Wednesday, January 27, 2010

ಇಂದಿನ ಇತಿಹಾಸ History Today ಡಿಸೆಂಬರ್ 30

ಇಂದಿನ ಇತಿಹಾಸ

ಡಿಸೆಂಬರ್ 30

ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ.ಮಾಲತಮ್ಮ (84) ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ರಂಗಭೂಮಿಯ ದಂತಕಥೆಯಾದ ಗುಬ್ಬಿ ವೀರಣ್ಣ ಅವರ ದ್ವಿತೀಯ ಪುತ್ರಿಯಾದ ಮಾಲತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರ ನಾಟಕ ಕಂಪೆನಿಯ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿ ಸೀತೆ, ಮಂಡೋದರಿ ಪಾತ್ರಗಳಲ್ಲಿ ದೊಡ್ಡ ಹೆಸರು ಮಾಡಿದರು.

2008: ಏಳು ತಿಂಗಳಿಂದ ಪಕ್ಷೇತರರ ಕೃಪೆಯಲ್ಲಿದ್ದ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಭಾರಿ ಗೆಲುವಿನ ಹೆಮ್ಮೆ. ವಿಧಾನಸಭೆಯ ಎಂಟು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಐದು ಕಡೆ ಗೆಲ್ಲುವುದರ ಮೂಲಕ ಬಿಜೆಪಿ ತನ್ನ ಕಾಲ ಮೇಲೆ ತಾನು ನಿಂತುಕೊಂಡಿತು.. ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ ಒಂದೂ ಸ್ಥಾನ ಗಳಿಸದೆ ತೀವ್ರ ಮುಖಭಂಗ ಅನುಭವಿಸಿತು. ಸಚಿವರಾದ ಬಿಜೆಪಿಯ ಉಮೇಶ್ ಕತ್ತಿ (ಹುಕ್ಕೇರಿ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಆನಂದ ಅಸ್ನೋಟಿಕರ್ (ಕಾರವಾರ), ಶಿವನಗೌಡ ನಾಯಕ (ದೇವದುರ್ಗ), ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ (ದೊಡ್ಡಬಳ್ಳಾಪುರ) ಮತ್ತು ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ (ಮಧುಗಿರಿ), ಎಂ.ಟಿ.ಕೃಷ್ಣಪ್ಪ (ತುರುವೇಕೆರೆ) ಮತ್ತು ಕಲ್ಪನಾ ಸಿದ್ಧರಾಜು (ಮದ್ದೂರು) ಜಯಗಳಿಸಿದರು.

2008: ಒಮರ್ ಅಬ್ದುಲ್ಲಾ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ನಿರ್ಧರಿಸುವುದರೊಂದಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಬಗೆಗೆ ಇದ್ದ ಗೊಂದಲ ನಿವಾರಣೆಯಾಯಿತು. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾದ ಒಮರ್ ಅಬ್ದುಲ್ಲಾ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ ಬಳಿಕ ಎರಡೂ ಪಕ್ಷಗಳ ನಾಯಕರು ಮೈತ್ರಿ ಸರ್ಕಾರ ರಚನೆ ವಿಷಯ ಪ್ರಕಟಿಸಿದರು.

2008: ಬಾಂಗಾದ್ಲೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ವಾಜಿದ್ ನೇತೃತ್ವದ ಅವಾಮಿ ಲೀಗ್ ಮತ್ತು ಮಿತ್ರ ಪಕ್ಷಗಳು ಪ್ರಚಂಡ ವಿಜಯ ಸಾಧಿಸಿದವು. 299 ಕ್ಷೇತ್ರಗಳ ಪೈಕಿ 259 ಕ್ಷೇತ್ರಗಳನ್ನು ಈ ಪಕ್ಷಗಳು ಗೆದ್ದುಕೊಂಡವು. ಅವಾಮಿ ಲೀಗ್ ಒಂದೇ 230 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಹಸೀನಾ ಅವರ ಬದ್ಧ ಎದುರಾಳಿ ಹಾಗೂ ಮತ್ತೊಬ್ಬ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನೇತೃತ್ವದ ಬಾಂಗಾದ್ಲೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕೇವಲ 29 ಕ್ಷೇತ್ರಗಳಿಗಷ್ಟೇ ತೃಪ್ತಿಪಟ್ಟುಕೊಂಡರೆ, ಅವರ ಮಿತ್ರಪಕ್ಷ ಜಮಾತ್-ಎ- ಇಸ್ಲಾಮಿ (ಜೆಇಎಲ್) ಕೇವಲ 2 ಸ್ಥಾನಗಳನ್ನು ಗಳಿಸಿತು.

2008: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ.ಮಾಲತಮ್ಮ (84) ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ರಂಗಭೂಮಿಯ ದಂತಕಥೆಯಾದ ಗುಬ್ಬಿ ವೀರಣ್ಣ ಅವರ ದ್ವಿತೀಯ ಪುತ್ರಿಯಾದ ಮಾಲತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರ ನಾಟಕ ಕಂಪೆನಿಯ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿ ಸೀತೆ, ಮಂಡೋದರಿ ಪಾತ್ರಗಳಲ್ಲಿ ದೊಡ್ಡ ಹೆಸರು ಮಾಡಿದರು. ತೆಲುಗು ನಾಟಕಗಳಲ್ಲೂ ಅವರು ಅಭಿನಯಿಸಿದ್ದರು. 'ಲವಕುಶ' ನಾಟಕ ನಡೆದಿದ್ದಾಗ ಒಮ್ಮೆ ಎಲೆಕ್ಟ್ರಿಕಲ್ ವೈರ್ ಮೇಲೆ ಕಾಲಿಟ್ಟರು. ಪರಿಣಾಮವಾಗಿ ತಮ್ಮ ವೃತ್ತಿ ಜೀವನದ ತಾರುಣ್ಯದಲ್ಲಿಯೇ ಎರಡೂ ಕಾಲುಗಳನ್ನು ಕಳೆದುಕೊಂಡರು. ನಂತರದ ಅವರ ಕಲಾಜೀವನಕ್ಕೆ ಬಹುದೊಡ್ಡ ಪೆಟ್ಟು ಬಿತ್ತು. ಪತಿ ಹಾಗೂ ಹೆಸರಾಂತ ನಟ ಬಸವರಾಜು ಅವರೂ ಕೂಡ ರಾತ್ರಿಯೆಲ್ಲ ನಿದ್ದೆಗೆಟ್ಟು ಮರುದಿನ ಸ್ಕೂಟರ್ ಓಡಿಸುವಾಗ ಅಪಘಾತದಲ್ಲಿ ಮಡಿದು ಇಂತಹದೇ ದುರಂತ ಕಂಡಿದ್ದರು. ಮಾಲತಮ್ಮ 2006ರ ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ 1999ರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಹೆಸರಾಂತ ರಂಗನಟಿ ಬಿ.ಜಯಶ್ರೀ ಹಾಗೂ ಬಿ.ಪದ್ಮಶ್ರೀ ಮಾಲತಮ್ಮನವರ ಪುತ್ರಿಯರು.

2007: ಹಿಮಾಚಲ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ನಿಚ್ಚಳ ಬಹುಮತ ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ ಪ್ರೇಮ್ ಕುಮಾರ್ ಧುಮಾಲ್ ಅವರು ಈದಿನ ಬೆಳಿಗ್ಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿಮ್ಲಾದ ಐತಿಹಾಸಿಕ ರಿಜ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ವಿ ಎಸ್ ಕೊಕ್ಜೆ 63ರ ಹರೆಯದ ಧುಮಾಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 1971ರಲ್ಲಿ ಆಸ್ತಿತ್ವಕ್ಕೆ ಬಂದ ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ ಧುಮಾಲ್ ಅವರು ಹಿಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರು. ಮಾಜಿ ಸೈನಿಕನ ಪುತ್ರರಾದ ಧುಮಾಲ್ ಅವರಿಗೆ ಸಂಖ್ಯೆ ಒಂಬತ್ತರ ಮೇಲೆ ವಿಪರೀತ ನಂಬಿಕೆ. ಇದು ಅದೃಷ್ಟ ತಂದು ಕೊಟ್ಟಿದೆ ಎಂದೇ ಅವರ ಅನಿಸಿಕೆ. ಇವರ ಬದುಕಿನಲ್ಲಿ ಹಲವು ಪ್ರಮುಖ ಸಂಗತಿಗಳು ಸಂಖ್ಯೆ 9ರೊಂದಿಗೆ ಹೊಂದಿಕೊಳ್ಳುತ್ತವೆ. ಇವರ ಕಾರಿನ ಸಂಖ್ಯೆಯಲ್ಲಿ ಕೂಡಾ ಸಂಖ್ಯೆ 9 ಎದ್ದು ಕಾಣುತ್ತದೆ. ಅಧಿಕಾರ ಸ್ವೀಕರಿಸಿದ್ದು ಕೂಡಾ ಬೆಳಗ್ಗೆ 1.25ಕ್ಕೆ. ಅಂದರೆ (1+1ಥ2+5) ಒಟ್ಟು ಸಂಖ್ಯೆ 9ಆಗುತ್ತದೆ.

2007: ಹತ್ಯೆಗೀಡಾದ ಬೆನಜೀರ್ ಭುಟ್ಟೊ ಅವರ ಪುತ್ರ ಬಿಲಾವಲ್ ಅವರನ್ನು ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರನ್ನಾಗಿ ಪಕ್ಷವು ಆಯ್ಕೆ ಮಾಡಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ, ಮಖದ್ದುಮ್ ಫಾಹಿಂ ಮತ್ತು ಶಹಾ ಮೆಹಮೂದ್ ಅವರನ್ನು ಸಹ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

2007: ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಿಲ್ವನ್ ಕಡಲತೀರದಲ್ಲಿ ರಚಿಸಿದ ಏಸುಕ್ರಿಸ್ತನ ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಸುದರ್ಶನ್ ಅವರು ಮರಳಿನಲ್ಲಿ ಪ್ರಪಂಚದಲ್ಲಿಯೇ ದೊಡ್ಡದಾದ ಏಸುಕ್ರಿಸ್ತನ ಕಲಾಕೃತಿಯನ್ನು ರಚಿಸಿದ್ದು, ಈ ಮರಳು ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಬಗ್ಗೆ ತಮಗೆ ಪತ್ರ ಬಂದಿರುವುದಾಗಿ ಪ್ರಕಟಿಸಿದರು. ಗೋಲ್ಡನ್ ಮರಳು ಕಲಾಕೃತಿ ಸಂಸ್ಥೆಯ 15 ವಿದ್ಯಾರ್ಥಿಗಳ ನೆರವಿನಿಂದ ತಾವು 60 ಅಡಿ ಉದ್ದ, 30 ಅಡಿ ಅಗಲ ಮತ್ತು 22 ಅಡಿ ಎತ್ತರದ ಏಸುಕ್ರಿಸ್ತನ ಬೃಹತ್ ಕಲಾಕೃತಿ ನಿರ್ಮಿಸಲು ಸಾಧ್ಯವಾಯಿತು. 600 ಟನ್ ಮರಳು ಬಳಸಿ 25 ಗಂಟೆಗಳಲ್ಲಿ ಕಲಾಕೃತಿ ನಿರ್ಮಿಸಲಾಯಿತು ಎಂದು ಅವರು ವಿವರಿಸಿದರು.

2007: ಕೀನ್ಯಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಿಬಾಕಿ ಅವರು ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೊಗ ನೈರೋಬಿಯಲ್ಲಿ ಪ್ರಕಟಿಸಿತು.

2007: ನವದೆಹಲಿಯ ಸ್ವರ್ಣ ಜಯಂತಿ ಪಾರ್ಕಿನಲ್ಲಿ ಸಂಘಟಿಸಲಾಗಿದ್ದ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿಶ್ವ ಹಿಂದು ಪರಿಷತ್ ಮತ್ತು ಇತರ ಹಿಂದು ಸಂಘಟನೆಗಳ ಸುಮಾರು ಆರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ರಾಮಸೇತು ಯೋಜನೆ ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಆರೆಸ್ಸೆಸ್ಸಿನ ಮುಖ್ಯಸ್ಥ ಕೆ.ಎಸ್. ಸುದರ್ಶನ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ಗಢದ ಮುಖ್ಯಮಂತ್ರಿ ರಮಣ ಸಿಂಗ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿ ಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ಇತರ ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡ್ದಿದರು. ಬಿಜೆಪಿಯ ಹಿರಿಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರ್ಯಾಲಿಗೆ ಶುಭ ಕೋರಿ ಸಂದೇಶ ರವಾನಿಸಿದ್ದರು.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಬಾಗ್ದಾದಿನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ (ಗ್ರೀನ್ ವಿಚ್ ಕಾಲಮಾನ 3 ಗಂಟೆ) ಗಲ್ಲಿಗೇರಿಸಲಾಯಿತು. 1982ರಲ್ಲಿ ದುಜೈಲಿನಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಸದ್ದಾಮ್ ಅವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ನಂತರ ಮೇಲ್ಮನವಿ ನ್ಯಾಯಾಲಯ ಈ ತೀರ್ಪನ್ನು ದೃಢಪಡಿಸಿತ್ತು. ತಮ್ಮ ಹತ್ಯೆಗೆ ನಡೆದ ಯತ್ನಕ್ಕೆ ಸೇಡಿನ ಕ್ರಮವಾಗಿ ಸದ್ದಾಮ್ ಶಿಯಾಗಳ ಮಾರಣ ಹೋಮ ನಡೆಸಿದ್ದರು.ಸದ್ದಾಮ್ ಹುಸೇನ್ ಅವರು ಇರಾಕಿನ ಟಿಕ್ರಿತ್ ಬಳಿಯ ಪುಟ್ಟ ಅವ್ಜಾಹ್ ಗ್ರಾಮದಲ್ಲಿ 1937ರ ಏಪ್ರಿಲ್ 28ರಂದು ಜನಿಸಿದರು. ಅವರು 1957ರಲ್ಲಿ ಬಾತ್ ಪಕ್ಷವನ್ನು ಸೇರಿದರು. 1968ರಲ್ಲಿ ದಂಗೆಯಲ್ಲಿ ಶಾಮೀಲಾದರು. ಈ ದಂಗೆಯಲ್ಲಿ ಬಾತ್ ಪಕ್ಷ ಅಧಿಕಾರಕ್ಕೆ ಬಂತು. 1969ರಲ್ಲಿ ಇರಾಕಿನ ಉಪಾಧ್ಯಕ್ಷರಾದರು. 1979ರಲ್ಲಿ ಇರಾಕಿನ ಅಧ್ಯಕ್ಷರಾದರು. 1980-1988ರ ಅವಧಿಯಲ್ಲಿ ಇರಾನಿನ ವಿರುದ್ಧ ಯುದ್ಧ ನಡೆಸಿದರು. 1990-1991ರಲ್ಲಿ ಕುವೈತ್ ಮೇಲೆ ದಾಳಿನಡೆಸಿ ಕೊಲ್ಲಿ ಸಮರಕ್ಕೆ ನಾಂದಿ ಹಾಡಿದರು. ಅಮೆರಿಕದ ದಾಳಿಯ ಬಳಿಕ 2003ರ ವಸಂತ ಕಾಲದಲ್ಲಿ ಇರಾಕ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದರು. 2003ರ ಡಿಸೆಂಬರ್ 13ರಂದು ಟಿಕ್ರಿತ್ ಸಮೀಪ ಅಮೆರಿಕ ಸೇನೆಗೆ ಕೈಸೆರೆಯಾದರು. 2004ರ ಜುಲೈ 1ರಂದು ಮಾನವೀಯತೆ ವಿರುದ್ಧದ 7 ಅಪರಾಧಗಳಿಗೆ ಸಂಬಂಧಿಸಿದಂತೆ ಅವರು ಮತ್ತು ಸಹಚರರ ವಿರುದ್ಧ ದೋಷಾರೋಪ ಹೊರಿಸಲಾಯಿತು. 2005ರ ಅಕ್ಟೋಬರ್ 19ರಂದು ದುಜೈಲಿನಲ್ಲಿ 1982ರಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡದ ವಿಚಾರಣೆ ಆರಂಭವಾಯಿತು. 2006ರ ಆಗಸ್ಟ್ 21ರಂದು 1987-1988ರ ಅರಾಫಲ್ ಕಾರ್ಯಾಚರಣೆ ಹಾಗೂ ಕುರ್ದರ ಜನಾಂಗಹತ್ಯೆ ಕುರಿತ ವಿಚಾರಣೆ ಆರಂಭವಾಯಿತು. 1979-2003ರ ತಮ್ಮ ಆಡಳಿತ ಅವಧಿಯಲ್ಲಿ ಸದ್ದಾಮ್ ಹುಸೇನ್ ನಡೆಸಿದ್ದರೆಂದು ಆಪಾದಿಸಲಾದ ಪ್ರಮುಖ ದೌರ್ಜನ್ಯಗಳ ವಿವರಗಳು: 1982- ಸದ್ದಾಮ್ ಹತ್ಯೆಯತ್ನದ ವಿರುದ್ಧ ಸೇಡಿನ ಕ್ರಮವಾಗಿ ದುಜೈಲಿನಲ್ಲಿ 148 ಶಿಯಾಗಳ ಹತ್ಯೆ. 1983 ಕುರ್ದಿಸ್ಥಾನದ ಬಲಾಢ್ಯ ಬರ್ಝಾನಿ ಜನಾಂಗದ 8000 ಸದಸ್ಯರಿಗೆ ಗಲ್ಲು. 1988 ಈಶಾನ್ಯ ಇರಾಕಿನ ಹಲಬ್ ಜಾದ್ಲದಲ್ಲಿ ಕುರ್ದರ ವಿರುದ್ಧ ರಾಸಾಯನಿಕ ಅಸ್ತ್ರಗಳ ಬಳಕೆ, 5000 ಕುರ್ದರ ಹತ್ಯೆ. 1991 ದಕ್ಷಿಣ ಇರಾಕಿನಲ್ಲಿ ಶಿಯಾಗಳ ವಿರುದ್ಧ ದಾಳಿ, 1000 ಸಾವು. 1987-1989 ಅನ್ ಫಲ್ ಅಭಿಯಾನ, ರಾಸಾಯನಿಕ ಅಸ್ತ್ರಗಳ ಬಳಕೆ, ಅಂದಾಜು 1,82,000 ಸಾವು, ಕುರ್ದರ ಸಾಮೂಹಿಕ ವಲಸೆ.

2006: ಅರುವತ್ತಮೂರು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 600 ಜನರನ್ನು ಒಯ್ಯುತ್ತಿದ್ದ `ಸೇನಾಪತಿ' ಹೆಸರಿನ ನೌಕೆಯು ಡಿಸೆಂಬರ್ 29ರ ನಡುರಾತ್ರಿ ಕೇಂದ್ರ ಜಾವಾ ಕರಾವಳಿಯ ಸಮೀಪ ಸಮುದ್ರದಲ್ಲಿ ಮುಳುಗಿ, ನೂರಾರು ಮಂದಿ ಜಲಸಮಾಧಿಯಾಗಿರುವ ಭೀತಿ ಇದೆ ಎಂದು ಇಂಡೋನೇಷ್ಯಾದ ರೇಡಿಯೊ ವರದಿ ಮಾಡಿತು. ನೌಕಾ ಅಧಿಕಾರಿಗಳು ನೌಕೆಯಲ್ಲಿದ್ದ ಜನ 600 ಎಂದು ದೃಢಪಡಿಸಿದರು. ಕೇಂದ್ರ ಜಾವಾದ ಬೋರ್ನಿಯೋದ ಸುಮರಂಗ್ನಿಂದ ಕೇಂದ್ರ ಕಲಿಮಂತನ್ ಪ್ರಾಂತ್ಯದ ಕುಮಾಯಿ ಬಂದರಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತು. ಈ ನೌಕೆಯ ಸಾಮರ್ಥ್ಯ 850. ಇಂಡೋನೇಷ್ಯಾದ 17,000 ದ್ವೀಪಗಳ ಮಧ್ಯೆ ಸಂಚಾರಕ್ಕೆ ಹಡಗುಗಳು ಮತ್ತು ತೆಪ್ಪಗಳು ಜನಪ್ರಿಯ ಸಾಧನಗಳಾಗಿದ್ದು, ವಿಮಾನಯಾನಕ್ಕಿಂತ ಅಗ್ಗ ಕೂಡಾ. ಆದರೆ ಹಡಗು, ತೆಪ್ಪಗಳನ್ನು ಬಳಸುವಾಗ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಬಿಗಿಯಾಗಿ ಅನುಸರಿಸದಿರುವುದೇ ದುರಂತಕ್ಕೆ ಕಾರಣ.

2006: ವಿಜಯ ಕರ್ನಾಟಕ ಪತ್ರಿಕೆಯ ಓದುಗರ ವರ್ಷದ ಅಗ್ರಮಾನ್ಯ 10 ಸಾಧಕರ ಪಟ್ಟಿಯಲ್ಲಿ ಗೋವಿನ ಸಂರಕ್ಷಣೆಯ ಕುರಿತು ನಡೆಸಿದ ಅಭಿಯಾನಕ್ಕಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮೊದಲ ಸ್ಥಾನ ಅಲಂಕರಿಸಿದರು. ಶ್ರೀಗಳು ದೇಶೀಯ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಲಚಲ, ಶ್ರೀಶ್ರೀ ರವಿಶಂಕರ ಗುರೂಜಿ, ಡಾ. ವೀರೇಂದ್ರ ಹೆಗ್ಗಡೆ, ಡಾ. ಜಿ.ಎಸ್. ಶಿವರುದ್ರಪ್ಪ, ರಾಹುಲ್ ದ್ರಾವಿಡ್, ನಿಸಾರ್ ಅಹಮದ್, ವಿಷ್ಣು ವರ್ಧನ್, ವಿ.ಕೆ. ಪಾಟೀಲ್ ಮತ್ತು ಸಿದ್ದರಾಮಯ್ಯ ಅಗ್ರಮಾನ್ಯ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಇತರರು.

2006: ಹಿರಿಯ ಕನ್ನಡ ಚಲನಚಿತ್ರ ನಟ, ನಿರ್ದೇಶಕ ಪೇ.ಕೆ.ಟಿ. ಶಿವರಾಂ (92) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿದ್ದ ಅವರು 85ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿನಟಿಸಿದ್ದರು.

2005: ವಿಶ್ವ ಖ್ಯಾತಿಯ `ಟೈಗರ್' ಕಾರ್ಟೂನ್ ಚಿತ್ರ ಸರಣಿಯ ಸೃಷ್ಟಿಕರ್ತ ಬಡ್ ಬ್ಲೇಕ್ (87) ಪೋರ್ಟ್ ಲ್ಯಾಂಡಿನಲ್ಲಿ ನಿಧನರಾದರು. ನ್ಯೂಯಾರ್ಕಿನ ಜಾಹೀರಾತು ಏಜೆನ್ಸಿಯೊಂದರಲ್ಲಿ ಉದ್ಯೋಗದಲ್ಲಿದ್ದ ಬ್ಲೇಕ್ 1965ರಲ್ಲಿ ಉದ್ಯೋಗ ತೊರೆದು 'ಟೈಗರ್' ಚಿತ್ರ ಸರಣಿ ರಚಿಸಲು ಆರಂಭಿಸಿದ್ದರು. 11 ರಾಷ್ಟ್ರಗಳ 120 ಪತ್ರಿಕೆಗಳಲ್ಲಿ 'ಟೈಗರ್' ಕಾರ್ಟೂನ್ ಸರಣಿ ಈಗಲೂ ಪ್ರಕಟಗೊಳ್ಳುತ್ತಿದೆ.

2005: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಸಂಬಂಧ ಬಲಪಡಿಸಿಕೊಳ್ಳುವ ಸಂದೇಶದೊಂದಿಗೆ ಪ್ರಾರಂಭಗೊಂಡ ಭಾರತೀಯ ಜನತಾ ಪಕ್ಷದ ರಜತ ಮಹೋತ್ಸವ, ಆದರ್ಶವಾದ ಮತ್ತು ವಿಚಾರಧಾರೆಗಳ ಮೂಲಕ್ಕೆ ಮರಳುವ ನಿರ್ಧಾರದೊಂದಿಗೆ ಅಂತ್ಯಗೊಂಡಿತು.

1971: ಖ್ಯಾತ ಅಣುವಿಜ್ಞಾನಿ ವಿಕ್ರಮ್ ಅಂಬಾಲಾಲ್ ಸಾರಾಭಾಯಿ ನಿಧನರಾದರು.

1968: ನಾರ್ವೆಯ ರಾಜಕಾರಣಿ, ರಾಜತಾಂತ್ರಿಕ ಟ್ರೈಗ್ವೆ ಲೀ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. ಅವರು 1946-1952ರ ಅವಧಿಯಲ್ಲಿ ವಿಶ್ವಸಂಸ್ಥೆಯ ಮೊದಲ ಮಹಾಕಾರ್ಯದರ್ಶಿ (ಸೆಕ್ರೆಟರಿ ಜನರಲ್) ಆಗಿದ್ದರು.

1935: ಭಾರತದ ಚೆಸ್ ಆಟಗಾರ ಮ್ಯಾನ್ಯುಯೆಲ್ ಅರೋನ್ ಹುಟ್ಟಿದ ದಿನ. ಇವರು 1961ರಲ್ಲಿ ಭಾರತದ ಮೊತ್ತ ಮೊದಲ (ಹಾಗೂ ಏಷ್ಯಾದ ಎರಡನೇ) ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಹೆಗ್ಗಳಿಕೆಗೆ ಪಾತ್ರರಾದರು.

1930: ಸಾಹಿತಿ ಸುಲೋಚನಾ ದೇವಿ ಆರಾಧ್ಯ ಜನನ.

1922: ರಷ್ಯ, ಟ್ರಾನ್ಸ್ ಕಾಕೇಸಿಯನ್ ಸೋವಿಯತ್ ಫೆಡರೇಟೆಡ್ ರಿಪಬ್ಲಿಕ್ಸ್, ಉಕ್ರೇನ್ ಹಾಗೂ ಬೆಲೊರಷ್ಯನ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಈ ನಾಲ್ಕು ಗಣರಾಜ್ಯಗಳು ಒಟ್ಟಾಗಿ `ಸೋವಿಯತ್ ಒಕ್ಕೂಟ'ವನ್ನು (ಸೋವಿಯತ್ ಯೂನಿಯನ್) ಸ್ಥಾಪಿಸಿದವು.

1906: ಭಾರತದ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಆಲ್ ಇಂಡಿಯಾ ಮುಸ್ಲಿಂ ಲೀಗನ್ನು ಸ್ಥಾಪಿಸಲಾಯಿತು. ಢಾಕಾದ ನವಾಬ್ ಸಲೀಮುಲ್ಲಾ ಖಾನ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್ ಹಿಂದು-ಮುಸ್ಲಿಮರ ಏಕತೆಗಾಗಿಯೇ ಕರೆ ನೀಡಿತ್ತು. 1940ರಲ್ಲಿ ಮಾತ್ರ ಅದು ಭಾರತದಿಂದ ಪ್ರತ್ಯೇಕವಾದ ಮುಸ್ಲಿಂ ರಾಷ್ಟ್ರದ ರಚನೆಗೆ ಕರೆ ನೀಡಿತು.

1902: ಡಾ. ರಘುವೀರ (1902-1963) ಹುಟ್ಟಿದ ದಿನ. ಅವರು ಭಾರತ, ಚೀನಾ, ಜಪಾನ್ ಮತ್ತಿತರ ಪೂರ್ವ ಏಷ್ಯಾದ ಭಾಷೆಗಳ ಅಧ್ಯಯನ ನಡೆಸಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಸಂಸ್ಕೃತ, ಹಿಂದಿ ವಿದ್ವಾಂಸರು. ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದರು.

1896: ಕನ್ನಡ ಸಾಹಿತ್ಯಕ್ಕೆ ಹಾಸ್ಯದ ಸ್ಪರ್ಶ ನೀಡಿದ ಪ್ರಮುಖರಲ್ಲಿ ಒಬ್ಬರಾದ ಪಡುಕೋಣೆ ರಮಾನಂದರಾಯ (30-12-1896ರಿಂದ 13-2-1983) ಅವರು ನರಸಿಂಗ ರಾಯ- ಚಂದ್ರಭಾಗಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣಯಲ್ಲಿ ಜನಿಸಿದರು.

1887: ಭಾರತೀಯ ವಿದ್ಯಾಭವನದ ಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ, ವಕೀಲ ಕನ್ಹಯ್ಯಲಾಲ್ ಮಣೇಕ್ ಲಾಲ್ ಮುನ್ಶಿ `ಕೆ.ಎಂ. ಮುನ್ಶಿ' (1887-1971) ಅವರು ಹುಟ್ಟಿದ ದಿನ.

1879: ಭಾರತದ ಖ್ಯಾತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ರಮಣ ಮಹರ್ಷಿ (1879-1950) ಅವರು ಹುಟ್ಟಿದ್ದು ಇದೇ ದಿನ.

No comments:

Advertisement