ಇಂದಿನ ಇತಿಹಾಸ
ಏಪ್ರಿಲ್ 15
'ಸ್ಲಂಡಾಗ್ ಮಿಲಿಯನೇರ್' ಎಂಬ ಭಾರತೀಯ ಮೂಲದ ಚಲನ ಚಿತ್ರ ವಿಶ್ವ ಸಿನಿಮಾ ಇತಿಹಾಸದಲ್ಲಿ ಆಸ್ಕರ್ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿತು. ಆದರೆ ಅಮೆರಿಕದ 'ಟಾಕ್ ಶೋ' ನಿರೂಪಕ ಲಿಂಬಫ್, ಭಾರತೀಯರನ್ನು ಅದೇ ಹೆಸರಿನಲ್ಲಿ ಸಂಬೋಧಿಸಿ ಅವಮಾನ ಮಾಡಿದ ಘಟನೆ ನಡೆಯಿತು. ಉದ್ಯೋಗಾಕಾಂಕ್ಷಿಯ ಕರೆಯೊಂದಕ್ಕೆ ಉತ್ತರಿಸಿದ ಲಿಂಬಫ್ ನಿಮ್ಮ ಕೆಲಸವನ್ನು ಭಾರತದ ಸ್ಲಮ್ ಡಾಗ್‌ಗಳು ಕಿತ್ತುಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು.
2009: ಮುಂಬೈ ಮೇಲೆ ನಡೆದ ಭೀಕರ ದಾಳಿ ಸಂಬಂಧ ತಾನು ಬಂಧಿಸಿರುವ ಐದನೇ ಶಂಕಿತ ಆರೋಪಿ ಶಾಹೀದ್ ಜಮೀಲ್ ರಿಯಾಜ್‌ನನ್ನು ವಿಚಾರಣೆಗಾಗಿ ಭಾರತಕ್ಕೆ ಹಸ್ತಾಂತರಿಸದಿರಲು ಪಾಕಿಸ್ಥಾನ ನಿರ್ಧರಿಸಿತು. 'ರಿಯಾಜ್‌ನನ್ನು ವಿಚಾರಣೆಗಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇಲ್ಲ' ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿದವು. ನ.26ರಂದು ನಡೆದ ದಾಳಿಯ ಬಗ್ಗೆ ಭಾರತದಿಂದ ಹೆಚ್ಚುವರಿ ಮಾಹಿತಿ ಕೋರಿದ್ದ ಆಂತರಿಕ ಭದ್ರತಾ ಮುಖ್ಯಸ್ಥ ರೆಹಮಾನ್ ಮಲಿಕ್, ಉಗ್ರರಿಗೆ ಹಣಕಾಸು ಪೂರೈಸಿದ್ದ ಶಂಕೆಯ ಮೇಲೆ ರಿಯಾಜ್‌ನನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದರು.
2009: ಕೂದಲು ಕತ್ತರಿಸುವುದನ್ನು ಕಡ್ಡಾಯಗೊಳಿಸಿದ ಕಾನೂನಿನ ವಿರುದ್ಧ ಅಮೆರಿಕದಲ್ಲಿ ಸಿಖ್ಖರ ಸಂಘಟನೆಗಳು ಆಂದೋಲನ ಆರಂಭಿಸಿದವು. ತರಬೇತಿಯಲ್ಲಿದ್ದ ಇಬ್ಬರು ಸಿಖ್ ಯುವಕರಿಗೆ ಜುಲೈ ತಿಂಗಳಲ್ಲಿ ಸೇವೆಗೆ ಸೇರುವ ಮುನ್ನ ಪೇಟ ತೆಗೆಯುವಂತೆ ಮತ್ತು ಕೂದಲನ್ನು ಕತ್ತರಿಸಿಕೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆ ಯುವಕರ ಮುಂದಾಳುತ್ವದಲ್ಲೇ ಹೋರಾಟ ಶುರುವಾಯಿತು. ಆಂದೋಲನದ ಮೊದಲ ಹೆಜ್ಜೆಯಾಗಿ ಕೆಲವು ಸಿಖ್ಖರು ಪೆಂಟಗನ್ ಬಳಿಯ ನೌಕಾ ಸೇನೆ ಯುದ್ಧ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ತರಬೇತಿ ಮುಕ್ತಾಯದ ಹಂತದಲ್ಲಿದ್ದ ವೈದ್ಯ ಕ್ಯಾಪ್ಟನ್ ಕಮಲ್‌ಜಿತ್ ಸಿಂಗ್ ಕಲ್ಸಿ ಮತ್ತು ದಂತವೈದ್ಯ ಎರಡನೇ ಲೆಫ್ಟಿನೆಂಟ್ ತೇಜ್ ದೀಪ್ ಸಿಂಗ್ ರತನ್ ಅವರಿಗೆ ಅಮೆರಿಕದ ಸೇನಾಪಡೆ ಈ ಸೂಚನೆ ನೀಡಿತ್ತು. 'ನಾವು ತರಬೇತಿಗೆ ಸೇರುವಾಗ ಆಯ್ಕೆ ಮಾಡಿಕೊಂಡವರು ಪೇಟ ಮತ್ತು ಉದ್ದ ತಲೆಕೂದಲಿನಿಂದ ಯಾವ ಸಮಸ್ಯೆಯೂ ಆಗದೆಂದು ಭರವಸೆ ನೀಡಿದ್ದರು. ಆದರೆ ಈಗ ಹೊಸ ನಿಬಂಧನೆ ಹಾಕಿರುವುದರಿಂದ ನಾವು ಹುಟ್ಟಿದ ನಾಡಿಗೆ ಸೇವೆ ಸಲ್ಲಿಸುವ ನಮ್ಮ ಬಯಕೆಗೆ ಧಕ್ಕೆಯಾಗುತ್ತದೆ' ಎಂದು ಈ ಇಬ್ಬರು ಸೇನಾಪಡೆಗೆ ಸಲ್ಲಿಸಿದ ತಕರಾರು ಅರ್ಜಿಯಲ್ಲಿ ತಿಳಿಸಿದರು.
2009: 'ಸ್ಲಂಡಾಗ್ ಮಿಲಿಯನೇರ್' ಎಂಬ ಭಾರತೀಯ ಮೂಲದ ಚಲನ ಚಿತ್ರ ವಿಶ್ವ ಸಿನಿಮಾ ಇತಿಹಾಸದಲ್ಲಿ ಆಸ್ಕರ್ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿತು. ಆದರೆ ಅಮೆರಿಕದ 'ಟಾಕ್ ಶೋ' ನಿರೂಪಕ ಲಿಂಬಫ್, ಭಾರತೀಯರನ್ನು ಅದೇ ಹೆಸರಿನಲ್ಲಿ ಸಂಬೋಧಿಸಿ ಅವಮಾನ ಮಾಡಿದ ಘಟನೆ ನಡೆಯಿತು. ಉದ್ಯೋಗಾಕಾಂಕ್ಷಿಯ ಕರೆಯೊಂದಕ್ಕೆ ಉತ್ತರಿಸಿದ ಲಿಂಬಫ್ ನಿಮ್ಮ ಕೆಲಸವನ್ನು ಭಾರತದ ಸ್ಲಮ್ ಡಾಗ್‌ಗಳು ಕಿತ್ತುಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು.
2009: ನ್ಯೂಯಾರ್ಕಿನ ವ್ಯಾನಿಟಿ ಫೇರ್ ಪತ್ರಿಕೆಯು 'ವಿಶ್ವದ ಸುರ ಸುಂದರಿ'ಗಾಗಿ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ 33ರ ಹರೆಯದ ಏಂಜಲೀನಾ ಜೋಲಿ ಆಯ್ಕೆಯಾದರು. ಪತ್ರಿಕೆಯು ವಿಶ್ವದಾದ್ಯಂತ 19 ಮಹಿಳೆಯರನ್ನು ಸಮೀಕ್ಷೆಗೆ ಆಯ್ಕೆ ಮಾಡಿತ್ತು. ಆಸ್ಕರ್ ಪ್ರಶಸ್ತಿ ಪಡೆದ 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ನಟಿ ಫ್ರೀಡಾ ಪಿಂಟೊ ಈ ಪಟ್ಟಿಯಲ್ಲಿದ್ದ ಏಕೈಕ ಭಾರತೀಯ ಮಹಿಳೆ. ಆದರೆ ಇವರಿಗೆ ಶೇ. 2ರಷ್ಟು ಮಾತ್ರ ಮತಗಳು ಬಂದ ಕಾರಣ ವಿಶ್ವದ 'ಸುರಸುಂದರಿ' ಪಟ್ಟ ಒಲಿಯಲಿಲ್ಲ. ಆಯ್ಕೆ ಪಟ್ಟಿಯಲ್ಲಿ ಕಾರ್ಲಾ ಬ್ರೂನಿ, ಕೇಟ್ ಮಾಸ್, ಗಿನೆತ್ ಪಾಲ್ಟ್ರೊ ಮುಂತಾದವರು ಇದ್ದರು. ಪಿಂಟೊ ಇವರೆಲ್ಲರಿಗಿಂತ ಮುಂಚೂಣಿಯಲ್ಲಿದ್ದರು.
2009: ನಕ್ಸಲೀಯರು ಇದೇ ಮೊದಲ ಬಾರಿಗೆ ದಾಳಿಯಲ್ಲಿ ರಾಕೆಟ್ ಲಾಂಚರುಗಳನ್ನು ಬಳಸಿ ಭದ್ರತಾ ಸಂಸ್ಥೆಗಳನ್ನು ದಂಗು ಬಡಿಸಿದರು. ಬಿಹಾರದ ರೋಹ್ತಕ್ ಜಿಲ್ಲೆಯ ಬಿಎಸ್‌ಎಫ್ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ರಷ್ಯಾ, ಅಮೆರಿಕ ಹಾಗೂ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಪತ್ತೆಯಾಯಿತು. ನಕ್ಸಲರು ದ್ವಿತೀಯ ಜಾಗತಿಕ ಯುದ್ಧ ಕಾಲದ 303 ರೈಫಲ್‌ಗಳಿಂದ ದಾಳಿ ಆರಂಭಿಸಿ, ಸಂಪೂರ್ಣ ಅತ್ಯಾಧುನಿಕ ಮಟ್ಟದ ರೈಫಲ್‌ಗಳೊಂದಿಗೆ ದಾಳಿ ನಡೆಸುವ ಹಂತವನ್ನು ತಲುಪಿದ್ದು ಬೆಳಕಿಗೆ ಬಂತು. ಇದರಿಂದ ತಾವು ವಿಸ್ತೃತ ವ್ಯಾಪ್ತಿಯ ಶಸ್ತ್ರಾಸ್ತ್ರ ಸಾಮರ್ಥ್ಯ ಹೊಂದಿರುವುದನ್ನು ನಕ್ಸಲೀಯರು ಸಾಬೀತುಪಡಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದವು.
2009: ಮೊದಲ ಹಂತದ ಲೋಕಸಭಾ ಚುನಾವಣೆಗೂ ಮುನ್ನಾದಿನ ಜಾರ್ಖಂಡ್ ಮತ್ತು ಬಿಹಾರದಲ್ಲಿ ನಕ್ಸಲರು ಹಿಂಸಾಚಾರ ಆರಂಭಿಸಿದರು. ಬಿಎಸ್‌ಎಫ್ ಶಿಬಿರಗಳು ಮತ್ತು ಯೋಧರನ್ನು ಸಾಗಿಸುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಐವರು ಮಾವೋವಾದಿಗಳು ಸೇರಿ ಏಳು ಮಂದಿ ಸಾವನ್ನಪ್ಪಿದರು.
2009: ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸುಧಾರಿತ ಮಾದರಿ 'ಪೃಥ್ವಿ-2' ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒರಿಸ್ಸಾದ (ಪ್ರಸ್ತುತ ಒಡಿಶಾ) ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಯಿತು. 350 ಕಿ.ಮೀ. ವ್ಯಾಪ್ತಿಯುಳ್ಳ ಸಂಪೂರ್ಣ ಸ್ವದೇಶಿ ನಿರ್ಮಿತವಾದ, ನೆಲದಿಂದ ನೆಲಕ್ಕೆ ಚಿಮ್ಮುವ ಈ ಕ್ಷಿಪಣಿಯನ್ನು, ಬಾಲಸೋರ್ ಕರಾವಳಿ ತೀರದಿಂದ 15 ಕಿ.ಮೀ. ದೂರದಲ್ಲಿರುವ ಚಂಡೀಪುರ ಪರೀಕ್ಷಾ ಕೇಂದ್ರದಿಂದ ಬೆಳಿಗ್ಗೆ 10.20ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿದವು.
2009: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕರೀಂಲಾಲಾ ತೆಲಗಿ, ಆತನಿಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದ ನಿವೃತ್ತ ಎಸಿಪಿ ಟಿ.ಜಿ.ಸಂಗ್ರಾಮ್‌ಸಿಂಗ್ ಸೇರಿದಂತೆ ಒಂಬತ್ತು ಮಂದಿ ತಪ್ಪಿತಸ್ಥರು ಎಂದು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿತು. 35ನೇ ಹೆಚ್ಚುವರಿ ವಿಶೇಷ ನಗರ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಅವರು ಈ ತೀರ್ಪು ನೀಡಿದರು. ಇದೇ ಪ್ರಕರಣದ ಇತರ ಆರೋಪಿಗಳಾದ ಮಾಜಿ ಸಚಿವ ರೋಷನ್ ಬೇಗ್ ಅವರ ಸಹೋದರ ಡಾ.ರೆಹನ್ ಬೇಗ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ವಜೀರ್ ಅಹಮ್ಮದ್ ಖಾನ್ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ಅವರನ್ನು ಖುಲಾಸೆ ಮಾಡಲಾಯಿತು. ಆದೇಶ ಹೊರ ಬೀಳುತ್ತಿದ್ದಂತೆಯೇ ಸಂಗ್ರಾಮ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದರು. 1997ರ ಏಪ್ರಿಲ್ 10ರಂದು ಸಂಗ್ರಾಮ್ ಸಿಂಗ್ ಅವರು ನಗರದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೋಟೆಲ್ ಶಾಲಿಮಾರ್ ಮೇಲೆ ದಾಳಿ ನಡೆಸಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಆದರೆ ಬಂಧಿತರಾಗಿದ್ದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಕರೀಂ ಲಾಲಾ ತೆಲಗಿಯ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿರುವುದು ಬೆಳಕಿಗೆ ಬಂತು. ನಂತರ ವಿಚಾರಣೆ ನಡೆಸಿದಾಗ, ಸಂಗ್ರಾಮ್ ಹಾಗೂ ಇತರ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ತೆಲಗಿ ಹೆಸರನ್ನು ಕೈಬಿಟ್ಟಿರುವುದು ತಿಳಿಯಿತು. ಮಾತ್ರವಲ್ಲದೇ, ಶಾಲಿಮಾರ್ ಹೋಟೆಲ್ ಚಿಕ್ಕಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ತೆಲಗಿಯನ್ನು ರಕ್ಷಿಸುವ ಉದ್ದೇಶದಿಂದ ತಮ್ಮ ವ್ಯಾಪ್ತಿಯನ್ನು ಮೀರಿ ಸಂಗ್ರಾಮ್ ಸಿಂಗ್ ಅವರು ಹೋಟೆಲ್ ಮೇಲೆ ದಾಳಿ ನಡೆಸಿದ್ದು ಕೂಡ ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಸಂಗ್ರಾಮ್ ಸೇರಿದಂತೆ ಇತರರ ಮೇಲೆ ಸಿಬಿಐನಲ್ಲಿ ಮೊಕ್ದದಮೆ ದಾಖಲಾಗಿತ್ತು. ಕೋರ್ಟ್ ಆದೇಶದ ಮೇರೆಗೆ ತಪ್ಪಿತಸ್ಥರು ಎಂದು ಘೋಷಿಸಲಾದ ಇತರ ಆರೋಪಿಗಳು:, ಸೈಯದ್ ಜುಮೇದಾರ್ ಬದ್ರುದ್ದೀನ್, ಆನಂದ, ಇಲಿಯಾಜ್ ಅಹಮ್ಮದ್, ಸೋಹೆಲ್ ಖಾನ್, ಇಬ್ರಾಹಿಂ, ಹುಡ್ಲಿ ಸಾಬ್ ತೆಲಗಿ, ಸೈಯದ್‌ಮೊಹ್ದಿದೀನ್ ಹಾಗೂ ವಜೀರ್ ಅಹಮ್ಮದ್ ಖಾನ್.
2009: ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ 54ನೆಯ ಪೀಠಾಧಿಪತಿಗಳಾಗಿ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರು ಸರ್ವಜ್ಞ ಪೀಠಾರೋಹಣ ಮಾಡಿದರು. ಹಿಂದಿನ ಪೀಠಾಧಿಪತಿ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆಪ್ತ ಕಾರ್ಯದರ್ಶಿಗಳಾಗಿದ್ದ ರಾಜಾ ಎಸ್ ರಾಜಗೋಪಾಲಾಚಾರ್ಯ ಅವರನ್ನು ತಮ್ಮ ಕಾರ್ಯದರ್ಶಿ ಹಾಗೂ ಮಠದ ಸರ್ವಾಧಿಕಾರಿಯನ್ನಾಗಿ ನೂತನ ಪೀಠಾಧಿಪತಿಗಳು ನೇಮಕ ಮಾಡಿದರು.
2009: ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆಯು ವ್ಯಂಗ್ಯಚಿತ್ರಕಾರರಿಗೆ ನೀಡುವ 2008ನೇ ಸಾಲಿನ ಪ್ರತಿಷ್ಠಿತ 'ಮಾಯಾ ಕಾಮತ್ ಸ್ಮಾರಕ ಪ್ರಶಸ್ತಿ' ಹಾಗೂ 'ಜೀವಮಾನ ಶ್ರೇಷ್ಠ ಸಾಧನೆಯ ಪ್ರಶಸ್ತಿ' ವಿಜೇತರ ಪಟ್ಟಿಯನ್ನು ಈದಿನ ಪ್ರಕಟಿಸಿತು. 'ಮಾಯಾ ಕಾಮತ್ ಸ್ಮಾರಕ ಪ್ರಶಸ್ತಿ'ಯ ಪ್ರಥಮ ಬಹುಮಾನ 'ಔಟ್‌ಲುಕ್' ಪತ್ರಿಕೆಯ ವ್ಯಂಗ್ಯ ಚಿತ್ರಕಾರ ಸಂದೀಪ್ ಅಧ್ವರ್ಯು ಅವರಿಗೆ ಲಭಿಸಿತು. ಶಿವಮೊಗ್ಗದ 'ನಾವಿಕ' ಪತ್ರಿಕೆಯ ರಾಮಧ್ಯಾನಿ ಅವರಿಗೆ ದ್ವಿತೀಯ ಬಹುಮಾನ ಹಾಗೂ ತೆಲುಗು ದಿನ ಪತ್ರಿಕೆ 'ಸಾಕ್ಷಿ'ಯ ವ್ಯಂಗ್ಯ ಚಿತ್ರಕಾರ ಶಂಕರ್ ಅವರಿಗೆ ತೃತೀಯ ಬಹುಮಾನ ದೊರಕಿತು. ಉದಯೋನ್ಮುಖ ವ್ಯಂಗ್ಯ ಚಿತ್ರಕಾರ ಪ್ರಶಸ್ತಿ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಮುಜೀದ್ ಪಟ್ಲಾ ಅವರಿಗೆ ಲಭಿಸಿತು. ತೀರ್ಪುಗಾರರ ವಿಶೇಷ ಪ್ರಶಸ್ತಿ ಪಾಕಿಸ್ಥಾನದ 'ಡೈಲಿ ಟೈಮ್ಸ್' ಪತ್ರಿಕೆಯ ಮಹಮದ್ ಜಹೂರ್ ಅವರಿಗೆ ಲಭಿಸಿತು. ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಕರ್ನಾಟಕದ ಪ್ರಭಾಕರ ರಾವ್‌ಬೈಲ್, ಕೇರಳದ ಇ.ಪಿ.ಉನ್ನಿ, ಉತ್ತರ ಪ್ರದೇಶದ ಕಾಕ್, ಮಹಾರಾಷ್ಟ್ರದ ವಸಂತ ಸರ್ವದೆ, ಆಂಧ್ರಪ್ರದೇಶದ ಟಿ. ವೆಂಕಟರಾವ್, ಕೇರಳದ ಥಾಮಸ್, ಚೆನ್ನೈನ ಮದನ್ ಆಯ್ಕೆಯಾದರು.
2008: ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರ (ಸಿಂಗಾಪುರ ಫ್ಲೈಯರ್) ಸಿಂಗಾಪುರದಲ್ಲಿ ಚಾಲನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಸಿಡಿಸಿದ ಬಾಣ ಬಿರುಸುಗಳು ದೈತ್ಯ ಚಕ್ರಕ್ಕೆ ಸಿಂಗಾರ ಮುಡಿಸಿದಂತೆ ಕಂಡುಬಂತು.
2008: ವಾರಣಾಸಿಯ ಪ್ರಖ್ಯಾತ 18ನೇ ಶತಮಾನದ ಕಾಶಿ ವಿಶ್ವನಾಥ ದೇವಸ್ಥಾನದ ಜ್ಯೋತಿರ್ಲಿಂಗದ ಮೇಲೆ ಹೊಂಬಣ್ಣದ ಸೂರ್ಯ ಕಿರಣಗಳು ಈದಿನ ಸ್ಪರ್ಶಿಸಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಪುಳಕಿತಗೊಂಡರು. ಜ್ಯೋತಿರ್ಲಿಂಗದ ಮೇಲೆ ಸೂರ್ಯ ಕಿರಣ ಬೀಳುವುದನ್ನು ತಡೆಯುತ್ತಿದ್ದ 15 ಅಡಿ ಎತ್ತರದ ಗೋಡೆ ಕೆಡವಿದ ನಂತರ ಮೊದಲ ಬಾರಿಗೆ ಈದಿನ ಸೂರ್ಯರಶ್ಮಿ ಲಿಂಗವನ್ನು ಸ್ಪರ್ಶಿಸಿತು. ಗೋಡೆಯನ್ನು ಕೆಡವಿದ್ದುದರಿಂದ ದೇವಸ್ಥಾನದ ಮೂಲ 2500 ಚದರಡಿ ಜಾಗಕ್ಕೆ ಹೊಸದಾಗಿ 6000 ಚದರಡಿಗಳು ಸೇರ್ಪಡೆಯಾಗಿ ವಿಶಾಲಜಾಗ ಲಭ್ಯವಾಯಿತು. ಹೊಸ ವಿಶಾಲವಾದ ಆವರಣದಲ್ಲಿ ತಾರಕೇಶ್ವರ ಮತ್ತು ರಾಣಿ ಭುವನೇಶ್ವರಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ರಾಣಿ ಅಹಲ್ಯಾಬಾಯಿ 1780ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದರು. ನಂತರ ಔರಂಗಜೇಬನ ಆಳ್ವಿಕೆಯಲ್ಲಿ ದೇವಸ್ಥಾನಕ್ಕೆ ಹಾನಿ ಉಂಟು ಮಾಡಲಾಗಿತ್ತು.
2008: ನೇಪಾಳದಲ್ಲಿ ಏಪ್ರಿಲ್ 10ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ) ಸರಳ ಬಹುಮತ ಗಳಿಸುವತ್ತ ದಾಪುಗಾಲು ಇಟ್ಟಿತು. 116 ಸ್ಥಾನ ಗಳಿಸಿದ ಅದು, ಸರಳ ಬಹುಮತದಿಂದ ಕೇವಲ 5 ಸ್ಥಾನಗಳಷ್ಟು ಹಿಂದೆ ಉಳಿಯಿತು. 601 ಸ್ಥಾನಗಳ ಪೈಕಿ 240 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ 214 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ದಾಖಲಾಯಿತು. ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ನೇತೃತ್ವದ ನೇಪಾಳಿ ಕಾಂಗ್ರೆಸ್ 33, ಸಿಪಿಎನ್-ಯುಎಂಎಲ್ 30, ಮಧೇಸಿ ಪೀಪಲ್ಸ್ ರೈಟ್ಸ್ ಫೋರಂ 21, ತೆರೈ ಮಧೆಸ್ ಡೆಮಾಕ್ರಟಿಕ್ ಪಾರ್ಟಿ 6, ನೇಪಾಳ್ ವರ್ಕರ್ಸ್ ಅಂಡ್ ಪೀಸಂಟ್ಸ್ ಪಾರ್ಟಿ ಮತ್ತು ಸದ್ಭಾವನಾ ಪಾರ್ಟಿ ತಲಾ 2, ಜನಮೋರ್ಚಾ ನೇಪಾಳ್ ಮತ್ತು ಪಕ್ಷೇತರರು ತಲಾ 1 ಸ್ಥಾನ ಗಳಿಸಿದರು.
2008: ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ಹಂತದಲ್ಲಿದ್ದರೂ ಮಾವೋವಾದಿಗಳು ಮತ್ತೆ ತಮ್ಮ ಹಿಂಸಾ ಪ್ರವೃತ್ತಿ ಮುಂದುವರಿಸಿದ್ದರಿಂದ, ದೇಶದ ಹಣಕಾಸು ಸಚಿವ ಡಾ. ರಾಮ್ ಶರಣ್ ಮಹತ್ ಮತ್ತು ಇತರ ಏಳು ಮಂದಿ ಗಾಯಗೊಂಡರು. ನೇಪಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮಹತ್ ಅವರು ನುವತ್-2 ಕ್ಷೇತ್ರದಲ್ಲಿ ಜಯ ಗಳಿಸಿದ್ದರು. ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿ ಹಿಂದಿರುಗುತ್ತಿದ್ದಾಗ ದುಢ್ದೇವಿ ಎಂಬಲ್ಲಿ ಮಾವೋವಾದಿಗಳ ಗುಂಪು ಅವರ ಮೇಲೆ ಎರಗಿತು.
2008: ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ನ್ಯೂಯಾರ್ಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ವಿರುದ್ದ ಹಲವು ಆರೋಪಗಳನ್ನು ಮಾಡಿ ನೀಡಿದ ಜಾಹೀರಾತಿಗೆ ಸಂಬಂಧಿಸಿದಂತೆ `ಗಾಂಧಿ ಸಂಸ್ಕೃತಿ ಸಂರಕ್ಷಣಾ ಸಂಸ್ಥೆ'ಯ ಮೂರು ಸದಸ್ಯರಿಗೆ ಮಾನನಷ್ಟ ಮೊಕ್ದದಮೆಯ ನೋಟಿಸ್ ಜಾರಿಗೊಳಿಸಲಾಯಿತು. ಕಾನೂನು ಶುಲ್ಕ ಸೇರಿದಂತೆ 10 ಕೋಟಿ ಡಾಲರ್ ಹಣವನ್ನು ಪರಿಹಾರವಾಗಿ ನೀಡುವಂತೆ ಒತ್ತಾಯಿಸಿ ನ್ಯೂಯಾರ್ಕ್ ಕೋರ್ಟಿನಲ್ಲಿ ಇಂಡಿಯನ್ ನ್ಯಾಷನಲ್ ಓವರ್ ಸೀಸ್ ಕಾಂಗ್ರೆಸ್ ದಾವೆ ಹೂಡಿತು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಒಂದು ಪುಟವಿಡೀ ಸೋನಿಯಾ ಗಾಂಧಿ ಅವರನ್ನು ಟೀಕಿಸುವ ಜಾಹಿರಾತು ಪ್ರಕಟವಾಗಿತ್ತು.
2008: ರಿಯೋ ಡಿ ಜನೈರೊದ ಪರ್ವತ ಶಿಖರದ ಮೇಲಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ಪ್ರಖ್ಯಾತ ಕ್ರಿಸ್ತನ ಪ್ರತಿಮೆಯ ದರ್ಶನಕ್ಕೆ ತೆರಳಿದ್ದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹವಾಮಾನ ವೈಪರೀತ್ಯದಿಂದಾಗಿ ನಿರಾಶರಾಗಿ ವಾಪಸಾಗಬೇಕಾಯಿತು. ಪ್ರತಿಭಾ ಪಾಟೀಲರ ಬೆಂಗಾವಲು ಪಡೆ ಟಿಜುಕಾ ಅರಣ್ಯದ ರಾಷ್ಟ್ರೀಯ ಉದ್ಯಾನದಲ್ಲಿರುವ 2,296 ಅಡಿ ಎತ್ತರದ ಕಾರ್ಕವೇಡೋ ಪರ್ವತದಲ್ಲಿರುವ 130 ಅಡಿ ಎತ್ತರದ ಕ್ರೈಸ್ತ ಪ್ರತಿಮೆ ವೀಕ್ಷಿಸಲು ದುರ್ಗಮ ಹಾದಿಯಲ್ಲಿ ತೆರಳಿತ್ತು. ಭಾರಿ ಮಳೆ ಸುರಿದರೂ ರಾಷ್ಟ್ರಪತಿ ಅದನ್ನು ಲೆಕ್ಕಿಸದೇ ಮುಂದುವರಿದರು. ಆದರೆ ಪ್ರತಿಮೆಗೆ ದಟ್ಟ ಮಂಜು ಆವರಿಸಿದ್ದುದರಿಂದ ಪ್ರತಿಮೆ ನೋಡುವ ಅವರ ಆಸೆ ಈಡೇರಲಿಲ್ಲ.
2008: ದೇಶದ 2ನೆ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೊಸಿಸ್ ಟೆಕ್ನಾಲಜೀಸ್, ಮಾರ್ಚ್ ತಿಂಗಳ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಒಟ್ಟು ರೂ 4659 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 21ರಷ್ಟು ಹೆಚ್ಚು.
2008: ದೇಶದ ಭದ್ರತಾ ಪಡೆಗೆ ಅಗತ್ಯ ಎಲೆಕ್ಟ್ರಾನಿಕ್ ಪರಿಕರಗಳ ತಯಾರಿಕೆಯಲ್ಲಿ ನಿರತವಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್- ಬೆಲ್), ಮಾರ್ಚ್ 31ಕ್ಕೆ ಅಂತ್ಯಗೊಂಡ 2007-08ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ 1100 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿತು.
2008: ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡುವಾಗ ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕೋಟಾದ ಜೊತೆಗೆ ಪರಿಗಣಿಸಲಾಗುವುದೇ ವಿನಾ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟಿನ ಆದೇಶವನ್ನು ಹೈಕೋರ್ಟ್ ಪುನರುಚ್ಛರಿಸಿತು. 2005-06ನೇ ಸಾಲಿನಲ್ಲಿ ಎಂಬಿಬಿಎಸ್ ಕೋರ್ಸಿನ ವಿವಾದವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕುರಿತು ಸರ್ಕಾರಿ ವಕೀಲರು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ನೇತೃತ್ವದ ವಿಭಾಗೀಯ ಪೀಠದ ಗಮನ ಸೆಳೆದಾಗ ಪೀಠವು ಅದನ್ನು ಪುನರುಚ್ಛರಿಸಿತು. ಈ ಕೋರ್ಸಿಗೆ ದಾಖಲು ಪಡೆದಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ದೂರಿ ಗುಲ್ಬರ್ಗದ ಎಸ್. ಶ್ವೇತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿತು.
2008: ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗಾಗಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ನೀಡುವ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಗಾಗಿ ಈ ಬಾರಿ ಹತ್ತು ಜನರನ್ನು ಆಯ್ಕೆ ಮಾಡಲಾಯಿತು. ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ : ಡಾ.ಬಾಳಾಸಾಹೇಬ ಲೋಕಾಪುರ (ಬಾಗಲಕೋಟೆ), ಪ್ರೊ.ನಾ.ಉಜಿರೆ (ಧರ್ಮಸ್ಥಳ), ಡಾ. ಅ.ಸುಂದರ (ಮೈಸೂರು), ಡಾ. ಕಿರಣ್ ಕ್ರಾಂತ್ ಚೌಧರಿ (ತಿರುಪತಿ), ಡಾ. ಸತ್ಯಪ್ರಕಾಶ್ ಚಂದ್ ಶಾಸ್ತ್ರೀ (ನವದೆಹಲಿ), ಪ್ರೊ.ನಲಿನ್ ಕುಮಾರ್ ಶಾಸ್ತ್ರೀ (ಬೋಧಗಯಾ), ಡಾ. ರಮೇಶ್ ಚಂದ್ ಜೈನ್ (ಉತ್ತರ ಪ್ರದೇಶದ ಬಿಜನೂರು), ಡಾ. ಪ್ರೆಂಸುಮನ್ ಜೈನ್ (ಶ್ರವಣಬೆಳಗೊಳ) ಅವರು ಆಯ್ಕೆಯಾದರು. ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಸಂಸ್ಕೃತಿ ಪ್ರಶಸ್ತಿ: ಜೆ.ಟಿ.ಜಿಂಕಲಪ್ಪ(ಹಾಸನ) ಹಾಗೂ ಮಹಾಕವಿ ರತ್ನಾಕರ ಸಾಹಿತ್ಯ ಸ್ಮೃತಿ ಸೇವೆಗಾಗಿರುವ ವ್ಯಾಖ್ಯಾನ ಕೇಸರಿ ಎ.ಆರ್.ನಾಗರಾಜ್ ಪ್ರಶಸ್ತಿಯು ನವರತ್ನ ಇಂದುಕುಮಾರ್ (ಚಿಕ್ಕಮಗಳೂರು) ಅವರಿಗೆ ಸಂದಿತು.
2008: ಅಣುಬಾಂಬ್ ತಯಾರಿಸುವಲ್ಲಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರಿಗೆ ನೆರವು ನೀಡಿದ್ದ ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಜಾನ್ ವೀಲರ್ (96) ಅವರು ಹೈಟ್ಸ್ ಟೌನಿನ ತಮ್ಮ ಸ್ವಗೃಹದಲ್ಲಿ ಏಪ್ರಿಲ್ 13ರಂದು ನಿಧನರಾದರು.
2007: ಬಾಲನಟ ವಿನಾಯಕ ಜೋಶಿ ಅವರ ತಂದೆ ನಿರ್ಮಾಪಕ ವಾಸುದೇವ ಜೋಶಿ (52) ಅವರು ಮೂತ್ರಪಿಂಡ ವೈಫಲ್ಯದ ಕಾರಣ ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿಯಾಗಿದ್ದ ಅವರು ತಮ್ಮ ಏಕೈಕ ಪುತ್ರ ವಿನಾಯಕ ಜೋಶಿಯನ್ನು ನಾಯಕ ನಟನನ್ನಾಗಿ ಮಾಡಲು `ನನ್ನ ಕನಸಿನ ಹೂವೆ' ಚಿತ್ರ ನಿರ್ಮಿಸಿದ್ದರು. ಇಂಡಿಯಾ ಫೌಂಡೇಷನ್ನಿನ ಟ್ರಕ್ಕರ್ಸ್ ಕಾರ್ಪೊರೇಷನ್ ಮತ್ತು ಎಚ್ ಐ ವಿ - ಏಡ್ಸ್ ಸಲಹಾ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮ ಸಂಘಟಿಸಿದ್ದವು.
2007: ಬಹು ನಿರೀಕ್ಷಿತ ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.
2007: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಒಂದೇ ಕಾರ್ನಿಯಾ ಬಳಸಿ ಮೂವರಿಗೆ ದೃಷ್ಟಿ ನೀಡುವ ಮೂಲಕ ವಿಶ್ವದ ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು. ಏಮ್ಸ್ ನ ಜೆ.ಎಸ್. ತಿತಿಯಾಲ್ ಮತ್ತು ನಾಸಿಕದ ಡಾ. ರಸಿಕ್ ವಾಜಪೇಯಿ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮಾಡಿತು. ಹೃದಯಾಘಾತದಿಂದ ಮೃತನಾದ 44 ವರ್ಷದ ವ್ಯಕ್ತಿಯ ಕಣ್ಣಿನ ಕಾರ್ನಿಯಾವನ್ನು (ಕಣ್ಣು ಗುಡ್ಡೆಯ ಪಾರದರ್ಶಕ ಭಾಗ) ಮೂರು ಭಾಗಗಳಾಗಿ ಕತ್ತರಿಸಿ ಮೂವರು ರೋಗಿಗಳಿಗೆ ಅಳವಡಿಸಲಾಯಿತು. ಮೂರು ತಿಂಗಳ ಸತತ ಚಿಕಿತ್ಸೆಯ ಬಳಿಕ ಮೂವರಿಗೂ ದೃಷ್ಟಿ ಬಂತು.
2007: ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ನವದಹಲಿಯಲ್ಲಿ ನಡೆದ ಎಚ್ಐವಿ - ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬಹಿರಂಗವಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರನ್ನು ಬರಸೆಳೆದು ಬಿಗಿದಪ್ಪಿ ಗಲ್ಲಕ್ಕೆ ಚುಂಬಿಸಿದರು. ಈ ಘಟನೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿ ಗೇರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಕೂಡಾ ದಾಖಲಾಯಿತು.
2007: ಖ್ಯಾತ ಸಂಗೀತಗಾರ ಹಾಗೂ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಧ್ಯಪ್ರದೇಶದ ಲೋಕೋಪಯೋಗಿ ಸಚಿವ ಕೈಲಾಶ್, ಸಂಸ್ಕೃತಿ ಸಚಿವ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಸಂಸದೆ ಸುಮಿತ್ರಾ ಮಹಾಜನ್ ಅವರು ಇಂದೋರಿನಲ್ಲಿ ಹೃದಯನಾಥ್ ಮಂಗೇಶ್ಕರ್ ಅವರನ್ನು ಒಂದು ಲಕ್ಷ ರೂ. ನಗದು, ಪ್ರಶಸ್ತಿ ನೀಡಿ ಗೌರವಿಸಿದರು. 1937 ಅಕ್ಟೋಬರ್ 26ರಂದು ಜನಿಸಿದ ಹೃದಯನಾಥ್ ಪ್ರಸಿದ್ಧ ಸಂಗೀತಗಾರ ಹಾಗೂ ನಾಟಕಕಾರರಾದ ದೀನನಾಥ್ ಮಂಗೇಶ್ಕರ್ ಅವರ ಪುತ್ರ. ಪ್ರಸಿದ್ಧ ಹಿನ್ನೆಲೆ ಗಾಯಕಿಯರಾದ ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಹೃದಯನಾಥ್ ಅವರ ಸಹೋದರಿಯರು. ಲತಾ ಸಹೋದರಿ ಆಶಾ ಭೋಂಸ್ಲೆ ಸೇರಿದಂತೆ ನೌಷದ್, ಕಿಶೋರ್ ಕುಮಾರ್, ಅನಿಲ್ ವಿಶ್ವಾಸ್, ಮನ್ನಾ ಡೇ, ಆರ್.ಡಿ. ಬರ್ಮನ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಕಲ್ಯಾಣ್ ಜೀ ಆನಂದಜೀ, ಜಗಜಿತ್ ಸಿಂಗ್, ಭೂಪೇನ್ ಹಜಾರಿಕಾ ಅವರು ಇದುವರೆಗೂ ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.
2007: ಕಾವೇರಿ ಜಲ ವಿವಾದ ನ್ಯಾಯ ಮಂಡಳಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮತ್ತು ಜಟಿಲ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಹೋಗುವ ಆಯ್ಕೆಯನ್ನು ಮುಕ್ತವಾಗಿ ಇರಿಸಲು ತಮಿಳುನಾಡು ಸಕರ್ಾರ ಚೆನ್ನೈಯಲ್ಲಿ ಕರೆದಿದ್ದ ಸರ್ವ ಪಕ್ಷಗಳ ಸಭೆ ನಿರ್ಧರಿಸಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮೊದಲ ಹೆಜ್ಜೆಯಾಗಿ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಿತು.
2006: ಇಂದೋರಿನಲ್ಲಿ ನಡೆದ ಏಳನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 7 ವಿಕೆಟ್ಟುಗಳ ಅಂತರದ ಭರ್ಜರಿ ಜಯ ಸಾಧಿಸಿತು.
2006: ತೀವ್ರ ವಿವಾದಕ್ಕೆ ಕಾರಣವಾಗಿರುವ ಸರ್ದಾರ ಸರೋವರ ಅಣೆಕಟ್ಟೆ ಎತ್ತರ ಹೆಚ್ಚಿಸುವ ನಿರ್ಧಾರದ ಹೊಣೆಯನ್ನು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆೆ ವರ್ಗಾಯಿಸಿತು. ಅಣೆಕಟ್ಟೆ ಎತ್ತರ ಹೆಚ್ಚಳ ಪ್ರಸ್ತಾವ ಕೈಬಿಟ್ಟ ಕೇಂದ್ರದ ನಿರ್ಧಾರ ವಿರೋಧಿಸಿ 51 ಗಂಟೆಗಳ ನಿರಶನ ಆರಂಭಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದರು.
2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಶಾಸಕರ ಬಣಕ್ಕೆ ವಿದಿಸಿದ್ದ ಬಹಿಷ್ಕಾರ ಶಿಕ್ಷೆಯನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಹಿಂತೆಗೆದುಕೊಂಡು, ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರ ಸಭೆ ನಡೆಸಿದರು.
1986: ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ಸ್ ಅತಿ ವೇಗದ ಟೆಸ್ಟ್ ಶತಕ ಬಾರಿಸಿದರು. 56 ಬಾಲ್ ಗಳಿಗೆ ಅವರು ಈ ಶತಕ ಸಿಡಿಸಿದರು.
1980: ತತ್ವಜ್ಞಾನಿ ಜೀನ್-ಪೌಲ್-ಸಾರ್ತ್ರೆ ತನ್ನ 74ನೇ ವಯಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತನಾದ.
1975: ಕಲಾವಿದ ಬಿ.ಜಿ. ವಿನುತ ಜನನ.
1963: ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ ಹುಟ್ಟಿದ ದಿನ.
1962: ಕಲಾವಿದ ಸದಾಶಿವ ಪಾಟೀಲ ಜನನ.
1955: ಷಿಕಾಗೊವಿನ ಡೆ ಪ್ಲೈನ್ ಸನ್ನಲ್ಲಿ ರೇ ಕ್ರಾಕ್ `ಮೆಕ್ ಡೊನಾಲ್ಡ್' ಮಾಂಸದ ಭಕ್ಷ್ಯದ ಮಳಿಗೆ ತೆರೆದ. ವರ್ತುಲಾಕಾರದಲ್ಲಿ ಚಪ್ಪಟೆಯಾಗಿ ಕತ್ತರಿಸಿ ನಂತರ ಕರಿದು ಬ್ರೆಡ್ ಜೊತೆಗೆ ನೀಡಲಾಗುವ ಗೋಮಾಂಸದ ಭಕ್ಷ್ಯದ ಈ ಉದ್ಯಮ ಮುಂದೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯಮವಾಗಿ ಬೆಳೆಯಿತು.
1955: ಕಲಾವಿದ ಮ. ನರಸಿಂಹ ಮೂರ್ತಿ ಜನನ.
1946: ಕಲಾವಿದ ಜೆ. ಹುಸೇನ್ ಸಾಬ್ ಜನನ.
1922: ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ ಮುಖಿಯಾಗಿ ಹೃದಯಾಂತರಾಳದಿಂದ ಹಾಡುವ ಗಾಯಕ ಪ್ರಭಾಕರ ಅವರು ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣತರಾದ ಎಂ. ರಂಗರಾವ್- ಶಿಕ್ಷಕಿ ಕಾವೇರಿಬಾಯಿ ದಂಪತಿಯ ಮಗನಾಗಿ ಭಟ್ಕಳದಲ್ಲಿ ಜನಿಸಿದರು. ಇವರ ತಾಯಿಯದ್ದೂ ಕೀರ್ತನಕಾರ, ಸಂಗೀತಕಾರರ ಮನೆತನ.
1912: ಬ್ರಿಟಿಷ್ ಲಕ್ಸುರಿ ನೌಖೆ ಟೈಟಾನಿಕ್ ನ್ಯೂಫೌಂಡ್ ಲ್ಯಾಂಡ್ ಸಮೀಪ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನೌಕೆಯಲ್ಲಿದ್ದ ಸುಮಾರು 1500 ಮಂದಿ ಅಸುನೀಗಿದರು. ಆದರೆ ಈ ದುರಂತದಲ್ಲಿ ಸತ್ತವರ ಸಂಖ್ಯೆ ಬಗ್ಗೆ ಎಂದೂ ಒಮ್ಮತ ಮೂಡಲೇ ಇಲ್ಲ.
1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಬೆಳಿಗ್ಗೆ 7.30ಕ್ಕೆ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರಿಗೆ ಗುಂಡು ಹೊಡೆದಿದ್ದ. ಈ ವೇಳೆಯಲ್ಲಿ ಲಿಂಕನ್ ಥಿಯೇಟರಿನಲ್ಲಿ `ಅವರ್ ಅಮೆರಿಕನ್ ಕಸಿನ್' ಎಂಬ ಹಾಸ್ಯಚಿತ್ರ ನೋಡುವುದರಲ್ಲಿ ತಲ್ಲೀನರಾಗಿದ್ದರು..
1469: ಸಿಕ್ಖರ ಪ್ರಥಮ ಗುರುವಾಗಿದ್ದ ಗುರುನಾನಕ್ ಅವರ ಜನ್ಮದಿನ.
1452: ಲಿಯೋನಾರ್ಡೊ ಡ ವಿಂಚಿ (1452-1519) ಹುಟ್ಟಿದ ದಿನ. ಈತ ಇಟಲಿಯ ಖ್ಯಾತ ಕಲಾವಿದ, ಶಿಲ್ಪಿ, ಗಣಿತತಜ್ಞ, ಸಂಶೋಧಕ.
No comments:
Post a Comment