಭ್ಯಗಳನ್ನು ಖಾಸಗಿ ಕಂಪೆನಿಗಳು, ಕಾರ್ಖಾನೆಗಳು ಹಾಗೂ ತೋಟಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಸಹ ಪಡೆದುಕೊಳ್ಳುವರು. ಹೊಸ ಕಾನೂನಿನಡಿ, ಹೆರಿಗೆಗಾಗಿ ವೈದ್ಯಕೀಯ ಸೇವೆಗೆ ನೀಡುವ ಹಣವು ಈಗಿನ ರೂ 250ರಿಂದ ರೂ 1,000ವರೆಗೆ ಹೆಚ್ಚಳವಾಗುವುದು. ಇದಲ್ಲದೆ ಈ ಮೊತ್ತವನ್ನು ರೂ 20,000ವರೆಗೂ ಹೆಚ್ಚಿಸುವ ಅಧಿಕಾರ ಕೇಂದ್ರಕ್ಕೆ ದೊರೆಯುವುದು. ನೌಕರರ ರಾಜ್ಯ ವಿಮಾ ಸೌಲಭ್ಯ (ಇ ಎಸ್ ಐ) ಕಾಯ್ದೆ 1961ರಡಿ ಬಾರದ ಮಹಿಳಾ ಉದ್ಯೋಗಿಗಳು, ಉದಾಹರಣೆಗೆ ಖಾಸಗಿ ಕಂಪೆನಿ, ಕಾರ್ಖಾನೆ, ಸರ್ಕಸ್, ಪ್ಲಾಂಟೇಶನ್ ಹಾಗೂ ಅಂಗಡಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ಮಸೂದೆಯು ಸೌಲಭ್ಯ ಕಲ್ಪಿಸುವುದು. 10ಕ್ಕಿಂತಲೂ ಹೆಚ್ಚಿನ ನೌಕರರು ಕೆಲಸ ಮಾಡುವ ಸಂಸ್ಥೆಗಳು ಈ ಮಸೂದೆಯ ವ್ಯಾಪಿಗೆ ಒಳಪಡುವುವು.
2008: ನಾಗಾಲ್ಯಾಂಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸುವುದಕ್ಕೆ ರಾಜ್ಯಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ಸಂಸತ್ತಿನ ಪೂರ್ಣ ಒಪ್ಪಿಗೆ ದೊರಕಿತು.
2008: ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ವರ್ಷದ ಹಿಂದೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹಾಗೂ ಆಕೆಯ ಪತಿ ಆಸೀಫ್ ಜರ್ದಾರಿ ಅವರಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಕ್ಷಮೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪಾಕಿಸ್ಥಾನ ಸುಪ್ರೀಂಕೋರ್ಟ್ ವಜಾಗೊಳಿಸಿತು. 2007ರ ಅಕ್ಟೋಬರ್ 5ರಂದು ಅಧ್ಯಕ್ಷರ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಸುಗ್ರೀವಾಜ್ಞೆ ಮೂಲಕ ಮುಷರಫ್, ಭುಟ್ಟೋ ಅವರಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ಷಮೆ ನೀಡಿದ್ದರು. ಆದರೆ, ಈ ಸುಗ್ರೀವಾಜ್ಞೆಯಿಂದ ನವಾಜ್ ಷರೀಫ್ ಸೇರಿದಂತೆ ಇತರ ಪಿಎಂಎಲ್- ಎನ್ ನಾಯಕರಿಗೆ ಲಾಭವಾಗಿರಲಿಲ್ಲ. ಈ ಸುಗ್ರೀವಾಜ್ಞೆ ಪ್ರಶ್ನಿಸಿ ಪಿಎಂಎಲ್- ಎನ್ ನಾಯಕ ಶಹಬಾಜ್ ಷರೀಫ್, ಜಮಾತೆ ಇಸ್ಲಾಮಿ ನಾಯಕ ಖಾಜಿ ಹುಸೇನ್ ಅಹ್ಮದ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಇಂತಹ ಐದು ಅರ್ಜಿಗಳಲ್ಲಿ ಮೂರು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತು.
2008: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ರಾಡ್ ಹಾಗ್ ಅವರು ತ್ರಿಕೋನ ಏಕದಿನ ಪಂದ್ಯಗಳ ಸರಣಿಯ ಫೈನಲ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವುದಾಗಿ ಈದಿನ ಮೆಲ್ಬೋರ್ನಿನಲ್ಲಿ ಪ್ರಕಟಿಸಿದರು. 1996ರಲ್ಲಿ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಪ್ರವೇಶ ಮಾಡಿದ್ದ ಹಾಗ್ ಆಡಿದ್ದು ಕೇವಲ ಏಳು ಟೆಸ್ಟ್. ಪದಾರ್ಪಣೆ ನಂತರ ದೀರ್ಘ ಕಾಲ ಎಲೆಮರೆಯ ಕಾಯಿಯಾಗಿ ಉಳಿದಿದ್ದ ಅವರು ಮತ್ತೆ ಟೆಸ್ಟಿನಲ್ಲಿ ಕಾಣಿಸಿಕೊಂಡದ್ದು 2003ರಲ್ಲಿ. ಈವರೆಗೆ ಆಡಿರುವ 121 ಏಕದಿನ ಪಂದ್ಯಗಳಲ್ಲಿ 26.73ರ ಸರಾಸರಿಯಲ್ಲಿ 154 ವಿಕೆಟುಗಳನ್ನು ಕಬಳಿಸಿದ್ದಾರೆ. 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಗಿದ್ದಾಗಲೂ ತಂಡದಲ್ಲಿದ್ದರು. ಶೇನ್ ವಾರ್ನ್ ನಿವೃತ್ತಿಯ ನಂತರ ತಂಡಕ್ಕೆ ಸ್ಪಿನ್ ವಿಭಾಗದಲ್ಲಿ ಅಗತ್ಯವಿದ್ದ ನೆರವು ನೀಡಿದ ಹೆಗ್ಗಳಿಕೆ ಹಾಗ್ ಅವರದು. ಭಾರತ ವಿರುದ್ಧ ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಅವರು ಒಟ್ಟು ಎಂಟು ವಿಕೆಟುಗಳನ್ನು ಕಬಳಿಸಿದ್ದರು.
2007: ಉತ್ತರಖಂಡ, ಪಂಜಾಬ್ ಮತ್ತು ಮಣಿಪುರ ಈ ಮೂರು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರದ ಯುಪಿಎ ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಂಜಾಬ್ ಮತ್ತು ಉತ್ತರಖಂಡದಲ್ಲಿ ಅಧಿಕಾರ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿತು. 60 ಸದಸ್ಯರ ಮಣಿಪುರದಲ್ಲಿ ಮಾತ್ರ 30 ಸ್ಥಾನ ಗೆದ್ದು ಸರ್ಕಾರ ರಚಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಯಿತು. ಪಂಜಾಬಿನಲ್ಲಿ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಅಧಿಕಾರದತ್ತ ಸರಿದರೆ, ಉತ್ತರಖಂಡದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಾದರೂ ಕಾಂಗ್ರೆಸ್ಸನ್ನು ಪದಚ್ಯುತಿಗೊಳಿಸಿ ಅಧಿಕಾರಕ್ಕೇ ಏರಲು ಸಾಧ್ಯವಾಯಿತು.
2007: ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 24,73,562 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆ ಇದ್ದು, ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ ತಲಾ 22,000 ರೂಪಾಯಿಗಳಿಗಿಂತ ಹೆಚ್ಚಿನ ಸಾಲದ ಹೊರೆ ಬೀಳುತ್ತದೆ. 1990-91ರಲ್ಲಿ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲಿದ್ದ ಸಾಲದ ಹೊರೆ ಅಂದಾಜು 3500 ರೂಪಾಯಿ ಮಾತ್ರ. ಆಗ ಜನಸಂಖ್ಯೆ 90 ಕೋಟಿಯಾಗಿದ್ದು ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 3,14,558 ಕೋಟಿ ರೂಪಾಯಿಗಳು. 16 ವರ್ಷಗಳಲ್ಲಿ ಜನಸಂಖ್ಯೆ 112 ಕೋಟಿಗೆ ಏರಿದರೆ, ಸಾಲದ ಮೊತ್ತ 24,73,562 ಕೋಟಿ ರೂಪಾಯಿಗಳಿಗೆ ಜಿಗಿಯಿತು. ಸಂಸತ್ತಿನಲ್ಲಿ ಈದಿನ ಮಂಡಿಸಲಾದ ಆರ್ಥಿಕ ಸಮೀಕ್ಷೆಯ್ಲಲಿ ಈ ವಿವರ ಪ್ರಕಟಗೊಂಡಿತು.
2007: ಆಫ್ಘಾನಿಸ್ಥಾನಕ್ಕೆ ಭೇಟಿ ನೀಡಿರುವ ಡಿಕ್ ಚೆನಿ ಅವರನ್ನು ಗುರಿಯಾಗಿ ಇರಿಸಿ ಬಗ್ರಾಮ್ ನ ಅಮೆರಿಕದ ಸೇನಾ ನೆಲೆಯ ಹೊರಭಾಗದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 19 ಜನ ಮೃತರಾಗಿ 24 ಮಂದಿ ಗಾಯಗೊಂಡರು.
2007: ಬೊಫೋರ್ಸ್ ಫಿರಂಗಿ ಖರೀದಿ ಲಂಚ ಹಗರಣದ ಆರೋಪಿ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ (69) ಅವರ ಪಾಸ್ ಪೋರ್ಟನ್ನು ಅರ್ಜೆಂಟೀನಾ ಮುಟ್ಟುಗೋಲು ಹಾಕಿಕೊಂಡಿತು.
2006: ಬೆಳಗಾವಿ ತಾಲ್ಲೂಕು ಪಂಚಾಯ್ತಿಯ ಮೊದಲ ಸಭೆಯಲ್ಲಿ ಆಡಳಿತಾರೂಢ ಎಂ ಇ ಎಸ್ ಬೆಂಬಲಿತ ಸದಸ್ಯರು ಅಧಿಕಾರಿಗಳ ಗೈರುಹಾಜರಿಯಲ್ಲಿ ಗಡಿ ವಿವಾದದ ತ್ವರಿತ ಇತ್ಯರ್ಥಕ್ಕೆ ಮನವಿ ಮಾಡುವ ನಿರ್ಣಯವನ್ನು ಕೈ ಎತ್ತುವ ಮೂಲಕ ಅಂಗೀಕರಿಸಿದರು.
1998: ಇಂಗ್ಲೆಂಡಿನ ಸಿಂಹಾಸನ ಏರಲು 1000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪುರುಷ ಸಂತತಿಗೆ ಇದ್ದ ಆದ್ಯತೆಯನ್ನು ಕೊನೆಗೊಳಿಸಲು ರಾಣಿ ಎಲಿಜಬೆತ್ ಒಪ್ಪಿಗೆಯೊಂದಿಗೆ ಹೌಸ್ ಆಫ್ ಲಾರ್ಡ್ಸ್ ಮಂಜೂರಾತಿ ನೀಡಿತು. ದೊರೆಯ ಮೊದಲ ಪುತ್ರಿಗೆ ಸಿಂಹಾಸನ ಏರಲು ಮೊದಲ ಪುತ್ರನಿಗೆ ಇರುವಷ್ಟೇ ಅಧಿಕಾರ ಇದರಿಂದ ಲಭಿಸಿತು.
1991: ಕುವೈತಿನ ವಿಮೋಚನೆ ಹಾಗೂ ಇರಾಕಿ ಪಡೆಗಳ ಪರಾಭವದೊಂದಿಗೆ ಕೊಲ್ಲಿ ಯುದ್ಧ ಕೊನೆಗೊಂಡಿತು.
1949: ಕಥಾ ಕೀರ್ತನಕಾರ, ಗಮಕಿ ಹಾಗೂ ಅಧ್ಯಾತ್ಮ ಮಾರ್ಗದರ್ಶಿ ಸಚ್ಚಿದಾನಂದ ದಾಸ್ ಅವರು ಉಪಾಧ್ಯಾಯ ಗಮಕಿ ಕೀರ್ತನೆಗಾರ ಶ್ರೀನಿವಾಸಯ್ಯ- ಕನಕಲಕ್ಷ್ಮಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಗ್ರಾಮದಲ್ಲಿ ಜನಿಸಿದರು.
1932: ಅಮೆರಿಕದ ವಿವಾದಿತ ಬಹುವಿವಾಹಿತ ಚಿತ್ರನಟಿ ಎಲಿಜಬೆತ್ ಟೇಲರ್ ಹುಟ್ಟಿದ ದಿನ.
1931: ಅಲಹಾಬಾದಿನ ಆಲ್ ಫ್ರೆಡ್ ಪಾರ್ಕಿನಲ್ಲಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಾಹುತಿ ಮಾಡಿಕೊಂಡರು.
1899: ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ (1899-1978) ಹುಟ್ಟಿದ ದಿನ. ಶರೀರ ಶಾಸ್ತ್ರಜ್ಞನಾದ ಈತ ಸರ್ ಫ್ರೆಡರಿಕ್ ಬಂಟಿಂಗ್ ಜೊತೆ ಸೇರಿ, ನಾಯಿಗಳಲ್ಲಿ ಮಧುಮೇಹ ನಿಯಂತ್ರಿಸುವ ಇನ್ಸುಲಿನ್ ತಯಾರಿಸಿದ. ಆದರೆ ವೈದ್ಯಕೀಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಈತನಿಗೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ 1925ರವರೆಗೂ ಈತನಿಗೆ ಡಾಕ್ಟರ್ ಆಫ್ ಮೆಡಿಸಿನ್ ಪದವಿ ಸಿಗದೇ ಇದ್ದುದೇ ಕಾರಣ.
1854: ಝಾನ್ಸಿಯನ್ನು ಈಸ್ಟ್ ಇಂಡಿಯಾ ಕಂಪೆನಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment