Wednesday, April 8, 2009

ಇಂದಿನ ಇತಿಹಾಸ History Today ಏಪ್ರಿಲ್ 06

ಇಂದಿನ ಇತಿಹಾಸ

ಏಪ್ರಿಲ್ 6

ಉಳಿಹಿಡಿದು ಕೆತ್ತಿದಂಥ ದವಡೆ, ಅಜಾನುಬಾಹು ಮತ್ತು ಅನುರಣಿಸುವಂಥ ಧ್ವನಿಯ ಮಹಾನಟ ಚಾರ್ಲಟನ್ ಹೆಸ್ಟನ್ ಲಾಸ್ ಏಂಜಲಿಸಿನಲ್ಲಿ (ಹಿಂದಿನ ದಿನ ಏಪ್ರಿಲ್ 5ರ ರಾತ್ರಿ) ನಿಧನರಾದರು. ಟೆನ್ ಕಮಾಂಡ್ ಮೆಂಟ್ಸ್ ಎಂಬ ಅದ್ಭುತ ಸಿನೆಮಾದಲ್ಲಿ ಹೆಸ್ಟನ್ ಅವರು ಮೊಸೆಸ್ ಪಾತ್ರ ನಿರ್ವಹಿಸಿದ್ದರು.

2008: ಶ್ರೀಲಂಕೆಯ ಗಂಪಾ ಜಿಲ್ಲೆಯ ವೆಲಿವೆರಿಯಾದಲ್ಲಿ ಈದಿನ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಲಂಕಾದ ಹೆದ್ದಾರಿ ಖಾತೆ ಸಚಿವ ಜಯರಾಜ್ ಫರ್ನಾಂಡೋಪುಲೆ ಸೇರಿ 12 ಮಂದಿ ಮೃತರಾದರು. ಸಿಂಹಳ ಮತ್ತು ತಮಿಳರ ಹೊಸ ವರ್ಷಾಚರಣೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆಯಲ್ಲಿ ಈ ಬಾಂಬ್ ಸ್ಫೋಟಗೊಂಡಿತು.

2008: ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಕ್ಕೆ ತಿದ್ದುಪಡಿ ತರಲಾಯಿತು. ಇದರಿಂದಾಗಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ನಡೆಸುತ್ತಿದ್ದ ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬಂದಿತು. ಈ ವಿಷಯವನ್ನು ಸ್ವತಃ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಈದಿನ ಬಹಿರಂಗ ಪಡಿಸಿದರು. ಲಂಚ ಪಡೆಯುವಾಗ ಸಾಕ್ಷ್ಯ ಸಮೇತ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಬಹುದು, ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದಿಸುವ ಆರೋಪಕ್ಕೆ ಒಳಗಾದ ನೌಕರರ ಅಮಾನತು ಅಸಾಧ್ಯ ಎಂಬ ನಿಯಮ ಈವರೆಗೆ ಜಾರಿಯಲ್ಲಿತ್ತು. ಈ ನಿಯಮಕ್ಕೆ ತಿದ್ದುಪಡಿ ತರುವಂತೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕೆಲ ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಸರ್ಕಾರ ಆಸಕ್ತಿ ತೋರಿರಲಿಲ್ಲ. ಇದರಿಂದಾಗಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಅಕ್ರಮ ಆಸ್ತಿ ಪತ್ತೆ ಮಾಡಿದರೂ ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಲು ಒತ್ತಡ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಮಾಧ್ಯಮಗಳ ಮೂಲಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಕೋರಿದ್ದರು. ನೇರವಾಗಿ ಲಂಚ ಪಡೆಯುವುದು ಮತ್ತು ಅಕ್ರಮ ಆಸ್ತಿ ಸಂಪಾದನೆ ಎರಡನ್ನೂ ಒಂದೇ ರೀತಿ ನೋಡುವಂತೆ ಅವರು ಆಗ್ರಹಿಸಿದ್ದರು. ಹಿಂದಿನ ವಾರ ನಡೆದ ರಾಜ್ಯಪಾಲರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಿಢೀರನೆ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಿತ್ತು. ನಿಯಮ ಬದಲಾವಣೆಯ ಕೆಲಸಕ್ಕೂ ಚಾಲನೆ ದೊರೆತಿತ್ತು. ಆದರೆ  ಈ ವಿಷಯ ಕೆಲ ದಿನಗಳವರೆಗೂ ಗೋಪ್ಯವಾಗೇ ಉಳಿದಿತ್ತು. `ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಅನುಮೋದನೆ ದೊರೆತಿರುವ ವಿಷಯವನ್ನು ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನನಗೆ ತಿಳಿಸಿದ್ದಾರೆ. ರಾಜ್ಯಪಾಲರ ಸಲಹೆಗಾರರಾದ ಪಿ.ಕೆ.ಎಚ್. ತರಕನ್ ಈ ಸಂಬಂಧ ಪತ್ರವೊಂದನ್ನೂ ಬರೆದಿದ್ದಾರೆ' ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.

2008: ಮಹಿಳೆಯರನ್ನು ಅವರ ಬಣ್ಣದ ಆಧಾರದಲ್ಲಿ `ಕಪ್ಪು ಮಹಿಳೆ' ಎಂದು ಜರಿದರೆ, ಅಥವಾ `ಕುರೂಪಿ' ಎಂದು ಹಳಿದರೆ ಅದು ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯಾಗುತ್ತದೆ. ಇಂತಹ ವರ್ತನೆ ಶಿಕ್ಷಾರ್ಹ ಅಪರಾಧ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು. ಮಹಿಳೆಯನ್ನು ಆಕೆಯ ರೂಪ ಮತ್ತು ಬಣ್ಣದ ನೆಲೆಯಲ್ಲಿ ಜರಿದು ಮಾನಸಿಕ ಹಿಂಸೆ ನೀಡುವುದು ಆಕೆಗೆ ದೈಹಿಕ ಹಿಂಸೆ ನೀಡುವುದಕ್ಕಿಂತಲೂ ದೊಡ್ಡ ಅಪರಾಧ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾಯಮೂರ್ತಿ ಜೆ. ಎಂ. ಪಂಚಲ್ ಅವರನ್ನು ಒಳಗೊಂಡ ಪೀಠವು ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿಯಿತು. ಫರೂಕ್ ಬಟ್ಚಾ ಎಂಬಾತ ತನ್ನ ಪತ್ನಿ ಕಪ್ಪಗಿದ್ದಾಳೆ ಎಂದು ಹೇಳಿ ನಿಂದಿಸಿದ್ದರಿಂದ ಆಕೆ ಮದುವೆಯಾದ ಎರಡು ತಿಂಗಳಲ್ಲೇ ಸಾವಿಗೆ ಶರಣಾಗಿದ್ದಳು. ಅದಕ್ಕೆ ಮೊದಲು ಆಕೆ ತನ್ನ ಸಾವಿಗೆ ಕಾರಣ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಆರೋಪಿ ಪತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

2008: ಕೇಂದ್ರ ಸಚಿವ ಸಂಪುಟವನ್ನು ಪುನರ್ರಚನೆ ಮಾಡಲಾಯಿತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್, ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಜಿತಿನ್ ಪ್ರಸಾದ್ ಅವರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವರಾಗಿದ್ದ ಎಂ.ವಿ. ರಾಜಶೇಖರನ್ ಅವರ ರಾಜೀನಾಮೆಯೊಂದಿಗೆ ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಸ್ಥಾನ ಮೂರಕ್ಕೆ ಇಳಿದಂತಾಯಿತು. 

2008: ಉಳಿಹಿಡಿದು ಕೆತ್ತಿದಂಥ ದವಡೆ, ಅಜಾನುಬಾಹು ಮತ್ತು ಅನುರಣಿಸುವಂಥ ಧ್ವನಿಯ ಮಹಾನಟ ಚಾರ್ಲಟನ್ ಹೆಸ್ಟನ್ ಲಾಸ್ ಏಂಜಲಿಸಿನಲ್ಲಿ (ಹಿಂದಿನ ದಿನ ಏಪ್ರಿಲ್ 5ರ ರಾತ್ರಿ) ನಿಧನರಾದರು. ಟೆನ್ ಕಮಾಂಡ್ ಮೆಂಟ್ಸ್ ಎಂಬ ಅದ್ಭುತ ಸಿನೆಮಾದಲ್ಲಿ ಹೆಸ್ಟನ್ ಅವರು ಮೊಸೆಸ್ ಪಾತ್ರ ನಿರ್ವಹಿಸಿದ್ದರು. ಜೀವನದ ಮುಸ್ಸಂಜೆಯಲ್ಲಿ ಮರೆಗುಳಿ ರೋಗಕ್ಕೆ ತುತ್ತಾದ ಈ 84ರ ಹಿರಿಯ ಜೀವ ತಮ್ಮ ನಿವಾಸದಲ್ಲಿ ಜೀವಬಿಟ್ಟಾಗ ಪಕ್ಕದಲ್ಲಿ ಪತ್ನಿ ಲಿದಿಯಾ ಕಂಗಳಲ್ಲಿ ನೀರಾಡುತ್ತಿತ್ತು. 1950ರ ದಶಕದಲ್ಲಿ ತೆರೆಗೆ ಬಂದ ಬೆನ್ ಹರ್ ಚಿತ್ರದಲ್ಲಿ ನೀಡಿದ ಇವರ ಸತ್ವಯುತ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ ಬಂದಿತ್ತು.

2008: ಅನಾರೋಗ್ಯದಿಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಬಿ.ಎನ್. ಗೋಪಾಲಕೃಷ್ಣ ಬಂಗಾರಪೇಟೆಯಲ್ಲಿ ಹಿಂದಿನ ದಿನ ನಿಧನರಾದರು. ಬಿಇಎಂಎಲ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು, 1967ರಿಂದ 1996ರವರೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಮತ್ತು ವಾಲಿಬಾಲಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿ ಮತ್ತು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

2008: ಆದಾಯ ತೆರಿಗೆ ಇಲಾಖೆ ಫುಟ್ ಬಾಲ್ ಕ್ಲಬ್ ತಂಡದ ಮಾಜಿ ಆಟಗಾರ ಆರ್. ಕೋಟಿಲಿಂಗಂ (ಚಿಟ್ಟಿ) (56) ಈದಿನ ನಿಧನರಾದರು. ಕೋಟಿಲಿಂಗಂ 1975-76ರಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಫುಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. 

2007: ಸಹ್ಯಾದ್ರಿ ಮಡಿಲಿನ ಹುಟ್ಟೂರು ಕುಪ್ಪಳಿ ಸಮೀಪದಲ್ಲಿ ಕುವೆಂಪು ಸ್ಮಾರಕ ಇರುವ ಕವಿ ಶೈಲದ ಮುಂದಿನ ಸಂದೇಶ ವನದಲ್ಲಿ  ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪಾರ್ಥಿವ ಶರೀರವು ಮಧ್ಯಾಹ್ನ 3.30ಕ್ಕೆ ಸರ್ಕಾರಿ ಗೌರವದೊಂದಿಗೆ ಅಗ್ನಿಯಲ್ಲಿ ಲೀನವಾಯಿತು.

2007: ಏಕೀಕರಣ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಸಂಸದ ಅಳವಂಡಿ ಶ್ರೀನಿವಾಸಮೂರ್ತಿ ಸ್ವಾಮಿ (83) ಅವರು ಕಂಪ್ಲಿಯಲ್ಲಿ ನಿಧನರಾದರು. ವಂದೇಮಾತರಂ, ಲೋಕಸೇವಕ ಸಂಘ, ಅಖಿಲ ಭಾರತ ಮತದಾತಾ ಪರಿಷತ್ ಸಂಘಟನೆಗಳನ್ನು ಕಟ್ಟಿದ್ದ ಅಳವಂಡಿ, ಕರ್ನಾಟಕ ನಾಮಕರಣ ಚಳವಳಿ, ರೈತರ ಏಳಿಗೆಗಾಗಿ ಹೋರಾಟ, ಹೈದರಾಬಾದ್ ನಿಜಾಮನ ವಿರುದ್ಧ ಚಳವಳಿ -ಹೀಗೆ ಹತ್ತಾರು ಚಳವಳಿ, ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2007: ವಿಶ್ವಕಪ್ ಕ್ರಿಕೆಟ್ಟಿನಲ್ಲಿ ಭಾರತ ತಂಡವು ವಿಫಲವಾದುದಕ್ಕೆ ತಾವೂ ಕೂಡಾ ಹೊಣೆಗಾರರು ಎಂದು ಕೋಚ್ ಗ್ರೆಗ್ ಚಾಪೆಲ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ತಪ್ಪೊಪ್ಪಿಕೊಂಡು ವರದಿ ನೀಡಿದರು. ಭಾರತದ ಸೋಲಿನ ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

2007: ಉತ್ತರ ಪ್ರದೇಶದಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತಿಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠವು ನೀಡಿದ ತೀರ್ಪಿಗೆ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು. 

2006: ಬಿಜೆಪಿಯ ಭಾರತ ಸುರಕ್ಷಾ ಯಾತ್ರೆ ಆರಂಭಗೊಂಡಿತು. ಪಕ್ಷದ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರು ಗುಜರಾತಿನಲ್ಲಿ ಮತ್ತು ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಒರಿಸ್ಸಾದ ಪುರಿಯಲ್ಲಿ ಏಕಕಾಲಕ್ಕೆ ರಥಯಾತ್ರೆಗೆ ಚಾಲನೆ ನೀಡಿದರು.

2006: ಕೊಚ್ಚಿಯಲ್ಲಿ (ಕೋಚಿಯಲ್ಲಿ) ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ಏಳುದಿನಗಳ ಏಕದಿನ ಪಂದ್ಯಗಳಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿರುವಾಗಲೇ ಏಕದಿನ ಸರಣಿಯನ್ನು 4-0 ಅಂತರದಲ್ಲಿ ಗೆದ್ದುಕೊಂಡಿತು. 

2006: ನೌಕಾಪಡೆಯ ರಹಸ್ಯ ಯುದ್ಧ ದಾಖಲೆಗಳನ್ನು ಕದ್ದು ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯ ಚೀಫ್ ಅಡ್ಮಿರಲ್ ಅರುಣ್ ಪ್ರಕಾಶ್ ಅವರ ಸಂಬಂಧಿ ರವಿ ಶಂಕರನ್ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮೂವರು ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ ಐವರನ್ನು ಬಂಧಿಸಿದರು. ದೆಹಲಿ, ಗೋವಾ, ಚಂಡೀಗಢ, ಮುಂಬೈ ಸೇರಿದಂತೆ 17 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಯಿತು.

2001: ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಮ್ಮ 100ನೇ ವಿಕೆಟ್ ಗಳಿಸಿದ್ದಲ್ಲದೆ, 10,000 ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

1980: ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂಡಿತು.

1957: ಏಪ್ರಿಲ್ 5ರಂದು ಗಲ್ಲಿಗೆ ಹಾಕಬೇಕಾಗಿದ್ದ ಕೇರಳದ ಅಪರಾಧಿಗಳಿಗೆ ಮರಣದಂಡನೆ ತಪ್ಪಿಸಿ ಬೇರೆ ಶಿಕ್ಷೆ ವಿಧಿಸಿರುವುದಾಗಿ ಕೇರಳದ ಮುಖ್ಯಮಂತ್ರಿ ನಂಬೂದರಿ ಪಾಡ್ ತಿರುವಂತಪುರದಲ್ಲಿ ಪ್ರಕಟಿಸಿದರು. ಕಮ್ಯೂನಿಸ್ಟ್ ಕಾರ್ಯಕರ್ತ ವಾಸುಪಿಳ್ಳೈ ಅವರು ಮರಣದಂಡನೆಯಿಂದ ಮುಕ್ತಿ ಪಡೆದ ಅಪರಾಧಿಗಳಲ್ಲಿ ಒಬ್ಬರು.

1948: ಕಲಾವಿದ ಜ್ಞಾನಮೂರ್ತಿ ಎನ್. ಆರ್. ಜನನ.

1941: ಕಲಾವಿದ ಗುರುರಾಜದಾಸ್ ಜನನ.

1937: ಕಲಾವಿದ ರಾಮಮೂರ್ತಿ ಟಿ.ಎನ್. ಜನನ.

1930: ಬ್ರಿಟಿಷ್ ಸರ್ಕಾರ ಉಪ್ಪಿನ ಮೇಲೆ ಕರ ವಿಧಿಸಿದ್ದನ್ನು ಪ್ರತಿಭಟಿಸಿ ಬೆಳಿಗ್ಗೆ 8.30ರ ವೇಳೆಗೆ ಮಹಾತ್ಮಾ ಗಾಂಧೀಜಿಯವರು ದಂಡಿ ಸಮುದ್ರತೀರದಲ್ಲಿ ಸಾಂಕೇತಿಕವಾಗಿ ಉಪ್ಪು ತಯಾರಿಸಿದರು. ಅಹಮದಾಬಾದಿನ ಸಾಬರಮತಿ ಆಶ್ರಮದಿಂದ ತಮ್ಮ 79 ಮಂದಿ ಅನುಯಾಯಿಗಳೊಂದಿಗೆ ಅವರು ಮಾರ್ಚ್ 12ರಿಂದ ಪಾದಯಾತ್ರೆ ನಡೆಸಿ ಇಲ್ಲಿಗೆ ಆಗಮಿಸಿದ್ದರು. ಅವರ ಈ ಅಹಿಂಸಾತ್ಮಕ ಪ್ರತಿಭಟನೆ `ಉಪ್ಪಿನ ಸತ್ಯಾಗ್ರಹ' ಎಂದೇ ಖ್ಯಾತಿ ಪಡೆಯಿತು. 

1907: ಗಮಕ ಕಲಾವಿದ ಹು.ಮ. ರಾಮಾರಾಧ್ಯ (6-4-1907ರಿಂದ 20-12-1973) ಅವರು ಮಲ್ಲಾರಾಧ್ಯ- ಪಾರ್ವತಮ್ಮ ದಂಪತಿಯ ಮಗನಾಗಿ ನಂಜನಗೂಡು ಬಳಿಯ ಹುಲ್ಲುಹಳ್ಳಿಯಲ್ಲಿ ಜನಿಸಿದರು.

1896: ಆಧುನಿಕ ಕಾಲದ ಮೊತ್ತ ಮೊದಲ ಒಲಿಂಪಿಕ್ಸ್ ಅಥೆನ್ಸಿನಲ್ಲಿ ಆರಂಭಗೊಂಡಿತು. 1572 ವರ್ಷಗಳ ಬಳಿಕ ಅಮೆರಿಕದ ಜೇಮ್ಸ್ ಕೊನ್ನೋಲಿ ಮೊದಲ ಒಲಿಂಪಿಕ್ಸ್ ಚಾಂಪಿಯನ್ ಎನ್ನಿಸಿಕೊಂಡ. ಕ್ರಿ.ಶ.369ರಲ್ಲಿ ಕುಸ್ತಿಪಟು ಅರ್ಮೇನಿಯಾದ ರಾಜಕುಮಾರ ವರ್ಸಡೇಟ್ಸ್ ಚಾಂಪಿಯನ್ ಶಿಪ್ ಪಡೆದಿದ್ದ.

1886: ಮೀರ್ ಉಸ್ಮಾನ್ ಅಲಿಖಾನ್ (1886-1967) ಜನ್ಮದಿನ. ಈತ ಹೈದರಾಬಾದಿನ ಕೊನೆಯ ನಿಜಾಮ ಹಾಗೂ ಆ ಕಾಲದ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬನೆಂದು ಕೂಡಾ ಖ್ಯಾತನಾಗಿದ್ದ. 

1801: ಸರ್ ಹಗ್ ಹೆನ್ರಿ ರೋಸ್ (1801-1885) ಹುಟ್ಟಿದ ದಿನ. ಬ್ರಿಟಿಷ್ ಫೀಲ್ಡ್ ಮಾರ್ಷಲ್ ಆಗಿದ್ದ ಈತ 1857ರ ಸಿಪಾಯಿ ದಂಗೆ ಕಾಲದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ವಿರೋಧಕ್ಕೆ ಕೊನೆ ಹಾಡಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement