Sunday, November 3, 2019

ದೆಹಲಿ ಮಾಲಿನ್ಯಕ್ಕೆ ಅಂಗೇಲಾ ಮರ್ಕೆಲ್ ಪರಿಹಾರ

ದೆಹಲಿ ಮಾಲಿನ್ಯಕ್ಕೆ  ಅಂಗೇಲಾ ಮರ್ಕೆಲ್ ಪರಿಹಾರ 
ಡೀಸೆಲ್ ಬಸ್ಸುಗಳ ಬದಲಿಗೆ ಎಲೆಕ್ಟ್ರಿಕ್ ಬಸ್ಸುಗಳ ಬಳಕೆ
ನವದೆಹಲಿ:  ರಾಷ್ಟ್ರದ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ವಿಷಮ ಸ್ಥಿತಿಗೆ ತಲುಪಿದ ಸಂದರ್ಭದಲ್ಲೇ ಕಾಕತಾಳೀಯವಾಗಿ ದೆಹಲಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಅವರು ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಪರಿವರ್ತಿಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟುವಂತೆ 2019 ನವೆಂಬರ್ 02ರ ಶನಿವಾರ ಇಲ್ಲಿ ಸಲಹೆ ಮಾಡಿದರು.

ಜರ್ಮನಿ - ಭಾರತ ಸಹಭಾಗಿತ್ವ ಯೋಜನೆಗಳ ಅಂಗವಾಗಿ ಭಾರತದಲ್ಲಿ ಪರಿಸರ ಮಿತ್ರ ಹಸಿರು ಸಂಚಾರಕ್ಕೆ ಮುಂದಿನ ಐದು ವರ್ಷಗಳಲ್ಲಿ ಒಂದು ಬಿಲಿಯನ್ ಯೂರೋ ಅಂದರೆ ಪ್ರಸ್ತುತ ವಿನಿಮಯ ದರದಲ್ಲಿ ಸುಮಾರು  ೮೦೦೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವುದಾಗಿ ವಚನ ನೀಡಿದರು.

ತಮಿಳುನಾಡಿನ ಬಸ್ಸುಗಳ ರಂಗದಲ್ಲಿ ಸುಧಾರಣೆಗಾಗಿಯೂ ನಾವು ೨೦೦ ಮಿಲಿಯನ್ ಯೂರೋಗಳನ್ನು ನಿಗದಿ ಪಡಿಸಿದ್ದೇವೆ. ದೆಹಲಿಯು ಶುಕ್ರವಾರ ಎದುರಿಸಿದ ವಾಯುಮಾಲಿನ್ಯವನ್ನು ಕಂಡ ಯಾರೇ ಆದರೂ ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಮಾರ್ಪಡಿಸುವುದು ಅತ್ಯುತ್ತಮ ಎಂದು ಅರಿತುಕೊಳ್ಳಬಲ್ಲರು ಎಂದು ಮರ್ಕೆಲ್ ಹೇಳಿದರು.

ರಾಷ್ಟ್ರೀಯ ರಾಜಧಾನಿ ಪ್ರದೇಶವು (ಎನ್ಸಿಆರ್) ಕಳೆದ ಎರಡು ವರ್ಷಗಳ ಅವಧಿಯಲ್ಲೇ ಅತ್ಯಂತ ಗರಿಷ್ಠ ವಾಯುಮಾಲಿನ್ಯವನ್ನು ಶುಕ್ರವಾರ ಅನುಭವಿಸಿತ್ತು. ವಾಯು ಗುಣಮಟ್ಟ ಸೂಚ್ಯಂಕವು ಸಂಜೆ ಗಂಟೆಯ ವೇಳೆಗೆ ೪೮೪ಕ್ಕೆ ತಲುಪಿತ್ತು.

ಗಾಳಿ ಬೀಸಿದ ಪರಿಣಾಮವಾಗಿ ಶನಿವಾರ ಬೆಳಗ್ಗೆ ವಾಯು ಗುಣಮಟ್ಟ ಸ್ವಲ್ಪ ಸುಧಾರಿಸಿದ್ದು, ’ತುರ್ತು ಸ್ಥಿತಿವಲಯದಿಂದ ರಾಷ್ಟ್ರೀಯ ರಾಜಧಾನಿ ಪ್ರದೇಶ ಹೊರಬಂದಿತು. ಆದರೂ ಮಾಲಿನ್ಯ ಮಟ್ಟವು ಇನ್ನೂ ಅದೇ ಪ್ರಮಾಣದಲ್ಲಿದ್ದುವಿಷಮಸ್ಥಿತಿಯಿಂದ ಪೂರ್ತಿ ಹೊರಬಂದಿಲ್ಲ. ನಗರವು ಶನಿವಾರ ಕೂಡಾ ದೂಳು ಮತ್ತು ಹೊಗೆಯ ಮೋಡದಿಂದ ಮಬ್ಬಾಗಿಯೇ ಇದೆ.

ಅಂಗೇಲಾ ಮರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿಯಲ್ಲಿ ಉಭಯ ರಾಷ್ಟ್ರಗಳ ನಡುವಣ ೫ನೇ ಅಂತರ್ ಸರ್ಕಾರೀ ಸಮಾಲೋಚನೆಗಳನ್ನು  ಬುಧವಾರ ನಡೆಸಿದರು ಮತ್ತು ವ್ಯಾಪಾರ, ಹೂಡಿಕೆ, ಪ್ರಾದೇಶಿಕ ಭದ್ರತೆ, ಹವಾಮಾನ ಬದಲಾವಣೆ, ರಕ್ಷಣೆ, ಕೃತಕ ಬುದ್ದಿಮತ್ತೆ ಇತ್ಯಾದಿ ಕ್ಷೇತ್ರಗಳಲ್ಲಿ ಹಲವಾರು ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದರು.

ಅಂಗೇಲಾ ಮಕೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ದ್ವಾರಕಾದಲ್ಲಿನ ಸೆಕ್ಟರ್ ೨೧ರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಇದೇ ದಿನ ಜರ್ಮನಿಗೆ ವಾಪಸಾಗುವರು.
ದ್ವಾರಕಾದ ಸೆಕ್ಟರ್ ೨೧ರ ಮೆಟ್ರೋ ನಿಲ್ದಾಣದ ಸೌರ ಫಲಕಗಳಿಗೆ ಜರ್ಮನ್ ಸರ್ಕಾರವೇ ಹಣ ಒದಗಿಸಿತ್ತು.

ತಮ್ಮ ರಾಷ್ಟ್ರವು ಭಾರತದ ಜೊತೆಗೆ ಮೂಲಸವಲತ್ತು ಯೋಜನೆಗಗಳು, ತ್ಯಾಜ್ಯ ನಿರ್ವಹಣೆ ಮತ್ತು ನೀರು ಸರಬರಾಜು ಕ್ಷೇತ್ರಗಳಲ್ಲಿ ಸಹಯೋಗವನ್ನು ಬಯಸುತ್ತದೆ ಎಂದು ಮರ್ಕೆಲ್ ಹೇಳಿದರು.
ಜರ್ಮನಿಯು ಯುರೋಪಿನಲ್ಲಿ ಭಾರತದ ಅತ್ಯಂತ ದೊಡ್ಡ ವ್ಯವಹಾರ ಪಾಲುದಾರ ದೇಶವಾಗಿದ್ದು, ,೭೦೦ಕ್ಕೂ ಹೆಚ್ಚು ಕಂಪೆನಿಗಳು ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

No comments:

Advertisement