170 ಶಾಸಕರ ಬೆಂಬಲ: ಬಿಜೆಪಿ ಪ್ರತಿಪಾದನೆ
ಮುಂಬೈ: ಮಹಾರಾಷ್ಟ್ರದಲ್ಲಿ 105 ಶಾಸಕರ ಸ್ವಂತ ಬಲವನ್ನು ಹೊಂದಿರುವ ಬಿಜೆಪಿಯು ಎನ್ ಸಿಪಿಯ 54 ಮತ್ತು 11 ಮಂದಿ ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 170 ಮಂದಿಯ ಬೆಂಬಲ ಪತ್ರಗಳೊಂದಿಗೆ ಶುಕ್ರವಾರ ತಡರಾತ್ರಿಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು 2019 ನವೆಂಬರ್
23ರ ಶನಿವಾರ ಪ್ರಕಟಿಸಿದರು.
ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು 288 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 145 ಸಂಖ್ಯಾಬಲವನ್ನು ಮೀರಿ 170 ಶಾಸಕರ ಬೆಂಬಲವನ್ನು ಅಂದರೆ 25 ಮಂದಿ ಹೆಚ್ಚಿನ ಶಾಸಕರ ಬೆಂಬಲವನ್ನು ಬಿಜೆಪಿ ಹೊಂದಿದೆ ಎಂದು ಅವರು ನುಡಿದರು.
ಪಕ್ಷಕ್ಕೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ನವೆಂಬರ್ 30ರವರೆಗೆ ಒಂದು ವಾರದ ಅವಧಿಯನ್ನು ರಾಜ್ಯಪಾಲರು ನೀಡಿದರು.
ಬಿಜೆಪಿ ಜೊತೆಗೆ ಕೈಜೋಡಿಸಿದ ತಮ್ಮ ಅಳಿಯ ಹಾಗೂ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ನಿರ್ಧಾರಕ್ಕೆ ಪಕ್ಷದ ಬೆಂಬಲ ಇಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು..
ಅಜಿತ್ ಪವಾರ್ ಅವರು ಅಕ್ಟೋಬರ್ 30ರಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನೂತನ ಶಾಸಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದರು.
ಅಜಿತ್ ಪವಾರ್ ಅವರು ತಮ್ಮ ಪಕ್ಷದ
ಎಲ್ಲ ಶಾಸಕರ ಬೆಂಬಲಪತ್ರಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿತು. ಪಕ್ಷದಿಂದ ಉಚ್ಚಾಟಿಸದ ಹೊರತು, ಪಕ್ಷದ ಎಲ್ಲ 54 ಮಂದಿ ಶಾಸಕರಿಗೆ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ ತಮ್ಮ ನಡೆಯನ್ನು ಅನುಸರಿಸುವಂತೆ ವಿಪ್ ನೀಡುವ ಅಧಿಕಾರ ಅಜಿತ್ ಪವಾರ್ ಅವರಿಗೆ ಇದೆ.
‘ನಾವು ರಾಜ್ಯಪಾಲರಿಗೆ ನಮ್ಮ ಪಕ್ಷದ ಶಾಸಕರ ಹೊರತಾಗಿ, ಎನ್ ಸಿಪಿಯ 54 ಶಾಸಕರು ಮತ್ತು 11 ಪಕ್ಷೇತರ ಶಾಸಕರ ಬೆಂಬಲ ಪತ್ರಗಳನ್ನು ನೀಡಿದ್ದೇವೆ. ಎನ್ ಸಿಪಿಯೇನಾದರೂ ವಿಭಜನೆಯಾದಲ್ಲಿ 30ಕ್ಕೂ ಹೆಚ್ಚು ಶಾಸಕರು ಅಜಿತ್ ಪವಾರ್ ಮತ್ತು ನಮ್ಮನ್ನು ಬೆಂಬಲಿಸುವ ವಿಶ್ವಾಸ ನಮಗಿದೆ. ಅಲ್ಲದೆ ಬದಲಾದ ಸನ್ನಿವೇಶದಲ್ಲಿ ಬಹುತೇಕ ಪಕ್ಷೇತರ ಶಾಸಕರ ಬೆಂಬಲ ನಮಗೆ ಲಭಿಸುತ್ತದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬಿಜೆಪಿಯ ಹಿರಿಯ ನಾಯಕ ಹೇಳಿದರು.
ತಮ್ಮ ಸರ್ಕಾರವನ್ನು ಬೆಂಬಲಿಸುವ ಬಗೆಗಿನ ಮಾತುಕತೆಗಳ ಬಗ್ಗೆ ಶರದ್ ಪವಾರ್ ಅವರಿಗೆ ಮಾಹಿತಿ ನೀಡಲಾಗಿರಲಿಲ್ಲ ಎಂದು ಬಿಜೆಪಿ ನಾಯಕ ನುಡಿದರು.
ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಪಡೆಯಲು ಒಂದು ವಾರದ ಸಮಯ ಬೇಕಾದಷ್ಟಾಯಿತು ಎಂದು
ಅವರು ಹೇಳಿದರು.
ಶನಿವಾರ ನಸುಕಿನ
ಅಜಿತ್ ಪವಾರ್ ದಂಗೆಯಿಂದ ಶಿವಸೇನೆಗೆ ದೊಡ್ಡ ಹಿನ್ನಡೆಯಾಯಿತು.
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸುಮಾರು 29 ಮಂದಿ ಪಕ್ಷೇತರ ಮತ್ತು ಸಣ್ಣ ಪಕ್ಷಗಳ ಪ್ರತಿನಿಧಿಗಳು ಚುನಾಯಿತರಾಗಿದ್ದಾರೆ. ಸೈದ್ಧಾಂತಿಕ ವಿರೋಧ ಹೊಂದಿರುವ ಏಐಎಂಐಎಂ ಮತ್ತು ಸಮಾಜವಾದಿ ಪಕ್ಷಗಳ ತಲಾ ಇಬ್ಬರು ಸದಸ್ಯರನ್ನು ಹೊರತು ಪಡಿಸಿ ಉಳಿದ ಎಲ್ಲರ ಬೆಂಬಲ ತಮಗೆ ಸಿಗುವುದು ಎಂಬ ನಿರೀಕ್ಷೆಯನ್ನು ಈಗ ಬಿಜೆಪಿ ಹೊಂದಿದೆ.
No comments:
Post a Comment