Wednesday, March 17, 2010

ಇಂದಿನ ಇತಿಹಾಸ History Today ಫೆಬ್ರುವರಿ 11

ಇಂದಿನ ಇತಿಹಾಸ

ಫೆಬ್ರುವರಿ 11

ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯು.ಖಾನ್ ಅವರನ್ನು ಬಂಧ ಮುಕ್ತಗೊಳಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ - ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರ್ಕಾರವು ಇವರ ಮೇಲೆ ಮತ್ತೆ ನಿರ್ಬಂಧ ಹೇರಿತು.

2009: ಉತ್ತರಪ್ರದೇಶ ವಿಧಾನಸಭೆಯಲ್ಲಿ ಸೃಷ್ಟಿಯಾದ ತೀವ್ರ ಕೋಲಾಹಲ ಮರೆಯುವ ಮುನ್ನವೇ ಆಂಧ್ರಪ್ರದೇಶ ವಿಧಾನಸಭೆ ಸಹ ಈದಿನ ಅಂತಹುದೇ ಪ್ರಕ್ಷುಬ್ದ ದೃಶ್ಯಕ್ಕೆ ಸಾಕ್ಷಿಯಾಯಿತು. ಉತ್ತರಪ್ರದೇಶದ ಎಸ್.ಪಿ ಶಾಸಕರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಆಂಧ್ರದ ತೆಲುಗು ದೇಶಂ (ಟಿಡಿಪಿ) ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ತಮ್ಮನ್ನು ಎತ್ತಿ ಹೊರಹಾಕಲು ಯತ್ನಿಸಿದ ಮಾರ್ಷಲ್‌ಗಳ ಜೊತೆಯೇ ಕೈ ಕೈ ಮಿಲಾಯಿಸಿದರು. ಈ ಸಂದರ್ಭದಲ್ಲಿ ಟಿಡಿಪಿಯ ಇಬ್ಬರು ಶಾಸಕರು ಗಾಯಗೊಂಡರು. ದುರ್ನಡತೆಗಾಗಿ ಟಿಡಿಪಿ ನಾಯಕ ಚಂದ್ರಬಾಯಿ ನಾಯ್ಡು ಸೇರಿದಂತೆ ವಿವಿಧ ಪಕ್ಷಗಳ 46 ಶಾಸಕರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2009: ರಾಂಗಿಂಗ್ ಪಿಡುಗನ್ನು ತಡೆಗಟ್ಟಲು ತಾನು ರಚಿಸಿರುವ ಸಮಿತಿಯ ಮಾರ್ಗದರ್ಶನಗಳನ್ನು ಪಾಲಿಸುವಂತೆ ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಿಳಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿತು.. ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ನ್ಯಾಯಪೀಠ, ಈ ಸಮಿತಿ ನೀಡಿರುವ ಮಾರ್ಗದರ್ಶನಗಳಿಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಹೇಳಿದರು. ಎಲ್ಲ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ಸೇರ್ಪಡೆ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಪರಿಚಯ ಪ್ರಕಟಣೆಯಲ್ಲಿ ರಾಂಗಿಂಗ್ ಬಗೆಗಿನ ಸೂಚನೆಗಳನ್ನು ಪ್ರಕಟಿಸಬೇಕೆಂದು ಪೀಠ ತಿಳಿಸಿತು.

2009: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಮೂರು ಸರ್ಕಾರಿ ಕಟ್ಟಡಗಳ ಮೇಲೆ ತಾಲಿಬಾನ್ ಬಂಡುಕೋರರು ಏಕಕಾಲದಲ್ಲಿ ನಡೆಸಿದ ಆತ್ಮಹತ್ಯಾ ದಾಳಿ ಹಾಗೂ ಗುಂಡಿನ ಸುರಿಮಳೆಗೆ ಕನಿಷ್ಠ 26 ಜನ ಬಲಿಯಾದರು. ಕಾರಾಗೃಹ ನಿರ್ದೇಶನಾಲಯ, ಕಾನೂನು ಮತ್ತು ಶಿಕ್ಷಣ ಸಚಿವಾಲಯಗಳ ಮೇಲೆ ಏಕಕಾಲದಲ್ಲಿ ನಡೆದ ಈ ದಾಳಿಯಲ್ಲಿ 55 ಜನ ಗಾಯಗೊಂಡರು. ಘಟನೆಯಲ್ಲಿ ಕನಿಷ್ಠ ಏಳು ಉಗ್ರರು ಅಸು ನೀಗಿದರು.

2009: ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಏಕೈಕ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಹಸ್ತಾಕ್ಷರದ ಅಪರೂಪದ ಪತ್ರವೊಂದು ಬಾಂಗಾದ್ಲೇಶದ ಹಳ್ಳಿಯೊಂದರಲ್ಲಿ ಪತ್ತೆಯಾಯಿತು. ಉತ್ತರ ಬಾಂಗ್ಲಾದ ನವಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಒಬ್ಬ ವ್ಯಕ್ತಿ ಸಂಗ್ರಹಿಸಿದ ಪತ್ರಗಳಲ್ಲಿ ಇದು ಪತ್ತೆಯಾಯಿತು. ಆರು ಪುಟಗಳ ಪತ್ರದಲ್ಲಿ ಟ್ಯಾಗೋರ್ ಅವರಿಗೆ ಸಂಬಂಧಿಸಿದ ಕೆಲ ಖಾಸಗಿ ವಿಷಯಗಳೂ ಸೇರಿದಂತೆ ಖಚಿತ ಜನ್ಮದಿನದ ವಿವರ ಇತ್ತು. ಈ ಪತ್ರದ ನಿಖರತೆಯನ್ನು ವಸ್ತುಸಂಗ್ರಹಾಲಯದ ಮೇಲ್ವಿಚಾರಕರೊಬ್ಬರು ದೃಢಪಡಿಸಿದರು. ಈ ಪತ್ರ ಟ್ಯಾಗೋರ್‌ ಅವರ ಜನ್ಮ ದಿನದ ಬಗ್ಗೆ ಬೆಳಕು ಚೆಲ್ಲುವ ಕಾರಣಕ್ಕೆ ಹೆಚ್ಚು ಮಹತ್ವ ಪಡೆಯಿತು. ಅದರಲ್ಲಿ 6 ಮೇ 1861 ತಮ್ಮ ಜನ್ಮದಿನ ಎಂದು ಬರೆಯಲಾಗಿತ್ತು.

2009: ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯು.ಖಾನ್ ಅವರನ್ನು ಬಂಧ ಮುಕ್ತಗೊಳಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ - ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರ್ಕಾರವು ಇವರ ಮೇಲೆ ಮತ್ತೆ ನಿರ್ಬಂಧ ಹೇರಿತು. ಇರಾನ್, ಉತ್ತರ ಕೊರಿಯಾ ಹಾಗೂ ಲಿಬಿಯಾಗೆ ಪರಮಾಣು ರಹಸ್ಯಗಳನ್ನು ಬಯಲು ಮಾಡಿದುದಾಗಿ ಖಾನ್ ಒಪ್ಪಿಕೊಂಡ ನಂತರ ಅವರನ್ನು 2004 ರಿಂದ 5 ವರ್ಷಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು. ಇವರನ್ನು ಬಂಧ ಮುಕ್ತಗೊಳಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಖಾನ್ ಮತ್ತೆ ಇಂಥ ಕೆಲಸಕ್ಕೆ ಕೈಹಾಕುವುದನ್ನು ತಡೆಯುವ ಉದ್ದೇಶದಿಂದ ತಾನು ಅವರ ಮೇಲೆ ನಿರ್ಬಂಧ ವಿಧಿಸುತ್ತಿರುವುದಾಗಿ ಪಾಕಿಸ್ಥಾನ ತಿಳಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದರು.

2008: ಬ್ರಿಟನ್ನಿನ ಧನ ಸಹಾಯದಿಂದ ಪಶ್ಚಿಮ ಬಂಗಾಳದ ಸುಂದರಬನ ಸಂರಕ್ಷಿತ ಅರಣ್ಯ ವಲಯವನ್ನು ಕಾಪಾಡುವುಕ್ಕಾಗಿ 40ಲಕ್ಷ ಮ್ಯಾಂಗ್ರೋವ್ (ಕಾಂಡ್ಲಾಕಾಡು) ಸಸಿಗಳನ್ನು ನೆಡುವ ಯೋಜನೆ ಮಥುರಾಕಾಂಡ ದ್ವೀಪದಲ್ಲಿ ಆರಂಭವಾಯಿತು. ಕಾಂಡ್ಲಾ ಸಸಿಯನ್ನು ನೆಡುವುದರ ಮೂಲಕ ಈ ಯೋಜನೆಗೆ ಚಾಲನೆ ನೀಡಿದ ಬ್ರಿಟಿಷ್ ಹೈಕಮೀಷನರ್ ಸರ್ ರಿಚರ್ಡ್ ಸ್ಟಾಗ್, `ಪ್ರಕೃತಿ ನಿರ್ಮಿತ ಅರಣ್ಯ ವಲಯವನ್ನು ಕಾಪಾಡುವುದಕ್ಕಾಗಿಯೇ ತಯಾರಾದ ಒಂದು ಮಾದರಿ ಯೋಜನೆ ಇದಾಗಿದೆ. ಇದನ್ನು ಬೇರೆಯವರೂ ಅನುಕರಿಸಬಹುದು ' ಎಂದು ಹೇಳಿದರು. ಕಾಂಡ್ಲಾಕಾಡುಗಳು ಅಣೆಕಟ್ಟುಗಳ ಏರಿ ಒಡೆಯದಂತೆ ಕಾಪಾಡುವುದಲ್ಲದೆ, ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ವೇಗವನ್ನೂ ನಿಯಂತ್ರಿಸುತ್ತವೆ. ಕೋಲ್ಕತ ಮೂಲದ ನೈಸರ್ಗಿಕ ಪರಿಸರ ಮತ್ತು ವನ್ಯಜೀವಿ ಸಂಘ (ನ್ಯೂಸ್) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬ್ರಿಟನ್ ಸರ್ಕಾರ ಈ ಯೋಜನೆಗೆ 60,000 ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕೋಲ್ಕತ ವಿವಿಯ ವಿಜ್ಞಾನಿ ಪ್ರೊ. ಅವಜಿತ್ ಮಿತ್ರಾ, ಬ್ರಿಟಿಷ್ ಡೆಪ್ಯುಟಿ ಹೈಕಮೀಷನರ್ ಸಿಮೊನ್ ವಿಲ್ಸನ್ ಉಪಸ್ಥಿತರಿದ್ದರು.

2008: ಫೆಬ್ರುವರಿ ತಿಂಗಳ 18ಕ್ಕೆ ನಿಗದಿಯಾಗಿದ್ದ `ಮುಂಗಾರು ಮಳೆ' ಖ್ಯಾತಿಯ ಚಲನಚಿತ್ರ ನಟ ಗಣೇಶ್ ಅವರ ವಿವಾಹ ಈದಿನ ತಡರಾತ್ರಿ 9ರಿಂದ 11.30ರ ಅವಧಿಯಲ್ಲಿ ಮಂಗಳೂರಿನ ಶಿಲ್ಪಾ ಅವರೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಧುವಿನ ನಿವಾಸದಲ್ಲಿ ದಿಢೀರನೆ ನಡೆಯಿತು. ಗಣೇಶ್ ಅವರ ವಿವಾಹವನ್ನು ಉಡುಪಿ ಜಿಲ್ಲೆಯ ಬಾರಕೂರಿಗೆ ಸಮೀಪದ ಹನೇಹಳ್ಳಿ ಸಂಕಮ್ಮ ತಾಯಿ ರೆಸಾರ್ಟಿನಲ್ಲಿ ನಡೆಸಲು ಈ ಹಿಂದೆ ನಿಶ್ಚಯಿಸಲಾಗಿತ್ತು. ಈ ವಿವಾಹದಲ್ಲಿ ಗಣೇಶ್ ಮತ್ತು ಶಿಲ್ಪಾ ಕುಟುಂಬ ವರ್ಗದವರು, ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕೆ. ಮಂಜು ಹಾಗೂ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಭಾಗವಹಿಸಿದ್ದರು. ಶಿವರಾಮ ಮತ್ತು ಶಕುಂತಳಾ ಶೆಟ್ಟಿಗಾರ್ ದಂಪತಿಯ ಪುತ್ರಿ ಶಿಲ್ಪಾ ಬೆಂಗಳೂರಿನಲ್ಲಿ ಒಳಾಂಗಣ ವಿನ್ಯಾಸಗಾರ್ತಿ. ಶಿವರಾಮ ಶೆಟ್ಟಿಗಾರರು ಬಹಳ ಹಿಂದೆಯೇ ತಮ್ಮ ಸ್ವಂತ ಊರಾದ ಬಾರಕೂರನ್ನು ತೊರೆದು ಮುಂಬೈಗೆ ಹೋಗಿ ವ್ಯಾಪಾರದಲ್ಲಿ ತೊಡಗಿದ್ದು, ನಂತರ ಬೆಂಗಳೂರಿಗೆ ಬಂದು ನೆಲೆಸಿದವರು. ಶಿಲ್ಪಾ ಅವರ ಕಿರಿಯ ಸೋದರ ಶರಣ್ ಆಸ್ಟ್ರೇಲಿಯಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ಬಾರಕೂರಿನಲ್ಲಿ ಶಿಲ್ಪಾ ಅವರ ದೊಡ್ಡಪ್ಪನ ಮನೆ ಇದೆ.

2008: ಚಿತ್ರನಟ ಸಂಜಯ್ ದತ್ ಹಾಗೂ ಅವರ ಪ್ರೇಯಸಿ ಮಾನ್ಯತಾ ಮುಂಬೈಯಲ್ಲಿ ಹಿಂದೂ ವಿಧಿಗಳ ಅನ್ವಯ ವಿವಾಹ ಬಂಧನಕ್ಕೆ ಒಳಗಾದರು. ಮುಂಬೈ ಹೊರವಲಯದ ವರ್ಸೋವಾದಲ್ಲಿ ಮಾನ್ಯತಾ ಅವರ ನಿವಾಸದಲ್ಲಿ ವಿವಾಹ ನೆರವೇರಿತು. ಇದಕ್ಕೆ ಮೊದಲೇ ದತ್ ಮತ್ತು ಮಾನ್ಯತಾ ಗೋವಾದ ಪಂಚತಾರಾ ಹೋಟೆಲಿನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಫೆಬ್ರುವರಿ 7ರಂದು ಈ ಮದುವೆ ನಡೆದಿತ್ತು ಎನ್ನಲಾಗಿದೆ. ದತ್ ಹಾಗೂ ಮಾನ್ಯತಾ ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಮಧ್ಯೆ ಸಂಜಯದತ್ ಹಾಗೂ ಮಾನ್ಯತಾ ಅಲಿಯಾಸ್ ದಿಲ್ನಾಶೀನ್ ಅಮೀರ್ ಅಹ್ಮದ್ ಶೇಖ್ ನಡುವಿನ ವಿವಾಹ ಈ ಇಬ್ಬರೂ ಪ್ರಮಾಣಪತ್ರಕ್ಕೆ ಸಹಿ ಹಾಕಿದ ನಂತರವೇ ಅಧಿಕೃತವಾಗಲಿದೆ ಎಂದು ಗೋವಾದ ನೋಂದಣಿ ಅಧಿಕಾರಿಗಳು ತಿಳಿಸಿದರು. ಫೆಬ್ರುವರಿ 7ರಂದು ಪ್ರಮಾಣಪತ್ರ ಸಲ್ಲಿಸಿದ್ದರೂ ಅದಕ್ಕೆ ಉಭಯರ ಸಹಿ ಬಿದ್ದಿಲ್ಲ ಎಂದು ಅಧಿಕಾರಿಗಳು ಹೇಳಿದರು.

2008: ಮಾರ್ಚ್ 28ರಂದು ಮೊದಲ ವಿಮಾನ ಹಾರಾಟ ನಡೆಸಲು ಸಜ್ಜಾಗಿ ನಿಂತ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಎಚ್ ಎ ಎಲ್ ವಿಮಾನನಿಲ್ದಾಣದ ಬದಲಿಗೆ ಎಲ್ಲ ವಿಮಾನಗಳು ಹೊಸ ವಿಮಾನನಿಲ್ದಾಣದ ಮೂಲಕವೇ ಹಾರಾಟ ನಡೆಸಲಿರುವುದನ್ನು ವಕೀಲ ಜಿ.ಆರ್.ಮೋಹನ್ ಪ್ರಶ್ನಿಸಿದರು.

2008: ಕಿಡ್ನಿ ಕಸಿ ಹಗರಣದ ಸೂತ್ರಧಾರ ಅಮಿತ್ ಕುಮಾರನ ಪ್ರಮುಖ ಸಹಚರ ಡಾ. ಸರಾಜ್ ಗುಡಗಾಂವಿನ ನ್ಯಾಯಾಲಯದಲ್ಲಿ ಶರಣಾಗತನಾದ. ದೆಹಲಿಯ ಶಾಹದಾರಾ ನಿವಾಸಿ ಡಾ. ಸರಾಜ್ ಜನವರಿ 24ರಂದು ಅಮಿತ್ ಕುಮಾರನ ಗುಡಗಾಂವ್ ಆಸ್ಪತ್ರೆ ಮೇಲೆ ದಾಳಿ ನಡೆದಾಗಿನಿಂದ ನಾಪತ್ತೆಯಾಗಿದ್ದ. ಗುಡಗಾಂವಿನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ರಂಜನಾ ಅಗರವಾಲ್ ಅವರ ಮುಂದೆ ಆತ ಶರಣಾಗತನಾದ.

2008: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ ಐ ಐ) ಹಾಗೂ ದೇಸಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುವುದನ್ನು ತೀವ್ರಗೊಳಿಸಿದ್ದರ ಪರಿಣಾಮವಾಗಿ, ಕರಡಿ ಮೇಲುಗೈಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ದಿನದಂತ್ಯದ ವಹಿವಾಟಿನಲ್ಲಿ 833 ಅಂಶಗಳಷ್ಟು ಇಳಿಕೆಯನ್ನು ದಾಖಲಿಸಿತು. ಈ ಮೂಲಕ ಷೇರುಪೇಟೆ ಸೂಚ್ಯಂಕವು 17 ಸಾವಿರ ಗಡಿಯಿಂದ ಜಾರಿತು.

2008: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸಂಗ್ರಹದ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಪವರ್ ಕಂಪೆನಿಯು, ಷೇರುಪೇಟೆ ವ್ಯವಹಾರವನ್ನು ನಿರಾಶೆಯೊಂದಿಗೆ ಆರಂಭಿಸಿತು. ರೂ 450ಕ್ಕೆ ದರಪಟ್ಟಿಯನ್ನು ನಿಗದಿ ಪಡಿಸಿದ್ದ ರಿಲಯನ್ಸ್ ಪವರ್, ಷೇರು ವಹಿವಾಟು ಆರಂಭದ ದಿನವೇ ಶೇ 32 ರಷ್ಟು ಕುಸಿತವನ್ನು ದಾಖಲಿಸಿತು. ಇದರಿಂದ ಷೇರು ಹೂಡಿಕೆದಾರರು ಹೊಂದಿದ್ದ ಆಶಾಗೋಪುರದ ಕನಸು ನೆಲಕ್ಕೆ ಅಪ್ಪಿಳಿಸಿದಂತಾಯಿತು. ದಿನದ ಷೇರುಪೇಟೆ ವಹಿವಾಟು ಅಂತ್ಯಗೊಂಡಾಗ ರೂ 372.50ಕ್ಕೆ ರಿಲಯನ್ಸ್ ಪವರ್ ಷೇರು ದರ ಇಳಿಕೆಯನ್ನು ದಾಖಲಿಸಿತು. ಇದೇ ವೇಳೆ, ಶತಕೋಟಿ ಡಾಲರ್ ಬಂಡವಾಳದ ಕಂಪೆನಿಗಳ ಒಟ್ಟಾರೆ ಶೇ 40 ಷೇರುಗಳು ಕುಸಿತ ಕಂಡವು.

2008: ದೊಡ್ಡ ಗಾತ್ರದ ಮೂಗು ಹೊಂದಿರುವವರು ಹೆಚ್ಚು ದುಡ್ಡು ಗಳಿಸುತ್ತಾರೆ ಮತ್ತು ಅಗಲ ಮೂಗಿನವರು ಪ್ರಬಲ ಲೈಂಗಿಕ ಆಸಕ್ತಿ ಹೊಂದಿರುತ್ತಾರಂತೆ! ಮೂಗು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸಬಲ್ಲುದು. ಅದು, ಆತನ ಅಥವಾ ಆಕೆಯ ಮನೋಭಾವ, ನಡವಳಿಕೆ, ಲೈಂಗಿಕ ಆಸಕ್ತಿ ಹೀಗೆ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ ಎಂದು ಅಮೆರಿಕದ ಮಾನವ ಶಾಸ್ತ್ರಜ್ಞರಾದ ಜೇಮ್ಸ್ ಕ್ಯಾರಿ ಮತ್ತು ಎ.ಟಿ.ಸ್ಟೆಗ್ಮನ್ ಬಹಿರಂಗಪಡಿಸಿದರು. ಇವರ ಪ್ರಕಾರ ಉದ್ದ ಮತ್ತು ಕಿರಿದಾದ ಮೂಗುಳ್ಳವರು ಹಾಸ್ಯ ಪ್ರವೃತ್ತಿಯವರು ಮತ್ತು ಬುದ್ಧಿವಂತರಾಗಿರುತ್ತಾರೆ. ಸಣ್ಣ ಮೂಗುಳ್ಳವರು ಹಣಕ್ಕೆ ಪ್ರಾಧಾನ್ಯ ನೀಡುವವರಲ್ಲ. ಅಗಲ ಮೂಗಿನ ಹೊಳ್ಳೆ ಇರುವವರು ಹೆಚ್ಚು ಖರ್ಚು ಮಾಡುವವರು. ಮೂಗಿನ ಹೊಳ್ಳೆಗಳ ಅಗಲ ಕಣ್ಣುಗಳ ಮಧ್ಯದ ಅಳತೆಗಿಂತ ಹೆಚ್ಚಿರಬಾರದು. ಇವರು ಪ್ರಾಮಾಣಿಕರು, ಸತ್ಯವಂತರಾಗಿರುತ್ತಾರೆ, ಅಲ್ಲದೆ ನಮ್ಮ ಪೂರ್ವಜರು ಎಲ್ಲಿಂದ ಬಂದವರು ಎಂಬುದನ್ನೂ ಮೂಗು ಹೇಳಬಲ್ಲುದು ಎನ್ನುತ್ತಾರೆ ಈ ವಿಜ್ಞಾನಿಗಳು.

2008: ಅತೀಂದ್ರಿಯ ಧ್ಯಾನವನ್ನು ಜನಸಮೂಹಕ್ಕೆ ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಪಾರ್ಥಿವ ಶರೀರ ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಪಂಚಭೂತಗಳಲ್ಲಿ ಲೀನವಾಯಿತು. ಫೆಬ್ರುವರಿ 6ರಂದು ಹಾಲೆಂಡಿನಲ್ಲಿ ಮಹರ್ಷಿ ದೈವಾಧೀನರಾಗಿದ್ದರು. ಮೂರು ದಿನಗಳ ನಂತರ ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಿತ್ತು.

2008: ಮರಳಿನಲ್ಲಿ ಕಪ್ಪೆಗೂಡು, ಗುಬ್ಬಚ್ಚಿಮನೆ, ನಾಯಿ ಮನೆ ಕಟ್ಟುವುದು ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಸಮುದ್ರ ತೀರ, ನದಿ ದಂಡೆಯಲ್ಲೇಕೆ ಮಕ್ಕಳು ಮನೆಕಟ್ಟುವ ಆಟವಾಡುತ್ತಾರೆ? ಏಕೆಂದರೆ ಮರಳಿನ ಜೊತೆ ಹದವಾಗಿ ನೀರು ಬೆರೆತಿರುತ್ತದೆ. ಹಾಗಿರುವುದರಿಂದಲೇ ಮಕ್ಕಳು ಕಟ್ಟಿದ ಗೂಡುಗಳು ಗಟ್ಟಿಯಾಗಿ ನಿಲ್ಲುತ್ತವೆ! ಎಂದು ಆಸ್ಟ್ರೇಲಿಯಾ ಮತ್ತು ಜರ್ಮನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯೊಂದು ಬಹಿರಂಗಪಡಿಸಿತು. ಮರಳಿನ ಕಣಗಳನ್ನು ನೀರು ಜೋಡಿಸುತ್ತದೆ. ಈ ಸಂಬಂಧವನ್ನು ಕಣ-ದ್ರವ-ಗಾಳಿಯ ಅಂತರ್ ಸಂಪರ್ಕ ಎಂದು ಸಂಶೋಧನೆ ಹೇಳಿತು.

2008: ದಕ್ಷಿಣ ಕೊರಿಯಾದ ಮಹತ್ವದ ಐತಿಹಾಸಿಕ ಕುರುಹಾಗಿದ್ದ 600 ವರ್ಷಗಳಷ್ಟು ಹಳೆಯ ವುಡನ್ ಬಿಲ್ಡಿಂಗ್(`ಮರದ ಕಟ್ಟಡ') ಬೆಂಕಿಗೆ ಆಹುತಿಯಾಯಿತು.

2008: ಹಾಲಿವುಡ್ಡಿನ ಪ್ರಸಿದ್ಧ ಚಿತ್ರ `ಜಾಜ್'ನಲ್ಲಿನ ನಟನೆಯಿಂದ ಮನೆಮಾತಾಗಿದ್ದ, ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತರಾಗಿದ್ದ ಹಾಲಿವುಡ್ ನಟ ರಾಯ್ ಶೀಡರ್ (75) ಅವರು ಲಿಟಲ್ ರಾಕಿನಲ್ಲಿರುವ ಅರ್ಕನಾಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಕಾಲೇಜಿನ ಆಸ್ಪತ್ರೆಯಲ್ಲಿ ನಿಧನರಾದರು. 1971ರಲ್ಲಿ `ದಿ ಫ್ರೆಂಚ್ ಕನೆಕ್ಷನ್' ಚಿತ್ರದಲ್ಲಿ ಪೋಷಕ ನಟ ಪಾತ್ರಕ್ಕಾಗಿ ಹಾಗೂ 1979ರಲ್ಲಿ `ಆಲ್ ದಟ್ ಜಾಜ್' ಚಿತ್ರದಲ್ಲಿನ ನಟನೆಗಾಗಿ ಶೀಡರ್ ಹೆಸರು ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತವಾಗಿತ್ತು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಮತ್ತು ಇತರರು ಸುಮಾರು 31 ತಾಸುಗಳ ಕಾಲ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಅವರ ಭೂಮಿ ಜೊತೆಗಿನ ಸಂಪರ್ಕ ಕಡಿದುಹೋಗಿತ್ತು.

2007: ಅರಬ್ಬರ ವಿರೋಧವನ್ನು ಲೆಕ್ಕಿಸದೆ ಜೆರುಸಲೇಂನ ಹೊರಭಾಗದ ಅತ್ಯಂತ ವಿವಾದಾತ್ಮಕ ಧಾರ್ಮಿಕ ತಾಣದಲ್ಲಿಉತ್ಖನನ ಮುಂದುವರೆಸಲು ಇಸ್ರೇಲ್ ಸಚಿವ ಸಂಪುಟ ನಿರ್ಧರಿಸಿತು. ಉದ್ದೇಶಿತ ಚೌಕಟ್ಟಿನ ಮಿತಿಯಲ್ಲೇ ಒಳಗೆ ಮುಘ್ರಾಬಿ ಗೇಟಿಗೆ ಸಂಪರ್ಕ ಮಾರ್ಗ ನಿರ್ಮಾಣದ ಕಾರ್ಯದ ಮುಂದುವರಿಕೆಗೂ ಸರ್ಕಾರ ಮಂಜೂರಾತಿ ನೀಡಿತು. ಮುಸ್ಲಿಮರು `ಅಲ್-ಹರಮ್-ಅಲ್-ಷರೀಫ್' ಎಂಬದಾಗಿ ನಂಬುವ ಈ ಕಟ್ಟಡವನ್ನು ಯಹೂದಿಗಳು ತಮ್ಮ `ಮೌಂಟ್ ಮಂದಿರ' ಎಂಬುದಾಗಿ ನಂಬುತ್ತಾರೆ.

2007: ಭಾರತದ ಪ್ರಮುಖ ಮೊಬೈಲ್ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ಹಚ್- ಎಸ್ಸಾರ್ ಕಂಪೆನಿಯನ್ನು ಬ್ರಿಟನ್ನಿನ ಪ್ರಮುಖ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ವಡಾಫೋನ್ 19.3 ಬಿಲಿಯನ್ ಡಾಲರುಗಳಿಗೆ (1930ಕೋಟಿ ಡಾಲರ್) ಖರೀದಿಸಿತು.

2007: ಬೆಂಗಳೂರಿನ ಯಲಹಂಕದಲ್ಲಿ ಐದು ದಿನಗಳಿಂದ ವಿಮಾನಾಸಕ್ತರ ಕುತೂಹಲ ಕೆರಳಿಸಿ, ಜಗತ್ತಿನ ಗಮನ ಸೆಳೆದಿದ್ದ ಆರನೇ ಏರ್ ಇಂಡಿಯಾ -2007 ವೈಮಾನಿಕ ಪ್ರದರ್ಶನಕ್ಕೆ ತೆರೆಬಿತ್ತು. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಪ್ರದರ್ಶನ ವೀಕ್ಷಿಸಿದರು.

2007: ವಾರ್ಷಿಕ ಪ್ರೇಮಿಗಳ ದಿನಾಚರಣೆ ಅಂಗವಾಗಿ ಫಿಲಿಪ್ಪೀನ್ಸಿನ ಮನಿಲಾದಲ್ಲಿ ಏರ್ಪಡಿಸಲಾಗಿದ್ದ `ಮುತ್ತಿನ ಹಬ್ಬ'ದಲ್ಲಿ 6214 ಜೋಡಿಗಳು ಪಾಲ್ಗೊಂಡು `ಮುತ್ತಿನ ದಾಖಲೆ' ನಿರ್ಮಿಸಿದವು. 2005ರಲ್ಲಿ ಬುಡಾಪೆಸ್ಟಿನಲ್ಲಿ 5875 ಜೋಡಿಗಳು ನಿರ್ಮಿಸಿದ್ದ ಮುತ್ತಿನ ದಾಖಲೆಯನ್ನು ಈ ಜೋಡಿಗಳು ಅಳಿಸಿ ಹಾಕಿದವು.

2007: ಉತ್ತರ ಪ್ರದೇಶದ ಬುಲಂದಶಹರಿನ ರಾಜಘಾಟಿನಲ್ಲಿ ಖಾಸಗಿ ಬಸ್ಸೊಂದು ಗಂಗಾನದಿ ಕಾಲುವೆಗೆ ಉರುಳಿ ಬಿದ್ದು 45 ಜನ ಮೃತರಾದರು.

2007: ನದಿಯ ನೀರಿನ ಮೇಲೆ ರಸ್ತೆಯಲ್ಲಿ ಚಲಿಸುವಂತೆಯೇ ತೇಲುತ್ತಾ ಚಲಿಸಬಲ್ಲ ತನ್ನ ಹೊಸ ಸಂಶೋಧಿತ ಕಾರನ್ನು ಕೇರಳದ ತಿರುವನಂತಪುರದ 28ರ ಹರೆಯದ ತರುಣ ಮೆಕ್ಯಾನಿಕ್ ಪಿ.ಎಸ್. ವಿನೋದ್ ತಿರುವಲ್ಲಂ ಸರೋವರದಲ್ಲಿ ಎರಡನೇ ಬಾರಿಗೆ ಯಶಸ್ವಿಯಾಗಿ ಪ್ರದರ್ಶಿಸಿದರು. ಈ ಕಾರು ಪ್ರೊಫೆಲ್ಲರ್ ಹೊಂದಿದ್ದು, ನೀರನ್ನು ಪ್ರವೇಶಿಸಿದ ಬಳಿಕ ಇದು ಚಾಲೂ ಆಗುತ್ತದೆ. ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಬಳಸಿ ಈ ಪ್ರೊಫೆಲ್ಲರನ್ನು ಚಲಾಯಿಸಬಹುದು. ಈ ಕಾರು 1985ರ ಮಾಡೆಲ್ಲಿನ ಮಾರುತಿ ಕಾರಿನ ಚಾಸಿಸ್ ಮತ್ತು ಎಂಜಿನ್ ಹಾಗೂ ಪಾಲೆಯೋದ ಹೆಡ್ ಲೈಟ್, ಸ್ಕಾರ್ಪಿಯೋದ ಹಿಂಭಾಗವನ್ನು ಹೊಂದಿದೆ. ಇದನ್ನು ನಿರ್ಮಿಸಲು ವಿನೋದ್ ಗೆ 8.5 ಲಕ್ಷ ರೂಪಾಯಿ ವೆಚ್ಚ ತಗುಲಿದೆ.

2006: ಔಷಧಗಳ ಮೇಲೆ ಎಲ್ಲ ತೆರಿಗೆಗಳೂ ಸೇರಿದಂತೆ ಗರಿಷ್ಠ ಮಾರಾಟ ದರ (ಎಂ ಆರ್ ಪಿ) ನಮೂದಿಸುವುದನ್ನು ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ರಾಮ್ ವಿಲಾಸ ಪಾಸ್ವಾನ್ ಪ್ರಕಟಿಸಿದರು.

1993: ಭಾರತದ ಖ್ಯಾತ ಚಿತ್ರ ನಿರ್ದೇಶಕ ಕಮಲ್ ಅಮ್ರೋಹಿ (1918-1993) ಈ ದಿನ ನಿಧನರಾದರು. ಇವರು ನಟಿ ಮೀನಾಕುಮಾರಿ ಅವರ ಪತಿ.

1990: ದಕ್ಷಿಣ ಆಫ್ರಿಕಾದ ಕರಿಯ ರಾಷ್ಟ್ರೀಯ ನಾಯಕ ನೆಲ್ಸನ್ ಮಂಡೇಲಾ ಅವರನ್ನು 27 ವರ್ಷಗಳ ಸುದೀರ್ಘ ಸೆರೆವಾಸದಿಂದ ಬಿಡುಗಡೆ ಮಾಡಲಾಯಿತು.

1980: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888- 1980) ನಿಧನರಾದರು.

1977: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ (1905-1977) ಅವರು ನಿಧನರಾದರು. ರಾಷ್ಟ್ರಪತಿಯಾಗಿದ್ದಾಗಲೇ ನಿಧನರಾದ ಭಾರತದ ಎರಡನೇ ರಾಷ್ಟ್ರಪತಿ ಇವರು.

1975: ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ರಾಜಕೀಯ ಪಕ್ಷವೊಂದರ ಮೊತ್ತ ಮೊದಲ ಮಹಿಳಾ ನಾಯಕಿಯಾದರು.

1963: ಶಿಲ್ಪ ಕಲೆಗೆ ಹೊಸ ಆಯಾಮ ನೀಡಿ ಹೊಸ ಹೊಸ ಸಂಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದ ಗಣೇಶ ಎಲ್. ಭಟ್ ಅವರು ಲಕ್ಷ್ಮೀನಾರಾಯಣ ಭಟ್ಟ - ಮಂಗಳಾ ಭಟ್ ದಂಪತಿಯ ಮಗನಾಗಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿಯಲ್ಲಿ ಜನಿಸಿದರು. 600ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ರಚಿಸಿ ಭಾರತ ಮತ್ತು ಇಂಗ್ಲೆಂಡಿನಲ್ಲಿ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ಸಂಘಟಿಸಿರುವ ಗಣೇಶ ಭಟ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರಗಳು ಲಭಿಸಿವೆ. ಮರಳು, ಮರಳುಮಿಶ್ರಿತ ಕೆಂಪುಕಲ್ಲು, ಶೆಲ್ ಸ್ಟೋನ್, ಫ್ರೆಂಚ್ ಸ್ಟೋನ್, ಶಿಂಪ್ಲಿ ಸ್ಟೋನ್, ಬಾತ್ ಸ್ಟೋನ್ ಇತ್ಯಾದಿಗಳನ್ನು ಬಳಸಿ ಶಿಲ್ಪಕಲಾಕೃತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಗಣೇಶ ಭಟ್ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾಕೃತಿ ರಚನೆ ಬಗ್ಗೆ ತರಬೇತಿ ನೀಡಿದ್ದಾರೆ.

1945: ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಧುರೀಣ ಜೋಸೆಫ್ ಸ್ಟಾಲಿನ್ ಅವರು ಎರಡನೇ ಜಾಗತಿಕ ಸಮರ ಕಾಲದ ಯಾಲ್ಟಾ ಒಪ್ಪಂದಕ್ಕೆ ಸಹಿ ಹಾಕಿದರು. ನಾಝಿ ಜರ್ಮನಿಯನನ್ನು ಅಂತಿಮವಾಗಿ ಪರಾಭವಗೊಳಿಸುವ ಬಗೆ ಹಾಗೂ ಪರಾಜಿತ ಪೂರ್ವ ಯುರೋಪ್ ರಾಷ್ಟ್ರಗಳ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಈ ಮೂವರು ಚರ್ಚಿಸಿದರು.

1942: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ಜಮ್ನಾಲಾಲ್ ಬಜಾಜ್ (1889-1942) ನಿಧನರಾದರು.

1847: ಥಾಮಸ್ ಆಲ್ವಾ ಎಡಿಸನ್ (1847-1931) ಹುಟ್ಟಿದ. ಖ್ಯಾತ ಸಂಶೋಧಕನಾದ ಈತ 1000ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದ ವ್ಯಕ್ತಿ. 1973ರಲ್ಲಿ ಈತನ 126ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್ ನ್ನು ಸ್ಥಾಪಿಸಲಾಯಿತು.

No comments:

Advertisement