Thursday, May 14, 2009

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 29:

ಹಿರಿತನಕ್ಕೊಂದು ನಮಸ್ಕಾರ

 'ಯಾವಾಗ ನೋಡಿದರೂ ಆಟ, ಆಟ. ಹೀಗೇ ಆದರೆ, ಮಕ್ಕಳು ಅನ್ನ ತಿನ್ನುತ್ತಾರೋ ಅಥವಾ ಮಣ್ಣೋ? ಗೊತ್ತಿಲ್ಲ. ಅವು ಏನು ಬೇಕಾದರೂ ಅಂದುಕೊಳ್ಳಲಿ, ನಾವಂತೂ ಅವಕ್ಕೆ ಮಣ್ಣು ತಿನ್ನಿಸುವ ಆಟದಲ್ಲಿ ಮುಳುಗಲು ಬಿಡಬಾರದು' ಎಂಬ ಸಂಕಲ್ಪ ತೊಡುತ್ತಾರೆ. 

ಚಿಕ್ಕ ಪ್ರಾಯ. ಆಟ ಆಡುವ ವಯಸ್ಸು. ಆಡುತ್ತಿರುವ ಆಟದ ಹೊರತಾಗಿ ಮತ್ತಾವುದರ ಚಿಂತೆಯೂ ಇಲ್ಲ. ಆಡುತ್ತಿರುವ ಆಟಕ್ಕೆ ಸರ್ವವೂ ಸಮರ್ಪಿತ. ಇದು ಮಕ್ಕಳ ಮುದ್ದು ಬಾಲ್ಯ. 

ಅದನ್ನು ದಾಟಿ ಬೆಳೆದವರ ಪರಿಸ್ಥಿತಿ ಹಾಗಿರುವುದಿಲ್ಲ. ಸದಾ ಏನಾದರೊಂದು ಸಾಧನೆಯ 
ತುಡಿತ, ಅದರೆಡೆಗೊಂದು ಓಟ. ಕಣ್ಣ ಮುಂದಿನದನ್ನು ನೋಡುತ್ತಾರೆ, ಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂಪಾದ ದನಿಯನ್ನು ಕೇಳುತ್ತಾರೆ, ಆಸ್ವಾದಿಸಲು ಆಗುವುದಿಲ್ಲ. ಆಹಾರವನ್ನು ಸೇವಿಸುತ್ತಾರೆ, ದೇಹದ ಯಜ್ಞೇಶ್ವರನಿಗೆ ಹವಿಸ್ಸಾಗಿಸಲು ಆಗುವುದಿಲ್ಲ.

ಒಂದು ರೀತಿಯ ಅರೆ-ಬರೆ ಜೀವನದ ಗೋಳು. ಕಂಡೂ ಕಾಣದ, ಕೇಳಿಯೂ ಕೇಳದ ಚಿತ್ತ ಚಾಂಚಲ್ಯ ಅದು. ಅದರಿಂದ ಪ್ರತಿಕ್ಷಣದ ಬದುಕಿನ ಸವಿಯನ್ನು ಸವಿಯಲು ಆಗುವುದಿಲ್ಲ. ಎಲ್ಲೋ, ಯಾವುದೋ ಕಾಲದಲಿ,್ಲ ಈಡೇರಬಹುದೇನೋ ಎಂಬ ಆಸೆಗೆ ವ್ಯತಿರಿಕ್ತ ರೀತಿಯಲ್ಲಿ ನೀರೆಯುವ ಹುನ್ನಾರ. ಆ ನೀರನ್ನು ಹೀರಿದ ಸಸಿ ಒರಟಾಗುತ್ತದೆ, ನಂತರ ಬಾಡಿ, ಬೆಂಡಾಗಿ, ಬೀಳುತ್ತದೆ.

ಸಾಮಾನ್ಯವಾಗಿ, ದೊಡ್ಡವರು ಆ ಒರಟುಗಟ್ಟುವ ಸಂದರ್ಭದಲ್ಲಿ ಮಕ್ಕಳು ಚಿಕ್ಕವರಿರುತ್ತಾರೆ. ಮೊದಲೇ ಹೇಳಿದಂತೆ ಆಟದಲ್ಲಿಯೇ ಮುಳುಗಿರುತ್ತಾರೆ. ಅದನ್ನು ಈ ದೊಡ್ಡವರಿಗೆ ನೋಡಲು ಆಗುವುದಿಲ್ಲ.

 'ಯಾವಾಗ ನೋಡಿದರೂ ಆಟ, ಆಟ. ಹೀಗೇ ಆದರೆ, ಮಕ್ಕಳು ಅನ್ನ ತಿನ್ನುತ್ತಾರೋ ಅಥವಾ ಮಣ್ಣೋ? ಗೊತ್ತಿಲ್ಲ. ಅವು ಏನು ಬೇಕಾದರೂ ಅಂದುಕೊಳ್ಳಲಿ, ನಾವಂತೂ ಅವಕ್ಕೆ ಮಣ್ಣು ತಿನ್ನಿಸುವ ಆಟದಲ್ಲಿ ಮುಳುಗಲು ಬಿಡಬಾರದು' ಎಂಬ ಸಂಕಲ್ಪ ತೊಡುತ್ತಾರೆ. 

ಆ ಸಂಕಲ್ಪ ಮಕ್ಕಳ ವನವಾಸಕ್ಕೆ ದಾರಿ ತೋರಿಸುತ್ತದೆ. ನಂತರ, ಆಟದ ಸುಖವಿಲ್ಲದ ಪಾಠ, ಚಪ್ಪರಿಸುವ ರುಚಿಯಿಲ್ಲದ ಊಟ, ನೆಮ್ಮದಿಯಿಲ್ಲದ ನಿದ್ರೆ, ಭಯವಿರುವ ಪೂಜೆ, ಸ್ವಾದವಿಲ್ಲದ ಜೀವನ ಸರಣಿ ಶುರುವಾಗುತ್ತದೆ.

ಆಗ, ಅವು ಕೇಳುವುದು ಒಂದೇ ಪ್ರಶ್ನೆ. 'ಅಪ್ಪ, ನಾನು ದೊಡ್ಡವನಾಗುವುದು ಯಾವಾಗ'?

ಅಪ್ಪ : ಹತ್ತು ಹದಿನೈದು ವರ್ಷ ಕಳೆದ ಮೇಲೆ.

ಮಗು : ಅಷ್ಟು ಕಳೆದ ಮೇಲೆ ನಾನು ನಿನಗಿಂತಲೂ ದೊಡ್ಡ ಆಗಬಹುದಾ?

ಅಪ್ಪ : ಇಲ್ಲ, ಇಲ್ಲ (ಎನ್ನುತ್ತಿದ್ದವನು ಮಗುವಿನ ಸಮಾಧಾನಕ್ಕೆ) ಹೌದು, ಹೌದು (ಮಗುವಿಗೆ ಕೇಳಿಸಿಯೂ ಕೇಳಿಸದಂತೆ ಹೇಳುತ್ತಾನೆ).

ಮಗು ಆದಷ್ಟು ಬೇಗ ದೊಡ್ಡದಾಗಲು ಬಯಸುತ್ತಲೇ ಅದರಪ್ಪ ಹಾಗೆಯೇ, ಅಷ್ಟೇ ದೊಡ್ಡವನಾಗಿ ಉಳಿಯಲೆಂದು ಆಶಿಸುತ್ತದೆ. ಅದರ ಆಸೆ ಇಷ್ಟೆ. ತನ್ನ ಸುಖ-ಸಂತೋಷಗಳಿಗೆ ಕಲ್ಲಾದವನಿಗೆ ಇನ್ನು ಮುಂದೆ ತನ್ನ ಇಚ್ಛೆಗೆ ಅಡ್ಡ ಬರಬೇಡ ಎಂದು ಗಟ್ಟಿಯಾಗಿ ಸಾರಬೇಕು ಮತ್ತು ಮಗುವಿನ ಬದುಕನ್ನು ಬದುಕಬೇಕು.

ಆದರೆ, ದುರಂತ ಎಂದರೆ ಮಗು ದೊಡ್ಡದಾಗುವ ಜೊತೆಯಲ್ಲಿಯೇ ಮಗುವಿನಂತೆ ಮುಗ್ಧ ಆಗುವ ಆಸೆ ಕಮರಿ ಹೋಗಿರುತ್ತದೆ. ಹಾಗಾಗಿ, ಅದು 'ದೊಡ್ಡವ'ರಂತೆಯೇ ಆಗಿ ತನ್ನ ಮಕ್ಕಳಿಗೆ ಹಿಂಸೆ ಕೊಡುತ್ತಿರುತ್ತದೆ.

ಆದ್ದರಿಂದ, ವಯಸ್ಸಿನ ದೊಡ್ಡತನವನ್ನು ಮಾತ್ರ ಬಯಸಬಾರದು. ಮನಸ್ಸಿನ ಗಟ್ಟಿತನ, ಹೃದಯದ ದೊಡ್ಡತನವನ್ನೂ ಬಯಸಬೇಕು, ಹಂಬಲಿಸಬೇಕು.

ಹಾಗಿರುವ ಹಿರಿಯರಿಗೆ ನಮಸ್ಕಾರ ಮಾಡುವುದಲ್ಲ, ತನ್ನಿಂದ ತಾನೇ ನಮಸ್ಕಾರ ಏರ್ಪಡುತ್ತದೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
 

No comments:

Advertisement