ಇಂದಿನ ಇತಿಹಾಸ
ಡಿಸೆಂಬರ್ 24
ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾ ನ್ಯಾಷನಲ್ ಪಾರ್ಟಿ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗವು ಆರೋಪದಿಂದ ಮುಕ್ತಗೊಳಿಸಿತು. ಈ ಮೂಲಕ ಅವರಿಗೆ ಡಿಸೆಂಬರ್ 29ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಅಡಚಣೆ ನಿವಾರಣೆಯಾಯಿತು. ಹಿಂದಿನ ದಿನವಷ್ಟೇ ಭ್ರಷ್ಟಾಚಾರ ನಿಗ್ರಹ ಆಯೋಗದ ಉನ್ನತ ಸಮಿತಿ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಆಕ್ರಮ ಆಸ್ತಿ ಸಂಪಾದನೆ ಆರೋಪದಿಂದ ಮುಕ್ತಗೊಳಿಸಿತ್ತು.
2008: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾ ನ್ಯಾಷನಲ್ ಪಾರ್ಟಿ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗವು ಆರೋಪದಿಂದ ಮುಕ್ತಗೊಳಿಸಿತು. ಈ ಮೂಲಕ ಅವರಿಗೆ ಡಿಸೆಂಬರ್ 29ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಅಡಚಣೆ ನಿವಾರಣೆಯಾಯಿತು. ಹಿಂದಿನ ದಿನವಷ್ಟೇ ಭ್ರಷ್ಟಾಚಾರ ನಿಗ್ರಹ ಆಯೋಗದ ಉನ್ನತ ಸಮಿತಿ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಆಕ್ರಮ ಆಸ್ತಿ ಸಂಪಾದನೆ ಆರೋಪದಿಂದ ಮುಕ್ತಗೊಳಿಸಿತ್ತು. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಆರೋಪವನ್ನು ಈ ಮಾಜಿ ಪ್ರಧಾನಿಗಳ ಮೇಲೆ ಹೊರಿಸಲಾಗಿತ್ತು. ಆನಂತರ ಇವರಿಬ್ಬರೂ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಆಯೋಗ ತಿಳಿಸಿತ್ತು.
2008: 2000ದಿಂದ 2008ರ ಡಿಸೆಂಬರ್ 24ರವರೆಗೆ ರಾಜ್ಯದ ಗಣಿಗಾರಿಕೆ ಕ್ಷೇತ್ರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತು. 2000ದಿಂದ 2006ರವರೆಗಿನ ಅವ್ಯವಹಾರಗಳ ಕುರಿತು ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದರು. 2008ರ ಸೆಪ್ಟೆಂಬರ್ 9ರವರೆಗಿನ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸುವಂತೆ ಅವಧಿಯನ್ನು ವಿಸ್ತರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಈಗ ಮತ್ತೊಮ್ಮೆ ತನಿಖಾ ಅವಧಿಯನ್ನು ವಿಸ್ತರಿಸಲಾಯಿತು. ಹಿಂದಿನ ಸರ್ಕಾರ 2007ರ ಮಾರ್ಚ್ 12ರಂದು 2000ದಿಂದ 2006ರವರೆಗಿನ ಅವ್ಯವಹಾರಗಳ ಕುರಿತ ತನಿಖೆಗೆ ಆದೇಶ ನೀಡುವ ಸಂದರ್ಭದಲ್ಲಿ ನಿಗದಿಗೊಳಿಸಿರುವ ಅಂಶಗಳ ಆಧಾರದಲ್ಲೇ ಮುಂದುವರೆದ ಅವಧಿಯ ತನಿಖೆಯೂ ನಡೆಯಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿತು.
2008: ವಿದ್ವಾಂಸ ಪ್ರೊ.ಎಲ್. ಬಸವರಾಜು, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, ತೊಗಲುಗೊಂಬೆ ಕಲಾವಿದ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಸಾಹಿತಿಗಳಾದ ಪ್ರೊ.ಕಮಲಾ ಹಂಪನಾ ಹಾಗೂ ಡಾ.ಶ್ರೀನಿವಾಸ ಹಾವನೂರ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಈ ಸಾಲಿನ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ ಎಂದು ಕುಲಪತಿ ಡಾ.ಎ. ಮುರಿಗೆಪ್ಪ ಪ್ರಕಟಿಸಿದರು.
2007: ಬಾಲಿವುಡ್ಡಿನ ಹಿರಿಯ ನಿರ್ಮಾಪಕ - ನಿರ್ದೇಶಕ ಜಿ.ಪಿ.ಸಿಪ್ಪಿ (93) ಅವರು ಮುಂಬೈಯಲ್ಲಿ ಈದಿನ ರಾತ್ರಿ ನಿಧನರಾದರು. 1975ರಲ್ಲಿ ತೆರೆ ಕಂಡ ಸೂಪರ್ ಹಿಟ್ `ಶೋಲೆ' ಚಿತ್ರದ ಮೂಲಕ ಮನೆಮಾತಾಗಿದ್ದ ಸಿಪ್ಪಿ, ಕೆಲವು ತಿಂಗಳುಗಳಿಂದ ವಯೋಸಹಜವಾದ ಅನಾರೋಗ್ಯದಿಂದ ಬಳಲಿದ್ದರು. ಸಿಪ್ಪಿ ಅವರು ನಿರ್ಮಿಸಿದ ಪ್ರಮುಖ ಚಿತ್ರಗಳ ಪಟ್ಟಿಗೆ ಸಾಗರ್, ರಾಜು ಬನ್ ಗಯಾ ಜಂಟಲ್ ಮನ್, ಜಮಾನಾ ದಿವಾನಾ ಸಿನೆಮಾಗಳೂ ಸೇರುತ್ತವೆ. 1968 ಹಾಗೂ 1982 ರಲ್ಲಿ ಸಿಪ್ಪಿ ಅವರು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. 1955 ರಲ್ಲಿ `ಮರೈನ್ ಡ್ರೈವ್' ಚಿತ್ರದ ಮೂಲಕ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು.
2007: 2007: ಗುಜರಾತಿನ ಗಾಂದಿನಗರದ ಟೌನ್ ಹಾಲಿನಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು.
2007: ಲೂದಿಯಾನ ನಗರಾಭಿವೃದ್ಧಿ ಯೋಜನೆಯ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಇತರ 34 ಮಂದಿಯ ವಿರುದ್ಧ ಸ್ಥಳೀಯ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತು. ಬಹುಕೋಟಿ ರೂಪಾಯಿಗಳ ನಗರ ಕೇಂದ್ರ ನಿರ್ಮಾಣ ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಿದ ರಾಜ್ಯ ಗುಪ್ತದಳವು ಅಮರಿಂದರ್ ಸೇರಿದಂತೆ 36 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಸಂಬಂಧ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಕೆ. ರೈ ಅವರು ಅಮರಿಂದರ್ ಸೇರಿದಂತೆ 35 ಮಂದಿಗೆ ಸಮನ್ಸ್ ಜಾರಿಗೊಳಿಸಿ, ಜ.10ರಂದು ನ್ಯಾಯಾಲಯಕ್ಕೆ ಹಾಜರಾಗುಂತೆ ಸೂಚಿಸಿದರು. ಆದರೆ ತಲೆಮರೆಸಿಕೊಂಡ ಲೂದಿಯಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಸಿಬಿಯಾ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲಿಲ್ಲ. ತನಿಖೆ ನಡೆಸಿದ್ದ ರಾಜ್ಯ ಗುಪ್ತದಳ ಈ ಹಗರಣಕ್ಕೆ ಸಂಬಂಧಪಟ್ಟಂತೆ 106 ಪುಟಗಳ ಆರೋಪ ಪಟ್ಟಿಯನ್ನು ಡಿಸೆಂಬರ್ ತಿಂಗಳ 12ರಂದು ಸಲ್ಲಿಸಿತ್ತು. ಇದರಲ್ಲಿ ಅಮರಿಂದರ್ ಅವರ ಪುತ್ರ ರಾಣಿಂದರ್ ಸಿಂಗ್, ಅಳಿಯ ರಾಮಿಂದರ್ ಸಿಂಗ್, ಮಾಜಿ ಸ್ಥಳೀಯಾಡಳಿತ ಸಚಿವ ಜಗಜೀತ್ ಸಿಂಗ್, ಲೂದಿಯಾನ ಅಭಿವೃದ್ಧಿ ಟ್ರಸ್ಟಿನ ಅಧಿಕಾರಿಗಳು ಹಾಗೂ ದೆಹಲಿ ಮೂಲದ ಕಂಪೆನಿ `ಟುಡೇ ಹೋಮ್ಸ್' ಭಾಗಿಯಾಗಿರುವುದಾಗಿ ಆರೋಪಿಸಲಾಗಿತ್ತು. ಅಮರಿಂದರ್ ಅವರ ಆಡಳಿತಾವಧಿಯಲ್ಲಿ ಲೂದಿಯಾನ ಅಭಿವೃದ್ಧಿಗೆಂದು ರೂ 3,000 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿ, ಇದರ ಅನುಷ್ಠಾನಕ್ಕಾಗಿ `ಲೂದಿಯಾನ ಅಭಿವೃದ್ಧಿ ಟ್ರಸ್ಟ್' ಹುಟ್ಟುಹಾಕಲಾಗಿತ್ತು.
2007: ಎಲ್ಲ ಬಗೆಯ ಟ್ರಸ್ಟ್ಗಳು ಷೇರುಪೇಟೆಯಲ್ಲಿ ಹಣ ತೊಡಗಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತು. ಕೇಂದ್ರ ಸಚಿವ ಸಂಪುಟ ಕೈಗೊಂಡ ಈ ಮಹತ್ವದ ನಿರ್ಧಾರವು, ಈಗಾಗಲೇ ಉತ್ಕರ್ಷದಲ್ಲಿ ಇರುವ ಷೇರುಪೇಟೆಯಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಲಿದೆ ಎಂಬುದು ಆರ್ಥಿಕ ವಲಯಗಳ ಅಭಿಪ್ರಾಯ.
2007: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಸೀದಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡ ಐವರು ನಾಗರಿಕರಲ್ಲಿ ಮೂವರನ್ನು ಉಗ್ರಗಾಮಿಗಳು ಹತ್ಯೆ ಮಾಡಿದರು. ಪ್ಲಾನೋ ಗ್ರಾಮದ ಯರಿಪುರ ಪ್ರದೇಶದಲ್ಲಿನ ಮಸೀದಿಗೆ ಪ್ರಾರ್ಥನೆಗೆ ಬಂದಿದ್ದಾಗ ಮೂವರು ಉಗ್ರರು ಈ ಐವರನ್ನು ಅಪಹರಿಸಿದ್ದರು. ಈ ಉಗ್ರರು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಜತೆ ಸಂಪರ್ಕ ಇರಿಸಿಕೊಂಡವರು. ಈ ಉಗ್ರರನ್ನು ಶಿರಾಜ್ ಅಹ್ಮದ್ ಭಟ್ ಅಲಿಯಾಸ್ ಅಸ್ಗರ್, ಮುದಾಸೀರ್ ಅಹ್ಮದ್ ಮಿರ್ ಅಲಿಯಾಸ್ ಜಹಾಂಗಿರ್ ಹಾಗೂ ಇಷ್ಪಕ್ ಅಹ್ಮದ್ ವಗೇ ಎಂದು ಗುರುತಿಸಲಾಯಿತು.
2007: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಪ್ರಸಕ್ತ ಸಾಲಿನ ಡಾ. ಬಿ.ಎಸ್. ಗದ್ದಗೀಮಠ ಹಾಗೂ ಡಾ.ಜೀ.ಶಂ.ಪ ಗೌರವ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಜಾನಪದ ಪ್ರಾಧ್ಯಾಪಕ ಡಾ. ಡಿ.ಬಿ.ನಾಯಕ್ ಹಾಗೂ ಸಾಗರದ ಡಾ.ಜಿ.ಎಸ್.ಭಟ್ ಅವರನ್ನು ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
2007: ವಿಶ್ವ ಮಾನವ ಸಂಸ್ಥೆ ವತಿಯಿಂದ ನೀಡಲಾಗುವ ವಿಶ್ವಮಾನವ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು. ಆರ್. ರಾವ್ ಆಯ್ಕೆಯಾದರು.
2006: ಕರ್ನಟಕದ ಜೆಡಿ ಎಸ್ - ಬಿಜೆಪಿ ಮೈತ್ರಿ ಸರ್ಕಾರದ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಲಖನೌದಲ್ಲಿ ಘೋಷಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಈ ಕುರಿತು ಎದ್ದಿದ್ದ ಎಲ್ಲ ಅನಿಶ್ಚಿತತೆಗಳಿಗೆ ತೆರೆ ಎಳೆದರು.
2006: ವೆಸ್ಟ್ ಇಂಡೀಸ್ ತಂಡದ ಆಟಗಾರ ಬ್ರಯನ್ ಲಾರಾ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದುವುದಾಗಿ ಸಿಡ್ನಿಯಲ್ಲಿ ಸೂಚನೆ ನೀಡಿದರು.
2006: ದೇಶದೊಳಗೆ ಸಂಚರಿಸುವ ವಿಮಾನ ದೆಹಲಿಯಿಂದ ಯಾವುದೇ ಕಾರಣಕ್ಕೆ ನಿಗದಿತ ಅವಧಿಯಿಂದ ಎರಡು ಗಂಟೆ ವಿಳಂಬವಾಗಿ ಹೊರಟರೆ ಅಥವಾ ತಲುಪಿದರೆ ಪ್ರತಿ ಪ್ರಯಾಣಿಕರಿಗೆ ಕನಿಷ್ಠ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಅಂತಾರಾಷ್ಟ್ರೀಯ ಮಾರ್ಗದದಲ್ಲಿ ಆದರೆ ಪ್ರತಿ ಪ್ರಯಾಣಿಕರಿಗೆ ತಲಾ 20ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ದೆಹಲಿಯ ಗ್ರಾಹಕ ನ್ಯಾಯಾಲಯ ಏಕರೂಪದ ಚಾರಿತ್ರಿಕ ಆದೇಶ ನೀಡಿತು. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಜೆ.ಡಿ. ಕಪೂರ್ ಈ ತೀರ್ಪು ನೀಡಿದರು.
2005: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವಿಜ್ಞಾನಿ ಡಾ. ಅಬ್ರಹಾಂ ವರ್ಗೀಸ್ ಅವರು ಲಂಡನ್ನಿನ ಪ್ರತಿಷ್ಠಿತ ರಾಯಲ್ ಎಂಟಮಲಾಜಿಕಲ್ ಸೊಸೈಟಿಯ ಫೆಲೋಶಿಪ್ ಗೆ ಪಾತ್ರರಾದರು. 28 ವರ್ಷಗಳಿಂದ ಕೀಟಶಾಸ್ತ್ರದಲ್ಲಿ ಮಾಡಿರುವ ಸಾಧನೆಗೆ ಈ ಗೌರವ ಲಭಿಸಿತು. ಇದರೊಂದಿಗೆ ಈ ಹಿಂದೆ ಈ ಸಾಧನೆ ಮಾಡಿದ ಚಾಲ್ಸರ್್ ಡಾರ್ವಿನ್, ಅಲ್ಫ್ರೆಡ್ ವ್ಯಾಲೇಸ್ ಅವರ ಸಾಲಿಗೆ ವರ್ಗೀಸ್ ಸೇರ್ಪಡೆಯಾದರು. ಏಷ್ಯಾ ಖಂಡದಲ್ಲಿ ಕೆಲವೇ ಕೆಲವರಿಗೆ ಈ ಗೌರವ ಲಭಿಸಿದ್ದು, ಇದಕ್ಕೆ ಪಾತ್ರರಾದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರದಾಯಿತು.
2005: ದಕ್ಷಿಣ ಭಾರತದ ಹಿರಿಯ ನಟಿ ಭಾನುಮತಿ (80) ಈ ರಾತ್ರಿ ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಇವರ ಪತಿ ಚಿತ್ರ ನಿರ್ಮಾಪಕ, ನಿರ್ದೇಶಕ ಪಿ. ರಾಮಕೃಷ್ಣ ಎರಡು ದಶಕಗಳಷ್ಟು ಹಿಂದೆಯೇ ನಿಧನರಾಗಿದ್ದರು. ಚಿತ್ರ ನಿರ್ಮಾಪಕಿ, ನಿರ್ದೇಶಕಿ, ಕತೆಗಾರ್ತಿ, ಗಾಯಕಿ, ಸಂಕಲನಗಾರ್ತಿ ಮತ್ತು ನಟಿಯಾಗಿ ಸಿನೆಮಾದ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದವರು ಭಾನುಮತಿ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ಇವರನ್ನು ಚಿತ್ರರಂಗ 'ಅಷ್ಟಾವಧಾನಿ' ಎಂದೇ ಗುರುತಿಸುತ್ತದೆ. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಭಾನುಮತಿ ಸುಮಧುರ ಕಂಠದಿಂದಾಗಿ ಉತ್ತಮ ಹಿನ್ನೆಲೆ ಗಾಯಕಿಯೂ ಆಗಿದ್ದರು. ಕಿರಿಯ ವಯಸ್ಸಿನಲ್ಲೇ ಸಿನೆಮಾ ರಂಗಕ್ಕೆ ಪದಾರ್ಪಣೆ ಮಾಡಿದ ಭಾನುಮತಿ ತೆಲುಗಿನಲ್ಲಿ ಎನ್. ಟಿ. ರಾಮರಾವ್, ನಾಗೇಶ್ವರ ರಾವ್, ತಮಿಳಿನಲ್ಲಿ ಎಂ.ಜಿ. ರಾಮಚಂದ್ರನ್ ಹಾಗೂ ಶಿವಾಜಿ ಗಣೇಶನ್ ಜೊತೆ ನಟಿಸಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು.
2000: ಭಾರತದ ವಿಶ್ವನಾಥನ್ ಆನಂದ್ ಟೆಹರಾನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪೇನಿನ ಅಲೆಕ್ಸಿ ಶಿರೊವ್ ಅವರನ್ನು 3.5-.5 ಅಂತರದಲ್ಲಿ ಸೋಲಿಸುವ ಮೂಲಕ 15ನೇ ಎಫ್ ಐ ಡಿ ಇ ವಿಶ್ವ ಚೆಸ್ ಚಾಂಪಿಯನ್ ಆದರು. ಅವರು ಮೂರು ಆಟಗಳಲ್ಲಿ ನಿರಂತರವಾಗಿ ಜಯಗಳಿಸಿದರು. ವಿಶ್ವ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಈ ರೀತಿಯಾಗಿ ಜಯಗಳಿಸಿದ್ದು ವಿಲ್ಹೆಮ್ ಸ್ಟೀನಿಟ್ಜ್ ಅವರ ಬಳಿಕ ಇದೇ ಮೊದಲು. ವಿಲ್ಹೆಮ್ ಅವರು ಮೂರು ಆಟಗಳಲ್ಲಿನಿರಂತರವಾಗಿ ಜಯಗಳಿಸಿದ್ದರು.
1989: ಭಾರತದ ಮೊತ್ತ ಮೊದಲ ಮನರಂಜನಾ ಉದ್ಯಾನ (ಅಮ್ಯೂಸ್ ಮೆಂಟ್ ಪಾರ್ಕ್) `ಎಸ್ಸೆಲ್ ವರ್ಲ್ಡ್' ಬಾಂಬೆಯಲ್ಲಿ (ಈಗಿನ ಮುಂಬೈ) ಉದ್ಘಾಟನೆಗೊಂಡಿತು.
1987: ಎಂ.ಜಿ.ಆರ್. ಎಂದೇ ಖ್ಯಾತಿ ಪಡೆದ ಎಂ.ಜಿ. ರಾಮಚಂದ್ರನ್ ಈದಿನ ನಿಧನರಾದರು. 1917ರ ಜನವರಿ 17ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಜನಿಸಿದ ಎಂ.ಜಿ.ಆರ್. ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. 1977ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದ ಅವರು 1987ರಲ್ಲಿ ಮೃತರಾಗುವವರೆಗೂ ತಮಿಳುನಾಡಿದ ಮುಖ್ಯಮಂತ್ರಿಯಾಗಿದ್ದರು. ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದ ಅವರು 1953ರಲ್ಲಿ ಡಿಎಂಕೆ ಸೇರಿದರು. 1962ರಲ್ಲಿ ವಿಧಾನಸಭೆಯ ಅಧ್ಯಕ್ಷರಾದರು. ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರು ಶಿಕ್ಷಣದ ಬೆಳವಣಿಗೆ, ಸಾಮಾಜಿಕ ವಿಜ್ಞಾನದ ಬೆಳವಣಿಗೆಗೆ ಆದ್ಯತೆ ನೀಡಿದರು. ವೈದ್ಯಕೀಯ ಕಾಲೇಜು, ತಮಿಳುನಾಡು ಮಹಿಳಾ ವಿಶ್ವ ವಿದ್ಯಾಲಯಗಳು ಇವರ ಕಾಲದಲ್ಲೇ ಸ್ಥಾಪನೆಗೊಂಡವು. ಎಂ.ಜಿ.ಆರ್. ಅವರ ಸೇವೆಯನ್ನು ಸ್ಮರಿಸಿ ಅವರಿಗೆ `ಮರಣೋತ್ತರ ಭಾರತ ರತ್ನ' ಪ್ರಶಸ್ತಿ ನೀಡಲಾಯಿತು.
1961: `ಬಿಲ್ಲಿ ಬಂಟರ್' ನ್ನು ಪರಿಚಯಿಸಿದ ಫ್ರಾಂಕ್ ರಿಚರ್ಡ್ಸ್ ಅವರು ತಮ್ಮ 85ನೇ ವಯಸ್ಸಿನಲ್ಲಿ ಮೃತರಾದರು.
1959: ಹಿಂದೀ ಚಿತ್ರನಟ ಅನಿಲ್ ಕಪೂರ್ ಹುಟ್ಟಿದ ದಿನ.
1924: ಹಿನ್ನೆಲೆ ಗಾಯಕ ಮಹಮ್ಮದ್ ರಫಿ (1924-1980) ಹುಟ್ಟಿದ ದಿನ.
1914: ಬಾಬಾ ಆಮ್ಟೆ (ಮುರಳೀಧರ ದೇವದಾಸ ಆಮ್ಟೆ) ಹುಟ್ಟಿದರು. ಭಾರತೀಯ ಸಮಾಜ ಸೇವಕ ಹಾಗೂ ಪರಿಸರವಾದಿ ಚಿಂತಕರಾದ ಇವರು ಕುಷ್ಠ ರೋಗಿಗಳಿಗೆ ಸಲ್ಲಿಸಿದ ಸೇವೆಗಾಗಿ ಖ್ಯಾತರಾಗಿದ್ದಾರೆ.
1910: ಅಮೆರಿಕನ್ ಎಂಜಿನಿಯರ್ ವಿಲಿಯಮ್ ಹೇವರ್ಡ್ ಪಿಕರಿಂಗ್ ಹುಟ್ಟಿದ ದಿನ. ಭೌತ ತಜ್ಞರಾದ ಇವರು ಅಮೆರಿಕದ ಮೊತ್ತ ಮೊದಲ `ಎಕ್ಸ್ ಪ್ಲೋರರ್ 1' ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ ತಂಡದ ನಾಯಕ.
1898: ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸದಾರಿ ತೋರಿದ ಎಸ್. ವಿ. ರಂಗಣ್ಣ ಅವರು ವೆಂಕಟಸುಬ್ಬಯ್ಯ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು.
1524: ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತದ ಕೊಚ್ಚಿನಿನಲ್ಲಿ (ಈಗಿನ ಕೋಚಿ) ಮೃತನಾದ. ಈತ ಆಫ್ರಿಕಾದ ಮೂಲಕ ಭಾರತಕ್ಕೆ ಬರುವ ಸಮುದ್ರಮಾರ್ಗವನ್ನು ಕಂಡು ಹಿಡಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment