ದೆಹಲಿ ಮಾಲಿನ್ಯ:
ಕೊಯ್ದ ಪೈರಿನ
ಕೂಳೆ ಸುಡದ ರೈತರಿಗೆ ಪ್ರೋತ್ಸಾಹ ಧನ
ಕೂಳೆ ಸುಡದ ರೈತರಿಗೆ ಪ್ರೋತ್ಸಾಹ ಧನ
ಸುಪ್ರೀಂಕೋರ್ಟ್
ಆದೇಶ, ’ದಂತ ಗೋಪುರ’ವಾಸಿ ಅಧಿಕಾರಿಗಳಿಗೆ ತರಾಟೆ
ನವದೆಹಲಿ: ವಾಯುಮಾಲಿನ್ಯದಿಂದ ಜನರು ಸಾಯುತ್ತಿರುವಾಗ
ನೀವು ’ದಂತಗೋಪುರ’ಗಳಲ್ಲಿ ವಾಸಿಸುತ್ತಿದ್ದೀರಿ’ ಎಂದು 2019 ನವೆಂಬರ್ 06ರ ಬುಧವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ
ಸುಪ್ರೀಂಕೋರ್ಟ್, ಕೊಯ್ದ ಪೈರಿನ ಕೂಳೆ ಸುಡದ ಪಂಜಾಬ್,
ಹರಿಯಾಣ ಮತ್ತು ಉತ್ತರ ಪ್ರದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಏಳು ದಿನಗಳ ಒಳಗಾಗಿ ಕ್ವಿಂಟಲ್‌ಗೆ
ತಲಾ ೧೦೦ ರೂಪಾಯಿಗಳ ಪ್ರೋತ್ಸಾಹಧನವನ್ನು ವಿತರಣೆ
ಮಾಡುವಂತೆ ಸರ್ಕಾರಗಳಿಗೆ ಆದೇಶ ನೀಡಿತು.
ವಾಯುಮಾಲಿನ್ಯ
ಅತಿಯಾದ ಮಟ್ಟಕ್ಕೆ ಏರಿದ ಪರಿಣಾಮವಾಗಿ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್)
ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ
ಪೈರಿನ ಕೂಳೆ ಸುಡುತ್ತಿರುವುದರಿಂದ ದೆಹಲಿಯ ವಾಯುಮಾಲಿನ್ಯ ಹದಗೆಟ್ಟಿದೆ ಎಂದು ಆಮ್ ಆದ್ಮಿ ಪಕ್ಷದ
(ಎಎಪಿ) ಸರ್ಕಾರ ಹೇಳಿತ್ತು.
ರೈತರಿಗೆ ಬಾಡಿಗೆ
ಆಧಾರದಲ್ಲಿ ಕೂಳೆ/ ತ್ಯಾಜ್ಯ ಕತ್ತರಿಸುವ/ ಪುಡಿಮಾಡುವ ಯಂತ್ರಗಳನ್ನು ಒದಗಿಸುವಂತೆಯೂ ರಾಜ್ಯ ಸರ್ಕಾರಗಳಿಗೆ
ಆದೇಶ ನೀಡಿದ ಸುಪ್ರೀಂಕೋರ್ಟ್ ಯಂತ್ರಗಳನ್ನು ಬಾಡಿಗೆಗೆ ತರಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು
ಸ್ವತಃ ಭರಿಸುವಂತೆ ಸರ್ಕಾರಗಳಿಗೆ ಆಜ್ಞಾಪಿಸಿತು. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕತ್ತರಿಸುವ/
ಪುಡಿಮಾಡುವ ಯಂತ್ರಗಳು ಲಭಿಸುವಂತೆ ಖಾತರಿ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೋರ್ಟ್ ಹೇಳಿತು.
ರೈತರಿಗೆ ತತ್‌ಕ್ಷಣ
ಹಣ ವಿತರಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್ ಪೀಠವು, ಈ ಹೊರೆಯನ್ನು
ರಾಜ್ಯಗಳು ಭರಿಸಬೇಕೆ ಅಥವಾ ಕೇಂದ್ರ ಭರಿಸಬೇಕೆ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಮುಂದಕ್ಕೆ ಮಾಡಲಾಗುವುದು
ಎಂದು ಹೇಳಿತು. ಕೇಂದ್ರ ಸರ್ಕಾರದಿಂದ ಹಣ ವಿತರಣೆ ಆಗುವವರೆಗೆ ರಾಜ್ಯಗಳು ಕಾಯಬಾರದು ಎಂದು ಸುಪ್ರೀಂಕೋರ್ಟ್
ಸ್ಪಷ್ಟ ಪಡಿಸಿತು.
ಪರಿಸರ ವಿಷಯಗಳ
ಬಗ್ಗೆ ಎಚ್ಚರಿಕೆ ವಹಿಸುವ ಬಗ್ಗೆ ಮೂರು ತಿಂಗಳುಗಳ ಒಳಗಾಗಿ ಸಮಗ್ರ ಯೋಜನೆಯೊಂದನ್ನು ಸಿದ್ಧ ಪಡಿಸುವಂತೆ
ಕೂಡಾ ಕೇಂದ್ರ ಸರ್ಕಾರ ಮತ್ತು ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ದೆಹಲಿ ರಾಜ್ಯ ಸರ್ಕಾರಗಳಿಗೆ
ಪೀಠವು ನಿರ್ದೇಶನ ನೀಡಿತು.
‘ತನ್ನ ಹೊಣೆಗಾರಿಕೆಯನ್ನು
ನಿಭಾಯಿಸಲು ಹಣದ ಕೊರತೆ ಯಾವುದೇ ಸರ್ಕಾರಕ್ಕೆ ನೆಪವಾಗಬಾರದು’ ಎಂದು
ಕಟ್ಟಪ್ಪಣೆ ಮಾಡಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ ಮತ್ತು ದೀಪಕ್ ಗುಪ್ತ ಅವರ ಪೀಠ, ’ಕೃಷಿಯು ದೇಶದ
ಬೆನ್ನೆಲುಬು ಮತ್ತು ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲೇಬೇಕು. ಹಣವಿಲ್ಲ
ಎಂಬುದು ಅವರನ್ನು ನಿರ್ಲಕ್ಷಿಸಲು ಸರ್ಕಾರಕ್ಕೆ ನೆಪವಾಗಬಾರದು’ ಎಂದು ಕಟ್ಟು ನಿಟ್ಟಾಗಿ ಹೇಳಿತು.
ರೈತರಿಗೆ ಪ್ರೋತ್ಸಾಹ
ಧನ ಒದಗಿಸಿ, ಮುಕ್ತ ವೆಚ್ಚದಲ್ಲಿ ಕತ್ತರಿಸುವ/ ಪುಡಿ ಮಾಡುವ ಯಂತ್ರಗಳೊಂದಿಗೆ ಅವರನ್ನು ಸಜ್ಜುಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಆಜ್ಞಾಪಿಸಿದ ಕೋರ್ಟ್ ’ರೈತರನ್ನು
ಶಿಕ್ಷಿಸುವುದು ಅಂತಿಮ ಪರಿಹಾರವಲ್ಲ’ ಎಂದು ಹೇಳಿತು.
ರಾಜಧಾನಿಯಲ್ಲಿ
ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾದುದಕ್ಕಾಗಿ ದೆಹಲಿ ಸರ್ಕಾರವನ್ನೂ ನ್ಯಾಯಾಲಯ ಟೀಕಿಸಿತು. ನ್ಯಾಯಾಲಯ
ನೇಮಿಸಿದ ನಿಗಾ ಸಮಿತಿ ಇಲ್ಲದೇ ಹೋಗಿದ್ದರೆ, ಅಧಿಕಾರಿಗಳು ಈ ವೇಳಗೆ ನಗರವನ್ನು ’ಮುಗಿಸಿ ಬಿಡುತ್ತಿದ್ದರು’ ಎಂದು ಪೀಠ ಹೇಳಿತು.
ದೆಹಲಿಯ ಮುಖ್ಯಕಾರ್ಯದರ್ಶಿಯನ್ನು
ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮಿಶ್ರ, ’ರಸ್ತೆಯ ದೂಳು, ನಿರ್ಮಾಣ ಮತ್ತು ನಾಶ ಅಥವಾ ತ್ಯಾಜ್ಯ
ಸುರಿಯುವಿಕೆಯನ್ನು ನಿಯಂತ್ರಿಸಲು ಆಗದೇ ಇದ್ದರೆ ನೀವು ಈ ಹುದ್ದೆಯನ್ನು ಏಕೆ ಹೊಂದಿದ್ದೀರಿ?’ ಎಂದು ಪ್ರಶ್ನಿಸಿದರು.
ತಡೆಯಾಜ್ಞೆ
ಇದ್ದರೂ ರಾಷ್ಟ್ರದ ರಾಜಧಾನಿಯಲ್ಲಿ ಇನ್ನೂ ನಿರ್ಮಾಣ ಚಟುವಟಿಕೆಗಳು ಮುಂದುವರೆಯುತ್ತಿರುವುದು ಹೇಗೆ?
ಎಂದು ಪೀಠ ಅಚ್ಚರಿ ವ್ಯಕ್ತ ಪಡಿಸಿತು. ’ನಿರ್ಮಾಣ
ಚಟುವಟಿಕೆಗಳು ದೆಹಲಿಯಲ್ಲಿ ಇನ್ನೂ ನಡೆಯುತ್ತಲೇ ಇವೆ. ಮಾಲಿನ್ಯದ ಮಟ್ಟವನ್ನು ನೋಡಿ. ಉಲ್ಲಂಘನಕಾರರ
ವಿರುದ್ಧ ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ನ್ಯಾಯಮೂರ್ತಿ ಮಿಶ್ರ ಸೂಚಿಸಿದರು.
ಉತ್ತಮ ಮೂಲಸವಲತ್ತು
ಮತ್ತು ಅಭಿವೃದ್ಧಿಗಾಗಿ ವಿಶ್ವಬ್ಯಾಂಕಿನಿಂದ ಬರುತ್ತಿರುವ ಹಣ ಏನಾಗುತ್ತಿದೆ? ಎಂದು ಪೀಠ ಪ್ರಶ್ನಿಸಿತು.
‘ಅಷ್ಟೊಂದು
ಹಣ ಬಂದಿದೆ. ಸ್ಮಾರ್ಟ್ ಸಿಟಿಯ ಕಲ್ಪನೆ ಎಲ್ಲಿಗೆ ಹೋಯಿತು? ರಸ್ತೆಗಳು ಏಕೆ ಇನ್ನೂ ಸುಧಾರಣೆ ಆಗಿಲ್ಲ?
ಎಂದು ಪೀಠ ಪ್ರಶ್ನಿಸಿತು.
ಇದಕ್ಕೆ ಮುನ್ನ
ಪೀಠವು ಕೊಯ್ದ ಪೈರಿನ ಕೂಳೆಯನ್ನು ಸುಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿರುವುದಕ್ಕಾಗಿ ಪಂಜಾಬ್
ಸರ್ಕಾರ ಮತ್ತು ಅದರ ಮುಖ್ಯ ಕಾರ್ಯದರ್ಶಿಯನ್ನು ಜಗ್ಗಾಡಿತು.
ಇದರಿಂದಾಗಿ ದೆಹಲಿಯ ವಾಯುಮಾಲಿನ್ಯ ಹದಗೆಟ್ಟಿದೆ ಎಂದು ಪೀಠ ಹೇಳಿತು.
‘ಜನರ ಬಗ್ಗೆ
ಕಾಳಜಿ ವಹಿಸುವುದಿಲ್ಲವಾದರೆ ನಿಮಗೆ ಅಧಿಕಾರದಲ್ಲಿ ಇರಲು ಹಕ್ಕಿಲ್ಲ’ ಎಂದು
ಸುಪ್ರೀಂಕೋರ್ಟ್ ರಾಜ್ಯ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿತು.
‘ನೀವು (ರಾಜ್ಯ
ಸರ್ಕಾರಗಳು) ಕಲ್ಯಾಣ ಸರ್ಕಾರದ ಕಲ್ಪನೆಯನ್ನೇ ಮರೆತಿದ್ದೀರಿ. ನಿಮಗೆ ಬಡಜನರ ಬಗ್ಗೆ ಚಿಂತೆ ಇಲ್ಲ.
ಇದು ಅತ್ಯಂತ ದುರದೃಷ್ಟಕರ’ ಎಂದು ಪೀಠ ಹೇಳಿತು.
ರಾಜ್ಯ ಸರ್ಕಾರಗಳು
ಏಕೆ ಕೊಯ್ದ ಪೈರಿನ ಕೂಳೆಯನ್ನು ರೈತರಿಂದ ಖರೀದಿಸಬಾರದು ಎಂದೂ ನ್ಯಾಯಮೂರ್ತಿ ದೀಪಕ್ ಗುಪ್ತ ಪ್ರಶ್ನಿಸಿದರು.
No comments:
Post a Comment