ಇಂದಿನ ಇತಿಹಾಸ
ಮಾರ್ಚ್ 26
ಹಣ ದುರುಪಯೋಗಪಡಿಸಿದ ಆರೋಪಕ್ಕೆ ಗುರಿಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಮುಂಬೈಯಲ್ಲಿ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮುಂಬೈ ಪೊಲೀಸಿನ ಆರ್ಥಿಕ ಅವ್ಯವಹಾರ ತಡೆ ಘಟಕದ (ಇಒಡಬ್ಲ್ಯು) ಅಧಿಕಾರಿಗಳು ದಾಲ್ಮಿಯ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
2009: ಸಮಯದ ಕೊರತೆಯಿಂದ ಖ್ಯಾತ ಹಿಂದಿ ಚಿತ್ರ ನಟಿ ಐಶ್ವರ್ಯ ರೈ ಬಾರ್ಬಿ ಗೊಂಬೆಗೆ ರೂಪದರ್ಶಿಯಾಗಲು ನಿರಾಕರಿಸಿದರು. ಪೂರ್ವ ನಿಗದಿತ ಕಾರ್ಯಕ್ರಮ ಹಾಗೂ ಈ ಮೊದಲೇ ಸಹಿ ಹಾಕಿದ ಚಿತ್ರಗಳ ಶೂಟಿಂಗ್ ಹಿನ್ನೆಲೆಯಲ್ಲಿ ಐಶ್ವರ್ಯ ಬಾರ್ಬಿಗೆ ರೂಪದರ್ಶಿಯಾಗಲು ನಿರಾಕರಿಸಿದ್ದು, ಬಾರ್ಬಿ ಜನಕರಾದ ಮಾಟೆಲ್ ಕಂಪೆನಿಗೆ ಐಶ್ವರ್ಯ ಪ್ರತಿನಿಧಿಗಳು ಈ ಕುರಿತು ಸಂದೇಶ ಕಳುಹಿಸಿದರು.
2009: ಆಶಾದಾಯಕ ವಾತಾವರಣ ಸೃಷ್ಟಿಸಿದ ಷೇರುಪೇಟೆ 11 ವಾರಗಳ ನಂತರ 10 ಸಾವಿರ ಗಡಿ ದಾಟಿತು. ಈ ಮೂಲಕ ಮತ್ತೆ ಹೂಡಿಕೆದಾರರಲ್ಲಿ ಹೊಸ ಸಂಚಲನ ಹುಟ್ಟು ಹಾಕಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನದ ವಹಿವಾಟಿನಲ್ಲಿ 335.20 ಅಂಕಗಳ ಏರಿಕೆ ದಾಖಲಿಸಿ, 10,003 ಅಂಕಗಳ ದಿನದ ವಹಿವಾಟು ಅಂತ್ಯಗೊಳಿಸಿತು. ಹಿಂದಿನ ನಾಲ್ಕು ದಿನಗಳ ವಹಿವಾಟಿನಲ್ಲಿ ಒಟ್ಟು 1036.42 ಅಂಕ ಹೆಚ್ಚಳವಾಯಿತು.
2008: ಜಾಗತಿಕ ತಾಪಮಾನ ಏರಿಕೆಗೆ ಮಾನವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕಳೆದ ಏರಡು ದಶಕಗಳಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಇದು ಸಾಬೀತಾಗಿದೆ ಎಂದು 'ಗ್ರೀನ್ ಪೀಸ್' ಸಂಸ್ಥೆ ಈದಿನ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿತು. ಕಳೆದ ಒಂದು ಶತಮಾನದಲ್ಲಿ ಭೂಮಿಯ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಏರಿದೆ. ಈ ಶತಮಾನದ ಅಂತ್ಯದ ವೇಳೆಗೆ ತೈಲ ಇಂಧನ ಬಳಕೆ ಹಾಗೂ ಭೂಮಿಯ ಅತಿಯಾದ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲ ಹೊರಸೂಸುವಿಕೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ಭೂ ತಾಪಮಾನ 5-6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಹೆಚ್ಚಲಿದೆ ಎಂದು `ಗ್ರೀನ್ಪೀಸ್' ಸಂಸ್ಥೆ ಹೇಳಿತು. ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಹೆಚ್ಚಾದರೂ ಭೂಮಿಯ ಬಹುತೇಕ ಭಾಗ ಮಾನವರು ವಾಸಿಸಲು ಅನರ್ಹವಾಗುತ್ತದೆ. ಹಲವು ಸಸ್ಯ, ಪ್ರಾಣಿ ಸಂಕುಲಗಳು ಭೂಮಿಯಿಂದ ಕಣ್ಮರೆಯಾಗುತ್ತವೆ ಎಂದು ಈ ವರದಿ ಹೇಳಿತು. ಮುಂದಿನ 50 ವರ್ಷಗಳಲ್ಲಿ ಬಿಸಿಗಾಳಿ ಬೀಸುವುದು ಹೆಚ್ಚಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ಉರಿ ಉಂಟಾಗಲಿದೆ. ಚಳಿಗಾಲದಲ್ಲಿ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಕೈಗಾರಿಕಾ ಕ್ರಾಂತಿಯ ನಂತರ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 10 ಪಟ್ಟು ಹೆಚ್ಚಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳು ಇಂಗಾಲದ ಡೈಆಕ್ಸೈಡನ್ನು ದೊಡ್ಡ ಪ್ರಮಾಣದಲ್ಲಿ ಹೊರಸೂಸುತ್ತಿವೆ ಎಂದು ವರದಿ ಹೇಳಿತು. ಜಾಗತಿಕ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಪ್ರಮಾಣದಲ್ಲಿ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಶೇ 60ರಷ್ಟು ಅನಿಲವನ್ನು ಬಿಡುಗಡೆ ಮಾಡುತ್ತಿವೆ. ಭಾರತ ಶೇ 3ರಷ್ಟು ಹಾಗೂ ಚೀನಾ ಶೇ 8ರಷ್ಟು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಿವೆ ಎಂದು ಗ್ರೀನ್ ಪೀಸ್ ತಿಳಿಸಿತು. ಇತ್ತೀಚಿನ ಹವಾಮಾನ ವೈಪರೀತ್ಯಕ್ಕೆ ತಾಪಮಾನ ಏರಿಕೆಯೇ ಕಾರಣ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಉಷ್ಣವಲಯದಲ್ಲಿ ಬರಗಾಲ ಸಾಮಾನ್ಯವಾಗಿದೆ. ಚಂಡಮಾರುತಗಳು ಪದೇ ಪದೇ ಏಳುತ್ತಿವೆ. ಪರ್ವತ ಪ್ರದೇಶಗಳಲ್ಲಿ ಹಿಮ ಕರಗುತ್ತಿದ್ದರೆ, ಸಮುದ್ರ ಮಟ್ಟ ಒಂದೇ ಸಮನೇ ಏರುತ್ತಿದೆ ಎಂದು ಈ ವರದಿ ಅಭಿಪ್ರಾಯ ಪಟ್ಟಿತು. ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಮಾರ್ಚ್ 29ರ ರಾತ್ರಿ `ಅರ್ಥ್ ಅವರ್' ಆಚರಿಸಿ, ಒಂದು ಗಂಟೆ ಕಾಲ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.
2008: ಸಣ್ಣ ಕಾರು `ನ್ಯಾನೊ' ಪ್ರದರ್ಶಿಸಿ ವಿಶ್ವವನ್ನು ಅಚ್ಚರಿಯಲ್ಲಿ ಮುಳುಗಿಸಿದ್ದ ಭಾರತದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಪ್ರತಿಷ್ಠಿತ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) ಸ್ವಾಧೀನಪಡಿಸಿಕೊಂಡು ಜಾಗತಿಕ ಆಟೊಮೊಬೈಲ್ ರಂಗದಲ್ಲಿ ಹೊಸ ಇತಿಹಾಸ ಬರೆಯಿತು. ಅನೇಕ ತಿಂಗಳ ಊಹಾಪೋಹ ಮತ್ತು ಅನೇಕ ಬಾರಿ ಮುಂದೂಡಿಕೆ ನಂತರ ಕೊನೆಗೂ ಟಾಟಾ ಮೋಟಾರ್ಸ್, ಅಮೆರಿಕದ ಫೋರ್ಡ್ ಮೋಟಾರ್ ಕಂಪನಿಯ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) 2.3 ಶತಕೋಟಿ ಡಾಲರುಗಳಿಗೆ ಖರೀದಿಸಿತು. ಅಂತಿಮವಾಗಿ ಅಂದಾಜು ರೂ 9200 ಕೋಟಿಗಳಿಗೆ ಈ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿತು. ಆಟೊಮೊಬೈಲ್ ರಂಗದಲ್ಲಿ ಭಾರತದ ಸಂಸ್ಥೆಯೊಂದರ ಅತಿ ದೊಡ್ಡ ಸ್ವಾಧೀನ ಪ್ರಕ್ರಿಯೆ ಇದು. ರೂ.1 ಲಕ್ಷ ಮೌಲ್ಯದ ಅಗ್ಗದ ಕಾರು ತಯಾರಿಕೆಯಿಂದ ಹಿಡಿದು ದುಬಾರಿ ಕಾರು ತಯಾರಿಕೆಯ ಹೆಗ್ಗಳಿಕೆಯು ಟಾಟಾ ಮೋಟಾರ್ಸಿನ ಪಾಲಾಯಿತು.
2008: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಹಿಂದೆ ನಾಗರಹೊಳೆಯಲ್ಲಿ ಉಳಿದುಕೊಂಡಿದ್ದ ಕೋಣೆಯಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರೂ ಹಿಂದಿನ ದಿನ ರಾತ್ರಿ ವಾಸ್ತವ್ಯ ಹೂಡಿದರು. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ಅವರು ಮಧ್ಯರಾತ್ರಿ 12.30ರ ವೇಳೆಗೆ ನಾಗರಹೊಳೆ ಅರಣ್ಯದಲ್ಲಿನ ಕಾವೇರಿ ಲಾಜ್ ಗೆ ಆಗಮಿಸಿದರು. ಇಂದಿರಾಗಾಂಧಿ ಅವರೂ ಚಿಕ್ಕಮಗಳೂರು ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಇಲ್ಲಿಯೆ ಉಳಿದುಕೊಂಡಿದ್ದರು. ರಾಹುಲ್ ಗಾಂಧಿ ಅವರಿಗೆ ನಾಗರಹೊಳೆ ಕಾಡಿನಲ್ಲಿಯೇ ಇದ್ದ ಕಿಂಗ್ಸ್ ಸ್ಯಾಂಚುರಿ ರೆಸಾರ್ಟಿನಲ್ಲಿ ಎರಡು ಕೋಣೆಗಳನ್ನು ಮುಂಗಡ ಕಾಯ್ದಿರಿಸಿದ್ದರೂ ಅವರು ಕಾವೇರಿ ಲಾಜ್ನಲ್ಲಿಯೇ ಉಳಿದುಕೊಂಡರು. ಇಂದಿರಾಗಾಂಧಿ ಅವರಿಗೆ ಊಟ ಬಡಿಸಿದ್ದ ರವೀಂದ್ರ ನಾಯರ್ ಅವರೇ ರಾತ್ರಿ ಊಟ ಹಾಗೂ ಈದಿನ ಬೆಳಗ್ಗೆ ತಿಂಡಿಯನ್ನು ರಾಹುಲ್ ಗಾಂಧಿ ಅವರಿಗೂ ಬಡಿಸಿದರು.
2008: ಪದವಿ ಪೂರ್ವ (ಪಿ.ಯು) ಕಾಲೇಜು ಉಪನ್ಯಾಸಕರ ನೇಮಕಾತಿಯ ಅರ್ಹತಾ ಮಾನದಂಡವಾಗಿ ಇತ್ತೀಚೆಗೆ ಸೇರಿಸಲಾಗಿದ್ದ ಬಿ.ಇಡಿ ಪದವಿಯನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಪಿ.ಯು. ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆ ಬಿ.ಇಡಿ ಪದವಿ ಇರಬೇಕೆಂಬ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಈ ತೀರ್ಮಾನ ತೆಗೆದುಕೊಂಡಿತು.
2008: ಹಣ ದುರುಪಯೋಗಪಡಿಸಿದ ಆರೋಪಕ್ಕೆ ಗುರಿಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಮುಂಬೈಯಲ್ಲಿ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮುಂಬೈ ಪೊಲೀಸಿನ ಆರ್ಥಿಕ ಅವ್ಯವಹಾರ ತಡೆ ಘಟಕದ (ಇಒಡಬ್ಲ್ಯು) ಅಧಿಕಾರಿಗಳು ದಾಲ್ಮಿಯ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಧೀಶ ಆರ್. ಕೆ. ವಾಂಖೇಡೆ ಅವರು 25,000 ರೂಪಾಯಿ ಮುಚ್ಚಳಿಕೆಯ ಮೇಲೆ ಅವರನ್ನು ಬಿಡುಗಡೆಗೊಳಿಸಿದರು.
2008: ವಿಭು ಎಂಬ 55 ದಿನಗಳ ರಣಹದ್ದಿನ ಮರಿಯೊಂದು ಬಂಧನದಲ್ಲಿ ಜನಿಸಿ, ಬದುಕುಳಿದ ವಿಶ್ವದ ಮೊದಲ ರಣಹದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹರಿಯಾಣದ ಪಿಂಜೊರಿನಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದ್ದ ಬಿಳಿ ಬೆನ್ನಿನ ರಣಹದ್ದು ಜೋಡಿಯೊಂದು ತನ್ನ ಜಾತಿಯ ಜಾಯಮಾನದಂತೆ ಗೂಡು ಕಟ್ಟಿ, ಮೊಟ್ಟೆ ಇಟ್ಟು 55 ದಿನಗಳ ಹಿಂದೆ ಮರಿ ಹಾಕಿತ್ತು. ಚಂಡೀಗಢ ಸಮೀಪದ ಪಿಂಜೊರಿನ `ರಣಹದ್ದು ಸಂರಕ್ಷಣೆ ಹಾಗೂ ತಳಿ ಸಂವರ್ಧನೆ ಕೇಂದ್ರ'ದಲ್ಲಿ ಈ ಅಪರೂಪದ ಘಟನೆ ನಡೆಯಿತು ಎಂದು ಹರಿಯಾಣದ ಅರಣ್ಯ ಹಾಗೂ ಪರಿಸರ ಸಚಿವೆ ಕಿರಣ್ ಚೌಧುರಿ ತಿಳಿಸಿದರು. ಮರಿ ಚೆನ್ನಾಗಿ ಬೆಳೆಯುತ್ತಿದ್ದು ಮುಂದಿನ 45 ದಿನಗಳಲ್ಲಿ ಹಾರುವ ಸಾಮರ್ಥ್ಯ ಪಡೆಯುವುದು. ಬಿಳಿಬೆನ್ನಿನ ರಣಹದ್ದು ಜಾತಿಯಲ್ಲಿ ಮರಿ 100 ದಿನಗಳ ಕಾಲ ಗೂಡಿನಲ್ಲಿ ಇರುತ್ತದೆ. ಗಂಡು-ಹೆಣ್ಣು ಹಕ್ಕಿಗಳು ಸಮನಾಗಿ ಮರಿಯ ಪಾಲನೆ ಮಾಡುತ್ತವೆ. ಅಳಿಯುತ್ತಿರುವ ರಣಹದ್ದುಗಳನ್ನು ಸಂರಕ್ಷಿಸಲು ಬಾಂಬೆ ನ್ಯಾಚುರಲ್ ಹಿಸ್ಟರಿ ಸಹಯೋಗದಲ್ಲಿ ಹರಿಯಾಣ ಅರಣ್ಯ ಇಲಾಖೆ ಪಿಂಜೊರಿನಲ್ಲಿ ರಣಹದ್ದು ಸಂರಕ್ಷಣಾ ಕೇಂದ್ರ ನಡೆಸಿದೆ.
2008: ಆಗ್ರಾ ಬಳಿಯ ಹುಲಾಸ್ ಪುರ ಗ್ರಾಮದಲ್ಲಿ ತಂದೆಯ ಜೊತೆ ಆಟವಾಡುತ್ತಿದ್ದಾಗ 45 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕಿ ವಂದನಾಳನ್ನು 26ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರ ತರಲಾಯಿತು. ಸ್ಥಳದಲ್ಲೇ ಕಾದಿದ್ದ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಂದನಾ ಹಿಂದಿನ ದಿನ ಕೊಳವೆ ಬಾವಿಗೆ ಬಿದ್ದಿದ್ದಳು.
2008: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಿರಿಯ ಉಪಸಂಪಾದಕ ಕೇಶವ ಜಿ. ಝಿಂಗಾಡೆ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ಸುದರ್ಶನ ಚೆನ್ನಂಗಿಹಳ್ಳಿ, ಕಾರ್ಯ ನಿರ್ವಾಹಕನಿರ್ದೇಶಕ- ಎ.ಎಂ.ಸುರೇಶ್, ಖಜಾಂಚಿ- ದಿನೇಶ್ ಕಾರ್ಯಪ್ಪ, ಆಂತರಿಕ ಲೆಕ್ಕಪರಿಶೋಧಕ- ಬಿ.ಎನ್.ಶ್ರೀಧರ, ಹಾಗೂ ನಿರ್ದೇಶಕರಾಗಿ ಎಂ.ಎನ್. ಗುರುಮೂರ್ತಿ, ಕೆ.ಶಿವಸುಬ್ರಹ್ಮಣ್ಯ, ಕೆ.ವಿ.ಪ್ರಭಾಕರ, ಎಸ್.ಗಿರೀಶ್ ಬಾಬು, ಮಂಜುನಾಥ್ ಚಾಂದ್, ಎಂ.ಜಯರಾಮ ಅಡಿಗ, ಸುಧಾ ಹೆಗಡೆ ಹಾಗೂ ನಾಗರಾಜ ರಾ. ಚಿನಗುಂಡಿ ಆಯ್ಕೆಯಾದರು.
2008: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾದ 500 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೊದಲನೇ ಘಟಕವನ್ನು ಸಂಪೂರ್ಣವಾಗಿ ದೇಶಕ್ಕೆ ಸಮರ್ಪಿಸಲು ಸಿದ್ಧತೆಗಳು ನಡೆದಿದ್ದು, ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಕಲ್ಲಿದ್ದಲು ಬಳಸಿ ಹಿಂದಿನ ದಿನ ಸಂಜೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಯಿತು.
2008: ಗೋಧ್ರಾ ಬಳಿಕದ ಕೋಮು ಗಲಭೆಗಳ ಮರು ತನಿಖೆಗಾಗಿ 10 ದಿನಗಳ ಒಳಗೆ ವಿಶೇಷ ತನಿಖಾ ತಂಡ (ಸಿಟ್) ರಚಿಸುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತು.
2008: ಕೀರ್ತಿ ಮತ್ತು ಅದೃಷ್ಟ ಎರಡನ್ನೂ ಗೆಲ್ಲುವ ಅತ್ಯುತ್ತಮ ಅವಕಾಶ ಹೆಸರಿಗೆ ಇದೆ ಎಂದು ಲಂಡನ್ನಿನ ಒಂದು ಅಧ್ಯಯನ ಹೇಳಿತು. ಬ್ರಿಟನ್ನಿನ ಹೆರ್ಟ್ ಫೋರ್ಡ್ ಷೈರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಕೆಲವು ವ್ಯಕ್ತಿಗಳ ಯಶಸ್ಸಿಗೆ ಮತ್ತು ಕೆಲವರ ದುರದೃಷ್ಟಕ್ಕೆ ಅವರ ಹೆಸರೇ ಕಾರಣ ಎಂದು `ದಿ ಟೈಮ್ಸ್' ವರದಿ ಮಾಡಿತು. 6500 ಮಂದಿಯ ಸಮೀಕ್ಷೆಯಿಂದ ಲಭಿಸಿದ ಫಲಿತಾಂಶವನ್ನು ಆಧರಿಸಿ ಈ ತೀರ್ಮಾನಕ್ಕೆ ಸಂಶೋಧಕರು ಬಂದರು. ಜೇಮ್ಸ್ ಮತ್ತು ಎಲಿಜಬೆತ್ನಂತಹ ಹೆಸರುಗಳು ಯಶಸ್ಸಿನ ಸಂಕೇತವಾಗಿದ್ದರೆ, ರಿಯಾನ್ ಮತ್ತು ಸೋಫೀಯಂತಹ ಹೆಸರುಗಳು ಅದೃಷ್ಟದ ಸಂಕೇತಗಳು. ಆದರೆ ಜ್ಯಾಕ್ ಮತ್ತು ಲೂಸಿಯಂತಹ ಹೆಸರುಗಳು ದುರದೃಷ್ಟಕರ ಹೆಸರುಗಳು ಎಂಬುದು ಸಮೀಕ್ಷೆಯ ಅಭಿಪ್ರಾಯ.
2007: ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಭಾರತೀಯ ತೈಲ ನಿಗಮದ ಮಾರಾಟ ಅಧಿಕಾರಿ ಮಂಜುನಾಥ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವನ್ ಕುಮಾರ್ ಮಿತ್ತಲ್ ಗೆ ಉತ್ತರ ಪ್ರದೇಶದ ಲಖೀಂಪುರದ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಉಳಿದ ಏಳುಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
2007: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ನಾಡಿನ ಅತ್ಯುನ್ನತ ನಾಗರಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ `ಕರ್ನಾಟಕ ರತ್ನ' ಮತ್ತು ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರಿಗೆ `ಪಂಪ ಪ್ರಶಸ್ತಿ' ಘೋಷಿಸಲಾಯಿತು. `ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ'ಗೆ ಹಿರಿಯ ಕಲಾವಿದರಾದ ಬಿ.ಕೆ. ಹುಬಳಿ, ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಿ ಬಿ.ಎನ್. ಚನ್ನಪ್ಪಾಚಾರ್ಯ, ಜಾನಪದ ಶ್ರೀ ಪ್ರಶಸ್ತಿಗೆ ಈಶ್ವರಪ್ಪ ಗುರಪ್ಪ ಅಂಗಡಿ, ಕನಕ ಪುರಂದರ ಪ್ರಶಸ್ತಿಗೆ ವಿ. ರಾಮರತ್ನಂ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸಿ.ಕೆ. ತಾರಾ ಆಯ್ಕೆಯಾದರು.
2007: 1984ರ ಸಿಖ್-ವಿರೋಧಿ ದೊಂಬಿಗಳ ಕಾಲದಲ್ಲಿ ಕುಟುಂಬ ಒಂದರ ಮೂವರು ಸದಸ್ಯರನ್ನು ಕೊಂದುದಕ್ಕಾಗಿ ಮೂವರು ವ್ಯಕ್ತಿಗಳನ್ನು ತಪ್ಪಿತಸ್ಥರು ಎಂದು ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್ ಶಾಸ್ತ್ರಿ ಅವರು ಆರೋಪಿಗಳಾದ ಹರಪ್ರಸಾದ್ ಭಾರಧ್ವಾಜ್, ಆರ್.ಪಿ. ತಿವಾರಿ ಮತ್ತು ಜಗದೀಶ ಗಿರಿ ಅವರು ದೆಹಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಸಿಖ್ ಕುಟುಂಬದ ಮೂವರನ್ನು ಕೊಂದ ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿದರು. ಇಪ್ಪತ್ತೆರಡೂವರೆ ವರ್ಷಗಳ ಹಿಂದೆ 1984ರ ನವೆಂಬರ್ ಒಂದು ಮತ್ತು ಎರಡರಂದು ಅರ್ಜಿದಾರರಾದ ಹರ್ಮಿಂದರ್ ಕೌರ್ ಅವರ ಪೂರ್ವ ದೆಹಲಿಯ ಮನೆಯ ಮೇಲೆ ಆರೋಪಿಗಳ ನೇತೃತ್ವದಲ್ಲಿ ಗುಂಪೊಂದು ಹಲ್ಲೆ ನಡೆಸಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಿಖ್ ವಿರೋಧಿ ದಂಗೆಗಳು ಭುಗಿಲೆದ್ದ ಸಂದರ್ಭದಲ್ಲಿ ಈ ಹಲ್ಲೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೊಬ್ಬ ಮಹಿಳೆ ಕಮಲೇಶ್ ಮತ್ತು ಸೂರಜ್ ಗಿರಿ ಅವರನ್ನು ಸಾಕ್ಷ್ಯಗಳ ಅಭಾವದ ಕಾರಣ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರು ಬಿಡುಗಡೆ ಮಾಡಿದರು. ಹರ್ಮಿಂದರ್ ಕೌರ್ ಅವರ ಪತಿ, ದೆಹಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಿರಂಜನ್ ಸಿಂಗ್ 1984ರ ನವೆಂಬರ್ 1ರಂದು ಶಾಹ್ ದರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳ ನೇತೃತ್ವದ ಗುಂಪು ನಿರಂಜನ್ ಸಿಂಗ್ ಅವರನ್ನು ಕೊಂದು ಬೆಂಕಿ ಹಚ್ಚಿತು. ಅದಕ್ಕೂ ಮುನ್ನ ಆರೋಪಿಗಳು ನಿರಂಜನ್ ಸಿಂಗ್ ಅವರನ್ನು ಮಾನಸರೋವರ ಪಾರ್ಕಿನ ಅವರ ಮನೆಯವರೆಗೂ ಅಟ್ಟಿಸಿಕೊಂಡು ಹೋಗಿದ್ದರು. ಅವರ 17 ವರ್ಷದ ಮಗ ಗುರ್ಪಾಲ್ ಸಿಂಗ್ ಮತ್ತು ಅಳಿಯ ಮಹೇಂದರ್ ಸಿಂಗ್ ಅವರನ್ನು ಆರೋಪಿಗಳು ಮರುದಿನ ಕೊಂದು ಹಾಕಿದರು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು. ದಂಗೆ ಕಾಲದಲ್ಲಿ ಬದುಕಿ ಉಳಿದ ಕೌರ್ ಅವರು ಸಿಖ್ ವಿರೋಧಿ ಗಲಭೆಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಜೈನ್ ಮತ್ತು ಬ್ಯಾನರ್ಜಿ ಆಯೋಗದ ಮುಂದೆ ಪ್ರಮಾಣಪತ್ರ ಸಲ್ಲಿಸಿದ ಬಳಿಕ 1996ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ಸಲ್ಲಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಎಚ್. ಕೆ. ಎಲ್. ಭಗತ್ ಅವರನ್ನು ಕೂಡಾ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಹೆಸರಿಸಲಾಗಿತ್ತು. ಆದರೆ ನಂತರ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲವೆಂಬ ಕಾರಣದಿಂದ ಆರೋಪ ಮುಕ್ತರನ್ನಾಗಿ ಮಾಡಲಾಗಿತ್ತು.
2006: ಖ್ಯಾತ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ `ಶಿವರಾಮ ಹೆಗಡೆ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಂಭುಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
2006: ಇಬ್ಬರು ಮಕ್ಕಳ ತಾಯಿ ಮುಂಬೈಯ ಆರತಿ ಠಾಕೂರ್ (24) ಅವರು `ನೋ ಮಾರ್ಕ್ಸ್ ಮಿಸೆಸ್ ಇಂಡಿಯಾ ವರ್ಲ್ಡ್
2006' ಆಗಿ ಆಯ್ಕೆಯಾದರು. ಈಕೆ ಶಿವಮೊಗ್ಗದ ಗುಲ್ವಾಡಿ ಸ್ಟುಡಿಯೋದ ಆರ್. ಡಿ. ಗುಲ್ವಾಡಿ ಮತ್ತು ಛಾಯಾದೇವಿ ಗುಲ್ವಾಡಿ ಅವರ ಮೊಮ್ಮಗಳು. ಇವರ ಶಾಲಾ ಶಿಕ್ಷಣ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ನಡೆದಿತ್ತು.
2006: ಮೆಲ್ಬೋರ್ನಿನ ಯಾರಾ ನದಿಯ ದಡದಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟವು ವರ್ಣರಂಜಿತ ಸಾಂಸ್ಕತಿಕ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿತು. ಕ್ರೀಡಾಕೂಟದಲ್ಲಿ 22 ಸ್ವರ್ಣ ಸೇರಿ ಐವತ್ತು ಪದಕ ಪಡೆದ ಭಾರತ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಭಾರತದ ಶೂಟರ್ ಸಮರೇಶ್ ಜಂಗ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡರು. ಅಚಂತ ಶರತ್ ಕಮಲ್ ಅವರಿಗೆ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಬಂಗಾರ ಲಭಿಸಿತು. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬಾಲಿವುಡ್ ತಾರೆಯರಾದ ರಾಣಿ ಮುಖರ್ಜಿ, ಸೈಫ್ ಅಲಿಖಾನ್ ಭಾಂಗ್ರಾ ಅವರ ಆಕರ್ಷಕ ನೃತ್ಯ ಮುಕ್ತಾಯ ಸಮಾರಂಭದ ವಿಶೇಷ ಕಾರ್ಯಕ್ರಮವಾಗಿ ಗಮನಸೆಳೆಯಿತು.
2006: ಮಂಗಳೂರಿನಲ್ಲಿ 98 ಗಂಟೆ 32 ಸೆಕೆಂಡುಗಳ ಕಾಲ ನಿರಂತರ ಉಪನ್ಯಾಸ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಅಣ್ಣಯ್ಯ ರಮೇಶ್ 'ಗಿನ್ನೆಸ್' ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರು ಸೇರ್ಪಡೆಗೆ ಅವಕಾಶ ಪಡೆದುಕೊಂಡರು. ಮಾರ್ಚ್ 22ರ ಬೆಳಗ್ಗೆ 9ಕ್ಕೆ ಆರಂಭಿಸಿದ್ದ ತಮ್ಮ `ಮ್ಯಾರಥಾನ್ ಉಪನ್ಯಾಸ'ವನ್ನು ಅವರು ಈ ದಿನ ಬೆಳಗ್ಗೆ 11.35ಕ್ಕೆ ಕೊನೆಗೊಳಿಸಿದರು. ಆಂಧ್ರಪ್ರದೇಶದ ನಾರಾಯಣ ಶಿವಶಂಕರ್ ಅವರು 72 ಗಂಟೆ 9 ನಿಮಿಷಗಳ ನಿರಂತರ ಉಪನ್ಯಾಸ ಮಾಡಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಿಸಿದ್ದರು.
1982: ಕಲಾವಿದ ಪಾರ್ಶ್ವನಾಥ್ ಶಾ. ಉಪಾಧ್ಯ ಜನನ.
1979: ಎರಡು ವರ್ಷಗಳ ಶಾಂತಿ ಮಾತುಕತೆಗಳ ಬಳಿಕ ಇಸ್ರೇಲಿ ಪ್ರಧಾನಿ ಮೆನಾಕೆಮ್ ಬೆಗಿನ್ ಮತ್ತು ಈಜಿಪ್ಟಿನ ಅಧ್ಯಕ್ಷ ಅನ್ವರ್ ಸಾದತ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
1970: ಕಲಾವಿದೆ ಅರ್ಚನಾ ಹಂಡೆ ಜನನ.
1959: ಲಾಹೋರಿನಲ್ಲಿ ನಡೆದ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಪಾಕಿಸ್ಥಾನದ ಪರವಾಗಿ ಆಟವಾಡಿದ ಮುಷ್ತಾಖ್ ಮಹಮ್ಮದ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಟೆಸ್ಟ್ ಆಟಗಾರ ಎನ್ನಿಸಿದ. ಆಗ ಆತನ ವಯಸ್ಸು 15 ವರ್ಷ 124 ದಿನಗಳು.
1906: ಖ್ಯಾತ ವರ್ಣಚಿತ್ರ ಹಾಗೂ ಶಿಲ್ಪ ಕಲಾವಿದ ಎಸ್. ಎನ್. ಸ್ವಾಮಿ (26-03-1906ರಿಂದ 27-12-1969) ಅವರು ಅವರು ಶಿಲ್ಪ ಸಿದ್ಧಾಂತಿ ವೀರತ್ತ ಸ್ವಾಮಿ ಅವರ ಮಗನಾಗಿ ಈಗಿನ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಜನಿಸಿದರು.
1932: ಕಲಾವಿದೆ ಉಷಾ ದಾತಾರ್ ಜನನ.
1902: ಈಗಿನ ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರು ಬರಲು ಕಾರಣನಾದ ಸಿಸಿಲ್ ರ್ಹೋಡ್ಸ್ (1853-1902) ತನ್ನ 48ನೇ ವಯಸ್ಸಿನಲ್ಲಿ ಮೃತನಾದ. ಈತ ತನ್ನ ವಜ್ರದ ಗಣಿಯಿಂದ ಲಭಿಸಿದ ಸಂಪತ್ತನ್ನು ವಿನಿಯೋಗಿಸಿ ಆಕ್ಸ್ ಫರ್ಡಿನಲ್ಲಿ ರ್ಹೋಡ್ಸ್ ಸ್ಕಾಲರ್ ಶಿಪ್ ಆರಂಭಿಸಿದ.
1892: ಅಮೆರಿಕಾದ ಖ್ಯಾತ ಪ್ರಬಂಧಕಾರ ಹಾಗೂ ಕವಿ ವಾಲ್ಟ್ ವೈಟ್ ಮ್ಯಾನ್ ತನ್ನ 72ನೇ ವಯಸ್ಸಿನಲ್ಲಿ ಮೃತನಾದ. ಈತನ `ಲೀವ್ಸ್ ಆಫ್ ಗ್ರಾಸ್' ಕೃತಿ ಅಮೆರಿಕದ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.
1874: ಈದಿನ ಹುಟ್ಟಿದ ರಾಬರ್ಟ್ ಫ್ರಾಸ್ಟ್ ಮುಂದೆ ಅಮೆರಿಕಾದ ಖ್ಯಾತ ಕವಿಯಾದ.
No comments:
Post a Comment