ಇಂದಿನ ಇತಿಹಾಸ
ಜೂನ್ 22
ವರ್ಜೀನಿಯಾದಲ್ಲಿ ನಡೆದ ಆಕರ್ಷಣೀಯ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಯುದ್ಧವಿಮಾನಗಳನ್ನು ಇಳಿಸಬಹುದಾದ ಬೃಹತ್ ನೌಕೆ `ಐಎನ್ಎಸ್ ಜಲಾಶ್ವ'ವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಭಾರತೀಯ ನೌಕಾಪಡೆಯಲ್ಲಿ ಮೊದಲ ಬಾರಿ ಇಂತಹ ನೌಕೆ ಅಳವಡಿಸಲಾಗಿದ್ದು, ಅಮೆರಿಕದಿಂದ ಇದನ್ನು ಪಡೆಯಲಾಗಿದೆ.
2008: ಇರಾಕ್ನ ಈಶಾನ್ಯ ಭಾಗದಲ್ಲಿರುವ ಬಕುಬಾ ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಚಯದ ಎದುರು ಮಹಿಳೆಯೊಬ್ಬಳು ತಾನು ತೊಟ್ಟ ಕಪ್ಪು ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡ ಬಾಂಬ್ನ್ನು ಸ್ಪೋಟಿಸಿ 15 ಜನರ ಸಾವಿಗೆ ಕಾರಣವಾದ ದುರಂತ ಘಟನೆ ನಡೆಯಿತು. ದುರಂತದಲ್ಲಿ 40 ಜನರು ಗಾಯಗೊಂಡರು. ಉಗ್ರವಾದಿ ಸಂಘಟನೆಗೆ ಸೇರಿದ ಮಹಿಳೆಯರು ಈ ವರ್ಷ ನಡೆಸಿದ 21ನೇ ಆತ್ಮಹತ್ಯಾ ಸ್ಪೋಟ ಇದು.
2007: ಪ್ರತಿಕೂಲ ಹವಾಮಾನದಿಂದ ಮತ್ತೊಂದು ದಿನವನ್ನು ಬಾಹ್ಯಾಕಾಶದಲ್ಲೇ ಕಳೆದ ಅಟ್ಲಾಂಟಿಸ್ ನೌಕೆ ಕೊನೆಗೂ ಈದಿನ ನಸುಕಿನ 1.20ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ಅಟ್ಲಾಂಟಿಸ್ ನಭದಲ್ಲಿ ಕಾಣುತ್ತಿದ್ದಂತೆಯೇ ಎಲ್ಲರೂ ಉಸಿರು ಬಿಗಿಹಿಡಿದು ಸುರಕ್ಷಿತ ಭೂಸ್ಪರ್ಶಕ್ಕೆ ಪ್ರಾರ್ಥಿಸಿದರು. ಈ ಎಲ್ಲ ಪ್ರಕ್ರಿಯೆಯನ್ನು ವಿಶ್ವದ ಬಹುತೇಕ ಟೆಲಿವಿಷನ್ ಚಾನೆಲ್ಲುಗಳು ನೇರ ಪ್ರಸಾರ ಮಾಡಿದವು. ಆಕಾಶದಲ್ಲಿ ಎರಡು ಸುತ್ತು ಬಂದ ಅಟ್ಲಾಂಟಿಸ್ ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮೊದಲೇ ತಾಣದಲ್ಲಿ ಬಂದು ನಿಂತಿತು. ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿರುವ ಸಂದೇಶ ನೌಕೆಯಿಂದ ಬಂತು. ಇದಕ್ಕೂ ಮುನ್ನ ಫ್ಲಾರಿಡಾದಲ್ಲಿಯೇ ಗಗನ ನೌಕೆಯನ್ನು ಇಳಿಸುವ ಪ್ರಯತ್ನವನ್ನು ನಾಸಾ ಕೈಬಿಟ್ಟಿತ್ತು. ಬದಲಿಗೆ ಕ್ಯಾಲಿಫೋರ್ನಿಯಾದಲ್ಲಿ ಈದಿನ ಬೆಳಗಿನ 1.20ಕ್ಕೆ ಇಳಿಸಲು ಅನುಮತಿ ನೀಡಿತು. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಸುತ್ತಲೂ ಕಾರ್ಮೋಡ ಕವಿದದ್ದರಿಂದ ಹಾಗೂ ಗುಡುಗಿನಿಂದ ಕೂಡಿದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದುದರಿಂದ ಹಿಂದಿನ ದಿನ ಮಧ್ಯರಾತ್ರಿ 2 ಬಾರಿ ಭೂಸ್ಪರ್ಶ ಮುಂದೂಡಲಾಗಿತ್ತು. ಆ ನಂತರ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಎಡ್ವರ್ಡ್ ವಾಯುನೆಲೆಯಲ್ಲಿ ಶಟ್ಲ್ ನೌಕೆ ಇಳಿಯುವಂತೆಯೂ ನೌಕೆಯ ಕಕ್ಷೆಯನ್ನು ಸಿದ್ಧಪಡಿಸಿದರು. ಭೂಮಿಯ ವಾತಾವರಣ ಪ್ರವೇಶಿಸುವಾಗಿನ ಅಸಾಧ್ಯ ಉಷ್ಣಾಂಶ ತಡೆದುಕೊಳ್ಳಲು ಸಾಧ್ಯವಾಗುವಂತೆ ನೌಕೆಯ ಹೊರಮೈಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಳವಡಿಸಿರುವ ಸೆರಾಮಿಕ್ ಹೆಂಚುಗಳು ಹಾಳಾಗುವ ಸಾಧ್ಯತೆಯಿರುವುದರಿಂದ ಮಳೆಯಲ್ಲಿ ನೌಕೆ ಭೂಸ್ಪರ್ಶ ಮಾಡುವಂತಿರಲಿಲ್ಲ. ಆದರೂ ಹಿಂದಿನ ದಿನ ಮಧ್ಯರಾತ್ರಿ ಫ್ಲಾರಿಡಾದಲ್ಲೇ ನೌಕೆ ಇಳಿಸಲು ನಾಸಾ ಎರಡು ಬಾರಿ ಯತ್ನಿಸಿತ್ತು. ಈ ಪೈಕಿ ರಾತ್ರಿ 11.48ರ ಮೊದಲ ಯತ್ನ ಕೈಬಿಡಲಾಯಿತು. ಹವಾಮಾನ ಕೈಕೊಟ್ಟು ಈ ಪ್ರಯತ್ನಗಳು ವಿಫಲವಾದ ಬಳಿಕ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಅಟ್ಲಾಂಟಿಸ್ ಇಳಿಸಲು ನಾಸಾ ಅನುಮತಿ ನೀಡಿತ್ತು. ಇಷ್ಟಾದ ಬಳಿಕ ಅಟ್ಲಾಂಟಿಸ್ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಮತ್ತು ಪೈಲಟ್ ಲೀ ಅವರು ಕಕ್ಷೆಯಿಂದ ಗಗನ ನೌಕೆಯನ್ನು ಭೂಮಿಯತ್ತ ತಿರುಗಿಸುವ ಸಾಧನ ಚಾಲು ಮಾಡಿದರು. ಅಟ್ಲಾಂಟಿಸ್ ಭೂಸ್ಪರ್ಶದ ಸುದ್ದಿ ಕೇಳಲು ವಿಶ್ವದಾದ್ಯಂತ ಕಾತರರಾಗಿದ್ದ ಜನ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ನೌಕೆಯಲ್ಲಿನ 7 ಗಗನಯಾತ್ರಿಗಳ ಸುರಕ್ಷತೆಗಾಗಿ ಪ್ರಾರ್ಥಿಸಿದ್ದರು. ಈ ಗಗನಯಾತ್ರೆ ಕಾಲದಲ್ಲಿ ಸುನೀತಾ ವಿಲಿಯಮ್ಸ್ ಅವರು 195 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಿಶ್ವದಾಖಲೆ ಸ್ಥಾಪಿಸಿದರು. 1996ರಲ್ಲಿ ರಷ್ಯಾ ಗಗನಯಾತ್ರಿ ಶಾನನ್ ಲುಸಿಡ್ 188 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ಸುನೀತಾ ಅವರ ಮೊದಲ ಗಗನಯಾತ್ರೆಯಾಗಿದ್ದರೂ ನಾಲ್ಕು ಬಾರಿ ಬಾಹ್ಯಾಕಾಶದಲ್ಲಿ ನಡಿಗೆ ನಡೆಸಿದ ಅನುಭವಿ ಎಂಬ ಹೆಸರನ್ನೂ ಗಳಿಸಿಕೊಂಡರು.
2007: ರಾಷ್ಟ್ರಪತಿ ಸ್ಥಾನಕ್ಕೆ ಪುನಃ ಸ್ಪರ್ಧಿಸದಿರಲು ರಾಷ್ಟ್ರಪತಿ ಅಬ್ದುಲ್ ಕಲಾಂ ಕೊನೆಗೂ ನಿರ್ಧರಿಸಿದರು. ಇದರಿಂದಾಗಿ ಈ ಕುರಿತ ಅನುಮಾನಗಳಿಗೆಲ್ಲ ತೆರೆ ಬಿದ್ದಂತಾಯಿತು. ಈ ಬೆಳವಣಿಗೆಯಿಂದಾಗಿ ಎನ್ ಡಿಎ ಮತ್ತು ಯುಎನ್ ಪಿಎ (ತೃತೀಯ ರಂಗ) ತಾತ್ಕಾಲಿಕ ಹೊಂದಾಣಿಕೆಯೂ ಕೊನೆಗೊಂಡಿತು. ಗೆಲುವು ನಿಶ್ಚಿತವಾದರೆ ಮಾತ್ರ ಸ್ಪರ್ಧಿಸುವುದಾಗಿ ಸೂಚನೆ ನೀಡಿದ್ದ ಕಲಾಂ, ತಾವು ಎರಡನೇ ಬಾರಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಈದಿನ ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಎನ್ ಡಿಎ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ ಅವರನ್ನು ಬೆಂಬಲಿಸುವುದಾಗಿ ತಿಳಿಸಿತು.
2007: ಎರಡು ವರ್ಷಗಳ ಹಿಂದೆ ನಡೆದ ತನ್ನ ಪತಿಯ ಹತ್ಯೆಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಪ್ರತಿಭಾ ಪಾಟೀಲ್ ಸಹೋದರನ ಕೈವಾಡ ಇರುವುದಾಗಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ದಿವಂಗತ ವಿ.ಜಿ. ಪಾಟೀಲ್ ಅವರ ವಿಧವಾ ಪತ್ನಿ ಪ್ರೊ. ರಜನಿ ಪಾಟೀಲ್ ಆರೋಪಿಸಿದರು. ಆದರೆ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸಿತು. ಶಿರೋಮಣಿ ಅಕಾಲಿದಳ ಮುಖಂಡ ಸುಖ್ ದೇವ್ ಸಿಂಗ್ ಧಿಂಡ್ಸಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರಾದ ಎ.ಬಿ. ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರಿಗೆ ಆಪ್ತರಾದ ಸುಧೀಂದ್ರ ಕುಲಕರ್ಣಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಲಗಾಂವ್ ಕಾಲೇಜಿನ ಮರಾಠಿ ಪ್ರೊಫೆಸರ್ ರಜನಿ ಮಾತನಾಡಿದರು. ತಮ್ಮ ಪತಿಯ ಹತ್ಯೆಗೆ ಪ್ರತಿಭಾ ಸಹೋದರ ಜಿ.ಎನ್. ಪಾಟೀಲ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಮುಖಂಡ ಸಂಚು ರೂಪಿಸಿದರು. ಅವರನ್ನು ಪ್ರತಿಭಾ ರಕ್ಷಿಸುತ್ತಿದ್ದಾರೆ.
2005ರ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರತಿಭಾ ಅವರ ಸೋದರನ ಬೆಂಬಲಿಗರು ತನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಬಗೆಗಿನ ತನಿಖೆಯ ಮೇಲೆ ರಾಜಸ್ಥಾನದ ಮಾಜಿ ರಾಜ್ಯಪಾಲರೂ ಆದ ಪ್ರತಿಭಾ ಪ್ರಭಾವ ಬೀರಿ, ತಮ್ಮ ಸೋದರನಿಗೆ ರಕ್ಷಣೆ ನೀಡಿದ್ದಾರೆ. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಸಲ್ಲಿಸಲಾದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಅವರು ಬಿಡುಗಡೆ ಮಾಡಿದರು.
2007: ಕರ್ನಾಟಕದ ವಿವಾದಾತ್ಮಕ ನಂದಗುಡಿ ವಿಶೇಷ ಆರ್ಥಿಕ ವಲಯ (ಎಸ್ ಇಜೆಡ್) ಸ್ಥಾಪನೆಗೆ ಅನುಮೋದನೆ ನೀಡುವುದನ್ನು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ಮಂಡಳಿ ಮುಂದೂಡಿತು. ನವದೆಹಲಿಯಲ್ಲಿ ಸಭೆ ಸೇರಿದ್ದ ವಿಶೇಷ ಆರ್ಥಿಕ ವಲಯ ಮಂಜೂರಾತಿ ಮಂಡಳಿ (ಬಿಒಎ) ಈ ನಿರ್ಧಾರ ಕೈಗೊಂಡಿತು. ನಂದಗುಡಿ ಎಸ್ ಇಜೆಡ್ ಯೋಜನೆ ಮಂಜೂರಾತಿ ಮಂಡಳಿಯ ಪರಿಶೀಲನೆಗೆ ಬಂದರೂ ಈ ಕುರಿತಾದ ತೀರ್ಮಾನವನ್ನು ಮುಂದೂಡಲಾಯಿತು ಎಂದು ವಾಣಿಜ್ಯ ಇಲಾಖೆಯ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ನಿರ್ದೇಶಕ ಯೋಗೇಂದ್ರ ಗಾರ್ಗ್ ತಿಳಿಸಿದರು. ಒಟ್ಟು 9 ಪ್ರಸ್ತಾವಗಳಿಗೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ.
2007: ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಹಾಗೂ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್ ಎಎಲ್)ಗೆ ಪ್ರತಿಷ್ಠಿತ ನವರತ್ನ ಉದ್ದಿಮೆಗಳ ಸ್ಥಾನಮಾನ ನೀಡಲಾಯಿತು. ಈ ಎರಡೂ ಸಂಸ್ಥೆಗಳು ಹಾಗೂ ದೆಹಲಿ ಮೂಲದ ಪವರ್ ಫೈನಾನ್ಸ್ ಕಾರ್ಪೊರೇಷವನ್ ಗಳಿಗೆ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸಂಬಂಧ ಅಧಿಕೃತ ಪತ್ರ ನೀಡಲಾಯಿತು. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಬೃಹತ್ ಕೈಗಾರಿಕಾ ಸಚಿವ ಸಂತೋಷ ಮೋಹನ್ ದೇವ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ನವರತ್ನ ಸ್ಥಾನಮಾನ ಪಡೆದ ಕಂಪೆನಿಗಳ ಸಂಖ್ಯೆ 12ಕ್ಕೆ ಏರಿತು.
2007: ವರ್ಜೀನಿಯಾದಲ್ಲಿ ನಡೆದ ಆಕರ್ಷಣೀಯ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಯುದ್ಧವಿಮಾನಗಳನ್ನು ಇಳಿಸಬಹುದಾದ ಬೃಹತ್ ನೌಕೆ `ಐಎನ್ಎಸ್ ಜಲಾಶ್ವ'ವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಭಾರತೀಯ ನೌಕಾಪಡೆಯಲ್ಲಿ ಮೊದಲ ಬಾರಿ ಇಂತಹ ನೌಕೆ ಅಳವಡಿಸಲಾಗಿದ್ದು, ಅಮೆರಿಕದಿಂದ ಇದನ್ನು ಪಡೆಯಲಾಗಿದೆ. ಸೈನ್ಯ ತುಕಡಿಗಳು, ಟ್ಯಾಂಕರುಗಳು ಹಾಗೂ ಅಸ್ತ್ರಗಳನ್ನು ದೂರ ಪ್ರದೇಶಗಳಿಗೆ ಸಾಗಿಸುವಲ್ಲಿ ನೌಕಾಪಡೆಯ ಸಾಮರ್ಥ್ಯವನ್ನು ಇದು ಹೆಚ್ಚಿಸಿತು. ಈ ಮುನ್ನ ಅಮೆರಿಕ ನೌಕಾಪಡೆಯಲ್ಲಿ `ಟ್ರೆಂಟನ್' ಹೆಸರಿನಿಂದ ಪ್ರಸಿದ್ಧವಾದ ನೌಕೆ 2006ರಲ್ಲಿ ಲೆಬನಾನಿನಿಂದ ಅಮೆರಿಕ ಪ್ರಜೆಗಳನ್ನು ತಾಯ್ನಾಡಿಗೆ ಸಾಗಿಸಿತ್ತು. ವರ್ಷದ ಹಿಂದೆ ಜುಲೈ ತಿಂಗಳಲ್ಲಿ ಭಾರತ ಸರ್ಕಾರ ಟ್ರೆಂಟನ್' ಖರೀದಿಸಲು ನಿರ್ಧರಿಸಿತ್ತು. ಆನಂತರ ನೌಕಾಪಡೆಯ 330 ಸಿಬ್ಬಂದಿಯನ್ನು ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು. ಜನವರಿ 17ರಂದು ಭಾರತೀಯ ಸೇನೆಗೆ ಯುದ್ಧ ನೌಕೆ ಹಸ್ತಾಂತರಿಸಲಾಯಿತು. ಭಾರತ- ಅಮೆರಿಕ ಬಾಂಧವ್ಯದಲ್ಲೂ ಇದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಯಿತು.
2007: ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ತಲೆ ತಂದುಕೊಟ್ಟರೆ 10 ದಶಲಕ್ಷ ರೂಪಾಯಿ ನೀಡುವುದಾಗಿ ಪಾಕಿಸ್ತಾನದ ವರ್ತಕರ ಸಂಘಟನೆ ಪ್ರಕಟಿಸಿತು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ ಹುಡ್ ಪ್ರಶಸ್ತಿ ನೀಡಿರುವುದರಿಂದ ಮುಸ್ಲಿಂ ಜಗತ್ತು ಸಿಟ್ಟಿಗೆದ್ದಿತು. ಇದೇ ವೇಳೆಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಅರ್ಬಾಬ್ ಗುಲಾಂ ರಹೀಮ್ ಅವರು ತಮ್ಮ ಹಿರಿಯರಿಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ಹುಡ್ ಪ್ರಶಸ್ತಿ ನೀಡಿರುವುದನ್ನು ವಿರೋಧಿಸುವ ಸಲುವಾಗಿ ತಮ್ಮ ತಾತ ಮತ್ತು ಚಿಕ್ಕಪ್ಪನಿಗೆ 1937ರಲ್ಲಿ ನೀಡಲಾಗಿದ್ದ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಅವರು ಪ್ರಕಟಿಸಿದರು.
2006: ಒಂಬತ್ತು ವರ್ಷಗಳ ಹಿಂದೆ ನಡೆದ ಅರಣ್ಯ ಸಿಬ್ಬಂದಿ ಅಪಹರಣ ಆರೋಪ ಎದುರಿಸುತ್ತಿದ್ದ ನರಹಂತಕ ವೀರಪ್ಪನ್ ನ ಐವರು ಸಹಚರರಿಗೆ ಚಾಮರಾಜನಗರದ ಶೀಘ್ರಗತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಸತ್ಯಮಂಗಲ ತಾಲ್ಲೂಕಿನ ಕಲ್ಮಂಡಿಪುರ ತುಪಾಕಿ ಸಿದ್ದ, ಆತನ ಪತ್ನಿ ಕುಂಬಿ ಉರುಫ್ ಚಿಕ್ಕಮಾದಿ ಹಾಗೂ ಹಂದಿಯೂರಿನ ತಂಗರಾಜು, ಅನ್ಬುರಾಜು ಮತ್ತು ಅಪ್ಪುಸ್ವಾಮಿ ಅವರಿಗೆ ನ್ಯಾಯಾಧೀಶ ವಿ.ಜಿ. ಬೋಪಯ್ಯ ಜೀವಾವಧಿ ಶಿಕ್ಷೆ ವಿಧಿಸಿದರು.
2006: ಟಾಟಾ ಸಮೂಹ ಕಂಪೆನಿಗಳ ಅಧ್ಯಕ್ಷ ರತನ್ ಟಾಟಾ ಮತ್ತು ಹನಿವೆಲ್ ಸಂಸ್ಥೆಯ ಅಂತಾರಾಷ್ಟ್ರೀಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ಎಂ. ಕಾಟೆ ಅವರಿಗೆ ವಾಷಿಂಗ್ಟನ್ನಿನಲ್ಲಿ ನಡೆದ ಅಮೆರಿಕ-ಭಾರತ ವ್ಯಾಪಾರ ಮಂಡಳಿ ಸಭೆಯಲ್ಲಿ `ನಾಯಕತ್ವ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಭಾರತ-ಅಮೆರಿಕ ವಾಣಿಜ್ಯ ಸಂಬಂಧ ಬಲಪಡಿಸಲು ಅಮೆರಿಕ ಹನಿವೆಲ್ ಕಂಪನಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಮತ್ತು ಬಹುರಾಷ್ಟ್ರೀಯ ವ್ಯಾಪಾರ ಸಂಘಟನೆಗೆ ಟಾಟಾ ಸಮೂಹ ಕಂಪನಿಗಳು ಸಲ್ಲಿಸಿರುವ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಯಿತು.
1993: ಗ್ರಾಹಕ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಯಿತು.
1982: ಮುಂಬೈಯ ಸಹಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈದಿನ ಏರ್ ಇಂಡಿಯಾ ಬೋಯಿಂಗ್ ವಿಮಾನವೊಂದು ಅಪಘಾತಕ್ಕೆ ಈಡಾಗಿ ಕನಿಷ್ಠ 19 ಜನ ಮೃತರಾದರು.
1981: ದೀರ್ಘ ವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುತ್ತಿದ್ದ ಆಪಲ್ ಉಪಗ್ರಹಕ್ಕೆ ಚಾಲನೆ ನೀಡುವ ಮೂಲಕ ಈದಿನ ಮುಂಜಾನೆ 5.30ಕ್ಕೆ ಅದನ್ನು ಭೂ ಸ್ಥಿರ ಕಕ್ಷೆಗೆ ವರ್ಗಾಯಿಸುವಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾದರು.
1959: ಖ್ಯಾತ ಪತ್ರಿಕೋದ್ಯಮಿ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ನಿಧನ.
1953: ಸಾಹಿತಿ ಕೆ.ಆರ್. ಸಂಧ್ಯಾರೆಡ್ಡಿ ಜನನ.
1950: ಚುಕ್ಕಿ ಚಿತ್ರಕಲೆ ಮತ್ತು ಸಾಹಿತ್ಯ ಎರಡೂ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಮೋಹನ್ ವೆರ್ಣೇಕರ್ ಅವರು ವಾಸುದೇವ ಶೇಟ್- ತುಳಸೀಬಾಯಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸ ಪಟ್ಟಣದಲ್ಲಿ ಜನಿಸಿದರು.
1944: ಬ್ರಿಟಿಷರ 14ನೇ ಸೇನೆಯಿಂದ ಅಸ್ಸಾಂ ಮತ್ತು ಇಂಫಾಲ ಬಿಡುಗಡೆ ಪಡೆದವು.
1941: ಜರ್ಮನಿಯು `ಆಪರೇಷನ್ ಬಾರ್ಬರೋಸಾ' ಕಾರ್ಯಾಚರಣೆಯ ಅಂಗವಾಗಿ ರಷ್ಯದ ಮೇಲೆ ಆಕ್ರಮಣ ಮಾಡಿತು.
1941ರ ಡಿಸೆಂಬರ್ ವೇಳೆಗೆ ಜರ್ಮನ್ನರು ಮಾಸ್ಕೋದ ಸಮೀಪ ಬಂದಿದ್ದರು. ಆದರೆ ನೂರು ವರ್ಷಗಳಿಗೂ ಹಿಂದೆ ನೆಪೋಲಿಯನ್ ಪಡೆಗೆ ಆದಂತೆ ತೀವ್ರ ಚಳಿಯನ್ನು ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಇದೇ ಸಂದರ್ಭವನ್ನು ಬಳಸಿಕೊಂಡ ರಷ್ಯನ್ನರು ಪ್ರತಿದಾಳಿ ನಡೆಸಿ 1942ರ ವೇಳೆಗೆ ಜರ್ಮನ್ನರನ್ನು ಪಶ್ಚಿಮದತ್ತ ಅಟ್ಟಿದರು.
1940: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಈದಿನ ಫಾರ್ವರ್ಡ್ ಬ್ಲಾಕ್ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಮುಖಂಡರ ಜೊತೆಗಿನ ಭಿನ್ನಾಭಿಪ್ರಾಯ ಅವರ ಈ ತೀರ್ಮಾನಕ್ಕೆ ಕಾರಣವಾಗಿತ್ತು. ಫಾರ್ವರ್ಡ್ ಬ್ಲಾಕಿನ ರೂಪುರೇಷೆಯನ್ನು ಅವರು 1939ರಲ್ಲೇ ಸಿದ್ಧಪಡಿಸಿದ್ದರು. ಸಂಘಟನೆಯ ಮೊದಲ ಸಮ್ಮೇಳನ ಮುಂಬೈಯಲ್ಲಿ ನಡೆಯಿತು.
1936: ತತ್ವಶಾಸ್ತ್ರ ವಿದ್ಯಾಂಸ, ಸಂಗೀತಾಸಕ್ತ, ಸಾಹಿತಿ ಡಾ. ಗೋವಿಂದರಾವ್ ಅ. ಜಾಲಿಹಾಳ ಅವರು ಅನಂತರಾವ್ ಜಾಲಿಹಾಳ- ರಾಧಾಬಾಯಿ ದಂಪತಿಯ ಪುತ್ರನಾಗಿ ಗದಗದಲ್ಲಿ ಜನಿಸಿದರು.
1898: ಹತ್ತೊಂಬತ್ತನೇ ಶತಮಾನದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಿತು.
1897: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ದಾಮೋದರ ಹರಿ ಚಾಪೇಕರ್ ಅವರು ಪೂನಾದಲ್ಲಿ (ಈಗಿನ ಪುಣೆ) ಬ್ರಿಟಿಷ್ ಅಧಿಕಾರಿಗಳಾದ ರ್ಯಾಂಡ್ ಮತ್ತು ಐರೆಸ್ಟ್ ಅವರನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಮತ್ತು ಅವರ ಸಹೋದರ ಬಾಲಕೃಷ್ಣ ಅವರನ್ನು ಈ ಕೃತ್ಯಕ್ಕಾಗಿ ಯರವಾಡ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇನ್ನೊಬ್ಬ ಸಹೋದರ ವಾಸುದೇವ್ ಅವರನ್ನು ಅವರ ಬಗ್ಗೆ ಮಾಹಿತಿ ನೀಡಿದ ದ್ರೋಹಿಯನ್ನು ಕೊಂದ ಕಾರಣಕ್ಕಾಗಿ ಗಲ್ಲಿಗೇರಿಸಲಾಯಿತು.
1805: ಜೀಸೆಪ್ ಮ್ಯಾಝಿನಿ (1805-72) ಜನ್ಮದಿನ. ಇಟಲಿಯ ಕ್ರಾಂತಿಕಾರಿಯಾದ ಈತ ಇಟಲಿಯ ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
1757: ಜಾರ್ಜ್ ವ್ಯಾಂಕೋವರ್ (1757-98) ಜನ್ಮದಿನ. ಇಂಗ್ಲಿಷ್ ನಾವಿಕನಾದ ಈತನ ಹೆಸರನ್ನೇ ಮುಂದೆ ವ್ಯಾಂಕೋವರ್ ದ್ವೀಪಕ್ಕೆ ಇಡಲಾಯಿತು.
1633: ಭೂಮಿಯ ಚಲನೆಗೆ ಸಂಬಂಧಿಸಿದಂತೆ ಕೊಪರ್ನಿಕನ್ ಸಿದ್ಧಾಂತದಲ್ಲಿದ್ದ ತನ್ನ ನಂಬಿಕೆಗಳನ್ನು ಬದಲಾಯಿಸಿಕೊಂಡು ರೋಮನ್ ಕ್ಯಾಥೋಲಿಕ್ ವಿಚಾರಣಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಗೆಲಿಲಿಯೋನನ್ನು ಬಲಾತ್ಕಾರಪಡಿಸಲಾಯಿತು. ನಂತರ ಆತನಿಗೆ ಜೀವಾವಧಿ ಶಿಕ್ಷೆ ನೀಡಿ ಗೃಹಬಂಧನದಲ್ಲಿ ಇರಿಸಲಾಯಿತು. 1992ರಲ್ಲಿ ಆತನ ಸಾವಿನ 350 ವರ್ಷಗಳ ಬಳಿಕ ಈ ದಿನ ಗೆಲಿಲಿಯೋ ಜೊತೆಗಿನ ತನ್ನ ವರ್ತನೆಯಲ್ಲಿ ತಪ್ಪಾಗಿತ್ತು ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ ಅಧಿಕೃತವಾಗಿ ಒಪ್ಪಿಕೊಂಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment