Tuesday, March 31, 2009

ಇಂದಿನ ಇತಿಹಾಸ History Today ಮಾರ್ಚ್ 27

ಇಂದಿನ ಇತಿಹಾಸ

ಮಾರ್ಚ್ 27

ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

ಇಂದು ವಿಶ್ವ ರಂಗಭೂಮಿ ದಿನ. ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. 1962 ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.

2008: ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ, ನಾಲ್ವರು ಮೋಟಾರು ವಾಹನ ನಿರೀಕ್ಷಕರು ಮತ್ತು ಆಹಾರ ನಿರೀಕ್ಷಕರೊಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಹಾಸನ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಕೆ.ಪಿ. ಹೊನಕೇರಿ, ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸದಾಶಿವ, ಮೋಟಾರು ವಾಹನ ನಿರೀಕ್ಷಕರಾದ ಎಚ್. ಸಿ. ಸತ್ಯನ್ (ಒಒಡಿ ಸಕಲೇಶಪುರ), ಶ್ರೀನಿವಾಸಪ್ಪ (ಒಒಡಿ ದೇವನ ಹಳ್ಳಿ), ಪ್ರಮಥೇಶ್ (ಚಿತ್ರದುರ್ಗ), ಎನ್. ಕರಿಯಪ್ಪ (ಒಒಡಿ ಹಾಸನ) ಮತ್ತು ಗುಲ್ಬರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಸ್. ಬಿ. ಫುಲಾರೆ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಿತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಮತ್ತು ಡಿಐಜಿ ಚರಣ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪೊಲೀಸ್ ಅಧಿಕಾರಿಗಳು ಬೆಂಗಳೂರು, ಮಂಗಳೂರು, ಹಾಸನ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಮೈಸೂರು, ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದರು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ದಾಖಲೆಯ ಪ್ರಯೋಗಗಳಿಗೆ ಸಾಕ್ಷಿಯಾದ `ಎಂಡೇವರ್' ಗಗನ ನೌಕೆ ಬೆಳಗ್ಗೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಫ್ಲಾರಿಡಾದ ಕೇಪ್ ಕೆನವರಲ್ನ  ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಏಳು ಮಂದಿ ಗಗನ ಯಾತ್ರಿಗಳನ್ನು ಹೊತ್ತಿದ್ದ `ಎಂಡೇವರ್' ಬೆಳಿಗ್ಗೆ 6.09 ಗಂಟೆಗೆ ಬಂದಿಳಿದಾಗ ಹೂಸ್ಟನ್ನಿನಲ್ಲಿನ `ನಾಸಾ' ನಿಯಂತ್ರಣ ಕೇಂದ್ರದ ಸಿಬ್ಬಂದಿ ಸಂತಸದಿಂದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಬಾರಿಯ ಎಂಡೇವರ್ ಯಾನ ಅತ್ಯಂತ ಫಲಪ್ರದ ಎಂದು ವಿಜ್ಞಾನಿಗಳು ಬಣ್ಣಿಸಿದರು. ಒಟ್ಟು 16 ದಿನಗಳ ಈ ಯಾನದ ಅವಧಿಯಲ್ಲಿ ನೌಕೆಯು 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) ಅಡಗಿ ಕುಳಿತಿತ್ತು. ಈ ಸಂದರ್ಭದಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದ್ದರು. ಹಾಗೂ ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೊಬೊಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2008: ಮಹಾರಾಷ್ಟ್ರ ನಿರ್ಮಾಣ ಸೇನೆಯು (ಎಂ ಎನ್ ಎಸ್) ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ವಿರುದ್ಧದ ದಾಳಿಯನ್ನು ಮುಂದುವರೆಸಿದ್ದು, ಈಗ ಭಿತ್ತಿಚಿತ್ರಗಳ ಮೂಲಕ ಅವರನ್ನು ಪರೋಕ್ಷವಾಗಿ ಟೀಕಿಸುವ ಕೆಲಸ ಮಾಡಿತು. ಪುಣೆ ಬಳಿಯ ಲೊಣಾವಾಲದಲ್ಲಿ ಖರೀದಿಸಿದ ಕೃಷಿ ಭೂಮಿಯನ್ನು ಮೂಲ ಮಾಲೀಕನಿಗೆ ವಾಪಸ್ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಅಮಿತಾಭ್ ಅವರ ನಿಲುವನ್ನು ಟೀಕಿಸಲು ಎಂ ಎನ್ ಎಸ್ ವ್ಯಂಗ್ಯ ಭಿತ್ತಿಚಿತ್ರವನ್ನು ಬಳಸಿತು. ಭಿತ್ತಿಚಿತ್ರದಲ್ಲಿ ರೇಖಾಚಿತ್ರದ ಕೆಳಗಡೆ ಮರಾಠಿಯಲ್ಲಿ `ಮಜೆ ದಾನ್ ಪರತ್ ಕರಾ' (ನಾನು ದಾನವಾಗಿ ನೀಡಿದ್ದನ್ನು ವಾಪಸ್ ಮಾಡು) ಎಂದು ಬರೆದು ನಂತರ `ಸೂಪರ್ ಶೇತ್ಕರಿ' (ಸೂಪರ್ ರೈತ) ಎಂದು ಬರೆಯಲಾಯಿತು.

2008: ಹಿಂದೂ ದೇವತೆ ದುರ್ಗಾದೇವಿಯ ಪ್ರತಿರೂಪದಂತೆ ಭಿತ್ತಿ ಚಿತ್ರಗಳಲ್ಲಿ ತಮ್ಮನ್ನು ಪ್ರತಿಬಿಂಬಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೂಗಳ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಮುಜಾಫರಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಸೋನಿಯಾ ಗಾಂಧಿ ಅವರು ಉತ್ತರಪ್ರದೇಶ ಮತ್ತು ಮುರದಾಬಾದ್ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಕೀಲ ಸುಧೀರ್ ಓಝಾ ಅವರು ಸಲ್ಲಿಸಿದ ದೂರನ್ನು ಸ್ವೀಕರಿಸಿದ ನ್ಯಾಯಾಧೀಶ ಎಚ್. ಕೆ. ಶ್ರೀವಾತ್ಸವ ಅವರು ಪ್ರಕರಣವನ್ನು ವಿಚಾರಣೆಗಾಗಿ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಕಳೆದ ಡಿಸೆಂಬರಿನಲ್ಲಿ ಮ್ಯಾಜಿಸ್ಟ್ರೇಟ್ ಅವರು ಈ ದೂರನ್ನು ವಜಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಓಝಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದುರ್ಗಾದೇವಿಯಂತೆ ಕಾಣಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಿತ್ತಿಚಿತ್ರವು ಟಿವಿ ಹಾಗೂ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

2008: ಹೊಗೇನಕಲ್ ಸಮಗ್ರ ನೀರು ಸರಬರಾಜು ಯೋಜನೆಯನ್ನು ಜಾರಿ ಮಾಡಲು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆಯು ಅಂಗೀಕರಿಸಿತು. 1,334 ಕೋಟಿ ರೂಪಾಯಿಗಳ ಜಪಾನ್ ಆರ್ಥಿಕ ನೆರವಿನ ಯೋಜನೆಯನ್ನು ಜಾರಿ ಮಾಡುವಾಗ ಕರ್ನಾಟಕವು ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಬೇಕು ಎಂದು ಗೊತ್ತುವಳಿಯನ್ನು ಮಂಡಿಸಿದ ಸ್ಥಳೀಯಾಡಳಿತ ಸಚಿವ ಎಂ.ಕೆ. ಸ್ಟ್ಯಾಲಿನ್ ಅವರು ಕೇಂದ್ರವನ್ನು ಒತ್ತಾಯಿಸಿದರು. ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ಲಿನಲ್ಲಿ ನೀರು ಸರಬರಾಜು ಯೋಜನೆ ಜಾರಿ ಮಾಡುವುದಕ್ಕೆ ಬಿಜೆಪಿಯ ಕರ್ನಾಟಕ ಘಟಕ ಮತ್ತು ಇತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೊಗೇನಕಲ್ಲಿನಲ್ಲಿ ಧರಣಿ ನಡೆಸಿದ್ದರ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಈ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

2008: ಲೋಕಾಯುಕ್ತ ತನಿಖೆಗೆ ಒಳಗಾಗಿದ್ದ ಹತ್ತು ಅಧಿಕಾರಿಗಳ ಹೆಸರನ್ನು ಐಎಎಸ್ ಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  ವಜಾಗೊಳಿಸಿತು. ಅಧಿಕಾರಿಗಳ ಹೆಸರು ಶಿಫಾರಸು ಮಾಡಿರುವ ಕೃಷ್ಣ ಸರ್ಕಾರದ ಕ್ರಮ ಸಮರ್ಥನೀಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನ್ಯಾಯಮೂರ್ತಿ ಸಿ.ಕೆ. ಠಕ್ಕರ್ ಹಾಗೂ ಡಿ.ಕೆ. ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

2008: ಕೇಂದ್ರದ ಮಾಜಿ ಸಚಿವ ಹಾಗೂ ಬಿಹಾರದ ಬಿಜೆಪಿ ಮಾಜಿ ಮುಖಂಡ ಜೈ ನಾರಾಯಣ ಪ್ರಸಾದ್ ನಿಷಾದ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ನಿಷಾದ್, ತಮ್ಮ ಮಾತೃ ಪಕ್ಷ ಬಿಜೆಪಿ ತ್ಯಜಿಸಿದ್ದರಿಂದ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು  ರಾಜ್ಯಸಭಾ ಅಧ್ಯಕ್ಷ ಹಮಿದ್ ಅನ್ಸಾರಿ ತಿಳಿಸಿದರು. ನಿಷಾದ್, 2005ರ ಚುನಾವಣೆಯಲ್ಲಿ ಆರ್ ಜೆ ಡಿ ಪರ ಚುನಾವಣಾ ಪ್ರಚಾರ ಮಾಡಿದ್ದರಿಂದ ಸುಷ್ಮಾ ಸ್ವರಾಜ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

2008: ಹಿರಿಯ ಧುರೀಣ ಎ. ಬಿ. ಬರ್ಧನ್ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ 4ನೇ ಬಾರಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ಪಕ್ಷದ 20ನೇ ರಾಷ್ಟ್ರೀಯ ಸಮ್ಮೇಳನದ ಮುಕ್ತಾಯ ದಿನ ನಡೆದ ಚುನಾವಣೆಯಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರು. ಪಕ್ಷದ ನಲಗೊಂಡ ಕ್ಷೇತ್ರದ ಸಂಸದ ಎಸ್. ಸುಧಾಕರ್ ರೆಡ್ಡಿ ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 

2008: ವಾಯವ್ಯ ಚೀನಾದ ಜಿಯಾಂಗ್ ಉಗುರ್ ಪ್ರಾಂತ್ಯದಲ್ಲಿ ಪಟಾಕಿ ವಿಲೇವಾರಿ ಕೇಂದ್ರದಲ್ಲಿ ಪಟಾಕಿಗಳನ್ನು ನಾಶಪಡಿಸಲು ಯತ್ನಿಸಿದಾಗ ಸಂಭವಿಸಿದ ಸ್ಛೋಟದಿಂದ 25 ಮಂದಿ ಮೃತರಾಗಿ ಏಳು ಜನರಿಗೆ ಗಾಯಗಳಾದವು.

2008: ಗ್ರಂಥಾಲಯ ಇಲಾಖೆಯನ್ನು ದೇಶದಲ್ಲಿಯೇ ಮಾದರಿಯನ್ನಾಗಿ ರೂಪಿಸಿದ ಕೀರ್ತಿಗೆ ಭಾಜನರಾಗಿರುವ ಇಲಾಖೆಯ ನಿರ್ದೇಶಕ ಪಿ.ವೈ.ರಾಜೇಂದ್ರ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ `ರಂಗನಾಥನ್- ಕೌಲ ಪ್ರತಿಷ್ಠಾನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಭಾರತೀಯ ಶೈಕ್ಷಣಿಕ ಗ್ರಂಥಾಲಯಗಳ ಸಂಘ, ಭಾರತೀಯ ಸಾರ್ವಜನಿಕ ಗ್ರಂಥಾಲಯಗಳ ಸಂಘ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೌಕರರ ಸಂಘ, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಹಾಗೂ ರಂಗನಾಥನ್- ಕೌಲ ಪ್ರತಿಷ್ಠಾನ ಜಂಟಿಯಾಗಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ  ನೀಡಿದ ಕೊಡುಗೆ ಬಗ್ಗೆ  ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ಆಘಾತಕಾರಿ ವಿಚಾರವನ್ನು  ಭಾರತ ಸರ್ಕಾರ ಬಹಿರಂಗಗೊಳಿಸಿತು. ದೆಹಲಿಯ ದೇವ್ ಅಶಿಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕುಗಳ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು  ಒಪ್ಪಿಕೊಂಡರು. ಸ್ವತಃ ಭಟ್ಟಾಚಾರ್ಯ ಅವರು ಈದಿನ  ಈ ವಿಚಾರ  ಬಹಿರಂಗ ಪಡಿಸಿದರು. ಭಟ್ಟಾಚಾರ್ಯ ಅವರು ಐದು ಪ್ರಶ್ನೆಗಳೊಂದಿಗೆ ಕೇಂದ್ರ ಗೃಹ ಸಚಿವಾಲಯವನ್ನು  ಸಂಪರ್ಕಿಸಿ `ಸ್ವಾತಂತ್ರ್ಯ ಚಳವಳಿಯಲ್ಲಿ ಬೋಸ್ ಅವರು ಯಾವ ಪಾತ್ರ ವಹಿಸಿದ್ದರು.' ಎಂಬ ಬಗ್ಗೆ ಮಾಹಿತಿ  ಬೇಕು ಎಂದು ಕೇಳಿದ್ದರು. ಬೋಸ್ ಅವರ ಬಗ್ಗೆ  ಏನಾದರೂ ರಾಜತಾಂತ್ರಿಕ ಶಿಷ್ಟಾಚಾರವನ್ನು  ಭಾರತ ಇಟ್ಟುಕೊಂಡಿದೆಯೇ? ಎಲ್ಲಾದರೂ ಅಂತಹ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಬೋಸ್ ಯೋಗ್ಯರಾಗಿದ್ದಾರೆಯೇ ಎಂದೂ ಅರ್ಜಿದಾರರು ಮಾಹಿತಿ  ಬಯಸಿದ್ದರು. `ನಿಮ್ಮ ಪತ್ರದಲ್ಲಿ ತಿಳಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿಲ್ಲ' ಎಂದು ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಎಸ್. ಕೆ. ಮಲ್ಹೋತ್ರ ಭಟ್ಟಾಚಾರ್ಯ ಅವರ ಅರ್ಜಿಗೆ ಉತ್ತರವಾಗಿ ಬರೆದ ಪತ್ರದಲ್ಲಿ ತಿಳಿಸಿದರು. `ಈ ಪ್ರತಿಕ್ರಿಯೆ ಕಂಡು ನನಗೆ ಆಘಾತವಾಯಿತು' ಎಂದು ಭಟ್ಟಾಚಾರ್ಯ ಇದಕ್ಕೆ ಪ್ರತಿಕ್ರಿಯಿಸಿದರು. ನೇತಾಜಿ ಸುಭಾಶ್  ಚಂದ್ರ ಬೋಸ್ ಅವರು ಭಾರತ ಮತ್ತು  ಭಾರತದ ಜನತೆಗೆ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಜನರಿಗೆ ಇರುವ ಕೆಚ್ಚಿನ ಬಗ್ಗೆ  ಜಾಗೃತಿ  ಮೂಡಿಸಲು ಸಾಕಷ್ಟು  ಕೆಲಸ ಮಾಡಿರಬಹುದು. ಆದರೆ ಇದನ್ನು  ಸಮರ್ಥಿಸಲು ಬೇಕಾದ ಯಾವ ದಾಖಲೆಗಳೂ ಇಲ್ಲ' ಎಂದು ಸರ್ಕಾರ ಹೇಳುತ್ತದೆ ಎಂದು ಭಟ್ಟಾಚಾರ್ಯ ನುಡಿದರು. ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ್ದು ಮತ್ತು ಮಣಿಪುರದ ಮೋರೆಹ್ ನಲ್ಲಿ ಹಿಮ್ಮೆಟ್ಟುವ ಮುನ್ನ ಭಾರತದ ಮುಖ್ಯಭಾಗದ ಅತ್ಯಂತ ಸಮೀಪಕ್ಕೆ  ಈ ಸೇನೆ  ಬಂದಿತ್ತು ಎಂಬುದು ಐತಿಹಾಸಿಕ ವಾಸ್ತವಾಂಶ. ಆದರೆ ನನ್ನ ಅರ್ಜಿಗೆ ಸ್ಪಂದಿಸಿ ಈ ವಿಚಾರವನ್ನು ದಾಖಲೆಗೆ ಸೇರಿಸಲು ಸರ್ಕಾರ ನಿರಾಸಕ್ತವಾಗಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಕೇಂದ್ರೀಯ  ಆಡಳಿತಾತ್ಮಕ ಸುಧಾರಣಾ  ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಮತ್ತು  ಖ್ಯಾತ ಸಂಸ್ಕೃತ ವಿದ್ವಾಂಸ ವಾಸುದೇವ ಪೋದ್ದಾರ ಅವರನ್ನು ಸಂವಿಧಾನ  ತಜ್ಞ ಮಾಜಿ ರಾಜ್ಯಸಭಾ ಸದಸ್ಯ ಎಲ್. ಎಂ. ಸಿಂಘ್ವಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ದಶರಥ ಮಲ್ ಸಿಂಘ್ವಿ ಶತಮಾನೋತ್ಸವ ಆಚರಣೆ  ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ  ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ  ರಚಿಸಲಾದ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) `ಯುನೆಸ್ಕ್ಯಾಪ್' ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು. 

2006: ಧಾರವಾಡ, ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ 2006-07ನೇ ಸಾಲಿನಲ್ಲೂ 20 ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ಗುವಾಂಗ್ ಜೊನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಲಂಡನ್ನಿನಲ್ಲಿ ಈ ದಿನ ಜಸ್ಟಿನ್ ವಿಟ್ಟಿ ಎಂಬ ಮಹಿಳೆ ಹೆಣ್ಣು ಮಗು ಒಂದಕ್ಕೆ ಜನ್ಮನೀಡಿ ವಿಶಿಷ್ಠ ದಾಖಲೆ ನಿರ್ಮಾಣದ ಅಪರೂಪದ ಕೀರ್ತಿಗೆ ಪಾತ್ರಳಾದಳು. ಅಪರೂಪದ ಈ ದಾಖಲೆ ಏನೆಂದರೆ ಈ ಮಹಿಳೆ ಮತ್ತು ಆಕೆಯ ತಾಯಿ ಕೂಡಾ ಇದೇ ದಿನಾಂಕದಂದು ಹುಟ್ಟಿದ್ದು! ಇದರಿಂದಾಗಿ ಅಜ್ಜಿ, ತಾಯಿ ಮತ್ತು ಮೊಮ್ಮಗಳು ಈ ಮೂರು ತಲೆಮಾರಿನವರಿಗೆ ಒಂದೇ ದಿನ ಹುಟ್ಟುಹಬ್ಬ ಆಚರಿಸುವ ಯೋಗ ಲಭಿಸಿತು. ಪ್ರತಿ 1,33,225 ಜನರಲ್ಲಿ ಒಬ್ಬರು ಮಾತ್ರ ಈ ರೀತಿಯ ದಾಖಲೆಗೆ ಪಾತ್ರರಾಗುತ್ತಾರೆ.

2006: ಆಂಧ್ರ್ರಪ್ರದೇಶದ ಕರೀಂನಗರ ಜಿಲ್ಲೆಯ ಕಿಶನ್ ರಾವ್ ಪೇಟೆ ಗ್ರಾಮದಲ್ಲಿ ಜಿಲ್ಲಾ ಹೋಂಗಾರ್ಡ್ ಚಂದ್ರಲೀಲಾ (28) ಮತ್ತು ಕೈದಿ ಸ್ವಪ್ನಾ (25) ಎಂಬ ಇಬ್ಬರು ಮಹಿಳೆಯರು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ವಪ್ನಾ ಜಿಲ್ಲಾ ಕಾರಾಗೃಹದಲ್ಲಿ ಇದ್ದಾಗ ಇವರಲ್ಲಿ ಸ್ನೇಹ ಅಂಕುರಿಸಿ ಅದು ಪ್ರೇಮವಾಗಿ ಬೆಳೆದು ವಿವಾಹದಲ್ಲಿ ಪರ್ಯವಸಾನಗೊಂಡಿತು. ಗ್ರಾಮಸ್ಥರೂ ಈ ಜೋಡಿಯನ್ನು ಮನತುಂಬಿ ಹರಸಿದರು.

2006: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನವು 2005ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರನ್ನು ಆಯ್ಕೆ ಮಾಡಿತು.

2000: ಜಮೈಕಾದ ಕಿಂಗ್ ಸ್ಟನ್ನಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಟರ್ಿ್ನ ವಾಲ್ಷ್ ಅವರು ತಮ್ಮ 435ನೇ ವಿಕೆಟನ್ನು ಪಡೆದು ಕಪಿಲ್ ದೇವ್ ಅವರ 434 ಟೆಸ್ಟ್ ವಿಕೆಟ್ ದಾಖಲೆಯನ್ನು ಮುರಿದರು.

1979: ಭಾರತದ ಎಸ್. ವಿಜಯಲಕ್ಷ್ಮಿ ಹುಟ್ಟಿದ ದಿನ. ಈಕೆ ಚೆಸ್ ನಲ್ಲಿ ಭಾರತದ ಪ್ರಪ್ರಥಮ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆೆ ಪಾತ್ರರಾದರು.

1977: ಕ್ಯಾನರಿ ದ್ವೀಪದ ಲಾಸ್ ರ್ಹೋಡ್ಸ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಪಾನ್ ಅಮೆರಿಕನ್ ಮತ್ತು ಕೆ ಎಲ್ ಎಂ ಜಂಬೋ ವಿಮಾನಗಳು ಡಿಕ್ಕಿ ಹೊಡೆದು 574 ಮಂದಿ ಅಸು ನೀಗಿದರು. ಇದು ವಾಯುಯಾನ ಇತಿಹಾಸದ ಅತಿ ಭೀಕರ ದುರಂತ ಎನಿಸಿತು. 

1968: ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1958: ನಿಖಿತ ಕ್ರುಶ್ಚೇವ್ ಅವರು ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಹುದ್ದೆಯ ಜೊತೆಗೆ ಸೋವಿಯತ್ ಪ್ರಧಾನಿಯಾದರು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ಗಳ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ಡಿನ ಸ್ಥಾಪಕ ಸರ್ (ಫ್ರೆಡರಿಕ್) ಹೆನ್ರಿ ರಾಯ್ಸ್ (1863-1933) ಜನ್ಮದಿನ.

1845: ವಿಲ್ಹೆಮ್ ಕೊನ್ರಾಡ್ ರಾಂಟ್ ಜೆನ್ (1845-1923) ಹುಟ್ಟಿದ ದಿನ. ಜರ್ಮನ್ ಭೌತತಜ್ಞನಾದ ಈತ ಭೌತವಿಜ್ಞಾನಕ್ಕೆ ನೀಡಲಾಗುವ `ನೊಬೆಲ್' ಪ್ರಶಸ್ತಿಯನ್ನು 1901ರಲ್ಲಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಪಾರದರ್ಶಕವಲ್ಲದ ವಸ್ತುಗಳ ಮುಖಾಂತರ ಹಾದುಹೋಗುವ ಕ್ಷ-ಕಿರಣಗಳ (ಎಕ್ಸ್-ರೇಸ್) ಪತ್ತೆಗಾಗಿ ಈತನಿಗೆ ಈ ಪ್ರಶಸ್ತಿ ಲಭಿಸಿತು.

1625: ಮೊದಲನೆಯ ಜೇಮ್ಸ್ ಸಾವಿನ ಬಳಿಕ ಮೊದಲನೆಯ ಚಾರ್ಲ್ಸ್ ಇಂಗ್ಲಿಷ್ ಸಿಂಹಾಸನವನ್ನು ಏರಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement