ಇಂದಿನ ಇತಿಹಾಸ
ಜನವರಿ 08
ಖ್ಯಾತ ಮರಾಠಿ ಸಾಹಿತಿ ವಿಂದಾ ಕರಂಡೀಕರ್ ಅವರು 2003ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಹೆಚ್ಚು ಪ್ರಾಯೋಗಿಕ ಹಾಗೂ ಸಮಗ್ರವಾಗಿ ಸಾಹಿತ್ಯ ಕೃಷಿ ಮಾಡಿದ ಮರಾಠಿ ಸಾಹಿತಿಗಳಲ್ಲಿ ಕರಂಡೀಕರ್ ಮೊದಲಿಗರು.
2009: ಜಪಾನ್‌ನ ತಾಕಯಾಮ ನಗರದಲ್ಲಿ 1993ರಲ್ಲಿ ಮೃತಪಟ್ಟ ಹೋರಿಯೊಂದರ ತದ್ರೂಪಿಗಳನ್ನು ವಿಜ್ಞಾನಿಗಳು 15 ವರ್ಷಗಳ ಬಳಿಕ ಸೃಷ್ಟಿಸಿದ್ದು, ಅವುಗಳನ್ನು ಈದಿನ ಪ್ರದರ್ಶಿಸಿದರು.
2009: ಸರ್ಕಾರದ ಪ್ರಮುಖ 28 ಇಲಾಖೆಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸುವಲ್ಲಿ ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾದರು. ಪ್ರಕರಣದ ಸಂಬಂಧ ಏಳು ಜನರನ್ನು ಬಂಧಿಸಿದ ಅವರು ಭಾರಿ ಪ್ರಮಾಣದ ನಕಲಿ ದಾಖಲೆ ಪತ್ರಗಳು, ಸೀಲುಗಳನ್ನು ವಶಪಡಿಸಿಕೊಂಡರು. ನಕಲಿ ದಾಖಲೆಗಳಿಂದಾದ ನಷ್ಟದ ಅಂದಾಜು ಮಾಡಲು ಸಾಧ್ಯವಾಗಿಲ್ಲ, ಆದರೆ ನೂರಾರು ಕೋಟಿ ರೂಪಾಯಿ ವಂಚನೆ ನಡೆದಿರಬಹುದು ಎಂದು ಊಹಿಸಲಾಯಿತು. ಈ ಜಾಲದ ರೂವಾರಿ ಬಿಸ್ಮಿಲ್ಲಾನಗರದ ನಿವಾಸಿ ಅಬ್ದುಲ್ ಖಾದರ್ (65), ಲಕ್ಷ್ಮಿಲೇಔಟ್‌ನ ಅರಕೆರೆಯ ರೆಹಮತ್ ಉಲ್ಲಾ (33) ಭೂಪಸಂದ್ರದ ಆರ್‌ಎಂವಿ ಎರಡನೇ ಹಂತದ ಲಕ್ಷ್ಮೀಪತಿ (39), ಚುಂಚಘಟ್ಟ ಮುಖ್ಯರಸ್ತೆಯ ರಾಮಚಂದ್ರ (39), ಜಯನಗರದ ಸೈಯದ್ ಆರೀಫ್ (42), ನಿಜಾಮ್ದುದೀನ್ ಸ್ಟ್ರೀಟ್ ಬಾಬಾಲೇನ್‌ನ ಅಶ್ಫಕ್ (41) ಮತ್ತು ಕಾಮಾಕ್ಷಿಪಾಳ್ಯ ಕರಿಕಲ್ಲು ನಿವಾಸಿ ಲಕ್ಷ್ಮಣ (44) ಅವರನ್ನು ಬಂಧಿಸಲಾಯಿತು. ಒಟ್ಟು 14 ಮಂದಿಯ ಗುಂಪು ಈ ಅಕ್ರಮದಲ್ಲಿ ತೊಡಗಿದ್ದುದು ಬೆಳಕಿಗೆ ಬಂತು. ಇನ್ನೂ ಏಳು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
2009: ಜಾರ್ಖಂಡ್‌ನ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ತಮಾರ್ ಕ್ಷೇತ್ರದ ಉಪಚನಾವಣೆಯಲ್ಲಿ ಗೆಲ್ಲಲೇಬೇಕಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ನಾಯಕ ಶಿಬು ಸೊರೇನ್‌ಗೆ ಮತ್ತೆ ಅದೃಷ್ಟ ಕೈಕೊಟ್ಟಿತು. ಜಾರ್ಖಂಡ್ ಪಕ್ಷದ ರಾಜಾ ಪೀಟರ್ ಕೈಯಲ್ಲಿ ಅವರು 9 ಸಾವಿರ ಮತಗಳಿಂದ ಸೋತು ತೀವ್ರ ಮುಖಭಂಗಕ್ಕೆ ಗುರಿಯಾದರು.. ಕಳೆದ ವರ್ಷದ ಆಗಸ್ಟ್ 27ರಂದು ಮುಖ್ಯಮಂತ್ರಿ ಗಾದಿಗೇರಿದ್ದ ಸೊರೇನ್ ಅವರು ಫೆ.27ರೊಳಗೆ ರಾಜ್ಯ ವಿಧಾನಸಭೆಗೆ ಆರಿಸಿ ಬರಬೇಕಿತ್ತು. ಆದರೆ ಈ ಅಗ್ನಿಪರೀಕ್ಷೆಯಲ್ಲಿ ಅವರು ವಿಫಲರಾದರು.
2009: ನ್ಯೂಯಾರ್ಕ್ ಅಸೆಂಬ್ಲಿ ಅಧಿವೇಶನನ ಮೊದಲ ದಿನ ಮುಂಬೈಯಲ್ಲಿ ಉಗ್ರರ ದಾಳಿಗೆ ಬಲಿಯಾದವರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಉಗ್ರರ ವಿರುದ್ಧ ಹೋರಾಡಲು ಭಾರತೀಯರಿಗೆ ಬೆಂಬಲ ಸೂಚಿಸಿ ಅಸೆಂಬ್ಲಿ ಈ ಕ್ರಮ ಕೈಗೊಂಡಿತು. ಈ ಹಿಂದೆ ಯಾವ ಘಟನೆಗೂ ಅಸೆಂಬ್ಲಿ ಇಂಥ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ.
2008: ಮುಂಜಾನೆಯ ಸೂರ್ಯಕಿರಣದ (ಸೂರ್ಯರಶ್ಮಿ) ಜೊತೆಗೆ ನಿಮ್ಮ ದೇಹ ಸೇರುವ ವಿಟಮಿನ್ ಡಿ, ನಿಮ್ಮ ಹೃದಯವನ್ನು ರೋಗಗಳಿಂದ ಕಾಪಾಡುತ್ತದೆ ಮಾತ್ರವಲ್ಲ, ಮೂಳೆರೋಗ, ಮಧುಮೇಹ ಹಾಗೂ ಖನಿಜಾಂಶಗಳ ಕೊರತೆಯಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಅವು ಸಡಿಲವಾಗುವ ಸಾಧ್ಯತೆಗಳನ್ನೂ ತಪ್ಪಿಸುತ್ತವೆ ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿತು. ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರವವರು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಅದರಲ್ಲೂ ಹೆಚ್ಚಿನ ರಕ್ತದೊತ್ತಡವುಳ್ಳವರು ಹೃದಯ ರೋಗಗಳಿಗೆ ಬಲಿಯಾಗುವ ಸಾಧ್ಯತೆಗಳು ಇತರರಿಗಿಂತ ದುಪ್ಪಟ್ಟು ಎಂದು ಹಾರ್ವರ್ಡ್ ವೈದ್ಯ ಕಾಲೇಜಿನ ಪ್ರೊಫೆಸರ್ ಥಾಮಸ್ ವಾಂಗ್ ಹೇಳಿದರು. ಸೂರ್ಯರಶ್ಮಿ ಹೊರತಾಗಿ ವಿಟಮಿನ್ ಡಿ ಅಂಶ ಮೀನು, ಮೊಟ್ಟೆ, ಹಾಲು ಮತ್ತು ದ್ವಿದಳ ಧಾನ್ಯದಿಂದಲೂ ದೊರಕುತ್ತದೆ. ವಿಟಮಿನ್ ಡಿ ಅಂಶವು ಸರಿಯಾದ ಪ್ರಮಾಣದಲ್ಲಿದ್ದರೆ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ತಡೆಯೊಡ್ಡುತ್ತವೆ. ರಕ್ತ ಪರಿಚಲನೆ ಸಮರ್ಪಕವಾಗುವುದಲ್ಲದೆ ರಕ್ತ ನಾಳಗಳು ಪ್ರತಿರೋಧಕ ಶಕ್ತಿಯನ್ನೂ ಉತ್ತಮಪಡಿಸಿಕೊಳ್ಳುತ್ತವೆ. ಸರಾಸರಿ 59 ವರ್ಷದ 1700 ಜನರನ್ನು ಐದು ವರ್ಷಗಳ ಕಾಲ ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂತು. ಭಾರತೀಯರು ಮುಂಜಾನೆ ಎದ್ದು ಸೂರ್ಯನಿಗೆ ಅಭಿಮುಖವಾಗಿ ನಿಂತು ಅರ್ಘ್ಯ ಬಿಡುವುದು, ಸೂರ್ಯ ನಮಸ್ಕಾರ ಮಾಡುವುದರ ಹಿಂದಿನ ವೈಜ್ಞಾನಿಕತೆ ಏನೆಂದು ಅರ್ಥವಾಯಿತಲ್ಲ?
2008: ಪ್ರತಿನಿತ್ಯ ಐದು ಬಗೆಯ ಹಣ್ಣು ಮತ್ತು ತರಕಾರಿ ಬಳಕೆ, ನಿಯಮಿತ ವ್ಯಾಯಾಮ, ಧೂಮಪಾನ ರಹಿತ ಬದುಕು ಹಾಗೂ ಮಿತವಾದ ಮದ್ಯ ಸೇವನೆ - ಇವಿಷ್ಟನ್ನೂ ನೀವು ನಿರಂತರ ಪಾಲಿಸಿದ್ದೇ ಆದರೆ ಸರಾಸರಿ ಮನುಷ್ಯರ ಆಯುಷ್ಯಕ್ಕಿಂತ 14 ವರ್ಷ ಹೆಚ್ಚು ಕಾಲ ಬದುಕಬಲ್ಲಿರಿ ಎಂದು ಮೆಲ್ಬೊರ್ನಿನ ವೈದ್ಯಕೀಯ ವಿಜ್ಞಾನ ಪತ್ರಿಕೆಯ ವರದಿಯೊಂದು ತಿಳಿಸಿತು. 1993 ಹಾಗೂ 1997ರ ನಡುವಿನ ಅವಧಿಯಲ್ಲಿ 20 ಸಾವಿರ ಆರೋಗ್ಯವಂತ ಬ್ರಿಟಿಷ್ ಪುರುಷರು ಮತ್ತು ಮಹಿಳೆಯರ ಜೀವನಶೈಲಿಯನ್ನು ಅಭ್ಯಸಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಮುಖ್ಯವಾಗಿ ಧೂಮಪಾನ ತೊರೆಯುವುದರಿಂದ ಆರೋಗ್ಯದಲ್ಲಿ ಪರಿಣಾಮಕಾರಿ ಬದಲಾವಣೆ ಕಂಡುಬರುತ್ತದೆ. ಜೊತೆಗೆ ಹಣ್ಣು ಮತ್ತು ತರಕಾರಿ ಸೇವನೆಯಿಂದ ಆರೋಗ್ಯ ವೃದ್ಧಿಯಲ್ಲಿ ಶೇಕಡ 80ರಷ್ಟು ಗಮನಾರ್ಹ ಬದಲಾವಣೆ ಉಂಟಾಗುತ್ತದೆ ಎಂದೂ ವರದಿ ಹೇಳಿತು.
2008: ಶ್ರೀಲಂಕಾದ ಸಚಿವ ಡಿ.ಎಂ. ಡಿಸ್ಸನಾಯಕೆ ಅವರನ್ನು ಶಂಕಿತ ಎಲ್ ಟಿ ಟಿ ಇ ಉಗ್ರಗಾಮಿಗಳು ಕೊಲಂಬೋದಲ್ಲಿ ನೆಲಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದರು. ಎರಡು ದಿನಗಳ ಹಿಂದೆ ಎಲ್ ಟಿ ಟಿ ಇ ಗುಪ್ತದಳದ ಮುಖ್ಯಸ್ಥ ಕರ್ನಲ್ ಚಾರ್ಲ್ಸ್ ಅವರನ್ನು ಭದ್ರತಾಪಡೆಗಳು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸಚಿವರ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದರು. ಬೆಂಗಾವಲು ಪಡೆಯೊಂದಿಗೆ ವಾಹನದಲ್ಲಿ ಸಚಿವ ಡಿಸ್ಸನಾಯಕೆ ಹೋಗುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿತು. ತೀವ್ರ ಗಾಯಗಳಿಂದಾಗಿ ಸಚಿವರು ಹಾಗೂ ಅವರ ಜೊತೆಗಿದ್ದ ಒಬ್ಬ ಭದ್ರತಾ ಸಿಬ್ಬಂದಿ ಮೃತರಾದರು.
2008: ನವದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಈ ಮೊದಲಿನ ಎಲ್ಲ ದಾಖಲೆಗಳನ್ನು ಮುರಿಯಿತು. ಜಾಗತಿಕ ಮಾರುಕಟ್ಟೆ ಸಲಹೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಖರೀದಿ ಭರಾಟೆ ನಡೆದದ್ದರಿಂದ 10 ಗ್ರಾಂ ಚಿನ್ನದ ಬೆಲೆಯು ರೂ 11,150ಕ್ಕೆ ಏರಿತು. ಪ್ರತಿ 10 ಗ್ರಾಂಗಳಿಗೆ ರೂ 175ರಷ್ಟು ಏರಿಕೆ ಕಂಡು, ಈ ತಿಂಗಳ 4ರ ದಾಖಲೆ ಬೆಲೆಯಾದ 11,025 ರೂಪಾಯಿಗಳ ದಾಖಲೆಯನ್ನೂ ಮುರಿಯಿತು.
2008: ವಿವಾದಾತ್ಮಕ ಅಂಪೈರ್, ವೆಸ್ಟ್ ಇಂಡೀಸಿನ ಸ್ಟೀವ್ ಬಕ್ನರ್ ಅವರನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮುಂದಿನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೈ ಬಿಟ್ಟಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒತ್ತಡಕ್ಕೆ ಮಣಿದ ಐಸಿಸಿ ಈ ಮಹತ್ವದ ನಿರ್ಣಯ ಕೈಗೊಂಡಿತು. ಮೂರನೇ ಟೆಸ್ಟಿನಲ್ಲಿ ಬಕ್ನರ್ ಬದಲು ನ್ಯೂಜಿಲೆಂಡಿನ ಬಿಲಿ ಬೌಡೆನ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುವರು ಎಂದು ಐಸಿಸಿ ಪ್ರಕಟಿಸಿತು. ಜನಾಂಗೀಯ ನಿಂದನೆ ಪ್ರಕರಣದಲ್ಲಿ ಮೂರು ಟೆಸ್ಟ್ ಪಂದ್ಯಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಹರಭಜನ್ ಸಿಂಗ್ ಅವರಿಗೆ ಪರ್ತ್ ಟೆಸ್ಟಿನಲ್ಲಿ ಆಡಲು ಐಸಿಸಿ ಅನುಮತಿ ನೀಡಿತು. ಹರಭಜನ್ ಸಿಂಗ್ ಸಲ್ಲಿಸಿದ ಮೇಲ್ಮನವಿಯ ಬಗ್ಗೆ ನಿರ್ಣಯ ಕೈಗೊಳ್ಳುವವರೆಗೆ ನಿಷೇಧ ಶಿಕ್ಷೆಯನ್ನು ತಡೆಹಿಡಿಯಲಾಯಿತು.
2008: ಮಲೇಷ್ಯಾ ಸರ್ಕಾರ ತಮ್ನನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಅಲ್ಲಿನ ಹಿಂದೂಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅಲ್ಲಿನ ಆಡಳಿತವು ಭಾರತೀಯ ನೌಕರರ ನೇಮಕಾತಿಯನ್ನು ಸ್ಥಗಿತಗೊಳಿಸಿತು. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದ ಸರ್ಕಾರವು ದೇವಾಲಯದ ಅರ್ಚಕರು, ಶಿಲ್ಪಿಗಳು, ಸಂಗೀತಗಾರರು ಹಾಗೂ ಇನ್ನಿತರ ನೌಕರರ ನೇಮಕಾತಿಯನ್ನು ಸ್ಥಗಿತಗೊಳಿಸಿತು.
2007: ನಾಪತ್ತೆಯಾದ ವಾಣಿಜ್ಯ ವಿಮಾನಕ್ಕಾಗಿ ಶೋಧ ನಡೆಸುತ್ತಿರುವ ಇಂಡೋನೇಷ್ಯದ ನೌಕಾಪಡೆಯ ಹಡಗೊಂದು ಸುಲಾವೆಸ್ಟ್ ಕರಾವಳಿಯ ಬಳಿ ಸಮುದ್ರದ ಒಳಗೆ ಬೃಹತ್ ಗಾತ್ರದ ವಸ್ತುವೊಂದನ್ನು ಪತ್ತೆಹಚ್ಚಿತು. ಆದರೆ ಆ ವಸ್ತು ವಿಮಾನವೇ ಎಂಬುದು ದೃಢಪಟ್ಟಿಲ್ಲ.
2007: ಕನ್ನಡ ಜಾಗೃತಿ ಕುರಿತ ಪುಸ್ತಕಕ್ಕೆ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಶಸ್ತಿಗೆ ಪತ್ರಕರ್ತ ಈಶ್ವರ ದೈತೋಟ ಅವರ `ಕನ್ನಡ ಕಷಾಯ' ಕೃತಿ ಆಯ್ಕೆಯಾಯಿತು.
2006: ಖ್ಯಾತ ಮರಾಠಿ ಸಾಹಿತಿ ವಿಂದಾ ಕರಂಡೀಕರ್ ಅವರು 2003ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಹೆಚ್ಚು ಪ್ರಾಯೋಗಿಕ ಹಾಗೂ ಸಮಗ್ರವಾಗಿ ಸಾಹಿತ್ಯ ಕೃಷಿ ಮಾಡಿದ ಮರಾಠಿ ಸಾಹಿತಿಗಳಲ್ಲಿ ಕರಂಡೀಕರ್ ಮೊದಲಿಗರು.
2006: ಕರ್ನಾಟಕದ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಗೋಹತ್ಯೆ ನಿಲ್ಲುವವರೆಗೆ ಹಾಗೂ ತಳಿ ಸಂಕರದಂತಹ ಪದ್ಧತಿ ಕೊನೆಗೊಳ್ಳುವವರೆಗೂ ಭಾರತೀಯ ಗೋ ಯಾತ್ರೆ ನಿಲ್ಲದು ಎಂದು ಘೋಷಿಸಿದರು. 68 ದಿನಗಳ ಕಾಲ 6800 ಕಿಲೋಮೀಟರುಗಳಿಗೂ ಹೆಚ್ಚು ದೂರ ಕ್ರಮಿಸಿದ ಗೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗೋವಿಗೆ ಉತ್ತಮ ಬದುಕು ಮತ್ತು ನಿರಾತಂಕ ಸಾಯುವ ಹಕ್ಕು ದೊರೆಯುವವರೆಗೂ ಈ ಯಾತ್ರೆ ನಿಲ್ಲದು ಎಂದು ಘೋಷಿಸಿದರು. ಇದೇ ದಿನ ಶ್ರೀಮಠದ ಉದ್ಧೇಶಿತ ಗೋ ಬ್ಯಾಂಕ್ ಆರಂಭಗೊಂಡಿದ್ದು, ಈ ಕ್ಷಣದಿಂದಲೇ ಮಠದ ಎಲ್ಲ ಶಾಖೆಗಳೂ ಬ್ಯಾಂಕ್ ಶಾಖೆಗಳಾಗಿ ಪರಿವರ್ತನೆ ಹೊಂದಿವೆ ಎಂದು ಪ್ರಕಟಿಸಿದರು.
2006: ಇಸ್ರೊ ಅಧ್ಯಕ್ಷ ಮಾಧವನ್ ನಾಯರ್, ಮಾಜಿ ಸಚಿವ ಎಂ.ವೈ. ಘೋರ್ಪಡೆ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿತು.
2006: ಬಾಲಿವುಡ್ ಸುಂದರಿ ಐಶ್ವರ್ಯ ರೈ ಅವರು ಮಾದಕ ದೇಹಸಿರಿಯುಳ್ಳ (ಅತ್ಯಂತ ಸೆಕ್ಸಿ) ವಿಶ್ವದ 10 ಮಂದಿಯಲ್ಲಿ ಒಬ್ಬರಾಗಿದ್ದಾರೆ ಎಂದು ಅಮೆರಿಕದ ಟಿವಿ ಚಾನೆಲ್ ಒಂದು ಪ್ರಕಟಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಸೆಕ್ಸಿ ದೇಹಸಿರಿ ಹೊಂದಿರುವ ಹಾಲ್ಲೆ ಬೆರ್ರಿ, ಜೆಸ್ಸಿಯಾ ಸಿಂಪ್ಸನ್, ಬ್ರಿಟ್ನಿ ಸ್ಟಿಯರ್ಸ್ ಮತ್ತು ಮಡೋನ್ನಾ ಅವರನ್ನು ಐಶ್ವರ್ಯ ಹಿಂದೆ ಹಾಕಿದ್ದಾರೆ ಎಂದು ಟಿವಿ ಚಾನೆಲ್ ಹೇಳಿತು.
2006: ದೆಹಲಿಯಲ್ಲಿ 70 ವರ್ಷಗಳ ಅವಧಿಯಲ್ಲೇ ಅತ್ಯಂತ ಹೆಚ್ಚು ಚಳಿ ದಾಖಲಾಯಿತು. ಉಷ್ಣಾಂಶ 0.2 ಡಿಗ್ರಿ ಸೆಲ್ಸಿಯಸ್ಗೆ ಇಳಿದಾಗ ಈ ದಾಖಲೆ ನಿರ್ಮಾಣವಾಯಿತು.
1998: ಅಮೆರಿಕನ್ ವರ್ತಕ ವಾಲ್ಟೇರ್ ಇ. ಡೀಮರ್ (1904-1998) ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಇವರು 1928ರಲ್ಲಿ ಫ್ಲೀರ್ ಚ್ಯುಯಿಂಗ್ ಗಮ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಅಕಸ್ಮಾತ್ ಆಗಿ ಬಬಲ್ ಗಮ್ ನ್ನು ಕಂಡು ಹಿಡಿದರು.
1996: ಫ್ರಾನ್ಸಿನ ಮಾಜಿ ಅಧ್ಯಕ್ಷ ಫ್ರಾಂಕೋಯಿ ಮಿತೆರಾ ಅವರು ಪ್ಯಾರಿಸ್ಸಿನಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಮೃತರಾದರು.
1965: ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದ ಅಶೋಕ ಕುಮಾರ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಒಂಬತ್ತು ಮಂದಿ ಅಂಧ ಕಲಾವಿದರಿಗೆ ನೃತ್ಯ ಶಿಕ್ಷಣ ನೀಡಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂಧರಿಂದ ನೃತ್ಯ ನಡೆಸಿಕೊಟ್ಟ ಅಪೂರ್ವ ಕಲಾವಿದರು ಇವರು. 30 ಮಂದಿ ಅಂಧರ ತಂಡವನ್ನು ಕೂಡಾ ರಚಿಸಿದ ಅಪರೂಪದ ಕಲಾವಿದ.
1953: ಕಲಾವಿದ ಬಿ.ವಿ. ರಾಜರಾಂ ಜನನ.
1945: ಮಾಲತಿ ವೀರಪ್ಪ ಮೊಯಿಲಿ ಹಟ್ಟಿದ ದಿನ.
1944: ಏಜಾಸುದ್ದೀನ್ ಹುಟ್ಟಿದ ದಿನ.
1936: ಸಾಹಿತಿ ಸಿ.ಎನ್. ರಾಮಚಂದ್ರ ಹುಟ್ಟಿದ ದಿನ.
1933: ಸಾಹಿತಿ ಶ್ರೀನಿವಾಸ ಉಡುಪ ಹುಟ್ಟಿದ ದಿನ.
1909: ಭಾರತೀಯ ಸಾಹಿತಿ ಆಶಾಪೂರ್ಣ ದೇವಿ (1909-1995) ಹುಟ್ಟಿದರು. 1976ರಲ್ಲಿ `ಜ್ಞಾನಪೀಠ' ಪ್ರಶಸ್ತಿ ಪಡೆದ ಇವರು ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1903: ಖ್ಯಾತ ಸಾಹಿತಿ ಎಲ್. ಗುಂಡಪ್ಪ ಹುಟ್ಟಿದ ದಿನ.
1899: ಶ್ರೀಲಂಕೆಯ ಅಧ್ಯಕ್ಷರಾಗಿದ್ದ ಸೊಲೋಮನ್ ಭಂಡಾರನಾಯಿಕೆ (1899-1959) ಹುಟ್ಟಿದರು. 1959ರಲ್ಲಿ ಇವರನ್ನು ಕೊಲೆಗೈಯಲಾಯಿತು. ಇವರ ಪತ್ನಿ ಸಿರಿಮಾವೋ ಭಂಡಾರನಾಯಿಕೆ ಉತ್ತರಾಧಿಕಾರಿಯಾದರು.
1898: ಸಾಹಿತಿ ಕೆ.ವಿ. ಅಯ್ಯರ್ ಹುಟ್ಟಿದ ದಿನ.
1642: ಇಟಲಿಯ ಖಗೋಳ ತಜ್ಞ ಹಾಗೂ ಭೌತ ತಜ್ಞ ಗೆಲಿಲಿಯೋ ಗೆಲೀಲಿ (1564-1642) ತನ್ನ 77ನೇ ವಯಸ್ಸಿನಲ್ಲಿ ಮೃತನಾದ.
No comments:
Post a Comment