Tuesday, December 16, 2014

ಪೇಷಾವರ: 140 ಶಾಲಾ ಮಕ್ಕಳ ಮಾರಣಹೋಮ, ತಾಲಿಬಾನ್ ರಕ್ಕಸ ವರ್ತನೆ

ಪೇಷಾವರ: 140 ಶಾಲಾ ಮಕ್ಕಳ ಮಾರಣಹೋಮ, 


ತಾಲಿಬಾನ್ ರಕ್ಕಸ ವರ್ತನೆ


 ನವದೆಹಲಿ/ ಪೇಷಾವರ: ಪಾಕಿಸ್ತಾನದ ಸೇನೆ ನಡೆಸುವ ಪೇಷಾವರದ ಸೈನಿಕ ಶಾಲೆಯ ಮೇಲೆ 16-12-2014ರ ಮಂಗಳವಾರ ತಾಲಿಬಾನ್ ಭಯೋತ್ಪಾದಕರು ನಡೆಸಿದ ರಕ್ಕಸ ದಾಳಿಯಲ್ಲಿ 140ಕ್ಕೂ ಹೆಚ್ಚು ಮಕ್ಕಳು ಹತರಾಗಿದ್ದಾರೆ.  ಸುಮಾರು 245ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರುವ ಭೀತಿ ಇದೆ. ಶಾಲೆಯ ಒಳಗೆ ಪ್ರವೇಶಿಸಿ ಆತ್ಮಾಹುತಿ ಸ್ಫೋಟ ಹಾಗೂ ಯದ್ವಾತದ್ವ ಗುಂಡಿನ ಹಾರಾಟ ನಡೆಸಿ ಮಕ್ಕಳ ಮಾರಣಹೋಮ ನಡೆಸಿದ ಎಂಟು ಮಂದಿ ಭಯೋತ್ಪಾದಕರು ಪಾಕಿಸ್ತಾನಿ ಸೇನಾ ಕಮಾಂಡೋಗಳ ಕಾರ್ಯಾಚರಣೆಯ ಬಳಿಕ ರಾತ್ರಿಯ ವೇಳೆಗೆ ಹತರಾಗಿದ್ದಾರೆ.

ಭಯೋತ್ಪಾದಕರ ಬರ್ಬರ ಕೃತ್ಯವನ್ನು ವಿಶ್ವಾದ್ಯಂತದ ನಾಯಕರು ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ 17-12-2014ರ ಬುಧವಾರ ರಾಷ್ಟ್ರಾದ್ಯಂತ ಶಾಲೆ ಕಾಲೇಜುಗಳಲ್ಲಿ 2 ನಿಮಿಷಗಳ ಮೌನ ಆಚರಿಸುವ ಮೂಲಕ ಭಯೋತ್ಪಾದಕ ಕೃತ್ಯದ ವಿರುದ್ಧ ಐಕ್ಯಮತ್ಯ ಪ್ರದರ್ಶಿಸಲು ಕರೆ ನೀಡಿದ್ದಾರೆ.

 'ಪೇಷಾವರದಲ್ಲಿ ಸೇನೆ ನಡೆಸುವ ಶಾಲೆಯ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಏಕೆಂದರೆ ನಮ್ಮ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಸೇನೆ ನಡೆಸುವ ಕಾರ್ಯಾಚರಣೆಗಳಿಗೆ ಸೇಡು ತೀರಿಸಲು ಅದು ಬಯಸಿದೆ' ಎಂದು ತಾಲಿಬಾನ್ ವಕ್ತಾರರು ಇದಕ್ಕೆ ಮುನ್ನ ತಿಳಿಸಿದ್ದರು.

'ನಾವು ಸೇನಾಶಾಲೆಯನ್ನು ದಾಳಿಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಏಕೆಂದರೆ ಸರ್ಕಾರವು ನಮ್ಮ ಕುಟುಂಬಗಳನ್ನು ಮತ್ತು ನಮ್ಮ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದೆ' ಎಂದು ವಕ್ತಾರರು ಹೇಳಿದ್ದರು.

 'ನಮ್ಮ ನೋವು ಅವರಿಗೆ ಅರಿವಾಗಬೇಕು ಎಂದು ನಾವು ಬಯಸಿದ್ದೇವೆ' ಎಂಬುದು ತಾಲಿಬಾನ್ ವಕ್ತಾರ ಮುಹಮ್ಮದ್ ಉಮರ್ ಖೊರಸಾನಿ ಉವಾಚ. ಸಂಯುಕ್ತ ಸೇನಾ ಆಸ್ಪತ್ರೆಯಲ್ಲಿ (ಸಿಎಂಎಚ್) ಮತ್ತು ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ಶವಗಳ ರಾಶಿ ಬಿದ್ದಿದೆ’ ಎಂದು ಪ್ರಾಂತದ ಮುಖ್ಯಮಂತ್ರಿ ಪರ್ವಯಾಜ್ ಖಟ್ಟಕ್ ಅವರು ಸ್ಥಳೀಯ ಟೆಲಿವಿಷನ್ ವಾಹಿನಿಗಳಿಗೆ ತಿಳಿಸಿದರು. ಈಮಧ್ಯೆ, ಸೇನಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಪೇಷಾವರಕ್ಕೆ ತೆರಳಿದ್ದರು.

‘ಶಾಲಾ ಮಕ್ಕಳ ಎದೆಗೆ ನೇರವಾಗಿ ಪಾಯಿಂಟ್ ಬ್ಲಾಂಕ್ ರೇಂಜ್​ನಿಂದ ಗುಂಡು ಹೊಡೆಯಲಾಯಿತು' ಎಂದು ವರದಿಗಳು ತಿಳಿಸಿವೆ.

 'ಭಯೋತ್ಪಾದಕರು ಬೆಳಗ್ಗೆ ಶಾಲೆಯನ್ನು ಪ್ರವೇಶಿಸಿ, ಸಭಾಭವನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದರು. ಬಳಿಕ ಮಕ್ಕಳ ಮೇಲೆ ಯದ್ವಾತದ್ವ ಗುಂಡು ಹಾರಿಸಿದರು. ಸುದ್ದಿ ತಿಳಿದ ತತ್​ಕ್ಷಣವೇ ಸೇನಾ ಕಮಾಂಡೋಗಳು ಸ್ಥಳಕ್ಕೆ ಆಗಮಿಸಿ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ, ಭಯೋತ್ಪಾದಕರೊಂದಿಗೆ ಗುಂಡಿನ ಘರ್ಷಣೆಗೆ ಇಳಿದರು ಎಂದು ಪೊಲೀಸ್ ಅಧಿಕಾರಿ ಜಾವೇದ್ ಖಾನ್ ತಿಳಿಸಿದರು.

ಸೈನಿಕ ದುಸ್ತಿನಲ್ಲಿ ಶಾಲೆಗೆ ನುಗ್ಗಿದ ಭಯೋತ್ಪಾದಕರು ಭೀಕರ ಕೃತ್ಯ ಎಸಗಿ ನೂರಾರು ಮಂದಿ ಮಕ್ಕಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ತಾಸುಗಟ್ಟಲೆ ಒತ್ತೆ ಸೆರೆ ಇಟ್ಟುಕೊಂಡಿದ್ದರು.

ವರದಿಗಳ ಪ್ರಕಾರ ಭಯೋತ್ಪಾದಕರು ಶಾಲೆಯ ಬಳಿ ಇದ್ದ ವಾಹನವೊಂದಕ್ಕೆ ಬೆಂಕಿ ಹಚ್ಚಿ, ಬಳಿಕ ಸೇನಾ ಸಮವಸ್ತ್ರಗಳನ್ನು ಧರಿಸಿಕೊಂಡು ಶಾಲೆಯೊಳಕ್ಕೆ ಪ್ರವೇಶಿಸಿದರು. ಶಾಲೆಯ ಹಿಂಭಾಗದ ಖಬರಸ್ಥಾನದ ಮೂಲಕ ಆಗಮಿಸಿ ಹಿಂಬಾಗಿಲ ದ್ವಾರದಿಂದ ಅವರು ಶಾಲೆಯೊಳಕ್ಕೆ ನುಗ್ಗಿದರು ಎಂದು ಹೇಳಲಾಯಿತು.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಐಸಿಸ್ ಉಗ್ರಗಾಮಿಗಳು 15-12-2014ರಂದಷ್ಟೇ ನಡೆಸಿದ ದಾಳಿಯ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ ಪಾಕಿಸ್ತಾನದ ಪೇಷಾವರದಲ್ಲಿ ಸೈನಿಕ ಶಾಲೆಯಲ್ಲಿ ನಡೆದ ಈ ಭೀಭತ್ಸ ಕೃತ್ಯ ಜಗತ್ತನ್ನೇ ನಡುಗಿಸಿದೆ.

 (ಸುದ್ದಿ, ಫೋಟೋ ಕೃಪೆ: ವಿವಿಧ ಮೂಲಗಳು)

No comments:

Advertisement