ಇಂದಿನ ಇತಿಹಾಸ
ಜನವರಿ 06
ರಾಜ್ಯ ಸರ್ಕಾರ ಇತ್ತೀಚೆಗೆ ರಚಿಸಿದ ರಾಜ್ಯ ಕಾನೂನು ಆಯೋಗಕ್ಕೆ ಪ್ರಥಮ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತು. ಈ ಆಯೋಗವು ಜನಸಾಮಾನ್ಯರಿಗೆ ತ್ವರಿತ ನ್ಯಾಯ ನೀಡಲು ಹಾಗೂ ಸುಧಾರಣೆ ತರಲು ಇರುವ ನ್ಯೂನತೆಗಳೇನು ಎನ್ನುವುದರ ಅಧ್ಯಯನ ನಡೆಸುವುದು.
2009: ಮುಂಬೈ ಮೇಲಿನ ಉಗ್ರರ ದಾಳಿಗೆ ಪಾಕಿಸ್ಥಾನದ ಅಧಿಕೃತ ಸರ್ಕಾರಿ ಸಂಸ್ಥೆಗಳೇ ಕಾರಣ ಎಂದು ನೇರವಾಗಿಯೇ ಆರೋಪಿಸಿದ ಪ್ರಧಾನಿ ಮನಮೋಹನ್ ಸಿಂಗ್, ಅಲ್ಲಿನ 'ದುರ್ಬಲ' ಮತ್ತು 'ಹೊಣೆಗೇಡಿ' ಸರ್ಕಾರವು ಭಾರತದೊಂದಿಗೆ ವ್ಯವಹರಿಸುವಾಗ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರೀಯ ನೀತಿಯ ಪ್ರಮುಖ ಸಾಧನವನ್ನಾಗಿ ಮಾಡಿಕೊಂಡಿದೆ ಎಂದು ಕಟಕಿಯಾಡಿದರು. ಮನಮೋಹನ್ ಸಿಂಗ್ ಮಾಡಿದ ಆರೋಪಗಳು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ ಪಾಕಿಸ್ಥಾನ, ಮುಂಬೈ ದಾಳಿಗೆ ಸಂಬಂಧಿಸಿದಂತೆ ನೀಡಿರುವ ಸಾಕ್ಷ್ಯ ವಿಶ್ವಾಸಾರ್ಹವಾಗಿಲ್ಲ ಎಂದು ತಳ್ಳಿಹಾಕಿ, ಭಾರತ ಈ ಪ್ರದೇಶದಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಸುತ್ತಿದೆ ಎಂದೂ ಆರೋಪಿಸಿತು.
2009: ಮುಂಬೈ ಮೇಲಿನ ಉಗ್ರರ ದಾಳಿ ಹಾಗೂ ಪಾಕಿಸ್ಥಾನದ ನಡುವೆ ಇರುವ ಸಂಬಂಧದ ಬಗ್ಗೆ ಭಾರತವು ವಿಶ್ವದ ಎಲ್ಲ ರಾಜತಾಂತ್ರಿಕರಿಗೆ ಮಾಹಿತಿ ನೀಡಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕರು ಹಾಗೂ ನೆರೆದೇಶಗಳ ನಿಯೋಗದ 7 ಮುಖ್ಯಸ್ಥರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಮುಂಬೈ ದಾಳಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡರು.
2009: ಹಿರಿಯ ಕಮ್ಯುನಿಸ್ಟ್ ಮುಖಂಡ ಎಂ.ಕೆ.ಭಟ್ (65) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಭಟ್ ಅವರ ಸ್ವಂತ ಗ್ರಾಮವಾದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪದ ತೋಡಿಕಾನ ಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಸಮತಾವಾದ (ಕಮ್ಯುನಿಸಂ) ತತ್ವಕ್ಕಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದ ಭಟ್, ಸಿಪಿಎಂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಬಾಂಬೆ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಭಟ್ ಚಿನ್ನದ ಪದಕ ಪಡೆದಿದ್ದರು. ನಂತರ ಅಮೆರಿಕದಲ್ಲಿ 'ಪರಮಾಣು ವಿಜ್ಞಾನ' ವಿಷಯದ ಬಗ್ಗೆ ಉನ್ನತ ವ್ಯಾಸಂಗ ಕೈಗೊಂಡ ಸಂದರ್ಭದಲ್ಲಿ ಅವರು ಕಮ್ಯುನಿಸಂ ಸಿದ್ಧಾಂತದಿಂದ ಆಕರ್ಷಿತರಾದರು.
2009: ರಾಜ್ಯ ಸರ್ಕಾರ ಇತ್ತೀಚೆಗೆ ರಚಿಸಿದ ರಾಜ್ಯ ಕಾನೂನು ಆಯೋಗಕ್ಕೆ ಪ್ರಥಮ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತು. ಈ ಆಯೋಗವು ಜನಸಾಮಾನ್ಯರಿಗೆ ತ್ವರಿತ ನ್ಯಾಯ ನೀಡಲು ಹಾಗೂ ಸುಧಾರಣೆ ತರಲು ಇರುವ ನ್ಯೂನತೆಗಳೇನು ಎನ್ನುವುದರ ಅಧ್ಯಯನ ನಡೆಸುವುದು. ಕಾನೂನು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಪ್ರಸ್ತುತ ವಿ.ವಿಯ ವಿಶೇಷಾಧಿಕಾರಿಯಾಗಿರುವ ಜೆ.ಎಸ್.
ಪಾಟೀಲ್ ಅವರನ್ನು ನೇಮಿಸಲಾಗುವುದು ಎಂದು ಕಾನೂನು ಸಚಿವ ಸುರೇಶ ಕುಮಾರ್ ಪ್ರಕಟಿಸಿದರು.
2008: ಚೆಲುವ ಕನ್ನಡ ನಾಡಿನ ಅನರ್ಘ್ಯ ಸಂಗೀತ ರತ್ನ, ಸಂಗೀತ- ಸಂಸ್ಕೃತಿಯ ತೊಟ್ಟಿಲಲ್ಲಿ ಬೆಳೆದ ಹುಬ್ಬಳ್ಳಿಯ ಗಾಯನಗಂಗೆ ಗಂಗೂಬಾಯಿ ಹಾನಗಲ್ಲ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲ ಎಸ್. ಎಂ. ಕೃಷ್ಣ ಈದಿನ ಹುಟ್ಟೂರಿನಲ್ಲಿ `ಈ ಟಿವಿ ವರ್ಷದ ಕನ್ನಡಿಗ' ಪ್ರಶಸ್ತಿ ನೀಡಿ ಸನ್ಮಾನಿಸಿದರು.
2008: ಆಸ್ಟ್ರೇಲಿಯಾ ತಂಡದ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಮೂರು ಟೆಸ್ಟ್ ಪಂದ್ಯಗಳ ನಿಷೇಧ ಹೇರಲು ನಿರ್ಧರಿಸಿತು. ಈದಿನ ಸಿಡ್ನಿಯಲ್ಲಿ ನಡೆಸಿದ ವಿಚಾರಣೆಯ ಬಳಿಕ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಅವರು ಸೈಮಂಡ್ಸ್ ಮಾಡಿರುವ ಆರೋಪವನ್ನು ಎತ್ತಿ ಹಿಡಿದರು. ಭಾರತ ತಂಡವು ನಿಷೇಧ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿತು. ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಹರಭಜನ್ ಮತ್ತು ಸೈಮಂಡ್ಸ್ ನಡುವೆ ಮಾತಿಕ ಚಕಮಕಿ ನಡೆದಿತ್ತು. ಈ ವೇಳೆ ಹರಭಜನ್ `ಮಂಕಿ' ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾಗಿ ಸೈಮಂಡ್ಸ್ ಆರೋಪಿಸಿದ್ದರು.
2008: ಹಾವೇರಿ ಜಿಲ್ಲೆಯ ಸಂಗೂರಿನ ಕರ್ನಾಟಕ ಸಹಕಾರ ಸಕ್ಕರೆ ಕಾರ್ಖಾನೆಯನ್ನು ದಾವಣಗೆರೆಯ ಜೆಮ್ ಲ್ಯಾಬೊರೇಟರೀಸ್ ಖಾಸಗಿ ಸಂಸ್ಥೆಗೆ 42 ಕೋಟಿ ರೂಪಾಯಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತು. ಸಂಕಷ್ಟದಲ್ಲಿರುವ ಕಾರ್ಖಾನೆಯನ್ನು ತತ್ ಕ್ಷಣ ಪುನರಾರಂಭಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಕ್ರಮ ಕೈಗೊಂಡಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
2008: ಶ್ರೀಲಂಕೆಯ ವಾಯುವ್ಯ ಭಾಗ ಮನ್ನಾರಿನಲ್ಲಿ ಸರ್ಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ ಎಲ್ ಟಿ ಟಿ ಇ ಆಂತರಿಕ ಬೇಹುಗಾರಿಕೆ ದಳದ ಮುಖಂಡ ಕರ್ನಲ್ ಚಾರ್ಲ್ಸ್ ಹತನಾದ. ಎಲ್ ಟಿ ಟಿ ಇ ಮೂಲಗಳೂ ಇದನ್ನು ಖಚಿತಪಡಿಸಿದವು. ಈ ದಾಳಿಯಲ್ಲಿ ಕರ್ನಲ್ ಜೊತೆಗೆ ಇತರ ಮೂವರು ಲೆಫ್ಟಿನೆಂಟ್ ಗಳು ಕೂಡ ಹತರಾದರು ಎಂದು ಕ್ರಾಂತಿಪರ ತಮಿಳು ವೆಬ್ ಸೈಟ್ ಪ್ರಕಟಿಸಿತು. ಎರಡು ತಿಂಗಳ ಹಿಂದಷ್ಟೇ ಮುಂಚೂಣಿ ನಾಯಕ ತಮಿಳ್ ಸೆಲ್ವಂ ಅವರನ್ನು ಕಳೆದುಕೊಂಡಿದ್ದ ಎಲ್ ಟಿ ಟಿ ಇ ಇದರಿಂದಾಗಿ ಇನ್ನೊಂದು ಹಿನ್ನಡೆ ಅನುಭವಿಸಿತು. ಬೇಹುಗಾರಿಕೆ ಜವಾಬ್ದಾರಿ ಹೊತ್ತಿದ್ದ ಚಾರ್ಲ್ಸ್ (43) ವ್ಯಾನಿನಲ್ಲಿ ತೆರಳುತ್ತಿದ್ದಾಗ ಈ ದಾಳಿ ನಡೆಸಲಾಗಿತ್ತು.
2008: ಪಕ್ಷೇತರ ಸದಸ್ಯರಾಗಿದ್ದರೂ ಮುಖ್ಯಮಂತ್ರಿಯಾಗಿ ನೂರು ದಿನಗಳ ಅವಧಿಯನ್ನು ಪೂರೈಸಿದ ದೇಶದ ಮೊದಲ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿದ ಜಾರ್ಖಂಡಿನ ಮುಖ್ಯಮಂತ್ರಿ ಮಧು ಕೋಡಾ ಈ ಸಲ ಸತತ 24 ತಾಸು ದುಡಿದು ಇನ್ನೊಂದು ದಾಖಲೆ ನಿರ್ಮಿಸಿದರು. ಹಲವು ಸರ್ಕಾರಿ ಕಚೇರಿಗಳಿಗೆ ಹಠಾತ್ ದಾಳಿ ನಡೆಸಿದ ಬಳಿಕ ಕಚೇರಿಯಲ್ಲಿ ತಮ್ಮ ಎಂದಿನ ಕೆಲಸವನ್ನು ಕೋಡಾ ನಿರ್ವಹಿಸಿದರು. ಸಂಜೆಯ ವಿಶ್ರಾಂತಿ ತೆಗೆದುಕೊಳ್ಳದೆ, ರಾತ್ರಿಯ ಊಟವನ್ನೂ ಮಾಡದೆ ನಿರಂತರ 24 ತಾಸು ಕೆಲಸ ನಿರ್ವಹಿಸುವ ಮೂಲಕ ಭಾರತದಲ್ಲಿಯೇ ಯಾರೇ ವ್ಯಕ್ತಿ ಮುಖ್ಯಮಂತ್ರಿಯಾಗಿ ಮಾಡದ ಕೆಲಸವನ್ನು ಕೋಡಾ ಮಾಡಿದರು.
2008: ಕಾಲಿಲ್ಲದ ಲಕ್ಷಾಂತರ ಮಂದಿಗೆ ಕೃತಕ ಕಾಲಿನ ಭಾಗ್ಯ ಒದಗಲು ಕಾರಣರಾದ ಜೈಪುರ ಕೃತಕ ಕಾಲಿನ ಸಂಶೋಧಕ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಪ್ರಮೋದ್ ಕರಣ್ ಸೇಥಿ (80) ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮ್ಯಾಗ್ಸೆಸೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸೇಥಿ 1969ರಲ್ಲಿ ಜೈಪುರ ಕೃತಕ ಕಾಲು ಸಂಶೋದಿಸಿದ್ದರು.
2008: ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಬೆಳೆಗೆರೆ ಕೃಷ್ಣಶಾಸ್ತ್ರಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಹಾಗೂ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ನಿರ್ಧರಿಸಿತು.
2007: ರಾಷ್ಟ್ರಕವಿ ಪ್ರೊಫೆಸರ್ ಜಿ.ಎಸ್. ಶಿವರುದ್ರಪ್ಪ, ಚಿತ್ರನಟಿ ಬಿ. ಸರೋಜಾದೇವಿ ಮತ್ತು ಸಮಾಜ ಸೇವಕಿ ರುತ್ ಮನೋರಮಾ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯವು `ಗೌರವ ಡಾಕ್ಟರೇಟ್' ಪುರಸ್ಕಾರವನ್ನು ಪ್ರದಾನ ಮಾಡಿತು.
2007: ನವದೆಹಲಿ- ದೀಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ಸಿನಲ್ಲಿದ್ದ ಪ್ರಯಾಣಿಕರು ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಪವಾಡ ಸದೃಶರಾಗಿ ಪಾರಾದರು. ಆದರೆ ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಸಾದಿಯಾ ಪ್ರದೇಶದ ಕೂಲಿಕಾರರ ವಸತಿ ಪ್ರದೇಶದ ಮೇಲೆ ನಡೆದ ನಿಷೇಧಿತ ಉಲ್ಫಾ ದಾಳಿಯಲ್ಲಿ 28 ಮಂದಿ ಮೃತರಾದರು.
2007: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ. ಮೂನ್ ಅವರು ತಾಂಜಾನಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಡಾ. ಆರ್.ಎ. ಮಿಗಿರೊ (50) ಅವರನ್ನು ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
2007: ದಿಢೀರ್ ನೂಡಲ್ ಶೋಧಿಸಿದ `ನೂಡಲ್ ದೊರೆ' ಜಪಾನಿನ ಮೊಮೊಫುಕು ಅಂಡೊ (96) ಟೋಕಿಯೋದಲ್ಲಿ ನಿಧನರಾದರು. ದ್ವಿತೀಯ ಮಹಾಯುದ್ಧ ನಂತರ ಉದ್ಭವಿಸಿದ ಆಹಾರ ಕೊರತೆಯ ದಿನಗಳಲ್ಲಿ ಜನರು ಕಾಳಸಂತೆಯಲ್ಲಿ ರೇಮನ್ಸ್ ನೂಡಲ್ಸ್ ಖರೀದಿಗೆ ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ಕಂಡು ಅಂಡೊ `ದಿಢೀರ್ ನೂಡಲ್ ತಯಾರಿಕೆ' ವಿಧಾನ ಕಂಡು ಹಿಡಿದರು. ಗಗನಯಾನಿಗಳಿಗೆಂದೇ ವಿಶೇಷವಾಗಿ ಸಿದ್ಧ ಪಡಿಸಿದ್ದ ಕಪ್ ನೂಡಲ್ಸ್ ಪ್ರಚಾರ ಉತ್ತೇಜಿಸಲು 2005ರಲ್ಲಿ ಅವರು ಟೆಲಿವಿಷನ್ ಕಾರ್ಯಕ್ರಮದಲ್ಲೂ ಪಾಲ್ಗೊಂಡ್ದಿದರು.
2007: ಕನ್ನಡ ರಂಗಭೂಮಿಗೆ ರಾಷ್ಟ್ರೀಯ ರಂಗಭೂಮಿ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿವ್ಯಕ್ತಿ-ಅಭಿಯಾನ ನಡೆಸಿದ ಚಳವಳಿಯ ಅಂಗವಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆರಂಭಿಸಿದ ಆಮರಣ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿತು. ಈ ಸಂದರ್ಭದಲ್ಲಿ ಪ್ರಸನ್ನ ಅವರ ದೇಹಸ್ಥಿತಿಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡ ಕಾರಣ ಪೊಲೀಸರ ಸಲಹೆಯ ಮೇರೆಗೆ ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿದರು.
2006: ಚಿತ್ರನಟ ವಿಷ್ಣುವರ್ಧನ್ ಸೇರಿದಂತೆ ನಾಲ್ವರು ಗಣ್ಯರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನಲ್ಲಿ ನಡೆದ 41ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ವಿಷ್ಣುವರ್ಧನ್, ಕೊಲಾಜ್ ಕಲಾವಿದ ವಿ. ಬಾಲು, ನೃತ್ಯ ಕಲಾವಿದೆ ಮಾಯಾರಾವ್ ಹಾಗೂ ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರಿಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
2006: ಭಾರತೀಯ ಮೂಲದ ಕೃಷಿಕ ಎಲಿಯಾಹು ಬೆಜಾಲೆಲ್ ಅವರು ಇಸ್ರೇಲಿನ ಪ್ರತಿಷ್ಠಿತ ಪ್ರವಾಸಿ ಭಾರತೀಯ ಪ್ರಶಸ್ತಿಗೆ ಆಯ್ಕೆಯಾದರು. ಕೇರಳದ ಚೆಂದಮಂಗಳಂ ಗ್ರಾಮದಿಂದ 1955ರಲ್ಲಿ ಇಸ್ರೇಲಿಗೆ ತೆರಳಿ ರೈತನಾಗಿ ಗಣನೀಯ ಸೇವೆ ಸಲ್ಲಿಸಿದ್ದ ಬೆಜಾಲೆಲ್, ಇಸ್ರೇಲಿನ ನೆಗಿವ್ ಮರುಭೂಮಿಯಲ್ಲಿ ಕೃಷಿಸಾಧನೆ ಮಾಡಿದ್ದಕ್ಕಾಗಿ 1964ರಲ್ಲೇ ಶ್ರೇಷ್ಠ ರಫ್ತುದಾರ ಪ್ರಶಸ್ತಿಯನ್ನು ಆಗಿನ ಪ್ರಧಾನಿ ಲೆವಿ ಎಸ್ಕೋಲರಿಂದ ಪಡೆದಿದ್ದರು.
1989: ಇಂದಿರಾಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.
1959: ಭಾರತದ ಆಲ್ ರೌಂಡರ್ ಕ್ರಿಕೆಟ್ ಪಟು ಕಪಿಲ್ ದೇವ್ ಹುಟ್ಟಿದರು. ಅವರ 434 ಟೆಸ್ಟ್ ವಿಕೆಟುಗಳು ಜಾಗತಿಕ ದಾಖಲೆ ನಿರ್ಮಿಸಿದವು. 2002ರ ಜುಲೈಯಲ್ಲಿ ಅವರು `ವಿಸ್ ಡನ್ಸ್ ಇಂಡಿಯನ್ ಕ್ರಿಕೆಟಿಯರ್ ಆಫ್ ಸೆಂಚುರಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1948: ಸಾಹಿತಿ ಎಂ.ಕೆ. ಬದರಿನಾಥ ಹುಟ್ಟಿದ ದಿನ.
1947: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಭಾರತದ ವಿಭಜನೆಯನ್ನು 99-52 ಮತಗಳ ಅಂತರದಲ್ಲಿ ಅಂಗೀಕರಿಸಿತು.
1941: ಸಾಹಿತಿ ಪರಿಮಳಾ ಜಿ. ರಾವ್ ಹುಟ್ಟಿದ ದಿನ.
1939: ಸಾಹಿತಿ ಶ್ರೀನಿವಾಸ ಕುಲಕರ್ಣಿ ಹುಟ್ಟದ ದಿನ.
1933: ಸಾಹಿತಿ ಪಂಚಾಕ್ಷರಿ ಹಿರೇಮಠ ಅವರು ಹುಟ್ಟಿದ ದಿನ.
1933: ಸಾಹಿತಿ ಡಾ. ಅ ಸುಂದರ ಹುಟ್ಟಿದ ದಿನ.
1929: ಸಾಹಿತಿ ಎಂ.ಕೆ. ಜಯಲಕ್ಷ್ಮಿ ಹುಟ್ಟಿದ ದಿನ.
1919: ಅಮೆರಿಕದ 26ನೇ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಅವರು ತಮ್ಮ 60ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.
1897: ವಿಶ್ವವಿಖ್ಯಾತ ಶಿಲ್ಪಿ ರಂಜಾಳ ಗೋಪಾಲ ಶೆಣೈ (6-1-1897ರಿಂದ 1-12-1985) ಅವರು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ಸಮೀಪದ ರಂಜಾಳದಲ್ಲಿ ಜನಾರ್ದನ ಶೆಣೈ ಅವರ ಪುತ್ರನಾಗಿ ಜನಿಸಿದರು. ಕುಂಚ, ಬಣ್ಣಗಳ ಜೊತೆ ಆಟವಾಡುತ್ತಾ ಬೆಳೆದ ರಂಜಾಳ ಶ್ರೀಮದ್ ಭುವನೇಂದ್ರ ಶಿಲ್ಪ ಕಲಾ ಶಾಲೆ ಸ್ಥಾಪಿಸಿ ಉಳಿ, ಸುತ್ತಿಗೆ, ಚಾಣ ಹಿಡಿದರು. ಕಾರ್ಕಳದ ವೆಂಕಟ್ರಮಣ ದೇವಾಲಯದ ಗರುಡ ಮಂಟಪದ ನಾಲ್ಕು ಕಂಬಗಳ ಕಲಾ ವೈಖರಿ ಅವರಿಗೆ ಮೊದಲ ಕೀರ್ತಿ ತಂದ ಶಿಲ್ಪ. ಧರ್ಮಸ್ಥಳಕ್ಕಾಗಿ ನಿರ್ಮಿಸಿಕೊಟ್ಟ 39 ಅಡಿಯ ಬಾಹುಬಲಿ, ಉತ್ತರ ಪ್ರದೇಶದ ಫಿರೋಜ್ ನಗರಕ್ಕೆ ನಿರ್ಮಿಸಿಕೊಟ್ಟ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರಕ್ಕಾಗಿ ನಿರ್ಮಿಸಿಕೊಟ್ಟ 67 ಅಡಿಗಳ ಬುದ್ಧ ಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳಕ್ಕಾಗಿ ನಿರ್ಮಿಸಿದ ಮಲಗಿರುವ ಬುದ್ಧ, ಮುಂಬೈಗಾಗಿ ನಿರ್ಮಿಸಿದ ರಾಮ-ಲಕ್ಷ್ಮಣ ಇತ್ಯಾದಿ ಶಿಲ್ಪಗಳು ವಿಶ್ವದಾದ್ಯಂತ ಅವರ ಕೀರ್ತಿಯನ್ನು ಪಸರಿಸಿವೆ.
1885: `ಆಧುನಿಕ ಹಿಂದಿ'ಯ ಜನಕ ಎಂದೇ ಪರಿಗಣಿತರಾಗಿದ್ದ ಭಾರತೀಯ ಕವಿ, ನಾಟಕಕಾರ, ವಿಮರ್ಶಕ, ಪತ್ರಕರ್ತ `ಭರತೇಂದು' ಹರೀಶ್ ಚಂದ್ರ ಅವರು ತಮ್ಮ 35ನೇ ವಯಸ್ಸಿನಲ್ಲಿ ನಿಧನರಾದರು.
No comments:
Post a Comment