Tuesday, November 12, 2019

ಎನ್‌ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನ

 ಎನ್ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನ
ಬೆಂಬಲ ತಡೆ ಹಿಡಿದ ಕಾಂಗ್ರೆಸ್, ಠಾಕ್ರೆ ಮುಖ್ಯಮಂತ್ರಿ ಕನಸು ಭಗ್ನ
ನವದೆಹಲಿ/ ಮುಂಬೈ: ರಾಜಕೀಯ ಕಗ್ಗಂಟಿನಲ್ಲಿ ಸಿಲುಕಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಬೆಂಬಲಪತ್ರ ಸಲ್ಲಿಸಲು ವಿಫಲಗೊಂಡ ಶಿವಸೇನೆಗೆ ಇನ್ನೂ ಮೂರು ದಿನಗಳ ಕಾಲಾವಕಾಶ ನೀಡಲು ನಿರಾಕರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ೨೮೮ ಸದಸ್ಯಬಲದ ವಿಧಾನಸಭೆಯಲ್ಲಿ ೩ನೇ ದೊಡ್ಡ ಪಕ್ಷವಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ  (ಎನ್ಸಿಪಿ) ಸರ್ಕಾರ ರಚಿಸುವಂತೆ 2019 ನವೆಂಬರ್ 11ರ ಸೋಮವಾರ ಆಹ್ವಾನ ನೀಡಿದರು.

ಸರ್ಕಾರ ರಚನೆಯ ಹಕ್ಕು ಮಂಡಿಸಲು ಮಂಗಳವಾರ ರಾತ್ರಿ .೩೦ರವರೆಗೆ ರಾಜ್ಯಪಾಲರು ಕಾಲಾವಕಾಶ ನೀಡಿದ್ದಾರೆ ಎಂದು ಎನ್ಸಿಪಿ ನಾಯಕ ಜಯಂತ್ ಪಾಟೀಲ್ ತಿಳಿಸಿದರು.
ಶಿವಸೇನಾ ನಾಯಕರ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ತಮ್ಮ ಇಚ್ಛೆಯನ್ನು ವ್ಯಕ್ತ ಪಡಿಸಿತು. ಆದಾಗ್ಯೂ, ಅವರು ಅಗತ್ಯವಾದ ಬೆಂಬಲದ ಪತ್ರವನ್ನು ಸಲ್ಲಿಸಲಿಲ್ಲ.
ಅಲ್ಲದೆ, ಬೆಂಬಲ ಪತ್ರಗಳನ್ನು ಸಲ್ಲಿಸುವ ಸಲುವಾಗಿ ಗಡುವನ್ನು ಮೂರು ದಿನಗಳ ಅವಧಿಗೆ ವಿಸ್ತರಿಸುವಂತೆ ಕೋರಿ ಪತ್ರ ಸಲ್ಲಿಸಿದರು. ಗಡುವನ್ನು ಇನ್ನಷ್ಟು ವಿಸ್ತರಿಸುವಲ್ಲಿ ತಮ್ಮ ಅಸಹಾಯಕತೆಯನ್ನು ರಾಜ್ಯಪಾಲರು ವ್ಯಕ್ತ ಪಡಿಸಿದರು ಎಂದು ರಾಜಭವನದ ಪ್ರಕಟಣೆ ತಿಳಿಸಿತು.

ಇದರೊಂದಿಗೆ ಉದ್ಧವ್ ಠಾಕ್ರೆ ಅವರ ‘ಮುಖ್ಯಮಂತ್ರಿ ಸ್ಥಾನ’ದ ಕನಸಿಗೆ ಹಿನ್ನಡೆಯಾಯಿತು.
ರಾಜ್ಯಪಾಲರಿಂದ ಆಹ್ವಾನ ಬಂದ ಬೆನ್ನಲ್ಲೆ ಮಾಧ್ಯಮಗಳ ಜೊತೆ ಮಾತನಾಡಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರು ತಾವು ಈಗಲೇ ಛಗನ್ ಭುಜಬಲ್, ಜಯಂತ ಪಾಟೀಲ್ ಮತ್ತಿತರ ನಾಯಕರ ಜೊತೆಗೆ ರಾಜ್ಯಪಾಲರನ್ನು ಮಾಡುವುದಾಗಿ ಪ್ರಕಟಿಸಿದರು.

ರಾಜ್ಯಪಾಲರು ಘನ ವ್ಯಕ್ತಿ. ಅವರು ಏಕೆ ಕರೆದಿದ್ದಾರೆ ಗೊತ್ತಿಲ್ಲ, ಈಗಲೇ ಮಾತನಾಡಲು ಹೋಗುತ್ತೇವೆಎಂದು ಅಜಿತ್ ಪವಾರ್ ಹೇಳಿದರು.

ಬಳಿಕ ಅಜಿತ್ ಪವಾರ್ ಮತ್ತು ಧನಂಜಯ್ ಮುಂಡೆ ಅವರು ರಾಜ್ಯಪಾಲರನ್ನು ಭೇಟಿ ಮಾಡುವ ಸಲುವಾಗಿ ರಾಜಭವನವನ್ನು ತಲುಪಿದರು.

ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರುರಾಜ್ಯಪಾಲರನು ನಮ್ಮನ್ನು ಕರೆದಿದ್ದಾರೆ. ನಮ್ಮ ಪಕ್ಷದ ನಿಯೋಗವೊಂದು ಅವರನ್ನು ಭೇಟಿ ಮಾಡಲಿದೆ. ಸರ್ಕಾರ ರಚಿಸುವಂತೆ ನಮಗೆ ಕರೆ ನೀಡಲಾಗಿದೆ. ರಾಜ್ಯಪಾಲರ ಪತ್ರದ ಪ್ರಕಾರ ನಾವು ಕಾಂಗ್ರೆಸ್ ಜೊತೆಗೆ ಚರ್ಚಿಸಿ ರಾಜ್ಯಕ್ಕೆ ಹೇಗೆ ಸ್ಥಿರ ಸರ್ಕಾರ ಒದಗಿಸಬಹುದು ಎಂಬುದಾಗಿ ಪರಿಶೀಲಿಸುತ್ತೇವೆಎಂದು ಹೇಳಿದರು.

ಮಧ್ಯೆ, ನಾವು ಇನ್ನೂ ಕಾಯುತ್ತಿದ್ದೇವೆ. ನಾಟಕ ಮುಗಿದಿಲ್ಲ. ಮಹಾರಾಷ್ಟ್ರದ ಜನತೆಗೆ ಯಾರು ಅವರ ಹಿತಕ್ಕಾಗಿ ದುಡಿಯತ್ತಿದ್ದಾರೆ ಮತ್ತು ಯಾರು ಅಧಿಕಾರಕ್ಕಾಗಿ ಹಸಿದಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ಮೂಲಗಳು ಪ್ರತಿಕ್ರಿಯಿಸಿವೆ.

ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಸಂಭಾವ್ಯ ಶಿವಸೇನಾ ಸರ್ಕಾರಕ್ಕೆ ತನ್ನ ಬೆಂಬಲವನ್ನು ಕಾಂಗ್ರೆಸ್ ಪಕ್ಷವು ತಡೆ ಹಿಡಿದಿದೆ.

ಬೆಳಗ್ಗಿನಿಂದ ಹಲವಾರು ಸುತ್ತುಗಳ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಪಕ್ಷವು ಕೊನೆಯ ಕ್ಷಣದಲ್ಲಿ, ಶಿವಸೇನೆ ಜೊತೆಗಿನ ಮೈತ್ರಿಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮಹಾರಾಷ್ಟ್ರದ ಮರಾಠಾ ನಾಯಕ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಜೊತೆಗೆ ಇನ್ನಷ್ಟು ಮಾತುಕತೆ ಅಗತ್ಯವಿದೆ ಎಂದು ಘೋಷಿಸಿತು.

ಇದೇ ವೇಳೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಭೇಟಿ ಮಾಡಿದ ಶಿವಸೇನಾ ನಿಯೋಗವು ತಾನು ಸರ್ಕಾರ ರಚಿಸಲು ಇಚ್ಛಿಸಿರುವುದಾಗಿಯೂ, ಅದಕ್ಕೆ ೪೮ ಗಂಟೆಗಳ ಕಾಲಾವಕಾಶ ನೀಡಬೇಕೆಂದೂ ಕೋರಿತು. ಆದರೆ ರಾಜ್ಯಪಾಲರು ಕಾಲಾವಕಾಶ ನೀಡಲು ನಿರಾಕರಿಸಿದರು.

ಭಾರತೀಯ ಜನತಾ ಪಕ್ಷವು ಸಂಖ್ಯಾಬಲದ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ನಿರಾಕರಿಸಿದ ಬಳಿಕ ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿ, ಸೋಮವಾರ ಸಂಜೆ .೩೦ರ ಒಳಗಾಗಿ ತನ್ನ ಪ್ರತ್ರಿಕ್ರಿಯೆ ನೀಡುವಂತೆ ಸೂಚಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷರು (ಸೋನಿಯಾ ಗಾಂಧಿ) ಶರದ್ ಪವಾರ್ ಜೊತೆಗೆ ಮಾತನಾಡಿದ್ದಾರೆ. ಪಕ್ಷವು ಎನ್ಸಿಪಿ ಜೊತೆಗೆ ಇನ್ನಷ್ಟು ಮಾತುಕತೆ ನಡೆಸಲಿದೆಎಂದು ಕಾಂಗ್ರೆಸ್ ಪಕ್ಷವು ಸೇನೆಗೆ ಬೆಂಬಲ ನೀಡಿಕೆ ಸಂಬಂಧವಾಗಿ ನಡೆಸಿದ ಸುದೀರ್ಘ ಮಾತುಕತೆಗಳ ಬಳಿಕ ಕೊನೆ ಕ್ಷಣದಲ್ಲಿ ಬಿಡುಗಡೆ ಮಾಡಿದ ೪೩ ಪದಗಳ ಸಂಕ್ಷಿಪ್ತ ಹೇಳಿಕೆ ತಿಳಿಸಿತು.

ಸೋನಿಯಾ ಗಾಂಧಿಯವರು ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂಬುದಾಗಿ ಮುಂಬೈಯಿಂದ ಬರುತ್ತಿದ್ದ ಹಿಂದಿನ ವರದಿಗಳಿಗೆ ಹೇಳಿಕೆ ವಿರುದ್ಧವಾಗಿತ್ತು. ಎನ್ಸಿಪಿಯು ಇನ್ನೂ ಶಿವಸೇನೆಗೆ ಬೆಂಬಲಪತ್ರ ನೀಡದೇ ಇರುವುದರಿಂದ ಅವರ ಜೊತೆಗೆ ಇನ್ನಷ್ಟು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್ಸಿನ ಇಬ್ಬರು ಪ್ರತಿನಿಧಿಗಳು ಶರದ್ ಪವಾರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು.

ಮಧ್ಯೆ, ರಾಜ್ಯಪಾಲರು ನೀಡಿದ್ದ ಸರ್ಕಾರ ರಚನೆಯ ಗಡುವು ಮುಗಿಯುವುದಕ್ಕೆ ಸ್ವಲ್ಪ ಮುಂಚಿತವಾಗಿ ಸೇನಾ ನಾಯಕ ಆದಿತ್ಯ ಠಾಕ್ರೆ ಅವರ ಇತರ ಪಕ್ಷಗಳ ನಾಯಕರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದರು.

ಸೇನೆಯು ಸರ್ಕಾರ ರಚನೆಯ ತನ್ನ ಇಚ್ಛೆಯನ್ನು ವ್ಯಕ್ತ ಪಡಿಸಿತು ಮತ್ತು ಅದಕ್ಕಾಗಿ ೪೮ ಗಂಟೆಗಳ ಕಾಲಾವಕಾಶವನ್ನು ಕೋರಿತು. ರಾಜ್ಯಪಾಲರನ್ನು ಭೇಟಿ ಮಾಡಿ ಹೊರಬಂದ ಬಳಿಕ ಆದಿತ್ಯ ಠಾಕ್ರೆ ಅವರು ಸರ್ಕಾರ ರಚನೆಯ ಹಕ್ಕುಮಂಡನೆಯನ್ನು  ರಾಜ್ಯಪಾಲರು ನಿರಾಕರಿಸಿಲ್ಲ, ಆದರೆ ೪೮ ಗಂಟೆಗಳ ಕಾಲಾವಕಾಶ ನೀಡುವಂತೆ ಮಾಡಿದ ಕೋರಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಇದಕ್ಕೆ ಮುನ್ನ ಇಡೀ ದಿನ ಗರಿಗೆದರಿದ ರಾಜಕೀಯ ಚಟುವಟಿಕೆಗಳ ಮಧ್ಯೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ನಿವಾಸ ಮಾತೋಶ್ರೀ ಬದಲಿಗೆ ಹೋಟೆಲ್ ಒಂದರಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ಮಾತುಕತೆ ನಡೆಸಿದ್ದರು.

ಮಾತುಕತೆಗಳ ಬಳಿಕ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೂ ಮಾತುಕತೆ ನಡೆಸಿದ್ದರು. ಮಾತುಕತೆಯ ವೇಳೆಯಲ್ಲಿ ಸೋನಿಯಾ ಗಾಂಧಿ ಅವರುಪುನಃ ಕರೆ ಮಾಡುವುದಾಗಿಠಾಕ್ರೆ ಅವರಿಗೆ ತಿಳಿಸಿದರು ಎಂದು ವರದಿಗಳು ಹೇಳಿದ್ದವು.

ಕಾಂಗ್ರೆಸ್ ಪಕ್ಷದ ನಾಯಕರು ಎರಡು ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಕಾಂಗ್ರೆಸ್ ಪಕ್ಷವು ಶಿವಸೇನೆ-ಎನ್ಸಿಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ ಎಂಬ ವರದಿಗಳು ಬಂದವು. ಆದರೆ ಕಾಂಗ್ರೆಸ್ ಪಕ್ಷದಿಂದಾಗಲೀ, ಎನ್ಸಿಪಿಯಿಂದಾಗಲೀ ಶಿವಸೇನೆಗೆ ಅಗತ್ಯ ಬೆಂಬಲಪತ್ರಗಳು ಲಭಿಸಲಿಲ್ಲ.

ಮಧ್ಯಾಹ್ನ ೨ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಶಿವಸೇನಾ ಮುಖ್ಯಸ್ಥ ಠಾಕ್ರೆ ನಿರ್ಧರಿಸಿದ್ದರು. ಆದರೆ ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ತೀರ್ಮಾನ ಸ್ಪಷ್ಟವಾಗದ ಹಿನ್ನೆಲೆಯಲ್ಲಿ ರಾಜ್ಯಪಾಲರ ಭೇಟಿಯನ್ನು ಸಂಜೆ ಗಂಟೆಗೆ ಮುಂದೂಡಿದ್ದರು.

ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ ಬಳಿಕ ರಾತ್ರಿ .೩೦ರ ಗಡುವಿನ ಒಳಗಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು.

೨೮೮ ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ೧೦೫ ಸ್ಥಾನ ಗಳಿಸಿರುವ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದೆ. ೫೬ ಸ್ಥಾನ ಗೆದ್ದಿರುವ ಶಿವಸೇನೆ ಎರಡನೇ ದೊಡ್ಡ ಪಕ್ಷವಾಗಿದೆ. ೫೪ ಸ್ಥಾನಗಳನ್ನು  ಗೆದ್ದಿರುವ ಎನ್ಸಿಪಿ ಮೂರನೇ ದೊಡ್ಡ ಪಕ್ಷವಾಗಿದೆ. ೪೪ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ೪ನೇ ದೊಡ್ಡ ಪಕ್ಷವಾಗಿದೆ. ಸರ್ಕಾರ ರಚನೆಗೆ ಬೇಕಾದ ಬಹುಮತದ ಮ್ಯಾಜಿಕ್ ಸಂಖ್ಯೆ ೧೪೫.

No comments:

Advertisement