Thursday, April 23, 2009

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 27:

 ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ


ಅಂತಹವನು ಶಬರಿ ಕಚ್ಚಿಕೊಟ್ಟ ಹಣ್ಣನ್ನು ತಿನ್ನುತ್ತಾನೆ, ಕಪಿ ರಾಜ ಸುಗ್ರೀವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ, ಶತ್ರು ಪಕ್ಷದ ವಿಭೀಷಣನೆಂಬ ರಾಕ್ಷಸನಿಗೆ ಸ್ನೇಹದ ಹಸ್ತವನ್ನು ಚಾಚುತ್ತಾನೆ, ಕಪಿ ಕುಲ ತಿಲಕ ಹನುಮಂತನ ಆಪ್ತ ಸಖನಾಗುತ್ತಾನೆ, ಬೇಟೆಗಾರ ಗುಹನ ಸ್ನೇಹ ಸಂಪಾದಿಸುತ್ತಾನೆ, ಪಕ್ಷಿ ರಾಜ ಜಟಾಯುವಿನ ಪ್ರಾಣ ಸಂಕಟದಲ್ಲಿರುವಾಗ ಮರುಗುತ್ತಾನೆ.

ಸಮಾಜದಲ್ಲಿ ಎರಡು ವರ್ಗಗಳು. ಒಂದು ಆಳುವ ವರ್ಗ, ಮತ್ತೊಂದು ಪ್ರಜಾ ವರ್ಗ. 
ಎರಡೂ ಸಮಾನಾಂತರ ಗತಿಯಲ್ಲಿ ಮುನ್ನಡೆಯುತ್ತಿರುತ್ತವೆ.

ಆಳುವವರು ಆಳುತ್ತಲೇ ಇರುತ್ತಾರೆ. ಅವರೆಂದೂ ಪ್ರಜೆಗಳ ಕೆಳಗೆ ಬರುವುದಿಲ್ಲ. ಹಾಗೆಯೇ, ಪ್ರಜೆಗಳು ಕೂಡ. ಅವರಿಗೆ ತಮ್ಮ ದಿನನಿತ್ಯದ ಜಂಜಡಗಳಿಂದ ಮೇಲೆದ್ದು ಆಳ್ವಿಕೆ ನಡೆಸುವಷ್ಟು ಚೈತನ್ಯವೇ ಉಳಿದಿರುವುದಿಲ್ಲ.

ಹಾಗಾಗಿ, ಆಳುವವರು ಉಳಿದವರನ್ನೆಲ್ಲ ತಮ್ಮ ಬಿಗಿ ಮುಷ್ಠಿಯಲ್ಲಿ ವಶಪಡಿಸಿಟ್ಟುಕೊಂಡಿರುತ್ತಾರೆ. ಅವರು ಯಾವತ್ತೂ ತಮ್ಮ ಅನುವರ್ತಿಗಳ ವಶವಾಗುವುದಿಲ್ಲ. ಅವರ ಸಾಮರ್ಥ್ಯ ಅವರನ್ನು ಇನ್ನೊಬ್ಬರ ವಶದಲ್ಲಿ ಇರಲು ಬಿಟ್ಟುಕೊಡುವುದಿಲ್ಲ.

ಇಂತಹ ನಡೆಗೆ ಅಪವಾದಗಳು ಇಲ್ಲದಿಲ್ಲ. ಆಳುವವರು ಯಥಾಪ್ರಕಾರ ತಮ್ಮ ಕರ್ತವ್ಯವೆಂಬಂತೆ ಆಳ್ವಿಕೆ ನಡೆಸುತ್ತಾರೆ. ಮತ್ತೊಂದೆಡೆ ಭಾವ ತೀವ್ರತೆಗೆ ಮಣಿದು ಪ್ರಜೆಗಳ ವಶಕ್ಕೂ ಹೋಗುತ್ತಾರೆ. ಸಂದರ್ಭಕ್ಕೆ ಉಚಿತವಾಗುವಂತೆ ವರ್ತಿಸುತ್ತಾ ಹೋಗುತ್ತಾರೆ. ಮತ್ತೂ ಹೇಳಬೇಕೆಂದರೆ ನಡೆ ಹಾಗ್ಹಾಗೆ ನಡೆದುಕೊಂಡು ಹೋಗುತ್ತದೆ.

ಇಂತಹ ನಡೆಗೆ ಬೇಕಾಗಿರುವುದು ಪ್ರೇಮವೆಂಬ ದೈವೀ ಭಾವ. ಅದು ಅವರನ್ನು ಪ್ರೇಮಿಸುವವರನ್ನು ಅವರ ವಶಕ್ಕೆ ತೆಗೆದುಕೊಳ್ಳಲು ಸಹಕರಿಸುತ್ತದೆ. ಅಂತೆಯೇ, ಇವರಿಗೆ ಇನ್ನಾರಲ್ಲೋ ಪ್ರೇಮ ಬಾಂಧವ್ಯ ಏರ್ಪಟ್ಟರೆ, ಅವರ ವಶದಲ್ಲಿರುವಂತೆಯೂ ಈ ಪ್ರೇಮ ನೋಡಿಕೊಳ್ಳುತ್ತದೆ.

ರಾಮಾಯಣವನ್ನೊಮ್ಮೆ ನೋಡಬೇಕು. ರಾಮ ಅಲ್ಲಿ ರಾಜ. ಎಲ್ಲರನ್ನೂ ಆಳುವವನು. ಆಳ್ವಿಕೆಯಲ್ಲಿ ರಾಮರಾಜ್ಯವೆಂಬ ಆದರ್ಶವನ್ನೇ ಕೊಟ್ಟವನು. ಅಂತಹವನು ಶಬರಿ ಕಚ್ಚಿಕೊಟ್ಟ ಹಣ್ಣನ್ನು ತಿನ್ನುತ್ತಾನೆ, ಕಪಿ ರಾಜ ಸುಗ್ರೀವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ, ಶತ್ರು ಪಕ್ಷದ ವಿಭೀಷಣನೆಂಬ ರಾಕ್ಷಸನಿಗೆ ಸ್ನೇಹದ ಹಸ್ತವನ್ನು ಚಾಚುತ್ತಾನೆ, ಕಪಿ ಕುಲ ತಿಲಕ ಹನುಮಂತನ ಆಪ್ತ ಸಖನಾಗುತ್ತಾನೆ, ಬೇಟೆಗಾರ ಗುಹನ ಸ್ನೇಹ ಸಂಪಾದಿಸುತ್ತಾನೆ, ಪಕ್ಷಿ ರಾಜ ಜಟಾಯುವಿನ ಪ್ರಾಣ ಸಂಕಟದಲ್ಲಿರುವಾಗ ಮರುಗುತ್ತಾನೆ, 

ಹೀಗೇ ಸಾಗುತ್ತ ವೃಕ್ಷ-ಪುಷ್ಪಗಳಿಗೆ, ಹಕ್ಕಿ-ಪಕ್ಷಿಗಳಿಗೆ, ನದಿ-ತೊರೆಗಳಿಗೆ ವಶವಾಗುತ್ತಾನೆ. ಅಷ್ಟಕ್ಕೇ ನಿಲ್ಲದೇ ಅವೂ ಅವನ ವಶವಾಗುತ್ತವೆ. 'ವಶ ಭಾವ' ಪರಸ್ಪರವಾಗುತ್ತದೆ.

ಹೀಗೆ ಪ್ರೀತಿ ವರ್ಗಭೇದಗಳನ್ನು ಮೀರಿ ಎಲ್ಲರನ್ನೂ ಬೆಳೆಸುತ್ತದೆ. ಒಂದು ಮತ್ತೊಂದರಲ್ಲಿ ಕರಗಲು, ಕಡೆಯಲ್ಲಿ ಒಂದಾಗಲು ಅನುವು ಮಾಡಿಕೊಡುತ್ತದೆ. ಪ್ರೀತಿ ಗೆಲ್ಲುತ್ತದೆ, ಗೆಲುವಿನ ನಗೆಯನ್ನು ಬೀರುತ್ತದೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
 

No comments:

Advertisement