Wednesday, April 14, 2010

ಇಂದಿನ ಇತಿಹಾಸ History Today ಏಪ್ರಿಲ್ 14

ಇಂದಿನ ಇತಿಹಾಸ

ಏಪ್ರಿಲ್ 14
ಭುವನೇಶ್ವರದಲ್ಲಿ ಹಿಂದಿನ ದಿನ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕ್ರೀಡಾ ತರಬೇತುದಾರ ಬಿರಾಂಚಿ ದಾಸ್ ಅವರಿಗೆ ಸಹಸ್ರಾರು ಜನರು ಅಶ್ರುತರ್ಪಣದ ಮೂಲಕ ಅಂತಿಮ ನಮನ ಸಲ್ಲಿಸಿದರು. ಆದರೆ ಅತಿ ಕಿರಿಯ ವಯಸ್ಸಿನ ಮ್ಯಾರಾಥಾನ್ ಓಟಗಾರ ಬುಧಿಯಾ ಸಿಂಗ್ ಗೆ ಮಾತ್ರ ತನ್ನ ಗುರುವಿಗೆ ಅಂತಿಮ ನಮನ ಹೇಳಲು ಸಾಧ್ಯವಾಗಲಿಲ್ಲ.

2009: ದುಬೈಯಲ್ಲಿನ ಒಂಟೆ ತಳಿ ಅಭಿವೃದ್ಧಿ ಕೇಂದ್ರವು ವಿಶ್ವದಲ್ಲಿಯೇ ಮೊದಲ ತದ್ರೂಪಿ ಒಂಟೆಯನ್ನು ಸೃಷ್ಟಿಸಿರುವುವುದಾಗಿ ಪ್ರಕಟಿಸಿತು. ಈ ಹೆಣ್ಣುಮರಿಯ ಹೆಸರು ಇನ್‌ಝಾಜ್.

2009: ಬೆಂಗಳೂರು ನಗರದ ಮಡಿವಾಳದಲ್ಲಿನ ಬಾಲಾಪರಾಧಿಗಳ ಸರ್ಕಾರಿ ವೀಕ್ಷಣಾಲಯದಿಂದ 12 ಮಂದಿ ಬಾಲಕರು ತಪ್ಪಿಸಿಕೊಂಡು ಪರಾರಿಯಾದ ಘಟನೆ ಈದಿನ ಸಂಭವಿಸಿತು. ಬಾಲಕರನ್ನು ವೀಕ್ಷಣಾಲಯದ ಆವರಣದಲ್ಲೇ ಬಟ್ಟೆ ತೊಳೆಯಲು ಕೊಠಡಿಯಿಂದ ಹೊರಗೆ ಬಿಟ್ಟಿದ್ದ ಸಂದರ್ಭದಲ್ಲಿ ಅವರು ಪರಾರಿಯಾದರು. ಆವರಣಕ್ಕೆ ಅಳವಡಿಸಿದ ಕಬ್ಬಿಣದ ಮೇಲ್ಛಾವಣಿಯ ಸಲಾಕೆಗಳನ್ನು ಮುರಿದು ಹೊರ ಹೋಗಿರುವ ಅವರು, ಕಟ್ಟಡದ ಕಾಂಪೌಂಡಿಗೆ ಹೊಂದಿಕೊಂಡಂತಿದ್ದ ಮರದ ಮೂಲಕ ಕೆಳಗಿಳಿದು ತಪ್ಪಿಸಿಕೊಂಡರು. ಅವರಲ್ಲಿ ಮೂವರು ಕೊಲೆ ಆರೋಪದಡಿ ಹಾಗೂ ಉಳಿದವರು ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದರು.

2009: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಖಾಸಗಿ ಬಸ್ ಕಣಿವೆಗೆ ಉರುಳಿ ಕನಿಷ್ಠ 30 ಮಂದಿ ಮೃತರಾದರು. ಈ ಬಸ್ ಚಾದ್ರಾ ಹಳ್ಳಿಯಿಂದ ಜಿಲ್ಲಾ ಪ್ರಮುಖ ಸ್ಥಳ ಚಂಬಾ ಕಡೆಗೆ ಹೋಗುತ್ತಿದ್ದಾಗ ಟಿಸ್ಸಾ ಬಳಿ ಕಣಿವೆಗೆ ಉರುಳಿತು. ಮೃತಪಟ್ಟವರೆಲ್ಲ ಚಂಬಾ ಜಿಲ್ಲೆಗೆ ಸೇರಿದ್ದರು.

2009: ಕಾಯಕಯೋಗಿ ಎಂದೇ ಖ್ಯಾತರಾಗಿದ್ದ ಹಾಸನ ತಣ್ಣೀರುಹಳ್ಳ ಮಠದ ಪಟ್ಟಾಧ್ಯಕ್ಷ ಶಿವಲಿಂಗ ಸ್ವಾಮೀಜಿ ನಿಧನರಾದರು. ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಭಕ್ತರ ಮನೆಗೆ ಎತ್ತಿನ ಗಾಡಿಯಲ್ಲಿ, ಕಾಲು ನಡಿಗೆಯಲ್ಲಿ ಸುತ್ತಿ ದವಸ ಧಾನ್ಯ ಸಂಗ್ರಹಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವರು ನೆರವಾಗಿದ್ದರು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ, ದಾಸೋಹ ಸೌಲಭ್ಯವನ್ನೂ ಒದಗಿಸಿದ್ದರು. ಕಾಯಕಯೋಗಿಯಾಗಿ ಶ್ರೀಮಠದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಜೈವಿಕ ಕೃಷಿ, ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡದ್ದಲ್ಲದೆ, ಎಕರೆಗೆ 40 ಕ್ವಿಂಟಲ್ ಬತ್ತ ಬೆಳೆದ ದಾಖಲೆಯೂ ಅವರಿಗೆ ಸಂದಿದೆ. ಬಡ ವಿದ್ಯಾರ್ಥಿಗಳಿಗಾಗಿ ಐಟಿಐ, ಪ್ರಾಥಮಿಕ ಶಾಲೆ, ಹಾಸ್ಟೆಲ್ ಸ್ಥಾಪಿಸಿದ್ದರು.

2009: ತಾಲಿಬಾನ್ ಜತೆಗಿನ ವಿವಾದಾತ್ಮಕ ಶಾಂತಿ ಒಪ್ಪಂದದ ಭಾಗವಾಗಿ ಪಾಕಿಸ್ಥಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸ್ವಾತ್ ಕಣಿವೆಯಲ್ಲಿ ಷರಿಯತ್ ಕಾನೂನು ಜಾರಿಗೊಳಿಸಲು ಅನುಮತಿ ನೀಡಿದರು. ಹಿಂದಿನ ದಿನವಷ್ಟೇ ಜರ್ದಾರಿ ಈ ವಿಷಯವನ್ನು ಸಂಸತ್ ಮುಂದೆ ಇಟ್ಟಿದ್ದರು. ಸಂಸತ್ ಇದಕ್ಕೆ ಸಮ್ಮತಿ ನೀಡಿದ ಕಾರಣ ಅಧ್ಯಕ್ಷರು 'ನಿಜಾಮ್-ಎ-ಅದಲ್- 2009 ಕಾಯ್ದೆಗೆ ಅಂಗೀಕಾರ ನೀಡಿದರು ಎಂದು ಹಿರಿಯ ಸಚಿವ ಬಶೀರ್ ಅಹ್ಮದ್ ಬಿಲೋರ್ ಹೇಳಿಕೆಯನ್ನು ಜಿಯೋ ಟಿವಿ ಉಲ್ಲೇಖಿಸಿತು. ಒಪ್ಪಂದಕ್ಕೆ ಸಹಿ ಮಾಡಿರುವ ವಿಷಯವನ್ನು ಅಧ್ಯಕ್ಷರ ವಕ್ತಾರ ಕೂಡ ಖಚಿತಪಡಿಸಿರುವುದಾಗಿ ಜಿಯೋ ವಾಹಿನಿ ಹೇಳಿತು.

2009: ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅದರ ಪೈಲಟ್ ಮೃತನಾದ ಕಾರಣ ಪ್ರಯಾಣಿಕನೊಬ್ಬ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ರೋಚಕ ಘಟನೆಗೆ ಫ್ಲಾರಿಡಾದ ಫೋರ್ಟ್‌ಮೈರ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ನೇಪಲ್ಸ್ ವಿಮಾನ ನಿಲ್ದಾಣದಿಂದ ಹೊರಟ 'ಕಿಂಗ್' ವಿಮಾನವು 10,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಪೈಲಟ್ ಮೃತನಾದ. ತತ್ ಕ್ಷಣವೇ ಪ್ರಯಾಣಿಕನೊಬ್ಬ ವಿಮಾನಯಾನ ನಿಯಂತ್ರಕರ ನೆರವಿನೊಂದಿಗೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ. ಈ ಪ್ರಯಾಣಿಕನಿಗೆ ಒಂದು ಎಂಜಿನ್ ವಿಮಾನ ಚಾಲನೆಗೆ ಪರವಾನಗಿ ಇತ್ತು. ಆದರೆ ಎರಡು ಎಂಜಿನ್ ಹೊಂದಿರುವ ವಿಮಾನ ಚಾಲನೆಗೆ ಅನುಮತಿ ಇರಲಿಲ್ಲ. ಜಾಕ್ಸನ್‌ನಿಂದ ಮಿಸಿಸಿಪ್ಪಿಗೆ ತೆರಳುತ್ತಿದ್ದ ಈ ವಿಮಾನದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು.

2008: ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದ ಒಟ್ಟು 181 ಸ್ಥಾನಗಳಗಳಲ್ಲಿ ಸಿಪಿಎನ್- ಮಾವೋವಾದಿ ಪಕ್ಷವು 101 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದತ್ತ ದಾಪುಗಾಲು ಹಾಕಿತು. ಈ ಮೂಲಕ ರಾಜಪ್ರಭುತ್ವವನ್ನು ಕೊನೆಗಾಣಿಸಲು ಪಕ್ಷವು ದಶಕಗಳಿಂದಲೂ ನಡೆಸುತ್ತಾ ಬಂದ ಹೋರಾಟಕ್ಕೆ ಜಯ ದೊರೆತಂತಾಯಿತು.

2008: ಸುಮಾರು ನಾಲ್ಕು ದಶಕಗಳ ನಂತರ ಕೋಲ್ಕತಾ -ಢಾಕಾ ನಡುವಿನ ರೈಲು ಸೇವೆ ಪುನರಾರಂಭವಾಯಿತು. ಎರಡೂ ದೇಶಗಳ ನಡುವೆ ಬಾಂಧವ್ಯ ವೃದ್ಧಿಸುವ ಸಲುವಾಗಿ ಏಕಕಾಲಕ್ಕೆ ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಭಾರತದ ಕೋಲ್ಕತಾದಲ್ಲಿ `ಮೈತ್ರಿ ಎಕ್ಸ್ ಪ್ರೆಸ್' ಹೆಸರಿನ ಸಾರ್ವಜನಿಕ ರೈಲ್ವೆ ಸೇವೆಯನ್ನು ವಿಧ್ಯುಕ್ತವಾಗಿ ಪುನರಾರಂಭಿಸಲಾಯಿತು. ಬಂಗಾಲಿಗಳ ಹೊಸವರ್ಷದ ದಿನವಾದ `ಪೊಯ್ಲ ಬೈಸಾಖಿ'ಯಂದು ಪುಷ್ಪಗಳಿಂದ ಅಲಂಕೃತಗೊಂಡ ಆರು ಬೋಗಿಗಳ ರೈಲನ್ನು ಬೆಳಿಗ್ಗೆ 7.10ಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ವಿಧ್ಯುಕ್ತವಾಗಿ ಉದ್ಘಾಟಿಸಿದರು. ಉತ್ತರ ಕೋಲ್ಕತಾದಿಂದ ಹೊರಟ ಈ ರೈಲು 15 ಗಂಟೆಗಳ ಐತಿಹಾಸಿಕ ಪ್ರಯಾಣದ ನಂತರ ಢಾಕಾವನ್ನು ತಲುಪುವುದು. 1965ರಲ್ಲಿ ನಡೆದ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಕೋಲ್ಕತಾ-ಢಾಕಾ ನಡುವಣ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ಬಾಂಗ್ಲಾ ಪಾಕಿಸ್ಥಾನದ ಭಾಗವಾಗಿತ್ತು. ಈ ಮಧ್ಯೆ 1996ರಲ್ಲಿ ಕೋಲ್ಕತಾ -ಢಾಕಾ ನಡುವೆ ನೇರ ಬಸ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. `ಮೈತ್ರಿ' ಅಂದರೆ ಸ್ನೇಹದ ಹೆಸರಿನಲ್ಲಿರುವ ಈ ರೈಲು 538 ಕಿ.ಮೀ.ವರೆಗೆ ಪ್ರಯಾಣಿಸಲಿದ್ದು, 120ಕಿ.ಮೀ. ವರೆಗಿನ ಪ್ರಯಾಣವನ್ನು ಭಾರತದಲ್ಲಿ ಕೈಗೊಳ್ಳುತ್ತದೆ. ಕೋಲ್ಕತಾದಿಂದ ಹೊರಡುವ ರೈಲಿನಲ್ಲಿ 368 ಮಂದಿ ಪ್ರಯಾಣಿಸಬಹುದಾಗಿದ್ದರೆ, ಢಾಕಾದಿಂದ ಹೊರಡುವ ರೈಲಿನಲ್ಲಿ 418ಮಂದಿ ಪ್ರಯಾಣಿಸಬಹುದು. `ಮೈತ್ರಿ ಎಕ್ಸ್ ಪ್ರೆಸ್' ಸಂಚಾರ ಆರಂಭಕ್ಕೆ ಎರಡೂ ದೇಶಗಳು ಈ ವಾರದ ಆದಿಯಲ್ಲಿ ಪರಸ್ಪರ ಚರ್ಚಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಏಪ್ರಿಲ್ 14 ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ ಮತ್ತು ಮರಣ ದಿನವೂ ಆಗಿದೆ. ಅಲ್ಲದೆ ಟ್ಯಾಗೋರರು ಭಾರತ ಮತ್ತು ಬಾಂಗ್ಲಾ ಎರಡೂ ದೇಶಗಳಿಗೆ ರಾಷ್ಟ್ರಗೀತೆಯನ್ನು ರಚಿಸಿಕೊಟ್ಟವರು. ಆದ್ದರಿಂದ ಅಂದು `ಮೈತ್ರಿ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಬೇಕು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಪಿ.ಆರ್. ದಾಸ್ ಮುನ್ಯಿ ಅವರ ಸಲಹೆಯನ್ನು ಪರಿಗಣಿಸಿ ಈ ದಿನವೇ 'ಮೈತ್ರಿ' ಸಂಚಾರ ಆರಂಭಿಸಲಾಯಿತು.

2008: ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಲೇಖಕಿ ಸರಿತಾ ಕುಸುಮಾಕರ ದೇಸಾಯಿ (67) ಹಿಂದಿನ ದಿನ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಈದಿನ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮೂಲತಃ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯವರಾದ ಸರಿತಾ ಅವರು ಗುಲ್ಬರ್ಗದ ಖ್ಯಾತ ವಕೀಲರಾಗಿದ್ದ ಕುಸುಮಾಕರ ದೇಸಾಯಿ ಅವರನ್ನು ವಿವಾಹವಾಗಿ ಗುಲ್ಬರ್ಗದಲ್ಲಿ ವಾಸವಾಗಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ ಕಾನೂನು ಪದಕೋಶ ರಚನಾ ಸಮಿತಿ, ಅಖಿಲ ಕರ್ನಾಟಕ ಪ್ರಥಮ ವಿಪ್ರ ಮಹಿಳಾ ಸಮ್ಮೇಳನದ ಅಧ್ಯಕ್ಷೆಯಾಗಿ, ಕನ್ನಡ ಲೇಖಕಿಯರ ಪರಿಷತ್ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದ ಅವರು, `ನಾನು ಲಕ್ಕಿ, ಕಾಶಿಯಲ್ಲಿ ಕಂಡಿದ್ದೇನು?' `ಮಿಡಿಗಾದ ಮಿಡುಕು' ಮುಂತಾದ ಸಣ್ಣ ಕಥೆಗಳ ಸಂಕಲನ ಪ್ರಕಟಿಸಿದ್ದರು. ದೂರದರ್ಶನದ ಜನಪ್ರಿಯ ಧಾರಾವಾಹಿಯಾಗಿದ್ದ `ಮನೆತನ', `ಋಣಾನುಬಂಧ', `ಒಲವು-ಚೆಲುವು'ಗಳಲ್ಲಿ ನಟಿಸಿದ್ದರು. ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆಯಾಗಿದ್ದರು. ಇವರ `ಭೀಮೇಶ-ಕೃಷ್ಣ' ಸಂಗೀತ ರೂಪಕ ಅಖಿಲ ಭಾರತ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವರ್ಷದ ಲೇಖಕಿ ಪ್ರಶಸ್ತಿಗೆ ಭಾಜನರಾಗಿದ್ದರು. ಗುಲ್ಬರ್ಗ-ಬೀದರ್ ರೈಲ್ವೆ ಮಾರ್ಗ, ಸಿಮೆಂಟ್ ಕಾರ್ಖಾನೆ, ಆಳಂದ ಸಕ್ಕರೆ ಕಾರ್ಖಾನೆ ಸೇರಿದಂತೆ ಈ ಭಾಗದ ಹಲವು ಬೇಡಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. 1995ರಲ್ಲಿ ಅವರು ವಿಧಾನಪರಿಷತ್ ಸದಸ್ಯೆಯಾಗಿ ನಾಮಕರಣಗೊಂಡಿದ್ದರು.

2008: ಬಿಹಾರಿನ ಜಮುಯಿ ಜಿಲ್ಲೆಯ ಜಹಜಾ ರೈಲ್ವೆ ನಿಲ್ದಾಣದಲ್ಲಿನ ಪೊಲೀಸ್ ಠಾಣೆಯ ಮೇಲೆ ಹಿಂದಿನ ದಿನ ರಾತ್ರಿ ಸುಮಾರು 500 ಸಶಸ್ತ್ರ ಮಾವೋವಾದಿ ನಕ್ಸಲೀಯರು ದಾಳಿ ಮಾಡಿದ್ದರಿಂದ ಭದ್ರತಾ ಪಡೆಯ ನಾಲ್ವರು ಸೇರಿದಂತೆ ಐವರು ಸತ್ತು ಇತರ 12 ಜನರು ಗಂಭೀರವಾಗಿ ಗಾಯಗೊಂಡರು. ಈ ನಕ್ಸಲೀಯರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಲ್ಲಿದ್ದವರನ್ನು ಬಲವಂತವಾಗಿ ಹೊರಗೆ ಹಾಕಿದರು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಸ್ಫೋಟಕ ಸಿಡಿಸಿದರು.

2008: ಭುವನೇಶ್ವರದಲ್ಲಿ ಹಿಂದಿನ ದಿನ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕ್ರೀಡಾ ತರಬೇತುದಾರ ಬಿರಾಂಚಿ ದಾಸ್ ಅವರಿಗೆ ಸಹಸ್ರಾರು ಜನರು ಅಶ್ರುತರ್ಪಣದ ಮೂಲಕ ಅಂತಿಮ ನಮನ ಸಲ್ಲಿಸಿದರು. ಆದರೆ ಅತಿ ಕಿರಿಯ ವಯಸ್ಸಿನ ಮ್ಯಾರಾಥಾನ್ ಓಟಗಾರ ಬುಧಿಯಾ ಸಿಂಗ್ ಗೆ ಮಾತ್ರ ತನ್ನ ಗುರುವಿಗೆ ಅಂತಿಮ ನಮನ ಹೇಳಲು ಸಾಧ್ಯವಾಗಲಿಲ್ಲ. ಭದ್ರತಾ ಕಾರಣಕ್ಕಾಗಿ ತಾಯಿ ಸುಖಂತಿ ಸಿಂಗ್ ಅವರ ಆದೇಶದಂತೆ ಕ್ರೀಡಾನಿಲಯದ ತನ್ನ ಕೊಠಡಿಯಲ್ಲಿಯೇ ಬಂಧಿಯಾದ ಬುಧಿಯಾಗೆ ಕೊನೆಗೂ ಗುರುವಿನ ಅಂತಿಮ ದರ್ಶನದ ಭಾಗ್ಯ ದೊರಕಲಿಲ್ಲ.

2008: ಮುಂಬೈಯಿಂದ ಹಾಂಕಾಂಗಿಗೆ ಮೊದಲ ವಿಮಾನಯಾನವನ್ನು ಜೆಟ್ ಏರ್ ವೇಸ್ ಆರಂಭಿಸಿತು. ಇದರೊಂದಿಗೆ ಈ ಮಾರ್ಗದಲ್ಲಿ ಖಾಸಗಿ ಕಂಪೆನಿಯೊಂದು ವಿಮಾನಯಾನ ಸೇವೆ ಆರಂಭಿಸಿದ ಶ್ರೇಯಸ್ಸು ಜೆಟ್ ಏರ್ ವೇಸ್ ಗೆ ಸಂದಿತು.

2008: ಭಾರತದ ಪಂಕಜ್ ಅಡ್ವಾಣಿ ಅವರು ಎರಡು ದಿನ ಹಿಂದೆ ಮ್ಯಾನ್ಮಾರಿನಲ್ಲಿ ಮುಕ್ತಾಯವಾದ ಏಳನೇ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ತುರುಸಿನ ಪೈಪೋಟಿ ಕಂಡುಬಂದ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅವರು 5-4ರಲ್ಲಿ ಭಾರತದವರೇ ಆದ ರೂಪೇಶ್ ಶಾ ಅವರನ್ನು ಪರಾಭವಗೊಳಿಸಿದರು.

2007: ಭ್ರಷ್ಟಾಚಾರ ಪ್ರಕರಣದಲ್ಲಿ `ಸಾರ್ವಜನಿಕರ ಸೇವಕರ' ಮೇಲೆ ಮೊಕದ್ದಮೆ ಹೂಡಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಸಾರ್ವಜನಿಕ ರಂಗದಲ್ಲಿ ಮಿತಿ ಮೀರುತ್ತಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದು ಗಮನಾರ್ಹವಾದ ತೀರ್ಪು. 1988ರ ಭ್ರಷ್ಟಾಚಾರ ತಡೆ ಕಾನೂನಿನ ಅಡಿ ದಾಖಲಾಗುವ ಪ್ರಕರಣದಲ್ಲಿ ಪೂರ್ವಾನುಮತಿ ತನ್ನಷ್ಟಕ್ಕೆ ತಾನೇ ಅಂತರ್ಗತವಾಗಿದೆ. ಆದ್ದರಿಂದ ಅನುಮತಿ ನೀಡಲಾಗಿದೆಯೇ ಇಲ್ಲವೇ ಎನ್ನುವುದು ಮಹತ್ವ ಪಡೆಯುವುದಿಲ್ಲ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಚ್. ಎಸ್. ಕಪಾಡಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.

2007: ಶಿಯಾ ಜನಾಂಗದವರ ಪವಿತ್ರ ನಗರವಾದ ಕರ್ಬಾಲದಲ್ಲಿನ ಬಸ್ಸು ನಿಲ್ದಾಣದಲ್ಲಿ ಕಾರು ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 56 ಜನರು ಮೃತರಾಗಿ, ಇತರ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು. ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಪವಿತ್ರ ಸಮಾಧಿ ಸ್ಥಳದಿಂದ ಕೇವಲ 200 ಮೀಟರುಗಳ ಅಂತರದಲ್ಲಿ ಈ ಸ್ಫೋಟ ನಡೆಯಿತು. ಕರ್ಬಾಲ ನಗರವು ಬಾಗ್ದಾದಿನಿಂದ 80 ಕಿ.ಮೀ. ದೂರದಲ್ಲಿದೆ.

2007: ಮಾಧ್ಯಮಗಳಲ್ಲಿ ಬಹುಚರ್ಚಿತ ಪ್ರೇಮ ಪ್ರಸಂಗ ಬ್ರಿಟನ್ನಿನ ರಾಜಕುಮಾರ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್ ಟನ್ ಅವರದ್ದು. ಆದರೆ ಈಗ ಈ ಪ್ರೇಮ ಬಾಂಧವ್ಯ ಮುರಿದುಬಿದ್ದಿದ್ದು, ಬ್ರಿಟನ್ನಿನ ಸನ್ ಪತ್ರಿಕೆ ಇವರ ವೈಮನಸ್ಸನ್ನು ಪ್ರಕಟಿಸಿತು. 24 ಹರೆಯದ ವಿಲಿಯಮ್ಸ್ ಮತ್ತು 25 ಹರೆಯದ ಕೇಟ್ ಕಳೆದ ತಿಂಗಳಷ್ಟೇ ಸ್ವಿಟ್ಜರ್ಲ್ಯಾಂಡಿನಲ್ಲಿ ತಬ್ಬಿಕೊಳ್ಳುತ್ತ ಮುತ್ತಿಡುತ್ತ ಚಳಿಗಾಲದ ರಜೆಯನ್ನು ಕಳೆದಿದ್ದರು.. ಮಧ್ಯಮ ವರ್ಗದ ವಾಣಿಜ್ಯೋದ್ಯಮಿಯೊಬ್ಬರ ಮಗಳಾದ ಕೇಟ್ ತನ್ನ ಫ್ಯಾಷನ್ ಉಡುಗೆ ತೊಡುಗೆಗಳಿಂದ ಜನಪ್ರಿಯಳಾಗಿದ್ದಳು. ಬಹುತೇಕ ಜನರು ಕೇಟ್ ರನ್ನು ರಾಣಿಯ ಸ್ವರೂಪದಲ್ಲಿ ಸ್ವೀಕರಿಸಿದ್ದರು..

2007: ಇತ್ತೀಚೆಗೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರಿಗೆ ಯೋಗದ ಮೂಲಕ ಸುಲಭವಾಗಿ ಮದ್ದು ಕಂಡುಕೊಂಡು ಪರಿಣಾಮಕಾರಿಯಾದ ಫಲಿತಾಂಶ ಪಡೆಯಬಹುದು ಎಂಬುದು ಬೆಳಕಿಗೆ ಬಂದಿತು. ಸ್ತನ್ಯ ಕ್ಯಾನರಿಗೆ ತುತ್ತಾಗಿರುವ ಮಹಿಳೆಯರಿಗೆ ಯೋಗದ ಕೆಲವು ನಿರ್ದಿಷ್ಟ ಆಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿಸಿದಾಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದನ್ನು ನಾರ್ತ್ ಕರೊಲಿನಾದ ಸಂಶೋಧಕರು ಪತ್ತೆ ಹಚ್ಚಿದರು. ನಾರ್ತ್ ಕರೊಲಿನಾದ ದುರ್ಹಮ್ ಪ್ರದೇಶದಲ್ಲಿರುವ ಡ್ಯೂಕ್ ಯುನಿವರ್ಸಿಟಿ ಆಫ್ ಮೆಡಿಕಲ್ ಸೆಂಟರಿನಲ್ಲಿ ಮಹಿಳೆಯರ ಸ್ತನ್ಯ ಕ್ಯಾನ್ಸರ್ ಮೇಲೆ ಯೋಗದ ಪರಿಣಾಮ ಕುರಿತಂತೆ ಕೈಗೊಂಡಿದ್ದ ಸಂಶೋಧನೆ ಯಶಸ್ವಿಯಾಗಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ. ಜೇಮ್ಸ್ ಡಬ್ಲ್ಯೂ. ಕಾರ್ಲ್ ಸನ್ ಈ ದಿನ ಪ್ರಕಟಿಸಿದರು. ಸ್ತನ ಕಾನ್ಸರ್ ಬರುವುದಕ್ಕೆ ಮುಂಚೆಯೇ ಮಹಿಳೆ ಆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಉತ್ತಮ. ಸ್ತನ ಕ್ಯಾನ್ಸರ್ ಇರುವ ಸುಮಾರು 59 ವರ್ಷದ 13 ಮಹಿಳೆಯರಿಗೆ ವಾರಕ್ಕೊಮ್ಮೆ ಯೋಗ ತರಬೇತಿ ನೀಡಲಾಗುತ್ತಿತ್ತು. ಇದೇ ರೀತಿ ಸತತವಾಗಿ 8 ವಾರಗಳ ಕಾಲ ಮಾಡಿದಾಗ ಅವರಲ್ಲಿ ನೋವು ಕಡಿಮೆಯಾಗಿ ಚೈತನ್ಯ ಕಂಡು ಬರತೊಡಗಿತು. ಇದು ನೋವು ನಿರೋಧಕ ಶಕ್ತಿಯ ಪ್ರಮಾಣವನ್ನೂ ಹೆಚ್ಚು ಮಾಡಿತ್ತು ಎಂದು ಸಂಶೋಧನ ತಂಡ ಕಂಡು ಹಿಡಿಯಿತು. ಪ್ರತಿದಿನ ಯೋಗ ಮಾಡುವುದರಿಂದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರು ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. `ಯೋಗದಿಂದ ನೋವು. ಆಯಾಸ ಕಡಿಮೆಯಾಗಿ ದೇಹಕ್ಕೆ ಹೆಚ್ಚು ಉತ್ಸಾಹ ಉಂಟಾಗುತ್ತದೆ' ಎಂಬುದು ಕಾರ್ಲ್ ಸನ್ ಅಭಿಪ್ರಾಯ..

2006: ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಾಯಣ ಮಹಾಸತ್ರವನ್ನು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ನ್ಯಾಸ ಸಮಿತಿ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಉದ್ಘಾಟಿಸಿದರು. ರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಅವರು ಖ್ಯಾತ ಸಾಹಿತಿ ಎಸ್ .ಎಲ್. ಭೈರಪ್ಪ ಅವರಿಗೆ ಪ್ರಥಮ ಪುರುಷೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಾಲ್ಮೀಕಿ ರಾಮಾಯಣದ ಸಾರವನ್ನು ಶ್ರೀಸಾಮಾನ್ಯರಿಗೆ ಬಿತ್ತುವ ಉದ್ದೇಶದ ಇಂತಹ ಕಾರ್ಯಕ್ರಮ ಇತಿಹಾಸದಲ್ಲಿ ಇದೇ ಪ್ರಥಮ.

2006: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಬಿ.ಎ. ಘನಿಖಾನ್ ಚೌಧರಿ ಅವರು ಕೋಲ್ಕತಾದಲ್ಲಿ ನಿಧನರಾದರು.

2006: ದೆಹಲಿಯ ಜಾಮಾ ಮಸೀದಿ ಸಂಕೀರ್ಣದಲ್ಲಿ ಎರಡು ಸ್ಫೋಟಗಳು ಸಂಭವಿಸಿ 13 ಜನ ಗಾಯಗೊಂಡರು. ಆದರೆ ಮಸೀದಿಗೆ ಯಾವುದೇ ಹಾನಿ ಉಂಟಾಗಲಿಲ್ಲ.

1965: ಕಲಾವಿದೆ ಪ್ರತಿಭಾ ಟಿ.ಎಸ್. ಜನನ.

1951: ಭಾರತದಲ್ಲಿ ದಕ್ಷಿಣ ರೈಲ್ವೇ ಸ್ಥಾಪನೆಗೊಂಡಿತು. ಇದು ಮೊತ್ತ ಮೊದಲ ವಲಯ ರೈಲ್ವೇ (ಝೋನಲ್ ರೈಲ್ವೇ) ಆಗಿದ್ದು, ಮದ್ರಾಸ್, ದಕ್ಷಿಣ ಮರಾಠಾ, ದಕ್ಷಿಣ ಭಾರತ ಮತ್ತು ಮೈಸೂರು ರಾಜ್ಯ ರೈಲ್ವೇಗಳನ್ನು ವಿಲೀನಗೊಳಿಸಿ ಈ ರೈಲ್ವೇ ವಲಯವನ್ನು ಸ್ಥಾಪಿಸಲಾಯಿತು.

1947: ಕಲಾವಿದ ಕಮಲಾಕ್ಷ ಪಿ. ಜನನ.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಹೆಸರಿನ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಹಾಗೂ ವಾರ್ ಮ್ಯೂಸಿಯಂ ಇದೆ.

1928: ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಮ್ಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರಗೌಡ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಜನಿಸಿದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಟ್ಟದೂರು 14ರ ವಯಸ್ಸಿನಲ್ಲೇ ರಬೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್ ಅವರ ಭಾವಚಿತ್ರ ರಚಿಸಿದವರು.

1900: ಕಲಾವಿದ ಎಚ್. ಎಸ್. ಇನಾಮತಿ ಜನನ.

1891: ಭೀಮರಾವ್ ರಾಮ್ ಜಿ ಅಂಬೇಡ್ಕರ್ (ಡಾ. ಬಿ.ಆರ್. ಅಂಬೇಡ್ಕರ್) (1891-1956) ಜನ್ಮದಿನ. ಹರಿಜನರ ನಾಯಕರಾಗಿದ್ದ ಇವರು 1947-51ರ ಅವಧಿಯಲ್ಲಿ ಭಾರತ ಸರ್ಕಾರದ ಕಾನೂನು ಸಚಿವರಾಗಿದ್ದರು. ಭಾರತದ ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮುತ್ಸದ್ದಿ ಇವರು.

1889: ಅರ್ನಾಲ್ಡ್ (ಜೋಸೆಫ್) ಟಾಯ್ನಬೀ (1889-1975) ಹುಟ್ಟಿದ ದಿನ. ಇಂಗ್ಲಿಷ್ ಇತಿಹಾಸಕಾರನಾದ ಈತ `ಎ ಸ್ಟಡಿ ಆಫ್ ಹಿಸ್ಟರಿ' ಗ್ರಂಥದ ಮೂಲಕ ಖ್ಯಾತನಾದ.

1866: ಆನ್ ಸುಲ್ಲೀವಾನ್ ಮ್ಯಾಕೆ (1866-1936) ಹುಟ್ಟಿದ ದಿನ. ಅಮೆರಿಕಾದವಳಾದ ಈಕೆ ಕುರುಡಿ, ಕಿವುಡಿ, ಮೂಕಿಯಾಗಿದ್ದ ಹೆಲನ್ ಕೆಲ್ಲರ್ ನ ಶಿಕ್ಷಕಿ.

1828: ನಾಹ್ ವೆಬ್ಸ್ಟರ್ ತನ್ನ `ಅಮೆರಿಕನ್ ಡಿಕ್ಷನರಿ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್'ನ ಮೊದಲ ಆವೃತ್ತಿಯನ್ನು ಪ್ರಕಟಿಸಿದ.

No comments:

Advertisement