Sunday, January 31, 2010

ಇಂದಿನ ಇತಿಹಾಸ History Today ಜನವರಿ 01

ಇಂದಿನ ಇತಿಹಾಸ

ಜನವರಿ 01

ಅನಿಲ್ ದೀರೂಭಾಯ್ ಅಂಬಾನಿ ಸಮೂಹದ ಕಂಪೆನಿಗಳ ಒಡೆಯ ಅನಿಲ್ ಅಂಬಾನಿ, 'ಬಿಲಿಯನೇರ್ ಬ್ಲೋಅಪ್ಸ್ ಆಫ್ 2008' ಫೋಬ್ಸ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೆ ಏರಿದರು. ಅಂದರೆ ಕಳೆದ ವರ್ಷ ಗರಿಷ್ಠ ಆಸ್ತಿ ನಷ್ಟ ಅನುಭವಿಸಿದ ವಿಶ್ವದ ಶ್ರೀಮಂತರ ಸಾಲಿನಲ್ಲಿ ಅನಿಲ್ ಅಂಬಾನಿ ಅವರಿಗೆ ಪ್ರಥಮ ಸ್ಥಾನ. ಅನಿಲ್ ಅಂಬಾನಿ 2007ರಲ್ಲಿ ಒಟ್ಟು 42 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಫೊಬ್ಸ್ ಕುಬೇರರ ಸಾಲಿನಲ್ಲಿ 6ನೇ ಸ್ಥಾನದಲ್ಲಿ ಇದ್ದರು.

ಪ್ರತಿವರ್ಷ ಭಾರತೀಯ ವಿಜ್ಞಾನ ಕಾಂಗ್ರೆಸ್ (ಸಮ್ಮೇಳನ) ಈ ದಿನ ಆರಂಭವಾಗುತ್ತದೆ.

2009: ಹೊಸ ವರ್ಷದ ಮೊದಲ ದಿನವೇ ಅಸ್ಸಾಮಿನಲ್ಲಿ ಉಗ್ರರ ಅಟ್ಟಹಾಸ ಮರುಕಳಿಸಿತು. ರಾಜ್ಯದ ಪ್ರಮುಖ ನಗರ ಗುವಾಹಟಿಯಲ್ಲಿ ಈದಿನ ಸಂಜೆ ನಡೆದ ಸರಣಿ ಬಾಂಬ್ ಸ್ಫೋಟದಿಂದ ಐವರು ಮೃತರಾಗಿ 50 ಜನ ಗಾಯಗೊಂಡರು. 'ಘಟನೆಯಲ್ಲಿ ಉಲ್ಫಾ ಉಗ್ರರ ಕೈವಾಡವಿದೆ' ಎಂದು ಕೇಂದ್ರ ಸರ್ಕಾರ ತಿಳಿಸಿತು. ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳ ಮೂಲಕ ಈ ದಾಳಿಗಳನ್ನು ನಡೆಸಲಾಯಿತು. ಮುಂಬೈ ದಾಳಿಯ ಕಹಿ ನೆನಪು ಜನಮಾನಸದಿಂದ ಮರೆಯಾಗುವ ಮುನ್ನವೇ ಮತ್ತೆ ಉಗ್ರರು ರುದ್ರನರ್ತನ ಮಾಡಿದ್ದು ದೇಶಾದ್ಯಂತ ಜನರನ್ನು ದಿಗ್ಭ್ರಮೆಗೆ ಈಡುಮಾಡಿತು.. ಕೇವಲ ಎರಡೇ ತಿಂಗಳ ಹಿಂದೆ (ಅಕ್ಟೋಬರ್ 30) ಗುವಾಹಟಿ ಹಾಗೂ ಅಸ್ಸಾಮಿನ ಇತರ ಎರಡು ನಗರಗಳಲ್ಲಿ ನಡೆದ ಸರಣಿ ಸ್ಫೋಟಗಳಿಗೆ 88 ಜನ ಬಲಿಯಾಗಿದ್ದರು.

2009: ಅನಿಲ್ ದೀರೂಭಾಯ್ ಅಂಬಾನಿ ಸಮೂಹದ ಕಂಪೆನಿಗಳ ಒಡೆಯ ಅನಿಲ್ ಅಂಬಾನಿ, 'ಬಿಲಿಯನೇರ್ ಬ್ಲೋಅಪ್ಸ್ ಆಫ್ 2008' ಫೋಬ್ಸ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೆ ಏರಿದರು. ಅಂದರೆ ಕಳೆದ ವರ್ಷ ಗರಿಷ್ಠ ಆಸ್ತಿ ನಷ್ಟ ಅನುಭವಿಸಿದ ವಿಶ್ವದ ಶ್ರೀಮಂತರ ಸಾಲಿನಲ್ಲಿ ಅನಿಲ್ ಅಂಬಾನಿ ಅವರಿಗೆ ಪ್ರಥಮ ಸ್ಥಾನ. ಅನಿಲ್ ಅಂಬಾನಿ 2007ರಲ್ಲಿ ಒಟ್ಟು 42 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಫೊಬ್ಸ್ ಕುಬೇರರ ಸಾಲಿನಲ್ಲಿ 6ನೇ ಸ್ಥಾನದಲ್ಲಿ ಇದ್ದರು. ಅನಿಲ್ ಅಂಬಾನಿ ಆಸ್ತಿ 2008ರಲ್ಲಿ ಒಟ್ಟು 30 ಶತಕೋಟಿ ಡಾಲರಿನಷ್ಟು ಕರಗಿಹೋಯಿತು. ಇದರಿಂದಾಗಿ ಅವರ ಆಸ್ತಿ ಮೌಲ್ಯ ಕೇವಲ 12 ಶತಕೋಟಿ ಡಾಲರುಗಳಿಗೆ ಇಳಿಯಿತು. ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆ, ಅನಿಲ್ ದೀರೂಭಾಯ್ ಅಂಬಾನಿ(ಎಡಿಎ) ಕಂಪೆನಿಗಳ ಸಮೂಹಕ್ಕೆ ಹೊಸ ವರ್ಷದ ಆರಂಭದಲ್ಲೇ ಈ ಕೆಟ್ಟ ಸುದ್ದಿ ಪ್ರಾಪ್ತವಾಯಿತು. ಖ್ಯಾತ ವಾಣಿಜ್ಯ ಸುದ್ದಿ ನಿಯತಕಾಲಿಕ ಫೋಬ್ಸ್, 'ಬಿಲಿಯನೇರ್ ಬ್ಲೋಅಪ್ಸ್ ಆಫ್ 2008' ಪ್ರಕಟಿಸಿತು. ವಿಶ್ವದಲ್ಲಿ ಅತೀ ಹೆಚ್ಚು ಸಂಪತ್ತು ಕಳೆದುಕೊಂಡವರ ಪಟ್ಟಿ ಇದು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದ ಮುಖೇಶ್ ಅಂಬಾನಿ, ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಪಿ. ಸಿಂಗ್ ಸಹ ಈ ಪಟ್ಟಿಯಲ್ಲಿ ಸೇರ್ಪಡೆಯಾದರು. ಈ ಎಲ್ಲ ಕುಬೇರರದ್ದೂ ಒಟ್ಟು 100 ಶತಕೋಟಿ ಡಾಲರಿನಷ್ಟು ಸಂಪತ್ತು ನಷ್ಟವಾಯಿತು. ಒಟ್ಟಾರೆ 2008ರಲ್ಲಿ ವಿಶ್ವದ ಎಲ್ಲ ಶ್ರೀಮಂತರು ಭಾರಿ ಪ್ರಮಾಣದಲ್ಲಿ ಆಸ್ತಿ ಕಳೆದುಕೊಂಡರು ಎಂದು ಫೋಬ್ಸ್ ಹೇಳಿತು.

2009: ಬ್ಯಾಂಕಾಕಿನ ಜನಪ್ರಿಯ ಪಬ್ ಒಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಬೆಂಕಿ ದುರಂತದಲ್ಲಿ ಕೆಲವು ವಿದೇಶಿಯರು ಸೇರಿದಂತೆ 61 ಜನ ಸಾವಿಗೀಡಾಗಿ 212 ಜನ ಗಾಯಗೊಂಡರು. ಹೊಸ ವರ್ಷ ಅಡಿಯಿಟ್ಟ ಕೆಲವೇ ನಿಮಿಷಗಳಲ್ಲಿ, ರಾತ್ರಿ 12.20ಕ್ಕೆ ಇಲ್ಲಿನ ಸಾಂತಿಕಾ ಕ್ಲಬ್ ಅಗ್ನಿದುರಂತಕ್ಕೆ ಸಾಕ್ಷಿಯಾಯಿತು. ಈ ವೇಳೆ ಪಬ್‌ನಲ್ಲಿ ಸುಮಾರು 1000 ಮಂದಿ ಇದ್ದರು.

2009: ಗಾಜಾ ಪಟ್ಟಿಯಲ್ಲಿನ ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ಆರನೇ ದಿನವೂ ಮುಂದುವರೆಸಿತು. ಹಮಾಸ್ ಹಿಡಿತದಲ್ಲಿದ್ದ ಪ್ಯಾಲೆಸ್ಟೇನ್ ಸಂಸತ್ ಕಟ್ಟಡದ ಮೇಲೂ ದಾಳಿ ನಡೆಯಿತು. ವಾಯು ದಾಳಿಯಲ್ಲಿ ಹಮಾಸಿನ ಹಿರಿಯ ಮುಖಂಡ ನಿಝರ್ ರಯ್ಯಾನ್ ಮೃತನಾದ. ಇಲ್ಲಿಯವರೆಗೆ 391 ಜನರು ಇಸ್ರೇಲ್ ದಾಳಿಗೆ ಬಲಿಯಾದರು.

2009: ಇನ್ನೇನು ಸೋಮಾಲಿಯಾ ಕಡಲುಗಳ್ಳರ ವಶವಾಗಲಿದ್ದ ಭಾರತದ ತೈಲ ಹಡಗೊಂದನ್ನು ಮಲೇಷ್ಯಾ ನೌಕಾಪಡೆಯ ಹೆಲಿಕಾಪ್ಟರ್ ರಕ್ಷಿಸಿದ ಘಟನೆ ಹೊಸ ವರ್ಷದ ಮೊದಲ ದಿನ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 3.30ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 9ಕ್ಕೆ) ನಡೆಯಿತು. ಹಡಗು ಆಡನ್ ಕೊಲ್ಲಿಯ ಮೂಲಕ ಸೂಯೆಜ್ ಕಾಲುವೆಯೆಡೆಗೆ ತೆರಳುತ್ತಿದ್ದಾಗ ಎರಡು 'ಸ್ಪೀಡ್ ಬೋಟ್'ಗಳಲ್ಲಿ ತೀರಾ ಸಮೀಪಕ್ಕೆ ಬಂದ ಸೇನಾ ಸಮವಸ್ತ್ರಧಾರಿ ಸಮುದ್ರಗಳ್ಳರು ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಶುರು ಮಾಡಿದರು. ಮಲೇಷ್ಯಾದ ನೌಕಾ ಹೆಲಿಕಾಪ್ಟರ್ ತಕ್ಷಣ ನಿಗದಿತ ಜಾಗಕ್ಕೆ ಹೋಗದಿದ್ದರೆ ತೈಲ ಹಡಗನ್ನು ಅಪಹರಿಸುವಲ್ಲಿ ಕಳ್ಳರು ಯಶಸ್ವಿಯಾಗುತ್ತಿದ್ದರು ಎಂದು ಅಂತಾರಾಷ್ಟ್ರೀಯ ಸಾಗರ ವ್ಯವಹಾರ ಕೇಂದ್ರದ ಮುಖ್ಯಸ್ಥ ನೊಯೆಲ್ ಚೂಂಗ್ ತಿಳಿಸಿದರು.

2009: ಧಾರವಾಡದ ಕವಿ ದೇಶಪಾಂಡೆ ಸುಬ್ಬರಾಯರಿಗೆ ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವರಾವ್ ಸ್ಮಾರಕ ಟ್ರಸ್ಟಿನ ಪ್ರಾಯೋಜಕತ್ವದ 2008ನೇ ಸಾಲಿನ ಮ್ದುದಣ ಕಾವ್ಯ ಪ್ರಶಸ್ತಿ ಲಭಿಸಿತು. ದೇಶಪಾಂಡೆ ಅವರ 'ಮೋರೆಯಾಚೆಯ ಮುಖ' ಎಂಬ ಕವನ ಸಂಕಲನದ ಹಸ್ತಪ್ರತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ತಿಳಿಸಿದರು. 1979ರಲ್ಲಿ ನಂದಳಿಕೆಯ ವರಕವಿ ಮುದ್ದಣದ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ. ಮೂರು ವರುಷಗಳಿಂದ ಬೆಂಗಳೂರಿನ ಸುಮುಖ ಪ್ರಕಾಶನದ ಜತೆ ಕನ್ನಡ ಸಂಘವು ಮಾಡಿಕೊಂಡ ಒಪ್ಪಂದದಂತೆ, ಪ್ರಶಸ್ತಿ ಪುರಸ್ಕೃತ ಕೃತಿಯು ಅದೇ ಪ್ರಕಾಶಕರಿಂದ ಪ್ರಕಟಗೊಂಡು ಪ್ರಶಸ್ತಿ ಪ್ರದಾನದ ದಿನ ಅನಾವರಣಗೊಳ್ಳುವುದು.

2008: ಉತ್ತರ ಪ್ರದೇಶದ ರಾಮಪುರ ಜಿಲ್ಲೆಯಲ್ಲಿನ ಸಿ ಆರ್ ಪಿ ಎಫ್ ಕೇಂದ್ರದ ಮೇಲೆ ಈದಿನ ಮುಂಜಾನೆ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸಿದಾಗ 7 ಮಂದಿ ಯೋಧರು ಸೇರಿ ಒಟ್ಟು 8 ಮಂದಿ ಮೃತರಾದರು. ಉತ್ತರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಕೇಂದ್ರದ ಮೇಲೆ ಉಗ್ರಗಾಮಿಗಳು ನಡೆಸಿದ ಮೊದಲ ದಾಳಿ ಇದು. 2005ರ ಜುಲೈ 5ರಂದು ಅಯೋಧ್ಯೆಯಲ್ಲಿನ ವಿವಾದಾತ್ಮಕ ನಿವೇಶನದ ಬಳಿ ಇರುವ ರಾಮಲಲ್ಲಾ ದೇಗುಲದ ಮೇಲೆ ಲಷ್ಕರ್ ಎ ತೊಯ್ಬಾ ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದ್ದರಾದರೂ, ಆಗ ಸಿ ಆರ್ ಪಿ ಎಫ್ ಯೋಧರ ಚುರುಕಿನ ಕಾರ್ಯಾಚರಣೆಯಿಂದ ದೇಗುಲಕ್ಕೆ ಹಾನಿಯಾಗುವ ಮೊದಲೇ ಉಗ್ರಗಾಮಿಗಳು ಸಾವನ್ನಪ್ಪಿದ್ದರು. ಲಷ್ಕರ್ ಎ ತೊಯ್ಬಾ ಉಗ್ರಗಾಮಿಗಳು 2001ರ ಅಕ್ಟೋಬರಿನಲ್ಲಿ ದೆಹಲಿಯ ಹೊರವಲಯದಲ್ಲಿದ್ದ ಸಿ ಆರ್ ಪಿ ಎಫ್ ಕೇಂದ್ರದ ಮೇಲೆ ದಾಳಿ ನಡೆಸಿದ್ದರು.

2008: ಮಕ್ಕಳಲ್ಲಿ ಏರುತ್ತಿರುವ `ಬಾಲ್ಯಾವಸ್ಥೆಯ ಬೊಜ್ಜು' ತಡೆಗಟ್ಟುವ ಸಲುವಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ತಯಾರಾಗುವ ಟಿ.ವಿ ಜಾಹೀರಾತುಗಳಲ್ಲಿ ಪ್ರಸಾರವಾಗುವ ಅನಾರೋಗ್ಯಕರ ಆಹಾರ ಹಾಗೂ ಪಾನೀಯಗಳ ಜಾಹೀರಾತಿನ ಮೇಲೆ ನಿರ್ಬಂಧ ಹೇರಲು ಬ್ರಿಟನ್ ಸರ್ಕಾರ ತೀರ್ಮಾನಿಸಿತು.

2008: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಸಾವಯವ ಕೃಷಿಗೆ ನೀಡುವ ಒಂದು ಲಕ್ಷ ರೂಪಾಯಿ ಬಹುಮಾನ ಒಳಗೊಂಡ ಕೃಷಿ ಪಂಡಿತ ಪ್ರಶಸ್ತಿಗೆ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ವಿವೇಕ್ ಕಾರಿಯಪ್ಪ ಹಾಗೂ ಜೂಲಿ ಕಾರಿಯಪ್ಪ ಅವರು ಜಂಟಿಯಾಗಿ ಆಯ್ಕೆಯಾದರು.

2008: ಶ್ರೀಲಂಕಾ ವಿರೋಧ ಪಕ್ಷದ ಸಂಸತ್ ಸದಸ್ಯ ತ್ಯಾಗರಾಜ ಮಹೇಶ್ವರನ್ ಅವರು ಕೊಲಂಬೋದ ಹಿಂದೂ ದೇವಾಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿಗೆ ಬಲಿಯಾದರು. ಅವರು ಸಂಯುಕ್ತ ರಾಷ್ಟ್ರೀಯ ಪಕ್ಷಕ್ಕೆ (ಯು ಎನ್ ಪಿ) ಸೇರಿದವರು.

2008: ಅಪರೂಪದ ಹರಳುಗಳಿಗಾಗಿ 1,500 ವರ್ಷಗಳಷ್ಟು ಪುರಾತನವಾದ ಎರಡು ವಿಷ್ಣು ಪ್ರತಿಮೆಗಳನ್ನು ಬಾಂಗ್ಲಾದೇಶದಿಂದ ಕಳವು ಮಾಡಿದ ಇಬ್ಬರನ್ನು ಅಪರಾಧ ನಿಗ್ರಹ ಕ್ಷಿಪ್ರ ಕಾರ್ಯಾಚರಣೆ ದಳದ ಅಧಿಕಾರಿಗಳು ಬಂಧಿಸಿದರು.

2007: ಭಾರತೀಯ ಸಂಜಾತೆ ರಕ್ತತಜ್ಞೆ ಡಾ. ಚಿತ್ರಾ ಭರೂಚಾ ಅವರು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ನಿನ (ಬಿಬಿಸಿ) ಕಾರ್ಯ ನಿರ್ವಾಹಕ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.

2007: ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಭಾರತದ ಹಿರಿಯ ರಾಜತಾಂತ್ರಿಕ ವಿಜಯ್ ನಂಬಿಯಾರ್ ಅವರನ್ನು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಮತ್ತು ಹೈತಿಯ ಪತ್ರಕರ್ತೆ ಮೈಕೆಲೆ ಮೋಂಟಾಸ್ ಅವರನ್ನು ತಮ್ಮ ವಕ್ತಾರರನ್ನಾಗಿ ನೇಮಿಸಿಕೊಂಡರು.

2007: ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆಗೈದ ಆರೋಪಕ್ಕೆ ಒಳಗಾಗಿರುವ ಉತ್ತರ ಪ್ರದೇಶ ನೊಯಿಡಾದ ವ್ಯಾಪಾರಿ ಮೊಹಿಂದರ್ ಸಿಂಗ್ ಪಂಧೇರ್ ನಿವಾಸದ ಹೊರಭಾಗದಲ್ಲಿ ನಿಥಾರಿ ಗ್ರಾಮದ ಉದ್ರಿಕ್ತ ಜನ ಪೊಲೀಸರ ಜೊತೆಗೆ ಘರ್ಷಿಸಿ, ಪಂಧೇರ್ ಮನೆ ಮೇಲೆ ಎರಡನೇ ದಿನ ಕೂಡಾ ದಾಳಿ ನಡೆಸಿದರು. ಗ್ರಾಮಸ್ಥರು ಡಿಸೆಂಬರ್ 31ರಂದು ಕೂಡಾ ಪಂಧೇರ್ ನಿವಾಸದ ಗೇಟು ಮುರಿದು ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆಸ್ದಿದರು.

2006: ತಮ್ಮ ದೇಶದಲ್ಲಿನ ಅಣುಸ್ಥಾವರಗಳು ಹಾಗೂ ಸೌಲಭ್ಯಗಳ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ಥಾನದ ಅಧಿಕಾರಿಗಳು ವಿನಿಮಯ ಮಾಡಿಕೊಂಡರು. ಪರಮಾಣು ಸ್ಥಾವರಗಳ ಮೇಲೆ ದಾಳಿ ನಿಷೇಧ ಒಪ್ಪಂದದ ಅನುಚ್ಛೇದ 2ರ ಪ್ರಕಾರ ಈ ಪಟ್ಟಿಯನ್ನು ನೀಡಲಾಗಿದ್ದು 1998 ಡಿಸೆಂಬರ್ 31ರಂದು ಮಾಡಿಕೊಳ್ಳಲಾದ ಒಪ್ಪಂದವನ್ನು ಈ ಮೂಲಕ ಅನುಷ್ಠಾನಗೊಳಿಸಲಾಯಿತು.

2006: ಬೆಂಗಳೂರಿನ ಭರತನಾಟ್ಯ ಕಲಾವಿದೆ ಶಿಲ್ಪಾ ಉತ್ತಪ್ಪ ಅವರು ಚೆನ್ನೈ ಮ್ಯೂಸಿಕ್ ಅಕಾಡೆಮಿಯು ನೀಡುವ ಡಾ. ಎಂ.ಜಿ.ಆರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅವರ ಭರತನಾಟ್ಯ ಗುರು ಪದ್ಮಿನಿ ರಾಮಚಂದ್ರನ್ ಅವರು ಉತ್ತಮ ನಾಟ್ಯ ಕಲಾವಿದೆಯ ಗುರು ಪ್ರಶಸ್ತಿ ಪಡೆದರು.

2001: ಕಲ್ಕತ್ತಾ ನಗರಕ್ಕೆ `ಕೋಲ್ಕತ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.

2000: ಎಲ್ಲ ಎಲೆಕ್ಟ್ರಾನಿಕ್ ವಾಣಿಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟವಾಗಿ ಬ್ರಿಟನ್ನಿನಲ್ಲಿ ಗ್ರೀನ್ ವಿಚ್ ಎಲೆಕ್ಟ್ರಾನಿಕ್ ಟೈಮ್ನ್ನು ಆರಂಭಿಸಲಾಯಿತು. `ಜಿಇಟಿ' ಎಂಬುದಾಗಿ ಖ್ಯಾತಿ ಪಡೆದ ಇದು ಜಗತ್ತಿನಾದ್ಯಂತ ಇಂಟರ್ ನೆಟ್ ಮಾರಾಟಗಾರರು ಮತ್ತು ಬಳಕೆದಾರರಿಗೆ 1884ರಿಂದ ಬಳಸುತ್ತಿರುವ ಗ್ರೀನ್ ವಿಚ್ ಮೀನ್ ಟೈಮ್ನಂತೆ ಒಂದೇ ಗುಣಮಟ್ಟದ ವೇಳೆಯನ್ನು ಒದಗಿಸಿತು
1999: ಹನ್ನೊಂದು ಐರೋಪ್ಯ ರಾಷ್ಟ್ರಗಳು `ಯುರೋ' ಹೆಸರಿನ ಏಕರೂಪ ಕರೆನ್ಸಿಯನ್ನು ಜಾರಿಗೆ ತಂದವು.

1978: ಏರ್ ಇಂಡಿಯಾ 747 `ಎಂಪರರ್ ಅಶೋಕ' ವಿಮಾನವು ಬಾಂಬೆ (ಈಗಿನ ಮುಂಬೈ) ಬಳಿ ಸಮುದ್ರಕ್ಕೆ ಅಪ್ಪಳಿಸಿ ಅದರಲ್ಲಿದ್ದ 213 ಪ್ರಯಾಣಿಕರು ಮೃತರಾದರು.

1975: ಖ್ಯಾತ ಕೈಗಾರಿಕೋದ್ಯಮಿ ಶಂಕರರಾವ್, ವಾಸುದೇವ್ ಕಿರ್ಲೋಸ್ಕರ್ ನಿಧನರಾದರು.

1973: ಎಸ್. ಎಚ್. ಎಫ್. ಜೆ. ಮಾಣೆಕ್ ಶಾ ಅವರು ಭಾರತದ ಮೊತ್ತ ಮೊದಲ ಫೀಲ್ಡ್ ಮಾರ್ಷಲ್ ಆದರು.

1955: ಭಾರತೀಯ ವಿಜ್ಞಾನಿ, ವಿಶ್ವ ವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.

1947: ಕಲಾವಿದೆ ವಸಂತಲಕ್ಷ್ಮಿ ಜನನ.

1944: ಇಂಗ್ಲಿಷ್ ಶಿಲ್ಪಿ ಸರ್ ಎಡ್ವಿನ್ ಲ್ಯುಟಿಯೆನ್ಸ್ (1869-1944) ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು. ಅವರು ನವದೆಹಲಿಯ ಯೋಜನೆ ಹಾಗೂ ರಾಷ್ಟ್ರಪತಿ ಭವನದ (ಮೊದಲಿಗೆ ವೈಸ್ ರಾಯ್ ಹೌಸ್) ವಿನ್ಯಾಸಕ್ಕಾಗಿ ಖ್ಯಾತರಾದವರು.

1940: ಕಲಾವಿದ ರಾಮಸ್ವಾಮಿ ಐನೂಲಿ ಜನನ.

1938: ಕಲಾವಿದೆ ಪದ್ಮಾ ವೆಂಕಟೇಶ್ ಜನನ.

1930: ಕಲಾವಿದ ಶಂಕರರಾವ್ ಗಾಯಕ್ ವಾಡ್ ಜನನ.

1928: ಕಲಾವಿದ ಈಶ್ವರಪ್ಪ ಜಿ. ಮಿಣಜಗಿ ಜನನ.

1923: ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂ ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು.

1918: ಕಲಾವಿದ ವಿ. ವೆಂಕಟಸುಬ್ಬರಾವ್ ಜನನ.

1916: ಚದುರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಎಂ. ಸುಬ್ರಹ್ಮಣ್ಯರಾಜ ಅರಸು (1-1-1916-19-10-1998) ಅವರು ಹುಟ್ಟಿದ ದಿನ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ರೂಢಿಸಿಕೊಂಡ ಅರಸು ಅವರ ಮೊದಲ ಕಥಾ ಸಂಕಲನ ಸ್ವಪ್ನ ಸುಂದರಿ ಪ್ರಕಟವಾದದ್ದು 1944ರಲ್ಲಿ. ಆ ನಂತರ ಅವರು ಬರೆದ ಇಣುಕು ನೋಟ, ಶವದ ಮನೆ, ಬಂಗಾರದ ಗೆಜ್ಜೆ, ಮೀನಿನ ಹೆಜ್ಜೆ, ಬಣ್ಣದ ಬೊಂಬೆ ಕಥಾ ಸಂಕಲನ ಇವೆಲ್ಲ ಚದುರಂಗರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. 1950ರಲ್ಲಿ ಅವರ ಸರ್ವಮಂಗಳ ಮೊದಲ ಕಾದಂಬರಿ ಪ್ರಕಟವಾಯಿತು. ಕಾದಂಬರಿ ಲೋಕದಲ್ಲಿ ಹೊಸ ಅಲೆಗೆ ಇದು ನಾಂದಿ ಹಾಡಿತು. ಅವರ ಎರಡನೇ ಕಾದಂಬರಿ ಉಯ್ಯಾಲೆ. ನಂತರ ಬರೆದದ್ದು ಮಹತ್ವಾಕಾಂಕ್ಷೆಯ ವೈಶಾಖ. ಇಲಿಬೋನು ಮತ್ತು ಕುಮಾರ ರಾಮ ಅವರಿಂದ ರಚಿತವಾದ ನಾಟಕವಾದರೆ, ನಂಜುಂಡ ಕವಿಯ ರಾಮನಾಥ ಚರಿತೆ ಚದುರಂಗರ ಕಾವ್ಯ. ಮಂಡ್ಯದ 63ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಬಂದಿವೆ. ಚಲನಚಿತ್ರವಾದ ಸರ್ವಮಂಗಳ ಮತ್ತು ಉಯ್ಯಾಲೆಗೂ ಚಲನಚಿತ್ರ ಪ್ರಶಸ್ತಿಗಳು ಬಂದವು. ಜಯಚಾಮರಾಜ ಒಡೆಯರ್ ಓರಗೆಯವರಾದ ಸುಬ್ರಹ್ಮಣ್ಯರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆಯ ಕಲ್ಲಹಳ್ಳಿ. ತಂದೆ ಮುದ್ದುರಾಜ ಅರಸು, ತಾಯಿ ಗೌರಮ್ಮಣ್ಣಿ. ಮೈಸೂರು ಅರಸು ಮನೆತನದ ಸಂಬಂಧ. ಮೈಸೂರು ರಾಯಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರು ಇಂಟರ್ ಮೀಡಿಯೆಟ್ ಕಾಲೇಜುಗಳಲ್ಲಿ ಶಿಕ್ಷಣ. ವೈದ್ಯರಾಗಬೇಕೆಂಬ ಆಸೆ ಇದ್ದರೂ ಸೇರಿದ್ದು ಪುಣೆಯಲ್ಲಿ ಕಾನೂನು ಮತ್ತು ಎಂ. ಎ. ಕಲಿಯಲು. ಆದರೆ ಕಾರಣಾಂತರಗಳಿಂದ ವಿದ್ಯಾಭ್ಯಾಸ ಸ್ಥಗಿತ.

1894: ಪಶ್ಚಿಮ ಬಂಗಾಳದ ಕಲ್ಕತ್ತದಲ್ಲಿ (ಈಗ ಕೋಲ್ಕತ) ಈ ದಿನ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಜನಿಸಿದರು. ಪ್ರಸಿದ್ಧ ವಿಜ್ಞಾನಿ ಐನ್ ಸ್ಟೀನ್ ಜೊತೆಗೆ ಇವರು ವಿವಿಧ ಸಂಶೋಧನೆಗಳಲ್ಲಿ ತೊಡಗಿದ್ದರು. ಢಾಕಾ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾಗ ಬೆಳಕಿನ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿದರು. 1924ರಲ್ಲಿ ಉಪನ್ಯಾಸಕ ಹುದ್ದೆ ಬಿಟ್ಟು ಯುರೋಪಿಗೆ ತೆರಳಿದರು. ಅಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ಭೌತಶಾಸ್ತ್ರದೊಂದಿಗೆ ಗಣಿತ, ರಸಾಯನ, ಭೂಗರ್ಭಶಾಸ್ತ್ರ, ಜೀವ ವಿಜ್ಞಾನವನ್ನು ತಮ್ಮ ಸಂಶೋಧನೆಯಲ್ಲಿ ಬಳಸಿದರು. 1944ರಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1974ರ ಫೆಬ್ರುವರಿ 4ರಂದು ನಿಧನರಾದರು.

1877: ವಿಕ್ಟೋರಿಯಾ ರಾಣಿಯನ್ನು `ಭಾರತದ ರಾಣಿ' ಎಂಬುದಾಗಿ ಘೋಷಿಸಲಾಯಿತು.

1862: `ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ' (ಇಂಡಿಯನ್ ಪೀನಲ್ ಕೋಡ್) ಜಾರಿಗೆ ಬಂತು.

1582: ಫ್ರಾನ್ಸ್ ಪೋರ್ಚುಗಲ್ ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಅಂಗೀಕರಿಸಿ ಈ ದಿನವನ್ನು `ಹೊಸ ವರ್ಷದ ದಿನ' ಎಂಬುದಾಗಿ ಮೊತ್ತ ಮೊದಲ ಬಾರಿಗೆ ಮಾನ್ಯತೆ ನೀಡಲಾಯಿತು. ಗ್ರೇಟ್ ಬ್ರಿಟನ್ ಗ್ರೆಗೋರಿಯನ್ ಕ್ಯಾಲೆಂಡರನ್ನು 1752ರಲ್ಲಿ ಅಂಗೀಕರಿಸಿತು.

No comments:

Advertisement