ಇಂದಿನ ಇತಿಹಾಸ
ಏಪ್ರಿಲ್ 29
ಭಾರತದ ಗೌರವ್ ಘಾಯ್ ಅವರು ಬೀಜಿಂಗಿನಲ್ಲಿ ಮುಕ್ತಾಯವಾದ ಐದು ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರಥಮ ಫೈನ್ ವ್ಯಾಲಿ ಬೀಜಿಂಗಿನ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು..
2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ 1989ರಿಂದ ಚೀನಾ ಸರ್ಕಾರದ ವಿರುದ್ಧ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ 17 ಮಂದಿಗೆ ಮೂರು ವರ್ಷ ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಲ್ಹಾಸಾದ ಜನತಾ ನ್ಯಾಯಾಲಯವು ಈದಿನ ಈ ಶಿಕ್ಷೆಯನ್ನು ಪ್ರಕಟಿಸಿದೆ ಎಂದು ಚೀನಾ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿತು. ಕಳೆದ ಮಾರ್ಚ್ ತಿಂಗಳಲ್ಲಿ ಲ್ಹಾಸಾ ಮತ್ತು ಇತರ ಕಡೆಗಳಲ್ಲಿ ಚೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ ಹಿಂಸಾಚಾರದಲ್ಲಿ 20 ಮಂದಿ ಸತ್ತಿದ್ದರು. ಇದಕ್ಕೆ ದಲೈ ಲಾಮ ಕಾರಣ ಎಂಬುದು ಚೀನಾ ಸರ್ಕಾರದ ಅರೋಪ. ಆದರೆ ದೇಶ ಭ್ರಷ್ಟರಾಗಿ ಭಾರತದಲ್ಲಿರುವ ದಲೈ ಲಾಮ ಈ ಆಪಾದನೆಯನ್ನು ನಿರಾಕರಿಸಿದ್ದರು.
2008: ಸುಮಾರು 26 ತಾಲಿಬಾನಿಗಳನ್ನು ಆಘ್ಘಾನಿಸ್ಥಾನದ ಮಿಲಿಟರಿ ಕಾರ್ಯಪಡೆ ಹತ್ಯೆ ಮಾಡಿತು.
2008: ಪಾಕಿಸ್ಥಾನಕ್ಕೆ ಹತ್ತಿರದಲ್ಲಿರುವ ಪೂರ್ವ ಆಘ್ಘಾನಿಸ್ಥಾನದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಕನಿಷ್ಠ 15 ಮಂದಿ ಆಘ್ಘನ್ನರು ಬಲಿಯಾಗಿ, 25ಮಂದಿ ಗಾಯಗೊಂಡರು ಎಂದು ನ್ಯಾಟೊ ನೇತೃತ್ವದ ಪಡೆಗಳ ವಕ್ತಾರ ತಿಳಿಸಿದರು.
2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.
2008: ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾದ ಸರಬ್ಜಿತ್ ಸಿಂಗ್ ಅವರನ್ನು ಭೇಟಿ ಮಾಡಿದ ಕುಟುಂಬದ ಸದಸ್ಯರು ಕ್ಷಮಾದಾನ ದೊರೆಯಬಹುದೆಂಬ ಭರವಸೆಯೊಂದಿಗೆ ಭಾರತಕ್ಕೆ ವಾಪಸಾದರು. ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ಥಾನದಲ್ಲಿ ಭೇಟಿ ಮಾಡಲು ಪತ್ನಿ ಸುಖಪ್ರೀತ್ ಸಿಂಗ್, ಸಹೋದರಿ ದಲ್ಬೀರ್ ಕೌರ್ ಹಾಗೂ ಪುತ್ರಿಯರಾದ ಸ್ವಪನ್ ದೀಪ್ ಮತ್ತು ಪೂನಂ ತೆರಳಿದ್ದರು.
ಸರಬ್ಜಿತ್ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ಥಾನ ಸರ್ಕಾರ ಮತ್ತೆ ಮೂರು ವಾರಗಳ ತಡೆಯಾಜ್ಞೆ ನೀಡಿದ್ದು `ಸಕಾರಾತ್ಮಕ ನಿಲುವು' ಎಂದು ಆತನ ಕುಟುಂಬ ಬಣ್ಣಿಸಿತು. 2008ರ ಏಪ್ರಿಲ್ 1ರಂದು ಸರಬ್ಜಿತ್ ನೇಣುಗಂಬಕ್ಕೇರಬೇಕಿತ್ತು. ಆದರೆ ಪಾಕ್ ಸರ್ಕಾರ ಅದನ್ನು 30 ದಿನ ಮುಂದೂಡಿತ್ತು. ಆ ಅವಧಿಯನ್ನು ಮತ್ತೆ ಮೂರು ವಾರಗಳ ಕಾಲ ಮುಂದೂಡಲಾಯಿತು.
2007: ಕಂಡು ಕೇಳರಿಯದ ನೈಜ ಗೋವಿನ ರಥೋತ್ಸವದೊಂದಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಸಂಘಟಿಸಿದ್ದ 10 ದಿನಗಳ ವಿಶ್ವ ಗೋ ಸಮ್ಮೇಳನಕ್ಕೆ ಸಡಗರದ ತೆರೆ ಬಿದ್ದಿತು. ಲಕ್ಷಾಂತರ ಮಂದಿ ಸಂಭ್ರಮೋತ್ಸಾಹದೊಂದಿಗೆ ಗೋ ರಥೋತ್ಸವ ವೀಕ್ಷಿಸಿದರು. ಅಭೂತಪೂರ್ವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಕಲಾ, ಭಜನಾ, ಸಂಕೀರ್ತನಾ ತಂಡಗಳು ಭಾಗವಹಿಸಿದ್ದವು. ಕುದುರೆ ಸಾರೋಟು, ನಾಲ್ಕು ಆನೆಗಳು, ಸಶಸ್ತ್ರ ದಳದವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಗೋ ತುಲಾಭಾರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೆಸ್ಸೆಸ್ ಸರಸಂಘ ಚಾಲಕ ಕೆ.ಸಿ. ಸುದರ್ಶನ್ ಪಾಲ್ಗೊಂಡಿದ್ದರು.
2007: ಭಾರತದ ಗೌರವ್ ಘಾಯ್ ಅವರು ಬೀಜಿಂಗಿನಲ್ಲಿ ಮುಕ್ತಾಯವಾದ ಐದು ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರಥಮ ಫೈನ್ ವ್ಯಾಲಿ ಬೀಜಿಂಗಿನ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು..
2007: ಉಕ್ಕು ಉದ್ಯಮ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರು ಸತತ ಮೂರನೇ ವರ್ಷ ಬ್ರಿಟಿನ್ನಿನ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದುಜಾ ಸಹೋದರರು ಮತ್ತು ಲಾರ್ಡ್ ಸ್ವರಾಜ್ ಪಾಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.
2006: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಠಿತ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ' ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಎನ್.ವಿ. ಜೋಶಿ ಅವರಿಗೆ ಲಭಿಸಿತು. ಇಲ್ಲಿಯವರೆಗೆ ಹಿರಿಯ ಪತ್ರಕರ್ತರಾದ ಎನ್. ಎಸ್. ಸೀತಾರಾಮ ಶಾಸ್ತ್ರಿ, ಅಮ್ಮೆಂಬಳ ಆನಂದ, ಸಿ.ಜಿ.ಕೆ.ರೆಡ್ಡಿ, ಬಾಬು ಕೃಷ್ಣಮೂರ್ತಿ, ಮಿಂಚು ಶ್ರೀನಿವಾಸ, ಎಸ್. ವಿ. ಜಯಶೀಲರಾವ್, ಎಂ.ಬಿ.ಸಿಂಗ್, ಜಿ.ನಾರಾಯಣ, ಎಸ್. ಪಟ್ಟಾಭಿರಾಮನ್, ಸಿ.ವಿ. ರಾಜಗೋಪಾಲ, ಸುರೇಂದ್ರ ದಾನಿ, ತುಮಕೂರಿನ ಪ್ರಜಾ ಪ್ರಗತಿ ಸಂಪಾದಕ ನಾಗಣ್ಣ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.
2001: ಅಮೆರಿಕದ ಕೋಟ್ಯಧೀಶ ಡೆನ್ನಿಸ್ ಟಿಟೋ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡರು. 60 ವರ್ಷ ವಯಸ್ಸಿನ ಇವರು ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ರಷ್ಯದ ರಾಕೆಟ್ ಮೂಲಕ 20 ದಶಲಕ್ಷ ಡಾಲರ್ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ `ಮೋಜಿನ ಹಾರಾಟ' ನಡೆಸಿದರು. 2002ರ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕದ ಮಾರ್ಕ್ ಶಟ್ಲ್ ವರ್ತ್ ಎರಡನೇ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎಂಬ ಹೆಸರಿಗೆ ಪಾತ್ರರಾದರು.
1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.
1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಿಸು ಸಂಗಮೇಶ (29-4-1929ರಿಂದ 29-5-2001) ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಸಿದ್ದರಾಮಪ್ಪ-- ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಅವರ ಮೊದಲಿನ ಹೆಸರು ಸಂಗಮೇಶ ಸಿದ್ದಾಮಪ್ಪನಗೊಂಡ. 80ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ ಮೂಲಕ ಶಿಶು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿರುವ ಸಿಸು ಸಂಗಮೇಶ ಅವರು ಇತರ ವಿಚಾರಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
1848: ಭಾರತದ ಖ್ಯಾತ ವರ್ಣಚಿತ್ರಗಾರ ರಾಜಾ ರವಿ ವರ್ಮ (1848-1912) ಜನ್ಮದಿನ.
1630: ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರು ಈದಿನ ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ಜನಿಸಿದರು.
1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬನಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತನಾದ. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment