Sunday, July 19, 2009

ಇಂದಿನ ಇತಿಹಾಸ History Today ಜುಲೈ 14

ಇಂದಿನ ಇತಿಹಾಸ

ಜುಲೈ 14

ಕ್ಯಾಂಡಿಯಲ್ಲಿ ಅಂತ್ಯಗೊಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಪಂದ್ಯದ ಎರಡನೇ ಇನಿಂಗ್ಸಿನಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಶ್ರೀಲಂಕೆಯ ಅದ್ವಿತೀಯ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಗಡಿ ದಾಟಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಗುಜ್ಜರ್ ಸೇರಿದಂತೆ ವಿಶೇಷ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಸೇರುವ ಹಾಗೂ ಮೇಲ್ಜಾತಿಯ ಬಡವರನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ ಟಿ) ಸೇರಿಸುವ ಮಹತ್ತರ ಮಸೂದೆಯನ್ನು ರಾಜಸ್ಥಾನ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿತು.

2007: ಲಂಡನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಹಿಂದೆ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಬೆಂಗಳೂರು ಮೂಲದ ಇಬ್ಬರು ವೈದ್ಯರಾದ ಸಬೀಲ್ ಅಹ್ಮದ್ ಹಾಗೂ ಮಹ್ಮದ್ ಹನೀಫ್ ವಿರುದ್ಧ `ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ' ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು. ಸಬೀಲ್ ಮೇಲೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಭಯೋತ್ಪಾದನೆ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲು ಮಾಡಿದರೆ, ಭಯೋತ್ಪಾದನೆ ಚಟುವಟಿಕೆ ತಡೆಗಟ್ಟಬಹುದಾದಂತಹ ಮಾಹಿತಿಯನ್ನು ಹೊಂದಿದ್ದ ಎಂಬ ದೋಷಾರೋಪಣೆಯನ್ನು ಸಬೀಲ್ ವಿರುದ್ಧ ಹೊರಿಸಲಾಯಿತು. ಜೂನ್ 30ರಂದು ಲಿವರ್ ಪೂಲ್ ನಲ್ಲಿ ಸಬೀಲನನ್ನು ಬಂಧಿಸಲಾಗಿತ್ತು.

2007: ಕ್ಯಾಂಡಿಯಲ್ಲಿ ಅಂತ್ಯಗೊಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಪಂದ್ಯದ ಎರಡನೇ ಇನಿಂಗ್ಸಿನಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಶ್ರೀಲಂಕೆಯ ಅದ್ವಿತೀಯ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಗಡಿ ದಾಟಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಮಾಜಿ ಬೌಲರ್ ಶೇನ್ ವಾರ್ನ್ ಅವರ 708 ವಿಕೆಟ್ಟುಗಳ ವಿಶ್ವದಾಖಲೆ ಅಳಿಸಿಹಾಕಲು ಮುರಳಿಗೆ ಬೇಕಾದ್ದು ಇನ್ನು 7 ವಿಕೆಟ್ ಮಾತ್ರ.

2007: ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತಿಹಾಸ ಪ್ರಸಿದ್ಧ ಹಂಪಿಯ ಸಮಗ್ರ ಅಭಿವೃದ್ಧಿ ಸಲುವಾಗಿ ಕೇಂದ್ರ ಸರ್ಕಾರವು ಕೇಂದ್ರ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ `ಹಂಪಿ ಪ್ರವಾಸೋದ್ಯಮ ಸಮನ್ವಯ ಸಮಿತಿ'ಯನ್ನು ರಚಿಸಿತು.

2007: ವಿವಾದಕ್ಕೆ ಗ್ರಾಸವಾಗಿರುವ `ಆನು ದೇವಾ ಹೊರಗಣವನು' ಕೃತಿಯ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸರ್ಕಾರ ರಚಿಸಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಹಿರಿಯ ಸಾಹಿತಿ ಗೀತಾ ನಾಗಭೂಷಣ ನಿರಾಕರಿಸಿದರು.

2007: ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಚೀನಾ ರೇಷ್ಮೆಗೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರ ಕೇಂದ್ರದ ಸುರಿ ವಿರೋಧಿ ತೆರಿಗೆ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತು.

2006: ತಂಬಾಕು ನಿಯಂತ್ರಣದಲ್ಲಿ ತೋರಿದ ಬದ್ಧತೆ ಮತ್ತು ಪ್ರಯತ್ನಗಳಿಗಾಗಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಮೆರಿಕದ `ಲೂಥರ್ ಎಲ್ ಟಿರ್ರಿ' ಪ್ರಶಸ್ತಿ ಗಳಿಸಿತು.

1963: ಧಾರ್ಮಿಕ ನಾಯಕ ಸ್ವಾಮಿ ಶಿವಾನಂದ ಸರಸ್ವತಿ ನಿಧನ.

1946: ಸಣ್ಣಕಥೆ, ಲೇಖನ, ಪ್ರಬಂಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಖ್ಯಾತ ಕಥೆಗಾರ ಈಶ್ವರಚಂದ್ರ ಅವರು ಎಚ್. ಎನ್. ರಾಮರಾವ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆಯಲ್ಲಿ ಜನಿಸಿದರು.

1945: ಸಾಹಿತಿ ಕೆ.ಎಸ್. ಭಗವಾನ್ ಜನನ.

1944: ಸಾಹಿತಿ ಕೊತ್ತಲ ಮಹಾದೇವಪ್ಪ ಜನನ.

1942: ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸಂಕಲ್ಪ ತೊಡುವ ಮಹತ್ವದ ನಿರ್ಣಯವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಕೈಗೊಂಡಿತು. ಬ್ರಿಟಿಷರು ಭಾರತವನ್ನು ಬಿಟ್ಟುಕೊಟ್ಟು ಸ್ವಾತಂತ್ರ್ಯ ನೀಡುವವರೆಗೂ ಬ್ರಿಟಿಷ್ ಆಡಳಿತಕ್ಕೆ ಅಸಹಕಾರ ನೀಡಬೇಕು ಎಂದು ಸಮಿತಿ ನಿರ್ಣಯಿಸಿತು. ನಂತರ ಮುಂಬೈಯಲ್ಲಿ 1942ರ ಆಗಸ್ಟ್ 8ರಂದು ನಡೆದ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.

1854: ರಾಮಕೃಷ್ಣ ಪರಮಹಂಸರ ಅನುಯಾಯಿ ಮಹೇಂದ್ರನಾಥ ಗುಪ್ತ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement