Thursday, November 7, 2019

ಕರ್ತಾರಪುರ ಕಾರಿಡಾರ್: ಪಾಕ್ ಅಧಿಕೃತ ವಿಡಿಯೋದಲ್ಲಿ ಭಿಂದ್ರನ್‌ವಾಲೆ ಪೋಸ್ಟರ್!

ಕರ್ತಾರಪುರ ಕಾರಿಡಾರ್: ಪಾಕ್ ಅಧಿಕೃತ ವಿಡಿಯೋದಲ್ಲಿ ಭಿಂದ್ರನ್‌ವಾಲೆ ಪೋಸ್ಟರ್!
ನವದೆಹಲಿ: ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿವಾದಾತ್ಮಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್ ಮತ್ತು ಅಮ್ರಿಕ್ ಸಿಂಗ್ ಖಾಲ್ಸಾ ಅವರ ಭಿತ್ತಿಚಿತ್ರಗಳನ್ನು  (ಪೋಸ್ಟರ್) ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗಿದೆ.

೧೯೮೪ರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರನ್ನು ಹೊರದಬ್ಬಲು ಭಾರತೀಯ ಸೇನೆಯು ಸ್ವರ್ಣ ದೇಗುಲಕ್ಕೆ ನುಗ್ಗಿ ನಡೆಸಿದ್ದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಈ ಮೂರೂ ಮಂದಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಹತರಾಗಿದ್ದರು. ಇತರ ಉಗ್ರಗಾಮಿಗಳೊಂದಿಗೆ ಈ ಮೂವರು ಉಗ್ರನಾಯಕರು ಸ್ವರ್ಣದೇಗಲದೊಳಗೆ ಅಡಗಿ ಕುಳಿಸಿದ್ದರು.

ಈ ವರ್ಷ ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆ ವರ್ಷವಾಗಿದ್ದು, ಇದರ ಅಂಗವಾಗಿ ಕರ್ತಾರಪುರ ಕಾರಿಡಾರ್ ನಿರ್ಮಿಸುವ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿದ್ದವು. ಈ ಕಾರಿಡಾರ್ ಭಾರತದಲ್ಲಿರುವ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾನಕ್ ಮತ್ತು ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಪರಸ್ಪರ ಸಂಪರ್ಕಿಸುತ್ತದೆ. ಈ ಕಾರಿಡಾರ್ ಮೂಲಕ ಭಾರತೀಯ ಯಾತ್ರಿಕರಿಗೆ ೧೫೫೨ರಲ್ಲಿ ಸಿಖ್ ಪಂಥದ ಸಂಸ್ಥಾಪಕರಾದ ಗುರುನಾನಕ್ ಅವರು ನಿರ್ಮಿಸಿದ ಕರ್ತಾರಪುರ ಸಾಹಿಬ್ ಗೆ ವೀಸಾಮುಕ್ತ ಭೇಟಿಗೆ ಅವಕಾಶ ಕಲ್ಪಿಸುತ್ತದೆ.

ಮಾಹಿತಿ ಮತ್ತು ಪ್ರಸಾರ ಖಾತೆಗೆ ಸಂಬಂಧಿಸಿದ ಪಾಕಿಸ್ತಾನದ ಪ್ರಧಾನಿಯ ವಿಶೇಷ ಸಹಾಯಕಿ ಡಾ. ಫಿರ್ದೂಸ್ ಆಶಿಖ್ ಅವಾನ್ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿನ ಹಲವಾರು ಗುರುದ್ವಾರಗಳಿಗೆ ಭೇಟಿ ನೀಡುವ ದೃಶ್ಯಾವಳಿ ಇದ್ದು ಪ್ರಮುಖವಾಗಿ ಗುರುನಾನಕ್ ಅವರ ಜನ್ಮಸ್ಥಳವಾದ ಗುರುದ್ವಾರ ಜನಮ್ ಆಸ್ಥಾನ್, ನಾನ್‌ಕಾನ ಸಾಹಿಬ್‌ನ್ನು ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ನಾಯಕರ ಪೋಸ್ಟರ್ ಜೊತೆಗೆ ತೋರಿಸಲಾಗಿತ್ತು.

ಸಿಖ್ ಮತ್ತು ಮುಸ್ಲಿಮರ ನಡುವಣ ಸಾಮರಸ್ಯವನ್ನು ಸೂಚಿಸುವ ಈ ವಿಡಿಯೋ ಪಂಜಾಬಿನ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಮತ್ತು ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಅವರನ್ನೂ ತೋರಿಸಿದೆ.

ಇಸ್ಲಾಮಾಬಾದಿನಲ್ಲಿ ನಡೆದ ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಾ. ಫಿರ್ದೂಸ್  ಅವಾನ್ ’ಕರ್ತಾರಪುರ ಕಾರಿಡಾರ್ ಕಾರ್ಯಾರಂಭವು ಎಲ್ಲ  ಅಲ್ಪಸಂಖ್ಯಾತರಿಗೂ ರಕ್ಷಣೆ ಮತ್ತು ಸ್ವಾತಂತ್ರ್ಯ ಒದಗಿಸುವ ಪ್ರಧಾನಿ ಇಮ್ರಾನ್ ಖಾನ್ ಅವರ  ದೃಷ್ಟಿಯ ಅನುಷ್ಠಾನವಾಗಿದೆ ಎಂದು ಹೇಳಿದರು.

ಪಾಕಿಸ್ತಾನದ ಶಾಂತಿ ಮತ್ತು ಅಂತರ್ ಪಂಥೀಯ ಸಾಮರಸ್ಯದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಹಾಡು ಅತ್ಯಂತ ಮಹತ್ವದ್ದಾಗಲಿದೆ ಎಂದು ಆಕೆ ನುಡಿದರು.

‘ಇಸ್ಲಾಮಿನ ನೈಜ ಮುಖದ ಕುರಿತೂ ಇದು ಜಗತ್ತಿಗೆ ಸಂಜ್ಞೆ  ನೀಡಲಿದೆ. ಅಲ್ಲದೆ ನಮ್ಮ ರಾಷ್ಟ್ರದ ಪ್ರಬುದ್ಧ ಮತ್ತು ಮಧ್ಯಮ ವರ್ಚಸ್ಸಿನ ಪರಿಚಯವನ್ನೂ ನೀಡಲಿದೆ ಎಂದು ಫಿರ್ದೂಸ್ ಹೇಳಿದರು.

ಸಿಖ್ ಸಮುದಾಯ ನಾಗರಿಕ ಸಮಾಜದ ಹಲವಾರು ಪ್ರಮುಖ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನ ಸಿಖ್ ಮಂಡಳಿಯ ಅಧ್ಯಕ್ಷ ಸರ್ದಾರ್ ರಮೇಶ್ ಸಿಂಗ್ ಮತ್ತು ಸೆನೆಟರ್ ಅನ್ವರ್ ಲಾಲ್ ದೀನ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

No comments:

Advertisement