ಇಂದಿನ ಇತಿಹಾಸ
ಸೆಪ್ಟೆಂಬರ್ 16
60 ಮತ್ತು 70ರ ದಶಕದಲ್ಲಿ ತಮ್ಮ ಗೀತೆಗಳ ಮೂಲಕ ಸಂಗೀತ ಪ್ರಿಯರ ಹೃದಯ ತಟ್ಟಿದ್ದ ಹಾಗೂ 2 ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ನಾರ್ಮನ್ ವೈಟ್ ಫೀಲ್ಡ್ (67) ಲಾಸ್ ಏಂಜಲಿಸಿನಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು.
2008: ಸವಾಯಿ ಗಂಧರ್ವರ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕಳೆದ 55 ವರ್ಷಗಳಿಂದ ಸಂಗೀತ ಮಹೋತ್ಸವ ಆಚರಿಸುತ್ತ ಬಂದ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯವರು ಪ್ರಸಕ್ತ ಸಾಲಿನಿಂದ ಸವಾಯಿ ಗಂಧರ್ವ ಅವರ ಹೆಸರಿನಲ್ಲಿ ನೀಡಲು ಉದ್ದೇಶಿಸಿದ ರಾಷ್ಟ್ರಮಟ್ಟದ ಮೊದಲ ಪ್ರಶಸ್ತಿಯನ್ನು ಗಂಧರ್ವರ ಪಟ್ಟ ಶಿಷ್ಯರಾದ ಡಾ. ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿ ಅವರಿಗೆ ನೀಡಲು ನಿರ್ಧರಿಸಿತು. ಸಂಸ್ಥೆಯ ಚೇರ್ಮನ್, ಮಾಜಿ ಸಚಿವ ಎಂ.ಎಸ್. ಕಟಗಿ ಹುಬ್ಬಳ್ಳಿಯಲ್ಲಿ ಈ ಮಾಹಿತಿ ನೀಡಿದರು.
2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್)ನಿಂದ `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.
2008: 60 ಮತ್ತು 70ರ ದಶಕದಲ್ಲಿ ತಮ್ಮ ಗೀತೆಗಳ ಮೂಲಕ ಸಂಗೀತ ಪ್ರಿಯರ ಹೃದಯ ತಟ್ಟಿದ್ದ ಹಾಗೂ 2 ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ನಾರ್ಮನ್ ವೈಟ್ ಫೀಲ್ಡ್ (67) ಲಾಸ್ ಏಂಜಲಿಸಿನಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು. `ವಾರ್',`ಐ ಹಿಯರ್ಡ್ ಇಟ್ ಥ್ರೂ ದಿ ಗ್ರೇಪ್ ವೈನ್' ಹಾಡುಗಳಿಂದ ಖ್ಯಾತರಾಗಿದ್ದ ವೈಟ್ ಫೀಲ್ಡ್ ಮೊಟೌನ್ ಲೇಬಲ್ ಸಂಗೀತಕ್ಕೆ ದೀರ್ಘ ಕಾಲದ ನಿರ್ಮಾಪಕರಾಗಿದ್ದರು. ಅವರು ಬರೆಟ್ ಸ್ಟ್ರಾಂಗ್ ಜತೆಗೂಡಿ ಹಲವು ಗೀತೆ ರಚಿಸಿದ್ದರು. ಅವರು `ಟೆಂಪ್ಟೇಷನ್', ಇತರ ಹಲವು ಸಂಗೀತಗಳಿಗೂ ನಿರ್ಮಾಪಕರಾಗಿದ್ದರು.
2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್) `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.
2007: ಥಾಯ್ಲೆಂಡಿನ ಫುಕೆಟ್ ದ್ವೀಪದಲ್ಲಿ ಒನ್-ಟು-ಗೋ ಕಂಪೆನಿಗೆ ಸೇರಿದ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ನಿಲ್ದಾಣದಲ್ಲಿಯೇ ಅಪಘಾತಕ್ಕೆ ಈಡಾಗಿ 87ಕ್ಕೂ ಹೆಚ್ಚು ಜನರು ಮೃತರಾಗಿ ಇತರ 40 ಜನ ಕಣ್ಮರೆಯಾದರು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿತು. ವಿಮಾನದಲ್ಲಿ ಒಟ್ಟು 123 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು.
2007: ಪಾಕ್ ಚುನಾವಣಾ ಆಯೋಗವು ಅಧ್ಯಕ್ಷೀಯ ಚುನಾವಣಾ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಮೂಲಕ ಪರ್ವೇಜ್ ಮುಷರಫ್ ಅವರ ಮರು ಆಯ್ಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿದೆ ಎಂದು ಸರ್ಕಾರಿ ಸಚಿವಾಲಯ ಪ್ರಕಟಿಸಿತು. ಅಧ್ಯಕ್ಷೀಯ ಚುನಾವಣಾ ನಿಯಮಗಳ ಪ್ರಕಾರ ಸಂಸತ್ ಸದಸ್ಯತ್ವದಿಂದ ವ್ಯಕ್ತಿಯನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ 63ನೇ ಕಾಯ್ದೆಯನ್ನು ಬಳಸಲಾಗುತ್ತಿತ್ತು. ತಿದ್ದುಪಡಿ ಪ್ರಕಾರ 63ನೇ ಕಾಯ್ದೆಯು ಅಧ್ಯಕ್ಷರಿಗೆ ಅನ್ವಯವಾಗುವುದಿಲ್ಲ.
2007: ಮೈಸೂರು ಮೂಲದ ಚಿತ್ರ ನಿರ್ದೇಶಕ ಸೇನಾನಿ ಹೆಗಡೆ ಅವರು ಸೀಳು ನಾಯಿಗಳ ಕುರಿತು ನಿರ್ಮಿಸಿದ `ವೈಲ್ಡ್ ಡಾಗ್ ಡೈರೀಸ್' ಚಿತ್ರಕ್ಕೆ `ಅತ್ಯುತ್ತಮ ಸಿಎಂಎಸ್ ವಾತಾವರಣ 2007 ಚಿತ್ರೋತ್ಸವ' ಪ್ರಶಸ್ತಿ ಮತ್ತು 1.50 ಲಕ್ಷ ರೂಪಾಯಿ ನಗದು ಬಹುಮಾನ ದೊರಕಿತು. ಸೇನಾನಿ ಅವರು ಎಸ್. ಕೃಪಾಕರ್ ಜತೆಗೂಡಿ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸೀಳು ನಾಯಿಗಳ ನಡವಳಿಕೆ ಕುರಿತು ದಶಕಗಳ ಕಾಲ ನಿರಂತರ ಅಧ್ಯಯನ ನಡೆಸಿ ಈ ಚಿತ್ರ ನಿರ್ಮಿಸಿದ್ದಾರೆ. ಸುಮಾರು 50 ನಿಮಿಷಗಳ ಈ ಚಿತ್ರಕ್ಕೆ `ಅತ್ಯುತ್ತಮ ಕಥೆ ನಿರೂಪಣೆ' ಪ್ರಶಸ್ತಿಯೂ ದೊರಕಿತು.
2007: ಭಾರತದ ವಿಶ್ವನಾಥನ್ ಆನಂದ್ ಅವರು ಮೆಕ್ಸಿಕೋದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಜಂಟಿ ಆಗ್ರಸ್ಥಾನದಲ್ಲಿ ಮುಂದುವರಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿದರೂ ಆನಂದ್ ಸಾಂಪ್ರದಾಯಿಕ ಎದುರಾಳಿ ರಷ್ಯಾದ ವ್ಲಾದಿಮೀರ್ ಕ್ರಾಮ್ನಿಕ್ ಜೊತೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.
2006: ಇಸ್ಲಾಂ ಧರ್ಮದ ಬಗ್ಗೆ ತಾವು ಆಡಿದ ಮಾತುಗಳಿಗೆ ವಿಶ್ವದಾದ್ಯಂತ ಮುಸ್ಲಿಮರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಪ್ 16ನೇ ಬೆನೆಡಿಕ್ಟ್ ಅವರು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಿದರು. `ಇಸ್ಲಾಂ ಧರ್ಮದ ಬಗ್ಗೆ ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ. ಮುಸ್ಲಿಮರು ತಮ್ಮ ಧರ್ಮದ ಮೇಲೆ ಹೊಂದಿರುವ ನಂಬಿಕೆಯನ್ನು ಗೌರವಿಸುತ್ತೇನೆ. ನನ್ನ ಮಾತುಗಳ `ನೈಜ ಅರ್ಥವನ್ನು' ತಿಳಿದುಕೊಳ್ಳಬೇಕು' ಎಂದು ಪೋಪ್ ಬೆನೆಡಿಕ್ಟ್ ಕೋರಿರುವುದಾಗಿ ವ್ಯಾಟಿಕನ್ ತಿಳಿಸಿತು. ಜರ್ಮನಿಯ ರೆಗೆನ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಪೋಪ್ ಅವರು `ಜಿಹಾದ್' ಅಥವಾ `ಪವಿತ್ರಯುದ್ಧ'ಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಸ್ತಾಪವು ಇಸ್ಲಾಂ ಬಗೆಗಿನ ಟೀಕೆಯಾಗಿದೆ ಎಂದು ಹೇಳಿ ವಿಶ್ವದಾದ್ಯಂತ ಖಂಡನೆ ವ್ಯಕ್ತಪಡಿಸಿದ ಮುಸ್ಲಿಂ ನಾಯಕರು ಪೋಪ್ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.
1987: ಭೂಮಿಯ ಓಝೋನ್ ಪದರ ರಕ್ಷಣೆ ಉದ್ದೇಶದ ಒಪ್ಪಂದ `ಮಾಂಟ್ರಿಯಲ್ ಪ್ರೊಟೊಕಾಲ್' ಗೆ ಎರಡು ಡಜನ್ ರಾಷ್ಟ್ರಗಳು ಸಹಿ ಹಾಕಿದವು. 2000ದ ವೇಳೆಗೆ ಹಾನಿಕಾರಕ ರಾಸಾಯನಿಕ ವಸ್ತುಗಳ ಮೂಲಕ ಉಂಟಾಗುವ `ಹೊಗೆ'ಗಳನ್ನು ಕಡಿಮೆಗೊಳಿಸಲು ಈ ಒಪ್ಪಂದ ರಾಷ್ಟ್ರಗಳಿಗೆ ಕರೆ ನೀಡಿತು.
1978: ಇರಾನಿನಲ್ಲಿ ಭೂಕಂಪ. 25,000 ಮಂದಿ ಸಾವು.
1977: ಭಾರತದ ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಕೇಸರಭಾಯಿ ಕೇರ್ಕರ್ ನಿಧನರಾದರು.
1932: ಮಲೇರಿಯಾ ಹರಡಲು ಸೊಳ್ಳೆಗಳು ಕಾರಣ ಎಂದು ಸಾಬೀತು ಪಡಿಸಿದ ವೈದ್ಯ ರೊನಾಲ್ಡ್ ರಾಸ್ (13-5-1857ರಿಂದ 16-9-1932) ಈದಿನ ಲಂಡನ್ನಿನಲ್ಲಿ ನಿಧನರಾದರು. ಬ್ರಿಟಿಷ್ ಸೈನ್ಯದಲ್ಲಿ ಜನರಲ್ ಆಗಿದ್ದ ಸರ್. ಸಿ.ಸಿ.ಜಿ. ರಾಸ್ ಅವರ ಮಗನಾದ ರೊನಾಲ್ಡ್ ರಾಸ್ ಲಂಡನ್ನಿನ ಬಾರ್ಥೊಲೋಮೊ ಆಸ್ಪತೆಯಲ್ಲಿ ಭಾರತೀಯ ವೈದ್ಯಕೀಯ ಸೇವೆಗೆ ಸೇರಿ 1892ರಲ್ಲಿ ಮಲೇರಿಯಾ ಬಗ್ಗೆ ಅಧ್ಯಯನ ಶುರು ಮಾಡಿದರು. 1894ರಲ್ಲಿ ಅವರು ಮಲೇರಿಯಾ ಹರಡುವಲ್ಲಿ ಸೊಳ್ಳೆಗಳ ಪಾತ್ರವಿದೆ ಎಂದು ಪತ್ತೆಹಚ್ಚಿದರು. ನಂತರ ಭಾರತ ಮತ್ತು ಆಫ್ರಿಕದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ ಎಂದು ಖಚಿತ ಪಡಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಈ ಮಹತ್ತರ ಕೊಡುಗೆಗಾಗಿ ಅವರಿಗೆ 1902ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
1923: ಸಿಂಗಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಜನ್ಮದಿನ. 1959ರಿಂದ 1990ರವರೆಗೆ ಪ್ರಧಾನಿಯಾಗಿದ್ದ ಅವರು ಸಿಂಗಪುರವನ್ನು ವಸಾಹತುಶಾಹಿಯ ಕಪಿಮುಷ್ಠಿಯಿಂದ ಬಿಡಿಸಿ ಇಂದಿನ ಉನ್ನತ ತಂತ್ರಜ್ಞಾನದ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸಿದರು.
1916: ಖ್ಯಾತ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ(1916-2004) ಜನ್ಮದಿನ. ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. 2004ರ ಡಿಸೆಂಬರ್ 11ರಂದು ಅವರು ನಿಧನರಾದರು.
1913: ಬ್ರಿಟಿಷರಿಂದ ಗಾಂಧೀಜಿ ಪತ್ನಿ ಕಸ್ತೂರಬಾ ಬಂಧನ.
1835: ಎಚ್ ಎಂ ಎಸ್ ಬೀಗಲ್ ನೌಕೆಯ ಮೂಲಕ ಬ್ರಿಟಿಷ್ ನಿಸರ್ಗ ಸಂಶೋಧಕ ಚಾರ್ಸ್ ಡಾರ್ವಿನ್ ದಕ್ಷಿಣ ಆಫ್ರಿಕದ ಪಶ್ಚಿಮಕ್ಕೆ ಸಮಭಾಜಕ ವೃತ್ತದಿಂದ 600 ಮೈಲು ದೂರದಲ್ಲಿರುವ ಗ್ಯಾಲಾಪಗೋಸ್ ಆರ್ಕಿಪೆಲಾಗೊ ದ್ವೀಪಗಳ ಗುಂಪಿಗೆ ಆಗಮಿಸಿದ. ಗ್ಯಾಲಾಪಗೋಸ್ ನ ಜೀವಸಂಕುಲ ಕುರಿತು ಐದು ವಾರಗಳ ಅಧ್ಯಯನ ನಡೆಸಿದ. ಬೃಹತ್ ಆಮೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಬಗೆ ಇದ್ದುದನ್ನು ಆತ ಗಮನಿಸಿದ. ಇವು `ಸಹಜ ಆಯ್ಕೆ'ಯ ಡಾರ್ವಿನ್ ಸಿದ್ಧಾಂತಕ್ಕೆ ಕಾಣಿಕೆ ಸ್ಲಲಿಸಿದವು.
1810: ಸ್ಪ್ಯಾನಿಷ್ ಆಳ್ವಿಕೆಯಿಂದ ಮುಕ್ತಿ ಪಡೆಯುವ ಸಲುವಾಗಿ ಮೆಕ್ಸಿಕನ್ ಕ್ರಾಂತಿ ಆರಂಭವಾಯಿತು. ಈದಿನವನ್ನು ಮೆಕ್ಸಿಕೊದ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment