ಇಂದಿನ ಇತಿಹಾಸ
ಡಿಸೆಂಬರ್ 29
ಭಾರತೀಯ ತೈಲಚಿತ್ರ ಕಲೆಯಲ್ಲಿ ಹೊಸ ಶೈಲಿಯ ಹುಟ್ಟಿಗೆ ಕಾರಣರಾದ ಹೆಸರಾಂತ ಕಲಾವಿದ ಮಂಜಿತ್ ಬಾವಾ (67) ಅವರು ದಕ್ಷಿಣ ದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ದೆಹಲಿಯ ಕಲಾ ಕಾಲೇಜು ಹಾಗೂ ಲಂಡನ್ನಿನ ಪ್ರಿಂಟಿಂಗ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ ಬಾವಾ ಅವರು 1964 ರಲ್ಲಿ ತಮ್ಮ ವರ್ಣ ಚಿತ್ರದ ವೃತ್ತಿ ಜೀವನವನ್ನು ಲಂಡನ್ ಸಿಲ್ಕ್ ಸ್ಕ್ರೀನ್ ಪ್ರಿಂಟ್‌ನಲ್ಲಿ ಪ್ರಾರಂಭಿಸಿದ್ದರು.
2008: ಬೆಂಗಳೂರು ನಗರದ ಈಜಿಪುರದ ಭೂಮಿಯನ್ನು ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆಗೆ ನೀಡುವ ಸರ್ಕಾರದ ನಿರ್ಣಯ ಕುರಿತಂತೆ ಮುಖ್ಯಮಂತ್ರಿಗಳ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯ ಸರ್ಕಾರವು ಬೆಂಗಳೂರು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿತು.
2008: ನೇಪಾಳವನ್ನು ಗಣರಾಜ್ಯವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾವೊವಾದಿಗಳು ವಿಶ್ವವಿಖ್ಯಾತ ಪಶುಪತಿನಾಥ ದೇಗುಲದಲ್ಲಿ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸುವ ಸುಮಾರು ಮೂರು ಶತಮಾನಗಳಷ್ಟು ಹಳೆಯ ಪದ್ಧತಿ ತೆಗೆದುಹಾಕುವಲ್ಲಿ ಕೊನೆಗೂ ಯಶಸ್ವಿಯಾದರು. ಅರಸೊತ್ತಿಗೆ ಅಂತ್ಯಗೊಂಡ ತತ್ ಕ್ಷಣವೇ ಈ ಪ್ರಕ್ರಿಯೆ ಸದ್ದಿಲ್ಲದೆಯೇ ಆರಂಭಗೊಂಡಿತ್ತು. ಕೊನೆಗೂ ಈ ಪದ್ಧತಿ ಅಂತ್ಯಗೊಳಿಸಿ ಸ್ಥಳೀಯ ಬ್ರಾಹ್ಮಣರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಮಾವೋವಾದಿ ಸರ್ಕಾರ ಸಫಲವಾಯಿತು. ಪಶುಪತಿನಾಥ ದೇಗುಲದ ಪೂಜೆಗೆ ದಕ್ಷಿಣ ಭಾರತದ ಭಟ್ಟ ಬ್ರಾಹ್ಮಣರ ಬದಲು ಪ್ರಧಾನ ಅರ್ಚಕ ವಿಷ್ಣು ಪ್ರಸಾದ ದಹಲ್ ಸೇರಿದಂತೆ ನೇಪಾಳದ ಭಟ್ಟ ಬ್ರಾಹ್ಮಣರನ್ನು ನೇಮಿಸಲಾಯಿತು. ಈ ನಡುವೆ, ದೇಗುಲದ ಪ್ರಧಾನ ಅರ್ಚಕ ಮಹ್ಗಾಲೇಶ್ವರ ಭಟ್ಟ, ಅರ್ಚಕರಾದ ಕೃಷ್ಣ ಯೋಗ ಭಟ್ಟ ಮತ್ತು ಕೆ.ಪಿ.ರಾಮಚಂದ್ರ ಭಟ್ಟ ಅವರ ರಾಜೀನಾಮೆಯನ್ನು ಪಶುಪತಿ ಪ್ರದೇಶಾಭಿವೃದ್ಧಿ ಮಂಡಳಿ (ಪಿಎಡಿಟಿ) ಅಂಗೀಕರಿಸಿತು. ನೇಪಾಳಿ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದರೊಂದಿಗೆ ತಾವು ಪೂಜಾ ಕೈಂಕರ್ಯ ಆರಂಭಿಸುವುದಾಗಿ ನೂತನ ಪ್ರಧಾನ ಅರ್ಚಕ ದಹಲ್ ಹೇಳಿದರು. 1747 ರಿಂದ ನೇಪಾಳದ ದೊರೆಗಳು ಪಶುಪತಿನಾಥ ದೇಗುಲದ ಪೂಜೆಗೆ ದಕ್ಷಿಣ ಭಾರತದ ಬ್ರಾಹ್ಮಣರನ್ನು ನೇಮಿಸಿಕೊಳ್ಳಲು ಆರಂಭಿಸಿದ್ದರು.
2008: ಭಾರತೀಯ ತೈಲಚಿತ್ರ ಕಲೆಯಲ್ಲಿ ಹೊಸ ಶೈಲಿಯ ಹುಟ್ಟಿಗೆ ಕಾರಣರಾದ ಹೆಸರಾಂತ ಕಲಾವಿದ ಮಂಜಿತ್ ಬಾವಾ (67) ಅವರು ದಕ್ಷಿಣ ದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ದೀರ್ಘಕಾಲದಿಂದ ಅಸ್ವಸ್ಥರಾಗಿದ್ದ ಮಂಜಿತ್ ಬಾವಾ ಮೂರು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದರು. ದೆಹಲಿಯ ಕಲಾ ಕಾಲೇಜು ಹಾಗೂ ಲಂಡನ್ನಿನ ಪ್ರಿಂಟಿಂಗ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ ಬಾವಾ ಅವರು 1964 ರಲ್ಲಿ ತಮ್ಮ ವರ್ಣ ಚಿತ್ರದ ವೃತ್ತಿ ಜೀವನವನ್ನು ಲಂಡನ್ ಸಿಲ್ಕ್ ಸ್ಕ್ರೀನ್ ಪ್ರಿಂಟ್‌ನಲ್ಲಿ ಪ್ರಾರಂಭಿಸಿದ್ದರು. ಕಂದು ಮತ್ತು ಬೂದು ಬಣ್ಣಗಳನ್ನಷ್ಟೇ ಬಳಸುತ್ತಿದ್ದ ಪಾಶ್ಚಾತ್ಯ ಚಿತ್ರ ಕಲೆಯಲ್ಲಿ ಭಾರತೀಯರ ನೆಚ್ಚಿನ ಕೆಂಪು ಮತ್ತು ನೇರಳೆ ವರ್ಣವನ್ನು ಪಾರದರ್ಶಿಕೆಯಲ್ಲಿ ಬಳಸುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
2008: ಪಂಡಿತ ಮಾಧವ ಗುಡಿ ಅವರ ಪುತ್ರ ಪ್ರಸನ್ನ ಗುಡಿ ಅವರು ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ನಿರಂತರವಾಗಿ 24 ಗಂಟೆ 16 ನಿಮಿಷಗಳವರೆಗೆ ಹಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿಯೇ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ತೋಡಿ ರಾಗದ ಮೂಲಕ ಗಾಯನ ಆರಂಭಿಸಿದ ಪ್ರಸನ್ನ, ಭೈರವಿ ರಾಗದಲ್ಲಿ ಕೊನೆಯ ಹಾಡನ್ನು ಹಾಡುವುದರೊಂದಿಗೆ ಗಿನ್ನೆಸ್ ದಾಖಲೆಗೆ ಅರ್ಹರಾದರು. ಈ ಹಿಂದೆ ಪಾಶ್ಚಾತ್ಯ ಸಂಗೀತದಲ್ಲಿ 24 ಗಂಟೆ 3 ಸೆಕೆಂಡುಗಳವರೆಗೆ ಹಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಅಮೆರಿಕದ ಕ್ರಿಸ್ ಚಿಟ್ಹಾನ್ ಎಂಬವರು ಹೆಸರು ದಾಖಲಿಸಿದ್ದರು. ಪ್ರಸನ್ನ ಗುಡಿಯವರು ಶಾಸ್ತ್ರೀಯ ಸಂಗೀತದಲ್ಲಿ ನಿರಂತರವಾಗಿ ಹಾಡುವ ಮೂಲಕ ಹಳೆಯ ದಾಖಲೆಯನ್ನು ಮೆಟ್ಟಿ ನಿಂತರು. ಧಾರವಾಡದ ಕಿರಾಣಾ ಸಂಗೀತ ಅಕಾಡೆಮಿ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸ್ವರ ಮಹಾಯಾಗದಲ್ಲಿ ನೂರಾರು ಜನ ಸಂಗೀತ ರಸಿಕರು ಚಪ್ಪಾಳೆ ತಟ್ಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಪ್ರಸನ್ನ ಗುಡಿಯವರಿಗೆ ಶುಭಾಶಯ ತಿಳಿಸಿದರು. ಗಿನ್ನೆಸ್ ದಾಖಲೆ ನಿರ್ಮಿಸಿದ ನಂತರ ಅವರ ತಂದೆ ಮತ್ತು ತಾಯಿಗೆ ನಮಸ್ಕರಿಸಿದರು. ಹಿಂದಿನ ದಿನ ಬೆಳಿಗ್ಗೆ 9ಕ್ಕೆ ಗಾಯನ ಆರಂಭಿಸಿದ ಪ್ರಸನ್ನ, ಈದಿನ ಬೆಳಿಗ್ಗೆ 11.40ಕ್ಕೆ ಹಾಡುವುದನ್ನು ನಿಲ್ಲಿಸಿದರು. ಆರಂಭದಲ್ಲಿದ್ದ ಉತ್ಸಾಹ, ಧ್ವನಿ ದಾಖಲೆ ನಿರ್ಮಿಸುವವರೆಗೂ ಒಂದೇ ತೆರನಾಗಿ ಇತ್ತು. ಯಾವುದೇ ಸಂದರ್ಭದಲ್ಲೂ ಅವರು ಬಳಲಿದಂತೆ ಕಂಡುಬರಲಿಲ್ಲ.
2007: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯು ರೂ 105 ರಷ್ಟು ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ದಿನದ ವಹಿವಾಟು ಅಂತ್ಯಗೊಂಡಾಗ ಪ್ರತಿ 10 ಗ್ರಾಂ ಚಿನ್ನದ ದರವು ರೂ 10715ಕ್ಕೆ ತಲುಪಿತು. ಈ ಹಿಂದೆ ನವೆಂಬರ್ 26, 2007ರಲ್ಲಿ ಪ್ರತಿ 10ಗ್ರಾಂ ಚಿನ್ನದ ಬೆಲೆಯು ರೂ 10695 ರಷ್ಟಾಗಿತ್ತು. ಉದ್ಯಮ ಬೇಡಿಕೆಗೆ ಸ್ಪಂದಿಸಿದ ಬೆಳ್ಳಿಯಲ್ಲೂ ಸಹ ದರ ಏರಿಕೆಯಾಗಿ, ಪ್ರತಿ ಕೆಜಿಗೆ ರೂ 19455ಕ್ಕೆ ತಲುಪಿತು.
2007: ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಹ್ವಾನ ನೀಡಿದರು. ಅದಕ್ಕೆ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದರು.
2007: ಉತ್ತರ ಪ್ರದೇಶದ ಮೂರು ನ್ಯಾಯಾಲಯಗಳಲ್ಲ್ಲಿ ನವೆಂಬರ್ 23ರಂದು ಸರಣಿ ಬಾಂಬ್ ಸ್ಫೋಟಿಸಿದ ಶಂಕಿತ ಹೂಜಿ ಉಗ್ರನೊಬ್ಬನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಮುಖ್ತರ್ ಆಲಿಯಾಸ್ ರಾಜು ಬಂಧಿತ ಉಗ್ರ. ಈತ ವಾರಣಾಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಮೃತರಾಗಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
2007: ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಅವರು ಮೆಲ್ಬೋರ್ನಿನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನೂತನ ವಿಕ್ರಮ ಸಾಧಿಸಿದರು. ಗಿಲ್ ಕ್ರಿಸ್ಟ್ ಅವರು ಅತಿ ಹೆಚ್ಚು ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಇಯಾನ್ ಹೀಲಿ (395) ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪಂದ್ಯದ ನಾಲ್ಕನೇ ದಿನ ಬ್ರೆಟ್ ಲೀ ಬೌಲಿಂಗಿನಲ್ಲಿ ವಾಸೀಂ ಜಾಫರ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಗಿಲಿ ಈ ಗೌರವ ಪಡೆದರು. ಅವರು ಈ ಪಂದ್ಯದಲ್ಲಿ ಒಟ್ಟು ಎಂಟು ಕ್ಯಾಚ್ ಪಡೆದರು. ಇದರೊಂದಿಗೆ ಅವರು ಒಟ್ಟು ಬಾರಿ 399 ಮಂದಿ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದರು. ಗಿಲಿ ಆಡಿರುವ ಟೆಸ್ಟ್ ಸಂಖ್ಯೆ 93. ಈ ವಿಭಾಗದಲ್ಲಿ ವಿಶ್ವ ದಾಖಲೆಯು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅವರ ಹೆಸರಿನಲ್ಲಿ ಇದೆ. ಅವರು ಒಟ್ಟು 406 ಸಲ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾಗಿದ್ದರು.
2007: ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ವಿಜಯಾ ಬ್ಯಾಂಕಿನ 1000ನೇ ಶಾಖೆಯನ್ನು, ಬನ್ನೇರುಘಟ್ಟ ರಸ್ತೆಯ ಮುಲ್ಕಿ ಸುಂದರ ರಾಮಶೆಟ್ಟಿ ನಗರದಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಉದ್ಘಾಟಿಸಿದರು.
2007: ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಬಿಡಿಸಲಾರದ ಬಂಧ ಇರುವುದನ್ನು ಸಂಕೇತಿಸುವ ಹೊಸ ಬ್ರ್ಯಾಂಡ್ ಲಾಂಛನದೊಂದಿಗೆ ಕೆನರಾ ಬ್ಯಾಂಕ್ ಕಂಗೊಳಿಸಿತು. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹೊಸ ಲಾಂಛನವನ್ನು ಅನಾವರಣಗೊಳಿಸಿದರು.
2007: ಹೊಸಪೇಟೆಯ ಬಿ.ಎಸ್. ಆನಂದ್ ಸಿಂಗ್ ಮತ್ತು ಕುಟುಂಬದವರು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮರಿಯಾನೆ `ಯಶಸ್ವಿ'ಯನ್ನು ಕೊಡುಗೆಯಾಗಿ ನೀಡಿದರು. ಧಾರ್ಮಿಕ ವಿಧಿವಿಧಾನ ಹಾಗೂ ದಾಖಲೆ ಹಸ್ತಾಂತರಿಸುವ ಮೂಲಕ ಯಶಸ್ವಿಯನ್ನು ವಿಧ್ಯುಕ್ತವಾಗಿ ದೇವಳಕ್ಕೆ ಅರ್ಪಿಸಲಾಯಿತು.
2007: ಮೈಸೂರಿನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ದೇಜಗೌ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ವಿಮರ್ಶಕ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರಿಗೆ `ವಿಶ್ವಮಾನವ ಪ್ರಶಸ್ತಿ', ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರಿಗೆ `ಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ' ಮತ್ತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ `ಸಾವಿತ್ರಮ್ಮ ದೇಜಗೌ ಪ್ರಶಸ್ತಿ'ಯನ್ನು ಲೋಕಸಭಾ ಸದಸ್ಯ ಎಸ್. ಬಂಗಾರಪ್ಪ ಅವರು ಪ್ರದಾನ ಮಾಡಿದರು.
2007: ದಕ್ಷಿಣ ಏಷ್ಯಾದಲ್ಲಿಯೇ ಮೊತ್ತ ಮೊದಲನೆಯದಾದ, 60 ಸಾವಿರ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್ ಪಿ ಜಿ) ಸಂಗ್ರಹಿಸುವ ವಿಶಿಷ್ಟ ಸುರಕ್ಷಿತ ನೆಲದಾಳದ ಸುರಂಗ ಕಳೆದ ವಾರ ವಿಶಾಕಪಟ್ಟಣದಲ್ಲಿ ಕಾರ್ಯಾರಂಭ ಮಾಡಿತು ಎಂದು ವರುಣ್ ಶಿಪ್ಪಿಂಗ್ ಸಂಸ್ಥೆ ಪ್ರಕಟಿಸಿತು. ಈ ಸಂಸ್ಥೆಗೆ ಸೇರಿರುವ 40 ಸಾವಿರ ಮೆಟ್ರಿಕ್ ಟನ್ನುಗಳಷ್ಟು ಎಲ್ ಪಿ ಜಿ ಸಾಗಿಸುವ ಮಹರ್ಷಿ ಭಾರದ್ವಾಜ್ ನೌಕೆಯಿಂದ 39,200 ಮೆಟ್ರಿಕ್ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲವನ್ನು ಮೊದಲ ಬಾರಿಗೆ ಈ ಸುರಂಗದಲ್ಲಿ ತುಂಬಲಾಯಿತು ಎಂದು ಸಂಸ್ಥೆ ಹೇಳಿತು. ಇಷ್ಟು ಭಾರಿ ಪ್ರಮಾಣದ ಎಲ್ ಪಿ ಜಿ ಹೊತ್ತ ನೌಕೆಯು ದೇಶಕ್ಕೆ ಆಗಮಿಸಿದ್ದು ಕೂಡಾ ಕೂಡ ಇದೇ ಮೊದಲು. ಫ್ರಾನ್ಸಿನ ತೈಲ ದೈತ್ಯ ಸಂಸ್ಥೆ ಟೋಟಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಎಚ್ ಪಿ ಸಿ ಎಲ್) ಸಹಯೋಗದ ದಕ್ಷಿಣ ಏಷ್ಯಾ ಎಲ್ ಪಿ ಜಿ ಕಂಪೆನಿಯು ಈ ಸುರಂಗವನ್ನು ಕೊರೆಯಿತು. ಸಮುದ್ರ ಪಾತಳಿಯಿಂದ 162 ಮೀಟರ್ ಆಳದಲ್ಲಿ ಗಟ್ಟಿ ಬಂಡೆ ಕೊರೆದು ಈ ಸುರಂಗ ನಿರ್ಮಿಸಲಾಯಿತು. ನೈಸರ್ಗಿಕ ಪ್ರಕೋಪ, ವಿಧ್ವಂಸಕ ಕೃತ್ಯ ಮತ್ತು ವೈಮಾನಿಕ ಬಾಂಬ್ ದಾಳಿಯಿಂದಲೂ ಸುರಕ್ಷಿತವಾಗಿರುವಂತೆ ಈ ಸುರಂಗ ನಿರ್ಮಿಸಲಾಗಿದ್ದು, ಇದು ಬೆಂಕಿ ನಿರೋಧಕ ಮತ್ತು ಸೋರಿಕೆ ಮುಕ್ತವಾಗಿದೆ. ವಿಶಾಖಪಟ್ಟಣ ಬಳಿಯ ಲೋವಾ ಗಾರ್ಡನ್ ಎಂಬಲ್ಲಿ ಈ ವಿಶಿಷ್ಟ ಸುರಂಗವು 333 ಕೋಟಿ ರೂ. ವೆಚ್ಚದಲ್ಲಿ ಅಸ್ತಿತ್ವಕ್ಕೆ ಬಂದಿದೆ.
2006: ಕ್ಯಾನ್ಸರ್ ಕುರಿತು ನಡೆಸಿದ ಸಂಶೋಧನೆಗಾಗಿ ಭಾರತೀಯ ಸಂಜಾತ ವಿಜ್ಞಾನಿ ಶಿಲಾದಿತ್ಯ ಸೇನ್ ಗುಪ್ತ ಅವರು ಅಮೆರಿಕದ 41 ಡಾಲರ್ ಮೌಲ್ಯದ `ಇರಾ ಆಫ್ ಹೋಪ್ ಸ್ಕಾಲರ್ ಅವಾರ್ಡ್' ಗೆ ಪಾತ್ರರಾದರು. ಹಾರ್ವರ್ಡ್ ಎಂಐಟಿಯಲ್ಲಿ ವೈದ್ಯಕೀಯ ವಿಭಾಗ ಸಹಾಯಕ ಪ್ರೊಫೆಸರ್ ಆಗಿರುವ ಸೇನ್ ಗುಪ್ತ ಅವರು `ಸ್ತನದ ಕ್ಯಾನ್ಸರ್' ಬಗ್ಗೆ ನಡೆಸಿದ ಸಂಶೋಧನೆಗಾಗಿ ಈ ಪ್ರಶಸ್ತಿಗೆ ಪಾತ್ರರಾದರು.
2006: ವಿಶ್ವಮಾನವ ಸಂಸ್ಥೆಯು ನೀಡುವ ಪ್ರತಿಷ್ಠಿತ `ವಿಶ್ವ ಮಾನವ' ಪ್ರಶಸ್ತಿಯನ್ನು ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು..
2006: ಕರ್ನಾಟಕದ ಖ್ಯಾತ ರಂಗಕರ್ಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್. ನಾಗೇಶ್ ಹಾಗೂ ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಅವರು ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರು. ಇದರ ಜತೆಗೆ ತಬಲಾ ವಾದಕ ಕಿಶನ್ ಮಹಾರಾಜ್, ಪಿಟೀಲು ವಿದ್ವಾನ್ ಟಿ.ಎನ್. ಕೃಷ್ಣನ್, ಕಥಕ್ ನರ್ತಕಿ ರೋಹಿಣಿ ಭಾತೆ, ಖ್ಯಾತ ರಂಗಕರ್ಮಿ ಗುರುಶರಣ್ ಸಿಂಗ್ ಅವರನ್ನು `ಅಕಾಡೆಮಿ ರತ್ನ' (ಫೆಲೋ) ಆಗಿ ಆಯ್ಕೆ ಮಾಡಲಾಯಿತು. ಸಂಗೀತ ವಿಭಾಗದಲ್ಲಿ ತಬಲಾ ವಾದಕ ಕುಮಾರ್ ಬೋಸ್, ಹಿಂದೂಸ್ಥಾನಿ ಗಾಯಕ ರಶೀದ್ ಖಾನ್, ಸಿತಾರ್ ವಾದಕ ಶಾಹಿದ್ ಪರ್ವೇಜ್ ಖಾನ್, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಡಿ. ಪಶುಪತಿ ಹಾಗೂ ಚೆಂಗಲ್ ಪಟ್ಟು ರಂಗನಾಥನ್, ಕರ್ನಾಟಕ ಶೈಲಿಯ ಚಿತ್ರವೀಣಾ ವಾದಕ ಎನ್. ರವಿಕಿರಣ್, ಮೃದಂಗ ಪಟು ತಿರುವಾರೂರು ಭಕ್ತವತ್ಸಲಂ ಅವರು ಪ್ರಶಸ್ತಿಗೆ ಪಾತ್ರರಾದರು. ನೃತ್ಯ ವಿಭಾಗದಲ್ಲಿ ಕೊಟ್ಟಕ್ಕಲ್ ಚಂದ್ರಶೇಖರನ್ (ಕಥಕ್ಕಳಿ), ಕಲಾ ಮಂಡಲಂ ವಿಮಲಾ ಮೆನನ್ (ಮೋಹಿನಿಯಾಟ್ಟಂ), ಮತ್ತು ಪಶುಮರ್ತಿ ರಟ್ಟಯ್ಯ (ಕೂಚುಪುಡಿ), ನಾಟಕ ವಿಭಾಗದಲ್ಲಿ ಇ. ಜಯಚಂದ್ರ ಸಿಂಗ್ (ನಿರ್ದೇಶನ) ಮತ್ತು ತಮಿಳುನಾಡಿನ ಕೆ. ಅರ್ವಾಮುದ ಚಾರಿಯರ್ (ಹರಿಕಥೆ) ಈ ಗೌರವಕ್ಕೆ ಪಾತ್ರರಾದರು.
2006: ಸತೀಶ್ ಅಲಿಯಾಸ್ ಸುರೇಂದ್ರ ಎಂಬ ಸರಣಿ ಹಂತಕನೊಬ್ಬನನ್ನು ಉತ್ತರ ಪ್ರದೇಶದ ನೋಯಿಡಾ ಪೊಲೀಸರು ಬಂಧಿಸಿ, ಆತ ಕೊಲೆ ಮಾಡಿ ನಾಲೆಯಲ್ಲಿ ಬಿಸಾಡಿದ್ದ ಶವಗಳ ಅಸ್ಥಿ ಪಂಜರಗಳನ್ನು ವಶಪಡಿಸಿಕೊಂಡರು. ಪಾಯಲ್ ಎಂಬ ಬಾಲಕಿಯ ಅಪಹರಣ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿದ್ದಾಗ ಈ ಸರಣಿ ಹಂತಕ ಸಿಕ್ಕಿಬಿದ್ದ. ನೋಯಿಡಾ ಸಮೀಪದ ನಿತಾರಿ ಎಂಬ ಗ್ರಾಮದಲ್ಲಿ ಪೊಲೀಸರು ಈತನನ್ನು ಬಂಧಿಸಿದರು. ತಾನು ಈವರೆಗೆ ಆರು ಮಕ್ಕಳನ್ನು ಕೊಲೆ ಮಾಡಿರುವುದಲ್ಲದೆ ಪಾಯಲಳನ್ನು ಕೂಡ ತಾನೇ ಅಪಹರಿಸಿ, ನಂತರ ಕೊಲೆ ಮಾಡಿದ್ದಾಗಿ ವಿಚಾರಣೆ ಸಮಯದಲ್ಲಿ ಆತ ಒಪ್ಪಿಕೊಂಡ. `ಸಿಹಿ ಮತ್ತು ಚಾಕಲೇಟುಗಳನ್ನು ತೋರಿಸಿ, ಮಕ್ಕಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ನಂತರ ಈ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಕೊಂದು ಹಾಕಿ ಶವಗಳನ್ನು ನಾಲೆಗೆ ಎಸೆಯುತ್ತಿದ್ದೆೆ' ಎಂದು ಸುರೇಂದ್ರ ತಾನು ಅನುಸರಿಸುತ್ತಿದ್ದ ತಂತ್ರವನ್ನು ವಿವರಿಸಿದ. ಹಂತಕನು ಮೂಲತಃ ಉತ್ತರಾಂಚಲದ ಅಲ್ಮೋರಾದವನು. ಒಂದೂವರೆ ವರ್ಷದಿಂದ ಈಚೆಗೆ ಈ ಪರಿಸರದಿಂದ 38 ಮಕ್ಕಳು ಕಾಣೆಯಾಗಿದ್ದರು.
2006: ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಇಂಗ್ಲಿಷ್-ಕನ್ನಡ ನಿಘಂಟನ್ನು ವೆಬ್ ಸೈಟಿನಲ್ಲಿ ಹಾಕಲು ವಿಶ್ವ ವಿದ್ಯಾಲಯವು ನಿರ್ಧರಿಸಿತು.
2006: ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಭಾರತೀಯ ಸಂಜಾತ ನ್ಯೂಜೆರ್ಸಿಯ ಸಾರಿಗೆ ಆಯುಕ್ತ ಕ್ರಿಸ್ ಕೊಲ್ಲೂರಿ (38) ಅವರು ಅಮೆರಿಕದ ನ್ಯೂಜೆರ್ಸಿ ಪ್ರಾಂತ್ಯದ ರಾಜ್ಯಪಾಲರಾಗಿ (ಗವರ್ನರ್) ಒಂದು ದಿನದ ಮಟ್ಟಿಗೆ ಕಾರ್ಯ ನಿರ್ವಹಿಸಿದರು. ರಾಜ್ಯಪಾಲ ಜಾನ್ ಕೊರಿಜಿನ್ ಹಾಗೂ ಅವರ ನಂತರದ ಅಧಿಕಾರಿಗಳಾದ ಸೆನೆಟ್ ಅಧ್ಯಕ್ಷ ರಿಚರ್ಡ್ ಕೊಡೇ ಮತ್ತು ಸ್ಪೀಕರ್ ಹೋಯಿ ರಾಬರ್ಟ್ ರಜೆಯ ಮೇಲೆ ತೆರಳಿದ್ದರಿಂದ ಕೊಲ್ಲೂರಿ `ಏಕ್ ದಿನ್ ಕಾ ಸುಲ್ತಾನ್' ಆಗಬೇಕಾಯಿತು.
2005: ಅಂತಾರಾಷ್ಟ್ರೀಯ ಬೆಳಕು ತಜ್ಞ ವಿ.ರಾಮಮೂರ್ತಿ ಅವರಿಗೆ ರಾಷ್ಟ್ರೀಯ ನಾಟಕ ಶಾಲೆಯ ಡಾ. ಬಿ.ವಿ. ಕಾರಂತ ಪ್ರಶಸ್ತಿ ಲಭಿಸಿತು. ರಾಮಮೂರ್ತಿ ಅವರು 40 ವರ್ಷಗಳಿಂದ ರಂಗಭೂಮಿಯಲ್ಲಿ ಶ್ರೇಷ್ಠ ಬೆಳಕು ತಜ್ಞ ಹಾಗೂ ನಟರಾಗಿ ದುಡಿದವರು.
2005: ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ (ಟಿ ಐ ಎಫ್ ಆರ್ ಯು) ಪ್ರೊ. ಆರ್. ಪರಿಮಳ ಅವರಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ವಿಜ್ಞಾನ ಅಕಾಡೆಮಿ `ತ್ವಾಸ್' ನೀಡುವ ಪ್ರಸಕ್ತ ವರ್ಷದ ಪ್ರಶಸ್ತಿ ಲಭಿಸಿತು. ಇದರೊಂದಿಗೆ `ತ್ವಾಸ್' ನೀಡುವ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಯಿತು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಈ ಪ್ರಶಸ್ತಿಯು 10,000 ಅಮೆರಿಕನ್ ಡಾಲರ್ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
2005: ಅಪರಾಧ ವರದಿಗಾರಿಕೆಯಲ್ಲಿ ವಿಶೇಷ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ಕರಣಂ ರಾಜಾರಾವ್ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಂತಪುರ ಜಿಲ್ಲೆ ಮಡಕಶಿರಾ ಬಳಿಯ ಫಳಾರಂನಲ್ಲಿ ಜನಿಸಿದ್ದ ರಾಜಾರಾವ್ ಪತ್ರಿಕಾರಂಗದಲ್ಲಿ 'ಕ್ರೈಂ ರಾಜಾರಾವ್' ಎಂದೇ ಹೆಸರು ಪಡೆದಿದ್ದರು. 'ಸಂಯುಕ್ತ ಕರ್ನಾಟಕ' ಪತ್ರಿಕೆ ಮೂಲಕ 1962ರಲ್ಲಿ ಪತ್ರಿಕಾರಂಗಕ್ಕೆ ಕಾಲಿಟ್ಟ ರಾಜಾರಾವ್ 'ವಾಯ್ಸ್ ಆಫ್ ಡೆಕ್ಕನ್', 'ಮುಂಜಾನೆ', 'ಸಂಜೆ ನುಡಿ', 'ಇಂದು' ಪತ್ರಿಕೆಗಳಲ್ಲಿ ಹಾಗೂ ಸಿಟಿ ಕೇಬಲ್ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದರು.
2005: ನವದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆಗಳ ಸಂತ್ರಸ್ತರಿಗೆ ಹೆಚ್ಚುವರಿ ಎಕ್ಸ್ ಗ್ರೇಷಿಯಾ ಸೇರಿದಂತೆ ಪರಿಹಾರ ಧನ ಮತ್ತು ಪುನರ್ ವಸತಿಗೆ 715 ಕೋಟಿ ರೂಪಾಯಿಗಳ ನೆರವನ್ನು ಕೇಂದ್ರ ಸರ್ಕಾರವು ಘೋಷಿಸಿತು.
1997: ನಿಗೂಢ `ಕೋಳಿಜ್ವರ' ತಡೆಯುವ ಸಲುವಾಗಿ ಹಾಂಗ್ ಕಾಂಗ್ 14 ಲಕ್ಷ ಕೋಳಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಿತು. `ಕೋಳಿ ಜ್ವರ' ಇಲ್ಲಿ ನಾಲ್ಕು ಮಂದಿಯನ್ನು ಬಲಿತೆಗೆದುಕೊಂಡಿತ್ತು.
1986: ಮಾಜಿ ಬ್ರಿಟಿಷ್ ಪ್ರಧಾನಿ ಹರೋಲ್ಡ್ ಮ್ಯಾಕ್ ಮಿಲನ್ ತಮ್ಮ 92ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ಸಸೆಕ್ನಲ್ಲಿ ನಿಧನರಾದರು.
1972: `ಲೈಫ್' ಮ್ಯಾಗಜಿನ್ 36 ವರ್ಷಗಳ ಪ್ರಕಟಣೆಯ ಬಳಿಕ ಮುಚ್ಚಿತು.
1944: `ಇಂಡಿಯಾ ಟುಡೆ' ಮ್ಯಾಗಜಿನ್ ಸ್ಥಾಪಕ ಅರುಣ್ ಪುರೀ ಹುಟ್ಟಿದ ದಿನ.
1942: ಚಿತ್ರನಟ ರಾಜೇಶ್ ಖನ್ನಾ ಹುಟ್ಟಿದ ದಿನ. (ಅವರ ಪುತ್ರಿ ಟ್ವಿಂಕಲ್ ಹುಟ್ಟಿದ್ದು ಕೂಡಾ ಇದೇ ತಾರೀಕಿನಂದು!)
1939: ಖ್ಯಾತ ಗಾಯಕ ಸಿ. ಅಶ್ವತ್ಥ್ ಜನನ.
1904: ರಾಷ್ಟ್ರಕವಿ ಕುವೆಂಪು (ಕೆ.ವಿ. ಪುಟ್ಟಪ್ಪ) (29-12-1904ರಿಂದ 10-11-1994) ಅವರು ವೆಂಕಟಪ್ಪ- ಹೇಮಾವತಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು.
1899: ಸಾಹಿತಿ ಡಿ.ಕೆ. ಭಾರದ್ವಾಜ್ ಜನನ.
1896: ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಜನನ.
1895: ಲೆಫ್ಟಿನೆಂಟ್ ಆರ್ಕಿಬಾಲ್ಡ್ ಬ್ಲೇರ್ ಮತ್ತು ಲೆಫ್ಟಿನೆಂಟ್ ಆರ್. ಎಚ್. ಕೊಲ್ ಬ್ರೂಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಧ್ಯಯನಕ್ಕಾಗಿ ಭಾರತದಿಂದ ಹೊರಟರು. ಬ್ಲೇರ್ ಗೌರವಾರ್ಥ ಒಂದು ದ್ವೀಪಕ್ಕೆ `ಪೋರ್ಟ್ ಬ್ಲೇರ್' ಹೆಸರನ್ನು ಇಡಲಾಯಿತು.
1844: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊತ್ತ ಮೊದಲ ಅಧ್ಯಕ್ಷ ವುಮೇಶ್ ಚಂದ್ರ ಬ್ಯಾನರ್ಜಿ 1844-1906) ಹುಟ್ಟಿದ ದಿನ.
1809: ವಿಲಿಯಂ ಎವರ್ಟ್ ಗ್ಲಾಡ್ ಸ್ಟೋನ್ (1809-1898) ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಇವರು ನಾಲ್ಕು ಬಾರಿ ಗ್ರೇಟ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು.
1808: ಅಮೆರಿಕಾದ 17ನೇ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ (1808-1875) ಹುಟ್ಟಿದ ದಿನ. ದೋಷಾರೋಪಕ್ಕೆ ಗುರಿಯಾದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷರು ಇವರು.
No comments:
Post a Comment