ಸಮುದ್ರದಲ್ಲಿ ಮುಳುಗಿದ ದೋಣಿ
ಭಟ್ಕಳದಲ್ಲಿ ತೇಲಿತೇ?
ಭಟ್ಕಳದಲ್ಲಿ ತೇಲಿತೇ?
ಎರಡೂ ದೋಣಿಗಳು ಅಶೊಕ ಲೀಲ್ಯಾಂಡಿನಿಂದ ನಿರ್ಮಿತವಾಗಿದ್ದರೂ ಅವುಗಳ ಎಂಜಿನ್ ನಂಬರ್ ಹಾಗೂ ಉದ್ದಗಲ ಸಂಪೂರ್ಣ ಭಿನ್ನವಾಗಿರುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಹೀಗಾಗಿ ಭಟ್ಕಳ ದಂಡೆಯಲ್ಲಿ ಪತ್ತೆಯಾದ ದೋಣಿ, ಆಳ ಸಮುದ್ರದಲ್ಲಿ ಕಳೆದುಹೋದ ದೋಣಿಯಾಗಿರಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬಂದಿತು.
ನೆತ್ರಕರೆ ಉದಯಶಂಕರ
ಗ್ರಾಹಕರೊಬ್ಬರು ಖರೀದಿಸಿದ ವಸ್ತುವೊಂದು ನದಿಯಲ್ಲೋ, ಸಮುದ್ರದಲ್ಲೋ ಕಳೆದುಹೋಗುತ್ತದೆ. ಆ ವಸ್ತುವಿಗೆ ನೀಡಬೇಕಾದ ವಿಮಾ ಪರಿಹಾರ ಮೊತ್ತವನ್ನು ನೀಡಲು ವಿಮಾ ಸಂಸ್ಥೆಯು ನಿರಾಕರಿಸಿದರೆ ಗ್ರಾಹಕ ಏನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾನೂನು ಆತನ ನೆರವಿಗೆ ಬರುವುದೇ?
ತನ್ನ ಮುಂದೆ ಎರಡನೇ ಬಾರಿಗೆ ಬಂದ ಇಂತಹ ಮೇಲ್ಮನವಿ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ನ್ಯಾಯ ಒದಗಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು: ಸದಾನಂದ ಆರ್. ಕೋಟ್ಯಾನ್, ಪಿತ್ರೋಡಿ, ಉದ್ಯಾವರ, ಉಡುಪಿ. ಪ್ರತಿವಾದಿಗಳು: (1) ಯುನೈಟೆಡ್ ಇಂಡಿಯಾ ಇನ್ಶ್ಯೂರೆನ್ಸ್ ಕಂಪೆನಿ, ವಿಭಾಗೀಯ ಕಚೇರಿ, ಉಡುಪಿ. (2) ಮ್ಯಾನೇಜರ್, ಸಿಂಡಿಕೇಟ್ ಬ್ಯಾಂಕ್, ಉದ್ಯಾವರ, ಉಡುಪಿ.
ಅರ್ಜಿದಾರ ರಾಜು ಕೋಟ್ಯಾನ್ ಅವರ ಪುತ್ರ ಸದಾನಂದ ಆರ್. ಕೋಟ್ಯಾನ್ ಅವರು ನಂ. ಸಿಸಿ 27/06 ನೋಂದಣಿ ಸಂಖ್ಯೆಯ ದೋಣಿ ಒಂದರ ಮಾಲೀಕರು. ಅವರ ಈ ದೋಣಿ 2004ರ ಸೆಪ್ಟೆಂಬರ್ 15ರಂದು ಆಳ ಸಮುದ್ರದಲ್ಲಿ ಮುಳುಗಿಹೋಯಿತು. ಈ ದೋಣಿಗೆ ಪ್ರತಿವಾದಿ ಯುನೈಟೆಡ್ ಇಂಡಿಯಾ ಇನ್ಶ್ಯೂರೆನ್ಸ್ ಕಂಪೆನಿಯಿಂದ ವಿಮಾ ರಕ್ಷಣೆ ಪಡೆಯಲಾಗಿತ್ತು. ಹೀಗಾಗಿ ಕೋಟ್ಯಾನ್ ಅವರು ವಿಮಾ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಆದರೆ ವಿಮಾ ಸಂಸ್ಥೆಯು 'ಸುಳ್ಳು ಪ್ರತಿಪಾದನೆ' ಎಂಬ ನೆಲೆಯಲ್ಲಿ ವಿಮಾ ಪರಿಹಾರ ನೀಡಲು ನಿರಾಕರಿಸಿತು. ಅರ್ಜಿದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು.
ಅರ್ಜಿದಾರರ ದೂರನ್ನು ಮನ್ನಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಪ್ರತಿವಾದಿ ವಿಮಾ ಸಂಸ್ಥೆಗೆ ಆಜ್ಞಾಪಿಸಿತು. ವಿಮಾ ಸಂಸ್ಥೆಯು ಈ ತೀರ್ಪಿನ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು.
ರಾಜ್ಯ ಗ್ರಾಹಕ ನ್ಯಾಯಾಲಯವು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ, ಇಡೀ ಪ್ರಕರಣವನ್ನು ಹೊಸದಾಗಿ ಪರಿಶೀಲಿಸುವಂತೆ ಸೂಚನೆ ನೀಡಿತು. ಪ್ರಕರಣವನ್ನು ಹೊಸದಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಎರಡನೇ ಬಾರಿಯೂ ಪ್ರತಿವಾದಿ ವಿಮಾ ಸಂಸ್ಥೆಗೆ ಆಜ್ಞಾಪಿಸಿತು. ಮತ್ತೆ ಪ್ರಕರಣ ಮೇಲ್ಮನವಿ ರೂಪದಲ್ಲಿ ರಾಜ್ಯ ಗ್ರಾಹಕ ನ್ಯಾಯಾಲಯದ ಮುಂದೆ ಬಂದಿತು.
ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರು ಮತ್ತು ಪ್ರತಿವಾದಿ ವಿಮಾ ಕಂಪೆನಿಯ ಪರ ವಕೀಲ ಎ.ಎಂ. ವೆಂಕಟೇಶ್ ಮತ್ತು ಇನ್ನೊಬ್ಬ ವಕೀಲರು ಹಾಗೂ ಸಿಂಡಿಕೇಟ್ ಬ್ಯಾಂಕ್ ಪರ ವಕೀಲ ಗಜೇಂದ್ರ ಐತಾಳ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.
ಮುಳುಗಿದ ದೋಣಿ ನಂತರ ಭಟ್ಕಳ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದ್ದು ಅದನ್ನು ಬ್ಯಾಂಕು ಅರ್ಜಿದಾರರದು ಎಂಬ ಕಾರಣಕ್ಕಾಗಿ ವಶ ಪಡಿಸಿಕೊಂಡಿತು ಎಂಬುದು ಪ್ರತಿವಾದಿ ವಿಮಾ ಸಂಸ್ಥೆಯ ವಾದವಾಗಿತ್ತು. ಆದರೆ ಸೀತಾ ಬಾಯಿ ಎಂಬವರು ತಾನು ಈ ದೋಣಿಯನ್ನು ಪುರಂದರ ಕೋಟ್ಯಾನ್ ಎಂಬವರಿಂದ 9 ಲಕ್ಷ ರೂಪಾಯಿಗಳಿಗೆ ಖರೀದಿಸಿರುವುದರಿಂದ ಅದನ್ನು ಬಿಡುಗಡೆ ಮಾಡಿ ತಮಗೆ ನೀಡಬೇಕು ಎಂಬುದಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ಈ ದೋಣಿಯ ಹೆಸರನ್ನು 'ಜೈ ಪ್ರಕಾಶ್' ಎಂಬುದರ ಬದಲಿಗೆ 'ವೀರೇಶ್' ಎಂಬುದಾಗಿ ಬದಲಾಯಿಸಲಾಗಿತ್ತು. ಈ ದೋಣಿಯನ್ನು ಸೀತಾಬಾಯಿ ಅವರು ಪುರಂದರ ಕೋಟ್ಯಾನ್ ಅವರಿಂದ ಖರೀದಿಸಿದ್ದು ನಿಜವೆಂದು ಮನವರಿಕೆ ಮಾಡಿಕೊಂಡ ಬ್ಯಾಂಕ್ ಅದನ್ನು ಸೀತಾಬಾಯಿ ಅವರ ವಶಕ್ಕೆ ಒಪ್ಪಿಸಿತು. ಬೇರೆ ಯಾರೂ ಈ ದೋಣಿ ತಮ್ಮದೆಂದು ಪ್ರತಿಪಾದಿಸಲಿಲ್ಲ.
ಖರೀದಿಪತ್ರ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಬ್ಯಾಂಕು ದೋಣಿಯನ್ನು ಸೀತಾಬಾಯಿ ಅವರಿಗೆ ಒಪ್ಪಿಸಿದ್ದರೂ, ಈ ದೋಣಿ ಅರ್ಜಿದಾರ ಸದಾನಂದ ಕೋಟ್ಯಾನ್ ಅವರಿಗೇ ಸೇರಿದ್ದು ಎಂಬುದು ಪ್ರತಿವಾದಿ ವಿಮಾ ಸಂಸ್ಥೆಯ ಪ್ರತಿಪಾದನೆಯಾಗಿತ್ತು. ಈ ದೋಣಿಯ ಹೆಸರು 'ಮನಾಲ್' ಎಂಬುದಾಗಿದ್ದು ನಂತರ 'ಜೈ ಪ್ರಕಾಶ್' ಎಂಬುದಾಗಿ ಬದಲಾಯಿಸಲಾಗಿತ್ತು ಎಂಬ ವಾದ ಮುಂದಿಟ್ಟ ವಿಮಾ ಸಂಸ್ಥೆಯು ಮಾಲೀಕತ್ವ ಸಾಬೀತಿಗಾಗಿ ಗೋವಾ ಬಂದರು ಅಧಿಕಾರಿಗಳನ್ನು ಕರೆಸಬೇಕು ಎಂಬುದಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಮಾಡಿತ್ತು ಎಂಬುದನ್ನು ರಾಜ್ಯ ಗ್ರಾಹಕ ನ್ಯಾಯಾಲಯ ಗಮನಿಸಿತು.
ಆದರೆ ದೋಣಿಯನ್ನು ಪುರಂದರ ಕೋಟ್ಯಾನ್ ಎಂಬವರಿಂದ ತಾನು ಖರೀದಿಸಿರುವುದಾಗಿ ಸೀತಾಬಾಯಿ ಅವರು ಹಾಜರು ಪಡಿಸಿದ ದಾಖಲೆಗಳು ಖಚಿತ ಪಡಿಸಿರುವಾಗ ಗೋವಾ ಬಂದರು ಅಧಿಕಾರಿಗಳನ್ನು ಕರೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಭಾವಿಸಿತು. ಹಾಗೂ ಬೇಕಿದ್ದರೆ ಗೋವಾ ಬಂದರು ಅಧಿಕಾರಿಗಳಿಂದ ದೃಢೀಕೃತ ದಾಖಲೆಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲು ವಿಮಾ ಸಂಸ್ಥೆಗೆ ಕಷ್ಟವೇನೂ ಇರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಅರ್ಜಿದಾರರಿಗೆ ಸೇರಿದ ದೋಣಿಯ ಎಂಜಿನ್ ನಂಬರ್ ಎಎಲ್ಎಂವಿ-400/9 ನಂ.ಎಎಲ್ 7832 ಆಗಿದ್ದರೆ, ಭಟ್ಕಳ ಸಮುದ್ರ ದಂಡೆಯಲ್ಲಿ ಸಿಕ್ಕಿದ ದೋಣಿಯ ಎಂಜಿನ್ ನಂಬರ್ ಅಶೋಕ ಲೀಲ್ಯಾಂಡ್ ಎಎಲ್ಎಂಯು 400 ನಂ.ಎಎಲ್7832. ಎರಡೂ ದೋಣಿಗಳು ಅಶೊಕ ಲೀಲ್ಯಾಂಡಿನಿಂದ ನಿರ್ಮಿತವಾಗಿದ್ದರೂ ಅವುಗಳ ಎಂಜಿನ್ ನಂಬರ್, ಉದ್ದಗಲ ಸಂಪೂರ್ಣ ಭಿನ್ನವಾಗಿರುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಹೀಗಾಗಿ ಭಟ್ಕಳ ದಂಡೆಯಲ್ಲಿ ಪತ್ತೆಯಾದ ದೋಣಿ, ಆಳ ಸಮುದ್ರದಲ್ಲಿ ಕಳೆದುಹೋದ ದೋಣಿಯಾಗಿರಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬಂದಿತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆಜ್ಞಾಪಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಎರಡನೇ ತೀರ್ಪು ಸಮರ್ಪಕವಾಗಿದೆ ಎಂದು ಹೇಳಿದ ರಾಜ್ಯ ಗ್ರಾಹಕ ನ್ಯಾಯಾಲಯವು, ಈಗಲೂ ಅರ್ಜಿದಾರರ ಪ್ರತಿಪಾದನೆ ತಪ್ಪಾಗಿದ್ದು, ವಾಸ್ತವಾಂಶಗಳನ್ನು ತಿರುಚಲಾಗಿದೆ ಎಂಬ ಭಾವನೆ ಇದ್ದಲ್ಲಿ ವಿಮಾ ಕಂಪೆನಿಯು ಅರ್ಜಿದಾರರ ವಿರುದ್ಧ ಕ್ರಿಮಿನಲ್ ಖಟ್ಲೆ ದಾಖಲಿಸಬಹುದು ಎಂದು ಹೇಳಿತು.
ಈ ಹಿನ್ನೆಲೆಯಲ್ಲಿ 10 ಲಕ್ಷ ರೂಪಾಯಿಗಳನ್ನು ಶೇಕಡಾ 9ರಷ್ಟು ಬಡ್ಡಿ ಸಹಿತವಾಗಿ ಎರಡು ತಿಂಗಳ ಒಳಗೆ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ವಿಮಾ ಸಂಸ್ಥೆಗೆ ರಾಜ್ಯ ಗ್ರಾಹಕ ನ್ಯಾಯಾಲಯವು ಆಜ್ಞಾಪಿಸಿತು.
No comments:
Post a Comment