Wednesday, October 28, 2009

ಇಂದಿನ ಇತಿಹಾಸ History Today ಅಕ್ಟೋಬರ್ 25

ಇಂದಿನ ಇತಿಹಾಸ

ಅಕ್ಟೋಬರ್ 25

ಅಮೆರಿಕದಲ್ಲಿ ಆರ್ಥಿಕ ಹಿನ್ನಡೆ ಇನ್ನೂ ಮುಂದುವರಿದು, ಜಾರ್ಜಿಯಾದ ಅಲ್ಫಾ ಬ್ಯಾಂಕ್ ಕೂಡಾ ನಷ್ಟದ ದವಡೆಗೆ ಸಿಲುಕಿತು. ಹಣಕಾಸು ಬಿಕ್ಕಟ್ಟಿಗೆ ತುತ್ತಾದ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಇದು 16ನೆಯದಾಗಿದ್ದು, ಇದೇ ವೇಳೆಗೆ ಸ್ಟೀಮ್ಸ್ ಬ್ಯಾಂಕ್ ಮುಂದೆ ಬಂದು ಅಲ್ಫಾ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿತು.

2008: ಬಾಹ್ಯಾಕಾಶ ಇಲಾಖೆ ಹಾಗೂ ಸೇನಾ ವಿಭಾಗದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದನ್ನು ಕೇಂದ್ರ ಮಹಾಲೇಖಪಾಲರ ವರದಿ ಪತ್ತೆಹಚ್ಚಿತು. 1986ರ ನಂತರ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಇಲಾಖೆಯ ವ್ಯವಹಾರಗಳ ಬಗ್ಗೆ ಲೆಕ್ಕಪರಿಶೋಧನೆ ಮಾಡಿದ ಈ ವಿಸ್ತೃತ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಜಗತ್ತಿನ ಅತಿ ಎತ್ತರದ ಯುದ್ಧಭೂಮಿಗಳ ಪೈಕಿ ಒಂದಾಗಿರುವ ಹಿಮಾಚ್ಛಾದಿತ ಸಿಯಾಚಿನ್ ಪ್ರದೇಶದಲ್ಲಿ ಗಡಿ ಕಾಯುವ ಯೋಧರಿಗೆ ಚಳಿ ತಡೆದುಕೊಳ್ಳಲು ನೀಡಲಾಗುವ ವಿಶೇಷ ಬಟ್ಟೆಗಳು `ಭಾಗಶಃ ಹರಿದುಹೋಗಿರುವಂತಹವು ಹಾಗೂ ಬಳಕೆ ಮಾಡಿರುವಂತಹವು' ಎಂದು ಇನ್ನೊಂದು (ಸಿಎಜಿ) ವರದಿ ಹೇಳಿತು. ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸಮರ್ಪಕವಾದ ವಿಶೇಷ ಬಟ್ಟೆ ಹಾಗೂ ಬೆಟ್ಟಗುಡ್ಡಗಳನ್ನು ಹತ್ತಲು ಬಳಸುವ ವಿಶೇಷ ಸಲಕರಣೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ಸೇನೆ ವಿಫಲವಾಗಿದೆ ಎಂದು ವರದಿ ತಿಳಿಸಿತು.

2008: ಅಮೆರಿಕದಲ್ಲಿ ಆರ್ಥಿಕ ಹಿನ್ನಡೆ ಇನ್ನೂ ಮುಂದುವರಿದು, ಜಾರ್ಜಿಯಾದ ಅಲ್ಫಾ ಬ್ಯಾಂಕ್ ಕೂಡಾ ನಷ್ಟದ ದವಡೆಗೆ ಸಿಲುಕಿತು. ಹಣಕಾಸು ಬಿಕ್ಕಟ್ಟಿಗೆ ತುತ್ತಾದ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಇದು 16ನೆಯದಾಗಿದ್ದು, ಇದೇ ವೇಳೆಗೆ ಸ್ಟೀಮ್ಸ್ ಬ್ಯಾಂಕ್ ಮುಂದೆ ಬಂದು ಅಲ್ಫಾ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿತು.

2008: ತಿರುಪತಿ-ತಿರುಮಲ ದೇವಸ್ಥಾನದ ಬೆಟ್ಟಕ್ಕೆ `ರೋಪ್ ವೇ' ನಿರ್ಮಿಸಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗುವುದು. ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠ `ರೋಪ್ ವೇ' ನಿರ್ಮಿಸಲು ಸಮ್ಮತಿ ನೀಡಿತು. ರೋಪ್ ವೇ ಕುರಿತಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯು ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಸ್ಪಷ್ಟೀಕರಣವನ್ನು ಸುಪ್ರೀಂಕೋರ್ಟಿನಿಂದ ಬಯಸಿತ್ತು. ಈ ವಿಷಯವನ್ನು ಕೋರ್ಟ್ ಕೇಂದ್ರ ಸಬಲೀಕರಣ ಸಮಿತಿ ಗಮನಕ್ಕೆ ತಂದಿತ್ತು.

2008: ಗುತ್ತಿಗೆ ಕಾಮಗಾರಿ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇರೆಗೆ ಸಿಬಿಐ ನ್ಯಾಯಾಲಯವೊಂದು ಸಿಕ್ಕಿಮಿನ ಮಾಜಿ ಮುಖ್ಯಮಂತ್ರಿ ನರ ಬಹಾದ್ದೂರ್ ಭಂಡಾರಿ ಮತ್ತು ಐಎಎಸ್ ಅಧಿಕಾರಿ ಪಿ. ಕೆ. ಪ್ರಧಾನ್ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತು. 1984ರಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಧೀಶ ಎಸ್. ಡಬ್ಲ್ಯು. ಲೆಪಚ ಅವರು ಇತರ 8 ಮಂದಿ ಗುತ್ತಿಗೆದಾರರಿಗೆ ತಲಾ 5 ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಅಂದಿನ ಬಿ. ಬಿ. ಗುರುಂಗ್ ಸರ್ಕಾರದ ಅವದಿಯಲ್ಲಿ ಭಂಡಾರಿ ಮತ್ತು ಅಂದಿನ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಪ್ರಧಾನ್ ಅವರು ತಮ್ಮ ಹುದ್ದೆಯ ಘನತೆ ಬದಿಗಿಟ್ಟು ತಮಗೆ ಇಷ್ಟಬಂದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದರು.

2008: ಯೂರೋಪಿನ ಮುಂಚೂಣಿ ಮರುಸಂಸ್ಕರಣಾ ಕಂಪೆನಿ ಬಕ್ಷಿಯ ಒಡೆಯ ಅನಿವಾಸಿ ಭಾರತೀಯ ರಂಜಿತ್ ಸಿಂಗ್ ಬಕ್ಷಿ ಅವರು ಈ ಬಾರಿಯ ಪ್ರತಿಷ್ಠಿತ `ಏಷ್ಯಾ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಆಯ್ಕೆಯಾದರು. `ಜೆ ಅಂಡ್ ಎಚ್ ಸೇಲ್ಸ್ ಇಂಟರ್ ನ್ಯಾಷನಲ್' ಸಂಸ್ಥೆಯ ಅಧ್ಯಕ್ಷರೂ ಆದ ಬಕ್ಷಿ ಇತ್ತೀಚೆಗೆ ಬ್ರಷೆಲ್ಸಿನಲ್ಲಿರುವ ಅಂತಾರಾಷ್ಟ್ರೀಯ ಪಿಡಿಬಿಯ ಅಧ್ಯಕ್ಷರಾಗಿ ನೇಮಕವಾದರು. ಇದು ಪುನರ್ ಸಂಸ್ಕರಣಾ ರಂಗದ 70 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ.

2008: ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ. ಭಂಡಾರಿ (72) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಚಿರಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಕಣ್ಣೇಕಟ್ಟೆ ಕಾಡೆಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್é್ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೊಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

2007: ಪ್ರಯಾಣಿಕರ ಅತಿ ದೊಡ್ಡ 'ಜಂಬೋ ವಿಮಾನ' ಏರ್ಬಸ್ ಎ380 ಈದಿನ ಸಿಂಗಪುರದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸಿತು. ಸಿಂಗಪುರ ಏರ್ ಲೈನ್ಸಿಗೆ ಸೇರಿದ ಈ ವಿಮಾನದ ಮೊದಲ ಐತಿಹಾಸಿಕ ಹಾರಾಟದಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದು ಟಿಕೆಟುಗಳನ್ನು ಖರೀದಿಸಿದರು. ಬ್ರಿಟನ್ ನಾಗರಿಕನೊಬ್ಬ ಒಂದು ಲಕ್ಷ ಡಾಲರ್ (40 ಲಕ್ಷ ರೂಪಾಯಿ) ಹಣ ಕೊಟ್ಟು ಟಿಕೆಟ್ ಖರೀದಿಸಿದ್ದು ದಾಖಲೆಯಾಯಿತು. ಆನ್ ಲೈನ್ ಹರಾಜು ಮೂಲಕ ಟಿಕೆಟ್ ಮಾರಾಟ ಮಾಡಲಾಯಿತು. ಎಲ್ಲ 455 ಪ್ರಯಾಣಿಕರಿಗೆ ಸಿಂಗಪುರ ಏರ್ ಲೈನ್ಸ್ ಶಾಂಪೇನ್ ಕಾಣಿಕೆಯಾಗಿ ನೀಡಿತು. ಮಾನವ ನಿರ್ಮಿತ ಅತಿ ದೊಡ್ಡ ಹಾರಾಟದ ವಸ್ತು ಇದಾಗಿದೆ ಎಂಬ ಹೆಗ್ಗಳಿಕೆ ಹೊತ್ತಿರುವ ಎರಡು ಅಂತಸ್ತಿನ ಈ ವಿಮಾನದಲ್ಲಿ 853 ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

2007: ವಿವಾಹ ನೋಂದಣಿಯನ್ನು ಎಲ್ಲ ಧರ್ಮದವರಿಗೂ ಕಡ್ಡಾಯಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿತು. ವಿವಾಹ ನೋಂದಣಿ ಕಡ್ಡಾಯ ಎಂಬುದಾಗಿ ಹಿಂದೆ ನೀಡಿದ್ದ ಆದೇಶವು ಸರ್ವ ಧರ್ಮೀಯರಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆದೇಶ ನೀಡಿದರು. ವಿವಾಹ ನೋಂದಣಿ ಕಾಯ್ದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತು.

2007: ಬಳ್ಳಾರಿ ಜಿಲ್ಲೆಯ ಜೆಎಸ್ ಡಬ್ಲು ಸ್ಟೀಲ್ಸ್ ಲಿಮಿಟೆಡ್ ಕಂಪೆನಿಯು ಪ್ರಸ್ತುತ ಹಣಕಾಸು ಸಾಲಿನ ಅರ್ಧ ವರ್ಷದ ಅಂತ್ಯಕ್ಕೆ 511.23 ಕೋಟಿ ರೂಪಾಯಿಗಳ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಈ ಬಾರಿ ಶೇ 48ರಷ್ಟು ಪ್ರಗತಿಯಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಭಾರತದಲ್ಲಿ ಉಕ್ಕು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

2007: ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಅವರನ್ನು ಸರಣಿ ಬಾಂಬ್ ಸ್ಫೋಟಿಸಿ ಕೊಲ್ಲಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರಿನ ವಿಶೇಷ ನ್ಯಾಯಾಲಯವು ಈದಿನ ಮತ್ತೆ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರಿಂದಾಗಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ 40ಕ್ಕೆ ಏರಿತು. ನ್ಯಾಯಾಧೀಶ ಕೆ. ಉದಿರಪತಿ ಅವರು ಬಾಂಬ್ ಸ್ಫೋಟದ ರೂವಾರಿ ಅಲ್ ಉಮ್ಮಾ ಸಂಘಟನೆ ಸಂಸ್ಥಾಪಕ ಎಸ್. ಎ. ಬಾಷಾ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಆಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ರೂಪಿಸಲಾಗಿದ್ದ `ಆಪರೇಶನ್ ಅಲ್ಲ್ಲಾಹೋ ಅಕ್ಬರ್' ಹೆಸರಿನ ಸರಣಿ ಬಾಂಬ್ ಸ್ಫೋಟಗಳಿಂದಾಗಿ ಒಟ್ಟು 58 ಜನರು ಸತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಾಂಬುಗಳನ್ನು ಇಟ್ಟದ್ದಕ್ಕಾಗಿ ವಜೀರ್ ಉರುಫ್ ಅಬ್ದುಲ್ ವಜೀರ್ ಎಂಬಾತನಿಗೆ ಅತಿ ಹೆಚ್ಚು, ಅಂದರೆ ನಾಲ್ಕು ಜೀವಾವಧಿ ಶಿಕ್ಷೆ ಹಾಗೂ ಇತರ ಅಪರಾಧಗಳಿಗೆ 124 ವರ್ಷ ಅವಧಿಯ ಶಿಕ್ಷೆ ಪ್ರಕಟಿಸಲಾಯಿತು.

2007: ಮಂಡ್ಯದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ, ಸಾಹಿತಿ ನೀಳಾದೇವಿ ಆಯ್ಕೆಯಾದರು.

2007: ಗುಜರಾತಿನ ಜಾಮ್ನಗರದ ಅಂತಾರಾಷ್ಟ್ರೀಯ ಆಯುರ್ವೇದ ವೈದ್ಯರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಒಟ್ಟು 21 ಜನ ಖ್ಯಾತ ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅಹಮ್ಮದಾಬಾದಿನ ಡಾ. ತಪನ್ ಕುಮಾರ್ ವೈದ್ಯ ಆಯುರ್ವೇದ ಭೂಷಣ ಪ್ರಶಸ್ತಿಗೆ ಬಾಜನರಾದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ: ಡಾ. ಪ್ರಸನ್ನ ಎನ್. ರಾವ್ (ಆಯುರ್ವೇದ ಚಾಣಕ್ಯ), ಕೊಟ್ಟಕ್ಕಲ್ಲಿನ ಡಾ. ಈ. ಸುರೇಂದ್ರನ್ (ಪಂಚಕರ್ಮ ರತ್ನ), ಉಡುಪಿಯ ಡಾ. ಯು. ಶ್ರೀಕಾಂತ್ (ಪಂಚಕರ್ಮ ಭೂಷಣ), ಅಹಮದಾಬಾದಿನ ಡಾ.ತಪನ್ ಕುಮಾರ್ ವೈದ್ಯ (ಆಯುರ್ವೇದ ಭೂಷಣ 2007), ಡಾ. ಭೀಮಸೇನ್ ಬೆಹರಾ (ಆಯುರ್ವೇದ ಭೂಷಣ 2006), ಮಣಿಪಾಲದ ಡಾ.ಕೆ.ಜೆ. ಮಳಗಿ (ಆಯುರ್ವೇದ ಭೂಷಣ 2005), ಡಾ. ಸಂಜಯ್ (ಆಯುರ್ವೇದ ಭೂಷಣ 2004), ಕೋಲ್ಕತ್ತದ ಡಾ. ಬಿ.ಪಿ. ವಾ (ಸಂಸ್ಥೆಯ ಶ್ರೇಷ್ಠ ಮುಖ್ಯಸ್ಥ), ಹಾಸನದ ಡಾ. ಮುರಳೀಧರ್ ಪೂಜಾರ್ (ಶ್ರೇಷ್ಠ ಶಿಕ್ಷಕ 2005), ಹಾಸನದ ಡಾ. ನಾರಾಯಣ ಪ್ರಕಾಶ್ (ಶ್ರೇಷ್ಠ ಮಾನಸಿಕ ರೋಗ ತಜ್ಞ), ಕೇರಳದ ಡಾ. ಸಂತೋಷ್ ನಾಯರ್ (ಆಯುರ್ವೇದ ಭೂಷಣ ಸಿದ್ಧಾಂತ), ಡಾ. ಶ್ರೀನಿವಾಸ್ ಸಾಹಿ (ಶ್ರೇಷ್ಠ ಸಂಶೋಧನಾ ಅಧಿಕಾರಿ 2007), ಜಾಮ್ನಗರದ ಡಾ. ಸಂತೋಷ್ ಭಟ್ಟದ್ (ಶ್ರೇಷ್ಠ ಪಂಚಕರ್ಮ ವೈದ್ಯ 2005), ಡಾ. ಎಂ. ಅಶ್ವಿನಿಕುಮಾರ್ (ಶ್ರೇಷ್ಠ ಪಂಚಕರ್ಮ ವೈದ್ಯ 2006), ಮೂಡುಬಿದರೆಯ ಡಾ. ಪ್ರಸನ್ನ ಐತಾಳ್ (ಶ್ರೇಷ್ಠ ಜಾಗತಿಕ ಪಂಚಕರ್ಮ ಶಿಕ್ಷಕ), ಬೆಂಗಳೂರಿನ ಡಾ. ಬಿ.ಎನ್. ಶ್ರೀಧರ್ (ಶ್ರೇಷ್ಠ ಸಂಶೋಧನಾ ಅಧಿಕಾರಿ), ಸುಳ್ಯದ ಡಾ.ಎಚ್. ಗುರುರಾಜ್ (ಶ್ರೇಷ್ಠ ಪಂಚಕರ್ಮ ವೈದ್ಯ 2007). ಇದೇ ಸಂದರ್ಭದಲ್ಲಿ ಡಾ. ಬಿ.ಕೆ. ಶೋಭಾ, ಡಾ. ಬಿ.ಎ. ಲೋಹಿತ್, ಡಾ. ಪಿ.ಕೆ. ಪಂಡ ಅವರು ಅಕಾಡೆಮಿ ಫೆಲೋಶಿಪ್ ಪಡೆದರು.

2007: ವಿದ್ಯುನ್ಮಾನ ಸರಕು ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟದ ಜಾಗತಿಕ ಸಂಸ್ಥೆ ಕೂಕ್ಸನ್ ಎಲೆಕ್ಟ್ರಾನಿಕ್ಸ್, ಬೆಂಗಳೂರಿನಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರ ಆರಂಭಿಸಿತು.

2006: ಮರೆಯಾಗಿ ಹೋಗುತ್ತಿರುವ ಸಾಂಪ್ರದಾಯಿಕ `ಎಂಬ್ರಾಯಿಡರಿ ಕಲೆ'ಗೊಂದು ಪುಟ್ಟ ಉದ್ಯಮದ ರೂಪ ಕೊಟ್ಟು ಅಂತಾರಾಷ್ಟ್ರೀಯ ಗಮನ ಸೆಳೆದ ಗುಜರಾತಿನ ಕಛ್ ನ 73ರ ಹರೆಯದ ಗೃಹಿಣಿ ಚಂದಾ ಶ್ರಾಫ್ ಅವರು 1ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ `ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್ ಪ್ರೈಸ್' ಗೆ ಆಯ್ಕೆಯಾದರು.. ಈಕೆ ಈ ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತೀಯ ಪ್ರಜೆ. 117 ದೇಶಗಳ ಸುಮಾರು 1700 ಅಭ್ಯರ್ಥಿಗಳ ಪೈಕಿ ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಚಂದಾ ಒಬ್ಬರು. ಭುಜ್ ನ ವಾಸಿಯಾಗಿರುವ ಈಕೆ ಕಛ್ ನಲ್ಲಿ ಸೃಜನ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಾ ಕಳೆದ 38 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಕಲಿಸುವ ಮುಖಾಂತರ ಅಳಿದು ಹೋಗುತ್ತಿರುವ ಎಂಬ್ರಾಯಿಡರಿ ಕಲೆಗಳನ್ನು ಉಳಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. `ಎಂಬ್ರಾಯಿಡರಿ ಉತ್ಪನ್ನ ತಯಾರಿ' ಬಗ್ಗೆ ವಿಶೇಷ ಡಿಪ್ಲೋಮಾ ಪದವಿ ಪಡೆದಿರುವ ಚಂದಾ ಶ್ರಾಫ್ ಅವರು ಎಂಬ್ರಾಯಿಡರಿ ಉತ್ಪನ್ನಗಳ ತಯಾರಿಗೆ ಉದ್ಯಮದ ರೂಪ ಕೊಡುವುದಕ್ಕಾಗಿ ಗ್ರಾಮೀಣ ಮಹಿಳೆಯರನ್ನೊಳಗೊಂಡ ಪುಟ್ಟ ಸ್ವಸಹಾಯ ಗುಂಪುಗಳನ್ನು ಹುಟ್ಟು ಹಾಕಿ, ಉತ್ಪನ್ನಗಳನ್ನು ವಿವಿಧೆಡೆಗೆ ಕೊಂಡೊಯ್ದು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ. ಈಗ ಈ ಉತ್ಪನ್ನಗಳು ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ ಬರುತ್ತಿದ್ದು, ಕಛ್ ಸುತ್ತಮುತ್ತಲಿನ 120 ಗ್ರಾಮದ ಸುಮಾರು 22,000 ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಿದೆ.

2006: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಇಂಡೋನೇಷ್ಯದ ಉತ್ತರ ಸುಮಾತ್ರ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ರಷ್ಟು ಇತ್ತು.

2006: ಬೆಂಗಳೂರಿನಲ್ಲಿ ಪಾಸುದಾರರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 10 ಮಾರ್ಗಗಳಲ್ಲಿ ಹಸಿರು ಬಣ್ಣದ `ಪಾಸುದಾರರ ಬಸ್ಸು ಸೇವೆ' ಆರಂಭಿಸಿತು.

2006: ಭಾರತೀಯ ಗೋವು ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಸಲುವಾಗಿ 2007ರ ಏಪ್ರಿಲ್ 21ರಿಂದ 29ರವರೆಗೆ ಹೊಸನಗರದಲ್ಲಿ ಒಂಬತ್ತು ದಿನಗಳ ವಿಶ್ವ ಗೋ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು. ಗೋವು ಎಂದರೆ ಬರೀ ಹಾಲು ಮಾತ್ರ ಅಲ್ಲ, ಗೋವಿನ ಮೂತ್ರಕ್ಕೆ 80 ರೂಪಾಯಿ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಗೋವುಗಳು ಹೇಗೆ ಆರ್ಥಿಕವಾಗಿ ಲಾಭ ತರಬಲ್ಲವು ಎಂಬ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಮತ್ತು ಗೋವಿನಿಂದ ಲಭಿಸುವ ವಿವಿಧ ಉತ್ಪನ್ನಗಳ ಬಗ್ಗೆ ಸಂಶೋಧನಾ ಮಾಹಿತಿ ಸಂಗ್ರಹಿಸುವ ಸಲುವಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

1955: ಹಿಚಿ. ಬೋರಲಿಂಗಯ್ಯ ಜನನ.

1950: ಸಾಹಿತಿ ಪರಿಮಳಾಬಾಯಿ ಜನನ.

1949: ಸಾಹಿತಿ ಭಾಷ್ಯಂ ತನುಜೆ ಜನನ.

1944: ಅಮೆರಿಕದ ಮೂರನೇ ಮತ್ತು ಏಳನೇ ನೌಕಾಪಡೆಗಳು ದ್ವಿತೀಯ ಜಾಗತಿಕ ಸಮರಕಾಲದಲ್ಲಿ ನಡೆದ ಗಲ್ಫ್ ಯುದ್ಧದಲ್ಲಿ ಜಪಾನಿನ ಮುಖ್ಯ ನೌಕಾಪಡೆಯನ್ನು ಸೋಲಿಸಿದವು. ಇದರೊಂದಿಗೆ ಜಪಾನಿನ ಸಮುದ್ರ ಶಕ್ತಿ ಪತನಗೊಂಡಿತು.

1943: ಲೇಖಕ ಪ್ರಕಾಶಕ ಅನಂತರಾಮು ಅವರು ಎನ್. ಎಸ್. ಕೃಷ್ಣಪ್ಪ- ಸುಬ್ಬಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ಜನಿಸಿದರು.

1930: ಸಾಹಿತಿ ಡಿ.ಎಂ. ನಂಜುಂಡಪ್ಪ ಜನನ.

1883: ಭಾರತದ ಖ್ಯಾತ ಭೂಗರ್ಭ ತಜ್ಞ ದಾರಾಶಾ ನೊಶೆರ್ ವಾನ್ ವಾಡಿಯಾ (1883-1969) ಜನ್ಮದಿನ. 1957ರಲ್ಲಿ ಇವರು ಫೆಲೋ ಆಫ್ ರಾಯಲ್ ಸೊಸೈಟಿ ಗೌರವಕ್ಕೆ ಆಯ್ಕೆಯಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1881: ಪಾಬ್ಲೊ ಪಿಕಾಸೊ (1881-1973) ಜನ್ಮದಿನ. ಸ್ಪೇನಿನ ವರ್ಣಚಿತ್ರಗಾರ, ಶಿಲ್ಪಿ, ರಂಗಸ್ಥಳ ವಿನ್ಯಾಸಕಾರನಾದ ಈತ 20ನೇ ಶತಮಾನದ ಪ್ರಮುಖ ಕಲಾವಿದರಲ್ಲಿ ಒಬ್ಬನೆಂದು ಖ್ಯಾತಿ ಗಳಿಸಿದ ವ್ಯಕ್ತಿ.

1839: ಬ್ರಾಡ್ ಶಾ ಅವರ `ರೈಲ್ವೇ ಕಂಪಾನಿಯನ್' ಮೊತ್ತ ಮೊದಲ ಪ್ರಕಟಿತ ರೈಲ್ವೇ ಟೈಮ್-ಟೇಬಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಮ್ಯಾಂಚೆಸ್ಟರಿನಲ್ಲಿ ಪ್ರಕಟಗೊಂಡಿತು.

1825: ಎರೀ ಕಾಲುವೆ ಸಂಚಾರಕ್ಕೆ ಮುಕ್ತವಾಯಿತು. ಅದು ನ್ಯೂಯಾರ್ಕಿನ ಗ್ರೇಟ್ ಲೇಕ್ಸ್ ನ್ನು ಹಡ್ಸನ್ ನದಿಯ ಮುಖಾಂತರವಾಗಿ ಸಂಪರ್ಕಿಸಿತು. ಅದರ ಉದ್ದ 365 ಮೈಲುಗಳು, ಅಗಲ 40 ಅಡಿಗಳು ಮತ್ತು ಆಳ 1.2 ಮೀಟರುಗಳು.

1605: ಮೊಘಲ್ ಚಕ್ರವರ್ತಿಗಳ ಪೈಕಿ ಅತ್ಯಂತ ಹೆಚ್ಚು ಖ್ಯಾತಿ ಪಡೆದ ಅಕ್ಬರ್ ಆಗ್ರಾದಲ್ಲಿ ತನ್ನ 63ನೇ ವಯಸ್ಸಿನಲ್ಲಿ ಮೃತನಾದ. ಆಗ್ರಾ ಬಳಿಯ ಸಿಕಂದ್ರಾದಲ್ಲಿ ಆತನ ಅಂತ್ಯಕ್ರಿಯೆ ನೆರವೇರಿಸಲಾಯಿತು. 1691ರಲ್ಲಿ ಜಾಟರು ಸಮಾಧಿಯನ್ನು ಹಾನಿ ಪಡಿಸಿ ಎಲುಬುಗಳನ್ನು ಸುಟ್ಟು ಹಾಕಿದರು.

No comments:

Advertisement