Saturday, May 8, 2010

ಸಾಹಸ ಸಿಂಹನ 'ಸ್ನೇಹ ಸಂಪತ್ತು..'!

ಸಾಹಸ ಸಿಂಹನ 'ಸ್ನೇಹ ಸಂಪತ್ತು..'!



ಇಷ್ಟೆಲ್ಲ ಪೀಠಿಕೆ ಯಾರ ಬಗೆಗೆ ಅಂದರೆ 'ಸಂಪತ್ ಕುಮಾರ್' ಬಗ್ಗೆ. ಹಾಗಂದು ಬಿಟ್ಟರೆ ಯಾರೋ ಏನೋ ಅಂದುಕೊಳ್ಳುವ ಮಂದಿ ಬಹಳ. ಅಲ್ಲಲ್ಲ, ಈ ಪೀಠಿಕೆ 'ಸಾಹಸ ಸಿಂಹ' ಬಗ್ಗೆ ಅಂತ ಹೇಳಿದರೆ ಹಲವರ ಕಿವಿ ನೆಟ್ಟಗಾಗುತ್ತದೆ! ಇದು ವಿಷ್ಣು ವರ್ಧನ್ ಬಗ್ಗೆ ಅಂತ ಅರ್ಥವಾಗಿ ಬಿಡುತ್ತದೆ.

ನೆತ್ರಕೆರೆ ಉದಯಶಂಕರ

ಸ್ಫುರದ್ರೂಪಿ. ಎಂತಹವರನ್ನೂ ಆಕರ್ಷಿಸುವ ವ್ಯಕ್ತಿತ್ವ. ಅದಕ್ಕೆ ತಕ್ಕಂತೆಯೇ ಮಹಾ ತುಂಟ. ಜೊತೆಗಿದ್ದವರೊಂದಿಗೆ ಚೇಷ್ಟೆ. ಅಷ್ಟೇ ಸ್ನೇಹಮಯ ಒಡನಾಟ, ಕಲಾವಿದರನ್ನು ಕಂಡರ ಅಪ್ಪಟ ಅಭಿಮಾನ. ಕಷ್ಟದಲ್ಲಿ ಇದ್ದವರನ್ನು ಕಂಡರೆ ಎಡಗೈಗೆ ಗೊತ್ತಾಗದಂತೆ ಬಲಗೈಯಿಂದ ದಾನ ಮಾಡುವ ಕಾಳಜಿ.

ಇಷ್ಟೆಲ್ಲ ಪೀಠಿಕೆ ಯಾರ ಬಗೆಗೆ ಅಂದರೆ 'ಸಂಪತ್ ಕುಮಾರ್' ಬಗ್ಗೆ. ಹಾಗಂದು ಬಿಟ್ಟರೆ ಯಾರೋ ಏನೋ ಅಂದುಕೊಳ್ಳುವ ಮಂದಿ ಬಹಳ. ಅಲ್ಲಲ್ಲ, ಈ ಪೀಠಿಕೆ 'ಸಾಹಸ ಸಿಂಹ' ಬಗ್ಗೆ ಅಂತ ಹೇಳಿದರೆ ಹಲವರ ಕಿವಿ ನೆಟ್ಟಗಾಗುತ್ತದೆ! ಇದು ವಿಷ್ಣು ವರ್ಧನ್ ಬಗ್ಗೆ ಅಂತ ಅರ್ಥವಾಗಿ ಬಿಡುತ್ತದೆ.


ಹೌದು. ಬೆಳ್ಳಿ ಪರದೆಯ ಮೇಲೆ ಮೂಡಿ ಬಂದು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿರುವ ವಿಷ್ಣುವರ್ಧನ್ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕಿನ ಬಗ್ಗೆ?

ವಿಷ್ಣು ಅವರ ವೈಯಕ್ತಿಕ ಬದುಕಿನ ಬಗ್ಗೆ ಬಹುಶಃ ಇದೇ ಮೊತ್ತ ಮೊದಲ ಬಾರಿಗೆ ಕೃತಿಯೊಂದು ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಹೆಸರೇ 'ಸ್ನೇಹ ಸಂಪತ್ತು'.

ಪರಿಸರ ಕಾಳಜಿಯ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸಂಬಂಧಪಟ್ಟಂತೆ ಹಲವಾರು ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ, ಕರ್ನಾಟಕದ ಕುಸ್ತಿ ಪಟುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಒಂದಲ್ಲ ಮೂರು ಪುಸ್ತಕಗಳನ್ನು ರೋಚಕವಾಗಿ ಬರೆದ ಎಂ. ನರಸಿಂಹ ಮೂರ್ತಿ ಈ ಬಾರಿ 'ಸಾಹಸ ಸಿಂಹ'ನ ವೈಯಕ್ತಿಕ ಬದುಕಿಗೆ ಕೈಹಾಕಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಿ ಓದುಗರ ಎದುರು ಮುಂದಿಡುವ ಪ್ರಯತ್ನ ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಅವರ ಬಳಿಕ ಕನ್ನಡದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿ ೨೦೦ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮುಂದೆ 'ವೀರಾಧಿವೀರ', 'ಸಾಹಸ ಸಿಂಹ' 'ಯಜಮಾನ' ಎಂಬಿತ್ಯಾದಿ ಹಲವಾರು 'ರೂಪ' ಧರಿಸಿ ಸ್ಮೃತಿ ಪಟಲದಲ್ಲಿ ಉಳಿದಿರುವ ಸಂಪತ್ ಕುಮಾರ್ ಯಾನೆ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕು ಕೂಡಾ ಸಿನಿಮಾದಷ್ಟೇ ಹೇಗೆ ರೋಚಕವಾಗಿತ್ತು ಎಂಬುದನ್ನು ಚಿತ್ರಿಸುವ ಯತ್ನವನ್ನು 'ಸ್ನೇಹ ಸಂಪತ್ತು' ಮಾಡಿದೆ ಎನ್ನುತ್ತಾರೆ ನರಸಿಂಹ ಮೂರ್ತಿ.


ವಿಷ್ಣು ವರ್ಧನ್ ಅವರ ಕಾಲೇಜು ದಿನಗಳು, ಕಾಲೇಜು ಪರಿಸರ, ಎಲ್ಲರೊಂದಿಗೆ ಬೆರೆಯುವ ಅವರ ವ್ಯಕ್ತಿತ್ವ, ಅವರು ಸಿನಿಮಾ ರಂಗಕ್ಕೆ ಬಂದ ೭೦ರ ದಶಕದಲ್ಲಿ ಕನ್ನಡ ಚಿತ್ರರಂಗದ ಸ್ಥಿತಿಗತಿ, ಆ ಸಂದರ್ಭದಲ್ಲಿ ಬಂದ 'ನಾಗರ ಹಾವು' ಸಿನಿಮಾದ ವಿಶೇಷತೆ, ಇದರಲ್ಲಿನ ವಿಷ್ಣು ನಟನೆ ಇವುಗಳ ಬಗೆಗೆಲ್ಲ ಪುಸ್ತಕ ಕೈಯಾಡಿಸಿದೆ.


ನಟನೆಯ ಹೊರತಾಗಿ ವಿಷ್ಣು ಬದುಕು ಹೇಗಿತ್ತು? ಸ್ನೇಹಿತರ ಜೊತೆಗೆ ಸ್ನೇಹ ಜೀವಿ ಆಗಿದ್ದುದು ಹೇಗೆ?, ಮಾನವೀಯತೆಯ ಜೊತೆಗೇ ತಮ್ಮ ಚೇಷ್ಟೆ, ಆತ್ಮೀಯ ಒಡನಾಟಗಳಿಂದ ಎಲ್ಲರನ್ನೂ ಸೆಳೆಯುತ್ತಿದ್ದುದು ಹೇಗೆ ಎಂಬುದರ ಬಗ್ಗೆ ಒಂದೆಡೆಯಾದರೆ, ಅವರ ವಿಚಾರ ಮಂಥನ, ಅವರ ವಿಚಾರಗಳ ವ್ಯಾಪಕತೆ ಎಷ್ಟಿತ್ತು ಎಂಬ ವಿಷಯಗಳನ್ನು ಇನ್ನೊಂದೆಡೆ ನೈಜ ಅರ್ಥದಲ್ಲಿ ದೃಶ್ಯೀಕರಿಸಲು 'ಕಡ್ಡಿ ಪೈಲ್ವಾನ' ನರಸಿಂಹಮೂರ್ತಿ ಯತ್ನಿಸಿದ್ದಾರೆ.


ಕೃತಿ ಬಿಡುಗಡೆ
: ನ್ಯಾಷನಲ್ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ, ಬಸವನಗುಡಿ ಮತ್ತು ಮಾಧ್ಯಮ ಕ್ರಿಯೇಷನ್ಸ್ ಗಿರಿನಗರ ಸಹಯೋಗದಲ್ಲಿ, ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜು ಗಾಂಧಿ ನೆಹರು ರಂಗಮಂದಿರದಲ್ಲಿ ಮೇ ೯ರ ಭಾನುವಾರ ಸಂಜೆ ೬ ಗಂಟೆಗೆ ನಡೆಯುವ ಸಮಾರಂಭದಲ್ಲಿ ಶ್ರೀಮತಿ ಭಾರತಿ ವಿಷ್ಣು ವರ್ಧನ್ ಈ ಕೃತಿಯನ್ನು ಲೋಕಾರ್ಪಣೆ ಮಾಡುವರು.


ಸಮಾರಂಭದ ಅಧ್ಯಕ್ಷತೆ: ಡಿ.ಎನ್. ಆನಂದ, ನ್ಯಾಷನಲ್ ಎಜುಕೇಷನ್ ಸೊಸೈಟಿ ಕರ್ನಾಟಕ ಇದರ ಪ್ರಭಾರ ಅಧ್ಯಕ್ಷರು. ಮುಖ್ಯ ಅತಿಥಿಗಳು: ಲೋಕಸಭಾ ಸದಸ್ಯ ಅನಂತ್ ಕುಮಾರ್, ದೂರ ದರ್ಶನ ಕೇಂದ್ರ ಬೆಂಗಳೂರು ಹಿರಿಯ ನಿರ್ದೇಶಕ ಡಾ. ಮಹೇಶ ಜೋಶಿ, ಎಂ.ಕೆ. ಸುಂದರ ರಾಜ್, ಕೂಡವಳ್ಳಿ ಚಂದ್ರಶೇಖರ್.



No comments:

Advertisement