Tuesday, March 1, 2011

Ban Endosulfan Permanently ಎಂಡೋ ನಿಷೇಧ ಖಾಯಂಗೊಳಿಸಿ

Ban Endosulfan Permanently



Several organisations fighting against Endosulfan Journalists and Voluntary Organisations urged the Karnataka State Govenment on Tuesday 1st March 2011 at Bangalore to ban Endosulfan permanently in Karnataka in the lines of  Kerala. They explained the harms by Endosulfan which was banned by more than 70 countries in the world.


Here is the small report published by Ganadhalu Srikanta in his blog 'PASE' with picture which is too is the courtesy of his blog. The picture gives the severity of the harm by Endosulfan.


You Can also view two videos dipicting the harmful effects of Endosulfan  by clicling below. Video courtesy: youtube.com and dailymotiion.com

-Nethhrakere Udaya Shankara

ಎಂಡೋ ನಿಷೇಧ ಖಾಯಂಗೊಳಿಸಿ, ಸಂತ್ರಸ್ಥರ ಜನಗಣತಿ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಎಂಡೋ ನಿಷೇಧ ಖಾಯಂಗೊಳಿಸಿ, ವಿಷಕಾರಕ ಕೀಟನಾಶದಿಂದ ಸಂತ್ರಸ್ಥರಾಗಿರುವ ಕುಟುಂಬದ ಗಣತಿ ನಡೆಸಿ, ಶಾಶ್ವತ ಪರಿಹಾರ ನೀಡುವಂತೆ ‘ಎಂಡೋ ಸಲ್ಫಾನ್’ ವಿರುದ್ಧ ಹೋರಾಟ ನಡೆಸುತ್ತಿರುವ ಚಳವಳಿಕಾರರು, ಪತ್ರಕರ್ತರು, ಸ್ವಯಂ ಸೇವಾ ಸಂಸ್ಥೆಗೆಳು ಸರ್ಕಾರವನ್ನು ಒತ್ತಾಯಿಸಿದವು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಘಟನೆಗಳ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಹಕ ಬಳಕೆದಾರ ಹೋರಾಟಗಾರ ಡಾ.ರವೀಂದ್ರನಾಥ ಶ್ಯಾನಬೋಗ್, ಸರ್ಕಾರ ತಡವಾಗಿಯಾದರೂ ತಾತ್ಕಾಲಿಕ ಎಂಡೋಸಲ್ಫಾನ್ ನಿಷೇಧಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ವಿಚಾರ. ಅದನ್ನು ನಾವು ಸ್ವಾಗತಿಸುತ್ತಿದ್ದೇವೆ. ಕೇರಳ ಸರ್ಕಾರವು ಈ ಹಿಂದೆಯೇ ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಈಗಾಗಲೇ ವಿಶ್ವದ ೭೦ಕ್ಕೂ ಹೆಚ್ಚು ದೇಶಗಳು ಎಂಡೋಸಲ್ಫಾನ್‌ನ ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ ಭಾರತ ಸರ್ಕಾರವು ಮಾತ್ರ ಎಂಡೋಸಲ್ಫಾನ್ ದುಷ್ಪರಿಣಾಮಗಳ ಭೀಕರ ಚಿತ್ರಣ ಸಿಕ್ಕಿದ ಮೇಲೂ ಅದನ್ನು ನಿಷೇಧ ಮಾಡಲು ವಿರೋಧಿಸುತ್ತಿರುವುದು ಅತ್ಯಂತ ಖಂಡನೀಯ.

ಎಂಡೋಸಲ್ಫಾನಿನಿಂದಲೇ ಕಾಸರಗೋಡು, ಪುತ್ತೂರು, ವಿಟ್ಲ ಮುಂತಾದ ತಾಲೂಕುಗಳ ಸಾವಿರಾರು ಮಂದಿ ದೈಹಿಕ, ಮಾನಸಿಕ ವೈಕಲ್ಯಗಳಿಂದ ಬಳಲುತ್ತಿದ್ದಾರೆ ಎಂಬುದು ಅನೇಕ ವರದಿಗಳು ಮತ್ತು ಅಧ್ಯಯನಗಳಿಂದ ಖಚಿತವಾಗಿದೆ. ೧೯೮೦ರಿಂದ ಈ ಪ್ರದೇಶದಲ್ಲಿ ಸುಮಾರು ೫೦ ಸಾವಿರ ಲೀಟರ್‌ಗಳಷ್ಟು ಎಂಡೋಸಲ್ಫಾನಿನ ವೈಮಾನಿಕ ಸಿಂಪಡಣೆ ನಡೆದಿತ್ತು. `ಸಿಂಪಡಣೆಗೆ ಬಳಸುವ ರಾಸಾಯನಿಕಗಳು ತುಂಬ ವಿಷಕಾರಿಯಾದುದರಿಂದ ಜಾನುವಾರು, ಮೇಕೆ, ಕುರಿ ಮತ್ತಿತರ ಪ್ರಾಣಿ ಹಕ್ಕಿಗಳನ್ನು ಈ ಅವಧಿಯಲ್ಲಿ ಮತ್ತು ಸಿಂಪಡಣೆ ಮುಗಿದ ನಂತರ ೧೦ ದಿನಗಳವರೆಗೆ ಗೇರು ತೋಟದಲ್ಲಿ ಬಿಡಕೂಡದೆಂದು’ ಅಂದು ಅರಣ್ಯ ಉಪ ಸಂರಕ್ಷಣಾಧಿಕಾರಿಯವರು ಪತ್ರಿಕಾ ಪ್ರಕಟಣೆ ಕೊಟ್ಟಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.

ಈಗ ಅಲ್ಲಿನ ೨೫ಕ್ಕೂ ಹೆಚ್ಚು ಹಳ್ಳಿಗಳಲ್ಲಿ (ಕೊಕ್ಕಡ, ಪಟ್ರಮೆ, ನಿಡ್ಲೆ, ಮೇದಿನಡ್ಕ, ವೀರಕಂಬ, ಇಳಂತಿಲ, ಕರಾಯ, ಕುಂತೂರು, ಕೊಯ್ಲ, ವಿಟ್ಲ, ಕೆದಂಬಾಡಿ, ಸವಣೂರು, ಕಣಿಯೂರು, ಬಜೆತ್ತೂರು, ಐತ್ತೂರು, ಮಲ್ಲಂಗಳ್, ಬೆಳಾಲ್, ಸಂಪಾಜೆ, ಕಲ್ಲೋಣಿ, ಕುಕ್ಕಂದೂರು, ನೆಕ್ಕಿಲಾಡಿ, ಕೊಯ್ಯೂರು, ಅಲಂಕಾರು, ನೆಲ್ಯಾಡಿ, ಸುವರ್ಮಲೆ, ತಣ್ಣೀರುಪಂಥ, ಹಿರೆಬಂಡಾಡಿ ಇತ್ಯಾದಿ) ಎಂಡೋಸಲ್ಫಾನ್‌ನ ಭೀಕರ ಪರಿಣಾಮ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರವು ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಿದೆ.

‘ಎಂಡೋಸಲ್ಫಾನ್ ಅಂಥ ವಿಷವೇನಲ್ಲ’ ಎಂದು ವಾದಿಸುವ ಎಂಡೋಸಲ್ಫಾನ್ ತಯಾರಕ ಸಂಸ್ಥೆಗಳ ವಾದದಲ್ಲಿ ಹುರುಳಿಲ್ಲ. ಪ್ರಯೋಗಾಲಯಗಳಲ್ಲಿ ಇಲಿಗಳ ಸಂತಾನ ಶಕ್ತಿ ಕುಂದಿಸಲು, ವೀರ್ಯಮಾಲಿನ್ಯ ಮಾಡಲು ಎಂಡೋಸಲ್ಫಾನ್ ವಿಷವನ್ನೇ ಬಳಸಿ ಅದನ್ನು ಮತ್ತೆ ಸರಿಪಡಿಸುವ ವಿಧಾನವನ್ನು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿರುವ ಡಾ.ರವೀಂದ್ರನಾಥ ಶಾನಭಾಗ್ ಸೇರಿದಂತೆ ಹಲವು ವಿಜ್ಞಾನಿಗಳು ರೂಪಿಸಿದ್ದಾರೆ ಎನ್ನುವುದೇ ಎಂಡೋಸಲ್ಫಾನ್ ಎಂಥ ಕಟು ವಿಷ ಎಂಬುದಕ್ಕೆ ನಿದರ್ಶನವಾಗಿದೆ.

ಎಂಡೋಸಲ್ಫಾನ್‌ನ ವಿಷದ ಭೀಕರತೆಯನ್ನು ಮನಗಂಡು ಅಮೆರಿಕಾದ ಪರಿಸರ ರಕ್ಷಣಾ ಸಂಸ್ಥೆಯು ಅದನ್ನು ಮಹಾವಿಷ ಎಂದು ವರ್ಗೀಕರಿಸಿದೆ. ಅಮೆರಿಕಾವೂ ಎಂಡೋಸಲ್ಫಾನ್ ನಿಷೇಧಿಸಿದೆ. ಇತ್ತ ಆಸ್ಟ್ರೇಲಿಯಾವೂ ಎಂಡೋಸಲ್ಫಾನ್‌ನ್ನು ನಿಷೇಧಿಸಿದೆ. ಬ್ರೆಝಿಲ್, ಕೆನಡಾ ಮತ್ತು ದಕ್ಷಿಣ ಕೊರಿಯಾ ದೇಶಗಳೂ ಎಂಡೋಸಲ್ಫಾನ್‌ನ್ನು ನಿಷೇಧಿಸಿವೆ. ಈ ನಿಷೇಧಗಳ ಹಿನ್ನೆಲೆಯಲ್ಲಿ ಅತ್ಯಂತ ವೈಜ್ಞಾನಿಕವಾದ ಅಧ್ಯಯನಗಳಿವೆ ಎಂಬುದು ಗಮನಾರ್ಹ.

ಶ್ರೀಲಂಕಾದ ಆರ್ಥಿಕತೆಯಲ್ಲಿ ಚಹಾ ಕೃಷಿಯು ಶೇಕಡಾ ೧೬ರಷ್ಟು ಪಾಲು ಹೊಂದಿದ್ದರೂ ಅಲ್ಲಿ ಎಂಡೋಸಲ್ಫಾನ್ ನಿಷೇಧವಾಗಿದ್ದು ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ. ಆದರೆ ಭಾರತದಲ್ಲಿ ಅತ್ಯಲ್ಪ ಆರ್ಥಿಕತೆಯ ಪಾಲು ಹೊಂದಿರುವ ಚಹಾ ಉದ್ಯಮದಲ್ಲಿ ಎಂಡೋಸಲ್ಫಾನ್ ನಿಷೇಧಿಸಲು ಭಾರತವು ಹಿಂಜರಿಯುತ್ತಿರುವುದು ವಿಚಿತ್ರವಾಗಿದೆ ಎಂದು ಅವರು ಟೀಕಿಸಿದರು.

ಐರೋಪ್ಯ ಸಮುದಾಯವು ತನ್ನದೇ ಗುಪ್ತ ಉದ್ದೇಶಗಳಿಗೆ ಎಂಡೋಸಲ್ಫಾನ್‌ನ್ನು ನಿಷೇಧಿಸಲು ಕುಮ್ಮಕ್ಕು ನೀಡುತ್ತಿದೆ ಎಂಬ ಎಂಡೋಸಲ್ಫಾನ್ ತಯಾರಕ ಕಂಪೆನಿಗಳ ವಾದವೂ ಆಧಾರ ರಹಿತವಾಗಿದೆ. ಸ್ಥಾಯಿಯಾಗುಳಿವ ಸಾವಯವ ರಾಸಾಯನಿಕ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟೆಂಟ್ಸ್ PಔP) ಮಾಲಿನ್ಯಕಾರಕಗಳ ಪಟ್ಟಿಯಲ್ಲಿ ಎಂಡೋಸಲ್ಫಾನ್‌ನ್ನೂ ಸೇರಿಸಬೇಕೆಂಬ ಚರ್ಚೆಯನ್ನು ನಡೆಸುತ್ತಿರುವುದು ಸ್ಟಾಕ್‌ಹೋಮಿನಲ್ಲಿರುವ ವಿಶ್ವವ್ಯಾಪಿ ಸಂಘಟನೆಯೇ ಹೊರತು ಯಾವುದೇ ದುರುದ್ದೇಶದ ಗುಂಪಲ್ಲ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇವೆ. ಈ ಸಂಸ್ಥೆಯು ವಿಶ್ವಸಂಸ್ಥೆಯದೇ ಒಂದು ಸಂಸ್ಥೆಯಾಗಿದ್ದು ಭಾರತವೂ ಸೇರಿದಂತೆ ೧೭೨ ದೇಶಗಳು ಈ ಸ್ಟಾಕ್‌ಹೋಮ್ ಸಮಾವೇಶಕ್ಕೆ (ಸ್ಟಾಕ್‌ಹೋಮ್ ಕನ್‌ವೆನ್‌ಶನ್)ದ ಸದಸ್ಯ ದೇಶವಾಗಿವೆ.

ಎಂಡೋಸಲ್ಫಾನ್ ಬಳಕೆಯ ಪ್ರಮಾಣ ಎಷ್ಟು ಎನ್ನುವುದಕ್ಕಿಂತ ಅದರ ಪರಿಣಾಮ ಏನು ಎನ್ನುವುದೇ ಮುಖ್ಯ. ಇಲ್ಲಿ ಎಂಡೋಸಲ್ಫಾನ್ ಕಂಪೆನಿಗಳು ಪದೇ ಪದೇ ಸುಳ್ಳು ಹೇಳಿ ಜನರ ಮತ್ತು ಸರ್ಕಾರದ ದಾರಿ ತಪ್ಪಿಸುವ ಯತ್ನ ಮಾಡುತ್ತಿವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ.

ಎಂಡೋಸಲ್ಫಾನ್‌ನ ಕಣಗಳು ಗರ್ಭನಾಳದೊಳಕ್ಕೆ ಪ್ರವೇಶಿಸುತ್ತವೆ, ಎದೆಹಾಲಿನಲ್ಲೂ ಇವೆ, ಮೆದುಳಿನ ಎಡೆಮಾ (ಊತ)ದಿಂದ ಹಿಡಿದು, ಕನ್ವಲ್ಶನ್, ಶ್ವಾಸಕೋಶ ಸಂಕುಚಿತತೆ, ಉಸಿರಾಟದ ಪಾರ್ಶ್ವವಾಯು, ಯಕೃತ್ತಿನ ರೋಗ, ಹೈಪರ್ ಗ್ಲೈಸೀಮಿಯಾ, ಮೂತ್ರಪಿಂಡ ನಾಳಗಳ ಕುಗ್ಗುವಿಕೆ, ಕ್ಯಾನ್ಸರ್, ನ್ಯೂರೋಟಾಕ್ಸಿಸಿಟಿ ಮುಂತಾದ ಭೀಕರ ರೋಗಗಳಿಗೂ ಕಾರಣವಾಗುತ್ತವೆ ಎಂಬುದು ನೂರಾರು ವೈಜ್ಞಾನಿಕ ಅಧ್ಯಯನಗಳಿಂದ ಸ್ಪಷ್ಟವಾಗಿದ್ದು, ಈ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲೂ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಶ್ಯಾನಭಾಗ್ ಘೋಷಿಸಿದರು.

ಸರ್ಕಾರದ ಮುಂದೆ ನಮ್ಮ ಬೇಡಿಕೆಗಳು ಇಷ್ಟೇ; ಕರ್ನಾಟಕ ಸರ್ಕಾರವು ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಲು ಬೇಕಾದ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಈ ಕೂಡಲೇ ಸಾರ್ವಜನಿಕ ಕಾರ್ಯಕರ್ತರು, ತಜ್ಞರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ಸಿಲುಕಿದವರ ಜನಗಣತಿ ಮತ್ತು ದಾಖಲೀಕರಣ ಮಾಡಬೇಕು. ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ತುತ್ತಾದವರ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಲು ಒಂದು ವಿಶೇಷ ಘಟಕವನ್ನು ಸ್ಥಾಪಿಸಬೇಕು. ಈ ಘಟಕವು ಸದಾ ಚಾಲ್ತಿಯಲ್ಲಿರುವ ಸಹಾಯವಾಣಿ ಸಂಖ್ಯೆಯನ್ನಿಟ್ಟುಕೊಂಡು ಕಾರ್ಯಾಚರಿಸಬೇಕು.

ಕೇರಳ ರಾಜ್ಯ ಸರ್ಕಾರವು ಕಳೆದ ಡಿಸೆಂಬರ್-ಜನವರಿ ೨೦೧೧ರ ಅವಧಿಯಲ್ಲಿ ನಿರ್ದಿಷ್ಟ ಪ್ರದೇಶದ ಜನರ ಆರೋಗ್ಯ ಸಮೀಕ್ಷೆ ನಡೆಸಿ ೧೫೬೦೦ ರೋಗಿಗಳ ಪೈಕಿ ೩೪೫೦ ರೋಗಿಗಳು ಎಂಡೋಸಲ್ಫಾನ್‌ನಿಂದಲೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂಬುದನ್ನು ಖಚಿತಪಡಿಸಿಕೊಂಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಹೀಗೆ ದಾಖಲಾದ ಸಂತ್ರಸ್ತರಿಗೆ ಎಂಡೋಸಲ್ಫಾನ್ ಕಂಪೆನಿಗಳೇ ಸೂಕ್ತವಾದ ಪರಿಹಾರ ಕೊಡಬೇಕು ಎಂಬ ನೀತಿಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತರಬೇಕು.

ಎಂಡೋಸಲ್ಫಾನ್‌ಗೆ ಬದಲಿಯಾಗಿ ಹಲವು ಬಗೆಯ ಮಾರ್ಗಗಳನ್ನು ರೈತರು ಅನುಸರಿಸಬಹುದು. ಸಮಗ್ರ ಕೀಟ ನಿರ್ವಹಣೆ, ಪರ್ಯಾಯ ಜೈವಿಕ ಕೀಟನಾಶಕಗಳ ಬಳಕೆ, ಸಾವಯವ ಕೃಷಿ ವಿಧಾನ, – ಹೀಗೆ ವಿವಿಧ ವಿಧಾನಗಳಿದ್ದು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೈತರಿಗೆ ಯಾವುದೇ ಬಗೆಯ ಮಾಹಿತಿ, ದಿಕ್ಸೂಚಿ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ.

ಎಂಡೋಸಲ್ಫಾನ್ ಅಲ್ಲದೆ ಹಲವು ಬಗೆಯ ಅಪಾಯಕಾರಿ ಕೀಟನಾಶಕಗಳು ನಮ್ಮ ಕೃಷಿಪದ್ಧತಿಯನ್ನು ಸೇರಿಕೊಂಡಿವೆ; ನಮ್ಮ ನೆಲ-ಜಲವನ್ನು ಕಲುಷಿತಗೊಳಿಸಿವೆಯಲ್ಲದೆ ಜನರ ದೇಹವನ್ನು ಸೇರಿಕೊಂಡಿವೆ. ಈ ಬಗ್ಗೆ ಕರ್ನಾಟಕ ಸರ್ಕಾರವು ವ್ಯಾಪಕ ಅಧ್ಯಯನವನ್ನು ಕೈಗೊಳ್ಳಬೇಕು. ಕರ್ನಾಟಕ ಸರ್ಕಾರವು ಸಾವಯವ ಕೃಷಿ ಆಂದೋಲನವನ್ನು ಕೈಗೊಂಡಿರುವುದರಿಂದ ರಾಜ್ಯದಲ್ಲಿ ವಿಷಪೂರಿತ, ರಾಸಾಯನಿಕ ಕೀಟನಾಶಕಗಳ ಬಳಕೆಯ ವಿರುದ್ಧ ಜನಜಾಗೃತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಭಾರತ ಸರ್ಕಾರವು ಎಂಡೋಸಲ್ಫಾನ್ ದುಷ್ಪರಿಣಾಮಗಳನ್ನು ಕುರಿತ ಸ್ವತಂತ್ರ ಅಧ್ಯಯನಗಳನ್ನು ಗಮನಿಸುವುದಿರಲಿ, ಸ್ಟಾಕ್‌ಹೋಮ್‌ನ ಜಾಗತಿಕ ಸಂಸ್ಥೆಯ ವರದಿಗಳನ್ನೂ ನಿರ್ಲಕ್ಷಿಸುತ್ತಿರುವುದು ವಿಚಿತ್ರವಾಗಿದೆ. ಇನ್ನಾದರೂ ಏಪ್ರಿಲ್‌ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ಎಂಡೋಸಲ್ಫಾನ್‌ನ ಬಳಕೆಗೆ ನಿಷೇಧ ಹೇರಲು ಮುಂದಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ.ಎಂಡೋಸಲ್ಫಾನ್‌ನ ದುಷ್ಪರಿಣಾಮಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಂಡೋಸಲ್ಫಾನ್ ಬಗ್ಗೆ ಮಾಧ್ಯಮಗಳು ಹೆಚ್ಚು ಹೆಚ್ಚು ವಸ್ತುನಿಷ್ಠವಾದ ವರದಿಗಳನ್ನು ಮಾಡಬೇಕು ಎಂದು ನಾವು ವಿನಂತಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಲ್ಲ ಸಂಘಟನೆಗಳು ಮನವಿ ಮಾಡಿದವು.

ಎಂಡೋಸಲ್ಫಾನ್ ಉತ್ಪಾದಕ ಕಂಪೆನಿಗಳು ನಕಲಿ ವೆಬ್‌ಸೈಟ್‌ಗಳ ಮೂಲಕ ಎಂಡೋಸಲ್ಫಾನ್ ಪರವಾಗಿ ಪ್ರಚಾರ ಕೈಗೊಂಡಿರುವುದು ಅವುಗಳ ಮುಖೇಡಿತನಕ್ಕೆ ಸಾಕ್ಷಿಯಾಗಿದೆ. ಈ ಕಂಪೆನಿಗಳ ವಿರುದ್ಧ ಜನರು, ಮಾಧ್ಯಮಗಳು ಜಾಗೃತರಾಗಿರಬೇಕೆಂದು ಈ ಮೂಲಕ ವಿನಂತಿಸುತ್ತಿರುವುದಾಗಿ ತಿಳಿಸಿದರು..

ಸುದ್ದಿಗೋಷ್ಠಿಯಲ್ಲಿ ಡಾ. ರವೀಂದ್ರನಾಥ ಶ್ಯಾನಭಾಗ್, ಗ್ರಾಹಕ ಚಳವಳಿಗಾರ ನಿರ್ದೇಶಕರು, ವಿ ಕೆ ವಿರಾನಿ ಫಾರ್ಮ ಸಂಶೋಧನಾ ಕೇಂದ್ರ, ಅಮ್ರೇಲಿ, ಗುಜರಾತ್‌. ಡಾ.ಮೊಹಮದ್ ಅಶೀಲ್, ಸಹ ನೋಡಲ್ ಅಧಿಕಾರಿ (ಕೇರಳ ಸರ್ಕಾರದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಯೋಜನೆ), ಜಯಕುಮಾರ್, ಥನಾಲ್ ಸ್ವಯಂಸೇವಾ ಸಂಸ್ಥೆ, ತಿರುವನಂತಪುರ, ಡಾ. ರಾಮಾಂಜನೇಯುಲು, ಕಾರ್ಯಪಾಲಕ ನಿರ್ದೇಶಕ, ಸುಸ್ಥಿರ ಪರ್ಯಾಯ ಕೃಷಿ, ಸಿಕಂದರಾಬಾದ್. `ಶ್ರೀ’ ಪಡ್ರೆ, ಜಲ ಪತ್ರಕರ್ತ; ಸಂಪಾದಕ, ಅಡಿಕೆ ಪತ್ರಿಕೆ, ಪುತ್ತೂರು ನಾಗೇಶ ಹೆಗಡೆ, ಪತ್ರಕರ್ತ. ಸೂಲಿಕೆರೆ ಗ್ರಾಮ ಎ ಎಸ್ ಆನಂದ, ಅಧ್ಯಕ್ಷರು, ಸಾವಯವ ಕೃಷಿ ಮಿಶನ್, ಕರ್ನಾಟಕ ಸರ್ಕಾರ ವೈ ಬಿ ರಾಮಕೃಷ್ಣ, ಅಧ್ಯಕ್ಷರು, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹರಿ ಬೆಳ್ಳೂರು, ಪತ್ರಿಕಾ ಛಾಯಾಗ್ರಾಹಕ, ಕಾಸರಗೋಡು ಜಿ. ಕೃಷ್ಣಪ್ರಸಾದ, ಸಹಜ ಸಮೃದ್ಧ, ಸಾವಯವ ಕೃಷಿ ಸಂಘಟನೆ, ಬೆಂಗಳೂರು ಬೇಳೂರು ಸುದರ್ಶನ, ಪತ್ರಕರ್ತ, ಮಿತ್ರಮಾಧ್ಯಮ, ಬೆಂಗಳೂರು ಭಾಗವಹಿಸಿದ್ದರು.

ಗಾಣಧಾಳು ಶ್ರೀಕಂಠ 


View Two Videos:





Endosulfan victim dies in Kasargod
Uploaded by official-KairaliTV. - Watch the latest news videos.

Advertisement