Tuesday, December 8, 2009

ಇಂದಿನ ಇತಿಹಾಸ History Today ನವೆಂಬರ್ 18


ಇಂದಿನ ಇತಿಹಾಸ

ನವೆಂಬರ್ 18

ಬೆಂಗಳೂರಿನ ಅರಮನೆ ಮೈದಾನ ಈದಿನ ಗೋವಿಗಾಗಿ ಮರುಗಿತು, ಗೋವಿನ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಲಕ್ಷ ಲಕ್ಷ ಬಾರಿ ಗೋವಿಗೆ ಆರತಿ ಬೆಳಗಿ ಗೋವಿನ ಕಣ್ಣಲ್ಲಿ ವಿಶೇಷ ಆಶಾಕಿರಣವೊಂದನ್ನು ಹೊರಹೊಮ್ಮಿಸಿತು. ಗೋ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿತು.

2008:  ಬ್ರಿಟಿಷ್ ಕೊಲಂಬಿಯಾ ದ್ವೀಪದ ಕಡಲ ತೀರದಲ್ಲಿ ಅಪಘಾತಕ್ಕೊಳಗಾದ ಪುಟ್ಟ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಒಟ್ಟು ಎಂಟು ಮಂದಿಯಲ್ಲಿ ಕೊಡಗು ಜಿಲ್ಲೆ ಸಿದ್ದಾಪುರದ ಬಿದ್ದಂಡ  ಅಜಯ್ ಕಾರ್ಯಪ್ಪ  (34) ಸೇರಿದಂತೆ  ಏಳು ಜನರು ಸಾವನ್ನಪ್ಪಿದರು.

2008:  ಮಾಜಿ ವಿದೇಶಾಂಗ ಸಚಿವ ಕೆ.ನಟವರ್ ಸಿಂಗ್ ಅವರನ್ನು  ಬಹುಜನ ಸಮಾಜಪಕ್ಷದಿಂದ ಉಚ್ಚಾಟಿಸಲಾಯಿತು. ನಾಲ್ಕು ತಿಂಗಳ ಹಿಂದೆ ಬಹುಜನ ಸಮಾಜ ಪಕ್ಷ ಸೇರಿದ್ದ ನಟವರ್ ಸಿಂಗ್ ಅವರನ್ನು ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಉಚ್ಚಾಟಿಸಲಾಯಿತು.

2008: ನಾಡಿನ ಖ್ಯಾತ ತಬಲಾ ವಾದಕ ರಾಜು ಕುಲಕರ್ಣಿ (54) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ತಂದೆ ಸುಮನರಾವ ಕುಲಕರ್ಣಿ ಅವರಲ್ಲಿ ತಬಲಾ ಶಿಕ್ಷಣ ಕಲಿತಿದ್ದ ರಾಜು, 1998ರಿಂದ ಬೆಂಗಳೂರಿನಲ್ಲಿ ನೆಲೆಸಿ, ಸಂಗೀತಾಸಕ್ತರಿಗೆ ತಬಲಾ ಕಲಿಸುತ್ತಿದ್ದರು. ಭಾರತರತ್ನ ಭೀಮಸೇನ ಜೋಶಿ, ಜಸರಾಜ್, ಪಂ. ಮಾಧವ ಗುಡಿ, ಮಾಲಿನಿ ರಾಜೂರಕರ, ಅಜಯ ಚಕ್ರವರ್ತಿ, ಕಂಕಣಾ ಬ್ಯಾನರ್ಜಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ದಿಗ್ಗಜರಿಗೆ ರಾಜು ಕುಲಕರ್ಣಿ ಅವರು ತಬಲಾ ಸಾಥ್ ನೀಡಿದ್ದರು.

2008: ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ-2008ರ `ನುಡಿಸಿರಿ' ಪ್ರಶಸ್ತಿಯನ್ನು ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ನಾಡೋಜ ದರೋಜಿ ಈರಮ್ಮ, ಗೊ.ರು. ಚನ್ನಬಸಪ್ಪ, ಡಾ. ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ಬಹ್ರೈನ್ ಕನ್ನಡ ಸಂಘ ಇವರಿಗೆ ನೀಡಲು ತೀರ್ಮಾನಿಸಲಾಯಿತು.

2007: ಬೆಂಗಳೂರಿನ ಅರಮನೆ ಮೈದಾನ ಈದಿನ ಗೋವಿಗಾಗಿ ಮರುಗಿತು, ಗೋವಿನ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಲಕ್ಷ ಲಕ್ಷ ಬಾರಿ ಗೋವಿಗೆ ಆರತಿ ಬೆಳಗಿ ಗೋವಿನ ಕಣ್ಣಲ್ಲಿ ವಿಶೇಷ ಆಶಾಕಿರಣವೊಂದನ್ನು ಹೊರಹೊಮ್ಮಿಸಿತು. ಗೋ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿತು. 2007ರ ಮೇ ತಿಂಗಳಲ್ಲಿ ಹೊಸನಗರದಲ್ಲಿ ವಿಶ್ವ ಗೋ ಸಮ್ಮೇಳನ ನಡೆಸಿ ಗೋವಿಗಾಗಿಯೇ ತಮ್ಮ ಜೀವನ ಮುಡಿಪು ಎಂದು ಸಾರಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಬಹುದಿನಗಳ ಕನಸಾದ ಕೋಟಿ ನೀರಾಜನ ರಾತ್ರಿ 9ರ ಸುಮಾರಿಗೆ ಸಂಪನ್ನ ಗೊಳ್ಳುತ್ತಿದ್ದಂತೆಯೇ ಇಡೀ ಅರಮನೆ ಮೈದಾನವೇ ಲಕ್ಷ ದೀಪಗಳಿಂದ ಮಿಂಚಿತು. ಪುರುಷರಿಂದ ಆಗದ ಗೋ ಮಾತೆಯ ಸಂರಕ್ಷಣೆಗೆ ತಾವು ಕಂಕಣ ತೊಟ್ಟಿದ್ದೇವೆ ಎಂಬ ಸೂಚ್ಯ ಸಂದೇಶವನ್ನು ಮಾತೆಯರು ಜಗತ್ತಿಗೆ ಸಾರಿ ಹೇಳಿದರು. ಅಪರೂಪದ ದೇಶೀಯ ಗಿರ್ ತಳಿಯ ಗೋವಿನ ಬೃಹತ್ ಪ್ರತಿಕೃತಿಯನ್ನು ಹೊಂದಿದ್ದ ವೇದಿಕೆ ಎಲ್ಲರನ್ನೂ ಸ್ವಾಗತಿಸಿತು. ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹಿತ ಎಲ್ಲಾ ಗಣ್ಯರೂ ವೇದಿಕೆಯ ಕೆಳಭಾಗದಲ್ಲೇ ಕುಳಿತು ಗೋ ಮಾತೆಗೆ ತಮ್ಮ ಗೌರವ ಸಲ್ಲಿಸಿದರು. ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ವೇದಿಕೆಯೇರಿ ಭಾಷಣ ಮುಗಿದಂತೆ ಕೆಳಗಿಳಿದು ಬಂದು ಗೋವಿನ ಮುಂದೆ ತಾವೆಲ್ಲ ಸಣ್ಣವರೇ ಎಂಬುದನ್ನು ಮನಸಾರೆ ಒಪ್ಪಿಕೊಂಡರು. ರಾಘವೇಶ್ವರ ಶ್ರೀಗಳು ಗೋ ಸಂರಕ್ಷಣೆಯ ಮಹಾನ್ ಕಾರ್ಯಕ್ಕೆ ಕೈಹಚ್ಚಿ ಈಗಾಗಲೇ ಹಲವು ಮಹತ್ವದ ಕಾರ್ಯಕ್ರಮ ನಡೆಸಿದ್ದಾರೆ. ಕೋಟಿ ನೀರಾಜನ ಮೂಲಕ ಮತ್ತೊಮ್ಮೆ ಗೋವಿನ ಮಹತ್ವವನ್ನು ಸಾರಿದ್ದಾರೆ. ಅವರು ಬಯಸುವ ರೀತಿಯಲ್ಲಿ ಗೋ ಸಂರಕ್ಷಣೆಯ ಕಾರ್ಯಕ್ಕೆ ಸರ್ಕಾರ ಬದ್ಧ ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಮಾತನಾಡಿದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಹೃಷಿಕೇಶದ ಚಿದಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ರಾಘವೇಶ್ವರ ಶ್ರೀಗಳು ಮಾತನಾಡಿ, ಗೋವಿಗೆ ಆಗುತ್ತಿರುವ ನೋವನ್ನು ಪರಿಪರಿಯಾಗಿ ವಿವರಿಸಿದರು. `ಗೋ ರಾಷ್ಟ್ರವನ್ನಾಗಿ ಮಾಡುವುದೇ ತಮ್ಮ ಗುರಿ, ಪುರುಷರಿಂದ ಈ ಕಾರ್ಯ ಸಾಧ್ಯವಾಗಿಲ್ಲ. ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬ ಚಿಂತನೆಯೊಂದಿಗೆ ಮಹಿಳೆಯರು ಗೋ ಮಾತೆಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಾರಲು ಈ ಕಾರ್ಯಕ್ರಮ ನಡೆದಿದೆ. ಮಾತೆಯರು ದುರ್ಗೆಯರಾಗಬೇಕು' ಎಂದರು. ವಿ. ಮನೋಹರ್ ನಿರ್ದೇಶನದಲ್ಲಿ ಗೀತ-ಗಾಯನ ಹಾಗೂ ನೃತ್ಯಗಳು ನಡೆದವು. ನಿರುಪಮಾ ಮತ್ತು ರಾಜೇಂದ್ರ ಹಾಗೂ ಬಳಗದ ಗೋ ವಿಶ್ವರೂಪ ದರ್ಶನ ನೃತ್ಯ ರೂಪಕ ಗಮನ ಸೆಳೆಯಿತು. ಭೂಮಿಯ ಆಕಾರದ ವೇದಿಕೆಯಲ್ಲಿ ನಿಂತಿದ್ದ ಜೀವಂತ ಹಸು ನೆಲದ ಒಳಗಿಂದ ಮೇಲೆದ್ದು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಗೋವು ಮೇಲೆ ಬರುತ್ತಿದ್ದಂತೆಯೇ ಸಹಸ್ರಾರು ಮಹಿಳೆಯರು ಏಕ ಕಾಲಕ್ಕೆ ಗೋವಿಗೆ ದೀಪ ಬೆಳಗಿದರು.

2007: `ಪಕ್ಷಿ ಸಂಕುಲಗಳ ವರ್ಧನೆಗೆ ಕೃತಕ ಗೂಡುಗಳ ಪ್ರಯೋಗ' ಎಂಬ ಪ್ರಬಂಧವನ್ನು ಮಂಡಿಸಿದ ಮೈಸೂರು ಜಿಲ್ಲೆಯ ದಾಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಮಾದಲಾಂಬಿಕ ಪ್ರಸಕ್ತ ವರ್ಷದ `ಯುವ ವಿಜ್ಞಾನಿ' ಪ್ರಶಸ್ತಿಗೆ ಭಾಜನಳಾದಳು. ಮಂಗಳೂರು ಸಮೀಪದ ಪಿಲಿಕುಳ ನಿಸರ್ಗಧಾಮದಲ್ಲಿ `ಜೀವವೈವಿಧ್ಯ- ನಿಸರ್ಗದ ಪೋಷಣೆ, ನಮ್ಮೆಲ್ಲರ ಭವಿಷ್ಯಕ್ಕಾಗಿ' ಎಂಬ ವಿಷಯಾಧಾರಿತವಾಗಿ ನಡೆದ 15ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ 310 ಸ್ಪರ್ಧಾಳುಗಳಲ್ಲಿ ದಾಸನೂರಿನ  ರೈತ ಶಿವಮಲ್ಲಪ್ಪ ಮತ್ತು ರಾಜಮ್ಮ ದಂಪತಿ ಪುತ್ರಿ ಮಾದಲಾಂಬಿಕೆ ತನ್ನ ವಿಚಾರವನ್ನು ಸಮರ್ಥವಾಗಿ ಮಂಡನೆ ಮಾಡುವ ಮೂಲಕ `ಯುವವಿಜ್ಞಾನಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು.

2007: ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 2,300ಕ್ಕೆ ಏರಿತು. ಈ ಸಂಖ್ಯೆ 10,000 ದಾಟುವ ಸಂಭವ ಇದೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿತು.

2006: ಹಿರಿಯ ಲೇಖಕಿ ಕಾಕೋಳು ಸರೋಜಾ ರಾವ್ (64) ಅವರು ಬೆಂಗಳೂರಿನ ಮಲ್ಲೇಶ್ವರಂನ ರಾಮಕೃಷ್ಣ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. 60ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದ ಕಾಕೋಳು ಅವರ `ಸಂಯುಕ್ತ', `ಕರುಣಾಮಯಿ', `ಮಾಗಿ ಕನಸು', `ಬಾಳೆ ಹೊಂಬಾಳೆ', `ಮಾಂಗಲ್ಯ ಮಾತೆ, `ಇಂದ್ರಜಿತ್' ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವಿಶ್ವ ಮಹಿಳೆ ಮತ್ತಿತರ ಪುರಸ್ಕಾರಗಳು ಅವರ ಮುಡಿಗೇರಿದ್ದವು.

2006: ಇಂದೋರಿನ ಬಾಲಕಿ ಆಕಾಂಕ್ಷ ಸತತ 61 ಗಂಟೆಗಳ ಕಾಲ ಹಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಇಂದೋರಿನ ಯುವಕ ದೀಪಕ್ ಗುಪ್ತ (28) ಕೊಯಮತ್ತೂರಿನಲ್ಲಿ ಸತತ 55 ಗಂಟೆ ಸಂಗೀತ ಕಾರ್ಯಕ್ರಮ ನೀಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ. ಜರ್ಮನಿಯ ಹಾಡುಗಾರನ ಹೆಸರಿನಲ್ಲಿ ಇದ್ದ `ಗಿನ್ನೆಸ್' ದಾಖಲೆಯನ್ನು ಗುಪ್ತ ಅಳಿಸಿ ಹಾಕಿದ.

2006: `ಇರಾಕ್ ಮೇಲೆ ಅಮೆರಿಕ ಮತ್ತು ಇಂಗ್ಲೆಂಡ್ ನಡೆಸಿದ ದಾಳಿ ಒಂದು ದುರ್ಘಟನೆ' ಎಂದು ಅಲ್ ಜಜೀರಾದ ಹೊಸ ಇಂಗ್ಲಿಷ್ ಭಾಷಾ ಚಾನೆಲ್ ಒಂದಕ್ಕಾಗಿ ಸರ್ ಡೇವಿಡ್ ಫ್ರಾಸ್ಟ್ ಅವರಿಗೆ ನೀಡಿದ ಸಂದರ್ಶನದಲ್ಲಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಒಪ್ಪಿಕೊಂಡರು. ಸಂದರ್ಶನ ಕಾಲದಲ್ಲಿ ಸರ್ ಡೇವಿಡ್ ಅವರು ಅವರು `ಇರಾಕಿನಲ್ಲಿ ನಡೆಸಿದ ಹಸ್ತಕ್ಷೇಪ ದುರ್ಘಟನೆ ಎಂದು ಭಾವಿಸುವಿರಾ' ಎಂದು ಕೇಳಿದ್ದರು. `ಹೌದು. ಆದರೆ ಅದು ಇರಾಕಿನಲ್ಲಿ ಏಕೆ ಕಷ್ಟಕರ ಎಂಬುದನ್ನು ನಾನು ಜನರಿಗೆ ಹೇಳಬೇಕಾಗಿದೆ. ಅಲ್ ಖೈದಾ ಸಂಘಟನೆಯು ಒಂದು ಕೈಯಲ್ಲಿ ಸುನ್ನಿ ಬಂಡುಕೋರರನ್ನು ಮತ್ತು ಇನ್ನೊಂದು ಕೈಯಲ್ಲಿ ಇರಾನ್ ಬೆಂಬಲಿತ ಶಕ್ತಿಗಳಾದ ಶಿಯಾ ಉಗ್ರಗಾಮಿಗಳನ್ನು ಇಟ್ಟುಕೊಂಡು ಬಹುಸಂಖ್ಯಾತರ ಅಪೇಕ್ಷೆಯಾದ ಶಾಂತಿಯನ್ನು ಹದಗೆಡಿಸುವಂತಹ ನಿರ್ದಿಷ್ಟ ಕಾರ್ಯತಂತ್ರ ರೂಪಿಸಿ ಅಲ್ಪಸಂಖ್ಯಾತರ ಯುದ್ಧದ ಬಯಕೆಯನ್ನು ಬಹುಸಂಖ್ಯಾತರ ಮೇಲೆ ಹೇರಿದ್ದು ನಮಗೆ ಸಮಸ್ಯೆಯಾಯಿತು' ಎಂದು ಬ್ಲೇರ್ ಉತ್ತರಿಸಿದರು.

2005: ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಮಹಿಂದ ರಾಜಪಕ್ಸೆ ಜಯ ಗಳಿಸಿದರು. ಅವರು ಸಮೀಪದ ಪ್ರತಿಸ್ಪರ್ಧಿ ಮಾಜಿ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ಅವರನ್ನು 1.86 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.

2005: ಇರಾಕ್ ರಾಜಧಾನಿ ಬಾಗ್ದಾದಿನ ವಾಯವ್ಯ ಭಾಗದ ಖಾನಾಕ್ವಿನ್ ಪಟ್ಟಣದಲ್ಲಿ ಶಿಯಾ ಜನಾಂಗದ ಎರಡು ಮಸೀದಿಗಳ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 100 ಜನ ಹತರಾದರು. 85ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1995: ಇಂಟರ್ನೆಟ್ಟಿನಲ್ಲಿ ಸಂಗೀತ ಕಾರ್ಯಕ್ರಮ ಪ್ರಸಾರ ಮಾಡಿದ ಮೊತ್ತ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಲಿಂಗ್ ಸ್ಟೋನ್ಸ್ ಪಾತ್ರವಾಯಿತು.

1978: ಜೇಮ್ಸ್ ವಾರನ್ ಜೋನ್ಸ್ (1931-1978) ಗುಯಾನಾದಲ್ಲಿ ಅಮೆರಿಕದ ತನ್ನ ಪಂಥದ ಅನುಯಾಯಿಗಳ ಸಾಮೂಹಿಕ ಆತ್ಮಹತ್ಯೆಯ ನೇತೃತ್ವ ವಹಿಸಿದ. ಈ ಘಟನೆ `ಜೋನ್ಸ್ ಟೌನ್ ಮೆಸಾಕರ್' (ಜೋನ್ಸ್ ಟೌನ್ ಹತ್ಯಾಕಾಂಡ) ಎಂದೇ ಖ್ಯಾತಿ ಪಡೆಯಿತು. ಸಯನೈಡ್ ಮಿಶ್ರಿತ ಪಾನೀಯ ಸೇವಿಸಲು ತನ್ನ ಅನುಯಾಯಿಗಳಿಗೆ ಆಜ್ಞಾಪಿಸಿದ ಆತ ತಾನು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈ ಘಟನೆಯಲ್ಲಿ 276 ಮಕ್ಕಳು ಸೇರಿ 913 ಮಂದಿ ಸತ್ತರು.

1978: ಚಿತ್ರ ನಿರ್ಮಾಪಕ, ನಿರ್ದೇಶಕ ಧೀರೇಂದ್ರ ಗಂಗೂಲಿ ನಿಧನ.

1954: ಸಾಹಿತಿ ತುಳಸಿ ವೇಣುಗೋಪಾಲ್ ಜನನ.

1946: ಶಾಸನಶಾಸ್ತ್ರ ಬೋಧಕ, ಸಾಹಿತಿ ಡಾ. ಎಚ್. ಎಸ್. ಗೋಪಾಲರಾವ್ ಅವರು ಎಚ್. ಎನ್. ಸೂರ್ಯನಾರಾಯಣರಾವ್- ಮಹಾಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಜುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು.

1936: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಚಿದಂಬರಂ ಪಿಳ್ಳೈ ನಿಧನ.

1936: ಸಾಹಿತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಜನನ.

1928: ವಾಲ್ಟ್ ಡಿಸ್ನಿ ಅವರ `ಸ್ಟೀಮ್ ಬೋಟ್ ವಿಲ್ಲೀ' ಜೊತೆಗೆ `ಮಿಕ್ಕಿ ಮೌಸ್' ಜನ್ಮತಾಳಿತು. ಪರದೆಯಲ್ಲಿ ಸದ್ದಿಗೆ ಸರಿಯಾಗಿ ಓಡಾಡಿದ ಮೊತ್ತ ಮೊದಲ ಮಿಕ್ಕಿ ಕಾರ್ಟೂನ್ ಇದಾಗಿತ್ತು. 1988ರಲ್ಲಿ ಮಿಕಿ ಮೌಸ್ ನ 60ನೇ ಹುಟ್ಟುಹಬ್ಬವನ್ನು ವಾಲ್ಟ್ ಡಿಸ್ನಿ ಕಂಪೆನಿಯು ಆಚರಿಸಿತು.

1922: ಸಾಹಿತಿ ಚಂಪಾವತಿ ಮಹಿಷಿ ಜನನ.

1901: ಭಾರತೀಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿ. ಶಾಂತಾರಾಮ್ (1901-1990) ಹುಟ್ಟಿದ ದಿನ. ಭಾರತೀಯ ಚಿತ್ರೋದ್ಯಮಕ್ಕೆ ನೀಡಿದ ಗಣನೀಯ ಕೊಡುಗೆ ಇವರಿಗೆ 1986ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement