Wednesday, July 1, 2009

ಇಂದಿನ ಇತಿಹಾಸ History Today ಜೂನ್ 30

ಇಂದಿನ ಇತಿಹಾಸ

ಜೂನ್ 30

119 ವರ್ಷ ವಯಸ್ಸಿನ ಶತಾಯುಷಿ ಸ್ವಾತಂತ್ರ್ಯ ಯೋಧ ಪಂಡಿತ ಸುಧಾಕರ ಚತುರ್ವೇದಿ ಅವರನ್ನು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘದ ಸ್ವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2008: ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ಉಗ್ರರನ್ನು ಮಣಿಸಲು ಭದ್ರತಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ 9 ಜನ ಮೃತರಾದರು. ಖೈಬರ್ ಪ್ರಾಂತ್ಯದ ಬಾರಾದಲ್ಲಿ ಉಗ್ರಗಾಮಿ ಧಾರ್ಮಿಕ ಸಂಘಟನೆ `ಅಮಾರ್ ಬಿಲ್ ಮರೂಫ್ ವಾ ನಹಿ ಅನೀಲ್ಮುಂಕಾರ್' ಕೇಂದ್ರ ಕಚೇರಿ ಮೇಲೆ ಸಂಘಟನೆಯ ಮುಖ್ಯಸ್ಥ ಹಾಜಿ ನಾಮದಾರ್ ಅವರನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ಪ್ರಯೋಗಿಸಲಾಯಿತು.

2007: ಕರ್ನಾಟಕ ರಾಜ್ಯದಲ್ಲಿ ಈದಿನ ಮಧ್ಯರಾತ್ರಿಯಿಂದ ಸಾರಾಯಿ ನಿಷೇಧ ಜಾರಿಗೆ ಬಂದಿತು. ಸ್ತ್ರೀಶಕ್ತಿ ಸಂಘಟನೆಗಳ ಒತ್ತಡಕ್ಕೆ ಮಣಿದು ಜುಲೈ 1ರಿಂದ ಸಾರಾಯಿ ನಿಷೇಧಿಸುವುದಾಗಿ ಸರ್ಕಾರ ಮುಂಗಡಪತ್ರದಲ್ಲಿ ಘೋಷಿಸಿತ್ತು. ಆದೇಶ ಧಿಕ್ಕರಿಸಿ ಸಾರಾಯಿ ತಯಾರಿಸಿದರೆ ಅಥವಾ ಮಾರಾಟ ಮಾಡಿದರೆ ಗೂಂಡಾ ಕಾಯ್ದೆ ಅನ್ವಯ 5 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತು.

2007: ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಅವರು ಹಾಲೆಂಡಿನ ಹಿಲ್ವೆರ್ಸಮ್ ನಲ್ಲಿ ನಡೆದ ಪುರುಷರ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡದ್ದಲ್ಲದೆ ಪ್ರಶಸ್ತಿಯನ್ನು ಕೂಡಾ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಹಂಪಿ ಅವರು ತಮ್ಮ ಎದುರಾಳಿ ಅತಿಥೇಯ ರಾಷ್ಟ್ರದ ಗ್ರ್ಯಾಂಡ್ ಮಾಸ್ಟರ್ ಎರಿಕ್ ವಾನ್ ಡೆನ್ ಡೊಯಲ್ ಅವರನ್ನು ಪರಾಭವಗೊಳಿಸಿ ಎಚ್ ಎಸ್ ಜಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಶಿಪ್ ಬಗಲಿಗೆ ಹಾಕಿಕೊಂಡರು.

2007: ದೆಹಲಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಸಾಹಿಬ್ ಸಿಂಗ್ ವರ್ಮಾ (64) ಅವರು ರಾಜಸ್ಥಾನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದರು. ಶಹಜಾನಪುರ ಬಳಿ ಅವರ ಕಾರಿಗೆ ಮಿನಿಟ್ರಕ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು. ದಿಲ್ಲಿಯ ಮುಂಡ್ಯಾ ಗ್ರಾಮದಲ್ಲಿ 1943ರ ಮಾರ್ಚ್ 15ರಂದು ರೈತ ಕುಟುಂಬದಲ್ಲಿ ಜನಿಸಿದ ವರ್ಮಾ 1993ರಲ್ಲಿ ದೆಹಲಿಯ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ, 1996ರಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ, ಪ್ರಚಾರಕರೂ ಆಗಿದ್ದ ಅವರು 2002ರಲ್ಲಿ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

2007: ಹಿಂದಿನ ದಿನದ ರಾತ್ರಿಯಿಂದ ಸುರಿದ ಮಹಾಮಳೆಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಒಟ್ಟು 16 ಜನ ಮೃತರಾಗಿ, ನೂರಾರು ಗ್ರಾಮಗಳು ಜಲಾವೃತಗೊಂಡವು.

2007: 119 ವರ್ಷ ವಯಸ್ಸಿನ ಶತಾಯುಷಿ ಸ್ವಾತಂತ್ರ್ಯ ಯೋಧ ಪಂಡಿತ ಸುಧಾಕರ ಚತುರ್ವೇದಿ ಅವರನ್ನು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘದ ಸ್ವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2007: ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಜಿ.ವಿ.ಕೆ. ರಾವ್ (87) ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಮೃತರಾದರು. 1974- 1977ರ ಅವಧಿಯಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಿ.ವಿ.ಕೆ. ರಾವ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.

2007: ಭಾರತೀಯ ಮೂಲದ ಆರ್ಥಿಕ ತಜ್ಞೆ ಶೃತಿ ವಡೇರಾ ಅವರು ಬ್ರಿಟನ್ನಿನ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ನೇಮಕ ಗೊಂಡರು. ಪ್ರಧಾನಿ ಗಾರ್ಡನ್ ಬ್ರೌನ್ ಅವರಿಗೆ ಆಪ್ತರಾದ ವಡೇರಾ ಅವರಿಗೆ ನೀಡಲಾಗಿರುವ ಈ ಹುದ್ದೆ ಸಂಪುಟದಲ್ಲಿ ಸಹಾಯಕ ಸಚಿವರ ಹುದ್ದೆಗೆ ಸರಿಸಮವಾದದ್ದು.

2002: ಜಪಾನಿನ ಯೊಕೊಹಾಮಾದಲ್ಲಿ ಜರ್ಮನಿಯ ವಿರುದ್ಧ ಬ್ರೆಝಿಲನ್ನು 2-0 ಅಂತರದ ವಿಜಯದತ್ತ ಮುನ್ನಡೆಸುವ ಮೂಲಕ ಮೂರು ಫೈನಲ್ ಫುಟ್ ಬಾಲ್ ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೆಝಿಲ್ ನ ಕ್ಯಾಪ್ಟನ್ ಮಾರ್ಕೊಸ್ ಕಫು ಪಾತ್ರರಾದರು.

1997: ಹಾಂಕಾಂಗಿನ ಗವರ್ನಮೆಂಟ್ ಹೌಸ್ ಮೇಲೆ ಇಂಗ್ಲೆಂಡಿನ ಯೂನಿಯನ್ ಜ್ಯಾಕ್ ಕಟ್ಟ ಕಡೆಯ ಬಾರಿಗೆ ಹಾರಾಡಿತು. 156 ವರ್ಷಗಳ ನಂತರ ತನ್ನ ವಸಾಹತನ್ನು ಚೀನಾಕ್ಕೆ ಒಪ್ಪಿಸಲು ಬ್ರಿಟನ್ ಈ ದಿನ ಸಿದ್ಧತೆ ನಡೆಸಿತು.

1948: ಬೆಲ್ ಟೆಲಿಫೋನ್ ಲ್ಯಾಬೋರೇಟರೀಸ್ ಸಂಶೋಧನಾ ನಿರ್ದೇಶಕ ರಾಲ್ಫ್ ಬೌನ್ ಅವರು `ಟ್ರಾನ್ಸಿಸ್ಟರ್' ನಿರ್ಮಿಸಿದ್ದನ್ನು ನ್ಯೂಜೆರ್ಸಿಯ ಮುರ್ರೇ ಹಿಲ್ಸ್ ನಲ್ಲಿ ಪತ್ರಕರ್ತರ ಮುಂದೆ ಪ್ರಕಟಿಸಿದರು. ಮ್ಯಾನ್ ಹಟ್ಟನ್ ನ ವೆಸ್ಟ್ ಸ್ಟ್ರೀಟ್ ನಲ್ಲಿದ್ದ ಬೆಲ್ ಕೇಂದ್ರ ಕಚೇರಿಯಲ್ಲಿ ಈ ಪತ್ರಿಕಾಗೋಷ್ಠಿ ನಡೆಯಿತು.

1917: ಭಾರತೀಯ ರಾಷ್ಟ್ರೀಯವಾದಿ ಬ್ರಿಟಿಷ್ ಆರ್ಥಿಕ ನೀತಿಯ ಕಟು ಟೀಕಾಕಾರ ದಾದಾಭಾಯಿ ನವರೋಜಿ ಅವರು ಮುಂಬೈಯಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. `ಭಾರತದ ಹಿರಿಯಜ್ಜ' (ಗ್ರ್ಯಾಂಡ್ ಓಲ್ಡ್ಮ್ಯಾನ್ ಆಫ್ ಇಂಡಿಯಾ) ಎಂದೇ ಅವರು ಖ್ಯಾತರಾಗಿದ್ದರು.

1859: ಫ್ರೆಂಚ್ ಸಾಹಸಿ ಬ್ಲಾಂಡಿನ್ ಅವರು ನಯಾಗರಾ ಜಲಪಾತಕ್ಕೆ ಅಡ್ಡಲಾಗಿ 160 ಅಡಿ ಎತ್ತರದಲ್ಲಿ 1100 ಅಡಿ ಉದ್ದದ ಹಗ್ಗ ಕಟ್ಟಿ ಅದರ ಮೇಲೆ ನಡೆಯುತ್ತಾ ಜಲಪಾತವನ್ನು ದಾಟಿದರು. 5000 ಮಂದಿ ಈ ಸಾಹಸವನ್ನು ವೀಕ್ಷಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement