Saturday, December 26, 2009

ಇಂದಿನ ಇತಿಹಾಸ History Today ನವೆಂಬರ್ 30

ಇಂದಿನ ಇತಿಹಾಸ

ನವೆಂಬರ್ 30

ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 70 ಕಡೆ ಸರಣಿ ಸ್ಛೋಟಗಳು ನಡೆದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಗೃಹಸಚಿವ ಶಿವರಾಜ್ ಪಾಟೀಲ್ ಕೊನೆಗೂ ರಾಜೀನಾಮೆ ನೀಡಿದರು. ಪಾಟೀಲ್ ರಾಜೀನಾಮೆ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಯಿತು.
 2014: ನವದೆಹಲಿ: ಒಂದು ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬಂದಿದ್ದರೂ ಸರ್ಕಾರ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ್ದು ಬೆಳಕಿಗೆ ಬಂದಿತು. ಈ ವರ್ಷದ ಜನವರಿಯಲ್ಲಿ ನೇತಾಜಿಯ 117ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕರು ಸುಭಾಷ್ ಚಂದ್ರ ಬೋಸ್ ಬಗ್ಗೆ ಸರ್ಕಾರದ ಬಳಿಯಿರುವ 41 ವರ್ಗೀಕೃತ ದಾಖಲೆಗಳನ್ನು ಬಹಿರಂಗ ಪಡಿಸಲು ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ವ್ಯಕ್ತಿಯೊಬ್ಬರು ದಾಖಲೆ ಬಹಿರಂಗಕ್ಕೆ ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದ ಘಟನೆ ಘಟಿಸಿತು. ಪ್ರಧಾನಿ ಕಾರ್ಯಾಲಯ 41 ದಾಖಲೆಗಳ ಪೈಕಿ 2 ದಾಖಲೆಗಳನ್ನು ವರ್ಗೀಕೃತವಲ್ಲದ ದಾಖಲೆಗಳ ಪಟ್ಟಿಗೆ ಸೇರಿಸಿ ಉಳಿದ 39 ದಾಖಲೆಗಳನ್ನು ವರ್ಗೀಕೃತ ದಾಖಲೆ ಪಟ್ಟಿಯಲ್ಲೇ ಉಳಿಸಿಕೊಂಡಿದ್ದು, ದಾಖಲೆ ಬಹಿರಂಗಕ್ಕೆ ನಿರಾಕರಿಸಿತು. ದಾಖಲೆಗಳ ಬಹಿರಂಗದಿಂದ ಕೆಲವೊಂದು ದೇಶಗಳೊಂದಿಗೆ ಭಾರತದ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಆರ್​ಟಿಐನ ಸೆಕ್ಷನ್ 8(1)(ಎ) ಮತ್ತು ಸೆಕ್ಷನ್ 8(2)ರ ಅನ್ವಯ ದಾಖಲೆಗಳನ್ನು ಬಹಿರಂಗ ಪಡಿಸದೆ ಇರಬಹುದು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿತು. ಇಡೀ ದೇಶವೇ ಸುಭಾಷ್ ಚಂದ್ರ ಬೋಸ್ ಸಾವಿನ ಕುರಿತು ಮಾಹಿತಿ ತಿಳಿದುಕೊಳ್ಳಲು ಉತ್ಸುಕವಾಗಿದೆ. ಆದರೆ ಸರ್ಕಾರ ದಾಖಲೆ ಬಿಡುಗಡೆಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಮಾಹಿತಿ ಕೋರಿದ ಅರ್ಜಿದಾರರು ಹೇಳಿದರು..


2014: ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಸುಮಾರು 25 ಸುತ್ತು ಗುಂಡು ಹಾರಿಸಿತು.. ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ನಿರಂತರ ಗುಂಡಿನ ದಾಳಿ ನಡೆಸಿದವು. ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಯೋಧರು ಈದಿನ ನಿರಂತರ ಒಂದೂ ಮುಕ್ಕಾಲು ಗಂಟೆ ಗುಂಡಿನ ದಾಳಿ ನಡೆಸಿದರು. ಇಂದು ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿನಲ್ಲಿ ಆರಂಭವಾದ ಗುಂಡಿನ ದಾಳಿ 12.45ರ ಸುಮಾರಿನಲ್ಲಿ ನಿಂತಿತು ಎಂದು ಸೇನಾ ಮೂಲಗಳು ತಿಳಿಸಿದವು. ಸಾಂಬಾ ವಿಭಾಗದ ಭಾರತೀಯ ಗಡಿಯಲ್ಲಿ ಭಾರತೀಯ ಯೋಧರು ನಿರ್ಮಿಸುತ್ತಿರುವ ನಿರ್ಮಾಣ ಕಾಮಗಾರಿಯನ್ನು ಗುರಿಯಾಗಿಸಿಕೊಂಡೇ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಭಾರತೀಯ ಯೋಧನಿಗೂ ಗಾಯಗಳಾಗಿಲ್ಲ. ಪಾಕ್ ಸೇನೆಯ ಉದ್ಧಟತನಕ್ಕೆ ಭಾರತೀಯ ಯೋಧರು ತಿರುಗೇಟು ನೀಡಿದ್ದು, ಪಾಕ್ ಪಡೆಗಳತ್ತ ಗುಂಡಿನ ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಮತ್ತು ಗಡಿಯನ್ನು ನಿರಂತರವಾಗಿ ಕಾಯುವ ಉದ್ದೇಶದಿಂದ ಭಾರತೀಯ ಗಡಿಯಲ್ಲಿ ಭಾರತೀಯ ಸೇನೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದು ಪಾಕಿಸ್ತಾನಿ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ನಿಲ್ಲಿಸುವ ಉದ್ದೇಶದಿಂದಲೇ ದಾಳಿ ಮಾಡಿದ್ದಾರೆ ಎಂದು ಹೇಳಲಾಯಿತು.

2014: ಬೆಂಗಳೂರು: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಮರಿ ಮೊಮ್ಮಗ ಮಧುಕೇಶ್ವರ ದೇಸಾಯಿ ಅವರ ಮದುವೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಕೂಡ ಆಗಿರುವ ಮಧುಕೇಶ್ವರ ದೇಸಾಯಿ ಅವರು ಕಿಲೋಸ್ಕರ್ ಸಂಸ್ಥೆಯ ಮಾಲೀಕರ ಮಗಳು ಮತ್ತು ಮುಂಬೈ ಮೂಲದ ಪತ್ರಕರ್ತೆಯಾದ ಸ್ನೇಹ ಮೆನನ್ ಈದಿನ ವಿವಾಹವಾದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕಾಫಿಬೋರ್ಡ್ ಲೇಔಟ್‌ನಲ್ಲಿರುವ ಕಿರ್ಲೋಸ್ಕರ್ ಹೌಸ್‌ನಲ್ಲಿ ಮಧುಕೇಶ್ವರ ದೇಸಾಯಿ ಮತ್ತು ಸ್ನೇಹ ಮೆನನ್ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಶಾಸಕ ವಿ.ಸೋಮಣ್ಣ ಅವರು ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಲ್‌ಕೆ ಅಡ್ವಾಣಿ ಅವರು, ಬೆಂಗಳೂರಿಗೂ ನನಗೂ ನಿಕಟ ಸಂಬಂಧವಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲವನ್ನು ಇಲ್ಲಿನ ಜೈಲಿನಲ್ಲಿ ಕಳೆದಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. 'ಬೆಂಗಳೂರಿಗೆ ಬಂದು ತುಂಬಾ ದಿನಗಳಾಗಿದ್ದವು. ಅಲ್ಲದೆ ಬರುವಂಥ ಸಂದರ್ಭಗಳು ಎದುರಾಗಿರಲಿಲ್ಲ. ಹಿಂದೆ ಜನಚೇತನ ಯಾತ್ರೆ ವೇಳೆ ಇಲ್ಲಿಗೆ ಆಗಮಿಸಿದ್ದೆ. ಈಗ ಮಧು ಮದುವೆ ನನ್ನನ್ನು ಬೆಂಗಳೂರಿಗೆ ಕರೆತಂದಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕುಟುಂಬದ ಕುಡಿಯಾಗಿರುವ ಮಧುಕೇಶ್ವರ ದೇಸಾಯಿ ಜಗದೀಶ್ ದೇಸಾಯಿ ಅವರ ಪುತ್ರರಾಗಿದ್ದು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಈ ಹಿಂದೆ ಎಲ್‌ಕೆ ಅಡ್ವಾಣಿ ಅವರು ಹಮ್ಮಿಕೊಂಡಿದ್ದ ಜನಚೇತನ ಯಾತ್ರೆಯ ಸಂದರ್ಭದಲ್ಲಿಯೂ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುಕೇಶ್ವರ ದೇಸಾಯಿ ಅವರು ಮುಂದಾಳತ್ವ ವಹಿಸಿಕೊಂಡಿದ್ದರು.

2014: ಆಷ್​ಡಾಡ್: ಫಿಲ್ ಹ್ಯೂಸ್ ಸಾವು ಇನ್ನೂ ಹಸಿರಾಗಿರುವಾಗಲೇ ಕ್ರಿಕೆಟ್ ವಲಯಕ್ಕೆ ಮತ್ತೊಂದು ಆಘಾತಕಾರಿ ಸಾವಿನ ಸುದ್ದಿ ಅಪ್ಪಳಿಸಿತು. ವೇಗವಾಗಿ ಬಂದ ಚೆಂಡು ಕತ್ತಿಗೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಇಸ್ರೇಲ್ ತಂಡದ ಮಾಜಿ ನಾಯಕ, ಹಾಲಿ ಅಂಪೈರ್ ಹಿಲೆಲ್ ಅವಸ್ಕಾರ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರು.. ಆಷ್​ಡಾಡ್ ಕರಾವಳಿ ನಗರದಲ್ಲಿ ನಡೆಯುತ್ತಿದ್ದ ಲೀಗ್ ಟೂರ್ನಿಯಲ್ಲಿ ಈ ಘಟನೆ ನವೆಂಬರ್ 29ರ ಶನಿವಾರ ಸಂಭವಿಸಿದೆ ಎಂದು ವರದಿ ತಿಳಿಸಿತು. ಚೆಂಡು ಮೊದಲು ಸ್ಟಂಪ್ ತಗುಲಿ ಬಳಿಕ ಹಿಲೆಲ್ ಅವಸ್ಕಾರ್ ಅವರ ಕತ್ತಿಗೆ ಬಡಿದಿದ್ದು, ತಕ್ಷಣ ಅವಸ್ಕಾರ್ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ಆಟಗಾರರೆಲ್ಲ ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಪ್ರಯೋಜನಕಾರಿಯಾಗದೇ ಪ್ರಾಣ ಕಳೆದುಕೊಂಡರು ಎಂದು ಪಂದ್ಯದಲ್ಲಿ ಆಡುತ್ತಿದ್ದ ಆಟಗಾರ ಯೋನಾ ತಿಳಿಸಿದರು. 55 ವರ್ಷ ವಯಸ್ಸಿನ ಅವಸ್ಕಾರ್ ಮೂಲತಃ ಮುಂಬೈ ಮೂಲದವರಾಗಿದ್ದು, 1982ರಿಂದ 1997ರ ತನಕ ಇಸ್ರೇಲ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಅವಸ್ಕಾರ್ ಸಾವಿನ ಬಗ್ಗೆ ಇಸ್ರೇಲ್​ನ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ವೈದ್ಯರು, ಅವಸ್ಕಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ಚಿಕಿತ್ಸೆ ಫಲಕಾರಿಯಾಗುವ ಸ್ಥಿತಿಯಲ್ಲಿರಲಿಲ್ಲ. ಅವರು ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾರೆ ಎಂದು ತಿಳಿಸಿದರು. ಮೊನ್ನೆ ಮೊನ್ನೆಯಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್ ಪಂದ್ಯದಲ್ಲಿ ಅಬೋಟ್ ಎಸೆದ ವೇಗದ ಚೆಂಡು ತಗುಲಿ ಫಿಲ್ ಹ್ಯೂಸ್ ಕೆಲವೇ ಘಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಆಘಾತವನ್ನು ಮರೆಯುವುದಕ್ಕೂ ಮುನ್ನವೇ ಇಂತದೇ ಮತ್ತೊಂದು ಘಟನೆ ಕ್ರಿಕೆಟ್ ವಲಯದಲ್ಲಿ ಇನ್ನಷ್ಟು ಆತಂಕ ಮೂಡಿಸುವಂತೆ ಮಾಡಿತು.

2014:) ಅಟ್ಟಾರಿ (ಪಂಜಾಬ್): ಗುಜರಾತಿನ 35 ಮಂದಿ ಮೀನುಗಾರರು ಸೇರಿದಂತೆ 40 ಮಂದಿ ಭಾರತೀಯ ಕೈದಿಗಳನ್ನು ಪಾಕಿಸ್ತಾನವು ಬಿಡುಗಡೆ ಮಾಡಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದರು. ಕೈದಿಗಳನ್ನು 29 ನವೆಂಬರ್ 2014ರ ಶನಿವಾರ ತಡವಾಗಿ ಅಮೃತಸರದಿಂದ 30 ಕಿ.ಮೀ. ದೂರದ ಇಲ್ಲಿನ ಅಟ್ಟಾರಿ-ವಾಘಾ ಚೆಕ್​ಪೋಸ್ಟ್​ಗೆ ಕರೆತಂದ ಪಾಕಿಸ್ತಾನಿ ಸೈನಿಕರು ಭಾರತದ ಗಡಿ ಭದ್ರತಾ ಪಡೆ ವಶಕ್ಕೆ ಒಪ್ಪಿಸಿದರು. ಪಾಕಿಸ್ತಾನಿ ಜಲಪ್ರದೇಶ ಪ್ರವೇಶಿಸಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಬಹುತೇಕ ಕೈದಿಗಳು ಪಾಕಿಸ್ತಾನಿ ಸೆರೆಮನೆಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಇದ್ದರು.

2014: ಥಾಣೆ (ಮಹಾರಾಷ್ಟ್ರ): ರಾಸಾಯನಿಕ ವಿಷದ ಪ್ರಭಾವದಿಂದ 601 ಜನರು ಅಸ್ವಸ್ಥವಾಗಿರುವ ಘಟನೆ ಮಹಾರಾಷ್ಟ್ರದ ಧಾಣಿ ಬಳಿಯ ಉಲ್ಲಾಸ ನಗರ ಪ್ರದೇಶದಲ್ಲಿ ಘಟಿಸಿತು. ಉಲ್ಲಾಸ ನಗರದ ಬಳಿಯ ತೊರೆಯಲ್ಲಿ ರಾಸಾಯನಿಕ ಸಾಗಿಸುವ ಟ್ಯಾಂಕರ್​ನ್ನು ತೊಳೆದಿದ್ದರು.  ಆ ನೀರನ್ನು ಉಪಯೋಗಿಸಿದ ಜನರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. 601 ಜನರನ್ನು 5 ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಪಡೆದ ನಂತರ ಬಹುತೇಕರನ್ನು ಬಿಡುಗಡೆ ಮಾಡಲಾಯಿತು. ಹಿಂದಿನ ದಿನ ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಉರಿ ಮತ್ತು ತಲೆಸುತ್ತಿನ ಸಮಸ್ಯೆಗಳಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಹಾನಿಕಾರಕ ರಾಸಾಯನಿಕ ಮೊದಲಿಗೆ ಅಂಬೆರ್​ನಾಥ್ ಬಳಿ ತೊರೆಗೆ ಸೇರಿದೆ. ನಂತರ ಈ ಕಲುಷಿತ ನೀರು ಉಲ್ಲಾಸನಗರದ ಬಳಿ ಹರಿಯುವ ವಾಲ್ದುನಿ ನದಿಗೆ ಸೇರ್ಪಡೆಯಾಗಿತ್ತು. ಆ ನೀರನ್ನು ಸೇವಿಸಿದ್ದರಿಂದ ಜನರು ಅಸ್ವಸ್ಥರಾದರು ಎಂದು ಹೇಳಲಾಯಿತು.


2014: ಶಾರ್ಜಾ: ಅಸಾದ್ ಶಫೀಕ್ (137 ರನ್) ಶತಕದ ನಡುವೆಯೂ ಟ್ರೆಂಟ್ ಬೌಲ್ಟ್ (38ಕ್ಕೆ 4) ಹಾಗೂ ಮಾರ್ಕ್ ಕ್ರೇಗ್ (109ಕ್ಕೆ 3) ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಶಾರ್ಜಾ ಸ್ಟೇಡಿಯಂನಲ್ಲಿ ನಡೆದ 3ನೇ ಮತ್ತು ಕಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 80 ರನ್ ಸೋಲನುಭವಿಸಿತು, ಪರಿಣಾಮ 3 ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿತು. ಅಬುಧಾಬಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಗೆದ್ದಿದ್ದರೆ, 2ನೇ ಟೆಸ್ಟ್ ಡ್ರಾಗೊಂಡಿತ್ತು. 339 ರನ್ ಹಿನ್ನಡೆಯೊಂದಿಗೆ 4ನೇ ದಿನದಾಟವಾದ ಈದಿನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕ್, 259 ರನ್​ಗೆ ಸರ್ವಪತನ ಕಂಡಿತು. ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 351 ರನ್ ಗಳಿಸಿದ್ದರೆ, ನ್ಯೂಜಿಲೆಂಡ್ 690 ರನ್ ಕಲೆಹಾಕಿತು. ಕ್ರೇಗ್ ಪಂದ್ಯಶ್ರೇಷ್ಠ ಹಾಗೂ ಮೊಹಮ್ಮದ್ ಹಫೀಜ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
 
2008: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 70 ಕಡೆ ಸರಣಿ ಸ್ಛೋಟಗಳು ನಡೆದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಗೃಹಸಚಿವ ಶಿವರಾಜ್ ಪಾಟೀಲ್ ಕೊನೆಗೂ ರಾಜೀನಾಮೆ ನೀಡಿದರು. ಪಾಟೀಲ್ ರಾಜೀನಾಮೆ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಯಿತು. ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿ ಮನಮೋಹನ್ ಸಿಂಗ್ ಹೆಗಲಿಗೆ ಹಣಕಾಸಿನ ಹೊಣೆ ಏರಿತು. ಹಿಂದಿನ ದಿನ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ (ಸಿಡಬ್ಲ್ಯೂಸಿ) ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದ ಪಾಟೀಲ್, ಈದಿನ ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದರು. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

2008: ಭಾರತಕ್ಕೆ 26 ಅಶುಭ ಸೂಚಕವೇ?  ಈ ಮೊದಲು ವಿಶ್ವದಾದ್ಯಂತ 13ಅನ್ನು ಅಶುಭ ಸೂಚಕ ಸಂಖ್ಯೆ ಎಂದೇ ಬಹಳಷ್ಟು ಜನರು ಪರಿಗಣಿಸುತ್ತಿದ್ದರು. ಈಗ ಭಾರತೀಯರ ಪಾಲಿಗೆ 26 ಅಶುಭ ಸೂಚಕ ದಿನವಾಗಿ ಕಾಣಿಸುತ್ತಿರುವುದು ಹೊಸ ಸಂಗತಿ. ಸುಮ್ಮನೇ ಈ ದಿಸೆಯಲ್ಲಿ ಒಂದು ಸಣ್ಣ ಸಿಂಹಾವಲೋಕನ ಮಾಡಿದರೆ ಸಾಕು 26 ಭಾರತೀಯರ ಪಾಲಿಗೆ ಎಷ್ಟೊಂದು ಅಶುಭ ಘಟನೆಗಳನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿದೆ ಎಂಬುದು ಅರ್ಥವಾಗುತ್ತದೆ. 2001ರ ಮೇ ತಿಂಗಳಿನಲ್ಲಿ ಗುಜರಾತಿನ ಕಛ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪದ ದಿನ 26, 2004ರ ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ, 2007ರ ಮೇ ತಿಂಗಳಿನ 26ರಂದು ಗುವಾಹಟಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಹಾಗೂ ಇದೇ ವರ್ಷದ ಸೆಪ್ಟೆಂಬರ್ 26ರಂದು ಅಹಮದಾಬಾದಿನಲ್ಲಿ ಸಂಭವಿಸಿದ ಬಾಂಬು ಸ್ಫೋಟ ಮತ್ತು ಎಂದೆಂದಿಗೂ ಮರೆಯಲಾಗದಂತಹ ಮುಂಬೈನ ಮೇಲಿನ  ದಾಳಿ ನವೆಂಬರ್ ತಿಂಗಳ 26ರಂದೇ ನಡೆದಿರುವುದು ಈ ಹೊಸ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿತು. ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳ ಪ್ರಕಾರ ಇದೇನೂ ಕಾಕತಾಳೀಯವಲ್ಲ. ಸಂಖ್ಯಾಶಾಸ್ತ್ರದ ಅನುಸಾರ 26 ಅತ್ಯಂತ ದುರದೃಷ್ಟ ಸೂಚಕ ಸಂಖ್ಯೆ. 2+6=8 ಅಂದರೆ ಇದು ವಿನಾಶವನ್ನು ಸೂಚಿಸುತ್ತದೆ ಎಂದು ಮುಂಬೈನ ಸಂಖ್ಯಾಶಾಸ್ತ್ರಜ್ಞ ಸಂಜಯ್ ಜುಮಾನಿ ಅಭಿಪ್ರಾಯ. ಮುಂಬೈ ದಾಳಿಯ ದಿನವನ್ನು ಕೇವಲ ಸಂಖ್ಯಾಶಾಸ್ತ್ರದ ಆಧಾರದಲ್ಲೇ ಗಮನಿಸುವುದು ತರವಲ್ಲ ಎಂದು ಖ್ಯಾತ ಜ್ಯೋತಿಷಿ ಬೇಜನ್ ದಾರುವಾಲ ಹೇಳುತ್ತಾರೆ. ಮುಂಬೈ ದಾಳಿಗೆ ಜ್ಯೋತಿಷ್ಯದಲ್ಲೂ ಕಾರಣಗಳು ದೊರೆಯುತ್ತವೆ ಎಂಬುದು ಅವರ ಪ್ರತಿಪಾದನೆ. ಕುಜ ಮತ್ತು ಶನಿ ಸಮಾಗಮದಲ್ಲಿರುವುದರಿಂದ ಈ ಕಾಲವನ್ನು 'ಅಂಗಾರ ಯೋಗ' ಎಂದು ಕರೆಯಲಾಗುತ್ತದೆ. ಇದು ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಅವರ ಅಂಬೋಣ. ಪ್ರಧಾನಿ ಮನಮೋಹನ ಸಿಂಗ್ ಅವರು ಸೆಪ್ಟೆಂಬರ್ 26ರಂದೇ ಜನಿಸಿದ್ದಾರೆ. ನಮ್ಮ ಗಣರಾಜ್ಯೋತ್ಸವ ದಿನದ ಆಚರಣೆಯೂ ಜನವರಿ 26ರಂದು. ಹಾಗಂತ ಈ ಸಂಖ್ಯೆ ಸದಾ ಅಶುಭ ಸೂಚಕ ಎಂದು ನಾವು ಭಾವಿಸಬೇಕಾಗಿಲ್ಲ. ಸಂಖ್ಯಾಶಾಸ್ತ್ರ ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ ಎಂದೂ ಅವರು ಹೇಳುತ್ತಾರೆ. 2008ರಲ್ಲಿ 26ರಂದು ಎರಡು ಬಾರಿ ಭಯೋತ್ಪಾದಕರ ದುಷ್ಕೃತ್ಯಗಳು ಜರುಗಿವೆ. ಇನ್ನೆರಡು 13ರಂದು ನಡೆದಿವೆ. ಜೈಪುರ ಬಾಂಬ್ ಸ್ಫೋಟದ ಘಟನೆಗಳು ನಡೆದದ್ದು ಮೇ 13 ಮತ್ತು ಅಹಮದಾಬಾದಿನಲ್ಲಿ ಜುಲೈ 26ರಂದು. ದೆಹಲಿಯಲ್ಲಿ ಸೆಪ್ಟೆಂಬರ 13ರಂದು ನಡೆದರೆ ಮುಂಬೈನಲ್ಲಿ 26 ರಂದು ಉಗ್ರರ ದಾಳಿ ಪ್ರಕರಣಗಳು ಸಂಭವಿಸಿವೆ.  ಈ ಮುಂಚೆಯೂ ಭಾರತ 13ನೇ ದಿನಾಂಕದಂದು ಭಾರಿ ದಾಳಿಗಳನ್ನು ಎದುರಿಸಿದೆ. ಮುಂಬೈಯಲ್ಲಿ 2003ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳು ಮಾರ್ಚ್ 13ರಂದು ನಡೆದಿದ್ದರೆ, ಸಂಸತ್ ಭವನದ ಮೇಲಿನ ದಾಳಿ ನಡೆದದ್ದು ಡಿಸೆಂಬರ್ 13ರಂದು. ಸಂಖ್ಯಾಶಾಸ್ತ್ರಜ್ಞರ ಪ್ರಕಾರ 13 ಮತ್ತು 26 ಎರಡೂ ದುರದೃಷ್ಟದ ಸಂಖ್ಯೆಗಳೇ. 13 ನಾವು ನಿರೀಕ್ಷಿಸದ ಸಂಗತಿಗಳನ್ನು ನಮಗೆ ಸಾದರಪಡಿಸಬಲ್ಲುದು. ಸ್ಪಲ್ಪ ಎಚ್ಚರಿಕೆಯಿಂದ ಇರದೆ ಹೋದರೆ ಈ ದಿನ ಅಪಾಯ ತಪ್ಪಿದ್ದಲ್ಲ. 26 ವಿನಾಶವನ್ನು ಹೊತ್ತು ತರಬಹುದಾದ ಸಂಖ್ಯೆ ಎನಿಸಿದರೂ ಅದು ಉತ್ತಮ ದಿನವೇ ಎಂಬುದು ನೀರಜ್ ಮನ್‌ ಚಂದಾ ಅನಿಸಿಕೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ 62ನೇ ವರ್ಷ ಅಷ್ಟೇನೂ ಶುಭದಾಯಕ ವರ್ಷವಲ್ಲ ಎಂಬುದು ಜುಮಾನಿ ಅಭಿಪ್ರಾಯ. ಸಂಕಲನದ ದೃಷ್ಟಿಯಿಂದ 62 ಮತ್ತು 26 ರ ಎರಡೂ ಸಂಖ್ಯೆಗಳ ಮೊತ್ತ 8 ಆಗುತ್ತದೆ. ಆದ್ದರಿಂದ ಎರಡೂ ಒಂದೇ ಪರಿಣಾಮ ಹೊಂದಿವೆ. ಇದರಿಂದಾಗಿ ಭಾರತದ ಮೇಲೆ ಈ ವರ್ಷ ದಾಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಅವರ ಅಂದಾಜು. ಮನ್‌ ಚಂದಾ ಅವರ ಪ್ರಕಾರ 2 ಚಂದ್ರನನ್ನು ಪ್ರತಿನಿಧಿಸಿದರೆ 6 ಶುಕ್ರನೊಂದಿಗೆ ಗುರುತಿಸಿಕೊಳ್ಳುತ್ತದೆ. ಇವೆರಡೂ ಒಟ್ಟಾದಾಗ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿಯೇ 26ನ್ನು ಕ್ರೂರ ದಿನ ಎಂದು ಭಾವಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

2008:  2004ರಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 25 ಸಾವಿರ ಭಯೋತ್ಪಾದಕ ಹಾಗೂ ಇನ್ನಿತರ ಉಗ್ರಗಾಮಿಗಳ ಹಾವಳಿಯಲ್ಲಿ ಒಟ್ಟು ಏಳು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಲ್ಲಿ ನಡೆದ 6,029 ಘಟನೆಗಳಲ್ಲಿ 1,721 ಜನರು ಸತ್ತಿದ್ದಾರೆ. 2005ರಲ್ಲಿ 5,709 ಘಟನೆಗಳಲ್ಲಿ 1,598, 2006ರಲ್ಲಿ 5,240 ಘಟನೆಗಳಲ್ಲಿ  1,352 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಖಾತೆಯು ಬಹಿರಂಗಪಡಿಸಿರುವ ಅಂಕಿ ಅಂಶಗಳು ತಿಳಿಸಿದವು.  2007ರಲ್ಲಿ ನಡೆದ 4,709 ಘಟನೆಗಳಲ್ಲಿ 1,215 ಜನರು ಮಡಿದರು.
2008ರಲ್ಲಿ ಕಳೆದ ಸೆಪ್ಟೆಂಬರದವರೆಗೆ 3,157 ಘಟನೆಗಳಲ್ಲಿ 760 ಜನರು ಮೃತರಾದರು. ಹೈದರಾಬಾದ್ ಬಾಂಬ್ ಸ್ಫೋಟದಲ್ಲಿ 40 ಜನರು, ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟದಲ್ಲಿ 68 ಜನರು , ರೈಲು ಮತ್ತು ಮಾಲೆಗಾಂವ್ ಸರಣಿ ಸ್ಫೋಟಗಳಲ್ಲಿ ಮುಂಬೈನಲ್ಲಿ 230 ಮಂದಿ ಸತ್ತಿದ್ದರು. ಹಿಂದಿನವಾರ ಮುಂಬೈಯಲ್ಲಿ ನಡೆದ ದಾಳಿಯಲ್ಲಿ 183 ಜನರು ಸತ್ತರು. ಎನ್‌ಡಿಎ ಆಡಳಿತ ಕಾಲದಲ್ಲಿ ನಡೆದ 36,259 ಘಟನೆಗಳಲ್ಲಿ 11,714 ಮಂದಿ ಸತ್ತಿದ್ದರು. ಎನ್‌ಡಿಎ ಆಡಳಿತದ ಪ್ರಮುಖ ಘಟನೆಗಳೆಂದರೆ ಸಂಸತ್ ಭವನ, ಅಕ್ಷರಧಾಮ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲಿನ ದಾಳಿಗಳು ಎಂದು ಗೃಹಖಾತೆ ಅಂಕಿ ಅಂಶಗಳು ತಿಳಿಸಿದವು.

2008: ದಕ್ಷಿಣ ಆಸ್ಟ್ರೇಲಿಯಾದ ಸ್ಯಾಂಡಿ ಕ್ಯಾಪ್ ಸಮುದ್ರ ತೀರದಲ್ಲಿ ಬಂಡೆಗಳ ನಡುವೆ ಸಿಕ್ಕಿಹಾಕಿಕೊಂಡ 80 ತಿಮಿಂಗಿಲಗಳು ಸಮುದ್ರಕ್ಕೆ ಹಿಂದಿರುಗಲಾರದೆ ಸಾವನ್ನಪ್ಪಿದವು. ರಕ್ಷಣಾ ತಂಡದ ನೆರವು ಲಭಿಸುವ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.

2008:  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ವ್ಯಾಸರಾಯ ಬಲ್ಲಾಳ ಸಭಾಂಗಣದಲ್ಲಿ ನಡೆದ 'ಆಳ್ವಾಸ್ ನುಡಿಸಿರಿ-2008' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಾಡೋಜಿ ದರೋಜಿ ಈರಮ್ಮ, ಗೊ.ರು. ಚನ್ನ್ಗಸಪ್ಪ, ಡಾ.ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ನಾಡೋಜ ಜಾನಪದ ಸಿರಿ ಸಿರಿಯಜ್ಜಿ ಅವರಿಗೆ ಹಾಗೂ ಬಹ್ರೈನಿನ ಕನ್ನಡ ಸಂಘಕ್ಕೆ 'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಿದರು. ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಚನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು.

2007: `ಮಿಸೈಲ್ ಮ್ಯಾನ್' ಎಂದೇ ಗುರುತಿಸಿಕೊಂಡ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು `ಇ-ಪತ್ರಿಕೆ' ಆರಂಭಿಸುವ ಮೂಲಕ ಇದೀಗ `ಮೀಡಿಯಾ ಮ್ಯಾನ್' ಆದರು. ದೇಶದ ಯಶೋಗಾಥೆಯನ್ನು ಬಿಂಬಿಸುವ ಹಾಗೂ ಜ್ಞಾನ ಪ್ರಸಾರದ ಉದ್ದೇಶವುಳ್ಳ `ಬಿಲಿಯನ್ ಬೀಟ್ಸ್' ಪಾಕ್ಷಿಕ ಇ-ಪತ್ರಿಕೆಗೆ ಕಲಾಂ ಚಾಲನೆ ನೀಡಿದರು. ಕಲಾಂ ಅವರ www.abdulkalam.com  ನಲ್ಲಿ ಇ-ಪತ್ರಿಕೆಯ ಆವೃತ್ತಿ ಓದಲು ಸಿಗುತ್ತದೆ.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ  ನಿರ್ದೇಶಕರ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಅಂಕಿತ ಹಾಕಿದರು. ಬಿಜೆಪಿ ಹಾಗೂ ಎಐಎಡಿಎಂಕೆ ವಿರೋಧದ ನಡುವೆಯೂ ಎರಡು ದಿನಗಳ ಹಿಂದೆ ಏಮ್ಸ್ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ ನೀಡಿತ್ತು.

2007: ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ದೇವರ ಮುಂದೆ ಪಾದರಕ್ಷೆ ಧರಿಸಿ ಕುಳಿತಿದ್ದುದಕ್ಕಾಗಿ ಬಾಲಿವುಡ್ ನಟಿ ಖುಷ್ಬೂ ವಿರುದ್ಧ ರಾಮೇಶ್ವರಂನಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಯಿತು. ಹಿಂದೂ ಮುನ್ನಣಿ ಸಂಘಟನೆಯ ಸ್ಥಳೀಯ ಕಾರ್ಯದರ್ಶಿ ರಾಮಮೂರ್ತಿ ಅವರು ರಾಮೇಶ್ವರದ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಕಾರ್ಯಕರ್ತ ಬಿ.ಆರ್. ಕುಮಾರ್ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು.

2007: ನವದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ವಿಶ್ವ ಪರಂಪರೆ ಸ್ಥಾನಮಾನ ನೀಡಿದ ಪ್ರಮಾಣಪತ್ರವನ್ನು ನವದೆಹಲಿಯಲ್ಲಿ ಯುನೆಸ್ಕೋ ಮಹಾನಿರ್ದೇಶಕ ಕೊಯಿಚಿರೋ ಮತ್ಸೂರ ಅವರು ಅಧಿಕೃತವಾಗಿ ಅಭಿಜಿತ್ ಸೇನ್ ಗುಪ್ತಾ ಅವರಿಗೆ ಹಸ್ತಾಂತರಿಸಿದರು. ವಿಶ್ವಪರಂಪರೆಯ ಸ್ಥಾನ ಪಡೆದ ಪಟ್ಟಿಗೆ ಸೇರಿದ 27ನೇ ಸ್ಥಳ ಎಂಬ ಖ್ಯಾತಿ ಕೆಂಪುಕೋಟೆಗೆ ಲಭಿಸಿದೆ.

2007: ಯಶವಂತಪುರ- ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಚಾರವು 2007 ಡಿಸೆಂಬರ್ 8 ರಿಂದ ಆರಂಭವಾಗುವುದು ಎಂದು ನೈಋತ್ಯ ರೈಲ್ವೇ ವಲಯ ಪ್ರಕಟಿಸಿತು. ಮಂಗಳೂರಿನಿಂದ ರೈಲು ಪ್ರಯಾಣ ಡಿಸೆಂಬರ್ 9ರಿಂದ ಆರಂಭವಾಗುವುದು. ರೈಲ್ವೇ ಪ್ರಯಾಣ ದರವನ್ನೂ ಅದು ನಿಗದಿ ಪಡಿಸಿತು.

2007: ವಿವಾದಗಳಿಗೆ ಕಾರಣವಾಗಿರುವ ತಮ್ಮ ಆತ್ಮಕತೆ 'ದ್ವಿಖಂಡಿತ'ದಲ್ಲಿನ ವಿವಾದಾತ್ಮಕ ಭಾಗ ವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶದ  ಲೇಖಕಿ ತಸ್ಲೀಮಾ ನಸ್ರೀನ್ ಕೋಲ್ಕತ್ತಾದಲ್ಲಿ ಪ್ರಕಟಿಸಿದರು. ಈ ಮೂಲಕ ತಮ್ಮ ಮೇಲೆ ಹೆಚ್ಚಿದ ಒತ್ತಡಗಳಿಗೆ ತಸ್ಲೀಮಾ ಮಣಿದರು.

2007: ಅಮೆರಿಕದ ವಾಣಿಜ್ಯ ಸಮುಚ್ಚಯವಾಗಿದ್ದ ಅವಳಿ ಗೋಪುರದ ಮೇಲೆ ನಡೆದ ದಾಳಿಯ ಹಿಂದೆ ತಾನೊಬ್ಬನೇ ಇರುವುದಾಗಿ ಖಾಸಗಿ ಟಿವಿ ಚಾನೆಲ್ ಅಲ್-ಜಜೀರಾಗೆ ಕಳುಹಿಸಿರುವ ಟೇಪಿನಲ್ಲಿ ಕುಖ್ಯಾತ ಭಯೋತ್ಪಾದಕ ಅಲ್ ಖೈದಾ ಧುರೀಣ ಬಿನ್ ಲಾಡೆನ್ ಹೇಳಿಕೊಂಡ. ಅಮೆರಿಕ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹಾಗೂ ಆಪ್ಘಾನಿಸ್ಥಾನ ತೊರೆಯುವಂತೆ ಯುರೋಪಿಯನ್ನರಿಗೆ ಕರೆ ನೀಡಿದ ಲಾಡೆನ್ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಮೇಲೆ ನಡೆದ ಈ ದಾಳಿಗೆ ತಾನೊಬ್ಬನೇ ಹೊಣೆಗಾರ' ಎಂದು ಘೋಷಿಸಿದ.

2007: ಅತ್ಯಂತ ಕಿರಿಯ ಸೌರ ಮಂಡಲವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಹಚ್ಚಿದರು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಳೆಯದು ಎನ್ನಲಾದ ಕಿರಿಯ ನಕ್ಷತ್ರಗಳಾದ `ಯುಎಕ್ಸ್ ತೌ ಎ' ಮತ್ತು `ಎಲ್ ಕೆಕಾ 15'ಗಳ ಸುತ್ತಮುತ್ತ ಈ ಹೊಸ ಸೌರ ಮಂಡಲವನ್ನು ಕಾಣಬಹುದೆಂದು ಪ್ರಕಟಿಸಿದರು. ಈ ಸೌರ ಮಂಡಲವು ತಾರಸ್ ನಕ್ಷತ್ರದ ರಚನಾ ಪ್ರದೇಶದಲ್ಲಿದ್ದು ಕೇವಲ 450 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಇದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ವಾಷಿಂಗ್ಟನ್ನಿನ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿತು.

2007: ಮಧ್ಯ ಟರ್ಕಿಯ ಕೆಸಿಬೊರ್ಲು ನಗರದ ಬಳಿ ಅಟ್ಲಾಸ್ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 56 ಮಂದಿ ಮೃತರಾದರು. 7 ಸಿಬ್ಬಂದಿ ಹಾಗೂ 49 ಪ್ರಯಾಣಿಕರನ್ನು ಹೊತ್ತು ಇಸ್ತಾಂಬುಲ್ ನಿಂದ ಇಸ್ಪಾರ್ತ ನಗರಕ್ಕೆ ಹೊರಟಿದ್ದಾಗ ಈ ಎಂಡಿ 83 ಜೆಟ್ ಲೈನರ್ ಅಪಘಾತಕ್ಕೀಡಾಯಿತು.

2006: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಬೇಡ್ಕರ್ ವಿಗ್ರಹ ವಿರೂಪ ಘಟನೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ, ಗೋಲಿಬಾರಿಗೆ ನಾಲ್ವರು ಬಲಿಯಾದರು.

2006: ಮುಸ್ಲಿಂ ಸಮುದಾಯವು ಸೌಲಭ್ಯ ವಂಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ರಾಜಿಂದರ್ ಸಾಚಾರ್ ಸಮಿತಿಯು  ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗಕ್ಕೆ ಮೀಸಲು ನೀಡಲು ಮತ್ತು ಸಮಾನಾವಕಾಶ ನೀಡಲು ಆಯೋಗ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಮುಸ್ಲಿಮರು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 4.9, ರಕ್ಷಣಾ ಪಡೆಗಳಲ್ಲಿ ಶೇಕಡಾ 3.2ರಷ್ಟಿದ್ದರೆ, 543 ಸಂಸದರಲ್ಲಿ ಮುಸ್ಲಿಂ ಸಂಸದರ ಸಂಖ್ಯೆ 33 ಮಾತ್ರ ಎಂದು ಸಮಿತಿ ಹೇಳಿತು.

2005: ಪಕ್ಷದ ವರಿಷ್ಠ ಮಂಡಳಿ ವಿರುದ್ಧ ಬಂಡೆದ್ದ ಉಮಾಭಾರತಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಯಿತು.

2005: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ ದೂರದಲ್ಲಿ ಸಮುದ್ರ ಮಧ್ಯೆ ನಿರ್ಮಿಸಲಾದ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸೇನೆಯ ಮೂರೂ ವಿಭಾಗಗಳಲ್ಲಿ ಬಳಸಬಹುದಾದ 8 ಮೀಟರ್ ಎತ್ತರದ ಈ ಕ್ಷಿಪಣಿಯು 2-3 ಟನ್ ಸಾಂಪ್ರದಾಯಿಕ ಸಿಡಿತಲೆಯನ್ನು ಹೊತ್ತು 290 ಕಿ.ಮೀ. ದೂರ ಚಲಿಸಬಲ್ಲುದು. ಇದು ಶಬ್ಧದ ವೇಗಕ್ಕಿಂತ 2.8ರಿಂದ 3 ಪಟ್ಟು ವೇಗವಾಗಿ ಹಾರಾಟ ನಡೆಸಬಲ್ಲುದು.

2000: ಬಾಹ್ಯಾಕಾಶ ಷಟಲ್ ನೌಕೆ ಎಂಡೇವರ್ `ಸೌರ ರೆಕ್ಕೆ'ಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತು. ಈ ಸೌರರೆಕ್ಕೆಗಳು ಇಡೀ ನಿಲ್ದಾಣಕ್ಕೆ ಬೇಕಾದ ವಿದ್ಯುತ್ ಒದಗಿಸಬಲ್ಲವು.
1999: ಭಾರತದ ಸಮಾಜ ವಿಜ್ಞಾನಿ ಎಂ.ಎನ್. ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1956: ಫ್ಲಾಯ್ಡ್ ಪ್ಯಾಟ್ಟರ್ಸನ್ ಅವರು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷಿಕಾಗೋದಲ್ಲಿ ಆರ್ಚೀ ಮೂರ್ ಅವರನ್ನು ಪರಾಭವಗೊಳಿಸುವ ಮೂಲಕ ಅವರು ಈ ಪ್ರಶಸ್ತಿಗೆ ಪಾತ್ರರಾದರು.

1940: ಸಾಹಿತಿ ಎಚ್. ಆರ್. ಇಂದಿರಾ ಜನನ.

1940: ಸಾಹಿತಿ ಸರೋಜ ತುಮಕೂರು ಜನನ.

1939: ಸಾಹಿತಿ ಎಸ್. ಸಿದ್ಧಲಿಂಗಪ್ಪ ಜನನ.

1925: ಪ್ರಗತಿಶೀಲ ಬರಹಗಾರ ಅನಂತನಾರಾಯಣ (30-11-1925ರಿಂದ 25-8-1992) ಅವರು ಆರ್. ಸದಾಶಿವಯ್ಯ- ರಂಗಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1900: ಐರಿಷ್ ಸಾಹಿತಿ, ನಾಟಕಕಾರ ಆಸ್ಕರ್ ವೈಲ್ಡ್ ತಮ್ಮ 46ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತರಾದರು. ಈ ವೇಳೆಯಲ್ಲಿ ಅವರು ಕಡು ಬಡತನದಿಂದ ನಲುಗಿದ್ದರು.

1874: ಇಂಗ್ಲೆಂಡಿನ ಮಾಜಿ ಪ್ರಧಾನಿ ಸರ್ ವಿನ್ ಸ್ಟನ್ ಚರ್ಚಿಲ್ (1874-1965) ಹುಟ್ಟಿದ ದಿನ.

1858: ಭಾರತೀಯ ಸಸ್ಯತಜ್ಞ ಹಾಗೂ ಭೌತವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸ್ (1858-1937) ಜನ್ಮದಿನ. ಸಸ್ಯ ಹಾಗೂ ಪ್ರಾಣಿಗಳ ಜೀವಕೋಶಗಳು ಏಕಪ್ರಕಾರವಾಗಿ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಅತ್ಯಂತ ಸೂಕ್ಷ್ಮಗ್ರಾಹಿ ಉಪಕರಣವನ್ನು ಸಂಶೋಧಿಸಿದವರು ಇವರು. ಮೈಕ್ರೋ ಅಲೆಗಳು ಹಾಗೂ ರೇಡಿಯೋ ಅಲೆಗಳನ್ನು ಉತ್ಪಾದಿಸುವ ಮೈಕ್ರೋವೇವ್ ಉಪಕರಣವನ್ನು ಮೊತ್ತ ಮೊದಲ ಬಾರಿಗೆ ನಿರ್ಮಿಸಿ ಸಾರ್ವಜನಿಕವಾಗಿಪ್ರದರ್ಶಿಸಿದವರೂ ಇವರೇ. ವೈರ್ ಲೆಸ್ ಟೆಲಿಗ್ರಾಫಿಯ ಜನಕ ಮಾರ್ಕೋನಿ ಅಲ್ಲ, ಈ  ಗೌರವ ಮೈಕ್ರೋವೇವ್ ಉಪಕರಣ ಸಂಶೋಧಿಸಿದ ಬೋಸ್ ಅವರಿಗೆ ಸಲ್ಲಬೇಕು ಎಂಬ ವಾಸ್ತವಕ್ಕೆ ಈಗ ಬೆಲೆ ಸಿಗತೊಡಗಿದೆ. ಆದರೆ ವೈರ್ ಲೆಸ್ ಟೆಲಿಗ್ರಾಫಿಗೆ ಪೇಟೆಂಟ್ ಪಡೆದದ್ದು ಮಾರ್ಕೋನಿ.

1835: ಮಾರ್ಕ್ ಟ್ವೇನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಕಾದಂಬರಿಕಾರ ಸ್ಯಾಮ್ಯುಯೆಲ್ ಲಾಂಗ್ಹೋರ್ನ್ ಕ್ಲೆಮೆನ್ಸ್ (1835-1910) ಹುಟ್ಟಿದ ದಿನ.

1667: `ಗಲಿವರ್ಸ್ ಟ್ರಾವಲ್ಸ್' ಪ್ರವಾಸ ಕಥನದಿಂದ ವಿಶ್ವವ್ಯಾಪಿ ಖ್ಯಾತಿ ಗಳಿಸಿದ ಆಂಗ್ಲೊ ಐರಿಷ್ ಸಾಹಿತಿ ಜೊನಾಥನ್ ಸ್ವಿಫ್ಟ್ (1667-1745) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement