Tuesday, November 12, 2019

ಸುಪ್ರೀಂಕೋರ್ಟಿಗೆ ಶಿವಸೇನೆ, ಬುಧವಾರ ವಿಚಾರಣೆ

ಸುಪ್ರೀಂಕೋರ್ಟಿಗೆ ಶಿವಸೇನೆ, ಬುಧವಾರ ವಿಚಾರಣೆ
ನವದೆಹಲಿ: ಮಹಾರಾಷ್ಟ್ರದಲ್ಲಿ 2019 ನವೆಂಬರ್ 12ರ ಮಂಗಳವಾರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿದ್ದಂತೆಯೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯುಕಾಲಾವಕಾಶ ನಿರಾಕರಿಸಿದರಾಜ್ಯಪಾಲರ ನಡೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲನ್ನು ಏರಿದ್ದು, ಅರ್ಜಿಯು 2019 ನವೆಂಬರ್ 13ರ ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರ ಮುಂದೆ ವಿಚಾರಣೆಗೆ ಬರಲಿದೆ.

ಸುಪ್ರೀಂಕೋರ್ಟ್ ರಿಜಿಸ್ಟ್ರಿಯು ಬುಧವಾರ ಬೆಳಗ್ಗೆ ಸಿಜೆಐ ಅವರ ಎದುರು ಅರ್ಜಿಯನ್ನು ಪ್ರಸ್ತಾಪಿಸುವಂತೆ ಶಿವಸೇನಾ ವಕೀಲರಿಗೆ ಈದಿನ ಸೂಚಿಸಿತು.
ಮುಂದಿನ ಸರ್ಕಾರ ರಚನೆಯ ಸಂಬಂಧವಾಗಿ ಬೆಂಬಲ ಪತ್ರಗಳನ್ನು ಸಲ್ಲಿಸಲು ಮಾಡಲಾದ ಹೆಚ್ಚಿನ ಕಾಲಾವಕಾಶದ ಕೋರಿಕೆಯನ್ನು 2019 ನವೆಂಬರ್ 11ರ ಸೋಮವಾರ ರಾತ್ರಿ  ತಿರಸ್ಕರಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಡೆಯನ್ನು ಪ್ರಶ್ನಿಸಿ ಪಕ್ಷವು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತು.
ಈದಿನವೇ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಸಲುವಾಗಿ ಪೀಠ ರಚಿಸಲು ಸಾಧ್ಯವಿಲ್ಲ ಎಂಬುದಾಗಿ ಶಿವಸೇನಾ ವಕೀಲರಿಗೆ ತಿಳಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಿಯು ಬುಧವಾರ ಬೆಳಗ್ಗೆ ಸಿಜೆಐ ಅವರ ಪೀಠದ ಮುಂದೆ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿತು.

ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ನ್ಯಾಯಾಲಯದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸುವಂತೆ ನಮಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಮಂಗಳವಾರ ತುರ್ತಾಗಿ ಪೀಠ ರಚಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನಮಗೆ ತಿಳಿಸಿದೆಎಂದು ಶಿವಸೇನಾ ವಕೀಲರು ಮಾಧ್ಯಮಗಳಿಗೆ ತಿಳಿಸಿದರು.
ಮಧ್ಯೆ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಪ್ರಶ್ನಿಸಿ ಹೊಸ/ ಎರಡನೇ ಅರ್ಜಿಯನ್ನು ಸಿದ್ಧ ಪಡಿಸಲಾಗುತ್ತಿದೆ. ಅದನ್ನು ಯಾವಾಗ ಸಲ್ಲಿಸಬೇಕು ಎಂಬ ಬಗ್ಗೆ ಬುಧವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಸೇನಾ ವಕೀಲರು ಹೇಳಿದರು.

ಮಹಾರಾಷ್ಟ್ರ ರಾಜ್ಯಪಾಲರು ಕೇಂದ್ರದ ಪರವಾಗಿ ಕೆಲಸ ಮಾಡುತ್ತಿದ್ದಾರೆಎಂದು ಸುಪ್ರೀಂಕೋರ್ಟಿನಲ್ಲಿ ಶಿವಸೇನೆಯನ್ನು ಪ್ರತಿನಿಧಿಸಿರುವ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.

ಯಾವುದೇ ರಾಜ್ಯದಲ್ಲಿ ರಾಜ್ಯಪಾಲರು ಕೇಂದ್ರದ ಪರವಾಗಿ ಕೆಲಸ ಮಾಡುತ್ತಾರೆ. ವಿಷಯ ಹಂತದಲ್ಲಿ ಬರುವುದಿಲ್ಲ. ನೀವು ಬಿಜೆಪಿ ಸರ್ಕಾರವನ್ನು ಬಯಸಿದಾಗ ನೀವು ಕಾಯುತ್ತೀರಿ, ಆದರೆ ಅದು ಯಾವುದೇ ಬೇರೆ ಪಕ್ಷವಾಗಿದ್ದಾಗ, ನೀವು ಕಾಯುವುದಿಲ್ಲ. ಹೀಗಾದರೆ ಜನರು ಏನು ಯೋಚಿಸಿಯಾರು ಮತ್ತು ಕಾನೂನಿನ ಗತಿ ಏನು?’ ಎಂದು ಸಿಬಲ್ ಪ್ರಶ್ನಿಸಿದರು.

ಇದಕ್ಕೆ ಮುನ್ನ, ಅರ್ಜಿಯಲ್ಲಿ ಕೆಲವೊಂದು ದೋಷಗಳಿವೆ, ಅವುಗಳನ್ನು ನಿವಾರಿಸಲು ವಕೀಲರೊಂದಿಗೆ ರಿಜಿಸ್ಟ್ರಿಯು ಸಮಾಲೋಚಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದವು.
ಸಿಜೆಐ ಅವರ ಮುಂದೆ ವಿಷಯವನ್ನು ಪ್ರಸ್ತಾಪಿಸುವ ನಿರ್ಧಾರವನ್ನು ದೋಷಗಳ ನಿವಾರಣೆ  ಬಳಿಕ ಮಾತ್ರವೇ ಕೈಗೊಳ್ಳಲು ಸಾಧ್ಯ ಎಂದು ಅಧಿಕಾರಿ ಹೇಳಿದ್ದರು.

ಕಾಲಾವಕಾಶ ನಿರಾಕರಿಸಿದ ರಾಜ್ಯಪಾಲರ ಕ್ರಮವು ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ ಎಂದು ವಕೀಲ ಕಪಿಲ್ ಸಿಬಲ್ ಹೇಳಿದರು.

ರಾಜ್ಯಪಾಲರು ಕಾಲಾವಕಾಶ ನೀಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದರ ವಿರುದ್ಧ ನಾವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ನಾವು ಮೂರು ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದೆವು. ಆದರೆ ಅದನ್ನು ನಿರಾಕರಿಸಲಾಯಿತು. ಹಕ್ಕು ಮಂಡನೆಯನ್ನೇ ಮಾಡದ ಬಿಜೆಪಿಗೆ ೪೮ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ನಮಗೆ ಕೇವಲ ೨೪ ಗಂಟೆಗಳ ಕಾಲಾವಕಾಶ ನೀಡಲಾಯಿತು. ನಾವು ಹಕ್ಕು ಮಂಡನೆ ಮಾಡಿದ್ದೆವು ಮತ್ತು ಇತರ ಪಕ್ಷಗಳ ಬೆಂಬಲ ಪತ್ರ ಸಂಗ್ರಹಿಸಲು ಸಮಯ ಕೇಳಿದ್ದೆವು. ರಾಜ್ಯಪಾಲರ ಕ್ರಮ ಸಹಜ ನ್ಯಾಯದ ತತ್ವಗಳಿಗೆ ವಿರುದ್ಧವಾದದ್ದು. ನಾನು ಕಪಿಲ್ ಸಿಬಲ್ ಅವರ ಜೊತೆ ಮಾತನಾಡಿದ್ದೇನೆ. ಅವರು ವಿಷಯಕ್ಕೆ ಸಂಬಂಧಿಸಿದಂತೆ ನಮ್ಮನ್ನು ಪ್ರತಿನಿಧಿಸಲಿದ್ದಾರೆ ಎಂದು ಶಿವಸೇನಾ ವಿಧಾನಪರಿಷತ್ ಸದಸ್ಯ ಅನಿಲ್ ಪರಬ್ ಹೇಳಿದರು.

ಕೇಂದ್ರ ಸಚಿವ ಸಂಪುಟದಲ್ಲಿದ್ದ ತನ್ನ ಏಕೈಕ ಸಂಸದನನ್ನು ಶಿವಸೇನೆಯು ಸೋಮವಾರ ಹಿಂತೆಗೆದುಕೊಂಡಿತ್ತು ಮತ್ತು ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಆಶಯ ಇಟ್ಟುಕೊಂಡಿತ್ತು.

ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಪಕ್ಷದ ನಿಯೋಗ ಸೋಮವಾರ ರಾತ್ರಿ ರಾಜ್ಯಪಾಲರ ಬಳಿಗೆ ತೆರಳಿ ಸರ್ಕಾರ ರಚನೆಯ ಇಚ್ಛೆ ವ್ಯಕ್ತ ಪಡಿಸಿ, ಇತರ ಪಕ್ಷಗಳ ಬೆಂಬಲ ಪತ್ರ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ಕೋರಿತ್ತು. ಅದರೆ ರಾಜ್ಯಪಾಲರು ಅದನ್ನು ತಿರಸ್ಕರಿಸಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಸರ್ಕಾರ ರಚನೆಗೆ ಆಹ್ವಾನ ನೀಡಿ ಹಕ್ಕು ಮಂಡನೆಗೆ ೨೪ ಗಂಟೆಗಳ ಕಾಲಾವಕಾಶ ನೀಡಿದ್ದರು.

No comments:

Advertisement