Sunday, January 17, 2010

ಇಂದಿನ ಇತಿಹಾಸ History Today ಡಿಸೆಂಬರ್ 18

ಇಂದಿನ ಇತಿಹಾಸ

ಡಿಸೆಂಬರ್ 18

ಖ್ಯಾತ ನೀರಾವರಿ ತಜ್ಞ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಎಚ್.ಎನ್. ನಂಜೇಗೌಡ (74) ಅವರು ತೀವ್ರ ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಒಮ್ಮೆ ರಾಜ್ಯದ ಬೃಹತ್ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2008: ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡವನ್ನು ಕಳುಹಿಸದಿರುವಂತೆ ಕೇಂದ್ರ ಸರ್ಕಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸೂಚಿಸಿತು. ಇದರಿಂದ 2009ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಯಬೇಕಿದ್ದ ಭಾರತ ತಂಡದ ಪಾಕ್ ಪ್ರವಾಸ ಅಧಿಕೃತವಾಗಿ ರದ್ದಾಯಿತು. ಸರ್ಕಾರ ತನ್ನ ಮಹತ್ವದ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ತಿಳಿಸಿತು.

2008: ಹತ್ತು ಮಂದಿ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಭೇದಿಸಿದ ಲೋಕಾಯುಕ್ತ ಪೊಲೀಸರು 16 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿ ಸಿ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಆರ್.ಪಟೇಲಪ್ಪ (ಬೆಂಗಳೂರು), ಗೊರೂರು ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್ ಎಸ್.ಸಿ. ಜಯಚಂದ್ರ, ವಿಜಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ ರಾಜಶೇಖರಯ್ಯ ಚೌಕಿಮಠ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಜಯಶಂಕರ್ (ಬೆಂಗಳೂರು), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಮೈಸೂರು) ಚಂದ್ರೇಗೌಡ, ಆಲಮಟ್ಟಿ ಕೃಷ್ಣ ಭಾಗ್ಯಜಲ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ವೆಂಕಣ್ಣ ಚವಾಣ್, ಬಿಬಿಎಂಪಿ ಸಹಾಯಕ ಎಂಜಿನಿಯರ್ ದೇವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ನಾಗಲಿಂಗಯ್ಯ (ಬೆಂಗಳೂರು) ಮತ್ತು ರಾಜಾನುಕುಂಟೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೀರೇಗೌಡ ಅವರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

2008: ರಾಜ್ಯದ ವಿವಿಧೆಡೆ 2000ದಿಂದ 2006ರವರೆಗೆ ನಡೆದ ಗಣಿಗಾರಿಕೆ ಅಕ್ರಮಗಳ ಕುರಿತ ತನಿಖಾ ವರದಿಯನ್ನು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಪರವಾಗಿ ಸಂಸ್ಥೆಯ ರಿಜಿಸ್ಟ್ರಾರ್ ಎಲ್.ಸುಬ್ರಹ್ಮಣ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರರಾವ್ ಅವರನ್ನು ಭೇಟಿ ಮಾಡಿ, 274 ಪುಟಗಳ ವರದಿ ಮತ್ತು ಆರೋಪಗಳನ್ನು ಪುಷ್ಟೀಕರಿಸುವ 1,000 ದಾಖಲೆಗಳನ್ನು ಸಲ್ಲಿಸಿದರು.

2008: ಖ್ಯಾತ ನೀರಾವರಿ ತಜ್ಞ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಎಚ್.ಎನ್. ನಂಜೇಗೌಡ (74) ಅವರು ತೀವ್ರ ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಒಮ್ಮೆ ರಾಜ್ಯದ ಬೃಹತ್ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂಜೇಗೌಡರು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ 1967 (ಸ್ವತಂತ್ರ ಪಕ್ಷ) ಹಾಗೂ 1972ರಲ್ಲಿ ಶಾಸಕರಾಗಿ (ಕಾಂಗ್ರೆಸ್‌ನಿಂದ) ಆಯ್ಕೆ ಆಗಿದ್ದರು. 1972ರಲ್ಲಿ ದೇವರಾಜ ಅರಸು ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಬಸವನಗುಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದರು. 1980 ಹಾಗೂ 1984 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು.

2008: ಸೋಮಾಲಿಯಾದ ತೀರದಲ್ಲಿ ಉಪಟಳ ನೀಡುತ್ತಿರುವ ಕಡಲ್ಗಳ್ಳರನ್ನು ಮಣಿಸಲು ಇದೇ ಪ್ರಥಮ ಬಾರಿ ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳಿಗೆ ಅಧಿಕೃತ ಒಪ್ಪಿಗೆ ನೀಡಿತು. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಭೂದಾಳಿ ಹಾಗೂ ವೈಮಾನಿಕ ದಾಳಿ ನಡೆಸಿ ಸೋಮಾಲಿಯಾದಲ್ಲಿರುವ ಕಡಲ್ಗಳ್ಳರ ನೆಲೆಗಳನ್ನು ನಾಶಪಡಿಸಬಹುದು ಎಂದು ಭದ್ರತಾ ಮಂಡಳಿ ಹೇಳಿತು. ಕಳೆದ 17 ವರ್ಷಗಳಿಂದ ಸೋಮಾಲಿಯಾದಲ್ಲಿ ಸರ್ಕಾರ ನೆಪಮಾತ್ರಕ್ಕೆ ಇದೆ. ದೇಶದ ದಕ್ಷಿಣದ ಬಹುಭಾಗ ಮುಸ್ಲಿಮ್ ಮೂಲಭೂತವಾದಿಗಳ ಹಿಡಿತದಲ್ಲಿದೆ. ಅಂತರ್ಯುದ್ಧದಿಂದ ಜರ್ಝರಿತಗೊಂಡಿರುವ ಈ ದೇಶದಲ್ಲಿ ಶಾಂತಿಪಡೆ ನಿಯೋಜಿಸಲು ಇದೇ ಮೊದಲ ಬಾರಿ ಅಮೆರಿಕ ಒಪ್ಪಿಕೊಂಡಿತು.

2008: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ರಚನೆಗೆ ಶಾಸನಬದ್ಧ ಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಕಾಯ್ದೆ (ಯುಎಪಿಎ)ಗೆ ಬಲ ತುಂಬುವ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು. ಇದರೊಂದಿಗೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಂಡಿಸಿದ ಈ ಎರಡೂ ಮಸೂದೆಗಳಿಗೆ ಸಂಸತ್ತಿನ ಸಮ್ಮತಿಯ ಮುದ್ರೆ ಬಿದ್ದಂತಾಯಿತು.

2008: ಅಮೆರಿಕ ಅಧ್ಯಕ್ಷ ಗದ್ದುಗೆಗೆ ಆಯ್ಕೆಯಾಗಿರುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂದು ಖ್ಯಾತಿ ಗಳಿಸಿರುವ ಬರಾಕ್ ಒಬಾಮ ಅವರನ್ನು ಪ್ರತಿಷ್ಠಿತ ಟೈಮ್ ನಿಯತಕಾಲಿಕ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಿತು. ಅಧ್ಯಕ್ಷೀಯ ಸ್ಥಾನಕ್ಕೆ ಮತ್ತೋರ್ವ ಅಭ್ಯರ್ಥಿಯಾಗಿದ್ದ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಬಾಮ ಈ ಗೌರವಕ್ಕೆ ಪಾತ್ರರಾದರು.

2008: ಅನಿವಾಸಿ ಭಾರತೀಯ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ ಉಪ ಸಭಾಧ್ಯಕ್ಷ ಸ್ವರಾಜ್ ಪಾಲ್ ಅವರು ಹೌಸ್ ಆಫ್ ಲಾರ್ಡ್ಸ್‌ ಕಲಾಪ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಭಾರತೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ಸಂಸತ್ತಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಉನ್ನತ ಹುದ್ದೆಯಲ್ಲಿ ಕುಳಿತು ಕಲಾಪ ನಿರ್ವಹಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಅವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸಹೋದರ ಪ್ರವೀಣ್ ಮಹಾಜನ್ ಗೆ ಸ್ಥಳೀಯ ಮುಂಬೈ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಪ್ರವೀಣ್ ವಿರುದ್ಧ ಪೊಲೀಸರು ದಾಖಲಿಸಿದ ಕೊಲೆ ಆರೋಪವನ್ನು ನ್ಯಾಯಾಲಯ ಡಿಸೆಂಬರ್ 17ರಂದು ದೃಢಪಡಿಸಿತ್ತು. ಈದಿನ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಧೀಶ ಎಸ್.ಪಿ. ದಾವರೆ ಅವರು ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದರು. ಪ್ರಮೋದ್ ಮಹಾಜನ್ ಅವರ ಮನೆಗೆ ಅಕ್ರಮವಾಗಿ ನುಗ್ಗಿದ ಅಪರಾಧಕ್ಕಾಗಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ವಿಧಿಸಿದರು. ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕು ಎಂದು ಸರ್ಕಾರಿ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶರು `ಈ ಕೊಲೆ ಅಪರೂಪದಲ್ಲಿ ಅಪರೂಪದ್ದೇನಲ್ಲ. ಆದ್ದರಿಂದ ಮರಣದಂಡನೆಯ ಅಗತ್ಯವಿಲ್ಲ. ಮರಣದಂಡನೆ ವಿಧಿಸುವಷ್ಟು ಕ್ರೂರ ಅಪರಾಧವೂ ಅಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

2007: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕೊಳ್ಯೂರು ರಾಮಚಂದ್ರರಾವ್ ಅವರು ಪ್ರಸಕ್ತ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಕೊಳ್ಯೂರು ಅವರು ಕರ್ನಾಟಕ ಯಕ್ಷಗಾನ ನಾಟಕ ಸಭಾದ `ಕಾಡಮಲ್ಲಿಗೆ, `ಪಟ್ಟದ ಪದ್ಮಲೆ, ಸೊರ್ಕುದ ಸಿರಿಗಿಂಡೆ ಮೊದಲಾದ ಜನಪ್ರಿಯ ಪ್ರಸಂಗಗಳಲ್ಲಿನ ಮುಖ್ಯ ಸ್ತ್ರಿಪಾತ್ರದ ಮೂಲಕ ರಾಜ್ಯದ ಕರಾವಳಿಯಲ್ಲಿ ಮನೆಮಾತಾಗಿದ್ದವರು. ತನ್ನ ಹನ್ನೆರಡನೇ ವರ್ಷದಲ್ಲಿಪುಂಡುವೇಷದ ಮೂಲಕ ಯಕ್ಷಗಾನ ರಂಗಕ್ಕೆ ಕಾಲಿಟ್ಟು ನಂತರ ಸ್ತ್ರೀ ವೇಷ ಹಾಕತೊಡಗಿದ ಕೊಳ್ಯೂರು ಇತ್ತೀಚಿನವರೆಗೂ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಮೇಳ ಮತ್ತು ಕಟೀಲು ದುರ್ಗಾಪರಮೇಶ್ವರಿ ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಇಲ್ಲಿಯವರೆಗೆ ನಾಲ್ಕು ಬಾರಿ ಬಡುಗುತಿಟ್ಟಿನ ಯಕ್ಷಗಾನ ಕಲಾವಿದರಿಗೆ (ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ ಮತ್ತು ಕುಮಟಾ ಗೋವಿಂದ ನಾಯ್ಕ) ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದ್ದು ಇದೇ ಮೊದಲ ಬಾರಿ ತೆಂಕುತಿಟ್ಟಿನ ಕಲಾವಿದರಿಗೆ ಈ ಗೌರವ ಸಂದಿದೆ.

2008: ನಕ್ಸಲ್ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ 350ಕ್ಕೂ ಹೆಚ್ಚು ನಕ್ಸಲೀಯ ಕೈದಿಗಳು ಜೈಲು ಸಿಬ್ಬಂದಿ ಮತ್ತು ಇತರ ಕೈದಿಗಳೊಂದಿಗೆ ಘರ್ಷಣೆಗೆ ಇಳಿದ ಘಟನೆ ಬಿಹಾರಿನ ಪಟ್ನಾದ ಬೆವೂರ್ ಜೈಲಿನಲ್ಲಿ ನಡೆಯಿತು. ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ನಕ್ಸಲೀಯರು ಇತರ ಕೈದಿಗಳನ್ನು ಪೀಡಿಸಿದರು. ಇದನ್ನು ಭದ್ರತಾ ಸಿಬ್ಬಂದಿ ಆಕ್ಷೇಪಿಸಿದಾಗ ನಕ್ಸಲ್ ಕೈದಿಗಳು ಘರ್ಷಣೆಗೆ ಇಳಿದರು. ಹೆಚ್ಚುವರಿ ಪಡೆಗಳು ಜೈಲು ಆವರಣ ಪ್ರವೇಶಿಸಿದಾಗ ಕ್ರುದ್ಧರಾದ ಧರಣಿ ನಿರತ ನಕ್ಸಲರು ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಿದರು. ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ನಕ್ಸಲೀಯರು ಜೈಲಿನ ಆವರಣದಲ್ಲಿದ್ದ ಬುದ್ಧ ಪ್ರತಿಮೆಯ ಎದುರು ಧರಣಿ ನಡೆಸಿದರು. ನಕ್ಸಲ್ ಪೀಡಿತ ಗಯಾ ಜಿಲ್ಲೆಯ ನಗಿನಾ ಮಾಂಝಿ ಎಂಬಾತನನ್ನು ನಕ್ಸಲೀಯ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಡಿಸೆಂಬರ್ 14ರಂದು ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

2008: ಶಸ್ತ್ರಚಿಕಿತ್ಸೆಯ ನಂತರ ರೋಗಿಗಳಲ್ಲಿ ನೋವು ಕಂಡುಬರುತ್ತದೆ. ಆ ಸಮಯದಲ್ಲಿ ದೇಹಕ್ಕೆ ಮಾಡುವ ಮಸಾಜಿನಿಂದಾಗಿ ನೋವಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಮೆರಿಕದ ಶಸ್ತ್ರಚಿಕಿತ್ಸಾ ತಜ್ಞ ಡಾ.ಡೇನಿಯಲ್ ತಮ್ಮ ಅಧ್ಯಯನದಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸಾ ನೋವಿನ ಶಮನಕ್ಕಾಗಿ ರೋಗಿಗಳಿಗೆ ನೀಡುವ ಮಾರ್ಫಿನ್ (ಮತ್ತು ತರುವ ಮದ್ದು) ಔಷಧಿಯಷ್ಟೇ ಮಸಾಜ್ ಪರಿಣಾಮ ಬೀರುತ್ತದೆ ಎಂದೂ ಡೇನಿಯಲ್ ಅಭಿಪ್ರಾಯ.

2007: ಹಿಂದಿ ಮತ್ತು ಕನ್ನಡ ಭಾಷೆಯ ಪ್ರತಿಭಾವಂತ ಲೇಖಕ, ಹೈದರಾಬಾದಿನ ಮೌಲಾನ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷ ಡಾ.ತೇಜಸ್ವಿ ವಿ.ಕಟ್ಟೀಮನಿ ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ `ಗಂಗಾಶರಣ ಸಿಂಹ ಪುರಸ್ಕಾರ' ನೀಡಿ ಗೌರವಿಸಿತು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿಫಲಕವನ್ನು ಒಳಗೊಂಡಿದೆ. ರಾಷ್ಟ್ರಪತಿ ಭವನದ ಅಶೋಕಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಮಾನವ ಸಂಪನ್ಮೂಲ ಇಲಾಖೆಯಡಿ ಸ್ವಾಯತ್ತ ಸಂಸ್ಥೆಯಾದ ಆಗ್ರಾ ಕೇಂದ್ರೀಯ ಹಿಂದಿ ಸಂಸ್ಥಾನ ಈ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ. ಕೊಪ್ಪಳ ಜಿಲ್ಲೆಯ ಅಳವಂಡಿಯವರಾದ ಡಾ.ಕಟ್ಟೀಮನಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊಫೆಸರ್ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದಲ್ಲಿ ಹದಿನೇಳು ಹಾಗೂ ಹಿಂದಿಯಲ್ಲಿ ಐದು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಪ್ರಸ್ತುತ ಯುಜಿಸಿಯ ಸಂಶೋಧನಾ ಯೋಜನೆಯಡಿ `ಕನ್ನಡ ಮತ್ತು ಹಿಂದಿ ನಡುವಿನ ಕೊಡು-ಕೊಳ್ಳು' ಬಗ್ಗೆ ಅಧ್ಯಯನ ನಿರತರು. 2004ರ ಮಹಾತ್ಮ ಜ್ಯೋತಿಬಾ ಪುಲೆ ಸಮ್ಮಾನ್, 2005ರ ಹಿಂದಿ-ಉರ್ದು ಪ್ರಶಸ್ತಿ ಹಾಗೂ 2006ರ ಲಖನೌದ ಸಾಹಿತ್ಯ ಶಿರೋಮಣಿ ಸಮ್ಮಾನ್ ಗೌರವಕ್ಕೆ ಡಾ.ಕಟ್ಟೀಮನಿ ಪಾತ್ರರಾಗಿದ್ದರು.

2007: ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ 1984ರಲ್ಲಿ ದೆಹಲಿಯಲ್ಲಿನಡೆದ ಸಿಖ್ಖರ ಹತ್ಯಾಕಾಂಡ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಅವರ ವಿರುದ್ಧ ಹೂಡಲಾಗಿರುವ ಪ್ರಕರಣದ ಮರುವಿಚಾರಣೆ ನಡೆಸಬೇಕು ಎಂದು ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯ ಕೇಂದ್ರೀಯ ತನಿಖಾ ತಂಡಕ್ಕೆ (ಸಿಬಿಐ) ಆದೇಶಿಸಿತು. `ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮುಚ್ಚಬಹುದು' ಎಂಬ ಸಿಬಿಐ ಅರ್ಜಿಯನ್ನು ತಿರಸ್ಕರಿಸುತ್ತ ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸಂಜೀವ ಜೈನ್, `ಈ ವಿಷಯದ ಬಗ್ಗೆ ಇನ್ನಷ್ಟು ಕೂಲಂಕಷ ತನಿಖೆ ನಡೆಸಬೇಕಾದ ಅವಶ್ಯಕತೆಯಿದೆ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಹೆಚ್ಚಿನ ವಿಚಾರಣೆ ನಡೆಸಿ ಜನವರಿ 16ರೊಳಗೆ ವರದಿ ಸಲ್ಲಿಸಬೇಕು' ಎಂದು ಸಿಬಿಐಗೆ ಆದೇಶ ನೀಡಿದರು. ಇದಕ್ಕೂ ಮುನ್ನ ಸೆಪ್ಟೆಂಬರ್ 29ರಂದು ತನ್ನ ವರದಿ ಸಲ್ಲಿಸಿದ್ದ ಸಿಬಿಐ, `ಇಂದಿರಾ ಹತ್ಯೆ ನಂತರ ನಡೆದ ಗಲಭೆಯಲ್ಲಿ, ಸಿಖ್ಖರನ್ನು ಕೊಲ್ಲುವಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಗುಂಪೊಂದಕ್ಕೆ ಪ್ರಚೋದನೆ ನೀಡುತ್ತಿರುವುದನ್ನು ಕೇಳಿದ್ದಾಗಿ ಜಸ್ಬೀರ್ ಸಿಂಗ್ ಎಂಬುವವರು ಹೇಳಿದ್ದಾರೆ. ಆದರೆ, ಸದ್ಯ ಅವರು ಅಮೆರಿಕದಲ್ಲಿ ನೆಲೆಸಿರುವುದರಿಂದ ಹೇಳಿಕೆ ಪಡೆಯಲಾಗಿಲ್ಲ' ಎಂದು ತಿಳಿಸಿತ್ತು. ಆದರೆ, ಸಾಕ್ಷಿ ಜಸ್ಬೀರ್ ಸಿಂಗ್ ಪರ ವಕೀಲರು, ಟೈಟ್ಲರ್ ವಿರುದ್ಧದ ವಿಚಾರಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಕಕ್ಷಿದಾರರು ಸಿದ್ಧರಿರುವುದಾಗಿ ಹೇಳಿದ ನಂತರ, ಮರು ವಿಚಾರಣೆ ನಡೆಸುವಂತೆ ನ್ಯಾಯಾಲಯ ಸಿಬಿಐಗೆ ಆದೇಶಿಸಿತು.

2007: ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಜನಾಂದೋಲನವನ್ನೇ ರೂಪಿಸಿದ ಕರ್ನಾಟಕ ಸರ್ಕಾರಕ್ಕೆ ವಿಶ್ವಸಂಸ್ಥೆಯ ಪ್ರಶಂಸೆ ಲಭಿಸಿತು. ಕರ್ನಾಟಕದ ಪ್ರಯತ್ನಗಳಿಂದಾಗಿ ವಿಶ್ವಸಂಸ್ಥೆ ನಿಗದಿಪಡಿಸಿದ `ಶತಮಾನದ ಅಭಿವೃದ್ಧಿಯ ಗುರಿ'ಗಳನ್ನು ತಲುಪುವುದು ಕಷ್ಟವಾಗಲಿಕ್ಕಿಲ್ಲ. 2015ರ ವೇಳೆಗೆ ಶೇ 60ರಷ್ಟು ಜನರು ಶುಚಿತ್ವಕ್ಕೆ ಮಹತ್ವ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿತು.

2007: ಆಡಳಿತಾರೂಢ ಆಫ್ರಿಕಾ ರಾಷ್ಟ್ರೀಯ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೇಕಬ್ ಜುಮಾ ಅವರಿಗೆ ಮಾಜಿ ಅಧ್ಯಕ್ಷ ಥಾಬೋ ಎಂಬೆಕಿ ಅಧಿಕಾರ ಹಸ್ತಾಂತರಿಸಿದರು. ಜೇಕಬ್ ಜುಮಾ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಆರೋಪಗಳನ್ನು ಹೊತ್ತು ಅಧಿಕಾರ ಕಳೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಹುಮತ ಗಳಿಸಿ, ತಮಗೆ ಅಂಟಿದ್ದ ಕಳಂಕವನ್ನು ತೊಳೆದುಕೊಂಡರು.

2006: ವಿವಾದಾತ್ಮಕ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಸೂದೆಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಮಸೂದೆಗೆ ಬುಷ್ ಸಹಿ ಬೀಳುವುದರೊಂದಿಗೆ ಭಾರತ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಿಂದ ಪರಮಾಣು ಇಂಧನ ಹಾಗೂ ತಂತ್ರಜ್ಞಾನ ಖರೀದಿಸುವ ಹಾದಿ ಸುಗಮಗೊಳ್ಳಲಿದೆ. ಹಲವಾರು ವಿರೋಧಗಳ ನಡುವೆ ಡಿಸೆಂಬರ್ 9ರಂದು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಬಹುಮತದಿಂದ ಅಂಗೀಕಾರವಾದರೂ ಒಪ್ಪಂದದ ಮಸೂದೆಯು ಪರಮಾಣು ಪೂರೈಕೆಯ 45 ರಾಷ್ಟ್ರಗಳ ಗುಂಪು ಹಾಗೂ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯಿಂದ ಇನ್ನೂ ಒಪ್ಪಿಗೆ ಪಡೆಯಬೇಕಾಗಿದೆ.

2006: ಹ್ಯಾನಾ -ಬಾರ್ಬರಾ ಕಾರ್ಟೂನ್ ಕಂಪೆನಿಯ ಸಹ ಸ್ಥಾಪಕ ಜೋಸೆಫ್ ಬಾರ್ಬರಾ (95) ನಿಧನರಾದರು. ಇವರು ಸೃಷ್ಟಿಸಿದ ಸ್ಕೂಬಿ-ಡೂ, ಫ್ಲಿಂಟ್ ಸ್ಟೋನ್ಸ್ ಎಂಬ ಕಥಾ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಬಿಲ್ ಹ್ಯಾನಾ ಅವರ ಜೊತೆಗೆ ಅನಿಮೇಷನ್ ಚಿತ್ರಗಳನ್ನು ನಿಮರ್ಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದ ಬಾರ್ಬರಾ `ಅನಿಮೇಷನ್ ದಂತಕಥೆ'ಯಾಗಿದ್ದರು.

2006: ಖ್ಯಾತ ಚಿತ್ರ ಕಲಾವಿದ ವಿಕಾಸ ಭಟ್ಟಾಚಾರ್ಯ (66) ಕೋಲ್ಕತದಲ್ಲಿ ನಿಧನರಾದರು. 1940ರಲ್ಲಿ ಉತ್ತರ ಕೋಲ್ಕತದಲ್ಲಿ ಜನಿಸಿದ್ದ ಭಟ್ಟಾಚಾರ್ಯ ಲಲಿತ ಕಲಾ ಅಕಾಡೆಮಿ ಮತ್ತು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 1960ರಲ್ಲಿ `ಗೊಂಬೆ' ಚಿತ್ರದ ಸರಣಿಯೊಂದಿಗೆ ಮನೆ ಮಾತಾಗಿದ್ದರು.

2006: ದೇಶವ್ಯಾಪಿ ಕುತೂಹಲ ಕೆರಳಿಸಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಾ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ದಂಡ ಸಂಹಿತೆಯ ವಿಧಿ 302 ಮತ್ತು 201 (ಸಾಕ್ಷ್ಯನಾಶ) ಪ್ರಕಾರ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿತು. ಹರಿಯಾಣದ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ 1989ರ ಏಪ್ರಿಲಿನಲ್ಲಿ ನಡೆದ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.

2006: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಸಂಪತ್ತು ಪ್ರಕರಣದಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ಬಿಹಾರಿನ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತು.

2005: ವಿಶ್ವ ವ್ಯಾಪಾರ ಸಂಘಟನೆಯ ಆರನೇ ಸಚಿವ ಮಟ್ಟದ ಸಮ್ಮೇಳನವು ಕೃಷಿ ರಫ್ತು ಸಬ್ಸಿಡಿಯನ್ನು 2013ರ ವೇಳೆಗೆ ಸಂಪೂರ್ಣವಾಗಿ ಕಿತ್ತು ಹಾಕಲು ಒಪ್ಪಿತು. ಈ ದಿನ ಬಿಡುಗಡೆ ಮಾಡಲಾದ ಅಂತಿಮ ಪರಿಷ್ಕತ ಕರಡು ಪ್ರತಿಯಲ್ಲಿ ಇದನ್ನು ತಿಳಿಸಲಾಯಿತು. 149 ರಾಷ್ಟ್ರಗಳ ವಾಣಿಜ್ಯ ಸಚಿವರು ಈ ಅಂತಿಮ ಪರಿಷ್ಕತ ಕರಡು ಪ್ರತಿಗೆ ಒಪ್ಪಿಗೆ ಸೂಚಿಸಿದರು.

2005: ತಮಿಳುನಾಡಿನ ಚೆನ್ನೈಯ ಎಂಜಿಆರ್ ನಗರದಲ್ಲಿ ಪ್ರವಾಹ ಪರಿಹಾರ ಕೂಪನ್ ಪಡೆಯಲು ಸಾಲುಗಟ್ಟಿದ್ದ ಜನರ ಕಾಲ್ತುಳಿತಕ್ಕೆ ಸಿಲುಕಿದ ಪರಿಣಾಮವಾಗಿ 42 ಮಂದಿ ಅಸು ನೀಗಿದರು. 37ಕ್ಕೂ ಹೆಚ್ಚು ಜನ ಗಾಯಗೊಂಡರು. ತಿಂಗಳ ಒಳಗಾಗಿ ಇಲ್ಲಿ ಸಂಭಸಿದ ಎರಡನೇ ಕಾಲ್ತುಳಿತ ಘಟನೆ ಇದು. ನವೆಂಬರ್ 6ರಂದು ಇದೇ ರೀತಿ ಪ್ರವಾಹ ಪರಿಹಾರ ವಿತರಣೆ ಸಂದರ್ಭದಲ್ಲೇ ಕಾಲ್ತುಳಿತ ಸಂಭಸಿ 6 ಜನ ಮೃತರಾಗಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

2005: ಪಿತ್ತಕೋಶದ ಕಾಯಿಲೆಗೆ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾದ ಸೋಲ್ ಗೆ ಹೋಗಿದ್ದ ಕೇಂದ್ರ ಇಂಧನ ಸಚಿವ ಪಿ.ಎಂ. ಸಯೀದ್ (65) ಅಲ್ಲಿನ ಹ್ಯೂಂಡೈ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದಿದ್ದ ಸಯೀದ್ ತುಳು, ಕನ್ನಡ ಸೇರಿದಂತೆ 8 ಭಾಷೆ ಬಲ್ಲವರಾಗಿದ್ದರು. ಕಿರಿಯ ವಯಸ್ಸಿನಲ್ಲೇ ಲಕ್ಷದ್ವೀಪದಿಂದ ನಾಲ್ಕನೇ ಲೋಕಸಭೆಗೆ (1967) ಮೊದಲ ಸಲ ಪಕ್ಷೇತರರಾಗಿ ಆಯ್ಕೆಯಾದ ಅವರು 1999ರವರೆಗೆ ಸತತ 10 ಬಾರಿ ಇದೊಂದೇ ಕ್ಷೇತ್ರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. 1979-80ರಲ್ಲಿ ಚೌಧುರಿ ಚರಣ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅವರು ನಂತರ ಕಾಂಗ್ರೆಸ್ ಸೇರಿದರು. 13ನೇ ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಸಲ ಸೋಲು ಅನುಭವಿಸಿದ್ದರು. ಅವರ ಅನುಭವ, ದಕ್ಷತೆ ಪರಿಗಣಿಸಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಇಂಧನ ಖಾತೆ ಕೊಡಲಾಗಿತ್ತು. ನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.

2005: ಶಿವಸೇನೆಯ ಬಂಡಾಯ ನಾಯಕ ರಾಜ್ ಠಾಕ್ರೆ ಅವರು ಪಕ್ಷವನ್ನು ತ್ಯಜಿಸಿ ನೂತನ ರಾಜಕೀಯ ಪಕ್ಷ ರಚಿಸುವುದಾಗಿ ಮುಂಬೈಯಲ್ಲಿ ಪ್ರಕಟಿಸಿದರು.

1980: ಸೋವಿಯತ್ ಒಕ್ಕೂಟದ ಮಾಜಿ ಪ್ರಧಾನಿ ಅಲೆಕ್ಸಿ ಎನ್. ಕೊಸಿಗಿನ್ ಅವರು ಮಾಸ್ಕೋದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಎಂ. ಕೃಷ್ಣೇ ಗೌಡ ಜನನ.

1945: ಸಾಹಿತಿ ರತ್ನಾಕರ ಶೆಟ್ಟಿ ಜನನ.

1942: ವಚನ ಸಾಹಿತ್ಯದಲ್ಲಿ ಆಳವಾದ ಆಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನ ರೂಢಿಸಿಕೊಂಡು ಕೃತಿಗಳನ್ನು ರಚಿಸಿರುವ ಸಾಹಿತಿ ಡಾ. ಪಿ.ವಿ. ನಾರಾಯಣ ಅವರು ಪಿ. ವೆಂಕಪ್ಪಯ್ಯ- ನರಸಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1934: ಸಾಹಿತಿ ರಾಜಲಕ್ಷ್ಮಿ ಎನ್. ರಾವ್ ಜನನ.

1930: ಬಾಂಬೆ ಸೆಂಟ್ರಲ್ ಸ್ಟೇಷನ್ ಆಗಿನ ಬಾಂಬೆ (ಈಗಿನ ಮುಂಬೈ) ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರಿಂದ ಉದ್ಘಾಟನೆಗೊಂಡಿತು.

1916: ಮೊದಲನೇ ವಿಶ್ವ ಸಮರ ಸಂದರ್ಭದಲ್ಲಿ ವೆರ್ಡನ್ನಿನಲ್ಲಿ ನಡೆದ ಕದನದಲ್ಲಿ ಫ್ರೆಂಚರು ಜರ್ಮನ್ನರನ್ನು ಸೋಲಿಸಿದರು. ಈ ಕದನ ಫೆಬ್ರುವರಿಯಲ್ಲಿ ಆರಂಭವಾಗಿತ್ತು. ಜರ್ಮನಿ ಮತ್ತು ಮಿತ್ರಪಡೆಗಳಿಗೆ ಸೇರಿದ 7 ಲಕ್ಷಕ್ಕೂ ಹೆಚ್ಚು ಮಂದಿ ಈ ಕದನದಲ್ಲಿ ಅಸು ನೀಗಿದರು.

1899: ಊಧಮ್ಸಿಂಗ್ ಜನ್ಮದಿನ. ಜಲಿಯನ್ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ'ಡೈಯರನನ್ನು ಕ್ಲೊಲುವ ಮೂಲಕ ಊಧಮ್ಸಿಂಗ್ ಈ ಹತ್ಯಾಕಾಂಡದ ಸೇಡು ತೀರಿಸಿದರು.

1885: ಭಾರತೀಯ ತತ್ವಜ್ಞಾನಿ ಸುರೇಂದ್ರನಾಥ ದಾಸಗುಪ್ತ (1885-1952) ಹುಟ್ಟಿದ ದಿನ. `ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ' ಗ್ರಂಥದ ಮೂಲಕ ಇವರು ಖ್ಯಾತರಾಗಿದ್ದಾರೆ.

1863: ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ (1863-1914) ಹುಟ್ಟಿದ ದಿನ. ಇವರ ಕೊಲೆ ಮೊದಲ ಜಾಗತಿಕ ಸಮರಕ್ಕೆ ತತ್ ಕ್ಷಣದ ಕಾರಣವಾಯಿತು.

1856: ಸರ್. ಜೋಸೆಫ್ ಜಾನ್ ಥಾಮ್ಸನ್ (1856-1940) ಹುಟ್ಟಿದ ದಿನ. ಇಂಗ್ಲಿಷ್ ಭೌತ ತಜ್ಞರಾದ ಇವರು ನ್ಯೂಟ್ರಾನ್ ಸಂಶೋಧನೆಯ ಮೂಲಕ ಪರಮಾಣು ರಚನೆಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ನೆರವಾದರು.

No comments:

Advertisement