Tuesday, November 5, 2019

ತ್ಯಾಜ್ಯ ಸುಟ್ಟರೆ ಒಂದು ಲಕ್ಷ ರೂಪಾಯಿ ದಂಡ: ಸುಪ್ರೀಂ ಆದೇಶ

ತ್ಯಾಜ್ಯ ಸುಟ್ಟರೆ ಒಂದು ಲಕ್ಷ ರೂಪಾಯಿ ದಂಡ:
ಸುಪ್ರೀಂ ಆದೇಶ
ನವದೆಹಲಿ: ರಾಜಧಾನಿ ದೆಹಲಿ ಮತ್ತು ಉತ್ತರ ಭಾರತದ ಬಹಳಷ್ಟು ಕಡೆಗಳಲ್ಲಿ ವಾಯುಮಾಲಿನ್ಯವು ವಿಷಮ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು 2019 ನವೆಂಬರ್ 05ರ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ತ್ಯಾಜ್ಯ ಸುಟ್ಟರೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವಂತೆ ಆಜ್ಞಾಪಿಸಿತು.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ತ್ಯಾಜ್ಯಗಳನ್ನು ತಂದು ಸುರಿದವರಿಗೆ ೫೦೦೦ ರೂಪಾಯಿಗಳ ದಂಡ ವಿಧಿಸುವಂತೆಯೂ ಆದೇಶ ನೀಡಿದ ಸುಪ್ರೀಂಕೋರ್ಟ್ ಪೀಠವು, ತಾನು ಮುಂದಿನ ಆದೇಶ ನೀಡುವವರೆಗೆ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಬಾರದು ಎಂದೂ ಕಟ್ಟು ನಿಟ್ಟಿನ ಆಜ್ಞೆ ಮಾಡಿತು.

ವಿದ್ಯುತ್ ಜನರೇಟರ್‌ಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆಯೂ ಆಜ್ಞೆ ಮಾಡಿದ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಸಾರ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿತು.

ದೆಹಲಿಯ ವಾಯುಮಾಲಿನ್ಯ ವಿಷಯಕ್ಕೆ ಸಂಬಂಧಿಸಿದಂತೆ ನವೆಂಬರ್ ೬ರ ಬುಧವಾರ ಪೀಠವು ಮತ್ತೆ ವಿಚಾರಣೆ ನಡೆಸಲಿದೆ.

ಇದಕ್ಕೆ ಮುನ್ನ ದೆಹಲಿ ಮತ್ತು ಇತರ ಕಡೆಗಳಲ್ಲಿ ಪ್ರತಿವರ್ಷವೂ ವಾಯುಮಾಲಿನ್ಯ ಇದೇ ರೀತಿ ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದ ಸುಪ್ರೀಂಕೋರ್ಟ್, ಸಮಸ್ಯೆ ಬಗೆ ಹರಿಸಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಒಂದಿಷ್ಟೂ ಕಾಳಜಿ ಇಲ್ಲ. ಕೇವಲ ಬೂಟಾಟಿಕೆ (ಗಿಮಿಕ್) ಮಾಡುತ್ತಾ ಕಾಲ ತಳ್ಳುತ್ತಿವೆ ಎಂದು ಚಾಟಿ ಬೀಸಿತು.

ಒಂದು ಹಂತದಲ್ಲಿ ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್‍ಯದರ್ಶಿ ತತ್ ಕ್ಷಣವೇ ತನ್ನ ಮುಂದೆ ಹಾಜರಾಗಬೇಕು ಎಂದು ಪೀಠ ಖಡಕ್ ನಿರ್ದೇಶನ ನೀಡಿತು. ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ರಾಜ್ಯದ ಹೆಚ್ಚುವರಿ ಮುಖ್ಯಕಾರ್‍ಯದರ್ಶಿ ಬುಧವಾರ ನ್ಯಾಯಾಲಯದಲ್ಲಿ ಹಾಜರಾಗುವರು ಎಂದು ಹರಿಯಾಣದ ಪರ ವಕೀಲರು ತಿಳಿಸಿದರು. ಅದಕ್ಕೆ ಅಸಮಾಧಾನ ಸೂಚಿಸಿದ ಪೀಠ, ’ಮುಖ್ಯ ಕಾರ್‍ಯದರ್ಶಿ ಇಲ್ಲಿ ಇರಬೇಕು ಎಂದರೆ ಇಲ್ಲಿ ಇರಬೇಕು ಅಷ್ಟೆ. ಇಲ್ಲದೇ ಇದ್ದರೆ ನಾವು ನಿಮ್ಮ ವಿಧಾನಸಭೆಯನ್ನೆ ಮುಂದೂಡುತ್ತೇವೆ ಎಂದು ಹೇಳಿತು.

ಈ ಮಧ್ಯೆ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳು ಕಳೆದ ಕೆಲವು ವರ್ಷಗಳಿಂದ ರೈತರಿಗೆ ಕೊಯ್ದ ಪೈರಿನ ಕೂಳೆಯನ್ನು ಸುಡುವ ಬದಲು ಕತ್ತರಿಸುವ ಮೂಲಕ ವಿಲೇವಾರಿ ಮಾಡುವುದನ್ನು ಪ್ರೋತ್ಸಾಹಿಸಲು ಕೂಳೆ ಕತ್ತರಿ ಉಪಕರಣಗಳ ಖರೀದಿಗಾಗಿ ೧,೧೦೦ ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

No comments:

Advertisement