Tuesday, January 26, 2010

ಇಂದಿನ ಇತಿಹಾಸ History Today ಡಿಸೆಂಬರ್ 28

ಇಂದಿನ ಇತಿಹಾಸ

ಡಿಸೆಂಬರ್ 28

ಪಂ. ಮಾಧವ ಗುಡಿ ಅವರ ಪುತ್ರ ಪ್ರಸನ್ನ ಗುಡಿ ಸತತ 24 ಗಂಟೆಗಳ ಕಾಲ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವ 'ಸ್ವರ ಮಹಾ ಯಾಗ' ಎಂಬ ವಿಶಿಷ್ಟ ಕಾರ್ಯಕ್ರಮ ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಈದಿನ ಆರಂಭವಾಯಿತು. ಈ ಮೂಲಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಸನ್ನ ಅವರು ಗಿನ್ನೆಸ್ ದಾಖಲೆ ನಿರ್ಮಿಸಲು ಹೊರಟರು.

2008: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಆದರೆ ನ್ಯಾಷನಲ್ ಕಾನ್ಛರೆನ್ಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು. ಒಟ್ಟು 87 ಸದಸ್ಯ ಬಲದ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಛರೆನ್ಸ್ 28 ಸ್ಥಾನಗಳನ್ನು ಗೆದ್ದುಕೊಂಡರೆ, ಪಿಡಿಪಿ 21 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. 17 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ನಿಂತಿತು. ಬಿಜೆಪಿ 11 ಸ್ಥಾನಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿತು. ಇತರರು 10 ಸ್ಥಾನಗಳನ್ನು ಪಡೆದರು.

2008: ಹಮಾಸ್ ಉಗ್ರಗಾಮಿಗಳ ಪ್ರಾಬಲ್ಯದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸತತ ಎರಡನೇ ದಿನ ಕೂಡ ವೈಮಾನಿಕ ದಾಳಿ ಮುಂದುವರೆಸಿತು. ಒಟ್ಟು 270ಕ್ಕೂ ಹೆಚ್ಚು ಪ್ಯಾಲೆಸ್ಥೀನಿಯರು ದಾಳಿಯಲ್ಲಿ ಅಸು ನೀಗಿ, 800 ಮಂದಿ ಗಾಯಗೊಂಡರು. 1967ರಿಂದೀಚೆಗೆ ಈ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಅತ್ಯಂತ ದೊಡ್ಡ ಸೇನಾ ಕಾರ್ಯಾಚರಣೆ ಇದು.

2008: ಪಂ. ಮಾಧವ ಗುಡಿ ಅವರ ಪುತ್ರ ಪ್ರಸನ್ನ ಗುಡಿ ಸತತ 24 ಗಂಟೆಗಳ ಕಾಲ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವ 'ಸ್ವರ ಮಹಾ ಯಾಗ' ಎಂಬ ವಿಶಿಷ್ಟ ಕಾರ್ಯಕ್ರಮ ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಈದಿನ ಆರಂಭವಾಯಿತು. ಈ ಮೂಲಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಸನ್ನ ಅವರು ಗಿನ್ನೆಸ್ ದಾಖಲೆ ನಿರ್ಮಿಸಲು ಹೊರಟರು. ಕಿರಾಣಾ ಸಂಗೀತ ಅಕಾಡೆಮಿ ಏರ್ಪಡಿಸಿದ್ದ ಈ ಕಾರ್ಯಕ್ರಮಕ್ಕೆ ಡಾ. ಗಂಗೂಬಾಯಿ ಹಾನಗಲ್ ಚಾಲನೆ ನೀಡಿದರು. ಪ್ರಸನ್ನ ಗುಡಿ ಅವರು ತೋಡಿ ರಾಗದ ಮೂಲಕ ತಮ್ಮ ಶಾಸ್ತ್ರೀಯ ಗಾಯನ ಆರಂಭಿಸಿದರು. 24 ತಾಸುಗಳವರೆಗೆ ವೈವಿಧ್ಯಮಯ ರಾಗಗಳನ್ನು ಪ್ರಸ್ತುತ ಪಡಿಸುವುದರ ಜೊತೆಗೆ ಮರಾಠಿ ಅಭಂಗ, ಕನ್ನಡ, ಹಿಂದಿ ಭಜನೆಗಳು, ದಾಸವಾಣಿಯನ್ನು ಡಿಸೆಂಬರ್ 29ರ ಬೆಳಗ್ಗೆ 10 ಗಂಟೆವರೆಗೆ ಹಾಡುವಮೂಲಕ ಅವರು ದಾಖಲೆ ನಿರ್ಮಿಸಿದರು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಹಿನ್ನೆಲೆಯಲ್ಲಿ ದೇಶದಾದ್ಯತಂತ ಸಂಭವಿಸಿದ ಹಿಂಸಾಚಾರಗಳಿಗೆ 34 ಜನ ಬಲಿಯಾದರು. ಹಿಂಸಾಚಾರ ಹತ್ತಿಕ್ಕಲು ಸರ್ಕಾರ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿತು. ಈ ಮಧ್ಯೆ ಬೆನಜೀರ್ ಹತ್ಯೆಗೆ ಅಲ್ ಖೈದಾ ಕಾರಣ ಎಂದು ಪಾಕ್ ಸರ್ಕಾರ ಹೇಳಿತು. ಬೆನಜೀರ್ ಗುಂಡೇಟಿನಿಂದ ಸತ್ತಿಲ್ಲ, ಬಾಂಬ್ ಸ್ಫೋಟದಿಂದ ಕಾರಿನ ಛಾವಣಿ ಬಡಿದು ಮೃತರಾಗಿದ್ದಾರೆ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ಜಾವೆದ್ ಇಕ್ಬಾಲ್ ಚೀಮಾ ಸ್ಪಷ್ಟ ಪಡಿಸಿದರು. ಬೆನಜೀರ್ ಹತ್ಯೆಗೆ ಸ್ವಲ್ಪ ಹೊತ್ತಿನ ಮೊದಲಿನ ಚಿತ್ರಗಳನ್ನು ಒಳಗೊಂಡ ವಿಡಿಯೋ ಚಿತ್ರವನ್ನೂ ಸರ್ಕಾರ ಬಿಡುಗಡೆ ಮಾಡಿತು. ಇದರಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದಿರುವುದು ಸ್ಪಷ್ಟವಾಗಿ ಕಾಣಿಸಿತು.

2007: ಬಿಜೆಪಿ ಯಶೋಗಾಥೆ ಮುಂದುವರೆಯಿತು. ಪಂಜಾಬ್, ಉತ್ತರಖಂಡ, ಗುಜರಾತ್ ನಂತರ ಈಗ ಹಿಮಾಚಲ ಪ್ರದೇಶದಲ್ಲೂ ಅದು ತನ್ನ ವಿಜಯ ಪತಾಕೆಯನ್ನು ಹಾರಿಸಿತು. ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆಯಿತು. 2003ರ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಶಕ್ತಿ ಬಿಜೆಪಿಗೆ ಬಂತು. ಇದಕ್ಕೂ ಮೊದಲು 1990ರ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿದಿತ್ತು. ಬಿಜೆಪಿಗೆ ತೀವ್ರ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಕೇವಲ 23 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ಸಿಗೆ 18 ಸ್ಥಾನಗಳ ಖೋತಾ ಆಯಿತು. ಈ ಮೂಲಕ ಪಕ್ಷದ 123ನೇ ಸಂಸ್ಥಾಪನಾ ದಿನವಾದ ಈ ದಿನವೇ ಪಕ್ಷಕ್ಕೆ ದೊಡ್ಡ ಬರಸಿಡಿಲು ಹೊಡೆದಂತಾಯಿತು.

2007: ಕಂದಮಲ್ನಲ್ಲಿ ಸಂಭವಿಸಿದ ಕೋಮು ಗಲಭೆಯ ಹೊಣೆ ಹೊತ್ತು ರಾಜ್ಯದ ಉಕ್ಕು ಹಾಗೂ ಗಣಿ ಸಚಿವ ಪದ್ಮನಾಭ್ ಬೆಹೆರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾವು ಪ್ರತಿನಿಧಿಸುವ ಫೂಲ್ ಬನಿ ಮತಕ್ಷೇತ್ರದಡಿ ಬರುವ ಕಂದಮಲ್ನಲ್ಲಿ ನಡೆದ ಈ ಕೋಮು ಗಲಭೆಯ ನೈತಿಕ ಹೊಣೆಯನ್ನು ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬೆಹೆರ್ ಹೇಳಿದರು.

2007: ನಾಡಿನ ಸಜ್ಜನ ಸಾಹಿತಿ, ಸೃಜನಶೀಲ ಮನಸ್ಸಿನ ಸಹೃದಯಿ, ಸಾಹಿತ್ಯದ ಪರಿಚಾರಕ ಚಿ. ಶ್ರೀನಿವಾಸರಾಜು ಈದಿನ ಮುಂಜಾನೆ ತೀರ್ಥಹಳ್ಳಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಶ್ರೀನಿವಾಸರಾಜು ಅವರ ಇಚ್ಛೆಯಂತೆ ಅವರ ದೇಹವನ್ನು ಬೆಂಗಳೂರಿನಲ್ಲಿ ಸಂಜೆ ಎಂ. ಎಸ್. ರಾಮಯ್ಯ ವೈದ್ಯ ಕೀಯ ಕಾಲೇಜಿಗೆ ದಾನವಾಗಿ ನೀಡಲಾ ಯಿತು. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಏರ್ಪಾಡಾಗಿದ್ದ ಮೂರು ದಿನಗಳ `ಕುವೆಂಪು-ಬೇಂದ್ರೆ ಸಾಹಿತ್ಯ ಅಧ್ಯಯನ ಶಿಬಿರ'ದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬಂದು ಬೆಳಿಗ್ಗೆ 7ಗಂಟೆಗೆ ತೀರ್ಥಹಳ್ಳಿಯಲ್ಲಿ ಇಳಿದ ನಂತರ ಶ್ರೀನಿವಾಸರಾಜು ತೀವ್ರ ಹೃದಯಾಘಾತಕ್ಕೆ ಒಳಗಾದರು. ತತ್ ಕ್ಷಣ ಸ್ಥಳೀಯರು ಇವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಕುವೆಂಪು ನಾಡು ಕುಪ್ಪಳ್ಳಿಯಲ್ಲಿ `ನಾಡು ನುಡಿ ಚಿಂತನೆ` ಎಂಬ ಗೋಷ್ಠಿಯೊಂದರ ಅಧ್ಯಕ್ಷತೆಯನ್ನು ವಹಿಸಿ, ಪ್ರಬಂಧವೊಂದನ್ನು ಅವರು ಮಂಡಿಸಬೇಕಿತ್ತು. ಅದರೆ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.

2007: ರಾವಲ್ಪಿಂಡಿಯಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪಾಕಿಸ್ಥಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೊ ಅಂತ್ಯಕ್ರಿಯೆ ಅವರ ಪೂರ್ವಜರ ಗ್ರಾಮವಾದ ಗರಿ ಖುದಾ ಬಕ್ಷದಲ್ಲಿ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಸಮಾಧಿಯ ಪಕ್ಕದಲ್ಲಿ ಸಾವಿರಾರು ಮಂದಿಯ ಅಶ್ರುತರ್ಪಣದ ಮಧ್ಯೆ ನಡೆಯಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ, ಪುತ್ರ ಬಿಲಾವಲ್, ಪುತ್ರಿಯರಾದ ಭಕ್ತವಾರ್ ಮತ್ತು ಅಸಿಫಾ ಅವರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಯ ನಂತರ ಶವಪೆಟ್ಟಿಗೆಯನ್ನು ಸಮಾಧಿಯೊಳಗೆ ಇಳಿಸಲಾಯಿತು. ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಪಿಪಿಪಿಯ ಧ್ವಜವನ್ನು ಶವಪೆಟ್ಟಿಗೆಗೆ ಹೊದಿಸಲಾಗಿತ್ತು. ಭುಟ್ಟೊ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಎದೆ ಬಡಿದುಕೊಂಡು ಕಣ್ಣೀರಿಟ್ಟರು. ಲರ್ಖಾನಾ ಜಿಲ್ಲೆಯ ಎಲ್ಲಾ ಕಡೆಗಳಿಂದಲೂ ಸಹಸ್ರಾರು ಜನರು ಲಾರಿ, ಟ್ರ್ಯಾಕ್ಟರುಗಳಲ್ಲಿ ಬಂದಿದ್ದರು.

2007: ಹಿರಿಯ ನೃತ್ಯ ಕಲಾವಿದೆ ಶಾಂತಾರಾವ್ (81) ಅವರು ಈದಿನ ನಸುಕಿನ 4.35ಕ್ಕೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಶಾಂತಾರಾವ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೋಹಿನಿಯಾಟ್ಟಂ ನೃತ್ಯದಲ್ಲಿ ಅಪಾರ ಪ್ರಾವೀಣ್ಯ ಪಡೆದಿದ್ದ ಅವರು, ನೆಹರೂ, ಇಂದಿರಾ ಗಾಂಧಿ ಮತ್ತಿತರರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಶಾಂತಾರಾವ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದವು. ನೃತ್ಯ ಕಲೆಯಲ್ಲಿನ ಸಾಧನೆಗಾಗಿ ಅವರು ಪದ್ಮಶ್ರೀ, ನಾಟ್ಯರಾಣಿ ಶಾಂತಲಾ, ಕಾಳಿದಾಸ ಪ್ರಶಸ್ತಿಗಳಲ್ಲದೆ ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳ ಗೌರವಕ್ಕೂ ಪಾತ್ರರಾಗಿದ್ದರು.

2006: ಬೆಂಗಳೂರಿನ ನಾರಾಯಣ ನೇತ್ರಾಲಯದ `ಯುವೆಟಿಸ್ ಮತ್ತು ಆಕ್ಯುಲರ್ ಇಮ್ಯುನಾಲಜಿ ಸೇವೆ'ಗಳ ವಿಭಾಗದ ಸಮಾಲೋಚಕಿ ಡಾ. ಎಂ. ಪದ್ಮಮಾಲಿನಿ ಅವರಿಗೆ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಪ್ರತಿಷ್ಠಿತ ಪ್ರೊ. ನರಸಿಂಗ ಎ. ರಾವ್. ಪ್ರಶಸ್ತಿ ಲಭಿಸಿತು. ಮಧುರೈನ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಆರನೇ ಅಖಿಲ ಭಾರತ ಯುವೆಟಿಸ್ ಸಮ್ಮೇಳನದಲ್ಲಿ ಮಂಡಿಸಿದ `ಚಿಕುನ್ ಗುನ್ಯಾ ತರುವ ಸಮಸ್ಯೆಗಳು' ಪ್ರಬಂಧಕ್ಕೆ ಈ ಪ್ರಶಸ್ತಿ ಲಭಿಸಿತು.

2006: ಸಾಹಿತಿ ಎಂ. ಚಿದಾನಂದ ಮೂರ್ತಿ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ `ವಿಶ್ವ ಚೇತನ' ಪ್ರಶಸ್ತಿ ಪ್ರದಾನ ಮಾಡಲಾಯಿತು.

2006: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ `ಗೌರವ ಡಾಕ್ಟರೇಟ್' ಪ್ರದಾನ ಮಾಡಲು ಕುವೆಂಪು ವಿಶ್ವ ವಿದ್ಯಾಲಯವು ನಿರ್ಧರಿಸಿತು.

2005: ಬೆಂಗಳೂರಿನಲ್ಲಿ ಇರುವ ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದ ಆವರಣದಲ್ಲಿ ಈ ದಿನ ರಾತ್ರಿ ಉಗ್ರಗಾಮಿಗಳು ಹಠಾತ್ತನೆ ನಡೆಸಿದ ಗುಂಡಿನ ದಾಳಿಯಲ್ಲಿ ವಿಜ್ಞಾನಿ, ದೆಹಲಿ ಐಐಟಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಸಿ. ಪುರಿ ಮೃತರಾಗಿ ಇತರ ಐವರು ಗಾಯಗೊಂಡರು. ನಗರದಲ್ಲಿ ಉಗ್ರಗಾಮಿಗಳ ಮೊತ್ತ ಮೊದಲ ವಿಧ್ವಂಸಕ ಕೃತ್ಯವಿದು. ಪಾಕಿಸ್ಥಾನ ಮೂಲಕ ಲಷ್ಕರ್-ಇ-ತೊಯ್ಬಾ ಸಂಘಟನೆ ಇದರ ರೂವಾರಿ ಎಂಬುದು ಪೊಲೀಸರ ಗುಮಾನಿ. ಬಿಳಿಬಣ್ಣದ ಅಂಬಾಸಿಡರ್ ಕಾರಿನಲ್ಲಿ ರಾತ್ರಿ 7.10ರ ವೇಳೆಯಲ್ಲಿ ಪ್ರವೇಶಿಸಿದ ಉಗ್ರಗಾಮಿಗಳು ಯದ್ವಾತದ್ವ ಗುಂಡಿನ ಮಳೆಗರೆದರು. ಈ ಘಟನೆಯೊಂದಿಗೆ ಬೆಂಗಳೂರಿಗೂ ಭಯೋತ್ಪಾದನೆ ಪದಾರ್ಪಣೆ ಮಾಡಿತು.

2005: ದುಬೈಯ ಕಿಂಗ್ ಫೈಸಲ್ ಪ್ರತಿಷ್ಠಾನ ನೀಡುವ 2006ನೇ ಸಾಲಿನ ಅಂತಾರಾಷ್ಟ್ರೀಯ `ಕಿಂಗ್ ಫೈಸಲ್' ಪ್ರಶಸ್ತಿಯು ಮುಂಬೈಯ ಟಾಟಾ ಮುಲಭೂತ ಸಂಶೋಧನಾ ಸಂಸ್ಥೆಯ ಗಣಿತ ಶಾಸ್ತ್ರಜ್ಞ ಎಂ.ಎಸ್. ನರಸಿಂಹನ್ ಅವರಿಗೆ ಲಭಿಸಿತು. ಗಣಿತ ಶಾಸ್ತ್ರ ಮತ್ತು ಭೌತಶಾಸ್ತ್ರಗಳ ನಡುವಣ ಸಂಬಂಧವನ್ನು ಹಿಗ್ಗಿಸುವ ಸಂಶೋಧನಾ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದು, ನರಸಿಂಹನ್ ಅವರು ಪ್ರಶಸ್ತಿಯನ್ನು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಸಿಮೊನ್ ಕಿರ್ವಾನ್ ಡೊನಾಲ್ಡ್ ಸನ್ ಅವರ ಜೊತೆ ಹಂಚಿಕೊಂಡರು. ಪ್ರಶಸ್ತಿಯು 24 ಕ್ಯಾರೆಟಿನ 200 ಗ್ರಾಂ ತೂಕದ ಚಿನ್ನದ ಪದಕ ಮತ್ತು 2 ಲಕ್ಷ ಅಮೆರಿಕನ್ ಡಾಲರ್ ನಗದು ಹಣವನ್ನು ಹೊಂದಿದೆ.

2005: ಅರಬ್ ಜಗತ್ತಿನ ಪ್ರತಿಷ್ಠಿತ `ಐಪಿಆರ್ ಮಾಧ್ಯಮ ಪ್ರಶಸ್ತಿ'ಗೆ ಖಲೀಜ್ ಟೈಮ್ಸ್ ಪತ್ರಕರ್ತ ಭಾರತೀಯ ಮೂಲದ ಐಸಾಕ್ ಜಾನ್ ಆಯ್ಕೆಯಾದರು.

1987: ಕೊಯಮತ್ತೂರಿನಲ್ಲಿ ನಡೆದ ಶಕ್ತಿ ಫೈನಾನ್ಸ್ ಗ್ರ್ಯಾಂಡ್ ಮಾಸ್ಟರ್ ಟೂರ್ನಮೆಂಟಿನಲ್ಲಿ ವಿಶ್ವನಾಥನ್ ಆನಂದ್ ಅವರು ಭಾರತದ ಮೊತ್ತ ಮೊದಲ `ಗ್ರ್ಯಾಂಡ್ ಮಾಸ್ಟರ್' ಹೆಗ್ಗಳಿಕೆಗೆ ಭಾಜನರಾದರು.

1954: ಭಾರತದ `ಕ್ವಿಜ್ ದೊರೆ' ಸಿದ್ಧಾರ್ಥ ಬಸು ಹುಟ್ಟಿದ ದಿನ.

1947: ಸಾಹಿತಿ ಮಾತಂಗಿ ಜನನ.

1945: ನೇಪಾಳದ ದೊರೆ ಬೀರೇಂದ್ರ ಬೀರ ಬಿಕ್ರಮ್ ಶಾ ದೇವ್ (1945-2001) ಹುಟ್ಟಿದ ದಿನ. ಇವರನ್ನು ಪತ್ನಿ ಸೇರಿದಂತೆ ಇಡೀ ಕುಟುಂಬ ಸಹಿತವಾಗಿ ಪುತ್ರ ದೀಪೇಂದ್ರ ಗುಂಡಿಟ್ಟು ಕೊಲೆಗೈದ. 1972ರಿಂದ 2001ರವರೆಗೆ ಇವರು ನೇಪಾಳದ ದೊರೆಯಾಗಿ ಆಡಳಿತ ನಡೆಸಿದ್ದರು.

1944: ಕಾಕೋಳು ಸರೋಜಾರಾವ್ ಜನನ.

1939: ಸಾಹಿತಿ ಎಚ್. ಎಲ್. ಕೇಶವ ಮೂರ್ತಿ ಜನನ.

1937: ಟಾಟಾ ಇಂಡಸ್ಟ್ರೀಸ್ ಅಧ್ಯಕ್ಷ ರತನ್ ಟಾಟಾ ಜನ್ಮದಿನ.

1932: `ರಿಲಯನ್ಸ್ ಇಂಡಸ್ಟ್ರೀಸ್' ಸ್ಥಾಪಕ ಧೀರಜ್ ಲಾಲ್ ಹೀರಾಚಂದ್ `ಧೀರೂಭಾಯಿ' ಅಂಬಾನಿ (1932-2002) ಹುಟ್ಟಿದರು.

1928: ಸಾಹಿತಿ ಕೆ.ಎಸ್. ಉಮಾಪತಿ ಜನನ.

1923: ಗುಸ್ತಾವ್ ಐಫೆಲ್ (1832-1923) ತಮ್ಮ 91ನೇ ವಯಸ್ಸಿನಲ್ಲಿ ಮೃತರಾದರು. ಖ್ಯಾತ ಫ್ರೆಂಚ್ ಸಿವಿಲ್ ಎಂಜಿನಿಯರ್ ಆದ ಇವರ ಗೌರವಾರ್ಥ ಪ್ಯಾರಿಸ್ಸಿನ ಗೋಪುರಕ್ಕೆ `ಐಫೆಲ್ ಟವರ್' ಹೆಸರು ಇಡಲಾಗಿದೆ. ಅಮೆರಿಕಾದ `ಸ್ಟ್ಯಾಚ್ಯೂ ಆಫ್ ಲಿಬರ್ಟಿ' ಚೌಕಟ್ಟು ನಿರ್ಮಿಸಿದವರೂ ಇವರೇ.

1913: ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕ ದೊಡ್ಡೇರಿ ವೆಂಕಟಗಿರಿ ರಾವ್ (28-12-1913ರಿಂದ 26-5-2004) ಅವರು ಸೊರಬ ತಾಲ್ಲೂಕಿನ ದೊಡ್ಡೇರಿ ಹಳ್ಳಿಯಲ್ಲಿ ಜನಿಸಿದರು.

1902: ಸಾಹಿತಿ ರೊದ್ದ ಲಕ್ಷ್ಮೀನರಸಿಂಹಯ್ಯ ಜನನ.

1896: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ವಂದೇ ಮಾತರಂ' ಗೀತೆಯನ್ನು ಹಾಡಲಾಯಿತು.

1885: ಭಾರತ ರಾಷ್ಟ್ರೀಯ ಕಾಂಗ್ರೆಸಸಿನ ಮೊತ್ತ ಮೊದಲ ಅಧಿವೇಶನ ಬಾಂಬೆಯ (ಈಗಿನ ಮುಂಬೈ) ಗೋಕುಲ್ ದಾಸ್ ತೇಜ್ ಪಾಲ್ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು. ಡಬ್ಲ್ಯೂ.ಸಿ. ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು. 72 ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

No comments:

Advertisement