ಇಂದಿನ ಇತಿಹಾಸ
ಜೂನ್ 14
ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
2007: ರಾಷ್ಟ್ರಪತಿ ಸ್ಥಾನಕ್ಕೆ ಸಂಯಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿ ಎ) ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲರಾದ ಪ್ರತಿಭಾ ದೇವಿಸಿಂಗ್ ಪಾಟೀಲ್ (72) ಆಯ್ಕೆಯಾದರು. ಹಲವು ಸುತ್ತಿನ ಕಸರತ್ತಿನ ಬಳಿಕ ಪ್ರತಿಭಾ ಪಾಟೀಲ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಯುಪಿ ಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಭಾ ಆಯ್ಕೆ ವಿಚಾರವನ್ನು ಪ್ರಕಟಿಸಿದರು.
2007: ಒಟ್ಟು 5,608 ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾನದಿಯ ಕೆಳಗೆ ಕೊಳವೆಯೊಳಗೆ ಸಾಗುವಂತಹ 13.7 ಕಿ.ಮೀ. ಉದ್ದದ (ಇದರಲ್ಲಿ ನದಿಯ ಕೆಳಗಿನ ದೂರ 8 ಕಿ.ಮೀ) ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಸಿರು ನಿಶಾನೆ ತೋರಿಸಿತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನೀರಿನ ಅಡಿಯಲ್ಲಿ ಸಾಗುವ ಈ ರೈಲು ಮಾರ್ಗವು ಹೌರಾ ನಿಲ್ದಾಣ ಮತ್ತು ಸಾಲ್ಟ್ ಲೇಕ್ ನಡುವೆ ಸಂಪರ್ಕ ಕಲ್ಪಿಸುವುದು.
2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮುಬೀನಾ ಭಿವಂಡಿವಾಲಾ ಮತ್ತು ಜೈಬುನ್ನೀಸಾ ಖಾಜಿ ಎಂಬ ಇಬ್ಬರು ಮಹಿಳೆಯರಿಗೆ ವಿಶೇಷ ಟಾಡಾ ನ್ಯಾಯಾಲಯವು ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.
2007: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ `ಇಂಡಿಯನ್' ನ (ಹಿಂದಿನ ಇಂಡಿಯನ್ ಏರ್ ಲೈನ್ಸ್) ಸುಮಾರು 15,000 ಭೂ ಸೇವಾ ಸಿಬ್ಬಂದಿ ತಮ್ಮ ದೇಶವ್ಯಾಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡರು. ವೇತನ ಬಾಕಿ ಹಾಗೂ ಬಡ್ತಿ ಸಂಬಂಧಿ ಬಿಕ್ಕಟ್ಟು ಬಗೆಹರಿಸುವುದಾಗಿ ಆಡಳಿತ ಮಂಡಳಿ ಹಾಗೂ ವಿಮಾನಯಾನ ಸಚಿವಾಲಯ ನೀಡಿದ ಭರವಸೆ ಅನುಸರಿಸಿ ಮುಷ್ಕರ ನಿರತರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.
2006: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ ಭಟ್ ಅವರನ್ನು ಗುರಿಯಾಗಿಟ್ಟುಕೊಂಡು ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಕಚೇರಿಯಲ್ಲಿ ಗುಂಡು ಹಾರಿಸಿ ಪರಾರಿಯಾದರು. ಈ ವೇಳೆಯಲ್ಲಿ ಮಹೇಶ ಭಟ್ ಕಚೇರಿಯಲ್ಲಿ ಇರಲಿಲ್ಲ. ಗುಂಡೇಟಿನಿಂದ ಯಾರೂ ಗಾಯಗೊಳ್ಳಲಿಲ್ಲ.
2006: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇವರ ದಾಸಿಮಯ್ಯ ಅವರ ಸಾಧನೆ, ಬರವಣಿಗೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪೀಠ ಸ್ಥಾಪನೆ. ಪೀಠಕ್ಕೆ 2006-07 ಸಾಲಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿತು.
2001: ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.
1969: ಜರ್ಮನಿಯ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಜನ್ಮದಿನ. 1988ರಲ್ಲಿ ಒಲಿಂಪಿಕ್ ಸ್ವರ್ಣ ಹಾಗೂ ಎಲ್ಲ ಪ್ರಮುಖ ಟೆನಿಸ್ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಈಕೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್' ಪಡೆದುಕೊಂಡರು.
1960: ಕಲಾವಿದ ಜಿ. ಜೈಕುಮಾರ್ ಜನನ.
1958: ಅಮೆರಿಕದ ಸ್ಕೇಟರ್ ಎರಿಕ್ ಹೀಡನ್ ಜನ್ಮದಿನ. 1980ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊತ್ತ ಮೊದಲ ಅಮೆರಿಕನ್ ಸ್ಕೇಟರ್ ಈ ವ್ಯಕ್ತಿ.
1956: ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ (ಕುಲಪತಿ) ಆಗಿ ಮಹಾರಾಜಾ ಕಾಲೇಜು ಪ್ರಿನ್ಸಿಪಾಲ ಕೆ.ವಿ. ಪುಟ್ಟಪ್ಪ ಅವರನ್ನು ಸರ್ಕಾರ ನೇಮಿಸಿತು. ಹಾಲಿ ವೈಸ್ ಛಾನ್ಸಲರ್ ಪ್ರೊ. ವಿ.ಎಲ್. ಡಿಸೌಜಾ ಅವರ ಸ್ಥಾನಕ್ಕೆ ಪುಟ್ಟಪ್ಪ ಅವರು ನೇಮಕಗೊಂಡರು.
1953: ಕಲಾವಿದ ಬಾನಂದೂರು ಕೆಂಪಯ್ಯ ಜನನ.
1947: ಮೌಂಟ್ ಬ್ಯಾಟನ್ ಯೋಜನೆಯ ಭಾರತ ವಿಭಜನೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ನವದೆಹಲಿಯಲ್ಲಿ ಈದಿನ ಸಭೆ ಸೇರಿತು.
1937: ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1933: ಸಾಹಿತಿ, ಮನೋವಿಜ್ಞಾನ ಪ್ರಾಧ್ಯಾಪಕ, ಜೈನ ಸಿದ್ಧಾಂತಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ. ಎ.ಎಸ್. ಧರಣೇಂದ್ರಯ್ಯ (14-6-1933ರಿಂದ 8-4-2000) ಅವರು ಸಿಂದಪ್ಪ ಶೆಟ್ಟರು- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಅಡಗೂರು ಗ್ರಾಮದಲ್ಲಿ ಜನಿಸಿದರು.
1929: ಕಲಾವಿದ ಬಿ.ವಿ. ನಂಜುಂಡಯ್ಯ ಜನನ.
1909: ಇಎಂಎಸ್ ನಂಬೂದರಿಪಾಡ್ (1908-1998) ಜನ್ಮದಿನ. ಭಾರತದ ಕಮ್ಯೂನಿಸ್ಟ್ ನಾಯಕರಾದ ಇವರು 1957ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿ, ಜಗತ್ತಿನಲ್ಲೇ ಮುಕ್ತ ಚುನಾವಣೆ ಮೂಲಕ ಅಧಿಕಾರಕ್ಕೆ ಏರಿದ ಮೊದಲ ಕಮ್ಯೂನಿಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿದರು.
1868: ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೇನರ್ ಜನನ. ರಕ್ತದ ಗುಂಪುಗಳನ್ನು ಕಂಡು ಹಿಡಿದುದಕ್ಕಾಗಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.
1800: ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಇಟಲಿಯ ಅಲೆಸ್ಸಾಂಡ್ರಿಯ ಸಮೀಪದ ಮರೆಂಗೋದಲ್ಲಿ ನಡೆದ ನಡೆದ ಸಮರದಲ್ಲಿ ಆಸ್ಟ್ರಿಯನ್ನರನ್ನು ನೆಪೋಲಿಯನ್ ಸೋಲಿಸಿದ. ಫ್ರೆಂಚ್ ಜನರಲ್ ಲೂಯಿ ಚಾರ್ಲ್ಸ್ ಡೆಸಾಯಿಕ್ಸ್ ಯುದ್ಧದಲ್ಲಿ ಹತನಾದ.
1777: ಅಮೆರಿಕನ್ ಕಾಂಗ್ರೆಸ್ `ನಕ್ಷತ್ರ ಮತ್ತು ಪಟ್ಟಿ'ಗಳಿರುವ (ಸ್ಟಾರ್ ಅಂಡ್ ಸ್ಟ್ರೈಪ್ಸ್) ಧ್ವಜವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಧ್ವಜವಾಗಿ ಅಂಗೀಕರಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment