Wednesday, July 22, 2009

ಇಂದಿನ ಇತಿಹಾಸ History Today ಜುಲೈ 20

ಇಂದಿನ ಇತಿಹಾಸ

20 ಜುಲೈ

ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು. ವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು.

2008: ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು. ವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2001ರ ಆಗಸ್ಟ್ ತಿಂಗಳಲ್ಲಿ ಪರ್ತ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 7:25.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಆ ಸಮಯವನ್ನು 1.86 ಸೆಕೆಂಡುಗಳಷ್ಟು ಉತ್ತಮಪಡಿಸಿಕೊಳ್ಳಲು ಯಶಸ್ವಿಯಾದರು.

2007: 2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ, ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆ' ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತು. ಪ್ರಸ್ತುತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಸಮಿತಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಪ್ರಕಟಿಸಿದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಸಂಗೀತ, ಛಾಯಾಗ್ರಹಣ, ಸಂಭಾಷಣೆ, ಗೀತ ರಚನೆ, ಧ್ವನಿ ಗ್ರಹಣ ಪ್ರಶಸ್ತಿಗಳು `ಮುಂಗಾರು ಮಳೆ' ಪಾಲಾದವು. `ಮುಂಗಾರು ಮಳೆ' ನಂತರ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಎರಡನೆಯದಾದ `ದುನಿಯಾ' ಪ್ರಶಸ್ತಿ ಪಟ್ಟಿಯಲ್ಲೂ ಎರಡನೆಯ ಸ್ಥಾನ ಪಡೆಯಿತು. ದ್ವಿತೀಯ ಅತ್ಯುತ್ತಮ ಚಿತ್ರ ಪುರಸ್ಕಾರದೊಂದಿಗೆ ಇನ್ನೂ ಐದು ಪ್ರಶಸ್ತಿಗಳನ್ನು `ದುನಿಯಾ' ಬಾಚಿಕೊಂಡಿತು. ಮೂರನೇ ಅತ್ಯುತ್ತಮ ಚಿತ್ರವಾಗಿ `ಸೈನೈಡ್' ಆಯ್ಕೆಯಾಯಿತು. ಡಾ. ರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಎಂ.ಎನ್. ಲಕ್ಷ್ಮಿದೇವಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಜೀವಮಾನದ ವಿಶಿಷ್ಟ ಕೊಡುಗೆಗೆ ಸಲ್ಲುವ ಪುರಸ್ಕಾರ ನಟ ಮತ್ತು ನಿರ್ದೇಶಕ ದ್ವಾರಕೀಶ್ ಅವರಿಗೆ ಲಭಿಸಿತು. ಎರಡು ತುಳು ಚಿತ್ರಗಳೂ ಸೇರಿದಂತೆ ಒಟ್ಟೂ 37 ಚಿತ್ರಗಳು ಸ್ಪರ್ಧಾಕಣದಲ್ಲಿದ್ದವು. ತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು `ಸ್ನೇಹಾಂಜಲಿ' ಚಿತ್ರದ ಅಭಿನಯಕ್ಕಾಗಿ, ಹುಟ್ಟು ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಹಾಗೂ `ದಾಟು' ಚಿತ್ರಕ್ಕೆ ನೀಡಲಾಯಿತು.

2007: 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಇನ್ನೊಬ್ಬ ಅರೋಪಿ ಮೊಹಮದ್ ಇಕ್ಬಾಲ್ ಮೊಹಮದ್ ಯುಸೂಫ್ ಶೇಖ್ ಎಂಬಾತನಿಗೆ ಮರಣ ದಂಡನೆ ವಿಧಿಸಿತು. ಪಿತೂರಿಯಲ್ಲಿ ಭಾಗಿಯಾಗಿದ್ದ ಅಪರಾಧಕ್ಕಾಗಿ ಸೇವೆಯಿಂದ ವಜಾಗೊಂಡ ಕಸ್ಟಮ್ಸ್ ಕಲೆಕ್ಟರ್ ಸೋಮನಾಥ್ ಥಾಪಾ ಮತ್ತು ಬಷಿರ್ ಅಹಮದ್ ಖೈರುಲ್ಲಾಗೆ ಟಾಡಾ ನ್ಯಾಯಾಧೀಶ ಪಿ. ಡಿ. ಕೊಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.
ಮೀನುಗಾರರ ವಸತಿ ಪ್ರದೇಶದ ಮೇಲೆ ಗ್ರೆನೇಡ್ ಎಸೆದ ಅಪರಾಧಿಗಳ ಗುಂಪಿನಲ್ಲಿ ಬಷಿರ್ ಅಹಮದ್ ಖೈರುಲ್ಲಾ ಭಾಗಿಯಾಗಿದ್ದ. ಈ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಮೊಹಮದ್ ಇಕ್ಬಾಲ್ಗೆ ಗಲ್ಲು ಶಿಕ್ಷೆ ವಿಧಿಸುವುದರೊಂದಿಗೆ ಮುಂಬೈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಏಳಕ್ಕೆ ಏರಿತು. ರಾಯಗಡ ಜಿಲ್ಲೆಯ ಸಂಧೇರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಅಲ್ಹುಸ್ಸೇನಿ ಕಟ್ಟಡದಲ್ಲಿ ಆರ್ಡಿಎಕ್ಸ್ ಅಳವಡಿಸಲು ನೆರವಾದ ಹಾಗೂ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ದಾದರಿನಲ್ಲಿ ಸ್ಕೂಟರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಕೃತ್ಯಕ್ಕಾಗಿ ಅಹಮದ್ ಇಕ್ಬಾಲ್ನನ್ನು ಕಳೆದ ಸೆಪ್ಟೆಂಬರ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು. 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನೂರು ಜನರನ್ನು ಅಪರಾಧಿಗಳು ಎಂದು ಘೋಷಿಸಲಾಗಿತ್ತು. ಇದುವರೆಗೆ 87 ಮಂದಿ ಅಪರಾಧಿಗಳ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿದೆ. 1993ರ ಮಾರ್ಚ್ 12ರ ಸ್ಫೋಟದಲ್ಲಿ 257 ಮಂದಿ ಸತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯವು ಈವರೆಗೆ ಏಳು ಮಂದಿಗೆ ಮರಣದಂಡನೆ ಹಾಗೂ 16 ಮಂದಿಗೆ ಜೀವಾಧಿ ಶಿಕ್ಷೆ ವಿಧಿಸಿತು.

2007: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಮೊಹಮ್ಮದ್ ಹಮೀದ್ ಅನ್ಸಾರಿ ಅವರನ್ನು ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಪಿಎ) ಮತ್ತು ಎಡಪಕ್ಷಗಳು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವು. ನವದೆಹಲಿಯಲ್ಲಿ ಈದಿನ ನಡೆದ ಯುಪಿಎ ಮತ್ತು ಎಡಪಕ್ಷಗಳ ಸಮನ್ವಯ ಸಮಿತಿಯ ಸಭೆಯ ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಾಜಿ ರಾಜತಾಂತ್ರಿಕ ಅನ್ಸಾರಿ ಅವರ ಹೆಸರು ಪ್ರಕಟಿಸಿದರು.

2007: ದೇಶದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಅಮಾನತುಗೊಳಿಸಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೊರಡಿಸಿದ್ದ ಆದೇಶವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತು. ಇದರಿಂದಾಗಿ ಅನೇಕ ಸಮಸ್ಯೆ, ವಿವಾದದಲ್ಲಿ ಸಿಕ್ಕಿ ತತ್ತರಿಸಿದ ಮುಷರಫ್ ಅವರಿಗೆ ಭಾರಿ ಮುಖಭಂಗವಾಯಿತು. ನ್ಯಾಯಮೂರ್ತಿ ಖಲೀಲುರ್ ರೆಹಮಾನ್ ರಾಮಡೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠ ಎರಡು ತಿಂಗಳು ವಿಚಾರಣೆ ನಡೆಸಿ, ಚೌಧರಿ ವಿರುದ್ಧ ಮುಷರಫ್ ಸರ್ಕಾರ ಸಿದ್ಧಪಡಿಸಿದ್ದ ಆರೋಪಗಳ ಪಟ್ಟಿಯನ್ನು 10-3 ಮತಗಳಿಂದ ವಜಾ ಮಾಡಿತು. ತಮ್ಮ ಮಗನಿಗೆ ಉನ್ನತ ಪೊಲೀಸ್ ಹುದ್ದೆ ದೊರಕಿಸಲು ಹಾಗೂ ವೈಯಕ್ತಿಕ ಅನುಕೂಲ ಮಾಡಿಕೊಳ್ಳಲು ಚೌಧರಿ ಪ್ರಭಾವ ಬೀರಿದ್ದರು ಎಂಬ ಸರ್ಕಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೀಠ ಹೇಳಿತು.

2007: ದುಬೈ ನಗರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ `ಬುರ್ಜ್ ದುಬೈ' ಗಗನಚುಂಬಿ ಕಟ್ಟಡ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಲಭಿಸಿತು. ಇದುವರೆಗೆ 507.3 ಮೀಟರ್ ಎತ್ತರದ `ತೈಪೆ ಟವರ್ಸ್' ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿ ಪಡೆದಿತ್ತು. ಆದರೆ ಈಗ `ಬುಜರ್್ ದುಬೈ' ಕಟ್ಟಡ ಅದನ್ನು ಹಿಂದಿಕ್ಕಿದೆ ಎಂದು ಬೃಹತ್ ಕಟ್ಟಡಗಳ ನಿರ್ವಹಣಾ ಮಂಡಳಿಯು ಅಧಿಕೃತವಾಗಿ ಸ್ಪಷ್ಟಪಡಿಸಿತು. ಹೋಟೆಲುಗಳು, ಶಾಪಿಂಗ್ ಮಾಲ್ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಫ್ಲಾಟುಗಳನ್ನು ಹೊಂದಲಿರುವ `ಬುರ್ಜ್ ದುಬೈ' ಕಟ್ಟಡದ ಎತ್ತರ 705ರಿಂದ 950 ಮೀಟರ್ ನಡುವೆ ಇರಲಿದೆ ಎಂಬ ಅಂದಾಜಿದೆ. ಇದು 154ರಿಂದ 180 ಅಂತಸ್ತುಗಳನ್ನು ಹೊಂದಲಿದೆ. ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಾರ್ಪೊರೇಷನ್ ಕಂಪೆನಿ ಈ ಕಟ್ಟಡದ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿದೆ. 2005ರ ಫೆಬ್ರವರಿ 1ರಂದು ಕಾಮಗಾರಿ ಆರಂಭವಾಗಿದ್ದು, 2009ರ ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು. ಈ ಬೃಹತ್ ಕಟ್ಟಡದ ಅಂದಾಜು ವೆಚ್ಚ 7300 ಕೋಟಿ ದಿರಹಂ (ಯುಎಇ ಹಣ). ಚಿಕಾಗೋ ಮೂಲದ ಸ್ಕಿಡ್ಮೋರ್, ಓವಿಂಗ್ಸ್ ಹಾಗೂ ಮೆರಿಲ್ ಕಂಪೆನಿಗಳು ಇದರ ವಿನ್ಯಾಸ ರೂಪಿಸಿವೆ.

2007: ವಿಶ್ವದಲ್ಲೇ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿರುವ ಸ್ವಾಮಿನಾರಾಯಣ ದೇವಸ್ಥಾನ ಜುಲೈ 22ರಂದು ಕೆನಡಾದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಈದಿನ ಟೊರೆಂಟೋದಲ್ಲಿ ಪ್ರಕಟಿಸಲಾಯಿತು. ಟೊರೆಂಟೋ ನಗರದ ಈಶಾನ್ಯ ಭಾಗದಲ್ಲಿ ಹಿಮಾಚ್ಛಾದಿತ ಹಿಮಾಲಯ ಶಿಖರದಂತೆ ಕಾಣುವ ಸ್ವಾಮಿನಾರಾಯಣ ಮಂದಿರವು ಪ್ರಧಾನಿ ಸ್ಟೀಫನ್ ಹಾರ್ಪರ್, ಟೋರೆಂಟೋ ಮೇಯರ್ ಡೇವಿಡ್ ಮಿಲ್ಲರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ. ಇಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳಿದ್ದಾರೆ. ದೇಗುಲದ ಹೊರ ಆವರಣವನ್ನು ಸುಣ್ಣದ ಕಲ್ಲು ಹಾಗೂ ಹೊಳೆಯುವ ಇಟಲಿ ಕೆರ್ರಾರ ಶಿಲೆಯಲ್ಲಿ ಕೆತ್ತಲಾಗಿದೆ. ಒಳ ಆವಣರದಲ್ಲಿ ಗುಲಾಬಿ ವರ್ಣದ ಕಲ್ಲುಗಳು ಶೋಭಿಸುತ್ತಿವೆ. ಸ್ಥಳೀಯ ಹಿಂದು ಸಮುದಾಯ ಕಟ್ಟಡಕ್ಕಾಗಿ 4 ಕೋಟಿ ಅಮೆರಿಕ ಡಾಲರ್ ನೀಡಿದೆ. 400 ಸ್ವಯಂ ಸೇವಕರು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನ ಒಂದು ಹಂತದಲ್ಲಿ 15,683 ಅಂಶಗಳ ಗಡಿ ದಾಟಿ ಹೊಸ ದಾಖಲೆ ಮಾಡಿತು.

1982: ಗಾಂಧೀಜಿ ಅನುಯಾಯಿ ಮೀರಾ ಬೆಹನ್ ನಿಧನ.

1969: ವರಾಹಗಿರಿ ವೆಂಕಟಗಿರಿ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದರು.

1961: ಎಚ್.ಎಲ್. ಪುಷ್ಪ ಜನನ.

1958: ಮಂದಾಕಿನಿ ಪುರೋಹಿತ ಜನನ.

1955: ಬಸವರಾಜ ಸಾದರ ಜನನ.

1943: ಸಾಹಿತಿ ಡಿ.ಆರ್. ಬಳೂರಗಿ ಜನನ.

1940: ವೈದ್ಯ, ಸಾಹಿತಿ, ಸಂಶೋಧಕ ಡಾ. ಸ.ಜ. ನಾಗಲೋಟಿಮಠ ಅವರು ಜಂಬಯ್ಯ ವೀರಬಸಯ್ಯ- ಹಂಪವ್ವ ದಂಪತಿಯ ಪುತ್ರನಾಗಿ ಗದಗದಲ್ಲಿ ಈದಿನ ಜನಿಸಿದರು. ಕನ್ನಡದಲ್ಲಿ 42, ಇಂಗ್ಲಿಷ್ನಲ್ಲಿ 14 ಗ್ರಂಥಗಳನ್ನು ರಚಿಸಿದ ನಾಗಲೋಟಿಮಠ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

1925: ಸಾಹಿತಿ ಟಿ.ಬಿ. ಹಂಡಿ ಜನನ.

1924: ಹದಿನೈದು ದೇಶಗಳ ಪ್ರತಿನಿಧಿಗಳು ಪ್ಯಾರಿಸ್ಸಿನಲ್ಲಿ ಭೇಟಿಯಾಗಿ ಚೆಸ್ಗಾಗಿ ಒಂದು ಶಾಶ್ವತ ಒಕ್ಕೂಟ (ಫಿಡೆ) ಸ್ಥಾಪಿಸಲು ನಿರ್ಧರಿಸಿದರು.

1905: ಬಂಗಾಳ ವಿಭಜನೆಯ ಲಾರ್ಡ್ ಕರ್ಜನ್ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು.

1532: ಕವಿ, ತತ್ವಜ್ಞಾನಿ ತುಳಸೀದಾಸರು ಉತ್ತರ ಪ್ರದೇಶದ ರಾಜಪುರದಲ್ಲಿ ಈದಿನ ಜನಿಸಿದರು. ಮಹತ್ವದ ಹಿಂದಿ ಕವಿಗಳಲ್ಲಿ ಒಬ್ಬರಾಗಿರುವ ತುಳಸೀದಾಸರು 12 ಪುಸ್ತಕ ಬರೆದಿದ್ದಾರೆ. ರಾಮನ ಕುರಿತು ಬರೆದಿರುವ `ರಾಮಚರಿತ ಮಾನಸ' ಇವರ ಪ್ರಮುಖ ಗ್ರಂಥಗಳಲ್ಲಿ ಒಂದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement