Wednesday, January 20, 2010

ಇಂದಿನ ಇತಿಹಾಸ History Today ಡಿಸೆಂಬರ್ 21

ಇಂದಿನ ಇತಿಹಾಸ

ಡಿಸೆಂಬರ್ 21

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ (93) ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಅವರು ಈ ವರ್ಷವಿಡೀ ಲೀಲಾವತಿ ಆಸ್ಪತ್ರೆಯಲ್ಲಿಯೇ ಕಳೆದರು. ಪಂಜಾಬಿನ ಸಿಖ್ ಕುಟುಂಬದಲ್ಲಿ ಜನಿಸಿದ್ದ ತೇಜಿ ಅವರು 1941ರಲ್ಲಿ ಖ್ಯಾತ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರನ್ನು ಮದುವೆಯಾದರು.

2008: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಾಲಿವುಡ್ಡಿನ ಖ್ಯಾತ ನಟ ಶಾರುಖ್ ಖಾನ್ ಅವರು ಜಗತ್ತಿನ 50 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ, ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ನ್ಯೂಸ್ ವೀಕ್' ಸಮೀಕ್ಷೆ ತಿಳಿಸಿತು. ದೇಶದ ಅಣ್ವಸ್ತ್ರ ಸಂಗ್ರಹಗಳ ಮೇಲೆ ನಿಯಂತ್ರಣ ಹೊಂದಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಅವರು ಈ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಗಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿತು. ಒಬಾಮ ನಂತರ ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಹ್ಯು ಜಿಂಟಾವೊ, ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ, ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್, ಜರ್ಮನಿಯ ಚಾನ್ಸಲರ್ ಅಂಗೆಲಾ ಮಾರ್ಕ್ ಮತ್ತು ರಷ್ಯಾದ ಪ್ರಧಾನಿ ವಾಡ್ಲಿಮಿರ್ ಪುಟಿನ್ ಸೇರಿದ್ದರು. ಆಶ್ಚರ್ಯಕರ ವಿಚಾರವೆಂದರೆ ಈ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಜಿಮ್ ಜೊಂಗ್-2 ಅವರೂ ಸೇರಿದ್ದಾರೆ ಎಂದು ಸಮೀಕ್ಷೆ ವಿವರಿಸಿತು. ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಸೋನಿಯಾ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ರಾಣಿ, ಭಾರತದಲ್ಲಿ ಅನೇಕ ರಾಜಕೀಯ ಪಕ್ಷಗಳು ಹರಿದು ಹಂಚಿ ಹೋದರೂ ಸೋನಿಯಾ ನೇತೃತ್ವದ ಕಾಂಗ್ರೆಸ್ ಅಖಂಡವಾಗಿ ಉಳಿದಿದೆ ಎಂದು ನಿಯತಕಾಲಿಕೆ ಬಣ್ಣಿಸಿತು.

2008: ಭೂಮಿಯ ಮೇಲೆ ಬದುಕಿದ್ದ ಜೀವಿಗಳಲ್ಲೇ ಅತ್ಯಂತ ಹಳೆಯ ಹಾಗೂ ಸಾಮಾನ್ಯ ಸೂಕ್ಷ್ಮ ಜೀವಿಯ ಬಗೆಗೆ ವಿಜ್ಞಾನಿಗಳು ಈ ವರೆಗೆ ಹೊಂದಿದ್ದ ಅಂದಾಜು, ಗುಣಲಕ್ಷಣ ಮತ್ತು ಕಲ್ಪನೆ ಅವರು ಅಂದುಕೊಂಡಂತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಕೆನಡಾದ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಬಂದಿರುವುದಾಗಿ 'ನೇಚರ್ ಜನರಲ್' ಪತ್ರಿಕೆ ವರದಿ ಮಾಡಿತು. 3.8 ಶತಕೋಟಿ ವರ್ಷಗಳಷ್ಟು ಹಳೆಯದಾದ 'ಲ್ಯೂಕಾ' (ಲಾಸ್ಟ್ ಯೂನಿವರ್ಸಲ್ ಕಾಮನ್ ಏನ್‌ಸೆಸ್ಟರ್) ಸೂಕ್ಷ್ಮ ಜೀವಿಯು 90 ಡಿಗ್ರಿ ಸೆಲ್ಷಿಯಸ್ಸಿಗಿಂತಲೂ ಹೆಚ್ಚಿನ ಉಷ್ಣಾಂಶ ಹಾಗೂ ಸಮುದ್ರದ ಆಳದ ವಾತಾವರಣದಲ್ಲಿ ಇರಲು ಬಯಸುವ ಜೀವಿ ಎಂದೇ ಈ ಮೊದಲು ನಂಬಲಾಗಿತ್ತು. ಆದರೆ ಈಗ ಈ ಅಂಶವನ್ನು ವಿಜ್ಞಾನಿಗಳು ನಿರಾಕರಿಸಿದ್ದು ಲ್ಯೂಕಾ ಸಾಮಾನ್ಯ ಉಷ್ಣಾಂಶದ 50 ಡಿಗ್ರಿ ಸೆಲ್ಷಿಯಸ್‌ಗಳಿಗಿಂತಲೂ ಕಡಿಮೆ ವಾತಾವರಣದಲ್ಲಿ ಜೀವಿಸುತ್ತಿತ್ತು ಎಂದು ಸಂಶೋಧನೆಯ ನೇತೃತ್ವ ವಹಿಸ್ದಿದ ನಿಕೊಲಾಸ್ ಲಾರ್ಟಿಲ್ಲೊಟ್ ಹೇಳಿರುವುದಾಗಿ 'ನೇಚರ್' ತಿಳಿಸಿತು. ಜೀವಿಗಳ ಉಗಮದಿಂದ ಈವರೆಗಿನ ಬೆಳವಣಿಗೆ ಹಾಗೂ ಆಧುನಿಕ ವಂಶವಾಹಿಗಳು ಮತ್ತು ಭೂಮಿಯ ಮೇಲೆ ಬದುಕಿದ್ದ ಅತ್ಯಂತ ಎಲ್ಲ ಪುರಾತನ ವಂಶವಾಹಿಗಳ ಕುರಿತು ಈ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿತು.

2008: 'ಬಹುಸಂಖ್ಯಾತರಿಗೆ ಪೂಜ್ಯವಾದ ಗೋವನ್ನು ಇತರರು ಗೌರವದಿಂದ ಕಾಣಬೇಕು ಅದಕ್ಕೆ ಮೊದಲಾಗಿ ಹಿಂದೂಗಳು ಗೋವನ್ನು ಕಸಾಯಿಖಾನೆಗೆ ಮಾರುವುದಿಲ್ಲ ಎಂಬ ಸಂಕಲ್ಪ ತೊಡಬೇಕು' ಎಂದು ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಡಾ. ಮುಮ್ತಾಜ್ ಆಲಿಖಾನ್ ಚಾಮರಾಜನಗರದ ಕನಕಗಿರಿಯಲ್ಲಿ ಹೇಳಿದರು. ಭಾರತೀಯ ಜೈನ್ ಮಿಲನ್ ವಲಯ- 8ರ 14ನೇ ವಲಯ ಸಮ್ಮೇಳನದ ಅಂಗವಾಗಿ ಇಲ್ಲಿನ ವಿಜಯ ಪಾರ್ಶ್ವನಾಥ ಸಭಾ ಮಂಟಪದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು. 'ಜೈನ ಧರ್ಮದಲ್ಲಿ ಇರುವಂತೆ ಶಾಂತಿ, ಅಹಿಂಸೆಯ ತತ್ವಗಳು ಇಸ್ಲಾಮಿನಲ್ಲಿಯೂ ಇವೆ. ಆದರೆ ಭಯೋತ್ಪಾದನೆಯಲ್ಲಿ ತೊಡಗಿರುವವರು ಇಸ್ಲಾಮ್ ಧರ್ಮದಲ್ಲಿ ನಂಬಿಕೆ ಇಲ್ಲದವರು. ವಿಧ್ವಂಸಕ ಕೃತ್ಯ ನಡೆಸುವವರು ಇಸ್ಲಾಮ್ ಧರ್ಮದ ಅನುಯಾಯಿಗಳೋ ಅಥವಾ ಅನುನಾಯಿಗಳೋ ತಿಳಿಯದು. ಹಿಂಸೆಯಲ್ಲಿ ತೊಡಗಿರುವವರು ಜೀವನದಲ್ಲಿ ಇಸ್ಲಾಮ್ ಅಳವಡಿಸಿಕೊಂಡಿಲ್ಲ' ಎಂದು ಅವರು ನುಡಿದರು. 'ಬಹುದೇವತಾ ಉಪಾಸನೆಯಲ್ಲಿ ನಂಬಿಕೆ ಇಟ್ಟ ಧರ್ಮಗಳ ಅಂತರ್ಗತದಲ್ಲಿ ನಿರಾಕಾರನಾದ ಒಬ್ಬನೇ ಭಗವಂತನಿದ್ದಾನೆ. ಏಕ ದೈವ ಉಪಾಸನೆಯ ಇಸ್ಲಾಮಿನಲ್ಲಿಯೂ ದೇವರ 99 ಹೆಸರುಗಳಿವೆ. ಆದ್ದರಿಂದ ಮಹಾವೀರ, ರಾಮ, ಕೃಷ್ಣ, ಬುದ್ಧ ಇವರೆಲ್ಲರನ್ನು ಪ್ರವಾದಿಗಳು ಎಂದೊಪ್ಪಬೇಕು' ಎಂದು ಅವರು ಹೇಳಿದರು.

2007: ಪಾಕಿಸ್ಥಾನದ ವಾಯವ್ಯ ಗಡಿಪ್ರಾಂತ್ಯದ ಚರ್ಸಡ್ಡ ಎಂಬ ಪಟ್ಟಣದ ಮಸೀದಿಯಲ್ಲಿ ಮಾಜಿ ಸಚಿವರೂ ಸೇರಿದಂತೆ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಮಾನವ ಬಾಂಬ್ ಸ್ಫೋಟಿಸಿ 54ಕ್ಕಿಂತಲೂ ಹೆಚ್ಚು ಜನ ಮೃತರಾಗಿ 100ಕ್ಕೂ ಹೆಚ್ಚು ಜನರು ಗಾಯಗೊಂಡರು. ಆಂತರಿಕ ವ್ಯವಹಾರಗಳ ಖಾತೆಯ ಮಾಜಿ ಸಚಿವ ಪಾಕಿಸ್ಥಾನ ಮುಸ್ಲಿಂಲೀಗ್ (ಪಿಎಂಕ್ಯೂ) ಮುಖಂಡ ಅಫ್ತಾಬ್ ಅಹ್ಮದ್ ಖಾನ್ ಶೆರ್ಪೊ ಅವರ ನಿವಾಸದ ಬಳಿಯೇ ಇರುವ ಈ ಮಸೀದಿಯಲ್ಲಿ ಈದ್ ನಿಮಿತ್ತ ಪ್ರಾರ್ಥನೆ ಸಲ್ಲಿಸಲು ನೂರಾರು ಜನ ಸೇರಿದ್ದಾಗ ದಾಳಿಕೋರ ಬಾಂಬ್ ಸಿಡಿಸಿದ್ದು ಆತನ ಗುರಿ ಶೆರ್ಪೊ ಅವರೇ ಆಗಿದ್ದರು ಎಂದು ಶಂಕಿಸಲಾಯಿತು. ಶೆರ್ಪೊ ಅವರನ್ನೇ ಗುರಿಯಾಗಿಸಿಕೊಂಡು ನಡೆದ ಎರಡನೇ ಆತ್ಮಾಹುತಿ ದಾಳಿ ಇದು. ಏಪ್ರಿಲ್ 28ರಂದು ನಡೆದ ದಾಳಿಯಲ್ಲಿ 28ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

2007: ಆರ್ಟ್ ಆಫ್ ಲಿವಿಂಗ್ನ ಶ್ರೀರವಿಶಂಕರ ಗುರೂಜಿ ಚಿತ್ರದುರ್ಗದಲ್ಲಿ ರೈತರ ಆತ್ಮಹತ್ಯೆ ತಡೆಗೆ ಹೊಸ ಸೂತ್ರಗಳನ್ನು ಮಂಡಿಸಿದರು. ರೈತರು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹಾಗೆಯೇ ಮಾನಸಿಕ ಒತ್ತಡ ನಿವಾರಣೆಗೆ ಪ್ರಾಣಾಯಾಮ ಮತ್ತು ಧ್ಯಾನದ ಮೊರೆ ಹೋಗಬೇಕು ಎಂದು ಅವರು ಸಲಹೆ ಮಾಡಿದರು. ಮಹಾರಾಷ್ಟ್ರದ ವಿದರ್ಭದಲ್ಲಿ ಸಂಸ್ಥೆ ಪ್ರಾಯೋಗಿಕವಾಗಿ 705 ಹಳ್ಳಿಗಳಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿದೆ. ಎಂಟು ತಿಂಗಳಿನಿಂದ ಅಲ್ಲಿ ಒಂದೂ ಆತ್ಮಹತ್ಯೆ ಪ್ರಕರಣ ವರದಿಯಾಗಿಲ್ಲ. ಕರ್ನಾಟಕದಲ್ಲೂ 100 ಹಳ್ಳಿಗಳನ್ನು ಈ ಕೃಷಿ ಪದ್ಧತಿ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಲದ ಬದುವಿನಲ್ಲಿ `ಲಕ್ಷ್ಮೀತರು' ಸಸಿಗಳನ್ನು ಬೆಳಸುವುದು ಸೇರಿದಂತೆ ಗಂಜಲ, ಬೇವಿನ ಎಲೆ, ಅರಿಶಿಣ ಮಿಶ್ರಣ ಮಾಡಿ ಹೊಲಕ್ಕೆ ಉಣಬಡಿಸುವುದು ಈ ಪದ್ಧತಿಯ ಗುಣಲಕ್ಷಣ. ಶೂನ್ಯ ಬಂಡವಾಳವಾದುದರಿಂದ ರೈತರ ಆತ್ಮಹತ್ಯೆ ತಡೆಗೆ ಇದು ರಾಮಬಾಣವಾಗಲಿದೆ. ಇದು ಪಾಳೇಕರ್ ಪದ್ಧತಿಕ್ಕಿಂತ ಭಿನ್ನ ಎಂದು ಗುರೂಜಿ ಸ್ಪಷ್ಟಪಡಿಸಿದರು. ಔಷಧದಿಂದ ವಾಸಿಯಾಗದ ಎಷ್ಟೋ ರೋಗಗಳು ಸುದರ್ಶನ ಕ್ರಿಯೆ ಮೂಲಕ ಗುಣವಾಗಿರುವುದು ದೃಢಪಟ್ಟಿದೆ. ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ತಿಳಿಸುವುದರ ಜೊತೆಗೆ ಒತ್ತಡ ನಿವಾರಣೆಗೆ ಸತ್ಸಂಗದ ಮೂಲಕ ಪ್ರಾಣಾಯಾಮ, ಧ್ಯಾನ ಹೇಳಿಕೊಡಲಾಗುವುದು ಎಂದು ಅವರು ವಿವರಿಸಿದರು.

2007: `ಏಡ್ಸ್ ರೋಗ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಇದಕ್ಕೆ ಮದ್ದೇ ಇಲ್ಲ' ಎಂದು ವೈದ್ಯಕೀಯ ಲೋಕ ಒಪ್ಪಿಕೊಂಡಿರುವ ಸತ್ಯಕ್ಕೆ ಹೆಸರಾಂತ ಹೋಮಿಯೋಪತಿ ವೈದ್ಯರೊಬ್ಬರು ಸವಾಲು ಹಾಕಿದರು. ಹೋಮಿಯೋಪತಿ ಔಷಧಿಯಲ್ಲಿ ಏಡ್ಸ್ ಹರಡುವ ವೈರಸ್ಗಳನ್ನು ನಾಶಪಡಿಸುವ ಸಾಮರ್ಥ್ಯ ಇರುವುದು ಸಾಬೀತಾಗಿದೆ ಎಂದು ಹೋಮಿಯೋಪತಿ ವೈದ್ಯ ಡಾ. ರಾಜ್ ಕಿಶೋರ್ ಸಿನ್ಹಾ ನವದೆಹಲಿಯಲ್ಲಿ ಹೇಳಿದರು. ಇದು ಎಚ್ ಐ ವಿ ವೈರಸ್ ಅಲ್ಲ. ಚರ್ಮರೋಗಕ್ಕೆ ಕಾರಣವಾಗುವ (ಆಂಟಿ ಸ್ಪೋರಿಕ್) ವೈರಸ್ ಆಗಿದೆ. ಹಾಗಾಗಿ ಈ ರೋಗ ಲೈಂಗಿಕ ಸಂಪರ್ಕದಿಂದ ಹಾಗೂ ರಕ್ತ ವರ್ಗಾವಣೆಯಿಂದ ಹರಡುವುದಿಲ್ಲ ಎಂಬುದು ಸಿನ್ಹಾ ವಾದ. ಸಿನ್ಹಾ ಅವರು ಈ ಸಂಶೋಧನಾ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಸೂಕ್ಷ್ಮಜೀವಿಗಳನ್ನು ನಾಶಮಾಡುವ 40 ಹೋಮಿಯೋಪತಿ ಔಷಧಗಳಿಂದ ಏಡ್ಸ್ ಗುಣಪಡಿಸಬಹುದು. ಈ ಔಷಧಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ ಎಂದು ಸಿನ್ಹಾ ಹೇಳುತ್ತಾರೆ. ಆಂಥ್ರಾಕ್ಸ್ ರೋಗಕ್ಕೆ ಕಾರಣವಾಗುವ ವೈರಸ್ ಹೊರತುಪಡಿಸಿ ಯಾವುದೇ ವೈರಸ್ ರಕ್ತ ಸಂಪರ್ಕದಿಂದ ಹರಡುವುದಿಲ್ಲ ಎನ್ನುತ್ತಾರೆ ಸಿನ್ಹಾ.

2007: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ (93) ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಅವರು ಈ ವರ್ಷವಿಡೀ ಲೀಲಾವತಿ ಆಸ್ಪತ್ರೆಯಲ್ಲಿಯೇ ಕಳೆದರು. ಕಳೆದ ತಿಂಗಳು ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಪಂಜಾಬಿನ ಸಿಖ್ ಕುಟುಂಬದಲ್ಲಿ ಜನಿಸಿದ್ದ ತೇಜಿ ಅವರು 1941ರಲ್ಲಿ ಖ್ಯಾತ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರನ್ನು ಮದುವೆಯಾದರು. ಹರಿವಂಶ ರಾಯ್ ಅವರಿಗೆ ತೇಜಿ ಎರಡನೆ ಪತ್ನಿ. ಮೊದಲ ಪತ್ನಿ ಶ್ಯಾಮಲಾ ಗತಿಸಿದ ಬಳಿಕ ಹರಿವಂಶರಾಯ್ ಅವರು ತೇಜಿ ಅವರನ್ನು ಮದುವೆಯಾದರು. 50ರ ದಶಕದಲ್ಲಿ ಬಚ್ಚನ್ ಕುಟುಂಬ ದೆಹಲಿಗೆ ವಾಸ್ತವ್ಯ ಬದಲಾಯಿಸಿದಾಗ ತೇಜಿ ಅವರು ನೆಹರು-ಗಾಂಧಿ ಕುಟುಂಬಕ್ಕೆ ಆಪ್ತರಾದರು. ಉತ್ತಮ ಗಾಯಕಿಯಾಗಿದ್ದ ತೇಜಿ ಬಚ್ಚನ್ ರಂಗ ಕಲಾವಿದೆ ಕೂಡ ಆಗಿದ್ದರು. ತಮ್ಮ ಪತಿ ಭಾಷಾಂತರಿಸಿದ ಶೇಕ್ಸ್ ಪಿಯರನ ನಾಟಕಗಳಲ್ಲಿ ಅಭಿನಯಿಸಿದ್ದರು. ಅಮಿತಾಭ್ ಮನೆಯಲ್ಲಿ ಯಾವುದೇ ಶುಭಕಾರ್ಯಕ್ಕೆ ಮುನ್ನ ತೇಜಿ ಬಚ್ಚನ್ ಅವರ ಆಶೀರ್ವಾದ ಪಡೆದುಕೊಳ್ಳುವುದು ರೂಢಿಯಾಗಿತ್ತು. ಅಂತೆಯೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರು ತಮ್ಮ ಮದುವೆಗೆ ಮುನ್ನ ಆಸ್ಪತ್ರೆಯಲ್ಲಿದ್ದ ತೇಜಿ ಬಚ್ಚನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು.

2007: ಭಾರತೀಯ ಮೂಲದ ವೈದ್ಯ ಮೊಹಮ್ಮದ್ ಹನೀಫ್ ಅವರಿಗೆ ಉದ್ಯೋಗ ವೀಸಾ ಮರಳಿಸುವಂತೆ ಮೆಲ್ಬೋರ್ನ್ ನ್ಯಾಯಾಲಯ ನೀಡಿದ ತೀರ್ಪನ್ನು ಆಸ್ಟ್ರೇಲಿಯಾದ ಫೆಡರಲ್ ನ್ಯಾಯಾಲಯ ಎತ್ತಿ ಹಿಡಿಯಿತು. ಹೀಗಾಗಿ ಅಲ್ಲಿನ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿತು. ಲಂಡನ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರರಿಗೆ ನೆರವು ನೀಡಿದ್ದಾರೆಂದು ಅಂದಿನ ವಲಸೆ ಸಚಿವ ಕೆವಿನ್ ಆಂಡ್ರೂವ್ಸ್ ಅವರು ಬೆಂಗಳೂರಿನ ವೈದ್ಯ ಹನೀಫ್ ಅವರ ಉದ್ಯೋಗ ವೀಸಾವನ್ನು ರದ್ದುಗೊಳಿಸಿದ್ದರು. ಇದನ್ನು ಹನೀಫ್ ಬ್ರಿಸ್ಬೇನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹನೀಫ್ ಪರ ತೀರ್ಪು ನೀಡಿ, ವೀಸಾವನ್ನು ಮರಳಿಸುವಂತೆ ಸರ್ಕಾರಕ್ಕೆ ಆದೇಶಿಸಿದರು. ದೇಶದ ಸುರಕ್ಷತೆಯ ನೆಪವೊಡ್ಡಿ ಸರ್ಕಾರ ಈ ತೀರ್ಪನ್ನು ಫೆಡರಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

2007: ಚೀನಾ ಮತ್ತು ಭಾರತ ನಡುವಿನ ಮಹತ್ವದ ವಿಶ್ವಾಸ ವರ್ಧನೆ ಕ್ರಮದ ಅಂಗವಾಗಿ ಇದೇ ಮೊದಲ ಬಾರಿ ನೈಋತ್ಯ ಚೀನಾದ ಕುನ್ಮಿಂಗ್ ಮಿಲಿಟರಿ ಆಕಾಡೆಮಿಯಲ್ಲಿ ಐದು ದಿನಗಳ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಯಿತು.

2007: ಕರಗಿ ಹೋಗುವ ಯೌವ್ವನ ಮತ್ತು ಸಾವು ಮನುಷ್ಯನಿಗೆ ನಿರಂತರ ಕಾಡುವ ಸಂಗತಿಗಳು. ಸಾವನ್ನು ಮುಂದೂಡುವ ಯಾವ ಔಷಧವನ್ನು ವಿಜ್ಞಾನಿಗಳು ಕಂಡು ಹಿಡಿದಿಲ್ಲವಾದರೂ, ಕಳೆದು ಹೋಗುವ ಯೌವ್ವನವನ್ನು ಉಳಿಸಿಕೊಳ್ಳುವ ರಹಸ್ಯವನ್ನು ಹೊರಗೆಡವಿದರು. ಯಾವಾಗಲೂ ಸೃಜನಶೀಲರಾಗಿರಿ. ಏನಾದರೂ ಮಾಡುತ್ತಿರಿ... ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳಿರಿ... ಸಾಹಸಿಗಳಾಗಿ... ಹಾಗಾದರೆ ನಿಮಗೆ ಬೇಗನೇ ವಯಸ್ಸಾಗುವುದಿಲ್ಲ. ಎಂದು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರ ಸಲಹೆ. `ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡಿ. ಸದಾ ಸೃಜನಶೀಲವಾಗಿರಿ. ಅದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ' ಎಂದು ಟೆಕ್ಸಾಸ್ ವಿ.ವಿ.ಯ ಜನಸಂಖ್ಯಾ ಸಂಶೋಧನಾ ವಿಭಾಗದ ಸಮಾಜಶಾಸ್ತ್ರಜ್ಞ ಪ್ರೊ . ಜಾನ್ ಮಿರೋಸ್ಕಿ ಅಭಿಪ್ರಾಯ. `ಸೃಜನಶೀಲ ಚಟುವಟಿಕೆನಿರತರಾಗಿದ್ದರೆ, ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಂಚಯವಾಗವುದಷ್ಟೇ ಅಲ್ಲ, ಅವಕಾಶಗಳು ತಾವಾಗಿ ಒದಗಿ ಬರುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತದೋ ಬಿಡುತ್ತದೋ ಅದು ಬೇರೆಯದೇ ಪ್ರಶ್ನೆ. ಆದರೆ ಅರೋಗ್ಯ ಮಾತ್ರ ಉತ್ತಮವಾಗಿರುತ್ತದೆ. ದೈಹಿಕವಾಗಿ ಹೆಚ್ಚಿನ ಸಮಸ್ಯೆಗಳು ಬರುವುದಿಲ್ಲ' ಎನ್ನುತ್ತಾರೆ ಜಾನ್. ನಿರುದ್ಯೋಗಿಗಳಿಗಿಂತ ಉದ್ಯೋಗಿಗಳೇ ಹೆಚ್ಚು ಸೃಜನಶೀಲರಾಗಿರುತ್ತಾರೆ. ಅವರು ತಮ್ಮ ವಾರಿಗೆಯ ಇತರರಿಗಿಂತ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ ಎಂದೂ ಸಂಶೋಧನೆಯ ವರದಿ ಹೇಳುತ್ತದೆ. ಒಟ್ಟಿನಲ್ಲಿ ಯಾವುದೇ ಕೆಲಸ ಮಾಡಿ ಹೆಚ್ಚು ಸೃಜನಶೀಲವಾಗಿರಲು ಸಾಧ್ಯ. ಇದೇ ಚಿರಯೌವ್ವನದ ಗುಟ್ಟು ಎಂಬುದು ಸಂಶೋಧನಾ ವರದಿಯ ಪ್ರತಿಪಾದನೆ.

2007: ತಮಿಳುನಾಡಿನ ಪಿ. ಕಾರ್ತಿಕೇಯನ್ ಅವರು ಮುಂಬೈಯಲ್ಲಿ ಮುಕ್ತಾಯವಾದ ಏಷ್ಯನ್ ಜೂನಿಯರ್ ಚೆಸ್ ಚಾಂಪಿಯನ್ ಶಿಪ್ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಗೋರೆಗಾಂವ್ ಸ್ಪೋರ್ಟ್ಸ್ ಕ್ಲಬ್ಬಿನಲ್ಲಿ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಸ್ಪರ್ಧೆಯ ನಂತರ ಕಾರ್ತಿಕೇಯನ್ ಏಳು ಪಾಯಿಂಟುಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು.

2006: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅವರು 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದರು. ಅವರ ಪ್ರಬಂಧ ಸಂಕಲನ `ಮಾರ್ಗ-4' ಕೃತಿಗೆ ಈ ಗೌರವ ಲಭಿಸಿತು. ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಕಮಲಾ ಹಂಪನಾ, ಮಲ್ಲೇಪುರಂ ಜಿ. ವೆಂಕಟೇಶ್ ಅವರಿದ್ದ ತೀರ್ಪುಗಾರರ ಸಮಿತಿಯು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರನ್ನು ಕುರಿತು ಕಲಬುರ್ಗಿ ಅವರು ರಚಿಸಿದ ಪ್ರಬಂಧ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

2006: ತುರ್ಕಮೆನಿಸ್ಥಾನದ ಸರ್ವಾಧಿಕಾರಿ ಅಧ್ಯಕ್ಷ ಸಪರ್ ಮುರತ್ ನಿಯಾಜೊವ್ (66) ಅವರು ಮಾಸ್ಕೊದಲ್ಲಿ ನಿಧನರಾದರು.

2006: ಆನೆಗಳು ಮಾನವರಿಗೆ ಸರಿ ಸಮಾನ ಎಂಬುದಾಗಿ ಚಾರಿತ್ರಿಕ ತೀರ್ಪು ನೀಡಿದ ರಾಜಸ್ಥಾನ ಹೈಕೋರ್ಟ್, 1988ರಲ್ಲಿ ಅಪಘಾತ ಒಂದರಲ್ಲಿ ಸತ್ತ ಆನೆಗೆ 5,99,440 ರೂಪಾಯಿಗಳ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಇನ್ ಶ್ಯೂರೆನ್ಸ್ ಕಂಪೆನಿಗೆ ಆಜ್ಞಾಪಿಸಿತು. ಆನೆಯ ಮಾಲೀಕ ಸಾದಿಕ್ ಖಾನ್ ಅವರಿಗೆ ಈ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.

2006: ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದ ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಉಡುಪಿಯ ರಂಗಭೂಮಿ ವತಿಯಿಂದ ನೀಡಲಾಗುವ ಸಾಹಿತ್ಯ ಕಲಾ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾದರು.

2006: ಪತ್ರಕರ್ತ ಹಾಗೂ ಹರಿಕಥಾ ವಿದ್ವಾನ್ ಕೊಡಪಾಡೆ ಶೇಷಗಿರಿ ನಾವಡ (ರಾವ್) ಅವರು ಬೆಂಗಳೂರಿನಲ್ಲಿ ತಮ್ಮ ಪುತ್ರನ ಮನೆಯಲ್ಲಿ ನಿಧನರಾದರು.

2006: ಶಿವಮೊಗ್ಗದಲ್ಲಿ ಕೆ.ಎಸ್. ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಯಿತು. ಕೀಳರಿಮೆ ತೊರೆದು ಕನ್ನಡಕ್ಕಾಗಿ ಪಣತೊಡುವಂತೆ ನಿಸಾರ್ ಕರೆ ನೀಡಿದರು.

2006: ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾ ತಂಡದ ಬೌಲರ್ ಶೇನ್ ಕೀತ್ ವಾರ್ನ್ ತಮ್ಮ ನಿವೃತ್ತಿ ನಿರ್ಧಾರವನ್ನು ಮೆಲ್ಬೋರ್ನಿನಲ್ಲಿ ಘೋಷಿಸಿದರು.

2005: ಹಿಂದೂ ಮೇಲ್ಜಾತಿ ಸ್ತ್ರೀಯೊಬ್ಬಳು ಪರಿಶಿಷ್ಟ ಜಾತಿ/ ಪಂಗಡದ ಪುರುಷನನ್ನು ಮದುವೆಯಾಗುವ ಮೂಲಕ ಮೀಸಲಾತಿ ಕ್ಷೇತ್ರಗಳ್ಲಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶದ ಲಾಭ ಪಡೆಯಲಾಗದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು.ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ಬಿ. ಸಿನ್ಹ ಮತ್ತು ಪಿ.ಕೆ. ಬಾಲಸುಬ್ರಮಣಿಯನ್ ಅವರನ್ನು ಒಳಗೊಂಡ ಪೀಠ ತಳ್ಳಿ ಹಾಕಿತು. ಮೇಲ್ಜಾತಿ ಹೆಣ್ಣುಮಗಳನ್ನು ಪರಿಶಿಷ್ಟ ಜಾತಿ/ಪಂಗಡದವರು ಮನೆಗೆ ಸೇರಿಸಿಕೊಳ್ಳುವುದು ಆಕೆಗೆ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಹತೆ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಎಸ್. ಸಿ. ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಳಿಕ ಈ ತೀರ್ಪು ನೀಡಲಾಯಿತು.

2005: ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕಲ್ಪಿಸುವ ಸಂಧಾನದ 104ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಮಸೂದೆ ಪರ 379 ವಿರುದ್ಧ 1 ಮತ ಬಂದವು. ಮಸೂದೆ ವ್ಯಾಪ್ತಿಯಿಂದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ವಿನಾಯ್ತಿ ನೀಡುವುದನ್ನು ಬಿಜೆಪಿ ವಿರೋಧಿಸಿತು.

1958: ಫಿಫ್ತ್ ರಿಪಬ್ಲಿಕ್ ಆಫ್ ಫ್ರಾನ್ಸಿನ ಮೊದಲ ಅಧ್ಯಕ್ಷರಾಗಿ ಏಳು ವರ್ಷಗಳ ಅವಧಿಗೆ ಚಾರ್ಲ್ಸ್ ಡಿಗಾಲೆ ಅವರು ಚುನಾಯಿತರಾದರು.

1958: ಸಾಹಿತಿ ಮಮ್ತಾಜ್ ಬೇಗಂ ಜನನ.

1953: ಸಾಹಿತಿ ಪ್ರಭಾಕರ ಶಿಶಿಲ ಜನನ.

1945: ಜನರಲ್ ಜಾರ್ಜ್ ಎಸ್ ಪ್ಯಾಟ್ಟನ್ ಅವರು ಜರ್ಮನಿಯ ಹೈಡೆಲ್ಬರ್ಗಿನಲ್ಲಿ ಕಾರು ಅಪಘಾತದಿಂದ ಉಂಟಾದ ಗಾಯಗಳ ಪರಿಣಾಮವಾಗಿ ಮೃತರಾದರು.

1943: ಸಾಹಿತಿ ಮಾವಿನಕೆರೆ ರಂಗನಾಥನ್ ಜನನ.

1937: ವಾಲ್ಟ್ ಡಿಸ್ನಿ ಅವರ ಮೊತ್ತ ಮೊದಲ ಪೂರ್ಣ ಪ್ರಮಾಣದ ಮಾತನಾಡುವ ಕಾರ್ಟೂನ್ ಸಿನಿಮಾ `ಸ್ನೊ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್' ಲಾಸ್ ಏಂಜೆಲಿಸ್ನಲ್ಲಿ ಪ್ರದರ್ಶನಗೊಂಡಿತು.

1932: ನವ್ಯ ಸಾಹಿತ್ಯವನ್ನು ಬೆಳೆಸಿದವರಲ್ಲಿ ಪ್ರಮುಖರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರು ರಾಜಗೋಪಾಲಾಚಾರ್ಯ- ಸತ್ಯಭಾಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ ಜನಿಸಿದರು.

1918: ಆಸ್ಟ್ರಿಯಾದ ರಾಜತಂತ್ರಜ್ಞ, ವಿಶ್ವಸಂಸ್ಥೆಯ ನಾಲ್ಕನೇ ಸೆಕ್ರೆಟರಿ ಜನರಲ್ ಕರ್ಟ್ ವಾಲ್ಡ್ ಹೀಂ ಹುಟ್ಟಿದ ದಿನ. 1972ರಿಂದ

1981ರ ವರೆಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಇವರು 1986ರಿಂದ 1992ರ ವರೆಗೆ ಆಸ್ಟ್ರಿಯಾದ ಅಧ್ಯಕ್ಷರಾಗಿದ್ದರು.

1913: ಆರ್ಥರ್ ವೈನ್ ಅವರ ಮೊತ್ತ ಮೊದಲ `ಕ್ರಾಸ್ ವರ್ಡ್' (ಪದಬಂಧ) `ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯ ವಾರಾಂತ್ಯದ ಪುರವಣಿಯಲ್ಲಿ ಪ್ರಕಟಗೊಂಡಿತು. ಪತ್ರಿಕಾ ಸಂಪಾದಕ ವೈನ್ ಅವರು ತಮ್ಮ ಪತ್ರಿಕೆಯ ಭಾನುವಾರದ ಮ್ಯಾಗಜಿನ್ ವಿಭಾಗದ `ಮೋಜು' ಪುಟದಲ್ಲಿ ಹೊಚ್ಚ ಹೊಸತನ್ನು ಸೇರ್ಪಡೆ ಮಾಡಲು ಬಯಸಿದ್ದರು. ಮೂಲ ಶಬ್ದ, ಚೌಕ ಹಾಗೂ ಪದಕೋಶವನ್ನು ಬಳಸಿ ವಜ್ರಾಕೃತಿಯಲ್ಲಿ ಶಬ್ದಗಳನ್ನು ಪೋಣಿಸುವ ವಿಧಾನವನ್ನು ಅವರು ರೂಪಿಸಿದರು. ಇದರಲ್ಲಿ ಅವರಿಗೆ ಅದ್ಭುತ ಯಶಸ್ಸು ಲಭಿಸಿತು. ಸುಮಾರು ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ `ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆ ಮಾತ್ರವೇ ಈ `ಕ್ರಾಸ್ ವರ್ಡ್'ಗಳನ್ನು ಪ್ರಕಟಿಸುತ್ತಿತ್ತು.

1909: ಸಾಹಿತಿ ಕೃಷ್ಣಕುಮಾರ ಕಲ್ಲೂರ ಜನನ.

1892: ಬ್ರಿಟಿಷ್ ಪತ್ರಕರ್ತೆ, ಕಥೆಗಾರ್ತಿ ಡೇಮ್ ರೆಬೆಕ್ಕಾ ವೆಸ್ಟ್ (1892-1983) ಹುಟ್ಟಿದ ದಿನ. ಈಕೆ ಯುದ್ಧ ಅಪರಾಧಿಗಳ `ನ್ಯೂರೆಂಬರ್ಗ್ ವಿಚಾರಣೆ'ಗಳ ವರದಿಗಳಿಗಾಗಿ ಖ್ಯಾತಿ ಪಡೆದಾಕೆ.

No comments:

Advertisement