Friday, July 9, 2010

ಇಂದಿನ ಇತಿಹಾಸ History Today ಜೂನ್ 23

ಇಂದಿನ ಇತಿಹಾಸ

ಜೂನ್ 23

ಕೆನಡಾದ ಲ್ಯಾವಲಿನ್ ಕಂಪನಿಯೊಂದಿಗಿನ 374 ಕೋಟಿ ರೂಪಾಯಿಗಳ ಹಗರಣ ಪ್ರಕರಣದ ಆರೋಪಿಯಾದ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತು.

2009: ಭಾರತೀಯರ ಮೇಲೆ ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ ಮುಂದುವರೆಯಿತು. ಹೈದರಾಬಾದಿನ 20 ವರ್ಷದ ಮತ್ತೊಬ್ಬ ವಿದ್ಯಾರ್ಥಿ ಹಾಗೂ ಟ್ಯಾಕ್ಸಿ ಚಾಲಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಗಾಯಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದವರ ಮೇಲೆ ನಡೆದಿರುವ 16ನೇ ದಾಳಿ ಇದು. ಹಲ್ಲೆಗೊಳಗಾದ ಯುವಕನನ್ನು ಎಂ.ಎ.ಖಾನ್. ಇನ್ನೊಂದು ಘಟನೆಯಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆದು ಪ್ರಯಾಣಿಸಿದ ಗುಂಪೊಂದು ನಂತರ ಆ ಟ್ಯಾಕ್ಸಿಯ ಚಾಲಕ ಗುಲ್ಷನ್ ಕುಮಾರ್ ಎಂಬುವವರನ್ನು ಕ್ಲೇಟನ್ ಪ್ರದೇಶದಲ್ಲಿ ಥಳಿಸಿತು ಎಂದು ಆಸ್ಟ್ರೇಲಿಯಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಅಮಿತ್ ಮಘನಾನಿ ತಿಳಿಸಿದರು.

2009: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ) ನೀಡುವ ರಾಜ್ಯದ 2008-09ನೇ ಸಾಲಿನ 'ಶ್ರೇಷ್ಠ ರಫ್ತುದಾರ ಪ್ರಶಸ್ತಿ'ಯು (ಉತ್ಪಾದನಾ ವಿಭಾಗ)- ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ಗೆ ಲಭಿಸಿತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಉಪಾಧ್ಯ ರಫ್ತು  ಪ್ರಶಸ್ತಿ ಸ್ವೀಕರಿಸಿದರು. ಎಂಆರ್‌ಪಿಎಲ್ ಕಂಪೆನಿಯು 11,600 ಕೋಟಿ ರೂಪಾಯಿ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿ ರಾಜ್ಯದ ಶ್ರೇಷ್ಠ ರಫ್ತುದಾರ ಕಂಪೆನಿಯಾಗಿ ಹೊರಹೊಮ್ಮಿದೆ.

2009: ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಒಂದೂ ಲೋಕಸಭಾ ಸ್ಥಾನ ಗೆಲ್ಲಲಾಗದೆ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡದ ಮುಖ್ಯಮಂತ್ರಿ ಬಿಜೆಪಿಯ ಬಿ.ಸಿ.ಖಂಡೂರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಲ್.ಕೆ.ಅಡ್ವಾಣಿ ಅವರ ನಿವಾಸದಲ್ಲಿ ಪಕ್ಷದ ಹಿರಿಯ ಮುಖಂಡರು ಸಭೆ ಸೇರಿ ಖಂಡೂರಿ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಲು ನಿರ್ಧರಿಸಿದ ನಂತರ ಖಂಡೂರಿ ರಾಜನಾಥ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.

2009: ಡೀಸೆಲ್‌ನೊಂದಿಗೆ ಜತ್ರೋಪ ಅಥವಾ ಹೊಂಗೆ ಎಣ್ಣೆಯನ್ನುಬಳಸಿ ವಾಹನ ಓಡಿಸಬಹುದು ಎನ್ನುವುದು ಹಳೆ ಸುದ್ದಿ ಆದರೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಸಿಇ) ವಿದ್ಯಾರ್ಥಿಗಳು ಜತ್ರೋಪ ಮತ್ತು ಹೊಂಗೆ ಬೀಜಗಳಿಂದ ತಯಾರಿಸಿದ ತೈಲಕ್ಕೆ ಸ್ವಲ್ಪ ಮಾತ್ರ ಡೀಸೆಲ್ ಹಾಕಿ ಗಾಡಿಯನ್ನು ಓಡಿಸುವ ಸಾಧ್ಯತೆ ಬಗ್ಗೆ ಸಂಶೋಧಿಸಿದ್ದನ್ನು ಬಹಿರಂಗ ಪಡಿಸಿದರು. ಹೊಂಗೆ ಎಣ್ಣೆ ಮತ್ತು ಜತ್ರೋಪದಿಂದ ತಯಾರಿಸಿದ ತೈಲ ಶೇ 60 ಹಾಗೂ ಶೇ 40ರಷ್ಟು ಡೀಸೆಲ್ ಬಳಸಿ ವಾಹನಗಳನ್ನು ಓಡಿಸಬಹುದು. ಇದಕ್ಕಾಗಿ ವಾಹನ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾಗಿಲ್ಲ. ಎಂಜಿನ್ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇಂತಹ ಪ್ರಯೋಗ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಹೊಂಗೆ ಹಾಗೂ ಜತ್ರೋಪ ಬೀಜಗಳಿಂದ ಕಚ್ಚಾ ತೈಲ ಉತ್ಪಾದಿಸಲು ವಿದ್ಯಾರ್ಥಿಗಳೇ ಹೊಸ ಯಂತ್ರವನ್ನು  ಅನ್ವೇಷಣೆ ಮಾಡಿದರು. ಅದರ ಸಹಾಯದಿಂದ ಜತ್ರೋಪ ಸಸ್ಯದ ಬೀಜಗಳನ್ನು ದ್ರವರೂಪಕ್ಕೆ ಪರಿವರ್ತಿಸಬಹುದು. ಹಲವು ಹಂತಗಳ ಪ್ರಯೋಗದಿಂದ ಜತ್ರೋಪದಲ್ಲಿನ ಭಾರದ ವಸ್ತುಗಳನ್ನು ಬೇರ್ಪಡಿಸಿ, ಬಳಿಕ ಉಳಿಯುವ ತೈಲದಿಂದ ಇಂಧನದ ಗುಣಗಳನ್ನು ಪಡೆಯಬಹುದು. ಈ ತೈಲವನ್ನು ಹೊಂಗೆ ಮರದ ಮಿಶ್ರಣದೊಂದಿಗೆ ಸೇರಿಸಲಾಗುತ್ತದೆ. ಈ ಎರಡೂ ಮಿಶ್ರಣಗಳು ಒಟ್ಟಾದಾಗ 'ಬಯೋ ಡೀಸೆಲ್' ಇಂಧನ ಸೃಷ್ಟಿಯಾಗುತ್ತದೆ. ಹೀಗೆ ಪ್ರಾಯೋಗಿಕವಾಗಿ ಸಿದ್ಧಪಡಿಸಿದ 'ಕಚ್ಚಾ ತೈಲ'ವನ್ನು ಡೀಸೆಲ್‌ನೊಂದಿಗೆ ಸೇರಿಸಬಹುದು. ಈ ಇಂಧನ ಮಾರುಕಟ್ಟೆ ಪ್ರವೇಶ ಮಾಡಿದರೆ ಇಂಧನ ವೆಚ್ಚದಲ್ಲಿ ಶೇ 50ರಷ್ಟನ್ನು ಉಳಿಸಬಹುದು. ಈ ಇಂಧನವನ್ನು ಬಳಸಿ ನಾವೀಗ ಎಂಜಿನ್ ಚಾಲನೆ ಮಾಡ್ದಿದೇವೆ ಎಂಬುದು ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೆ. ಚಂದ್ರಶೇಖರ್ ಹೇಳಿಕೆ. ಬಯೋಡೀಸೆಲ್ ಪರಿಸರ ಸ್ನೇಹಿ ಇಂಧನ. ಇಂಧನ ಉರಿದ ನಂತರ ಹೊರಬರುವ ಹೊಗೆಯಿಂದ ಮಾಲಿನ್ಯದ  ಪ್ರಮಾಣ ಕಡಿಮೆ. ಜತ್ರೋಪ ಗಿಡ ಎಲ್ಲೆಡೆ ಹೇರಳವಾಗಿ ಬೆಳೆಯುತ್ತದೆ. ಯಾರೂ ನೀರೆರೆಯದ್ದಿದರೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತವೆ. ರೈತರು ವಾಣಿಜ್ಯ ಬೆಳೆಯಂತೆ ಹೊಂಗೆ ಹಾಗೂ ಜತ್ರೋಪ ಬೆಳೆದು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು. ಈ ಅಂಶವೂ ನಮ್ಮ ಸಂಶೋಧನೆಯಲ್ಲಿ ಅಡಗಿದೆ ಎನ್ನುತ್ತಾರೆ ಡಾ.ಕೆ  ಚಂದ್ರಶೇಖರ್.  ಈ ಇಂಧನದ ಬಳಕೆಯಿಂದ ಲೀಟರ್ ಒಂದಕ್ಕೆ 4 ರೂ. ಉಳಿಸಬಹುದು ಎಂಬುದು ಸಂಶೋಧಿಸಿದ ವಿದ್ಯಾರ್ಥಿಗಳ ಅನಿಸಿಕೆ. ಜತ್ರೋಪ ಗಿಡದಿಂದ ಪ್ರಯೋಗಾಲಯದಲ್ಲಿ ಹೊರಬಂದ ಜಿಡ್ಡಿನ ಪದಾರ್ಥವೂ ಬಹುಪಯೋಗಿ. ಬೀಜಗಳಿಂದ ಬೇರ್ಪಟ್ಟ ಘನತ್ಯಾಜ್ಯದಿಂದ ಸೋಪ್ ತಯಾರಿಸಬಹುದು.

2009: ದಕ್ಷಿಣ ಭಾರತದ ಪ್ರಖ್ಯಾತ ಪರ್ವತಾರೋಹಿ ವಿ.ಗೋವಿಂದರಾಜು (77) ಮೈಸೂರಿನ ರಾಘವೇಂದ್ರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಗೋವಿಂದರಾಜ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ತೇನ್‌ಸಿಂಗ್ ಅವರ ಸಹವರ್ತಿ. ಡಾರ್ಜಿಲಿಂಗಿನ ಹಿಮಾಲಯನ್ ಮೌಂಟೆನಿಂಗ್ ಇನ್ಸ್‌ಟಿಟ್ಯೂಟಿನಲ್ಲಿ ಚಾರಣ ಮತ್ತು ಪರ್ವತಾರೋಹಣ ತರಬೇರತುದಾರರಾಗಿದ್ದ ತೇನ್‌ಸಿಂಗ್ ಬಳಿ 1962ರಲ್ಲಿ ಗೋವಿಂದರಾಜ್ ತರಬೇತಿ ಪಡೆದಿದ್ದರು. 1966ರಲ್ಲಿ ಚತುರಂಗಿಯ ಭಾಗೀರಥಿ-2 ಎಂಬ 26,800 ಅಡಿ ಪರ್ವತವನ್ನು ಮೊದಲ ಬಾರಿಗೆ ಚಾರಣ ಮಾಡಿದ ನಾಲ್ವರಲ್ಲಿ ಇವರೂ ಒಬ್ಬರು. ಚಾರಣ ಮುಗಿಸಿ ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಜೊತೆಯಲ್ಲಿದ್ದ ಮೂವರು ಸಾವನ್ನಪ್ಪಿದರೆ ಗೋವಿಂದರಾಜ್ 20 ಗಂಟೆಗಳವರೆಗೆ ಹಿಮದಲ್ಲಿ ಸಿಲುಕಿಯೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ನಂತರ ಅವರ ಎರಡೂ ಕಾಲುಗಳ 9 ಬೆರಳುಗಳನ್ನು ತೆಗೆದು ಹಾಕಲಾಯಿತು. ಇಂತಹ ಸ್ಥಿತಿಯಲ್ಲಿಯೂ ಗೋವಿಂದರಾಜ್ ಚಾರಣ, ಸಾಹಸ ಚಟುವಟಿಕೆಗಳನ್ನು ನಿಲ್ಲಿಸದೆ 80ರ ದಶಕದಲ್ಲಿ ಮೈಸೂರಿನಲ್ಲಿ  'ಡೆಕ್ಕನ್ ಮೌಂಟೆನಿಯರಿಂಗ್ ಲೀಗ್' ಪರ್ವತಾರೋಹಣ ತರಬೇತಿ ಸಂಸ್ಥೆ ಪ್ರಾರಂಭಿಸಿ ಸಾವಿರಾರು ಮಂದಿಗೆ ತರಬೇತಿ ನೀಡಿದ್ದರು. ಹೈದರಾಬಾದಿನ ನ್ಯಾಷನಲ್ ಪೋಲಿಸ್ ಅಕಾಡೆಮಿ ಮತ್ತು ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಪೋಲಿಸ್ ಅಧಿಕಾರಿಗಳಿಗೆ ಪರ್ವತಾರೋಹಣದ ಬಗ್ಗೆ ತರಬೇತಿ ನೀಡಿದ್ದರು. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 1982ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

2009: ನಿಲ್ದಾಣಕ್ಕೆ ಇಳಿಯುವಾಗ ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳ ಕಂಪೆನಿಗಳಿಂದ 12 ನೇ ಶತಮಾನದ ಸ್ಮಾರಕ ಕುತುಬ್ ಮಿನಾರ್‌ಗೆ ಹಾನಿಯಾಗುತ್ತಿದೆ. ಹಾಗಾಗಿ ತಕ್ಷಣವೇ ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕು ಎಂದು  ಭಾರತೀಯ ಪುರಾತತ್ವ ಇಲಾಖೆ (ಎಸ್‌ಐಎ) ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಸೂಚಿಸಿತು. ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳು 72.5 ಮೀಟರ್ ಎತ್ತರದ ಈ ಸ್ಮಾರಕಕ್ಕೆ ಯಾವ ರೀತಿಯಲ್ಲಿ ಅಪಾಯಕಾರಿಯಾಗಿವೆ ಎನ್ನುವುದನ್ನು ಎಸ್‌ಐಎ, ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿತು.

2009: ಹೊಸದಾಗಿ ಅಸ್ತಿತ್ವಕ್ಕೆ ಬಂದ 'ಕುವೆಂಪು ಭಾಷಾ ಭಾರತಿ' ಅಧ್ಯಕ್ಷರಾಗಿ ಪ್ರಧಾನ  ಗುರುದತ್ ಅವರನ್ನು ಸರ್ಕಾರ ನೇಮಕ ಮಾಡಿತು. ನೂತನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಯಿತು. ಇದರಿಂದ ಹಲವಾರು ವರ್ಷಗಳಿಂದ ಅನುವಾದ ಅಕಾಡೆಮಿಯನ್ನು ಮುನ್ನಡೆಸಿದ ಹಿರಿಯ ಅನುಭವಿಗೆ ಹೊಸದೊಂದು ಜವಾಬ್ದಾರಿ ವಹಿಸಿದಂತಾಯಿತು.

2009: ಕೆನಡಾದ ಲ್ಯಾವಲಿನ್ ಕಂಪನಿಯೊಂದಿಗಿನ 374 ಕೋಟಿ ರೂಪಾಯಿಗಳ ಹಗರಣ ಪ್ರಕರಣದ ಆರೋಪಿಯಾದ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತು. ಲ್ಯಾವಲಿನ್ ಕಂಪನಿ ಜತೆಗಿನ ಒಪ್ಪಂದದ ಈ ಹಗರಣಕ್ಕೆ ಸಂಬಂಧಿಸಿದಂತೆ ಪಿನರಾಯಿ ವಿಜಯನ್ ಹಾಗೂ ಇತರ ಎಂಟು ಜನ ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸುತ್ತ್ದಿದಂತೆಯೇ ನ್ಯಾಯಾಲಯ ಈ ಕ್ರಮ ಜರುಗಿಸಿತು.

2009: ಸಿಗರೇಟು ತಯಾರಕರ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ಅಧಿಕಾರ ನೀಡುವ ಮಹತ್ವದ ತಂಬಾಕು ಮಸೂದೆಗೆ ಅಧ್ಯಕ್ಷ ಬರಾಕ್ ಒಬಾಮ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಇದರೊಂದಿಗೆ ಕಟ್ಟುನಿಟ್ಟಿನ ಕಾನೂನೊಂದು ಅಮೆರಿಕದಲ್ಲಿ ಜಾರಿಗೆ ಬಂದಂತಾಯಿತು. ಅಮೆರಿಕದಲ್ಲಿ ಪ್ರತಿ ದಿನ 19 ವರ್ಷದೊಳಗಿನ ಸಾವಿರ ಮಂದಿ ಸಿಗರೇಟಿಗೆ ದಾಸರಾಗುತ್ತಿದ್ದಾರೆ ಎಂಬ ಭಯಾನಕ ವಿದ್ಯಮಾನದ ನಡುವೆಯೇ ಯುವಕರನ್ನು ಈ ಚಟದಿಂದ ದೂರ ಇರಿಸಲು ನೂತನ ಕಾನೂನನ್ನು ಜಾರಿಗೆ ತರಲಾಯಿತು. ಈ ಮೂಲಕ ಒಬಾಮ ಅವರು ತಾವು ನೀಡಿದ ಭರವಸೆಯಂತೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಸಾಬೀತುಪಡಿಸಿದರು. ಈ ಕಾನೂನು ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ತಂಬಾಕು ಉತ್ಪನ್ನಗಳ ಕೆಲವು ಬಗೆಯ ಸುವಾಸನೆಗಳನ್ನು ಸೇರಿಸುವುದನ್ನು ನಿಷೇಧಿಸುವ, ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯವಾಗಿ ಛಾಪಿಸುವಂತೆ ಮಾಡುವ ಅಧಿಕಾರ ನೀಡಿತು.

2008: ಬ್ರಿಟನ್ನ ಪ್ರಧಾನಿ ಗೋರ್ಡಾನ್ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರು, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಶಿವರಾಜ್ ಪೌಲ್ ಅವರ ಕಿರಿಯ ಮಗಳು ಅಂಬಿಕಾ ಅವರ ನೆನಪಿನ `ಪ್ರಿಥ್ರಿ' (ಪೋಡಿಯಂ ಥ್ರಿ) ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಈ ಅಧ್ಯಯನ ಕೇಂದ್ರ, ಕಲಿಕೆ, ತರಬೇತಿ ನೀಡುತ್ತಾ ಸಂಶೋಧನೆಗಳ ಅನುಷ್ಠಾನಕ್ಕೆ ಪುರಕವಾಗಿ ಉದ್ಯಮಿಗಳು ಮತ್ತು ಶಿಕ್ಷಣವೇತ್ತರಿಗೆ ಒಂದು ಸಮಾನ ವೇದಿಕೆ ಒದಗಿಸುವುದು.

2007: ಕರ್ನಾಟಕದಲ್ಲಿ ಉಗ್ರ ಸ್ವರೂಪ ತಾಳಿದ ಮಳೆ 35 ಜನರನ್ನು ಬಲಿ ತೆಗೆದುಕೊಂಡಿತು.

2007: ನವ ಮಂಗಳೂರು ಬಂದರಿನಿಂದ ಯುಎಇಗೆ ಕಬ್ಬಿಣದ ಅದಿರನ್ನು ಹೊತ್ತು ಹೊರಟ `ಡೆನ್ ಡೆನ್' ಆಫ್ರಿಕನ್ ಹಡಗು ತಾಂತ್ರಿಕ ದೋಷದ ಜೊತೆಗೆ ಭಾರಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಸಮುದ್ರ ದಂಡೆ ಬಳಿ ಸಂಭವಿಸಿದ ದುರಂತದಲ್ಲಿ ಇಬ್ಬರು ಅಸು ನೀಗಿ ಒಬ್ಬರು ಕಣ್ಮರೆಯಾದರು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ - ಎಡಪಕ್ಷಗಳ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದರು.

2007: ಬಾಹ್ಯಾಕಾಶದಲ್ಲಿ 195 ದಿನಗಳನ್ನು ಕಳೆದು ಭೂಮಿಗೆ ವಾಪಸಾದ ಭಾರತೀಯ ಸಂಜಾತ ಅಮೆರಿಕದ ಗಗನಯಾನಿ ಸುನೀತಾ ವಿಲಿಯಮ್ಸ್ (41) ಅವರನ್ನು ನ್ಯೂಯಾರ್ಕಿನ ಎಬಿಸಿ ಟೆಲಿವಿಷನ್ ನೆಟ್ ವರ್ಕ್ `ವಾರದ ವ್ಯಕ್ತಿ' ಎಂಬುದಾಗಿ ಆಯ್ಕೆ ಮಾಡಿತು.

2006: ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ `ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ'ಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಲಭಿಸಿತು. ವಿಶ್ವಸಂಸ್ಥೆಯು ಜೂನ್ 23ರ ಈ ದಿನವನ್ನು `ವಿಶ್ವಸಂಸ್ಥೆ ಸಾರ್ವಜನಿಕ ಸೇವಾದಿನ'ವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಜಗತ್ತಿನ ವಿವಿಧ 11 ರಾಷ್ಟ್ರಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕ ಸೇವಾ ಸಂಸ್ಥೆ(ಇಲಾಖೆ)ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು..

2005: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

1997: ಜೈನ ಧರ್ಮದ ತೇರಾಪಂಥದ ಸ್ಥಾಪಕ ಆಚಾರ್ಯ ತುಳಸಿ ನಿಧನ.

1995: ವೈದ್ಯಕೀಯ ತಜ್ಞ ಡಾ. ಜಾನ್ ಸಾಲ್ಕ್ ತಮ್ಮ 80ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಜೊಲ್ಲಾದಲ್ಲಿ ನಿಧನರಾದರು. ಇವರು ಪೋಲಿಯೋ ವಿರುದ್ಧ ಮೊತ್ತ ಮೊದಲಿಗೆ ಲಸಿಕೆ ಅಭಿವೃದ್ಧಿ ಪಡಿಸಿದರು.

1985: ಏರ್ ಇಂಡಿಯಾ 747 `ಎಂಪರರ್ ಕನಿಷ್ಕ' ವಿಮಾನ ಐರಿಷ್ ಕರಾವಳಿಯಲ್ಲಿ ಸ್ಫೋಟಗೊಂಡು ಅದರಲ್ಲಿದ್ದ 329 ಜನ ಅಸುನೀಗಿದರು. ಈ ವಿಮಾನಸ್ಫೋಟಕ್ಕೆ ಸಿಖ್ ಭಯೋತ್ಪಾದಕರು ಕಾರಣ ಎಂದು ಶಂಕಿಸಿ ಖಟ್ಲೆ ಹೂಡಲಾಗಿತ್ತು. ಇದರ ವಿಚಾರಣೆ ಇತ್ತೀಚಿನವರೆಗೂ ನಡೆಯಿತು.

1981: ಪ್ರಮುಖ ಕಾಂಗೈ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೆ. ಪಾಟೀಲ ಅವರು ಈದಿನ  ನಿಧನರಾದರು.

1980: ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1956: ಗಮೆಲ್ ಅಬ್ದುಲ್ ನಾಸ್ಸೇರ್ ಈಜಿಪ್ಟಿನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿತ್ತು. ನಾಸ್ಸೇರ್ ಕಣದಲ್ಲಿ ಇದ್ದ ಏಕೈಕ ಅಭ್ಯರ್ಥಿ.

1955: ಕಲಾವಿದ ಪುಟ್ಟೇಗೌಡ ಎಚ್. ಬಿ. ಜನನ.

1953: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕಾಶ್ಮೀರದ ಸೆರೆಮನೆಯೊಂದರಲ್ಲಿ ಮೃತರಾದರು.

1953: ಕಲಾವಿದೆ ಇಂದೂ ವಿಶ್ವನಾಥ್ ಜನನ.

1941: ಕಲಾವಿದ ಪ್ರಭಾಶಂಕರ್ ಜನನ.

1932: ಕಲಾವಿದ ರಾಜಾರಾಮ್ ಗಿರಿಯನ್ ಜನನ.

1931: ಸಾಹಿತಿ ದೇವಕಿ ಮೂರ್ತಿ ಜನನ.

1920: ಜನತಾ ಪಕ್ಷದ ಹಿರಿಯ ಮುಖಂಡ ಜಗನ್ನಾಥರಾವ್ ಜೋಶಿ ಜನನ.

1912: ಸಾಹಿತಿ ಜಯದೇವಿ ತಾಯಿ ಲಿಗಾಡೆ ಜನನ.

1896: ಕನ್ನಡ ರಂಗಭೂಮಿಯ ಭೀಷ್ಮ ಪಿತಾಮಹರೆನಿಸಿದ್ದ ಆರ್. ನಾಗೇಂದ್ರರಾವ್ ಅವರು ರಟ್ಟಿಹಳ್ಳಿ ಕೃಷ್ಣರಾವ್ - ರುಕ್ಮಿಣಿದೇವಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. ಅಪೂರ್ವ ಸಹೋದರಗಳ್, ಸತಿ ಸುಲೋಚನಾ, ವಸಂತ ಸೇನಾ, ಗಾಳಿ ಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿ ನೋಡು, ವೀರ ಕೇಸರಿ, ಕರುಳಿನ ಕರೆ ಮುಂತಾದ ಚಿತ್ರಗಳಲ್ಲಿ ತಮ್ಮ ಅಚ್ಚಳಿಯದ ಅಭಿನಯದಿಂದ ಜನಮನದಲ್ಲಿ ವಿರಾಜಮಾನರಾದವರು ನಾಗೇಂದ್ರರಾವ್. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದ್ದವು.

1868: ಕ್ರಿಸ್ಟೋಫರ್ ಲಾಥಮ್ ಶೋಲ್ಸ್ ತಮ್ಮ ಸಂಶೋಧನೆ `ಟೈಪ್ ರೈಟರ್'ಗೆ ಪೇಟೆಂಟ್ ಪಡೆದರು.

1761: ಮರಾಠಾ ದೊರೆ ಪೇಶ್ವಾ ಬಾಲಾಜಿ ಬಾಜಿ ರಾವ್ ಮೂರನೇ ಪಾಣಿಪತ್ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಅದೇ ದುಃಖದಲ್ಲಿ ಅಸುನೀಗಿದ.

1757: ರಾಬರ್ಟ್ ಕ್ಲೈವನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್- ದೌಲನನ್ನು ಸೋಲಿಸಿದ. ಈ ಜಯದಿಂದ ಬ್ರಿಟಿಷರಿಗೆ ಬಂಗಾಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಯಿತು. ಇದು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೂ ಅಡಿಗಲ್ಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement