Sunday, January 24, 2010

ಇಂದಿನ ಇತಿಹಾಸ History Today ಡಿಸೆಂಬರ್ 25

ಇಂದಿನ ಇತಿಹಾಸ

ಡಿಸೆಂಬರ್ 25

2023: ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದಂತೆ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದ ಮೂರು ಕ್ರಿಮಿನಲ್‌ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದರು. ಇದರೊಂದಿಗೆ ಈ ಮೂರು ಮಸೂದೆಗಳು ಈ ದಿನದಿಂದ ಕಾನೂನಾಗಿ ಜಾರಿಯಾದವು. ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ)  ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೇಯ) ಸಂಹಿತಾ ಮಸೂದೆ ಇವು ಈದಿನ ರಾಷ್ಟ್ರಪತಿಯವರ ಅಂಕಿತ ಬಿದ್ದಿರುವ ಮೂರು ಮಸೂದೆಗಳು. ಮೂರೂ ಮಸೂದೆಗಳಿಗೆ ಸಂಸತ್ತಿನ ಉಭಯ ಸದನಗಳು ಇತ್ತೀಚೆಗೆ ಅಂಗೀಕಾರ ನೀಡಿದ್ದವು.

2008: ಪಾಕಿಸ್ಥಾನ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿದ್ದು ಭಾರತದೊಂದಿಗೆ ಯುದ್ಧ ನಡೆಸಲು ಬಯಸಿಲ್ಲ ಎಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಜಿಲಾನಿ ಇಸ್ಲಾಮಾಬಾದಿನಲ್ಲಿ ಪ್ರಕಟಿಸಿದರು. ಉಭಯ ದೇಶಗಳ ಗಡಿಯಲ್ಲಿ ಯುದ್ಧದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶವನ್ನು ಅಸ್ಥಿರಗೊಳಿಸಲು ಬಯಸಿರುವ ಮತ್ತು ತನ್ನ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ರಾಷ್ಟ್ರ-ವಿರೋಧಿ ಶಕ್ತಿಗಳಿಗೆ ಪಾಕ್ ಸರ್ಕಾರ ಅವಕಾಶ ನೀಡುವುದಿಲ್ಲ' ಎಂದೂ ಘೋಷಿಸಿದರು. 'ನಮಗೆ ಪಾಕ್ ಜೊತೆ ಯುದ್ಧ ಬೇಕಿಲ್ಲ, ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಸಾಕು' ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಅವರು ಈ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

2008: ದೀರ್ಘಕಾಲದ ಗಿನಿಯಾದ ಸರ್ವಾಧಿಪತ್ಯ ವಹಿಸಿದ್ದ ಲಾಂಸಾನಾ ಕಾಂಟೆ ನಿಧನದ ಹಿನ್ನೆಲೆಯಲ್ಲಿ ತಾನು ಅಧ್ಯಕ್ಷ ಎಂದು ಕ್ಯಾಪ್ಟನ್ ಮೌಸ್ಸಾ ದಡಿಸ್ ಕಮರಾ ಸ್ವಯಂ ಘೋಷಣೆ ಮಾಡಿಕೊಂಡರು. 24 ಗಂಟೆಗಳಲ್ಲಿ ಸರ್ಕಾರದ ಸದಸ್ಯರು ತಮ್ಮ ಸ್ಥಾನ ಬಿಡಬೇಕೆಂದೂ ಅವರು ಆದೇಶ ನೀಡಿದರು. 1984ರಿಂದ ಅಧಿಕಾರದಲ್ಲಿದ್ದ ಕಾಂಟೆ ಈಚೆಗೆ ನಿಧನರಾಗಿದ್ದರು.

2008: 1984ರ ದೆಹಲಿ ಸಿಖ್ ನರಮೇಧಕ್ಕೆ ಸಂಬಂಧಿಸಿ ಪ್ರಮುಖ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಲು ನ್ಯೂಯಾರ್ಕಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ, ಮುಖ್ಯ ಸಾಕ್ಷಿ ಜಸ್ಬಿಂದರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡಿತು. ನಂತರ ತಂಡವು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಜಸ್ಬೀರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳಿತು. ಸಿಖ್ ನರಮೇಧದಲ್ಲಿ ಕೇಂದ್ರದ ಮಾಜಿ ಸಚಿವ ಜಗದೀಶ್ ಟೈಟ್ಲರ್ ಕೈವಾಡವಿದೆ ಎಂದು ಇವರು ಆರೋಪಿಸಿದ್ದರು.

2007: ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಪರೂಪದ ತೀರ್ಪು ನೀಡಿದ ಸುಪ್ರೀಂಕೋರ್ಟ್, ವಿಮೆ ಹಣ ತುಂಬಿರದಿದ್ದರೂ, ನೊಂದ ಕುಟುಂಬಕ್ಕೆ ಪರಿಹಾರ ನೀಡಿ, ಆ ಮೊತ್ತವನ್ನು ವಾಹನ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿತು. ಕರ್ನಾಟಕ ರಾಜ್ಯ ಕೊಪ್ಪಳದ ಗಂಗಾವತಿ ತಾಲ್ಲೂಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಟೆಂಪೊ ಒಂದು ಗುಡಿಸಲಿಗೆ ನುಗ್ಗಿದ್ದರಿಂದ ಶಾಂತಮ್ಮ ಎಂಬಾಕೆ ಸ್ಥಳದಲ್ಲಿಯೇ ಮೃತಳಾಗಿದ್ದಳು. ಪ್ರಕರಣದ ವಿಚಾರಣೆಯಲ್ಲಿ ಟೆಂಪೊ ಮಾಲೀಕ ಗೋಕುರ್ ಸಾಬ್ ಎಂಬಾತ ವಾಹನ ವಿಮೆ ನವೀಕರಣ ಮಾಡಿಸಿರಲಿಲ್ಲ ಎಂಬುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಮಡಿದ ಮಹಿಳೆಯ ತಂದೆ, ದೊಡ್ಡಪ್ಪನಿಗೆ ಪರಿಹಾರದ ಹಣ ನೀಡಲು ವಿಮಾ ಕಂಪೆನಿ ನಿರಾಕರಿಸಿತು. ಆದರೆ ವಾಹನ ಅಪಘಾತ ನ್ಯಾಯಮಂಡಳಿ ಹಾಗೂ ರಾಜ್ಯ ಹೈಕೋರ್ಟ್ ಮೃತರ ಕುಟುಂಬಕ್ಕೆ ರೂ 1.58 ಲಕ್ಷ ಪರಿಹಾರ ನೀಡುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿದವು. ಇದನ್ನು ಪ್ರಶ್ನಿಸಿ ಕಂಪೆನಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸಂತ್ರಸ್ತ ಕುಟುಂಬದ ಸದಸ್ಯರು ಸಮಾಜದ ಕೆಳ ಹಂತದವರು ಎಂಬುದನ್ನು ಗಮನಿಸಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಪ್ರಕರಣದ ಹಿನ್ನೆಲೆ ಆಧಾರದ ಮೇಲೆ ಹಾಗೂ ನ್ಯಾಯಾಲಯಕ್ಕೆ 142ನೇ ಅಧಿನಿಯಮದಡಿ ಇರುವ ಅಧಿಕಾರ ಬಳಸಿ, ಪರಿಹಾರ ನೀಡುವಂತೆ ಆದೇಶಿಸುತ್ತಿರುವುದಾಗಿ ತಿಳಿಸಿತು. ಈ ಹಣವನ್ನು ವಾಹನದ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆಯೂ ಅದು ಆದೇಶಿಸಿತು.

2007: ಹಿಂದಿನ ದಿನ ರಾತ್ರಿ ನಿಧನರಾದ ಬಾಲಿವುಡ್ಡಿನ ಹಿರಿಯ ನಿರ್ಮಾಪಕ - ನಿರ್ದೇಶಕ ಜಿ.ಪಿ.ಸಿಪ್ಪಿ (93) ಅವರ ಅಂತ್ಯಕ್ರಿಯೆ ಮುಂಬೈಯ ಚಂದನವಾಡಿಯಲ್ಲಿ ನಡೆಯಿತು. ವಯೋ ಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪ್ಪಿ ಅವರು ಹಿಂದಿನ ರಾತ್ರಿ ನಿಧನರಾಗಿದ್ದರು. ಅಗರ್ಭ ಶ್ರೀಮಂತ ಸಿಂಧಿ ಕುಟುಂಬದಲ್ಲಿ ಜನಿಸಿದ ಸಿಪ್ಪಿ ಅವರು 1955ರಲ್ಲಿ `ಮರೈನ್ ಡ್ರೈವ್' ಚಿತ್ರ ನಿರ್ಮಿಸುವ ಮೂಲಕ ಬಾಲಿವುಡ್ಡಿಗೆ ಪದಾರ್ಪಣೆ ಮಾಡಿದ್ದರು. ಹಲವು ವರ್ಷಗಳವರೆಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಅವರು ಮನೆಮಾತಾದದ್ದು 1975ರಲ್ಲಿ `ಶೋಲೆ' ಚಿತ್ರ ನಿರ್ಮಾಣದ ಮೂಲಕ. ಈ ಚಿತ್ರವನ್ನು ಅವರ ಮಗ ರಮೇಶ್ ನಿರ್ದೇಶಿಸಿದ್ದು ಮತ್ತೊಂದು ವಿಶೇಷ. `ಶೋಲೆ' ಭಾರತೀಯ ಚಿತ್ರರಂಗದಲ್ಲಿಯೇ ಹಲವು ದಾಖಲೆಗಳನ್ನು ನಿರ್ಮಿಸಿತು. ಪ್ರಮುಖ ಚಿತ್ರನಟರನ್ನು ಹಾಕಿಕೊಂಡು ಚಿತ್ರ ನಿರ್ಮಿಸುತ್ತಿದ್ದ ಅವರು, ಅದ್ದೂರಿತನಕ್ಕೆ ವಿಶೇಷ ಗಮನ ನೀಡುತ್ತಿದ್ದರು. ಶ್ರೀಮತಿ 420, ಅಂದಾಜ್, ಸೀತಾ ಔರ್ ಗೀತಾ, ಶಾನ್, ಸಾಗರ್, ರಾಜು ಬನ್ ಗಯಾ ಜಂಟಲ್ ಮ್ಯಾನ್ ಸೇರಿದಂತೆ 19 ಚಿತ್ರಗಳನ್ನು ನಿರ್ಮಿಸಿದರು. ಫಿಲ್ಮಫೇರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಹೆಗಲಿಗೇರಿದ್ದವು.

2007: ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಜೆಪಿಯ ನರೇಂದ್ರ ಮೋದಿ ಸತತ 3ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲಕ್ಷಾಂತರ ಜನರ ಜಯ ಘೋಷಗಳ ನಡುವೆ ಸಮಾರಂಭ ನಡೆಯಿತು. ಸಾಂಪ್ರದಾಯಿಕ ಕೇಸರಿ ವರ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದ 57 ವರ್ಷ ವಯಸ್ಸಿನ ಮೋದಿ ಮಧ್ಯಾಹ್ನ 1.50ಕ್ಕೆ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಸಾಧುಗಳು, ಹಾಗೂ ಪಕ್ಷ ಕಾರ್ಯಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಂಡರು. ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ಗುಜರಾತಿನಲ್ಲಿ ಸತತ ನಾಲ್ಕನೇ ಬಾರಿಗೆ ಸರ್ಕಾರ ರಚಿಸಿತು. ಇದಕ್ಕೂ ಮುಂಚೆ 1995, 1998 ಹಾಗೂ 2002ರಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.

2007: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಯಾದವ್ ಅವರ ಹಿರಿಯ ಸೋದರ ಬಾಲ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಕೈಗೊಂಡಿರುವುದು ನಿಜವೆಂದು ತನಿಖಾ ತಂಡ ಪಟ್ನಾದಲ್ಲಿ ಬಹಿರಂಗಪಡಿಸಿತು. ಬಿಹಾರದ ಎನ್ ಡಿ ಎ ಸರ್ಕಾರ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಈ ತನಿಖಾ ತಂಡವನ್ನು ರಚಿಸಿತ್ತು. ಕಾರ್ಮಿಕ ಇಲಾಖೆಯ ಆಯುಕ್ತ ವಿಮ್ಲಾನಂದ ಝಾ ನೇತೃತ್ವದ ಉನ್ನತ ಮಟ್ಟದ ತಂಡ ಶಹಾಪುರಕ್ಕೆ ತೆರಳಿ ತನಿಖೆ ನಡೆಸಿತು. ಕೇಂದ್ರ ಸಚಿವರ ಸಹೋದರ ಬಾಲಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಿರುವ ಬಗ್ಗೆ ಟಿವಿ ಚಾನೆಲ್ ಮಾಡಿದ ವರದಿ ನಿಜವೆಂದು ತಂಡ ವರದಿ ನೀಡಿದೆ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸುದ್ದಿಗಾರರಿಗೆ ತಿಳಿಸಿದರು.

2007: ಕ್ರಿಸ್ಮಸ್ ದಿನಾಚರಣೆ ದಿನ ಒರಿಸ್ಸಾದ ರೂರ್ಕೆಲಾ ವಿಭಾಗದ ಚಿಕಿತಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿ ಎಚ್ ಪಿ) ಏರ್ಪಡಿಸಿದ್ದ ಕಾರ್ಯಕ್ರಮ ಒಂದರಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ್ದ 187 ಮಂದಿ ಹಿಂದೂ ಧರ್ಮಕ್ಕೆ ಮರುಮತಾಂತರ ಹೊಂದಿದರು. ಮರುಮತಾಂತರ ಹೊಂದಿದವರಲ್ಲಿ 103 ಮಂದಿ ಪುರುಷರು ಮತ್ತು 84 ಮಂದಿ ಮಹಿಳೆಯರು. ಕಾರ್ಯಕ್ರಮದಲ್ಲಿ ರೂರ್ಕೆಲಾ ವಿಭಾಗದ ವಿ ಎಚ್ ಪಿ ಅಧ್ಯಕ್ಷ ಮಿತ್ರಭಾನು ಪಾಂಡಾ, ಧರ್ಮ ಪ್ರಚಾರಕ ಮಕರಧ್ವಜ ಮೊಹಾಂತೊ, ಗಧಾದರ್ ಸಾಹು ಮತ್ತಿತರರು ಹಾಜರಿದ್ದರು.

2007: ಏಷ್ಯಾ ಮೋಟಾರ್ ವರ್ಕ್ಸ್ ಲಿಮಿಟೆಡ್ (ಎಎಂಡಬ್ಲ್ಯು), ಭಾರಿ ತೂಕದ ಸರಕು ಸಾಗಣೆ ವಿಭಾಗದಲ್ಲಿ ಹೊಸ `4930 ಟ್ರಕ್'ನ್ನು ಮುಂಬೈಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

2007: ಇತರ ಬ್ಯಾಂಕುಗಳ ಎಟಿಎಂ ಬಳಕೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿರುವ ದುಬಾರಿ ಸೇವಾ ಶುಲ್ಕ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ವಾಣಿಜ್ಯ ಬ್ಯಾಂಕುಗಳಿಗೆ ಆದೇಶ ನೀಡಿತು. ಇತರ ಬ್ಯಾಂಕುಗಳ ಎಟಿಎಂ ಕೇಂದ್ರಗಳಿಂದ ಸ್ವಂತ ಖಾತೆಯ ಹಣ ಪಡೆಯುವುದೂ ಸೇರಿದಂತೆ, ಖಾತೆಯಲ್ಲಿನ ಹಣದ ವಿವರ ಪಡೆಯುವುದಕ್ಕೆ ಮುರಿದುಕೊಳ್ಳುವ ಗರಿಷ್ಠ ಪ್ರಮಾಣದ ಸೇವಾ ಶುಲ್ಕ ವಸೂಲಿ ನಿಲ್ಲಿಸಲು ಆರ್ ಬಿ ಐ ಸೂಚಿಸಿತು.

2007: ತಮಿಳಿನ ಉದಯೋನ್ಮುಖ ಚಲನಚಿತ್ರ ನಟ ಪ್ರವೀಣ್ ಕುಮಾರ್ (26) ಚೆನ್ನೈಯ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ತಮ್ಮ 36 ವರ್ಷದ ಪತ್ನಿ ನಿಷಾ ಜತೆ ವೈಮನಸ್ಸು ಉಂಟಾದದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದರು. ಪ್ರವೀಣ್ ತಾಯಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷಾ ವಿರುದ್ಧ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡರು.

2006: ಸ್ವಯಂಘೋಷಿತ `ಆತ್ಮರಕ್ಷಕ' (ಗಾಡ್ಫಾದರ್ ಆಫ್ ಸೋಲ್) ಗಾಯಕ ಜೇಮ್ಸ್ ಬ್ರೌನ್ (73) ಅಟ್ಲಾಂಟಾದಲ್ಲಿ ನಿಧನರಾದರು. ತೀವ್ರ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಬ್ರೌನ್ ಅವರನ್ನು ಕಳೆದ ವಾರಾಂತ್ಯದಲ್ಲಿಅಟ್ಲಾಂಟಾದ ಎಮೊರಿ ಕ್ರಾಫರ್ಡ್ ಲಾಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. `ಮಿಸ್ಟರ್ ಡೈನಮೈಟ್' ಎಂದೇ ಖ್ಯಾತರಾಗಿದ್ದ ಬ್ರೌನ್, ಸಂಗೀತದಲ್ಲಿ ಹೊಸ ತಲೆಮಾರಿನ ಮೇಲೆ ಪ್ರಭಾವ ಬೀರಿದ ಹಾಡುಗಾರ. ಬ್ರೌನ್ ಅವರ `ಸೇ ಇಟ್ ಲೌಡ್ (ಐ ಆ್ಯಮ್ ಬ್ಲ್ಯಾಕ್ ಅಂಡ್ ಐ ಆ್ಯಮ್ ಪ್ರೌಡ್) ಹಾಡಂತೂ 1960ರಲ್ಲಿ ನಾಗರಿಕ ಹಕ್ಕುಗಳ ಹಾಡಾಗಿ ಜನಪ್ರಿಯಗೊಂಡಿತ್ತು. 1968ರಲ್ಲಿ ಬ್ರೌನ್ ಅವರು ಈ ಹಾಡನ್ನು ರಿಚರ್ಡ್ ನಿಕ್ಸನ್ ಸಮ್ಮುಖದಲ್ಲೂ ಹಾಡಿದ್ದರು. 1990ರಲ್ಲಿ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ `ಗ್ರಾಮ್ಮಿ' ಪ್ರಶಸ್ತಿಯನ್ನು ಪಡೆದ ಬ್ರೌನ್ ಅವರು, 119ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 50 ಆಲ್ಬಂಗಳು ಪ್ರಕಟಗೊಂಡಿವೆ.

2006: ಬಿಜೆಪಿ ಜೊತೆ ಮೈತ್ರಿಗೆ ಕಾಂಗ್ರೆಸ್ ಪಕ್ಷದ ದುಷ್ಟ ಸಂಚು ಕಾರಣ ಎಂಬುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 38 ಸದಸ್ಯರು ನೀಡಿದ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಅವರ ವಿರುದ್ಧದ ಅಮಾನತನ್ನು ಹಿಂದೆ ಪಡೆಯಿತು.

2006: ವಿಶ್ವ ಗೋ ಸಮ್ಮೇಳನದ ಪ್ರಯುಕ್ತ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಕಾಮಧೇನು ಮಹಾಯಾಗದ ಆರಂಭಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.

2006: ಹಿರಿಯ ಪತ್ರಕರ್ತ ಟಿಂಗರ ಬುಡ್ಡಣ್ಣ ಖ್ಯಾತಿಯ ಜಿ.ಎಚ್. ರಾಘವೇಂದ್ರ (59) ಅವರು ಹುಬ್ಬಳ್ಳಿಯಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ನಿವೃತ್ತಿ ಹೊಂದಿದ್ದ ರಾಘವೇಂದ್ರ ನಾಟಕಕಾರ ಹಾಗೂ ಹಾಸ್ಯ ಸಾಹಿತಿಯಾಗಿ ಖ್ಯಾತಿ ಪಡೆದವರು. ಚುಚ್ಚೇಂದ್ರ ಹೆಸರಿನಲ್ಲಿ ಅವರು ಬರೆಯುತ್ತಿದ್ದ `ಟಿಂಗರ ಬುಡ್ಡಣ್ಣ' ಸಂಯುಕ್ತ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.

2005: ಪಾಕಿಸ್ಥಾನದ ಇಸ್ಲಾಮಾಬಾದ್, ಉತ್ತರ ಪಾಕಿಸ್ಥಾನದ ನಗರಗಳು ಮತ್ತು ಭಾರತದ ಶ್ರೀನಗರದಲ್ಲಿ ಈದಿನ ಮಧ್ಯಾಹ್ನ 1 ಗಂಟೆಗೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿ ಜನರನ್ನು ದಿಕ್ಕೆಡಿಸಿತು. ಅಕ್ಟೋಬರ್ 8ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಪಾಕಿಸ್ಥಾನದ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್, ಬಾಲ್ ಕೋಟ್ ಸೇರಿದಂತೆ ಪಾಕಿಸ್ಥಾನ ವಾಯವ್ಯ ಪ್ರಾಂತ್ಯದಲ್ಲಿ 80,000ಕ್ಕೂ ಹೆಚ್ಚು ಜನ ಮೃತರಾಗಿ 35 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದರು.

2005: ಅಸ್ಸಾಂನ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ನಾಯಕ ಶರತ್ ಚಂದ್ರ ಸಿನ್ಹ (92) ಗುವಾಹಟಿಯಲ್ಲಿ ನಿಧನರಾದರು.

1997: ಇಂದೋರಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಎರಡನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಮೂರು ಓವರುಗಳ ನಂತರ ಕೆಟ್ಟ ಪಿಚ್ ಕಾರಣಕ್ಕಾಗಿ ರದ್ದಾಯಿತು. ಕ್ರಿಕೆಟ್ ಇತಿಹಾಸದಲ್ಲೇ ಈ ಕಾರಣಕ್ಕಾಗಿ ಪಂದ್ಯ ರದ್ದಾದ ಪ್ರಕರಣ ಇದೇ ಮೊತ್ತ ಮೊದಲನೆಯದು.

1994: ಭಾರತದ ಮಾಜಿ ರಾಷ್ಟ್ರಪತಿ ಗಿಯಾನಿ ಜೈಲ್ ಸಿಂಗ್ (1916-1994) ಅವರು ತಮ್ಮ 78ನೇ ವಯಸಿನಲ್ಲಿ ಚಂಡೀಗಢದಲ್ಲಿ ನಿಧನರಾದರು. ಅವರು ನವೆಂಬರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇವರು ಭಾರತದ ಮೊತ್ತ ಮೊದಲ ಸಿಖ್ ರಾಷ್ಟ್ರಪತಿ.

1991: ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಸೋವಿಯತ್ ಯೂನಿಯನ್ ಇತಿಹಾಸ ಗರ್ಭದಲ್ಲಿ ಸೇರಿ ಹೋಯಿತು. 1991ರ ಡಿಸೆಂಬರ್ 31ರಂದು ಕಾನೂನುಬದ್ಧವಾಗಿ ಸೋವಿಯತ್ ಯೂನಿಯನ್ ಅಂತ್ಯಗೊಂಡಿತು.

1989: ಜನರ ದಂಗೆಯಲ್ಲಿ ಪದಚ್ಯುತಿಗೊಂಡ ರೊಮೇನಿಯಾದ ಅಧ್ಯಕ್ಷ ನಿಕೋಲಾಯ್ ಸಿಯಾಸ್ಕು ಮತ್ತು ಅವರ ಪತ್ನಿ ಎಲೆನಾ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

1977: ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಹಾಸ್ಯ-ನಿರ್ದೇಶಕ ಸರ್ ಚಾರ್ಲ್ಸ್ ಚಾಪ್ಲಿನ್ (ಚಾರ್ಲಿ ಚಾಪ್ಲಿನ್ 1889-1977) ಸ್ವಿಟ್ಸರ್ ಲ್ಯಾಂಡಿನ ಕೊರ್ಸೀರ್-ಸುರ್-ವಿವೀಯಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಮೃತರಾದರು. (1978ರಲ್ಲಿ ಪೋಲ್ ಮತ್ತು ಬಲ್ಗೇರಿಯಾದ ವ್ಯಕ್ತಿ ಸೇರಿಕೊಂಡು ಚಾಪ್ಲಿನ್ ಅವರ ಪಾರ್ಥಿ ಶರೀರವನ್ನು ಸ್ಮಶಾನದಿಂದ ಕದ್ದು 60,000 ಫ್ರಾಂಕುಗಳಿಗೆ ಮಾರಿದರು. ಅವರಿಗೆ ಗ್ಯಾರೇಜ್ ವ್ಯವಹಾರಕ್ಕೆ ಹಣಬೇಕಾಗಿದ್ದ ಕಾರಣ ಈ ಕೃತ್ಯ ಎಸಗಿದ್ದಾಗಿನಂತರ ಅವರು ಹೇಳಿದರು.)

1972: ಭಾರತದ ಸ್ವಾತಂತ್ರ್ಯ ಯೋಧ ಚಕ್ರವರ್ತಿ ರಾಜಗೋಪಾಲಾಚಾರಿ `ರಾಜಾಜಿ' (1879-1972) ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಸ್ವತಂತ್ರ ಭಾರತದ ಏಕೈಕ ಗವರ್ನರ್ ಜನರಲ್ ಆಗಿದ್ದ ಇವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದವರು.

1924: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟಿದ ದಿನ. 1996ರಲ್ಲಿ ಕೇವಲ 13 ದಿನಗಳ ಅವಧಿಗೆ ಭಾರತದ ಪ್ರಧಾನಿಯಾದ ಅವರು 1998ರಿಂದ 2004ರ ಅವಧಿಯಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಿದ್ದರು.

1643: ಭೌತತಜ್ಞ ಹಾಗೂ ಗಣಿತ ತಜ್ಞ ಸರ್ ಐಸಾಕ್ ನ್ಯೂಟನ್ (1643-1727) ಹುಟ್ಟಿದ ದಿನ. ಇವರ ಚಲನೆಯ ನಿಯಮಗಳು ಮುಂದೆ ವಿಶ್ವದ ಗುರುತ್ವಾಕರ್ಷಣೆಯ ನಿಯಮ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1861: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಮದನ ಮೋಹನ ಮಾಳವೀಯ (1861-1946) ಅವರು ಜನಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ನೆರವಾದವರಲ್ಲಿ ಇವರು ಪ್ರಮುಖರು.

1876: ಪಾಕಿಸ್ಥಾನದ ಸ್ಥಾಪಕ ಮಹಮ್ಮದ್ ಅಲಿ ಜಿನ್ನಾ (1876-1948) ಹುಟ್ಟಿದ ದಿನ.

No comments:

Advertisement