Friday, February 12, 2010

ಇಂದಿನ ಇತಿಹಾಸ History Today ಜನವರಿ 11

ಇಂದಿನ ಇತಿಹಾಸ

ಜನವರಿ 11

ಶಿರ್ಡಿಯ ಶಿರ್ಡಿ ಸಾಯಿಬಾಬಾ ಮಂದಿರದ ಗೋಡೆಗಳನ್ನು ಬಂಗಾರದ ಹೊದಿಕೆಯಿಂದ ಅಲಂಕರಿಸಲಾಯಿತು. 50 ಕೆ.ಜಿ.ಬಂಗಾರ, 50ಕೆ.ಜಿ. ಕಂಚು ಹಾಗೂ 250 ಕೆ.ಜಿ.ತಾಮ್ರದಿಂದ ತಯಾರಿಸಲಾದ ಈ ಹೊದಿಕೆಯನ್ನು ಹೈದರಾಬಾದ್ ಮೂಲದ ಉದ್ಯಮಿ ಆದಿನಾರಾಯಣ ರೆಡ್ಡಿ ಅವರು ಸಾಯಿಬಾಬಾ ಮಂದಿರಕ್ಕೆ ಸಮರ್ಪಿಸಿದರು.

2009: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹುಬ್ಬಳ್ಳಿ ನ್ಯಾಯಾಲಯದಲ್ಲಿನ ಬಾಂಬ್ ಸ್ಛೋಟ, ಧಾರವಾಡ ಸಮೀಪದ ವೆಂಕಟಾಪೂರ ಗ್ರಾಮದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್‌ಗಳನ್ನು ಹುದುಗಿಸಿಟ್ಟಿದ್ದ ಪ್ರಕರಣ, ಹಲವಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದರು. ದೀಪಾವಳಿ ದಿನ (ಅ.29) ನಡೆದ ವ್ಯಾಪಾರಿ ಕಿರಣ ಕುಮಟಗಿ ಎಂಬವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ನಗರದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಛೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದರು.

2008: 2007- 08ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿತು. ಜೀವಮಾನದ ಸಾಧನೆ ಪ್ರಶಸ್ತಿಗಾಗಿ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಅವರನ್ನು (ಪುಟ್ಟಣ್ಣ ಕಣಗಾಲ್ ಪ್ರಶಸ್ತಿ), ಡಾ. ವಿಷ್ಣುವರ್ಧನ್ (ಡಾ. ರಾಜ್‌ಕುಮಾರ್ ಪ್ರಶಸ್ತಿ) ಮತ್ತು ಪಾರ್ವತಮ್ಮ ರಾಜ್‌ಕುಮಾರ್ (ನಿರ್ಮಾಪಕಿ) ಅವರನ್ನು ಆಯ್ಕೆ ಮಾಡಲಾಯಿತು. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಗುಲಾಬಿ ಟಾಕೀಸ್' ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪಿ.ಆರ್. ರಾಮದಾಸ ನಾಯ್ಡು ನಿರ್ದೇಶನದ 'ಮೊಗ್ಗಿನ ಜಡೆ' ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಗಳು ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. 'ಮಿಲನ' ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರು ಸುಬ್ಬಯ್ಯ ನಾಯ್ಡು (ಅತ್ಯುತ್ತಮ ನಟ) ಪ್ರಶಸ್ತಿ ಪಡೆದರು. ಗುಲಾಬಿ ಟಾಕೀಸ್ ಚಿತ್ರದಲ್ಲಿನ ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಉಮಾಶಂಕರ ಸ್ವಾಮಿ ನಿರ್ದೇಶನದ 'ಬನದ ನೆರಳು' ಚಿತ್ರವನ್ನು ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಏಕಲವ್ಯ' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ದೊರಕಿತು. ತುಳು ಚಿತ್ರ 'ಬಿರ್ಸೆ' ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಗಳಿಸಿತು. ಇತರೆ ಪ್ರಶಸ್ತಿ ಪುರಸ್ಕೃತರು: ಅತ್ಯುತ್ತಮ ಪೋಷಕ ನಟ ಪ್ರಶಸ್ತಿ- ರಾಜೇಶ್ (ಮೊಗ್ಗಿನ ಜಡೆ), ಅತ್ಯುತ್ತಮ ಪೋಷಕ ನಟಿ- ಸ್ಮಿತಾ (ಅವ್ವ). ಅತ್ಯುತ್ತಮ ಕಂಠದಾನ ಕಲಾವಿದ- ಸುದರ್ಶನ್ (ಆ ದಿನಗಳು), ಅತ್ಯುತ್ತಮ ಕಂಠದಾನ ಕಲಾವಿದೆ- ಚಂಪಾಶೆಟ್ಟಿ (ಕುರುನಾಡು), ಅತ್ಯುತ್ತಮ ಕಥೆ ಬರಹಗಾರ- ಪಿ. ಲಂಕೇಶ್ (ಅವ್ವ), ಅತ್ಯುತ್ತಮ ಚಿತ್ರಕಥೆ ಬರಹಗಾರ- ಗಿರೀಶ್ ಕಾಸರವಳ್ಳಿ (ಗುಲಾಬಿ ಟಾಕೀಸ್), ಅತ್ಯುತ್ತಮ ಸಂಭಾಷಣೆಕಾರ- ಅಗ್ನಿ ಶ್ರೀಧರ್ (ಆ ದಿನಗಳು), ಅತ್ಯುತ್ತಮ ಛಾಯಾಗ್ರಾಹಕ- ಎಚ್.ಸಿ. ವೇಣು (ಆ ದಿನಗಳು), ಅತ್ಯುತ್ತಮ ಸಂಗೀತ ನಿರ್ದೇಶಕ- ಸಾಧು ಕೋಕಿಲ ( ಇಂತಿ ನಿನ್ನ ಪ್ರೀತಿಯ). ಅತ್ಯುತ್ತಮ ಧ್ವನಿ ಗ್ರಾಹಕ- ಎನ್. ಕುಮಾರ್ (ಆಕ್ಸಿಡೆಂಟ್), ಅತ್ಯುತ್ತಮ ಸಂಕಲನಕಾರ- ಸುರೇಶ್ ಅರಸ್ (ಸವಿಸವಿ ನೆನಪು), ಅತ್ಯುತ್ತಮ ಬಾಲನಟ- ಮಾಸ್ಟರ್ ಲಿಖಿತ್ (ನಾನು ಗಾಂಧಿ), ಅತ್ಯುತ್ತಮ ಬಾಲನಟಿ- ಬೇಬಿ ಪ್ರಕೃತಿ (ಗುಬ್ಬಚ್ಚಿಗಳು), ಅತ್ಯುತ್ತಮ ಕಲಾ ನಿರ್ದೇಶಕ- ಜಿ. ಮೂರ್ತಿ, ಅತ್ಯುತ್ತಮ ಗೀತ ರಚನೆಕಾರ- ಗೊಲ್ಲಹಳ್ಳಿ ಶಿವಪ್ರಸಾದ್ (ಮಾತಾಡ್ ಮಾತಾಡ್ ಮಲ್ಲಿಗೆ- ಝಣ ಝಣ ಕಾಂಚಾಣದಲ್ಲಿ...), ಅತ್ಯುತ್ತಮ ಹಿನ್ನೆಲೆ ಗಾಯಕ- ಎಸ್.ಪಿ. ಬಾಲಸ್ಗ್ರುಹ್ಮಣ್ಯಂ (ಸವಿಸವಿ ನೆನಪು- ನೆನಪು ನೆನಪು ಅವಳ ನೆನಪು...), ಅತ್ಯುತ್ತಮ ಹಿನ್ನೆಲೆ ಗಾಯಕಿ- ವಾಣಿ (ಇಂತಿ ನಿನ್ನ ಪ್ರೀತಿಯ- ಮಧ್ಗುನ ಕರೆದರೇ...).

2009: ಶಿರ್ಡಿಯ ಶಿರ್ಡಿ ಸಾಯಿಬಾಬಾ ಮಂದಿರದ ಗೋಡೆಗಳನ್ನು ಬಂಗಾರದ ಹೊದಿಕೆಯಿಂದ ಅಲಂಕರಿಸಲಾಯಿತು. 50 ಕೆ.ಜಿ.ಬಂಗಾರ, 50ಕೆ.ಜಿ. ಕಂಚು ಹಾಗೂ 250 ಕೆ.ಜಿ.ತಾಮ್ರದಿಂದ ತಯಾರಿಸಲಾದ ಈ ಹೊದಿಕೆಯನ್ನು ಹೈದರಾಬಾದ್ ಮೂಲದ ಉದ್ಯಮಿ ಆದಿನಾರಾಯಣ ರೆಡ್ಡಿ ಅವರು ಸಾಯಿಬಾಬಾ ಮಂದಿರಕ್ಕೆ ಸಮರ್ಪಿಸಿದರು.

2009: ಕೇಂದ್ರ ಸರ್ಕಾರ ಐಟಿ ಕ್ಷೇತ್ರ ಪರಿಣತ, ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರೇಕ್ ಮತ್ತು ಕೇಂದ್ರ ಸರ್ಕಾರದ ಕಾನೂನು ಸಲಹೆಗಾರ ಅಚ್ಯುತನ್ ಅವರನ್ನು ಸತ್ಯಂ ಕಂಪ್ಯೂಟರ್‌ನ ಹೊಸ ನಿರ್ದೇಶಕರಾಗಿ ಭಾನುವಾರ ನೇಮಿಸಿತು.

2008: ಜಗತ್ತಿನ ಅತ್ಯುನ್ನತ `ಮೌಂಟ್ ಎವರೆಸ್ಟ್' ಶಿಖರವನ್ನೇರಿದ ಮೊದಲಿಗರಲ್ಲಿ ಒಬ್ಬರಾದ ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲೆರಿ (88) ವೆಲಿಂಗ್ಟನ್ನಿನಲ್ಲಿ ಈದಿನ ನಿಧನರಾದರು. ಹಿಲೆರಿಯವರು 1953ರಲ್ಲಿ ನೇಪಾಳದ ತೇನಸಿಂಗ್ ನೊರ್ಗೇ ಶೆರ್ಪಾ ಅವರೊಂದಿಗೆ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತುವ ಮೂಲಕ ಸಾಧನೆಯ ಕೀರ್ತಿ ಪತಾಕೆ ಹಾರಿಸಿದ್ದರು. ನೇಪಾಳದಲ್ಲಿ ಹಿಲೆರಿಯವರ ನಿಧನದ ಸುದ್ದಿ ಅರಿತ ಶೆರ್ಪಾ ಸ್ನೇಹಿತರು ಬೌದ್ಧ ಧರ್ಮಸ್ಥಾನಗಳಲ್ಲಿ ಮೇಣದ ಬತ್ತಿಗಳನ್ನು ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೌಂಟ್ ಎವರೆಸ್ಟ್ ಶಿಖರವಿರುವ ಸೋಲುಕುಂಭು ಪ್ರದೇಶ ಮತ್ತು ಅಲ್ಲಿನ ಜನರಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಿಲೆರಿಯವರಿಗೆ 2003ರಲ್ಲಿ `ನೇಪಾಳಿ ನಾಗರಿಕ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. ಇಲ್ಲಿನ ಶೆರ್ಪಾ ಸಮುದಾಯದವರಿಗಾಗಿ ಶಾಲೆ ಮತ್ತು ಆಸ್ಪತ್ರೆಯನ್ನು ಸಹಾ ಹಿಲೆರಿ ಸ್ಥಾಪಿಸಿದ್ದರು. 1919ರ ಜುಲೈ 20ರಂದು ಆಕ್ಲ್ಯಾಂಡಿನಲ್ಲಿ ಜನಿಸಿದ ಹಿಲೆರಿ, ತಮ್ಮ 33ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದರು. ಆಕ್ಲ್ಯಾಂಡಿನಲ್ಲಿ ಜೇನು ಸಾಕಣಿಕೆದಾರರಾಗಿದ್ದ ಅವರು ತಮ್ಮ ಸಾಹಸಮಯ ಶ್ರಮ ಪೂರ್ಣವಾಗುವ ತನಕವೂ ಗುರಿ ಬಿಡದೆ ಸಾಧನೆ ಮಾಡಿದರು. ಆರು ಅಡಿ ಎತ್ತರ ಮತ್ತು ಬಲಶಾಲಿ ಶರೀರ ಹೊಂದಿದ್ದ ಹಿಲೆರಿ ಹಿಮಾಲಯ ಪರ್ವತದಲ್ಲಿ ಹೊಂದಿದ್ದ ಅನುಭವವನ್ನು ಗುರುತಿಸಿದ ಬ್ರಿಟಿಷ್ ಸಾಹಸ ತಂಡದ ನಾಯಕ ಜಾನ್ ಹಂಟ್ ಅವರು ಎವರೆಸ್ಟ್ ಶಿಖರ ಏರುವ ಅಂತಿಮ ಸ್ಪರ್ಧಿಯಾಗಿ ಆಯ್ಕೆ ಮಾಡಿದರು. ಇವರೊಂದಿಗೆ ಶೆರ್ಪಾ ತೇನಸಿಂಗ್ ಪರ್ವತಾರೋಹಣದ ಜೊತೆಗಾರನಾಗಿ ಆಯ್ಕೆಯಾಗಿದ್ದರು. ಇಬ್ಬರೂ ತಮ್ಮ ಅಪೂರ್ವ ಸಾಹಸ, ನಿಷ್ಠೆ- ಬದ್ಧತೆಯಿಂದ ನಿದ್ರೆಯಿಲ್ಲದ ರಾತ್ರಿ ಕಳೆದು ಅಭೂತಪೂರ್ವ ಸಾಧನೆ ಮಾಡಿದ್ದರು. ತೇನ್ ಸಿಂಗ್ ಅವರು 1986ರಲ್ಲಿ ಮೃತರಾಗಿದ್ದಾರೆ.

2008: ದೇಶದ ಅತಿದೊಡ್ಡ ಚಿನ್ನಾಭರಣ ಮಾರುಕಟ್ಟೆ ಆಗಿರುವ ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಈ ಮೊದಲಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ಪ್ರತಿ 10 ಗ್ರಾಂಗಳಿಗೆ ರೂ 215ರಷ್ಟು ಹೆಚ್ಚಳಗೊಂಡಿತು. ಬೆಳ್ಳಿಯೂ ಪ್ರತಿ ಕೆಜಿಗೆ ರೂ 390ರಷ್ಟು ಹೆಚ್ಚಳಗೊಂಡು ರೂ 20,625ರಷ್ಟಕ್ಕೆ ತಲುಪಿತು. ಇದು ಕಳೆದ 9 ವಾರಗಳಲ್ಲಿಯೇ ಗರಿಷ್ಠ ದರ. ಆಭರಣ ಚಿನ್ನ ಪ್ರತಿ 10 ಗ್ರಾಂಗೆ ರೂ 11,355 ಮತ್ತು ಅಪರಂಜಿ ಚಿನ್ನ ರೂ 11,405ರಷ್ಟಕ್ಕೆ ಏರಿಕೆ ದಾಖಲಿಸಿದವು.

2008: ಮಲೇಷ್ಯಾದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾದ ಎಂಐಸಿ ಶಾಸಕ, ಭಾರತೀಯ ಮೂಲದ ಎಸ್. ಕೃಷ್ಣಸ್ವಾಮಿ (58) ಅವರನ್ನು ಅವರ ಪಕ್ಷದ ಕಚೇರಿಯಲ್ಲಿದ್ದಾಗಲೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ದಕ್ಷಿಣ ಭಾಗದ ಜೊಹೋರ್ ಬಾರು ನಗರದಲ್ಲಿ ಘಟಿಸಿತು.

2008: ಬಾಲಿವುಡ್ ನಟ ಶಾರುಕ್ ಖಾನ್ ಹಾಗೂ ನಟಿ ಕರೀನಾ ಕಪೂರ್ ಅವರು 2007ನೇ ಸಾಲಿನ `ಸ್ಕ್ರೀನ್ ಪ್ರಶಸ್ತಿ'ಯನ್ನು ಈದಿನ ಮುಂಬೈಯಲ್ಲಿ ಸ್ವೀಕರಿಸಿದರು. ಶಾರುಕ್ ಪ್ರಶಸ್ತಿಯನ್ನು ತಾವೇ ಸ್ವೀಕರಿಸಿದರೆ, ಕರೀನಾ ಅನುಪಸ್ಥಿತಿಯಲ್ಲಿ ಅವರ ಅಕ್ಕ ಕರೀಷ್ಮಾ ಕಪೂರ್ ಪ್ರಶಸ್ತಿಯನ್ನು ಸ್ವೀಕರಿಸಿದರು. `ಚಕ್ ದೇ ಇಂಡಿಯಾ' ಸಿನಿಮಾದಲ್ಲಿ ಮಹಿಳಾ ಹಾಕಿ ತಂಡದ ತರಬೇತುದಾರನಾಗಿ ಶಾರುಖ್ ನೀಡಿದ ಉತ್ತಮ ನಟನೆ ಹಾಗೂ `ಜಬ್ ವಿ ಮೆಟ್' ಚಿತ್ರದ ನಟನೆಗಾಗಿ ಕರೀನಾ ಕಪೂರ್ ಪ್ರಶಸ್ತಿ ಪಡೆದರು. 2007ನೇ ಸಾಲಿನ ಉತ್ತಮ ಸಿನಿಮಾ ಎಂದು `ಚಕ್ ದೇ ಇಂಡಿಯಾ' ಆಯ್ಕೆಯಾದರೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು `ತಾರೆ ಜಮೀನ್ ಪರ್' ಚಿತ್ರದ ನಿರ್ದೇಶನಕ್ಕೆ ಅಮೀರ್ ಖಾನ್ ಪಡೆದರು.

2008: ತಮಿಳುನಾಡಿನಲ್ಲಿ ಪೊಂಗಲ್ ಸಂದರ್ಭದಲ್ಲಿ ನಡೆಯುವ ಗೂಳಿ ಕಾಳಗ ನಡೆಸದಂತೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟಿನ ಪೀಠವೊಂದು ನಿರಾಕರಿಸಿತು. ಗೂಳಿ ಕಾಳಗಕ್ಕೆ ಮುನ್ನ ಮೆಣಸಿನಪುಡಿಯನ್ನು ಅವುಗಳ ಕಣ್ಣಿಗೆ ಎರಚುವುದಲ್ಲದೆ ರೋಷ ಉಕ್ಕಿಸಲು ಮದ್ಯವನ್ನೂ ಅವುಗಳಿಗೆ ನೀಡಲಾಗುತ್ತದೆ. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಆರ್.ವಿ. ರವೀಂದ್ರನ್ ಮತ್ತು ಜೆ.ಎಂ. ಪಾಂಚಾಲ್ ಅವರನ್ನೊಳಗೊಂಡ ಪೀಠವು `ಇದು ಕ್ರೂರ ಮತ್ತು ಅಮಾನುಷ ಕೃತ್ಯ' ಎಂದು ಅಭಿಪ್ರಾಯಪಟ್ಟಿತು. ಪ್ರಾಣಿ ಹಿಂಸೆಗೆ ಪ್ರಚೋದನೆ ನೀಡುವ ಈ ಕ್ರೀಡೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಪ್ರಾಣಿ ಕಲ್ಯಾಣ ಮಂಡಳಿ ಕಳೆದ ವರ್ಷ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಆದರೆ ಸಾಂಸ್ಕೃತಿಕ ಇತಿಹಾಸ ಹೊಂದಿದ ಈ ಕ್ರೀಡೆ ನಡೆಸಲು ಅವಕಾಶ ನೀಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಪೀಠವು ಈ ಅರ್ಜಿಯನ್ನು ತಳ್ಳಿಹಾಕಿತು.

2008: ಹರಿಯಾಣ ಸರ್ಕಾರ ಕೂಡಾ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕ ಹಾಗೂ ಸೈಕಲ್ ನೀಡುವ ಯೋಜನೆ ಪ್ರಕಟಿಸಿತು. ರಾಜ್ಯದ ಸುಮಾರು 8,909 ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಲಭಿಸಲಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರು ಇದರ ಫಲಾನುಭವಿಗಳಾಗಿದ್ದು, ಪಠ್ಯಪುಸ್ತಕ ಹಾಗೂ ಸೈಕಲ್ ಒದಗಿಸಲು ಸರ್ಕಾರ ರೂ 4.75 ಕೋಟಿ ವೆಚ್ಚದಲ್ಲಿ ಈ ಈ ಯೋಜನೆ ರೂಪಿಸಿದೆ.

2008: ನಂದಿಗ್ರಾಮ ವಿಶೇಷ ಆರ್ಥಿಕ ವಲಯ ಸ್ಥಾಪನೆ ವಿರೋಧಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 14 ಜನರು ಪೊಲೀಸ್ ಗೋಲಿಬಾರಿಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಮತ್ತು ನಂದಿ ಗ್ರಾಮದ ನಿವಾಸಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪನೆ ವಿರೋಧಿಸಿ ನಡೆದ ಹೋರಾಟ, ಸಿಪಿಐ (ಎಂ) ಕಾರ್ಯಕರ್ತರು ನಡೆದುಕೊಂಡ ರೀತಿ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯ ಉಲ್ಲೇಖಿಸಿ ಕೋಲ್ಕತಾ ಹೈಕೋರ್ಟ್ ವಕೀಲರ ಸಂಘ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿತ್ತು. ಜೊತೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸ್ವಯಂ ಪ್ರೇರಿತರಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.

2008: `ಅನ್ನ ಕೊಡುವ ರೈತನ ಆತ್ಮಹತ್ಯೆ ತಡೆಯಲು ಸಾವಯವ ಕೃಷಿಯೊಂದೇ ಸೂಕ್ತ ಪರಿಹಾರ' ಎಂದು ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ವಂದನಾ ಶಿವ ಬೆಂಗಳೂರಿನಲ್ಲಿ ಪ್ರತಿಪಾದಿಸಿದರು. `ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರದಿಂದ ದೇಶಿ ತಳಿಗಳು ಹಾಗೂ ಕೃಷಿ ಬೀಜ ಪೇಟೆಂಟಿಗೆ ಒಳಗಾಗಿವೆ. ಕೇವಲ ಲಾಭ ಮಾಡುವ ಉದ್ದೇಶದಿಂದ ನಡೆಯುವ ಇಂತಹ ಕೃತ್ಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಉಣ್ಣುವ ಅನ್ನವೇ ವಿಷವಾಗುವ ಸಾಧ್ಯತೆ ಇದೆ' ಎಂದು ಅವರು ಎಚ್ಚರಿಸಿದರು. ಫ್ರೆಂಡ್ಸ್ ಆಫ್ ಆರ್ಗ್ಯಾನಿಕ್ ಸಂಸ್ಥೆ ಆಯೋಜಿಸಿದ್ದ `ರಾಷ್ಟ್ರೀಯ ಕೃಷಿ ನೀತಿ ಒಂದು ಸಂವಾದ' ಹಾಗೂ ಸಾವಯವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `1986ರಲ್ಲಿ ದೇಶಕ್ಕೆ ಗೋಧಿ ಆಮದು ಮಾಡಿಕೊಂಡಾಗ ಅದರೊಂದಿಗೆ ಬಂದ ಕೇವಲ ಒಂದು ಕಳೆ `ಲಂಟಾನ' ಇಂದು ದೇಶದ ಎಲ್ಲ ಭಾಗಗಳಿಗೆ ಹರಡಿ ವಿಷವಾಗತೊಡಗಿದೆ. ಇದೇ ರೀತಿ ದೇಶದೊಳಗೆ ತಲೆ ಎತ್ತುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ರೈತರ ಪ್ರಾಣ ಹಿಂಡುತ್ತಿವೆ' ಎಂದು ಅವರು ನುಡಿದರು. `ಕೇಂದ್ರದ `ರಾಷ್ಟ್ರೀಯ ರೈತರ ನೀತಿ-2007' ಕೂಡ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ. ಅದು ಆಹಾರ ಭದ್ರತೆ ನೀಡುವ ಬದಲು ಲಾಭದ ಬಗ್ಗೆ ಮಾತನಾಡುವಂತೆ ಮಾಡಿದೆ. `ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶದ ರೈತರ ಮೇಲೆ ನಾನಾ ವಿಧಗಳ ಮೂಲಕ ಹಿಡಿತ ಸಾಧಿಸುತ್ತಿವೆ. ಕುಲಾಂತರಿ ತಳಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ಕೃಷಿಯನ್ನು ಒಂದು ಚಳವಳಿಯಾಗಿ ಕೈಗೊಳ್ಳಬೇಕಾಗಿದೆ. ಇದಕ್ಕೆ ಎಲ್ಲ ವರ್ಗದವರ ಪ್ರೋತ್ಸಾಹ ಬೇಕು' ಎಂದು ವಂದನಾ ನುಡಿದರು. ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗಿಂತ ಐಷಾರಾಮಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ದೇಶದ ಕೃಷಿ ಚಟುವಟಿಕೆಯನ್ನು ನಿಯಂತ್ರಿಸುವ ಜನರಿಗೆ ಇಂದು ಹೆಚ್ಚು ಬೆಲೆ ಬಂದಿದೆ. ಆದರೆ ಇಂತಹ ಪರಿಸ್ಥಿತಿ ಬದಲಾಗಬೇಕು, ರೈತ, ಅನ್ನದಾತ ಎಂಬುದನ್ನು ಮರೆಯಬಾರದು' ಎಂದು ಅವರು ಹೇಳಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗೇಶ ಹೆಗಡೆ, ಸಾವಯವ ಕೃಷಿಕ ಭರಮಗೌಡ, ಪರಿಸರವಾದಿ ಡಾ.ಎಲ್.ನಾರಾಯಣರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

2008: ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಇನ್ನೂ ಒಂಬತ್ತು ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ರಾಜಾಜಿನಗರ, ಜಯನಗರ, ಬಸವನಗುಡಿ, ಗಾಂಧಿನಗರ, ಶ್ರೀರಾಮಪುರ ಮತ್ತು ಶಿವಾಜಿನಗರ - ಈ ಆರು ಉಪ ನೋಂದಣಿ ಕಚೇರಿಗಳನ್ನು ವಿಭಜಿಸಿ, ಒಂಬತ್ತು ಕಚೇರಿಗಳನ್ನಾಗಿ ಮಾಡಲಾಗಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಎಚ್. ಶಶಿಧರ್ ಪ್ರಕಟಿಸಿದರು. ಇಂದಿರಾನಗರ, ಹಲಸೂರು, ಚಾಮರಾಜಪೇಟೆ, ವಿಜಯನಗರ; ಯಶವಂತಪುರ; ಶಾಂತಿನಗರ, ಬಿಟಿಎಂ ಲೇಔಟ್, ಮಲ್ಲೇಶ್ವರ ಮತ್ತು ಗಂಗಾನಗರದಲ್ಲಿ ಹೊಸ ಉಪ ನೋಂದಣಿ ಕಚೇರಿಗಳನ್ನು ಸ್ಥಾಪಿಸಿ, ಅವುಗಳ ಗಡಿಯನ್ನೂ ಗುರುತಿಸಲಾಗಿದೆ ಎಂದು ಶಶಿಧರ್ ನುಡಿದರು.

2007: ಸಂವಿಧಾನದ 9ನೇ ಪರಿಚ್ಛೇದದಲ್ಲಿ (ಶೆಡ್ಯೂಲ್) 1973ರ ಏಪ್ರಿಲ್ 24ರ ನಂತರ ಸೇರಿಸಲಾದ ಕಾಯ್ದೆಗಳು ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. 9ನೇ ಪರಿಚ್ಛೇದದಲ್ಲಿ ಸೇರಿಸಲಾದ ಕಾಯ್ದೆಗಳು ಸಂವಿಧಾನದ ಮೂಲ ಸ್ವರೂಪ ಉಲ್ಲಂಘಿಸುವಂತಿದ್ದರೆ ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಸರ್ವಾನುಮತದ ತೀರ್ಪಿನಲ್ಲಿ ತಿಳಿಸಿತು. ಯಾವುದೇ ಕಾಯ್ದೆ ಸಂವಿಧಾನದ 14,19,20 ಮತ್ತು 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಿದ್ದರೆ ಅದು ಸಂವಿಧಾನದ ಮೂಲ ಸ್ವರೂಪದ ಉಲ್ಲಂಘನೆ ಎಂದು ಕೋರ್ಟ್ ಈ ಹಿಂದೆ ಅನೇಕ ಸಲ ಸ್ಪಷ್ಟಪಡಿಸಿತ್ತು. 9ನೇ ಪರಿಚ್ಛೇದದಲ್ಲಿ ಒಟ್ಟೂ 284 ಕಾಯ್ದೆಗಳಿವೆ. ಈ ಪೈಕಿ 1973ಕ್ಕೆ ಮೊದಲು ಸೇರ್ಪಡೆಯಾದ 13 ಕಾಯ್ದೆ ಬಿಟ್ಟು ಉಳಿದೆಲ್ಲವನ್ನು ಈ ತೀರ್ಪಿನ ಪರಿಣಾಮವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ದೊರೆಯಲಿದೆ. 1973ರ ಏಪ್ರಿಲ್ 24ರಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ 13 ನ್ಯಾಯಮೂರ್ತಿಗಳಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿ, `ಸಂವಿಧಾನದ ಮೂಲ ಸ್ವರೂಪ ಬದಲಿಸಲು ಸಂಸತ್ತಿಗೂ ಅಧಿಕಾರವಿಲ್ಲ' ಎಂದು ಹೇಳಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೀಸಲಾತಿ ನೀತಿ ಸೇರಿದಂತೆ, ಈ ತೀರ್ಪು ಸರ್ಕಾರದ ಹಲವಾರು ನೀತಿ, ನಿಯಮಾವಳಿಗಳ ಮೇಲೆ ಗಂಭೀರ ಪರಿಣಾಮ ಬೀರುವ ನಿರೀಕ್ಷೆ ಮೂಡಿಸಿತು. ಸರ್ಕಾರವು, ನ್ಯಾಯಾಲಯಗಳ ಪರಿಶೀಲನಾ ವ್ಯಾಪ್ತಿ ಮೀರಿದ ಕಾಯ್ದೆಗಳನ್ನು ರೂಪಿಸುವುದನ್ನು ಪ್ರಶ್ನಿಸಿ `ಕಾಮನ್ ಕಾಸ್' ಎಂಬ ಸರ್ಕಾರೇತರೇತರ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಮತ ವ್ಯಕ್ತಪಡಿಸಿತು. ಯಾವುದೇ ಕಾಯ್ದೆಯನ್ನು 9ನೇ ಪರಿಚ್ಛೇದದಡಿ ಸೇರಿಸಬೇಕಾದರೆ, ಸರ್ಕಾರ ಮೂಲಭೂತ ಹಕ್ಕುಗಳು ಹಾಗೂ ನಿರ್ದೇಶಕ ತತ್ವಗಳ ((directive principles) ನಡುವೆ ಸಮತೋಲನ ಕಾಯ್ದುಕೊಳ್ಳಲು ಮಧ್ಯಮ ಮಾರ್ಗ ಅನುಸರಿಸಬೇಕು. ಆ ಕಾಯ್ದೆ ನಾಗರಿಕರ ಪರ ಸ್ವಲ್ಪ ವಾಲಿರಬೇಕು ಎಂದು ಪೀಠ ಹೇಳಿತು. ಯಾವುದೇ ಸಂದರ್ಭದಲ್ಲೂ ಮೀಸಲಾತಿ ಶೇ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನಿರರ್ಥಕಗೊಳಿಸಲು ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ಶೇ 69ರಷ್ಟು ಮೀಸಲಾತಿ ನೀಡಿ ಅದನ್ನು 9ನೇ ಪರಿಚ್ಛೇದದಡಿ ಸೇರಿಸಿತ್ತು. ಅದೇ ರೀತಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭೂ ಸುಧಾರಣೆ ಕಾಯ್ದೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ ಕಾಯ್ದೆಗಳೂ 9ನೇ ಪರಿಚ್ಛೇದದಡಿ ಸೇರಿದ್ದವು.. ಈಗ ಆ ಕಾಯ್ದೆಗಳೆಲ್ಲ ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗುವುವು. ಇದಲ್ಲದೇ ಕೇಂದ್ರ ಕಲ್ಲಿದ್ದಲು ಗಣಿ ಕಾಯ್ದೆ 1974, ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ (ಕಾಫಿ ಪೋಸಾ) ಕಾಯ್ದೆ 1974, ರೋಗಗ್ರಸ್ತ ಜವಳಿ ಉದ್ಯಮ ಸ್ವಾಧೀನ ಕಾಯ್ದೆ 1974, ಒರಿಸ್ಸಾ ಹಾಗೂ ಉತ್ತರ ಪ್ರದೇಶದ ಭೂ ಸುಧಾರಣೆ ಕಾಯ್ದೆ ಹಾಗೂ ಅಗತ್ಯ ಸೇವಾ ಕಾಯ್ದೆಗಳು (ಎಸ್ಮಾ) ಕೋರ್ಟಿನ ಪರಾಮರ್ಶೆಗೆ ಅರ್ಹವಾಗಲಿವೆ.

2007: ಅವಾಮೀ ಲೀಗ್ ನೇತೃತ್ವದ ಪ್ರಮುಖ ವಿರೋಧಿ ಮೈತ್ರಿಕೂಟದ ಒತ್ತಡಕ್ಕೆ ಮಣಿದು ಬಾಂಗ್ಲಾದೇಶದ ಅಧ್ಯಕ್ಷ ಇಯಾಜ್ದುದೀನ್ ಅಹಮದ್ ಅವರು ಈದಿನ ರಾತ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡಿದರು. ಜನವರಿ 22ರ ವಿವಾದಾತ್ಮಕ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿಯೇ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ ಬಳಿಕ ರಾತ್ರಿ ಅಹಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ಪ್ರಕಟಿಸಿದರು. 10 ಸದಸ್ಯರ ಮಧ್ಯಂತರ ಸರ್ಕಾರದ ಎಲ್ಲ 9 ಮಂದಿ ಸಲಹೆಗಾರರು ಕೂಡಾ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ಸಲಹಾ ಮಂಡಳಿಯ ಅತ್ಯಂತ ಹಿರಿಯ ಸಲಹೆಗಾರ ನ್ಯಾಯಮೂರ್ತಿ ಮೊಹಮ್ಮದ್ ಫಜ್ಲುಲ್ ಹಕ್ ಅವರು ತಾತ್ಕಾಲಿಕ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

2007: ರಸ್ತೆಯಲ್ಲಿ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಕರಣದ ಆರೋಪಿ ಮಾಜಿ ಕ್ರಿಕೆಟ್ ಆಟಗಾರ ಮತ್ತು ಬಿಜೆಪಿ ಮುಖಂಡ ನವಜೋತ್ ಸಿಂಗ್ ಸಿಧು ಚಂಡೀಗಢದ ನ್ಯಾಯಾಲಯದಲ್ಲಿ ಶರಣಾಗತರಾದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

2007: ಹತ್ತು ದಿನಗಳ ಹಿಂದೆ 102 ಜನರ ಸಹಿತವಾಗಿ ಕಣ್ಮರೆಯಾದ ಇಂಡೋನೇಷ್ಯ ವಿಮಾನದ ಅವಶೇಷಗಳು ಸುಲವೇಸಿ ದ್ವೀಪದಲ್ಲಿ ಪತ್ತೆಯಾದವು. ಒಬ್ಬ ಮಹಿಳೆಯ ಪಾರ್ಥಿವ ಶರೀರವೂ ಪತ್ತೆಯಾಯಿತು.

2007: ನರಮೇಧ - ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಥಿಯೋಪಿಯಾದ ಪದಚ್ಯುತ ಸರ್ವಾಧಿಕಾರಿ ಮೆಂಜಿಸ್ತು ಹೈಲೆ ಮಾರಿಯಮ್ (70) ಅವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇಥಿಯೋಪಿಯೋಪಿಯಾದ ಅಡಿಸ್ ಅಬಾಬಾದ ಸ್ಥಳೀಯ ನ್ಯಾಯಾಲಯ ಜೀವಾವಧಿ ಸಜೆಗೆ ಇಳಿಸಿತು.

2006: ಸಿಜಿಕೆ ಎಂದೇ ಖ್ಯಾತರಾಗಿದ್ದ ಹೆಸರಾಂತ ರಂಗ ನಿರ್ದೇಶಕ, ಸಂಘಟಕ, ಸಿ.ಜಿ. ಕೃಷ್ಣಸ್ವಾಮಿ (56) ದಾವಣಗೆರೆಯಲ್ಲಿ ನಿಧನರಾದರು. 1950ರ ಜೂನ್ 27ರಂದು ಮಂಡ್ಯದಲ್ಲಿ ಜನಿಸಿದ ಸಿಜಿಕೆ ಸುಮಾರು 12 ನಾಟಕಗಳನ್ನು ರಚಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಒಡಲಾಳ, ಯಯಾತಿ, ಮಹಾಚೈತ್ರ, ಸುಲ್ತಾನ್ ಟಿಪ್ಪು, ಶೇಕ್ಸ್ ಪಿಯರ್ ಸ್ವಪ್ನ ನೌಕೆ, ಜೂಲಿಯಸ್ ಸೀಸರ್, ತುಘಲಕ್, ಕುಸುಮಬಾಲೆ, ವೈಶಂಪಾಯನ ತೀರ, ಅಂಬೇಡ್ಕರ್, ರುಡಾಲಿ, ಚಕೋರಿ, ಒಥೆಲೊ, ಶೋಕಚಕ್ರ, ದಂಡೆ ಇವು ಸಿಜಿಕೆ ಅವರು ನಿರ್ದೇಶಿಸಿದ ಕೆಲವು ಪ್ರಮುಖ ನಾಟಕಗಳು. ಚಿತ್ರರಂಗದಲ್ಲೂ ಸೇವೆ ಸಲ್ಲಿಸಿದ ಸಿಜಿಕೆ ಭುಜಂಗಯ್ಯನ ದಶಾವತಾರಗಳು ಚಿತ್ರದ ಸಹನಿರ್ದೇಶಕ ಹಾಗೂ ಸಂಭಾಷಣೆಕಾರರಾಗಿದ್ದರು. ವೀರಪ್ಪನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದರು. ಸಾಂಗ್ಲಿಯಾನ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದರು.

1998: ಭಾರತದಾದ್ಯಂತದ `ನಗೆ ಕೂಟಗಳು' (ಲಾಫ್ಟರ್ ಕ್ಲಬ್ಸ್) ಮುಂಬೈಯಲ್ಲಿ ಮೊತ್ತ ಮೊದಲ `ಜಾಗತಿಕ ನಗೆ ದಿನ' ಆಚರಿಸಿದವು. ಭಾರತದಾದ್ಯಂತದ ನಗೆ ಕೂಟಗಳ ಸುಮಾರು 10,000 ಮಂದಿ ಸದಸ್ಯರು ರೇಸ್ ಕೋರ್ಸ್ ಮೈದಾನದಲ್ಲಿ ಸಮಾವೇಶಗೊಂಡು ಒಟ್ಟಿಗೆ ನಕ್ಕರು ಮತ್ತು `ನಗು ಗಂಭೀರ' ವಿಷಯ ಎಂಬುದನ್ನು ಜಗತ್ತಿಗೆ ವಿವರಿಸಿದರು. ಆ ಬಳಿಕ ಪ್ರತಿವರ್ಷದ ಜನವರಿ ತಿಂಗಳ ಎರಡನೇ ಭಾನುವಾರ `ಜಾಗತಿಕ ನಗೆ ದಿನ' ಆಚರಿಸಲಾಗುತ್ತಿದೆ.

1986: ಲಡಾಕನ್ನು ಪರಿಶಿಷ್ಟ ಜಾತಿ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಿತು.

1977: ಮೆಹೆರ್ ಹೆರಾಯ್ಸ್ ಮೂಸ್ ಅವರು ದಕ್ಷಿಣ ಧ್ರುವ (ಅಂಟಾರ್ಕ್ಟಿಕಾ) ತಲುಪಿದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಮೆರಿಕನ್ ಪ್ರವಾಸಿಗಳ ತಂಡವೊಂದರ ಸದಸ್ಯರಾಗಿ ಅಂಟಾರ್ಕ್ಟಿಕಾ ಖಂಡದ ಒಂದು ಭಾಗಕ್ಕೆ ಅವರು ಭೇಟಿ ನೀಡಿದರು. ಡಾ. ಕನ್ವಾಲ್ ವಿಲ್ಕು ಅವರು ಹಿಮಖಂಡದಲ್ಲಿನ ಭಾರತೀಯ ನಿಲ್ದಾಣ `ಮೈತ್ರಿ'ಯಲ್ಲಿ 1999ರ ಡಿಸೆಂಬರಿನಿಂದ 2001ರ ಮಾರ್ಚ್ ವರೆಗೆ ವೈದ್ಯರಾಗಿ ಸೇವೆ ಸಲ್ಲಿಸುವ ಮೂಲಕ ಮೂಲಕ ಹಿಮಖಂಡದಲ್ಲಿ ದೀರ್ಘಕಾಲ ವಾಸಿಸಿದ ಭಾರತದ ಮೊತ್ತ ಮೊದಲ ಮಹಿಳೆ ಎನಿಸಿದರು.

1973: ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಅವರು ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ದ್ರಾವಿಡ್ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ವಿಶ್ವಾಸದ ಆಟಗಾರ.

1966: ಗುಲ್ಜಾರಿಲಾಲ್ ನಂದಾ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡರು.

1966: ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ತಾಷ್ಕೆಂಟಿನಲ್ಲಿ ಹೃದಯಾಘಾತದಿಂದ ನಿಧನರಾದರು. ಹಿಂದಿನ ದಿನವಷ್ಟೇ ಅವರು ಪಾಕಿಸ್ಥಾನದ ಅಯೂಬ್ ಖಾನ್ ಜೊತೆಗೆ `ತಾಷ್ಕೆಂಟ್ ಒಪ್ಪಂದ'ಕ್ಕೆ ಸಹಿ ಮಾಡಿದ್ದರು.

1963: `ವಿಸ್ಕಿ -ಎ-ಗೊ-ಗೊ' ಹೆಸರಿನ ಮೊತ್ತ ಮೊದಲ `ಡಿಸ್ಕೊ' ಲಾಸ್ ಏಂಜೆಲ್ಸಿನಲ್ಲಿ ಉದ್ಘಾಟನೆಗೊಂಡಿತು.

1922: 14 ವರ್ಷದ ಕೆನಡಾದ `ಬಾಲ ಮಧುಮೇಹಿ' ಬಾಲಕ ಲಿಯೋನಾರ್ಡ್ ಥಾಂಪ್ಸನ್ ಗೆ ಟೊರೊಂಟೋ ಜನರಲ್ ಆಸ್ಪತ್ರೆಯಲ್ಲಿ ಇನ್ಸುಲಿನ್ ನೀಡಲಾಯಿತು. ಈ ಬಳಿಕ ಬಾಲಕ ಮಧುಮೇಹದಿಂದ ಮುಕ್ತನಾಗಿ ಎಲ್ಲರಂತೆ ಬದುಕಿದ. ಒಂದು ವರ್ಷಕ್ಕೆ ಮೊದಲು ಟೊರೊಂಟೋದ ಪ್ರಯೋಗಾಲಯದಲ್ಲಿ ಕೆನಡಾದ ವಿಜ್ಞಾನಿಗಳಾದ ಫ್ರೆಡರಿಕ್ ಗ್ರ್ಯಾಂಟ್ ಬಂಟಿಂಗ್ ಮತ್ತು ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಈ ಹಾರ್ಮೋನನ್ನು ಸಂಶೋಧಿಸಿ ಪ್ರತ್ಯೇಕಿಸಿದ್ದರು. ಬಂಟಿಂಗ್ ಮತ್ತು ಮೆಕ್ಲಿಯೊಡ್ ಅವರು ಈ ಸಾಧನೆಗಾಗಿ 1923ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ಆದರೆ ಬೆಸ್ಟ್ ಅವರನ್ನು ಈ ಪ್ರಶಸ್ತಿ ನೀಡುವಾಗ ನಿರ್ಲಕ್ಷಿಸಲಾಯಿತು. ಬಹಳಷ್ಟು ಮನ ಒಲಿಸಿದ ಬಳಿಕ ಬಂಟಿಂಗ್ ಪ್ರಶಸ್ತಿ ಸ್ವೀಕರಿಸಿದರಾದರೂ ಅರ್ಧಭಾಗ ಹಣವನ್ನು ಬೆಸ್ಟ್ ಅವರಿಗೆ ನೀಡಿದರು.

1896: ಕನ್ನಡದ ಷೇಕ್ಸ್ ಪಿಯರ್ ಎಂದೇ ಹೆಸರಾಗಿದ್ದ ನಾಟಕಕಾರ ಕಂದಗಲ್ಲ ಹನುಮಂತರಾಯ (11-1-1896ರಿಂದ 13-5-1966) ಅವರು ಭೀಮರಾಯರು- ಗಂಗೂಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲದಲ್ಲಿ ಜನಿಸಿದರು.

No comments:

Advertisement