ಇಂದಿನ ಇತಿಹಾಸ
ಏಪ್ರಿಲ್ 10
ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೇ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜ ಮಹತ್ವದ ಪಾತ್ರ ವಹಿಸಿತು.
2008: ಐಐಟಿ, ಐಐಎಂ, ಎಐಐಎಂಎಸ್ ಮತ್ತಿತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ(ಓಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ ಈ ಮೀಸಲಾತಿ ಸೌಲಭ್ಯದಿಂದ ಕೆನೆಪದರವನ್ನು ಹೊರಗಿಟ್ಟಿದ್ದು ವಾರ್ಷಿಕ ರೂ 2.5 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿದ ಕುಟುಂಬಗಳನ್ನು ಕೆನೆಪದರ ವರ್ಗಕ್ಕೆ ಸೇರಿಸಿತು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಮೀಸಲಾತಿಯನ್ನು ಮರುವಿಮರ್ಶೆಗೆ ಒಳಪಡಿಸಬೇಕೆಂದೂ ನ್ಯಾಯಪೀಠ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯ್ದೆ - 2006ಕ್ಕೆ ಅವಿರೋಧವಾಗಿ ಒಪ್ಪಿಗೆ ನೀಡಿತು. ಈ `ಕಾಯ್ದೆ ಸಂವಿಧಾನದ ಮೂಲ ರಚನಾ ಕ್ರಮವನ್ನು ಉಲ್ಲಂಘಿಸಿಲ್ಲ. ಓಬಿಸಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.' ಎಂದು ಅದು ತಿಳಿಸಿತು. ಓಬಿಸಿಗಳಿಗೆ ಉದ್ಯೋಗ ಕಲ್ಪಿಸುವಾಗ ಕೆನೆಪದರವನ್ನು ಗುರುತಿಸಲು 1993ರ ಸೆಪ್ಟೆಂಬರ್ 8ರಂದು ಹೊರಡಿಸಿರುವ ಆದೇಶವೇ ಮಾನದಂಡ ಎಂದೂ ಅದು ತಿಳಿಸಿತು. ಈ ಕಾಯ್ದೆಯಡಿ ಮೀಸಲಾತಿ ಕಲ್ಪಿಸುವ ಕೋಟಾದಿಂದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರಗಿಟ್ಟ ನಿರ್ಧಾರವೂ ಸಮಂಜಸವಾಗಿದೆ ಎಂದು ಅದು ಹೇಳಿತು. ಕಾಯ್ದೆಯನ್ನು ಪ್ರಶ್ನಿಸಿ ಮೀಸಲಾತಿ ವಿರೋಧಿ ಕಾರ್ಯಕರ್ತರು ಸಲ್ಲಿಸಿದ್ದ ಹಲವು ಅರ್ಜಿಗಳ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿತು. ಸರ್ಕಾರದ ಈ ಮೀಸಲಾತಿ ನಿರ್ಧಾರವನ್ನು ಬಲವಾಗಿ ವಿರೋಧಿಸಿದ ಅರ್ಜಿದಾರರು, `ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯೇ ಮೂಲ ಆಧಾರವಲ್ಲ' ಎಂದು ಟೀಕಿಸಿದ್ದರು. ಮೀಸಲಾತಿ ನೀತಿಯಲ್ಲಿ ಕೆನೆಪದರವನ್ನು ಸೇರಿಸಿದ ಕ್ರಮವನ್ನು ಸಹ ಅರ್ಜಿದಾರರು ಪ್ರಶ್ನಿಸಿದ್ದರು. ಈ ತೀರ್ಪಿನಿಂದ ಓಬಿಸಿ ಮೀಸಲಾತಿ ಕಾಯ್ದೆಯನ್ನು ತಡೆಹಿಡಿದಿದ್ದ 2007ರ ಮಾರ್ಚ್ 29ರ ಮಧ್ಯಂತರ ಆದೇಶ ರದ್ದಾಯಿತು. ತೀರ್ಪಿನ ಪರಿಣಾಮವಾಗಿ ಒಟ್ಟಾರೆ ಉನ್ನತ ಶಿಕ್ಷಣದ ಮೀಸಲಾತಿ ಪ್ರಮಾಣ ಶೇ 49.5ಕ್ಕೆ ಏರಿದಂತಾಯಿತು.
2008: ಶೈತ್ಯಾಗಾರವುಳ್ಳ ವಾಹನದಲ್ಲಿ ಕುಳಿತು ಅಕ್ರಮವಾಗಿ ಥಾಯ್ಲೆಂಡಿಗೆ ಬರುತ್ತಿದ್ದ 54 ಜನ ಮ್ಯಾನ್ಮಾರ್ ವಲಸೆಗಾರರು ಉಸಿರುಗಟ್ಟಿ ಸಾವನ್ನಪ್ಪಿದರು. 6 ಮೀಟರ್ ಉದ್ದದ 2.2 ಮೀಟರ್ ಅಗಲದ ಈ ಕಂಟೇನರಿನಲ್ಲಿ 121 ಜನ ಒತ್ತಾಗಿ ಕುಳಿತಿದ್ದರು. ಸಮುದ್ರ ಉತ್ಪನ್ನಗಳನ್ನು ಸಾಗಿಸಲು ಈ ಶೀತಲೀಕೃತ ವಾಹನ ಬಳಸಲಾಗುತ್ತಿತ್ತು. ಆಮ್ಲಜನಕದ ಕೊರತೆಯಿಂದ 21 ಜನ ಅಸ್ವಸ್ಥರಾದರು. ಇತರ 46 ಜನರನ್ನು ಬಂಧಿಸಲಾಯಿತು. ಇವರೆಲ್ಲ ಮ್ಯಾನ್ಮಾರ್-ಥಾಯ್ ಗಡಿಯಿಂದ ಕೂಲಿ ಕೆಲಸ ಹುಡುಕಿಕೊಂಡು ಜನಪ್ರಿಯ ಪ್ರವಾಸಿ ದ್ವೀಪ ಫುಕೆಟ್ ಗೆ ತೆರಳಲು ಬಯಸಿದ್ದರು.
2008: ನೇಪಾಳದಲ್ಲಿ 240 ವರ್ಷಗಳ ಐತಿಹಾಸಿಕ ರಾಜಸತ್ತೆ ಆಳ್ವಿಕೆಗೆ ಇತಿಶ್ರೀ ಹಾಡಲು ನಡೆದ ಮೊದಲ ಚುನಾವಣೆಯಲ್ಲಿ ಶೇ 70ರಷ್ಟು ಮತದಾನ ನಡೆಯಿತು. ನೇಪಾಳದಾದ್ಯಂತ 20,800 ಕೇಂದ್ರಗಳಲ್ಲಿ ಬೆಳಿಗ್ಗೆ 7ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಸುಮಾರು 17 ದಶಲಕ್ಷ (1.70 ಕೋಟಿ) ಜನರು ಈ ಐತಿಹಾಸಿಕ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದರು.
2008: ಥಾಯ್ಲೆಂಡ್ ಸಾರ್ವಜನಿಕ ಆರೋಗ್ಯ ಸಚಿವ ಚೈಯ್ಯಾ ಸಸೊಮ್ ಸ್ಯಾಪ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಧಾನಿ ಸಮಕ್ ಸುಂದರವೇಜ್ ಅವರಿಗೆ ಮೌಖಿಕವಾಗಿ ತಿಳಿಸಿದರು. ಚೈಯ್ಯಾ ಅವರ ಪತ್ನಿ ಅಕ್ರಮವಾಗಿ ಖಾಸಗಿ ಕಂಪೆನಿಯ ಷೇರುಗಳನ್ನು ಹೊಂದಿರುವ ಕಾರಣಕ್ಕಾಗಿ ಸಮಕ್ ಅವರು ಚೈಯ್ಯಾ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದರು.
2007: ಸಾಂಪ್ರದಾಯಿಕವಾಗಿ ಅಗ್ನಿಸ್ಪರ್ಶ ಮಾಡುವ ಮೂಲಕ ಬಹಿರಂಗವಾಗಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ನಿರಾಕರಿಸಿದ ಲಂಡನ್ನಿನ ಸ್ಥಳೀಯ ಅಧಿಕಾರಿಗಳ ನಿರ್ಧಾರದ ನ್ಯಾಯಾಂಗ ಪರಾಮರ್ಶೆಗೆ ಇಂಗ್ಲೆಂಡ್ ಹೈಕೋರ್ಟ್ ಒಪ್ಪಿಗೆ ನೀಡಿತು. ದೇವೇಂದ್ರ ಕುಮಾರ ಘಾಯ್ ಎಂಬ 68 ವರ್ಷದ ಅಸ್ವಸ್ಥ ಹಿಂದೂ ಒಬ್ಬರು ಈ ನಿಟ್ಟಿನಲ್ಲಿ ನಡೆಸಿದ ಯತ್ನಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿತು. ಈಶಾನ್ಯ ಇಂಗ್ಲೆಂಡಿನಲ್ಲಿ ಮಂಜೂರಾತಿ ಪಡೆದ ಮೊತ್ತ ಮೊದಲ ನಿವೇಶನದಲ್ಲಿ 4000 ವರ್ಷಗಳಷ್ಟು ಪುರಾತನ ಪರಂಪರೆಯಾದ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ವರ್ಷದ ಹಿಂದೆ ನಡೆದಿದ್ದ ಯತ್ನವನ್ನು ಸ್ಥಳೀಯ ಆಡಳಿತವು `ಅಂತ್ಯಕ್ರಿಯೆ ಕಾನೂನಿನ ಉಲ್ಲಂಘನೆೆ ಆಗುತ್ತದೆ' ಎಂದು ಹೇಳಿ ನಿರ್ಬಂಧಿಸಿತ್ತು.
2007: ಅಮಾನತುಗೊಂಡ ಮುಖ್ಯನ್ಯಾಯಮೂರ್ತಿ ಇಫಿಕರ್ ಅಹ್ಮದ್ ಚೌಧರಿ ಅವರ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಂಗ ಮಂಡಳಿಯ (ಎಸ್ ಜೆ ಸಿ) ಶಾಸನಬದ್ಧತೆಯನ್ನೇ ಪ್ರಶ್ನಿಸಿದ ಎರಡು ಅರ್ಜಿಗಳನ್ನು ಅಂಗೀಕರಿಸಿದ ಪಾಕಿಸ್ಥಾನದ ಸುಪ್ರೀಂಕೋರ್ಟ್, ಅಧ್ಯಕ್ಷರ ಸಚಿವಾಲಯ ಹಾಗೂ ಕಾನೂನು ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿತು.
2007: ಭಾರತೀಯ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸುವುದು, ಶೋಷಣೆಗೆ ತಡೆಹಾಕುವುದು, ವೇತನ ಖಾತರಿ ನೀಡುವುದು ಸೇರಿದಂತೆ ವಿವಿಧ ಸವಲತ್ತುಗಳ ಭರವಸೆಯನ್ನು ನೇಮಕಾತಿ ಕಾಲದಲ್ಲೇ ನೀಡಲು ಕ್ರಮ ಕೈಗೊಳ್ಳುವಂತಹ ಮಹತ್ವದ ಕಾರ್ಮಿಕ ಒಪ್ಪಂದ ಒಂದಕ್ಕೆ ಕುವೈತ್ ಮತ್ತು ಭಾರತ ಸಹಿ ಹಾಕಿದವು. ಈ ನಿಟ್ಟಿನ ತಿಳುವಳಿಕೆ ಪತ್ರಕ್ಕೆ ಭಾರತದ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮತ್ತು ಕುವೈತಿನ ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವ ಶೇಖ್ ಸಬಾ ಅಲ್ ಖಲೀದ್ ಅಲ್- ಹಮದ್ ಅಲ್ ಸಬಾ ಸಹಿ ಮಾಡಿದರು.
2006: ಉತ್ತರಪ್ರದೇಶದ ಮೀರತ್ತಿನ ವಿಕ್ಟೋರಿಯಾ ಪಾರ್ಕಿನಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಗ್ರಾಹಕರ ವಸ್ತುಗಳ ವ್ಯಾಪಾರದ ಬ್ರಾಂಡ್ ಇಂಡಿಯಾ ಮೇಳದ ಕೊನೆಯ ದಿನ ಅಗ್ನಿ ಅನಾಹುತ ಸಂಭವಿಸಿ 50ಕ್ಕೂ ಹೆಚ್ಚು ಜನ ಮೃತರಾಗಿ 115ಕ್ಕೂ ಹೆಚ್ಚು ಜನ ಗಾಯಗೊಂಡರು. ಶಾರ್ಟ್ ಸರ್ಕಿಟಿನಿಂದ ಈ ದುರಂತ ಸಂಭವಿಸಿತು.
2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಕಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ಸದಸ್ಯರ ಪೀಠ ಈ ತೀರ್ಪು ನೀಡಿದ್ದು, ಇದರಿಂದ ಕರ್ನಾಟಕದ ಸುಮಾರು 17,000 ದಿನಗೂಲಿ ನೌಕರರ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿತು. 15 ವರ್ಷಗಳಿಂದ ದಿನಗೂಲಿ ನೌಕರರು ನಡೆಸುತ್ತಾ ಬಂದಿದ್ದ ಹೋರಾಟಕ್ಕೂ ಹಿನ್ನಡೆಯಾಯಿತು.
2006: ಕೀನ್ಯ ಸೇನಾ ಪಡೆಗೆ ಸೇರಿದ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಅದರಲ್ಲಿದ್ದ 14 ಮಂದಿ ಮೃತರಾದರು.
2006: ರಾಯಬರೇಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ಪಡೆಯುವ ನೆಹರೂ- ಗಾಂಧಿ ಕುಟುಂಬದ ಸಂಘಟನೆಗಳು ಸೇರಿದಂತೆ ಎಲ್ಲ ಸಾಮಾಜಿಕ, ಸಾಂಸ್ಕತಿಕ ಸಂಘಗಳಿಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡಿದರು.
2006: ಕೃಷ್ಣಮೃಗ ಬೇಟೆಯಾಡಿದ ಅಪರಾಧಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಜೋಧಪುರ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆ ವಿಧಿಸಿತು. ತೀರ್ಪು ನೀಡಿದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬ್ರಿಜೇಂದ್ರ ಕುಮಾರ ಜೈನ್ ಅವರು 25,000 ರೂಪಾಯಿಗಳ ದಂಡವನ್ನೂ ವಿಧಿಸಿದರು. ತೀರ್ಪು ಹೊರಬಿದ್ದ ಕೂಡಲೇ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 1998ರಲ್ಲಿ ಸಲ್ಮಾನ್ ಖಾನ್ ಮತ್ತು ಇತರ ಐವರು ಅಕ್ರಮವಾಗಿ ಬೇಟೆಯಾಡಿ ಕೃಷ್ಣಮೃಗವನ್ನು ಹತ್ಯೆ ಮಾಡಿದ ಆರೋಪಕ್ಕೆ ಒಳಗಾಗಿದ್ದರು.
2006: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ಎಂಬುದಾಗಿ ಹೆಸರು ನಮೂದಿಸಲು ಯತ್ನಿಸಿದ ಬೆಂಗಳೂರಿನ ಒಂಬತ್ತು ವರ್ಷದ ಬಾಲಕ ಕಿಷನ್ ಶ್ರೀಕಾಂತ್ ತನ್ನ 'ಸಾಧನೈ ಕೇರಾಫ್ ಪ್ಲಾಟ್ ಫಾರಂ' ತ್ರಿಭಾಷಾ ಚಿತ್ರದ ತಮಿಳು ಆವೃತ್ತಿಗಾಗಿ ಚಿತ್ರೀಕರಣ ಆರಂಭಿಸಿದ.
2000: ಜುಂಪಾ ಲಾಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ `ಇಂಟರ್ ಪ್ರೆಟರ್ ಆಫ್ ಮ್ಯಾಲಡೀಸ್' ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.
1995: ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈಯಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಮೃತರಾದರು.
1982: ಭಾರತದ ಇನ್ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು. ಇದು ಜಗತ್ತಿನ ಮೊತ್ತ ಮೊದಲ ಹವಾಮಾನ ಮತ್ತು ಸಂಪರ್ಕ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
1959: ಕಲಾವಿದೆ ಜ್ಯೋತಿ ಜನನ.
1957: ಶ್ರೀರಾಮ ನವಮಿ ಉತ್ಸವ ಮುಗಿಸಿ ಭದ್ರಾಚಲಂನಿಂದ ವಾಪಸಾಗುತ್ತಿದ್ದ ಭಕ್ತರ ದೋಣಿಯೊಂದು ಹೈದರಾಬಾದ್ ಸಮೀಪ ಗೋದಾವರಿ ನದಿಯಲ್ಲಿ ಮಗುಚಿ 70 ಜನ ಮೃತರಾದರು. ದೋಣಿಯಲ್ಲಿ ಸುಮಾರು 100 ಜನರಿದ್ದರು.
1943: ಕಲಾವಿದ ಕೃಷ್ಣಾನಂದ ರಾಜು ಜನನ.
1930: ಕಲಾವಿದ ಎಂ. ವಾದಿರಾಜ ಜನನ.
1924: ಕಲಾವಿದ ವೇಣುಗೋಪಾಲ್ ಬಿ.ಡಿ. ಜನನ.
1917: ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ (10-4-1917ರಿಂದ 25-1-1966) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.
1875: ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೇ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜ ಮಹತ್ವದ ಪಾತ್ರ ವಹಿಸಿತು.
1858: ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗತ್ತಿನ ಖ್ಯಾತ ಗಂಟೆ `ಬಿಗ್ ಬೆನ್' ನ್ನು ಎರಕಹೊಯ್ಯಲಾಯಿತು. 13.5 ಟನ್ ತೂಕದ ಈ ಗಂಟೆಗೆ ಆಗಿನ ಕಮೀಷನರ್ ಸರ್ ಬೆಂಜಮಿನ್ ಹಾಲ್ ಅವರ ಹೆಸರನ್ನು ಇಡಲಾಯಿತು. ಅತ್ಯಂತ ಉದ್ದನೆಯ ವ್ಯಕ್ತಿಯಾಗಿದ್ದ ಬೆಂಜಮಿನ್ `ಬಿಗ್ ಬೆನ್' ಎಂದೇ ಖ್ಯಾತಿ ಪಡಿದಿದ್ದರು.
1849: ವಾಲ್ಟೇರ್ ಹಂಟ್ ಅವರಿಗೆ `ಸೇಫ್ಟಿ ಪಿನ್' ಗೆ ಪೇಟೆಂಟ್ ಲಭಿಸಿತು. ತನ್ನ 15 ಡಾಲರ್ ಸಾಲವನ್ನು ತೀರಿಸುವ ಸಲುವಾಗಿ ಹಂಟ್ ಈ `ಸೇಫ್ಟಿ ಪಿನ್' ಸಂಶೋಧಿಸಿದನಂತೆ. ಇದನ್ನು ರೂಪಿಸಲು ಆತನಿಗೆ ತಗುಲಿದ ಸಮಯ ಕೇವಲ ಮೂರು ಗಂಟೆ. ಈ ಐಡಿಯಾವನ್ನು ಈತ 400 ಡಾಲರುಗಳಿಗೆ ಮಾರಾಟ ಮಾಡಿದ.
1847: ಜೋಸೆಫ್ ಪುಲಿಟ್ಜರ್ (1847-1911) ಹುಟ್ಟಿದ ದಿನ. ಅಮೆರಿಕಾದ ಖ್ಯಾತ ವೃತ್ತಪತ್ರಿಕಾ ಸಂಪಾದಕನಾದ ಈತ `ಪುಲಿಟ್ಜರ್ ಪ್ರಶಸ್ತಿ' ಹುಟ್ಟುಹಾಕಿ 1917ರಿಂದ ಪ್ರತಿವರ್ಷ ಅದನ್ನು ನೀಡುತ್ತಾ ಬಂದ.
1755: ಸ್ಯಾಮ್ಯುಯೆಲ್ ಹ್ಯಾನಿಮನ್ (1755-1843) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಸ್ಥಾಪಿಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment